• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಲೂರಿನ ಸೊಣ್ಣಪ್ಪ ಮೇಷ್ಟರ ಪ್ಯಾಂಟ್ ಗುಂಡಿ ಟಪ್ಪೆಂದ ಪ್ರಸಂಗ

By ಸ ರಘುನಾಥ, ಕೋಲಾರ
|

ಮಾಲೂರು ಸೊಣ್ಣಪ್ಪನವರು ಇಂದು ಎಷ್ಟು ಜನರ ನೆನಪಿನಲ್ಲಿರುವರೋ ಗೊತ್ತಿಲ್ಲ. ಆದರೆ 20ನೇ ಶತಮಾನದ 6ನೇ ದಶಕದ ಮುಂದಕ್ಕೆ ಅನೇಕ ವರ್ಷಗಳಲ್ಲಿ ಮಾಲೂರಿನ ಅಂದಿನ ಮುನಿಸಿಪಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರ ನೆನಪಿನಲ್ಲಿ ಇರುವುದು ಸಾಧ್ಯ.

ಹಾಗೆಯೇ ಅವರ ಹರಿಕಥೆಗಳನ್ನು ಕೇಳಿದ ಕರುನಾಡಿನ ಬಹುತೇಕರ ಸ್ಮೃತಿಯಲ್ಲಿ ಇದ್ದಾರು. ಭೀಮನ ಮೈಕಟ್ಟಿನ ಕಲ್ಪನೆ ಇದ್ದವರಿಗೆ ಅವರ ಮೂರ್ತಿ ಕಣ್ಣೆದುರು ಬರಲಾದೀತು.

ನಮ್ಮೂರಿನಲ್ಲಿನ ನಕ್ಷತ್ರದಾಮೆ ಮತ್ತು ಹುಡುಗರ ಪಾಲಿನ ಮೊಸರನ್ನ

ಅಗಲವಾದ ಕಪ್ಪು ದುಂಡುಮುಖ, ಪುಟ್ಟಪುಟ್ಟ ಕಣ್ಣುಗಳು, ಕಂಪನಿ ನಾಟಕ ಕಲಾವಿದರಂತೆ ಹಿಂದಕ್ಕೆ ಬಾಚಿದ ಉದ್ದ ತಲೆಗೂದಲು, ವಿಶಾಲ ವಕ್ಷಸ್ಥಳ, ಅದಕ್ಕೆ ಹೊಂದುವ ದಪ್ಪ ದಪ್ಪ ತೋಳುಗಳು, ಮಹೋದರ, ಕಬ್ಬಿಣದ ತೊಲೆಗಳೇನೋ ಅನಿಸುವ ಕಾಲುಗಂಬಗಳು, ಕೊಂಚ ಗೊರಗೊರ ಅನ್ನಿಸಿದರೂ ಕಂಚಿನ ಕಂಠ, ಅಪರೂಪದ ಮುನಿಸಿನ ಮನುಷ್ಯ.

ಕೊಂಚ ಅತ್ತಿತ್ತ ನಮ್ಮ ಸಿನೆಮಾ ನಟ ದೊಡ್ಡಣ್ಣನವರ ದೇಹ ಗಾತ್ರ. ಅವರಿಗೂ ಕನ್ನಡ ಚಿತ್ರರಂಗದ ನಂಟಿತ್ತು. ಗಂಧದಗುಡಿ ಸಿನೆಮಾದ ಕಾಡಿನ ದೃಶ್ಯಗಳಲ್ಲಿ ಅವರು ತೆರೆ ಮೇಲೆ ಕಾಣಿಸುವರು. ಹಾಗೆಯೇ ಕೈವಾರ ಮಹಾತ್ಮೆಯಲ್ಲಿಯೂ ನಟಿಸಿದ್ದಾರೆ.

ಹುದ್ದೆಯಿಂದ ಡ್ರಿಲ್ ಮೇಷ್ಟ್ರಾಗಿದ್ದ ಸೊಣ್ಣಪ್ಪನವರು ಹರಿಕಥೆಗಾರರಾಗಿ ಪ್ರಸಿದ್ಧರೋ, ಮೇಷ್ಟ್ರಾಗಿ ಪ್ರಸಿದ್ಧರೋ ಅಥವಾ ತತ್ವಪದ ಗಾಯಕರಾಗಿ ಪ್ರಸಿದ್ಧರೋ ಎಂದರೆ ಮೂರರಿಂದಲೂ ಪ್ರಸಿದ್ದರೇ ಅನ್ನಬೇಕು. ಡ್ರಿಲ್ ಮೇಷ್ಟ್ರಾಗಿದ್ದರೂ ಪ್ರಥಮ ಭಾಷೆ ಕನ್ನಡವಾಗಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಉಪಪಠ್ಯವನ್ನು ಬೋಧಿಸುತ್ತಿದ್ದರು. ನೀತಿಕಥೆಗಳನ್ನು ಹೇಳುತ್ತಿದ್ದರು.

ಶೇಷಪ್ಪನ ಹನುಮಾವತಾರದ ಸಿಕ್ಕಾಪಟ್ಟೆ ಮನರಂಜನೆ ನಿಮ್ಮೊಂದಿಗಿಷ್ಟು

ಅವರು ಸೈಕಲ್ ಸವಾರರಾಗಿ ಶಾಲೆಗೆ ಬರುತ್ತಿದ್ದರು. ಅದು 'ಅಂಬರ್' ಸೈಕಲ್. ಅದು ಅವರ ತೂಕವನ್ನು ಹೇಗೆ ತಡೆಯುತ್ತದೆಂಬ ಮಾತುಗಳು ನಡೆಯುತ್ತಿದ್ದವು. ಆ ಕಂಪನಿ ಅವರಿಗೆಂದೇ ವಿಶೇಷವಾಗಿ ತಯಾರಿಸಿದ್ದೆಂದು ನಾವು ಬಚ್ಚಾಗಳು ಮಾತನಾಡುತ್ತಿದ್ದುದುಂಟು. ಆಗಾಗ ಅವರ ನೆಚ್ಚಿನ ಕೆಲ ವಿದ್ಯಾರ್ಥಿಗಳು ಬ್ಲೋ ಹೊಡೆಸಿಕೊಂಡು ಸವಾರಿಯಲ್ಲಿ ಬರುತ್ತಿದ್ದರು. 'ತುಳಕೊಂಡು ಬರ್ತಾಯಿದ್ರೆ ಗಾಳೀಲಿ ತೇಲಿಕೊಂಡು ಬರ್ತಿರೊ ಹಂಗಾಗುತ್ತೆ' ಎಂದು ಅವರು ಹೇಳುತ್ತಿದ್ದರು. ನಾವು ನಂಬುತ್ತಿದ್ದೆವು.

ರಾಷ್ಟ್ರೀಯ ಹಬ್ಬಗಳಲ್ಲಿ ನಡೆಯುವ ಊರ ಮೆರವಣಿಗೆಗೆ ಅವರದೇ ನೇತೃತ್ವ. ವಿಜಲ್ ಊದುತ್ತ, ಮೆರವಣಿಗೆಯನ್ನು ಅದರ ಕೂಗಿನಿಂದಲೇ ನಿಯಂತ್ರಿಸುತ್ತ, ದೇಶಭಕ್ತಿಗೀತೆಗಳನ್ನು ಹಾಡುತ್ತ, ಹೇಳಿಕೊಡುತ್ತ ಅವರು ಮುಂದೆ, ಉಳಿದವರು ಹಿಂದೆ. ಮೆರವಣಿಗೆ ಗಜಾಗುಂಡ್ಲದ ಎದುರಿನ ವೆಂಕಟೇಶ್ವರ ಲಾಡ್ಜ್ ಮುಂದೆ ಬಂದಾಗ ಮೂಗಿಗೆ ಮಸಾಲೆದೋಸೆಯ ಗಮಲು ಬಡಿದು ನಮ್ಮ ಹೊಟ್ಟೆ ಹಸಿವೆ ಹಸಿವೆ ಅನ್ನುತ್ತಿತ್ತು.

ಆದರೆ, ನಮ್ಮ ಕಿಸೆ ಖಾಲಿ. ಹಾಗೆಯೇ ಮುನಿಸಿಪಲ್ ಆಫೀಸಿನ ಎದುರಿನ ಗುರುಪ್ರಸಾದ್ ಹೋಟೆಲಿನ ಮುಂದೆ ಬಂದಾಗ ಘಮ್ಮೆನ್ನುವ ಇಡ್ಲಿ- ಚಟ್ನಿಯೊಂದಿಗೆ ಮಸಾಲೆದೋಸೆಯ ಗಮಲು ಬೆರೆತು ತಿಂಬೋ ಆಸೆ ಹುಟ್ಟುತ್ತಿತ್ತು. ಆ ಗಮಲಿನಲ್ಲಿ ದೇಶಭಕ್ತಿ ಗೀತೆ, ಘೋಷಣೆಗಳು ಕರಗಿಬಿಡುತ್ತಿದ್ದವು.

ಸೊಣ್ಣಪ್ಪನವರು ಬಡತನದ ಕಿಚ್ಚನ್ನು ಅನುಭವಿಸಿದ್ದವರು. ಬಡ ವಿದ್ಯಾರ್ಥಿಗಳಲ್ಲಿ ಅವರಿಗೆ ಕನಿಕರವಿತ್ತು. ನಾವು, ಮಲಿಯಪ್ಪನಹಳ್ಳಿಯಿಂದ ಹೋಗುತ್ತಿದ್ದವರು, ಎಲ್ಲಾ ಶನಿವಾರವೂ ಲೇಟೇ. ಸುದ್ದುಕುಂಟೆ ಆಂಜನೇಯಸ್ವಾಮಿ ಗುಡಿಯಲ್ಲಿ ಪ್ರಸಾದ ಸ್ವೀಕರಿಸದೆ ಶಾಲೆಗೆ ಹೋದ ಶನಿವಾರಗಳು ಬಹಳ ಕಡಿಮೆ. ಹಾಗಾಗಿ ತಡವಾಗುತ್ತಿತ್ತು.

ಗುರುಗಳು ವಿಜಲ್ ಬೆಲ್ಟನ್ನು ತಿರುಗಿಸುತ್ತ ನಮಗಾಗಿ (ತಡವಾಗಿ ಬರುವವರಿಗಾಗಿ) ಕಾಯುತ್ತಿದ್ದರು. ಮುಡ್ಡಿ ಮೇಲೆ ಬೀಳುತ್ತಿದ್ದ ರಪರಪ ಏಟು ಗುರು ಪ್ರಸಾದ್ ಹೋಟೆಲ್ಲಿನ ಮಸಾಲೆದೋಸೆಯಷ್ಟೇ ಬಿಸಿಬಿಸಿಯಾಗಿರುತ್ತಿತ್ತು. ಏಟು ಬಿದ್ದವರು ಮುಡ್ಡಿ ಉಜ್ಜಿಕೊಂಡು ಓಡುತ್ತಿದ್ದರೆ, ಗುಂಪಿನಲ್ಲಿ ಕೆಲವರು ಏಟು ಬಿದ್ದಂತೆ ಮುಡ್ಡಿ ಉಜ್ಜಿಕೊಳ್ಳುತ್ತ ತಪ್ಪಿಸಿಕೊಳ್ಳುತ್ತಿದ್ದರು. ಇದು ತಿಳಿದಿದ್ದೂ ಮೇಷ್ಟ್ರು ನಗುತ್ತ ಓಡಿ ಅನ್ನುತ್ತಿದ್ದರು.

ಮೇಷ್ಟ್ರು ಒಳ್ಳೇ ಹಾಸ್ಯಪ್ರಿಯರು. ತಮ್ಮನ್ನೂ ಅದಕ್ಕೆ ಒಳಪಡಿಸಿಕೊಳ್ಳುತ್ತಿದ್ದರು. ಒಮ್ಮೆ ಒಂದು ಘಟನೆಯನ್ನು ತರಗತಿಯಲ್ಲಿ ಹೇಳಿದರು. ಅರವತ್ತರ ದಶಕದಲ್ಲಿ ಕಾಣಿಸಿಕೊಂಡ ಭೀಕರ ಬರಗಾಲದಲ್ಲಿ ಇವರನ್ನೂ ದನದ ಮೇವಿನ ಸಂಗ್ರಹಣೆಗೆ ನಿಯೋಜಿಸಿದ್ದರಂತೆ. ಹೀಗೆ ಹೋಗಿದ್ದ ಒಂದೂರಿನ ರೈತರ ಮನೆಯಲ್ಲಿ ಇವರ ತಂಡಕ್ಕೆ ಊಟದ ವ್ಯವಸ್ಥೆ.

ಆ ಮನೆಯಾಕೆ ಕೈ ಹಿಡಿತವಿಲ್ಲದೆ ಬಡಿಸುವ ಗುಣದವಳು. ಇವರು ಉಣ್ಣುತ್ತಿರುವಾಗ ಗಣಪನ ಹೊಟ್ಟೆಯ ಪ್ಯಾಂಟಿನ ಗುಂಡಿ ಟಪ್ಪೆಂದು ಕಿತ್ತು ಹೋಯಿತಂತೆ. ಎದ್ದರೆ ಪ್ಯಾಂಟು ಜಾರಿ ಹೋಗುತ್ತದೆ. ಎಲ್ಲರೂ ಎದ್ದು ಕೈ ತೊಳೆಯಲು ಹೋದರು. ಇವರು ಕುಳಿತಲ್ಲೇ ಹೊಸಕಾಡುತ್ತಿದ್ದರು.

ಹೊಟ್ಟೆ ತುಂಬದೆ, ಕೇಳಲು ಸಂಕೋಚವಾಗಿ ಕುಳಿತಿದ್ದಾರೆಂದು ಭಾವಿಸಿ, 'ಎಲ್ಲರು ಎದ್ದು ಹೋದರು. ನಾಚಿಕೆ ಬೇಡ ನೀವು ಉಣ್ಣಿ' ಎಂದು ಮನೆಯಾಕೆ ಎಲೆ ತುಂಬ ಅನ್ನ ಬಡಿಸಿದರಂತೆ. ಬಟ್ಟಲು ತಂದಿಟ್ಟು ಕೈ ತೊಳೆಯಲು ಹೇಳಿದರಂತೆ. ಮಾನ ಉಳಿಸಿದೆ ತಾಯಿ ಎಂದುಕೊಂಡು ಕೈತೊಳೆದು, ಪ್ಯಾಂಟನ್ನು ಹಿಡಿದುಕೊಂಡು ಎದ್ದರಂತೆ.

ದಡ್ಡ ಶಿಖಾಮಣಿಗಳಿಗೇ ಶಿಖಾಮಣಿಗಳಾದ ನಾವೊಂದಿಷ್ಟು ಹುಡುಗರು ಪ್ರತಿ ವರ್ಷ ಪಾಸಾಗುತ್ತಿದ್ದುದು ಇವರ ಮತ್ತು ಇಂಗ್ಲಿಷ್ ಮೇಷ್ಟ್ರು ಡಿ.ಆರ್.ನಾಗರಾಜರ ಕೃಪೆಯಿಂದಾಗಿ ಎಂಬುದು ಸತ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Humorous incident of drill master Malur Sonnappa Remembering by Oneindia columnist Sa Raghunatha. How Malur Sonnappa influence on students and his talent introduced to readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more