ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮಪ್ಪನ ಸಾವಿನೊಂದಿಗೆ ಅನಾಥವಾದ ಗೆಜ್ಜೆ, ಚಿಟಿಕೆ, ಕೋನಿಗಕಟ್ಟ

By ಸ ರಘುನಾಥ, ಕೋಲಾರ
|
Google Oneindia Kannada News

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೊದಲಿಯಲ್ಲಿ ಹನುಮಪ್ಪ ಹುಟ್ಟಿದಾಗ ಬಾಂದಳದಲ್ಲಿ ನಕ್ಷತ್ರವೊಂದು ಹುಟ್ಟಿತ್ತೆ? ಹುಟ್ಟಿದ್ದರೆ ಅದು ಆತನ ಮರಣವಾದಾಗ ನಂದಿತೆ? ಕಂಡವರಿಲ್ಲ. ನನಗನ್ನಿಸುವಂತೆ ಹುಟ್ಟಿತ್ತು ಮತ್ತು ಆತನ ಮರಣವಾಗುತ್ತಲೆ ಅಸ್ತಂಗತವಾಯಿತು.

ಹಿಂದೊಮ್ಮೆಯೂ ಹೀಗೆಯೇ ಅನ್ನಿಸಿತ್ತು. ಅದು ಜೋಂಕಿಣಿ ಮುನೆಪ್ಪ ಮರಣಿಸಿದ ದಿನವಾಗಿತ್ತು. ಈ ನಂಬಿಕೆಗೆ ಕಾರಣ ಈ ಇಬ್ಬರು ಒಂದು ರೀತಿಯ ಸಂತತನದಲ್ಲಿ ಬದುಕಿದವರು. ಇಬ್ಬರ ಬದುಕಿನಲ್ಲೂ ಸಾದೃಶ್ಯವಿದೆ. ಅದು ಜನಪದ ಗಾಯನವನ್ನು ಸರಿಸುಮಾರು 90 ವರ್ಷಗಳು ನಿರಂತರವಾಗಿ ನಡೆಸುತ್ತಲೇ ಅದಕ್ಕಾಗಿ ಸಾವಿನ ದಿನದವರೆಗೂ ಹಂಬಲಿಸಿದ್ದು. ಇನ್ನೊಂದು ಅಂಶ ಬಡತನ.

ಹನುಮಪ್ಪ, ಮುನೆಪ್ಪನಂತೆಯೇ 'ಪ್ರೀತಿಯ ಮನುಷ್ಯ'. ಒಂದು ಮುದ್ದೆ, ಅದಕ್ಕೊಂದಿಷ್ಟು ಸಾರು. ಮುಗಿಯಿತು ಊಟ. ಮಹಾತೃಪ್ತಿ. ರಾತ್ರಿ ಊಟವಾಗಿ ನಿದ್ದೆ ಹತ್ತುವವರೆಗೆ 'ನಮುಲಲು'(ಜಗಿಯಲು) ಎಲಡಿಕೆ, ಜೊತೆಗೆ ಕಡ್ಡಿಪುಡಿ(ತಂಬಾಕಿನ ಕಡ್ಡಿಯ ಪುಡಿ) ಇದ್ದರೆ ಸಾಕು. ಇದಕ್ಕಿಂತ ಬೇರೊಂದು ಸುಖವನ್ನು ಬಯಸಿದ್ದಿಲ್ಲ.

ಕೋಲಾರದ ಅಲೆಮಾರಿಗಳಿಗೆ ಸೂರು ಕಟ್ಟಿಕೊಟ್ಟ ರಘುನಾಥ ಮೇಷ್ಟ್ರುಕೋಲಾರದ ಅಲೆಮಾರಿಗಳಿಗೆ ಸೂರು ಕಟ್ಟಿಕೊಟ್ಟ ರಘುನಾಥ ಮೇಷ್ಟ್ರು

ಹನುಮಪ್ಪನಿಗೂ ಮುನೆಪ್ಪನಿಗೂ ಇದ್ದ ಒಂದು ವ್ಯತ್ಯಾಸವೆಂದರೆ ಹನುಮಪ್ಪ ತಾಂಬೂಲ ಪ್ರಿಯ. ಮುನೆಪ್ಪ 'ಗುಂಡು'ಪ್ರಿಯ. ಇದು ಮುನೆಪ್ಪನ ವ್ಯಸನವೇನಾಗಿರಲಿಲ್ಲ. ಸಿಕ್ಕಿದರೆ ಒಂದು ಕ್ವಾರ್ಟರ್ 'ನಾಟಿ' ಸಾಕಾಗಿತ್ತು. ಇಬ್ಬರಿಗೂ ಸೊಪ್ಪಿನ ಸಾರು ಅಮೃತ. ಜೋಂಕಿಣಿಗೆ ಇಂಗು ಒಗ್ಗರಣೆ ಹಾಕಿದ ಬ್ರಾಹ್ಮಣರ ಮನೆಯ ಮಾವು, ನಿಂಬೆಯ ಉಪ್ಪಿನಕಾಯಿ ಎಂದರೆ ಪಂಚಪ್ರಾಣ. ಅದಿದ್ದಾಗ ಮುದ್ದೆ, ಸೊಪ್ಪಿನ ಹುಳಿ ರಾಜಭೋಜನ. ಕೋನಿಗನಿಗೆ ಇದಿಲ್ಲದೆಯೂ ರಾಜಭೋಜನವೆ, ಮುದ್ದೆ, ಸೊಪ್ಪಿನ ಸಾರು.

ಆತನ ಮೇಕಪ್ಪು ಹೀಗೆ

ಆತನ ಮೇಕಪ್ಪು ಹೀಗೆ

'ಕೋನಿಗ' ಎಂಬುದನ್ನು 'ಕೋನಂಗಿ' ಎನ್ನುವುದೂ ಉಂಟು. ಹನುಮಪ್ಪ ಹೇಳುತ್ತಿದ್ದಂತೆ ಆತನ ಕೈ ಕೋಲು 'ಕೋನಿಗಕಟ್ಟ' ಅಥವಾ 'ಕೋನಂಗಿಕಟ್ಟ.' ಬಿಸ್ಸೇಗೌಡನ ಕಥೆ ಮಾಡುವಾಗ ಈ ಕೋಲೇ ಸಿಂಹಾಸನ, ಕತ್ತಿ, ಸವಾರಿಯ ಕುದುರೆ. ತಾಳವಾದ್ಯ ಎಂದರೆ ಎರಡೂ ಕೈ ಬೆರಳುಗಳ ನಡುವೆ ಆಡುತ್ತಿದ್ದ ಗೆಜ್ಜೆ ಬಿಗಿದ ಚಿಟಿಕೆ. ಇದು ನಾರದಾದಿ ಹರಿಕಥೆ ದಾಸರ ಕೈ ಚಿಟಿಕೆಯಂತಲ್ಲ. ಹಿಡಿಕೆ ಇಲ್ಲದ ಚಿಕ್ಕ ಗಂಧದ ಚಕ್ಕೆಯಂತಹ ಗೇಣುದ್ದದ ಮರದ ಚಪ್ಪಟೆ ತುಂಡುಗಳು. ಚಕ್ಕೆ ಎಂತಲೂ ಹೇಳಬಹುದು. ಬಿಳಿ ಕಚ್ಚೆಪಂಚೆ, ಷರಟು. ಆತನೇ ಬಯಸಿ ಹಾಕಿಕೊಂಡರೆ ಹಳೇ ಕೋಟು. ತಲೆಗೊಂದು ಮೈಸೂರು ಪೇಟವನ್ನು ಹೋಲುವ ಪೇಟ. ಅಕ್ಕೊಂದು ಹಿತ್ತಾಳೆ ಬಿಲ್ಲೆ, ಕುಚ್ಚಿನ ಸಿಂಗಾರ. ಹಣೆಗೆ ನಾಮ ತಿದ್ದುವುದೊಂದೇ ಮೇಕಪ್ಪು.

ಗಾಯನ ಪ್ರಕಾರವೇ ಎಂಬ ಮಾಹಿತಿ ದೊರೆತಿಲ್ಲ

ಗಾಯನ ಪ್ರಕಾರವೇ ಎಂಬ ಮಾಹಿತಿ ದೊರೆತಿಲ್ಲ

ಕೋನಿಗ ಎಂಬುದು ಒಂದು ಗಾಯನ ಪ್ರಕಾರವೆ? ಹಾಗಿದ್ದರೆ ಅದರ ಸ್ವರೂಪವೇನೆಂಬುದರ ಬಗ್ಗೆ ಮಾಹಿತಿ ಈವರೆಗೆ ದೊರೆತಿಲ್ಲ. ಹನುಮಪ್ಪನನ್ನು ಕೇಳಿದರೆ 'ಅದಂತೆ. ಇದಿ ಕೋನಂಗಿ ಕಟ್ಟ, ಇದಿ ತಾಳಲು. ನೇನು ಕೋನಿಗ ಹನುಮಪ್ಪ' (ಅದಷ್ಟೆ. ಇದು ಕೋಣಂಗಿ ಕೋಲು, ಇದು ತಾಳಗಳು, ನಾನು ಕೋನಿಗ ಹನುಮಪ್ಪ) ಎಂದಷ್ಟೆ ಹೇಳುತ್ತಿದ್ದುದು.

ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ

ಕಲೆ ಹುಟ್ಟಿದ್ದು ಆಂಧ್ರದಲ್ಲಿರಬೇಕು

ಕಲೆ ಹುಟ್ಟಿದ್ದು ಆಂಧ್ರದಲ್ಲಿರಬೇಕು

ಜಾನಪದ ಕಲೆ ಅಧ್ಯಯನಕ್ಕೆ ಬರುವುದಕ್ಕೆ ಬಹಳ ಹಿಂದೆಯೇ ಅದು ಅಳಿದಿರಬೇಕು. ಆ ಕಾರಣಕ್ಕೆ ಅದು ಅಷ್ಟು ಜನಪ್ರಿಯವಾಗದೆ ಇದ್ದಿರಬಹುದು. ಅದು ಹುಟ್ಟಿದ್ದು ಆಂಧ್ರದಲ್ಲಿ ಅನ್ನಿಸುತ್ತದೆ. ಅದು ಹೇಗೋ ಹನುಮಪ್ಪನ ವಂಶದವರ ಕಲಿಕೆಗೆ ಬಂದು ಈತನಕ ಬಂದಿದೆ. ಈತನೊಂದಿಗೆ ಕೊನೆಗೊಂಡಿದೆ.

ಹನುಮಪ್ಪ ಒಳ್ಳೆ ನಟನಾಗಿದ್ದ

ಹನುಮಪ್ಪ ಒಳ್ಳೆ ನಟನಾಗಿದ್ದ

ಬಿಸ್ಸೇಗೌಡನ ಹಾಡುಗಬ್ಬವನ್ನು ಹೊರತುಪಡಿಸಿ ಹನುಮಪ್ಪ ತತ್ವಪದ, ಭದ್ರಾಚಲ ರಾಮದಾಸರಂತಹವರ ಕೀರ್ತನೆಗಳನ್ನೂ ಹಾಡುತ್ತಿದ್ದ. ಇದು ಜನಪದ ಗಾಯಕರಲ್ಲಿ ಸಾಮಾನ್ಯ. ಹನುಮಪ್ಪ ಒಳ್ಳೆಯ ನಟನೂ ಆಗಿದ್ದ. ಈತನ ದುಶ್ಶಾಸನನ ಪಾರ್ಟು ಅದ್ಭುತವಾದುದು. ಈ ಪಾತ್ರದಲ್ಲಿ 'ಟೇಜು' ಹತ್ತಿದನೆಂದರೆ ಅಭಿನವ ದುಶ್ಶಾಸನನೇ. ಆಶುಕವಿಯಾಗಿದ್ದ ಹನುಮಪ್ಪ ಎಂಬುದನ್ನು ಅನೇಕರು ಸ್ಮರಿಸಿದ್ದುಂಟು. ಮುಖ ನೋಡುತ್ತಲೇ ಅವರ ಮೇಲೆ ಹಾಡು ಕಟ್ಟುತ್ತಿದ್ದನಂತೆ. ಬರೆಯಲೇನಾದರೂ ಬಂದಿದ್ದರೆ ಬರೆದಿಡುತ್ತಿದ್ದನೇನೊ?

ಮಾಸಾಶನ ಸಿಗದೆ ಒದ್ದಾಡಿದ್ದು ಮರೆಯಲಾಗದ ನೋವು

ಮಾಸಾಶನ ಸಿಗದೆ ಒದ್ದಾಡಿದ್ದು ಮರೆಯಲಾಗದ ನೋವು

'ಕೋನಿಗ, ಕೋನಿಗಕಟ್ಟ' ಎಂಬುದು ಏನೇ ಆಗಿರಲಿ ಹನುಮಪ್ಪನಂತೂ ಬಹುಮುಖ ಪ್ರತಿಭೆಯ ಜಾನಪದ ಕಲಾವಿದನಾಗಿದ್ದ ಎಂಬುದರಲ್ಲಿ ಎರಡು ಮಾತಿಲ್ಲ. ಈ ಪ್ರತಿಭೆ ಕಾಡ ಬೆಳದಿಂಗಳಾಯಿತು ಎಂಬ ಕೊರಗಿಗೂ ಅವಕಾಶವಿಲ್ಲ. ಏಕೆಂದರೆ ಮುದಿತನ ಹಾಗೂ ಕುರುಡಿಗೆ ಬೀಳುವ ಹಿಂದಿನ ದಿನಗಳಲ್ಲಿ ಸಾವಿರಾರು ಜನರ ಹೃದಯಗಳನ್ನು ತನ್ನ ಕಲೆಯೊಂದರಿಂದಲೇ ಅರಳಿಸಿದ್ದಾನೆ, ರಂಜಿಸಿದ್ದಾನೆ. ಇದೇನೂ ಕಡಿಮೆ ಸಾಧನೆಯಲ್ಲ. ಆದರೆ ಕೊರಗಿರುವುದು ಬಡತನದೊಂದಿಗೆ ಮುದಿತನ, ಅನಾರೋಗ್ಯ ಮರೆವು ಕವಿದು ದುರ್ಬಲನಾಗಿ ಕುಳಿತ ದಿನಗಳಲ್ಲಿ ಅರ್ಜಿ ಹಾಕಿಕೊಂಡು ಅಲೆದರೂ, 100ಕ್ಕೆ 100ರಷ್ಟು ಅರ್ಹತೆ ಇದ್ದರೂ ಅಸಹಾಯಕ ಕಲಾವಿದರಿಗೆ ಸಿಗಲೇಬೇಕಾದ ಮಾಸಾಶನ ಸಿಗದೆ ಆ ಜೀವ ಒದ್ದಾಡಿದ್ದು ಮರೆಯಲಾಗದ ನೋವು.

English summary
This article about folk artist Hanumappa, who was residing at Hodali village, Srinivasapura taluk, Kolar district. After the demise of Hanumappa art become orphan. Heart touching story by One India Kannada columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X