ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾನಪದ ಮನಸಿನ ಕವಿ ಕಟ್ಟಿಕೊಟ್ಟ ಪ್ರೇಮರಸದಲ್ಲಿ ಮೀಸುವ ಹಾಡು

By ಸ ರಘುನಾಥ, ಕೋಲಾರ
|
Google Oneindia Kannada News

ಮೋಡದಿ ಏನುಂಟು ನನ್ನ - ಮನದಲಿ ಏನುಂಟು?

'ಮೋಡದಿ ಕಣ್ಣೀರು ನಿನ್ನ - ಮನದಲಿ ಪನ್ನೀರು'

ತೋಟದಿ ಏನುಂಟು ನನ್ನ - ಮಾತಲಿ ಏನುಂಟು?

'ತೋಟದಿ ಮಲ್ಲಿಗೆಯು ನಿನ್ನ - ಮಾತಲಿ ಸವಿಜೇನು'

ಹೊಲದಲಿ ಏನುಂಟು ನನ್ನ - ಮೈಯಲಿ ಏನುಂಟು?

'ಹೊಲದಲಿ ಬಂಗಾರ ನಿನ್ನ - ಮೈಯಲಿ ಸಿಂಗಾರ'

ನದಿಯಲಿ ಏನುಂಟು ನನ್ನ - ಹಾಡಲಿ ಏನುಂಟು?

'ನದಿಯಲಿ ಗಲಗಲವು ನಿನ್ನ - ಹಾಡಲಿ ಸರಿಗಮವು'

ನನ್ನಲಿ ಏನುಂಟು - ನಿನ್ನಲಿ ಏನುಂಟು?

'ನನ್ನಲಿ ನೀನುಂಟು - ನಿನ್ನಲಿ ನಾನುಂಟು.'

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸರಳ ಆದರೆ ಅರ್ಥಪೂರ್ಣ ಸಾಹಿತ್ಯಕ್ಕೆ ಈ ತೆಲುಗು ಚಿತ್ರಗೀತೆ ಒಂದು ಸುಂದರ ಉದಾಹರಣೆ. ಇದು ಯಾರಿಗೂ ಅರ್ಥವಾಗುವಂತಹ ಸರಳ ಪದಗಳ ಸುಮಹಾರ. ಪ್ರಶ್ನೋತ್ತರ ರೂಪದಲ್ಲಿ ಸಾಗುವ ಹಾಡು. ಪ್ರೇಯಸಿ, ಚತುರ ಪ್ರಶ್ನೆಗಳ ಮಾಲೆಯನ್ನು ಪೋಣಿಸುತ್ತ ತನ್ನ ಕುರಿತಾದ ಪ್ರಿಯಕರನ ಮನದ ಭಾವನೆಗಳನ್ನು ಅರಿಯಲು ಪ್ರಯತ್ನಿಸುವಳು. ಅವನದೂ ಚತುರತೆಯ ಉತ್ತರಗಳೇ. ಪ್ರಶ್ನೆಗಳಷ್ಟೇ ಕೋಮಲವಾದುದು ಉತ್ತರಗಳು.

How simple and beautiful Telugu song expresses feeling of love!

ನಾಯಕಿ ಅರ್ಥಗರ್ಭಿತ ಮಾತುಗಳಿಂದ ಪ್ರಶ್ನೆಗಳನ್ನು ಕಟ್ಟುತ್ತಾಳೆ. ನಾಯಕ ಭಾವ ತುಂಬಿದ ಮಾತುಗಳಿಂದ ಉತ್ತರವಾಗಿಸಿದ್ದಾನೆ. ಮೋಡದಲ್ಲಿ ಕಣ್ಣೀರಿದೆ ಅನ್ನುವುದು ಅದರ ಭಾವಾರ್ಥದಿಂದ ಸರಿಯಾದುದಾಗಿದೆ. ಮೋಡದ್ದು ಬಿಸಿಯುಸಿರಿನ ಕಾವಿನ ಕಣ್ಣೀರಲ್ಲ. ಅದು ತಂಪಿನದು. ಅದಕ್ಕೆ ತಕ್ಕುದಾದುದು, ಪ್ರಿಯನ ಭಾವದಲ್ಲಿ ಅದಕ್ಕಿಂತ ಮಿಗಿಲಾದುದು ಪನ್ನೀರು. ಅದು ಇರುವುದು ಅವಳ ಮನಸ್ಸಿನಲ್ಲಿ. ಕಣ್ಣೀರು ಪನ್ನೀರು ಆಗುವುದೇ ಮನಸ್ಸಿನಲ್ಲಿ. ಮೋಡದ ಕಣ್ಣೀರೇ ಮನಸ್ಸಿನ (ಪ್ರೀತಿಯ) ಪನ್ನೀರು.

ತೋಟದಲ್ಲಿ ಪ್ರೇಮಿಗಳಿಗೆ ಆಪ್ಯಾಯಮಾನವಾದ ಹೂ(ಮಲ್ಲಿಗೆ) ಇದ್ದ ಮೇಲೆ ಅವುಗಳ ನಡುವಿರುವ ಅವಳ ಹೃದಯದಲ್ಲಿ ಜೇನಲ್ಲದೆ ಬೇರೇನಿದ್ದೀತು? ಅದನ್ನು ತಿಳಿದವನಾಗಿಯೇ ನಾಯಕ ಮನದಲಿ ಸವಿಜೇನು ಎನ್ನುತ್ತಾನೆ. ಹೊಲದ ಬೆಳೆ ಬದುಕಿಗೆ ಬಂಗಾರವೇ ಆದುದು. ಅದು ಅಂದವೂ ಆದುದು. ಆ ಅಂದ ಆ ಸುದರಾಂಗಿ ಪ್ರಿಯತಮೆಯ ದೇಹದ ಬಾಗು ಬಳುಕುಗಳಲ್ಲಿ ಪ್ರತಿಬಿಂಬಿತ ಆಗುವಾಗ ಅವಳ ಮೈ ಸಿಂಗಾರವಲ್ಲದೆ ಇನ್ನೇನು?

ಬೆಳೆ ಬಂಗಾರವಾದರೆ, ಅವಳು ಅದರ ಸಿಂಗಾರ. ಹೊಲ ಬೆಳೆಯಿಂದ ಸಮೃದ್ಧ, ಇವಳು ಪ್ರೀತಿಯ ಬೆಳೆಯಿಂದ ಸಿಂಗಾರ.

ಮೈ ವೀಣೆಯಲಿ ಕಂಪನ, ಜೇನ ತುಟಿಗೆ ದುಂಬಿ ಚುಂಬನಮೈ ವೀಣೆಯಲಿ ಕಂಪನ, ಜೇನ ತುಟಿಗೆ ದುಂಬಿ ಚುಂಬನ

ಝುಳುಝುಳು ನಾದದೊಂದಿಗೆ ನದಿ ಹರಿಯುತ್ತದೆ. ಅದು ಅದರ ನಾದ. ಅದು ಯಾರಿಗಿಂಪಲ್ಲ? ಅದರಂತೆ ಪ್ರೇಯಸಿಯ ಹಾಡು. ಅದನ್ನು ಆಲಿಸುವ ನಲ್ಲೆಯ ಹಾಡಿನಲ್ಲಿ ಸರಿಗಮ(ಸಂಗೀತ) ಇರುವುದು ಸಹಜ. ಈ ಎಲ್ಲದರ ಅಂತರ್ಭಾವ ನಲುಮೆ. ಒಲಿದವರಲ್ಲಿ ನಲುಮೆಯ ನೆಲೆ. ಈ ನೆಲೆಗೆ ಬಂದ ಮೇಲೆ 'ನನ್ನಲಿ ನೀನುಂಟು, ನಿನ್ನಲಿ ನಾನುಂಟು.' ಅಂದರೆ ಒಂದಾಗುವುದು. ಪ್ರೇಮಭಾವೈಕ್ಯತೆ. ಇದು ಪ್ರೀತಿಬಂಧ. ಮುಂದಿನದು ಅದರೊಂದಿಗಿನ ಬದುಕು.

ಈ ರೀತಿಯ ಹಾಡು ಕಟ್ಟುವುದು ಜಾನಪದ ಮನಸ್ಸಿನ ಕವಿಗೆ ಮಾತ್ರ ಸಾಧ್ಯ. ಇದನ್ನು ಕವಿ ಸಿ.ನಾರಾಯಣರೆಡ್ಡಿ ಕೋಮಲವಾಗಿ ನೇಯ್ದಿದ್ದಾರೆ. ಹಾಡಿನ ಭಾವ ಕೋಮಲತೆ ಕೊಂಚವೂ ಮುಕ್ಕಾಗದಂತೆ ಕನ್ನಡ ಚಿತ್ರಗೀತೆ ಪ್ರಿಯರಿಗೆ ಚಿರಪರಿಚಿತ ಮಧುರ ಗಾಯಕರಾದ ಘಂಟಸಾಲ ಹಾಗೂ ಪಿ.ಸುಶೀಲಾ ಹಾಡಿದ್ದಾರೆ.

ತೆಲುಗು ಚಿತ್ರರಂಗದ ಸ್ಮರಣೀಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಟಿ.ಚಲಪತಿರಾವ್ ರ ರಾಗ ಸಂಯೋಜನೆಯಲ್ಲಿ ಮೂಡಿಬಂದ ಅಮರ ಮಧುರ ಗೀತೆಗಳಲ್ಲಿ ಒಂದಾಗಿ ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಚಿತ್ರ 1963ರಲ್ಲಿ ತೆರೆಕಂಡ ಲಕ್ಷಾಧಿಕಾರಿ. ಎನ್.ಟಿ.ರಾಮಾರಾವ್ - ಕೃಷ್ಣಕುಮಾರಿ ಹಾಡಿನ ಭಾವಕ್ಕೆ ಅಭಿನಯದ ಜೀವ ತುಂಬಿದ್ದಾರೆ.

English summary
How simple and beautiful Telugu song expresses feeling of love! Oneindia Kannada columnist Sa Raghuntha narrates beauty of Telugu cinema old song and translate Telugu lyrics in to Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X