• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎರಡು ರಾಜ್ಯದ ಮಕ್ಕಳು ಬರುವ ಒಂದು ಕನ್ನಡ ಶಾಲೆಯ ಕಥೆ

By ಸ.ರಘುನಾಥ, ಕೋಲಾರ
|

ಇಂದು ನಾನು ಹೇಳಲು ಹೊರಟಿರುವುದು ಒಂದು ಶಾಲೆಯ ಕಥೆ. ಎರಡು ರಾಜ್ಯವನ್ನು, ಜನರನ್ನು ಒಂದು ಮಾಡಿರುವ ಶಾಲೆ ಇದು. ಈ ಊರಿನ ಹೆಸರು ಪಿ ಚನ್ನಯ್ಯಗಾರಿಪಲ್ಲಿ. ‌ಶ್ರೀನಿವಾಸಪುರ ತಾಲೂಕಿನ ಪುಲಗೂರುಕೋಟೆ ಪಂಚಾಯಿತಿಗೆ ಸೇರಿದ ಈ ಗ್ರಾಮದಲ್ಲಿ ಪುಟಾಣಿ ಕಿರಿಯ ಪ್ರಾಥಮಿಕ ಶಾಲೆಯಿದೆ.

ಈ ಶಾಲೆಗೆ ಆಂಧ್ರಪ್ರದೇಶದ ಆಲ್ಚೇ ಪಲ್ಲಿ ಹಾಗೂ ಕೊತ್ತಿಂಡ್ಲುನಿಂದ ಮಕ್ಕಳು ಬರುತ್ತಾರೆ. ಆಲ್ಚೇಪಲ್ಲಿ ಆಂಧ್ರದ ಗಡಿ ಭಾಗವಾದರೆ, ಚನ್ನಯ್ಯಗಾರಿಪಲ್ಲಿ ಕರ್ನಾಟಕದ ಗಡಿ ಗ್ರಾಮ. ಆಲ್ಚೇಪಲ್ಲಿ ಹಾಗೂ ಚನ್ನಯ್ಯಗಾರಿಪಲ್ಲಿ ಮಧ್ಯೆ ಇರುವ ಒಂದು ಸಣ್ಣ ಚರಂಡಿಯೇ ಗಡಿಯಂತೆ ಇದೆ.

ಕತ್ತೆ ಹಾಲು ಮಾರುವ ಸರೋಜಮ್ಮ ಹೇಳಿಕೊಂಡ ಅನ್ನ ನೀಡುವ 'ಲಕ್ಷ್ಮಿ'ಯ ಕಥೆ

ಇನ್ನು ಚನ್ನಯ್ಯಗಾರಿಪಲ್ಲಿ ಜನರು ನೀರು ಹಿಡಿಯುವ ವಿಚಾರಕ್ಕೆ ಬಂದರೆ, ಗಡಿಯ ಗುರುತಾಗಿ ನಿಂತಿರುವ ಹುಣಸೇಮರದ ಅಡಿ ಇರುವ ಆಂಧ್ರಕ್ಕೆ ಸೇರಿದ ನಲ್ಲಿಯಲ್ಲಿ ನೀರು ಹಿಡಿಯುತ್ತಾರೆ. ಈ ಕಿರಿಯ ಪ್ರಾಥಮಿಕ ಶಾಲೆಗೆ ಭೂಮಿ ದಾನ ಮಾಡಿದವರು ಆಂಧ್ರಕ್ಕೆ ಸೇರಿದ ಝಂಡು ವಾಲಿ ರೆಡ್ಡಿ.

ಸಂಬಳದ ಹಣದಿಂದ ಮಣ್ಣಿನ ವ್ಯವಸ್ಥೆ

ಸಂಬಳದ ಹಣದಿಂದ ಮಣ್ಣಿನ ವ್ಯವಸ್ಥೆ

ಹದಿನೈದು ವರ್ಷಗಳ ಹಿಂದೆ ಇಲ್ಲೊಂದು ತೆಲುಗು ಮಾಧ್ಯಮದ ಶಾಲೆಯಿತ್ತು. ಆದರೆ ಅದು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಆಲ್ಚೇಪಲ್ಲಿ ಜನರು ಚನ್ನಯ್ಯಗಾರಿಪಲ್ಲಿಯ ಕನ್ನಡ ಶಾಲೆಗೆ ಕಳಿಸಲು ಆರಂಭಿಸಿದ್ದಾರೆ. ಇನ್ನು ಇಲ್ಲಿನ ಶಾಲೆಯೇನೂ ಆರಂಭದಿಂದ ಇಂದಿನ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಇಂದು ಹಸಿರಿನಿಂದ ನಗುನಗುತ್ತಿದೆ. ಇದಕ್ಕೆ ಕಾರಣರಾದವರು ಶಿಕ್ಷಕರಾದ ಕೋದಂಡರಾಮಯ್ಯ, ಆನಂದ್. ಶಾಲೆಯ ಸುತ್ತ ಬಂಡೆಗಲ್ಲುಗಳೇ ತುಂಬಿದ್ದವು. ಅಂಥ ಕಡೆ ತಮ್ಮ ಸಂಬಳದ ಹಣದಿಂದ ಬಂಡೆಗಲ್ಲಿನ ಮೇಲೆ ಸುಮಾರು ನಾಲ್ಕು ಅಡಿ ಎತ್ತರದ ತನಕ ಕೆಂಪು ಮಣ್ಣು ತುಂಬಿಸಿ, ಹೂ ಗಿಡಗಳನ್ನು ನೆಟ್ಟರು. ಆ ಮೂಲಕ ಹಸಿರು ಬೆಳೆಯಲು ಆರಂಭಿಸಿದರು. ಅವರ ಶ್ರಮ, ಹಸಿರಿನ ಮೇಲೆ ಪ್ರೀತಿಗೆ ಇಂದು ಈ ಶಾಲೆಯೇ ನಿದರ್ಶನವಾಗಿ ಕಣ್ಣೆದುರು ಇದೆ.

ಎರಡೂ ದೇವರಿಗೆ ನಡೆದುಕೊಳ್ಳುವ ಜನರು

ಎರಡೂ ದೇವರಿಗೆ ನಡೆದುಕೊಳ್ಳುವ ಜನರು

ಇಲ್ಲಿ ತೆಲುಗು-ಕನ್ನಡ ಎಂಬ ಭೇದವಿಲ್ಲದೆ ಮಕ್ಕಳು ಕಲಿಯುತ್ತಿದ್ದಾರೆ. ಮನೆಯಲ್ಲಿ ಮಾತೃಭಾಷೆ ತೆಲುಗು, ಅಲ್ಚೇಪಲ್ಲಿಯಲ್ಲೂ ತೆಲುಗೇ ಮಾತನಾಡುತ್ತಾರೆ. ಆದರೆ ಈ ಮಕ್ಕಳ ಕಲಿಕೆ ಭಾಷೆ ಮಾತ್ರ ಕನ್ನಡ. ಇನ್ನು ಚನ್ನಯ್ಯಗಾರಿಪಲ್ಲಿಗೆ ಪ್ರವೇಶಿಸುವುದು ಕೂಡ ಅಲ್ಚೇಪಲ್ಲಿ ಮೂಲಕವೇ. ಅಲ್ಚೇಪಲ್ಲಿಯ ಊರ ಪ್ರವೇಶದ ಆರಂಭದಲ್ಲಿ ಆಂಜನೇಯನ ಗುಡಿ ಇದೆ. ಇನ್ನು ಚನ್ನಯ್ಯಗಾರಿಪಲ್ಲಿಯಲ್ಲಿ ಶ್ರೀರಾಮನ ದೇಗುಲವಿದೆ. ಈ ಎರಡೂ ಊರುಗಳಲ್ಲಿ ವಾಸವಿರುವ ಜನರು ಎರಡೂ ದೇವರಿಗೆ ನಡೆದುಕೊಳ್ಳುತ್ತಾರೆ. ಬಹಳ ಹಿಂದುಳಿದವರೇ ಇಲ್ಲಿನ ನಿವಾಸಿಗಳು. ಶ್ರಮಿಕ ವರ್ಗ-ರೈತ ಮನಸ್ಸುಳ್ಳ ಜನರಿವರು. ಇವರಿಗೆ ತಕ್ಕಂತೆ ಶಾಲಾಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿ ಇದೆ. ಅದರ ಅಧ್ಯಕ್ಷರು ವೆಂಕಟರಮಣ. ಅವರು ಚನ್ನಯ್ಯಗಾರಿಪಲ್ಲಿಯವರು.

ಹದಿಮೂರು ಮಕ್ಕಳು ಅಲ್ಚೇಪಲ್ಲಿ, ಕೊತ್ತಿಂಡ್ಲುನವರು

ಹದಿಮೂರು ಮಕ್ಕಳು ಅಲ್ಚೇಪಲ್ಲಿ, ಕೊತ್ತಿಂಡ್ಲುನವರು

ಮಕ್ಕಳ ಪೋಷಕರ ಜತೆಗೆ ಈ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ನಿರಂತರ ಸಂಪರ್ಕದಲ್ಲಿರುತ್ತಾರೆ. ಅಷ್ಟೇ ಅಲ್ಲ, ಈ ಮಕ್ಕಳ ಜನ್ಮದಿನದಂದು ಶಾಲೆಯ ಆವರಣದಲ್ಲಿನ ಹಸಿರಿನ ಮಧ್ಯೆ ಜನ್ಮದಿನ ಆಚರಿಸಲಾಗುತ್ತದೆ. ಇಲ್ಲಿನ ಶಿಕ್ಷಕರು ಪಾಠ ಮಾಡುವುದು ಕೂಡ ವಿಶಿಷ್ಟ. ಚಾಪೆ ಹಾಕಿಕೊಂಡು ಕೂರುವ ಶಿಕ್ಷಕರ ಸುತ್ತ ಅರ್ಧ ಚಂದ್ರಾಕೃತಿಯಲ್ಲಿ ಕೂತು ಪಾಠ ಕಲಿಯುತ್ತಾರೆ. ಅವರ ಪ್ರೀತಿ-ವಿಶ್ವಾಸವನ್ನು ನೋಡಿಯೇ ತಿಳಿಯಬೇಕು. ಕನ್ನಡಕ್ಕೆ ಆದ್ಯತೆ ನೀಡಿ, ಈ ಶಾಲೆಯಲ್ಲಿ ಅಗತ್ಯದಷ್ಟು ಇಂಗ್ಲಿಷ್ ಕೂಡ ಹೇಳಿಕೊಡಲಾಗುತ್ತಿದೆ. ಸದ್ಯಕ್ಕೆ ಹದಿನೇಳು ವಿದ್ಯಾರ್ಥಿಗಳಿದ್ದಾರೆ. ಆ ಪೈಕಿ ನಾಲ್ವರು ಕರ್ನಾಟಕದ ಚನ್ನಯ್ಯಗಾರಿಪಲ್ಲಿಯವರು. ಬಾಕಿ ಹದಿಮೂರು ಮಕ್ಕಳು ಅಲ್ಚೇಪಲ್ಲಿ ಮತ್ತು ಕೊತ್ತಿಂಡ್ಲುನವರು. ಈ ಶಾಲೆ ನಡೆಯಲು ಕಾರಣ ಆಗಿರುವುದು ಆಲ್ಚೇಪಲ್ಲಿ ಹಾಗೂ ಕೊತ್ತಿಂಡ್ಲು ಗ್ರಾಮದವರೇ.

ಸಕಾರಾತ್ಮಕ ಸಂದೇಶ ಸಾರುವ ಸ್ಮಾರಕದಂತಿದೆ

ಸಕಾರಾತ್ಮಕ ಸಂದೇಶ ಸಾರುವ ಸ್ಮಾರಕದಂತಿದೆ

ಎರಡು ಭಾಷೆ ಮಧ್ಯೆ ಸಾಮರಸ್ಯ, ಸಾಂಸ್ಕೃತಿಕ ಏಕೀಕರಣ ಇತ್ಯಾದಿ ಸಕಾರಾತ್ಮಕ ಸಂದೇಶವನ್ನು ಸಾರುವ ಸ್ಮಾರಕದಂತೆ ಈ ಶಾಲೆ ಗೋಚರಿಸುತ್ತದೆ. ಇಲ್ಲಿನ ವಾತಾವರಣದಲ್ಲೇ ಸೌಹಾರ್ದತೆ ಉಸಿರಾಡುತ್ತಿರುವಂತೆ ಅನುಭವ ಆಗುತ್ತದೆ. ಕೋದಂಡರಾಮಯ್ಯ ಹಾಗೂ ಆನಂದ್ ಅವರ ಕನಸು ವಿಪರೀತ ದೊಡ್ಡದು. ಆ ಪುಟ್ಟ ಮಕ್ಕಳ ಬಗ್ಗೆ ಅವರಿಗಿರುವ ಅಕ್ಕರಾಸ್ಥೆಯನ್ನು ಬರೆದರೆ ಮತ್ತೊಂದು ಲೇಖನವಾದೀತು. ಇವರಿಬ್ಬರ ಆಸಕ್ತಿ ಹೇಗಿದೆ ಅಂದರೆ, ಅನುಭವಿಗಳು, ವಿಷಯ ತಜ್ಞರನ್ನು ಕರೆಸಿ ಸಂವಾದ ನಡೆಸುತ್ತಾರೆ. ಇಷ್ಟೆಲ್ಲ ನನಗೆ ಗೊತ್ತಾಗಲು ಕಾರಣ ಏನೆಂದರೆ, ಇಲ್ಲಿನ ಮಕ್ಕಳಿಗೆ ಕಥೆ ಹೇಳುವ, ಪ್ರಾಸ ಪದ ಕಟ್ಟುವ ಕಲೆ ತಿಳಿಸಿಕೊಡುವ ಆಹ್ವಾನ ನನಗೆ ನೀಡುತ್ತಲೇ ಇರುತ್ತಾರೆ. ಈ ಇಬ್ಬರು ಶಿಕ್ಷಕರ ಸಲುವಾಗಿ, ಅಲ್ಲೊಂದು ಸಾಹಿತ್ಯಿಕ ವಾತಾವರಣ ನಿರ್ಮಿಸುವ ಸಲುವಾಗಿ ಅಲ್ಲಿಗೆ ಪದೇ ಪದೇ ಹೋಗಬೇಕು ಎಂದು ನನ್ನ ಜೀವವೂ ಹಂಬಲಿಸುತ್ತದೆ. ಈ ಬಗ್ಗೆ ಹಾಗೂ ಇಷ್ಟೆಲ್ಲ ನಿಮ್ಮ ಜತೆ ಹಂಚಿಕೊಳ್ಳಬೇಕು ಅನಿಸಿತು.

English summary
This is the story about Kannada primary school situated in P Channayyagaripally in Srinivasapura taluk, Kolar district. Andhra border area children comes here for schooling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X