ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ!

|
Google Oneindia Kannada News

ನನ್ನ ಮನಕೊಳದ ಹಂಸ ವಸಂತ,

ಬಾಳ ಗೆಳೆಯನೇ ಪೂರ್ಣ ಚಂದ್ರನೆ, ತಾಳಲಾರೆನೋ ಈ ವಿರಹ ವೇದನೆ ಎಂದು ಮನಸ್ಸು ಆಲಾಪಿಸುತ್ತಿರುವಾಗ ನಿನ್ನ ಕಾಗದ ಕೈಸೇರಿತು. ಅದರಲ್ಲಿನ ಒಕ್ಕಣೆ ತಿಳಿದಿದ್ದರೂ ಓದುವಾಗ ಇದೇ ಮೊದಲು ತಿಳಿಯುತ್ತಿರುವಂತೆ ಸಂಭ್ರಮಿಸುತ್ತ ಓದಿದೆ. ನೀಲಳಲ್ಲೂ ಇದೇ ಸಂಭ್ರಮ. ಒಂದೇ ಚಪ್ಪರದಡಿ ಎರಡು ಜೋಡಿಯ ಮದುವೆ! ಅವಳೀಗ ಅವಳದೇ ಕನಸಿನ ಲೋಕದಲ್ಲಿ.

ವಸಂತ ಮನಸಲ್ಲಿ ಏನೋ ಹಗುರ ಭಾವ. ಆಕಾಶದ ನಕ್ಷತ್ರಗಳನ್ನೆಲ್ಲಾ ಬಾಚಿ ಸೆರಗಿನಲ್ಲಿ ಕಟ್ಟಿಕೊಂಡಂತೆ. ಮುಡಿದ ಮಲ್ಲಿಗೆ ಘಮಲು ಮೊದಲ ಸಲ ಗಾಳಿಗೆ ಮುನಿದು ನನ್ನನ್ನೆ ಅಪ್ಪಿ ಹಿಡಿದಂತೆ. ಆ ಅಪ್ಪುಗೆ ನಿನ್ನದೇ ಆಗಿರುವಂತೆ. ವಸಂತ ಕರೆಯುತಿದೆ ಕನಸು, ಕುಣಿಯುತಿದೆ ಮನಸು. ಒಂದರ ಹಿಂದೆ ಸಾಲು ಗಟ್ಟಿ ಬರುತ್ತಿರುವ ಹಾಡು. ಯಾವುದನ್ನೂ ಪೂರ್ಣವಾಗಿ ಹಾಡಿಕೊಳ್ಳಲಾಗದ ಸ್ಥಿತಿ. ಪಲ್ಲವಿ ಬಂದರೆ ಚರಣದವರೆಗೆ ಕಾಯಲಾಗದು. ಚರಣ ನೆನಪಾದರೆ ಪಲ್ಲವಿಯನ್ನು ನೆನಪಿಸಿಕೊಳ್ಳಲು ಸಮಯವಿರದು. ಏಕೆ ಹೀಗೆಂಬ ಪ್ರಶ್ನೆಯೂ ಇಣುಕದು. ಸಂಭ್ರಮವೆಂದರೆ ಹೀಗೆಯೇನೊ? ನನಗೆ ಇಂಥ ಸಂಭ್ರಮ ತೀರಾ ಹೊಸತು ವಸಂತ.

ನಿನ್ನ ಕೆಂದುಟಿಯ ನೆನಪು ತಂದ ಗಿಳಿ ಕೊಕ್ಕಿಗೆ ಮೆತ್ತಿದ ಬೆಳ್ಳನೆ ಹಾಲು ನಿನ್ನ ಕೆಂದುಟಿಯ ನೆನಪು ತಂದ ಗಿಳಿ ಕೊಕ್ಕಿಗೆ ಮೆತ್ತಿದ ಬೆಳ್ಳನೆ ಹಾಲು

ಹಾಲಧಾರೆಯಲ್ಲಿ ಮಿಂದು ಬಂದೆಯೋ, ಬಾಯಾರಿದೆಯೆ ಎಂದು ನೀನು ಬೊಗಸೆಯೊಡ್ಡಿ ಬೆಳದಿಂಗಳನು ತುಂಬಿ ನನಗೆ ಕುಡಿಸಿದೆ. ಜನ್ಮ ಜನ್ಮಗಳಿಂದ ಬಾಯಾರಿ ಇದ್ದವಳಂತೆ ನಾನು ಗಟಗಟ ಕುಡಿದೆ. ನಾನು ದಣಿದಿರುವೆ ಶಕುಂತಲೆ ನನಗೆ ಕುಡಿಸುವೆಯಾ ಎಂದು ನೀನು ಕೇಳಿದ್ದೇ ತಡ ನನ್ನ ಬೊಗಸೆಯಲ್ಲಿ ಬೆಳದಿಂಗಳ ತುಂಬಿ ನಿನಗೆ ಕುಡಿಸಿದೆ. ನೀನು ಕುಡಿಯುತ್ತಲೇ ಇದ್ದೆ. ನನ್ನ ಬೊಗಸೆ ಬರಿದಾಗದು, ನಿನ್ನ ದಾಹ ತೀರದು. ಎಷ್ಟು ಹೊತ್ತೋ ಹೀಗೆ.....

Hope this comes true, I cant wait for you anymore

ನಿನಗಾಗಿ ತಂದಿರುವೆ ಬಿಳಿಗುದುರೆ ಏರು. ಚಂದ್ರನಲ್ಲಿಗೇ ಹೋಗಿ ತಣಿವಷ್ಟು ಬೆಳದಿಂಗಳ ಹಾಲು ಕುಡಿದು ಬರುವ ಎಂದು ಮುಂದೆ ಕುರಿಸಿಕೊಂಡು ನೀನು ನೆಗೆಸಿದೆ ಬಾನಿಗೆ. ಚಂದಿರನ ತಲುಪುವ ಮೊದಲು ಚುಕ್ಕಿಗಳ ತೋಟ ಹಾದು ಹೋಗುವಾಗ ಏನು ಆನಂದ, ಏನು ಸೋಜಿಗ! ಯಾರೋ ಶ್ವೇತಕನ್ಯೆಯರು ಎದುರು ಬಂದರು. ಅವರಲ್ಲೊಬ್ಬಳು ನಿನ್ನನ್ನು ತಡೆದು, ರಾಜಕುವರನೋ ನೀನು, ಇವಳು ಒಲಿದ ರಾಜಕನ್ಯೆಯೋ? ವಿಹಾರಕ್ಕೆ ಬಂದಿರೋ ಎಂದು ಕೇಳಿದರೆ, ಇನ್ನೊಬ್ಬಳು, ರಾಜಕುಮಾರನ ವೇಶದ ಮಾಂತ್ರಿಕನೋ, ರಾಜಕುಮಾರಿಯ ಅಪಹರಿಸಿ ಬಚ್ಚಿಡಲು ಹೊರಟವನೋ ಎಂದು ಕೇಳಿದಳು. ನೀನು ಮುಗುಳು ನಗೆ ಬೀರಿದೆ. ಅವರಲ್ಲೊಬ್ಬಳು, ಹಾಯಿ ಹಲಾ, ಚೆಲುವ ಚತುರ ಮಾರರೂಪಿ ನರನೇ ಇವನು ಎಂದಳು. ಈ ಮಾತಿಗೆ ನಾನು ಹೆಮ್ಮೆಯಲಿ ಉಬ್ಬಿಹೋದೆ. ಒಬ್ಬಳು ತನ್ನ ದಿವ್ಯ ದೃಷ್ಟಿಯಿಂದ ತಿಳಿದು, ಹಲಾ ಇವರು ಚಂದಿರನ ಅತಿಥಿಗಳೇ ಎಂದಳು. ಅವರು ಹಲಾ ಹಲಾ ಎಂದು ಕಿಲಕಿಲಿಸುತ್ತ ಮಾಯವಾದರು.

ನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆ ನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆ

ವಸಂತ ನೀನು ಕುದುರೆ ಸವಾರಿಯ ದಿಕ್ಕು ಬದಲಿಸಿದೆ. ಸುಣ್ಣ ಕಲೆಸಿದ ನೀರು ಚೆಲ್ಲಿದಂತೆ ಇರುವ ಈ ಲೋಕವೇನು ಚೆನ್ನವಿದೆ. ಕೆಳಗೆ ನೋಡೆಂದೆ. ಮೊದಲಿಗೆ ಕಂಡಿದ್ದು ನಮ್ಮೂರು. ನೀಲ ಜಗುಲಿಯಲಿ ಕುಳಿತು ಕನಸು ಕಾಣುತ್ತಿದ್ದಳು. ಅಪ್ಪನ ಗೊರಕೆ ಕೇಳಿಸುತ್ತಿತ್ತು. ಅಮ್ಮ ಮಗ್ಗುಲಾಗಿ ಮಲಗಿ ಎನ್ನುತ್ತಿದ್ದಳು. ನಿಮ್ಮೂರು ಕಂಡಿತು. ಜೋಳದ ತೋಟ, ತಾವರೆ ಕೊಳ. ಕೆಂಚಪ್ಪ ಅವನ ಮನೆಯಂಗಳದಲ್ಲಿ ಮಲಗಿ ಕಚ್ಚಿದ ಸೊಳ್ಳೆಗೆ ಟಪ್ಪೆಂದು ಬಡಿಯುತಿದ್ದ. ನಾನು ತಾವರೆ ಕೊಳದ ಬಳಿಗೆ ಹೋಗೋಣ ಎಂದೆ. ನೀನು ಕಾಲಿನ ಹಿಮ್ಮಡಿಯಿಂದ ಕುದುರೆಯ ಪಕ್ಕೆ ಹೆಟ್ಟಿದೆ. ಅದು ನೇರ ಕೊಳದ ದಂಡೆಗೆ ಬಂದು ಮಾಯವಾಯಿತು. ನಾವು ಕೊಳದಲ್ಲಿ ಹೊರಳಾಡಿದೆವು. ನೀನು ತಾವರೆ ಹೂ ಕಿತ್ತು ಮುಡಿಸಿದೆ. ಮಲ್ಲಿಗೆ ನಾನು ಬೇಡವಾದನೆ ಎಂದಿತು. ನೀನು ಒಂದು ಮೊಗ್ಗು ತಂದು ಮುಡಿಸಿದಾಗ, ಕನಕಾಂಬರ ಇದು ಮೋಸ ಎಂದಿತು. ಅದನ್ನೂ ತಂದು ಮುಡಿಸಿದೆ. ಕೊಳದ ನೀರು ಚಳಿ ಹುಟ್ಟಿಸಿತು. ನಾನು ಗಡಗಡ ನಡುಗಿದೆ. ಹಲ್ಲುಗಳು ಕಟಕಟ ಶಬ್ದ ಮಾಡಿದವು. ನಾನು ಚಳಿ ನೀಗುತ್ತೇನೆಂದು ನೀನು ಕಾವಲಿನ ಮಂಚಕೆ ಹತ್ತಿಸಿ ನನ್ನನ್ನು ಅಪ್ಪಿ ಮಲಗಿದೆ.

ತಾವರೆ ಕೊಳದಲಿ ಬಿಟ್ಟ ಹೂವು ಕೊಟ್ಟು ಬರಲು ನಾನೇ ನಿನ್ನಲ್ಲಿಗೆ ಬರುವೆ... ತಾವರೆ ಕೊಳದಲಿ ಬಿಟ್ಟ ಹೂವು ಕೊಟ್ಟು ಬರಲು ನಾನೇ ನಿನ್ನಲ್ಲಿಗೆ ಬರುವೆ...

ಅಮ್ಮ ತುಳಸಿಕಟ್ಟೆಗೆ ಪ್ರದಕ್ಷಿಣೆ ಹಾಕುತ್ತ ತುಳಸೀ ಮಾತೆ ಸ್ವೀಕರಿಸು ಪೂಜೆ, ನೀಡು ಸೌಭಾಗ್ಯ ಬಾಳಿಗೆ ಎಂದು ಹಾಡುತ್ತಿದ್ದ ಸ್ವರ ಕೇಳಿ ಎಚ್ಚರವಾಯಿತು. ಆದರೆ ಹಾಸಿಕೆ ಬಿಟ್ಟೇಳಬೇಕು ಅನ್ನಿಸಲಿಲ್ಲ. ಕನಸನ್ನೇ ನೆನೆಯುತ್ತ ಮಲಗಿದೆ.

English summary
Hope this comes true, I can't wait for you anymore. Beautiful love letter depicting the unconditional love of a dream couple. Kannada columnist Sa Raghunatha from Kolar takes us to the wonderland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X