ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲುವು- ಸೋಲುಗಳಲ್ಲಿ ಅಸ್ತಿತ್ವ ಕಳೆದುಕೊಳ್ಳದ ರಾಜಕಾರಣಿ ರಮೇಶ್ ಕುಮಾರ್

By ಸ.ರಘುನಾಥ, ಕೋಲಾರ
|
Google Oneindia Kannada News

'ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು' ಎಂಬ ಬಸವಣ್ಣನವರ ಮಾತಿನ ಭಾವ-ಅರ್ಥ ಎಲ್ಲ ಕಾಲಕ್ಕೂ ಸಲ್ಲುವುದು. ಆ ಮಹಾತ್ಮನ ನುಡಿಗಳು ಎಲ್ಲಿಯೂ ಎಲ್ಲೆಲ್ಲಿಯೂ ಯಾರಿಗೂ ಯಾವ ಕಾಲದೇಶಕ್ಕೂ ನಿಲ್ಲುತ್ತವೆ. ರಾಜಕೀಯವೂ ಒಳಗೊಂಡಂತೆ ಎಲ್ಲೆಲ್ಲಿಯೂ ಬಸವಣ್ಣನವರ ಚಿಂತನೆಯ ಸಾರ್ವಕಾಲಿಕ ಬೆಳಕಿನ ನೋಟ ಪ್ರತಿ ದಿನದ ವರ್ತಮಾನದ ಮಾತು.

ಬಸವಣ್ಣನವರ ಮಾತುಗಳು(ವಚನಗಳು) ಸಾಮಾಜಿಕವಾದ ಧಾರ್ಮಿಕತೆಯ ನಡವಳಿಕೆಗಳ ಮೂಲಕ 'ಕೂಡಲಸಂಗಮದೇವನನೊಲಿಸುವ ಪರಿ' ಮಾತ್ರವಲ್ಲ, ಅದಕ್ಕೇ ಸೀಮಿತವೂ ಅಲ್ಲ. ಅವು ಕಾಲದಂತೆಯೇ ವಿಸ್ತರಿಸುತ್ತಲೇ ಇರುತ್ತವೆ. ರಾಜಕೀಯದಲ್ಲಿ ಇಲ್ಲಿ (ಮತಕ್ಷೇತ್ರದಲ್ಲಿ) ಸಲ್ಲುವವರಾದರೆ, ಅಲ್ಲಿ(ಪ್ರಜಾಪ್ರಭುತ್ವದ ಸರಕಾರದಲ್ಲಿ) ಸಲ್ಲುವರು. ಇಲ್ಲಿ ಸಲ್ಲುವುದೆಂದರೆ ಚುನಾವಣೆಯಲ್ಲಿ ಗೆಲ್ಲುವುದು. ಅಲ್ಲಿ ಸಲ್ಲುವುದೆಂದರೆ ವಿಧಾನ ಸಭೆಯಲ್ಲಿ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಈ ವಚನ ಪ್ರಸ್ತಾವನೆಗೆ ಮಾತ್ರ.

ಮಕ್ಕಳು, ಮೊಮ್ಮಕ್ಕಳೇ ಚುನಾವಣೆಗೆ ಸ್ಪರ್ಧಿಸಬೇಕು ಎಂದರೆ ಹೇಗೆ?: ರಮೇಶ್ ಕುಮಾರ್ಮಕ್ಕಳು, ಮೊಮ್ಮಕ್ಕಳೇ ಚುನಾವಣೆಗೆ ಸ್ಪರ್ಧಿಸಬೇಕು ಎಂದರೆ ಹೇಗೆ?: ರಮೇಶ್ ಕುಮಾರ್

ಈ ಪ್ರಸ್ತಾವನೆಯಲ್ಲಿ ಕಾಣಿಸುವ ಹೆಸರು ಈಗ ಎರಡನೆಯ ಬಾರಿಗೆ ವಿಧಾನಸಭಾಧ್ಯಕ್ಷರಾಗಿರುವ ಕೆ.ಆರ್.ರಮೇಶ್ ಕುಮಾರ್ ಅವರದು. ದೇವರಾಜ ಅರಸು ಅವರ ಗರಡಿಯಿಂದ ಬಂದ ರಾಜಕೀಯ ಪಟು ಇವರು. ನನಗಿವರ ಪರಿಚಯವಾದುದು 1979ರಲ್ಲಿ. ನಾನಾಗ ಅವರ ತವರು ಅಡ್ಡಗಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಮೇಷ್ಟ್ರು. ಅವರ ಸಂಬಂಧಿ ರಾಮಚಂದ್ರಪ್ಪ ಎಂಬುವರ ಮನೆಯಲ್ಲಿ ಊಟಕ್ಕೆ ಹೋಗಿದ್ದಾಗ. ಮಾತು ಶಿಕ್ಷಣವೂ ಸೇರಿದಂತೆ ಇತರ ವಿಚಾರಗಳಲ್ಲಿ ನಡೆದಿತ್ತು.

Heart touching pen picture of speaker KR Ramesh Kumar

'ಜನ ವಿದ್ಯಾವಂತರಾದರೆ ರಾಜಕೀಯ ಈಗಿನಂತೆ ನಡೆಯದು. ರಾಜಕೀಯದವರು ಜನರ ಹಿಂದೆ ಸುತ್ತಬೇಕಾಗುತ್ತದೆ' ಅಂದ ಮಾತಿಗೆ ಅವರು, ನಿಜವೆಂದರು. ನಾನು ರಾಜಕೀಯ, ರಾಜಕಾರಣ, ಸರಕಾರದ ಬಗ್ಗೆ ಟೀಕಿಸಿದಾಗ ಸಿಡುಕಲಿಲ್ಲ, ಸರಕಾರಿ ನೌಕರ ಹೀಗೆ ಮಾತನಾಡುವುದು ನಿಯಮ ವಿರುದ್ಧ ಎಂದು ಹೆದರಿಸಲಿಲ್ಲ. ನಗುನಗುತ್ತಲೇ ಆಲಿಸಿದರು.

ಎರಡು ಬಗೆಯ ಮೌನಗಳಿವೆ
ಇಂದಿಗೂ ಅವರೊಂದಿಗೆ ಹೀಗೆಯೇ ಮಾತನಾಡುವೆ. ಅವರನ್ನು ವಿಮರ್ಶಿಸಿದ್ದೂ ಇದೆ. ಆಗ, 'ಮೇಷ್ಟ್ರೇ, ನೀವು ಸೇಫಾಗಿದ್ದೀರ. ಹಾಗಾಗಿ ಮಾತಾಡುತ್ತೀರಿ. ನಾನು ಎಂದಿಗೂ ಸೇಫಲ್ಲ. ರಾಜಕೀಯ ಮುಳ್ಳಿನ ಮೇಲಿನ ನಡಿಗೆ. ಚುಚ್ಚಿಸಿಕೊಳ್ಳದೆ ನಡೆದರೂ ಚುಚ್ಚುತ್ತೆ' ಅಂದರು. ಹೀಗೆ ನಮ್ಮಿಬ್ಬರ ನಡುವೆ ಪರಿಚಯ ಬೆಳೆದು ಸ್ನೇಹವೂ ಕುದುರಿತು.

ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್‌ ರಮೇಶ್ ಕುಮಾರ್ಭಾವನಾತ್ಮಕ ಭಾಷಣ ಮಾಡಿದ ಸ್ಪೀಕರ್‌ ರಮೇಶ್ ಕುಮಾರ್

ಈ ದೀರ್ಘ ಕಾಲದಲ್ಲಿ ತೇಜೋವಧೆಯಲ್ಲದ, ವ್ಯಂಗ್ಯವಲ್ಲದ, ಸ್ನೇಹಭಾವದ ಟೀಕೆಗೆ ಸಮ್ಮತಿಯೋ ಅನ್ನುವಂತೆ ಕಣ್ಣು ಮುಚ್ಚಿ ತಲೆ ಆಡಿಸುವ ಅವರು, ಕೆರಳಿಸಿದರೆ ಕೆಕ್ಕರಿಸಿ ನೋಡಿ ಮೆಲು ಧ್ವನಿಯಿಂದ ಗಟ್ಟಿ ಧ್ವನಿಯವರೆಗೆ ಕೊರಳೇರಿಸಿ ಮಾತನಾಡುವುದು, ಎದುರಾಳಿಯ ವ್ಯಂಗ್ಯದ ಮೊನಚನ್ನು ಮೊಂಡು ಮಾಡುವಷ್ಟು ಮೊನಚನ್ನು ತಂದುಕೊಳ್ಳುವುದು ಅವರಿಗೇ ಸಾಧ್ಯ ಅನ್ನಿಸುತ್ತದೆ.

Heart touching pen picture of speaker KR Ramesh Kumar

ಅವರಲ್ಲಿ ಎರಡು ಮೌನಗಳಿವೆ ಅಂದುಕೊಂಡಿದ್ದೇನೆ. ಒಂದು ಒಪ್ಪಿಕೊಳ್ಳುವಾಗಿನ ಮೌನ. ಇನ್ನೊಂದು ನಿರಾಕರಿಸುವ ಮೌನ. ನಿರಾಕರಿಸುವ ಮೌನಕ್ಕೆ ಮಾತು ಕೊಟ್ಟರೆ ಅದು ತೀವ್ರ ನಿರಾಕರಣೆ. ಅದು ಗಟ್ಟಿಯಾಗಿಯೂ ಇರುತ್ತದೆ. ಹೀಗೆಯೇ ಕೇಳಿಸಿಕೊಳ್ಳುವಾಗ ಕಣ್ಣು ಮುಚ್ಚಿಕೊಂಡಿರುವುದು. ಇದು ಆಲಿಸುವಿಕೆಯ ಧ್ಯಾನವೆ ಅಥವಾ ನಿರಾಸಕ್ತಿಯೆ ಎಂದು ತೀರ್ಮಾನಿಸುವುದು ಕಷ್ಟ.

ಕಣ್ಣು ತೆರೆದು ಕೇಳಿಸಿಕೊಂಡ ವಿಷಯದ ಮಾತಾಡಿದರೆ ಮಾತ್ರ ವಿಷಯ ಅವರ ಮನಸಿನಾಳಕ್ಕಿಳಿದಿದೆಯೆಂದು ಅರ್ಥ. ಇಲ್ಲವೆಂದರೆ ಅವರ ಕಿವಿಗೆ ಸೇರಿದೆಯಷ್ಟೆ ಎಂದುಕೊಳ್ಳಬೇಕು. ಯಾವ ಸಂದರ್ಭಕ್ಕೂ ಮುಲಾಜಿಲ್ಲದ ಮಾತು. ತಾನು ಗೌರವಿಸುವವರ ಘನತೆಗೆ ಚ್ಯುತಿ ಬರುವುದಾದರೆ, ನಿಷ್ಠುರವಾದರೂ ಸರಿ, ಶಿಫಾರಸಿಗೆ ಮನಸ್ಸು ಕೊಡುವುದಿಲ್ಲ.

ಸಗಣಿ ಕೋಟೆಯನ್ನು ಕಟ್ಟಲಾಗುತ್ತದೆ
ಮೃತ ಸೈನಿಕರ ಶವಪೆಟ್ಟಿಗೆ ಖರೀದಿ ವಿಚಾರವಾಗಿ ಜಾರ್ಜ್‍ ಫರ್ನಾಂಡಿಸ್ ಸರ ಮೇಲೆ ಹೊರಿಸಲಾದ ಆರೋಪದ ಬಗ್ಗೆ ಕೇಳಿದಾಗ 'ಇಂತಹವರ ಸುತ್ತ - ಅದು ನಿಲ್ಲದೆಂದು ತಿಳಿದಿದ್ದರೂ- ಸಗಣಿ ಕೋಟೆಯನ್ನು ಕಟ್ಟಲಾಗುತ್ತದೆ. ಜನ ಕಣ್ಣು ಇದನ್ನು ನಿಜವಾದ ಕೋಟೆಯೆಂದು ನೋಡುತ್ತದೆ. ಅದು ಕುಸಿಯುವಾಗ್ಗೆ ಜನ ಬೇರೊಂದು 'ಇಶ್ಯು'ವಿನತ್ತ ನೋಡುತ್ತಿರುತ್ತಾರೆ' ಎಂದು ರಾಜಕೀಯ(ಪಕ್ಷ) ಪ್ರೇರಿತ ಆರೋಪಗಳ ಒಳಗನ್ನು ತೋರಿಸಿದ್ದರು.

ಕೆ.ಎಚ್.ರಂಗನಾಥ್, ನಜೀರ್ ಸಾಬ್, ಜಯಪ್ರಕಾಶ್ ನಾರಾಯಣ್ ಅಂತಹವರ ಬಗ್ಗೆ ತುಂಬ ಗೌರವವಿಟ್ಟುಕೊಂಡಿರುವರು. ಅಂಬೇಡ್ಕರ್ ಅವರನ್ನು ಜನರಿಗೆ ಸರಳವಾಗಿ ಅರ್ಥ ಮಾಡಿಸಬಲ್ಲರು.

ಕನ್ನಡ, ಇಂಗ್ಲಿಷ್, ತೆಲುಗು, ಉರ್ದುವಿನಲ್ಲಿ ನಿರರ್ಗಳವಾಗಿ, ಆಕರ್ಷಕವಾಗಿ, ಮನ ಮುಟ್ಟುವಂತೆ ಹಾಗೆಯೇ ಮನ ಕರಗುವಂತೆ ಮಾತನಾಡುವ ಪ್ರತಿಭೆ ಅವರು ಗಳಿಸಿಕೊಂಡ ವಾಕ್ ಸಂಪತ್ತು. ಈ ಭಾಷೆಗಳಲ್ಲಿ ಕಾವ್ಯಾತ್ಮಕವಾಗಿ, ಸರಳವಾಗಿ ಮಾತನಾಡಬಲ್ಲರು. ತಾವು ಕಾಂಗ್ರೆಸ್ ನಿಂದ ಟಿಕೆಟ್ಟು ವಂಚಿತರಾಗಿ, ಸೂರ್ಯನ ಗುರ್ತಿನೊಂದಗೆ ಚುನಾವಣೆಗಿಳಿದು, ಗೌನಿಪಲ್ಲಿಯ ಪ್ರಚಾರ ಸಭೆಯಲ್ಲಿ ಆಡಿದ ಮಾತುಗಳು ದಶಕಗಳು ಕಳೆದರೂ ನೆನಪಿನಲ್ಲಿವೆ.

ಅಂದು ಅವರು ತೆಲುಗಿನಲ್ಲಿ ಮಾತಾಡಿದ್ದರು. (ಅದಕ್ಕೆ ಮುಂಚೆ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದರು.) ಅದು ಕನ್ನಡದಲ್ಲಿ ಹೀಗೆ: 'ಅಮ್ಮ(ಇಂದಿರಾಗಾಂಧಿ) ಕಷ್ಟದಲ್ಲಿದ್ದಾಗ, ಕಣ್ಣಿಗೆ ಕೊಡ ಕಣ್ಣೀರು ಸುರಿಸಿದಾಗ ಇವರೆಲ್ಲಿದ್ದರು. ಚಿಕ್ಕಮಗಳೂರಲ್ಲಿ ಈ ಭುಜದ ಮೇಲೆ ಹೊತ್ತು ತಿರುಗಿದ ನನಗೆ ಟಿಕೆಟ್ಟು ತಪ್ಪಿಸಿದ್ದಾರೆ. ಇದು ನ್ಯಾಯವಾ?' ಇನ್ನೊಮ್ಮೆ, 'ನಾನು ಗ್ರಾಂಟುಗಳನ್ನು ತರಬಲ್ಲೆ. ಆದರೆ ನನ್ನ ಕೈಗಳು ಬೆಂಗಳೂರಿನಿಂದ ಶ್ರೀನಿವಾಸಪುರದವರೆಗೆ ಚಾಚುವಷ್ಟು ಉದ್ದವಿಲ್ಲ. ನಡುವೆ ಸೋರಿಸುವಂಥ ಎಷ್ಟೋ ಕೈಗಳು. ಅವುಗಳಿಗೆ ನೀವು ಕಾವಲುದಾರರಾಗಬೇಕು.'

ನೆನಪಿನ ಶಕ್ತಿ ಅಗಾಧವಾದುದು
'ಅಧಿಕಾರಿಗಳ ಸಭೆಯೊಂದರಲ್ಲಿ, 'ತಿನ್ನುವುದನ್ನೇ ಅಭ್ಯಾಸ ಮಾಡಿಕೊಂಡ ಬಾಯಿ ತಿನ್ನುತ್ತಿರುವುದೇನೆಂದು ನೋಡದೆ ... ತಿನ್ನುತ್ತದೆ. ಅದನ್ನು ನಿಮ್ಮ ಮನೆಯವರಿಗೂ ತಿನ್ನಿಸಬೇಡಿ.' ನಾನು ಅವರೂ ಭಾಗವಹಿಸಿದ್ದ ಸಭೆಯೊಂದರಲ್ಲಿ ನಾನು, 'ಜನ ಹೆಂಡಿರು ಮಕ್ಕಳನ್ನು ಕಟ್ಟಿಕೊಂಡು ದಣಿದ ಕಾಲೆಳೆಯುತ್ತ ವಲಸೆ ಹೋಗುವ ಕನಸು ಕಂಡೆ' ಎಂದು ಹೇಳಿದೆ.

ಆಗ ಅವರು, 'ಹಾಗೆ ಹೋದ ಜನ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಹಿಂದಿರುಗುತ್ತಿರುವ ದೃಶ್ಯ ನನ್ನ ಕಣ್ಣಿನಲ್ಲಿದೆ' ಎಂದರು. ಇದು ಅವರ ಮಾತಿನ ಶೈಲಿಗೆ ಸ್ಯಾಂಪಲ್ಲುಗಳು.

ರಮೇಶ್ ಕುಮಾರರ ನೆನಪಿನ ಶಕ್ತಿ ಅಗಾಧ. ಹಳ್ಳಿಗಳಿಗೆ ಹೋದಾಗ ಕನಿಷ್ಠ ಕೂಲಿಕಾರರನ್ನು ನೋಡಿದ ಕೂಡಲೆ ಅವರ ಹೆಸರು ಹಿಡಿದು ಹತ್ತಿರ ಕರೆದು, ಹೆಗಲಿನ ಮೇಲೆ ಕೈ ಹಾಕಿ, ಅವರ ತಲೆಮಾರಿನ ಪ್ರವರವನ್ನು ಹೇಳಿ, ರೋಮಾಂಚನದಲ್ಲಿ ಮುಳುಗಿಸುತ್ತಾರೆ. ಹೆಂಗಸರನ್ನು 'ಬಿಡ್ಡ'(ಮಗಳೇ) ಎಂದು ಬೆನ್ನು ತಟ್ಟಿ, ತಲೆ ಸವರಿ ಅವರು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಾರೆ.

'ನಮ್ಮ ಮನೆ ಮಗಳಪ್ಪ. ಆಕೆಯ ಕೆಲಸ ಏನಿದೆಯೋ ನೋಡಿ' ಎಂದು ಅಧಿಕಾರಿಗಳಿಗೆ ಹೇಳುತ್ತಾರೆ. ಇದೇ ಅವರು ಜನ ಮನ ಗೆಲ್ಲುವ ಗುಟ್ಟು. ಸೋತಾಗಲೂ ಗೆದ್ದಾಗಲೂ ಇವರ ಓಟು 'ಸ್ವಾಮಿಕೇ'. 'ಸ್ವಾಮಿ ಗೆಲಿಸಿನಾ ಪುಲೇ, ಸೋಲಿನಾ ಪುಲೇ'(ಸ್ವಾಮಿ ಗೆದ್ದರೂ ಹುಲಿಯೇ, ಸೋತರೂ ಹುಲಿಯೇ) ಎಂದು ಅವರ ಅಭಿಮಾನಿ ಜನ ಹೇಳಿಕೊಳ್ಳುವ ಪ್ರೀತಿಯಿಂದಾಗಿ, ರಮೇಶ್ ಕುಮಾರ್ ಸಾರ್ವಜನಿಕವಾಗಿ ಹೇಳುತ್ತಾರೆ, 'ನನ್ನ ಬೆನ್ನಿಗಿರುವುದು ಬಡವರು. ಅವರ ಋಣ ನನ್ನ ಮೇಲಿದೆ. ಅದನ್ನು ತೀರಿಸಿಯೇ ನಾನು ಸಾಯುವುದು.'

ಅವರು ಮೊದಲ ಸಲ ಸ್ಪೀಕರ್ ಆಗಿದ್ದಾಗ ಅಧಿವೇಶನ ನೋಡಿ ಬಂದ ಜನ ವರ್ಣಿಸಿದ್ದು ಹೀಗೆ: 'ಅದಿ ಇಂದ್ರ ಸಭಾಲಾಗುಂಡೆ. ಸ್ವಾಮಿ ಇಂದ್ರುಡಿಲಾ ಕನಬಡುತುಂಡೆ' (ಅದು ಇಂದ್ರಸಭೆಯಂತಿತ್ತು. ಸ್ವಾಮಿ ಇಂದ್ರನಂತೆ ಕಾಣುತ್ತಿದ್ದರು).

ರಾಜಕೀಯದಿಂದಾಗಿ ಮಡದಿಯನ್ನು ಒಂಟಿಯಾಗಿಸಿದ ಕೊರಗು
ರಮೇಶ್ ಕುಮಾರ್, ರಾಜಕೀಯದ ಉತ್ತಮ ರಾಜಕಾರಣಿಗಳ, ರಾಜಕೀಯ ಘಟನೆಗಳ, ದೇಶದ ಚರಿತ್ರೆಯ ಬಗ್ಗೆ ಪುಸ್ತಗಳನ್ನು ನೋಡಿಕೊಂಡು ಹೇಳುತ್ತಿರುವಂತೆ ಮೌಖಿಕವಾಗಿ ಹೇಳುವುದನ್ನು ಕೇಳಿದಾಗ ಮೂಗಿನ ಮೇಲೆ ಬೆರಳು ಹೋಗುತ್ತದೆ. ಒಳ್ಳೆಯ ಪುಸ್ತಕ ಪ್ರೇಮಿ. ಉತ್ತಮ ಪುಸ್ತಕಗಳ ಸಂಗ್ರಹ ಅವರಲ್ಲಿದೆ. ಹಾಗೆಯೇ ಹಳೆಯ ಚಿತ್ರಗೀತೆಗಳ ಪ್ರಿಯರು. ಇಂದಿನ ಒಳ್ಳೆಯ ಹಾಡು, ಸಾಹಿತ್ಯವನ್ನು ಗುರುತಿಸಿ ಮಾತನಾಡುತ್ತಾರೆ. ಗುನುಗುತ್ತಾರೆ. ಹೊರಗಿನ ಟೀಕೆಗಳೇನೇ ಇರಲಿ, ಅವರ ನೆರವು ಪಡೆದವರಲ್ಲಿ ವಿರೋಧಿ ಪಕ್ಷಗಳವರಿಗೆ ಕೊರತೆಯಿಲ್ಲ. ಇಂತಹ ಸಂದರ್ಭಗಳಲ್ಲಿ ಅನುಯಾಯಿಗಳ ಟೀಕೆಗಳನ್ನು ನುಂಗಿಕೊಂಡಿದ್ದನ್ನು ನಾನು ಬಲ್ಲೆ.

ಒಳ್ಳೆಯ ಸಂಸಾರಿತನವನ್ನು ರೂಢಿಸಿಕೊಂಡಿರುವ ರಮೇಶ್‍ ಕುಮಾರರಲ್ಲಿ ರಾಜಕೀಯದಿಂದಾಗಿ ಮಡದಿಯನ್ನು ಒಂಟಿಯಾಗಿಸಿದೆ ಎಂಬ ಕೊರಗೂ ಇದೆ. ಆ ಬಗ್ಗೆ ಅಸಹಾಯಕತೆ ಅವರನ್ನು ಕಾಡುತ್ತಿರುತ್ತದೆ. ಕೆಲವೊಮ್ಮೆ ತಮ್ಮ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಡಲಾಗದೆ ಆಪ್ತರನ್ನು ದೂರ ಮಾಡಿಕೊಂಡ ನಿದರ್ಶನಗಳೂ ಇಲ್ಲದಿಲ್ಲ. ಸರಸ ವಿರಸಗಳಲ್ಲಿ ಥೇಟ್ ಹಳ್ಳಿಗ.

ರಮೇಶ್ ಕುಮಾರರ ಕುರಿತಾದ ಒಡಕು ಮಾತುಗಳೇನೆ ಇರಲಿ, ಅವರು ಆಂತರ್ಯದಲ್ಲಿ ವಿಷಾದ ಜೀವಿ. ರಾಜಕೀಯವಾಗಿ ಸಂಪೂರ್ಣ ಜನಮುಖಿಯಾಗಲು ಇರುವ ರಾಜಕೀಯ ಅಡೆತಡೆಗಳನ್ನು ಮುರಿಯಲಾಗುತ್ತಿಲ್ಲವಲ್ಲ ಎಂಬ ಕೊರಗು ಅವರಲ್ಲಿದೆ. ಇದರಿಂದಾಗಿ ಅವರು ಸಿಡುಕನ್ನು ಅಭಿವ್ಯಕ್ತಿಸುತ್ತಾರೆ. ಸುಖದ ಹೊಳೆ ಹರಿಸಲಾಗದಿದ್ದರೂ ಅದರ ಜಿನುಗನ್ನಾದರೂ ಉಳಿಸಬೇಕೆಂಬ ಆಶಯ ಅವರಲ್ಲಿರುವುದನ್ನು ಕಂಡಿದ್ದೇನೆ. 'ಬಡವರ ಕನಸು ಕೂಡ ದೋಚಿಕೊಳ್ಳುವ ದೋರಗಳೇತಕೆ?' ಎಂಬ ಪ್ರಶ್ನೆಯೂ ಅವರ ಎದೆಯಾಳದಲ್ಲಿದೆ.

English summary
Heart touching pen picture of speaker KR Ramesh Kumar. He is also MLA from Srinivasapura assembly constituency. Oneindia columnist Sa Raghunatha remembers many moments spent with Ramesh Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X