• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಸೀಮೆ ಹಳ್ಳಿ ಬಾಡು, ಊಟದ ಬಗ್ಗೆ ಒಂದು ನೀಟಾದ ವಿವರಣೆ

By ಸ ರಘುನಾಥ
|

ಇದು ಮಾಂಸಾಹಾರ ಕುರಿತ ಚರ್ಚೆಯಲ್ಲ. ಹಾಗೆಯೆ ಸಸ್ಯಾಹಾರ ಮತ್ತು ಮಾಂಸಾಹಾರಗಳ ಪರ, ವಿರೋಧ ವಾದವೂ ಅಲ್ಲ. ಸಾಗಿ ಬಂದ 'ಹಳ್ಳಿ ಆಹಾರ' ಪದ್ಧತಿಗಳಲ್ಲಿ ಒಂದರ ಮೆಲುಕು ಮಾತ್ರ. ತಿನ್ನಲಿ, ಬಿಡಲಿ ನಾವು ಈ ಎರಡೂ ಆಹಾರ ಪದ್ಧತಿಗಳ ನಡುವೆ ಬದುಕುತ್ತಿರುವುದರಿಂದ ಅವುಗಳ ವಿಚಾರ ಇದ್ದೇ ಇರುತ್ತದೆ. ಹಾಗಾಗಿಯಷ್ಟೇ ಈ ಲೇಖನ.

'ನೋಟ ಮತ್ತು ಊಟ ಅವರವರ ಇಚ್ಛೆ' ಎಂಬುದು ಎಲ್ಲ ಕಾಲದ ಮಾತು. ನೋಡುವ ಕಣ್ಣಿರುವವರೆಗೆ, ನಾಲಗೆಯಲ್ಲಿ ರುಚಿಗ್ರಂಥಿಗಳಿರುವವರೆಗೆ ಇದು ನಿಜವೂ ಹೌದು. ಊಟ-ನೋಟಗಳನ್ನು ಬೇಡ ಅನ್ನುವವರಿಗಷ್ಟೇ ಬೇಡ. ಆಹಾರದ ವಿಚಾರದಲ್ಲಿ ಅದು ಸಸ್ಯಾಹಾರವೋ, ಮಾಂಸಾಹಾರವೋ ಅವರವರ ಇಷ್ಟದ್ದು.

ಕ್ಷಣಾರ್ಧದಲ್ಲಿ ಬಾಯಲ್ಲಿ ನೀರೂರಿಸುವ ಹುಣಸೆರಾಯನ ಮಹಾತ್ಮೆ!

ಕೆಲವರಿಗೆ ಕೆಲವು ತರಕಾರಿಗಳು ಇಷ್ಟವಿಲ್ಲದಿರುವಂತೆ, ಮಾಂಸಗಳಲ್ಲಿ ಕೆಲವರಿಗೆ ಕೆಲವು ಇಷ್ಟವಿರದು. ಇದನ್ನು ಒಟ್ಟಾರೆಯಾಗಿ ಒಪ್ಪಲೂ ಬೇಕಿಲ್ಲ, ತಿರಸ್ಕರಿಸಲೂ ಬೇಕಿಲ್ಲ.

ಸಸ್ಯಗಳ ಹೆಸರು ಅವುಗಳ ಹೂ, ಕಾಯಿಗಳಿರುವಂತೆ ಅಂದರೆ ತರಕಾರಿಗಿರುವಂತೆ ಮಾಂಸಗಳಿಗೆ ಆ ಪ್ರಾಣಿಯ ಹೆಸರಿರುವುದೆಂದು ಹೇಳಬೇಕಿಲ್ಲ. ಬೆಂಡೆಕಾಯಿ ಹುಳಿ, ಹೀರೆಕಾಯಿಹುಳಿ, ಬದನೆಕಾಯಿಬಜ್ಜಿ, ಆಲೂಗೆಡ್ಡೆ ಮಸಾಲೆ ಗೊಜ್ಜು, ಹುಳಿಸೊಪ್ಪು, ಪಲ್ಯ, ಹಾಗಲಕಾಯಿ ಗೊಜ್ಜು, ವಿವಿಧ ತರಕಾರಿಗಳನ್ನು ಹಾಕಿ ಮಾಡಿದ ಕೂಟು ಮುಂತಾದವು.

ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು

ಹೀಗೆಯೇ ಮಾಂಸವನ್ನು ವಿಂಗಡಿಸುವ, ಅದರಿಂದ ತಯಾರಿಸುವ ಅಡುಗೆಗಳಿಗೆ ಅವಕ್ಕೆ ತಕ್ಕಂತೆ ಹೆಸರುಗಳಿರುತ್ತವೆ. ಆದರೆ ಮಾಂಸದಡುಗೆಯಲ್ಲಿ ಬಗಬಗೆ ಮಾಂಸಗಳನ್ನು ಕೂಡಿಸಿ ಮಾಡಿದ 'ಕೂಟು' ಎಂಬುದಿಲ್ಲ.

ಮೆನು ಕಾರ್ಡ್ ಅಲ್ಲ

ಮೆನು ಕಾರ್ಡ್ ಅಲ್ಲ

ಹಳ್ಳಿಮನೆಗಳಲ್ಲಿ ಹೋಟೆಲುಗಳ ಮೆನು ಕಾರ್ಡಿನಲ್ಲಿರುವಂತೆ ಚಿಕನ್ ಚಿಲ್ಲಿ, ಮಟನ್ ಚಿಲ್ಲಿ, ಚಿಕನ್ ತಂದೂರಿ, ಕಬಾಬ್, ಮಂಚೂರಿ, ಬಿರಿಯಾನಿ, ಫ್ರೈ, ಡ್ರೈ, ರೋಲ್, ಗ್ರೇವಿ, ಎಗ್ ಬುರ್ಜಿ, ಬೋನ್ ಲೆಸ್, ಮಸಾಲ, ಲೆಗ್ ಪೀಸ್, ಲಾಲಿಪಪ್, ಲಿವರ ಫ್ರೈ ಇತ್ಯಾದಿ ಇರುವುದಿಲ್ಲ.

ಜೀರ್ಣಕ್ಕೆ ಮನೆಗಳಲ್ಲಿ ಹೀಗೆ ಮಾಡ್ತಾರೆ

ಜೀರ್ಣಕ್ಕೆ ಮನೆಗಳಲ್ಲಿ ಹೀಗೆ ಮಾಡ್ತಾರೆ

ಅಲ್ಲದೆ ಬಜಾರಿನ ಒಂದೇ ರೀತಿಯ ಸಿದ್ಧ ಮಸಾಲೆಪುಡಿಗಳ ಬಳಕೆಯೂ ಇರದು. ಮನೆಮನೆಯ ಅಡುಗೆಯ ರುಚಿಯೂ ಭಿನ್ನವಾಗಿರುತ್ತದೆ. ಹೋಟೆಲಿನಲ್ಲಿ ಜೀರ್ಣಕ್ಕೆ ಸೂಪು ಇದ್ದಂತೆ ಮನೆಯಲ್ಲಿ ಹುಣಿಸೆಹಣ್ಣು, ಬೆಳ್ಳುಳ್ಳಿ, ಈರುಳ್ಳಿ, ಕರಿಮೆಣಸು, ಜೀರಿಗೆ, ಉಪ್ಪು, ಒಣಮೆಣಸಿನಕಾಯಿ ಹಾಕಿ ಮಾಡಿದ ಸಾರು(ರಸಂ) ತಯಾರಿಸುತ್ತಾರೆ. ಇದು ಜೀರ್ಣಕ್ಕೂ ಆರೋಗ್ಯಕ್ಕೂ ಒಳ್ಳೆಯದು. ಡರ್ ಡರ್ ಎಂದು ಎರಡು ತೇಗು ಬಂದಿತೋ ‘ಕಲಾಸ್.' ‘ಭುಕ್ತಾಯಾಸ' ಮಾಯ.

ಮಾಂಸ ತೂಕ ಮಾಡಲ್ಲ

ಮಾಂಸ ತೂಕ ಮಾಡಲ್ಲ

ಇನ್ನು ನಮ್ಮ ದೇಸಿಬಾಡಿನ ವಿಚಾರ. ಕೌಸು, ಕವುಸು, ಬಾಡು, ಮಾಂಸ, ಮಾವ್ಸ, ತುಕಡ, ತುಣುಕುಗುಳು, ಕೆಂಪುತರಕಾರಿ, ಸೀಸಿ(ಬಾಲಭಾಷೆ). ಇವು ಸಮಾನ ಪದಗಳು. ಭಾಗ ಹಾಕುವ ಮಾಂಸದಲ್ಲಿ ‘ಉಡ್ಡಿಬಾಡು.' ವಿಶೇಷವಾದುದು ಸಂತೆಯಲ್ಲಿ ತರಕಾರಿಗಳನ್ನು ಗುಡ್ಡೆ ಇಟ್ಟಂತೆ. ಇದನ್ನು ತೂಕ ಮಾಡುವುದಿಲ್ಲ. (ತಕರಾರು ಬೇಡವೆಂದು ಇತ್ತೀಚೆಗೆ ಕೆಲವರು ತೂಕ ಹಾಕುತ್ತಾರೆ.)

ಮಾಂಸದ ಚೀಟಿ

ಮಾಂಸದ ಚೀಟಿ

ಮನೆಪಟ್ಟಿ ತಯಾರಿಸಿ ಅದರಂತೆ ಅವವರವರ ಮನೆ ಹೆಸರಿನಲ್ಲಿ ಉಡ್ಡೆ ಹಾಕುವರು. ಅವರು ಅಲ್ಲಿದ್ದು ತಮ್ಮ ಪಾಲನ್ನು ಪಡೆದುಕೊಳ್ಳುವರು. ಗುಡ್ಡೆಯಲ್ಲಿ ಮಾಂಸವಾದ ಪ್ರಾಣಿಯ ಎಲ್ಲಾ ಭಾಗಗಳೂ ಇರುತ್ತವೆ. ಈ ಮಾಂಸಕ್ಕಾಗಿ ‘ಚೀಟಿ'ಯನ್ನೂ ಹಾಕಿರುತ್ತಾರೆ. ಚೀಟಿದಾರರಿಗೆ ಮಾತ್ರ ಇದು.

ಪ್ರೇಯಸಿಗೆ ಉಚಿತ

ಪ್ರೇಯಸಿಗೆ ಉಚಿತ

ಮುಖ್ಯರು ಅನಿಸಿಕೊಂಡವರ ಮನೆಗಳಿಗೇ ಅವರಿಗೆ ಸೇರಬೇಕಾದ ಉಡ್ಡೆಗಳನ್ನು ಕಳುಹಿಸುವುದುಂಟು. ಇಂಥವರಲ್ಲಿ ಕೆಲವರಿಗೆ ಉಚಿತವಾಗಿಯೂ ಕೊಡುವರು. ನೇಸ್ತ(ಪ್ರೇಯಸಿ)ಇದ್ದರೆ ಅವಳಿಗೂ ಉಚಿತವಾಗಿ ಕಳುಹಿಸುವರು. ಅದರಲ್ಲಿ ಅವಳಿಗೆ ಪ್ರಿಯವಾದ ಭಾಗ ಹೆಚ್ಚಿಗಿರುತ್ತದೆ. ಅರ್ಧ ಉಡ್ಡೆ, ಒಂದುಡ್ಡೆ, ಎಲ್ಡುಡ್ಡೆ ಹೀಗೆ ಲೆಕ್ಕಾಚಾರ.

ಉರ್ತಬಾಡು. ಹುರಿದ ಮೃದುವಾದ ಮಾಂಸ, ಭಾಗಗಳು. ಹಬ್ಬದ ದಿನಗಳಲ್ಲಿ ‘ಗಟ್ಟಿಬಾಡು' ಬೆಂದು ಅಡುಗೆಯಾಗುವುದು ತಡವಾಗುವುದರಿಂದ, ಕಾಯಲಾಗದ ಮಕ್ಕಳಿಗೆ ಹುರಿದು ಕೊಡುವರು. ಊಟಕ್ಕೆ ಮುಂಚೆ ‘ಕಾರ್ಯಕ್ರಮ' (ಗುಂಡು ಹಾಕುವುದು) ವಿದ್ದರೆ ಅದರೊಂದಿಗೆ ನಂಚಿಕೊಳ್ಳಲು ‘ಉರ್ತಬಾಡ'ನ್ನು ಕೊಡುವರು.

ಗಡ್ಡೆಗಳಾಗಿ ಹಂಚುತ್ಟಾರೆ

ಗಡ್ಡೆಗಳಾಗಿ ಹಂಚುತ್ಟಾರೆ

ಕರುಳು, ರಕ್ತ, ಇ(ಈ)ರ್ವೆ, ದೊಮ್ಮೆ, ಕರ್ಲುಪಟ್ಟಿ ಕೊಬ್ಬು ಮುಂತಾದ ಮೃದುವಾದ ಭಾಗಗಳು ಮೆತುವುಬಾಡು. ನಿಧಾನ ಬೇಯುವುದು ಗಟ್ಟಿಬಾಡು. ವರಿಬಾಡು: ದೇವರಬಾಡು, ದೇವರಿಗೆ ಬಲಿಕೊಟ್ಟ ಪ್ರಾಣಿಯ ಮಾಂಸ. ಕುರಿ, ಮೇಕೆ, ಗೋವು, ಕೋಣದಂಥ ಜೀವಿಗಳ ಮಾಂಸ. ಇದನ್ನೂ ಗಡ್ಡೆಗಳಾಗಿ ಮಾಡಿ ಹಂಚುತ್ತಾರೆ.

ಎದಿಬೋರು: ಎದೆಗೂಡು, ಅದರ ಮೆದುವಾದ ಮೂಳೆ(ಇದನ್ನು ಎದೆಹಾಲು ಹೆಚ್ಚುವುದೆಂದು ಬಾಣಂತಿಯರಿಗೆ ಕೊಡುವರು. ಫಟ್ಟಿ: ಜಠರ.ಇದು ಆರೋಗ್ಯಕರ. ಹಲ್ಲುಗಳಿಲ್ಲದವರಿಗೆ ಕೊಡುವರು. ಹಾಗೇ ಎಳೆ ಮಕ್ಕಳಿಗೂ ಕೊಡುವರು. ಕರಿಕಾಲುಗಳು: ಕುರಿ, ಮೇಕೆಗಳ ಮಂಡಿಯ ಕೆಳಭಾಗ. ಇದನ್ನು ಕುದಿಸಿ ‘ಸೂಪು' ತಯಾರಿಸುವರು. ಮೊಣಕಾಲಿನ ಶಕ್ತಿ ಹೆಚ್ಚಿಸುತ್ತದೆ. ನಲ್ಲಿ(ಳ್ಳಿ), ಮೂಳೆಮಿಕಿಗಳು : ಮೂಳೆಗಳು.

ಎರಡು ವಿಧ

ಎರಡು ವಿಧ

ಇದರಲ್ಲಿ ಎರಡುವಿಧ. 1. ಚಿಕ್ಕಮೂಳೆಮಿಕಿಗಳು (ಕುರಿ, ಮೇಕೆ, .. 2. ದೊಡ್ಡಮೂಳೆಮಿಕಿಗಳು (ಹಸು, ಎಮ್ಮೆ ಮುಂತಾದವುಗಳ ಎಲುಬುಗಳು). ಸಿಸ್ನ: ಕೋಳಿಯ ಶಿಶ್ನ. (ಇದನ್ನು ಇನ್ನೊಬ್ಬರು ಕಾಣದಂತೆ ತಿನ್ನುವರು. ಕಾರಣ ಇದನ್ನು ತಿಂದದ್ದು ಕಂಡರೆ ‘ಕೋಳಿ ಪಿ(ಪು)ಕ್ನ ತಿಂದೋನಂ'ತ(ನೀಚ) ಗೇಲಿ ಮಾಡುವರು.

ಅಂದಿಬಾಡು: ಹಂದಿ, ಇದನ್ನು ಬುರುದಬೂಸಿಗಾಡು, ಕುಂಬಳಕಾಯಿ ಅನ್ನುವರು, ಚೆನ್ನಾಗಿ ಕೊಬ್ಬಿದ ಹಂದಿಯನ್ನು ಕೊಯ್ಯುವ ಮೊದಲು ಮೆರವಣಿಗೆ ಮಾಡುತ್ತಾರೆ. ನಂತರ ಸಾಟುವ (ಡಂಗೂರ) ಹಾಕಿಸುವರು. ಪದೇಲು ಗುಮ್ಮಿಡಿಕಾಯ್ನಿ ಕೋಸಿನ್ನಾರಪ್ಪೋ ಕಾಯಿಸು ಉನ್ನೋಲ್ಲು ಕೊನುಕೊನಿ ತಿನೊಚ್ಚು. ಲೇನೋಲ್ಲು ಕೂರಾಕ್ ಚಾರು ಸೇಸ್ಕೊನಿ ತಿನೊಚ್ಚು.(ಹತ್ತುಸಾವಿರದ ಕುಂಬಳಕಾಯಿ ಕೊಯ್ದಿದ್ದಾರಪ್ಪೋ. ಖಾಯಸ್ಸು ಇರೋರು ಕೊಂಡು ತಿನ್ನಬಹುದು. ಇಲ್ಲದೋರು ಸೊಪ್ಪಿನಸಾರು ಮಾಡಿಕೊಂಡು ತಿನ್ನಬಹದು) ಹೀಗೆ ಸಾರಿಸಿ ಮರ್ಮಕ್ಕೆ ಚಿಚ್ಚಿ ಕೊಳ್ಳಲು ಪ್ರೇರೇಪಿಸುವರು.

ರುಚಿ ಬಲ್ಲವರ ಮಾತು

ರುಚಿ ಬಲ್ಲವರ ಮಾತು

‘ಅಂದಿಬಾಡು ಉರುದ್ರೆ ಗೊಬ್ಬರದ ಪೆಂಟಿಗಳಂಗಿರಬೇಕು.'(ಹಂದಿ ಮಾಂಸವನ್ನು ಹುರಿದರೆ(ಫ್ರೈ) ಗೊಬ್ಬರದ ಉಂಡೆಗಳಂತೆ ಮೃದುವಾಗಿ) ಇರಬೇಕು ಅನ್ನುತ್ತಾರೆ, ಇದರ ರುಚಿ ಬಲ್ಲವರು.

ಇತರೆ ಬಾಡುಗಳು: ದೊಡ್ಡಬಾಡು (ದನದ ಮಾಂಸ), ಉಡ್ತಿಬಾಡು ಅಳಿಲಿನ ಮಾಂಸ, ಉಡುಂಬಾಡು (ಉಡದ ಮಾಂಸ), ಯಂಟಿವಿಬಾಡು (ಮುಂಗಸಿಯ ಮಾಂಸ), ಯಕ್ಣ(ಗ್ಣ)ಬಾಡು (ಹೆಗ್ಗಣದ ಮಾಂಸ), ಸೀಕ್ರೇವುಬಾಡು (ಬಾವಲಿಯ ಮಾಂಸ), ಬಾವುಲಿ ಬಾಡು (ಬಾವಲಿಯ ಮಾಂಸ).

ಭಾಗಗಳು ಇವು

ಭಾಗಗಳು ಇವು

ಭಾಗಗಳು: ತಲಿ(ತಲೆ), ರಗತ (ರಕ್ತ), ನಾಲ್ಕಿ (ನಾಲಗೆ), ಮೆದ್ಲು (ಮೆದುಳು), ಕಣ್ಗುಳು (ಕಣ್ಣುಗಳು), ಚೆವಿಗ್ಳು (ಕಿವಿಗಳು), ಪೀಪಿ (ಗ್ವಾಕೆ, ಗ್ವಾಮಾಳೆ, ಗಂಟಲು, ಅನ್ನನಾಳ), ಇ(ಈ)ರ್ಲಿ (ಲಿವರ್), ಗುಂಡ್ಗಿ (ಗುಡಿಗೆ, ಹೃದಯ), ದೊಮ್ಮಿ(ಮ್ಮೆ) (ಶ್ವಾಸಕೋಶ), ಕರ್ಲುಪಟ್ಟಿ (ಕರುಳು, ಬೋಟಿ), ಕೊವ್ವು(ತೆ) (ಕೊಬ್ಬು), ಗಿರಿಶಿ (ಗೊರಸಿನ ಮೃದುವಾದ ಅಡಿಪದರ),

ತ್ವಾಕಿ(ಕೆ) (ಬಾಲ), ಕರಿಕ್ಯಮಿಕೆ (ಬೆನ್ನು ಮೂಳೆಯ ಪಕ್ಕದ ಮೂಳೆಗಳು), ಬರೆಮಿಕೆ, ಎದಿಬೋರು (ಎದೆಗೂಡಿನ ಮೂಳೆಗಳು), ನಚ್ಚೆಮಿಕೆ (ಮೂಳೆಯ ಸಣ್ಣಸಣ್ಣ ಚೂರುಗಳು), ಜುಟ್ಟಿ(ಟ್ಟು) (ಕೋಳಿಜುಟ್ಟು.. ಕೋಳಿಯನ್ನು ಸುಡುವಾಗಲೇ ತಿಂದುಬಿಡುವರು), ಮಟ್ಟಿಸರ (ಕೋಳಿ, ಹಕ್ಕಿಗಳ) ಮೊಟ್ಟೆಸರ, ತರುಡುಬೀಜ = ವೃಷಣ, ಬೀಜ, ತರುಡುಬೀಜ = ವೃಷಣ, ಬೀಜ, (ಟಗರು, ಹೋತ, ಹೋರಿ), ಈರ್‍ ವೆ (ಅಸ್ಥಿಮಜ್ಜೆ).

English summary
Food priorities varies from person to person. Here is the food culture of villages, explain by Oneindia columnist Sa Rahunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X