ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಅರೆ ಹಳಸಿದ್ದರೂ ಇಬ್ಬರಜ್ಜಿಯರ ಕೈತುತ್ತು ಅಮೃತವಾಗಿರುತ್ತಿತ್ತು

By ಸ. ರಘುನಾಥ
|
Google Oneindia Kannada News

ದೇವುಲಪಲ್ಲಿ ಕಕ್ಕಮ್ಮನವರು ಬೆಳಿಗ್ಗೆ ಎದ್ದು ಅವರಿವರ ಮನೆಗಳಲ್ಲಿ ಚಾಕರಿ ಮಾಡಿ, ಅವರು ಕೊಟ್ಟ ತಂಗಳು ಮುದ್ದೆಗಳನ್ನು ಕೇರಿಯ ಮಕ್ಕಳಿಗೆಗೆ ಕೊಟ್ಟು ಹಸಿವೆ ಕಳೆಯುತ್ತಿದ್ದುದನ್ನು ಕಂಡು ಬಂದು ಲೇಖನ ಬರೆದ ಮೇಲೆ ನನ್ನ ಜೀವನದಲ್ಲಿಯೂ ಅಂಥ ಅಜ್ಜಿಯರಿಬ್ಬರು ಇದ್ದುದು ನೆನಪಾಗಿ, ಬರೆಯಬೇಕೆಂದುಕೊಂಡರೂ ಆಗಿರಲಿಲ್ಲ. ಇತ್ತೀಚೆಗೆ ಗೆಳೆಯರೊಬ್ಬರು ಆ ಕಕ್ಕಮ್ಮನವರನ್ನು ಕಂಡಿದ್ದೀಯಾ ಎಂದು ಕೇಳಿದಾಗ ನನಗೆ ಸುಬ್ಬಮ್ಮಜ್ಜಿ ಹಾಗೂ ವೆಂಕಮ್ಮಜ್ಜಿಯ ನೆನಪು ಮರುಕಳಿಸಿತು. ಇಂತಹ ಅಜ್ಜಿಯರು ಎಷ್ಟು ಮಂದಿಯೋ!

ಸುಬ್ಬಮ್ಮಜ್ಜಿಯದು ಬಾಲ್ಯ ವಿವಾಹ. ಹದಿಮೂರನೆಯ ವಯಸ್ಸಿನಲ್ಲಿ ಸಿಡುಬಿನಿಂದ ಅಂಧರಾಗಿದ್ದರು. ಅದೇ ವರ್ಷ ಪ್ಲೇಗಿನಿಂದಾಗಿ ವಿಧವೆಯಾದವರು. ಈಕೆ ಸುಂದರಪ್ಪನೆಂಬ ನನ್ನ ಬಾಲ್ಯಮಿತ್ರನ ಅಜ್ಜಿ. ವಾಸವಿದ್ದುದು ಒಂದು ಗುಡಿಸಲಿನಲ್ಲಿ. ಅವನ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ನನಗೆ ಅರೆಹೊಟ್ಟೆಗಾದರೂ ಅನ್ನವಿರುತ್ತಿತ್ತು. ಅವರಿವರ ನೆರವೇ ಆಕೆಯ ಜೀವನಾಧಾರ. ಮಿತವಾಗಿ ಬಳಸುತ್ತ ಬದುಕು ಸಾಗಿಸುತ್ತಿದ್ದರು.

ಕುರುಡಿಯಾದರೂ ಸೌದೆ ಒಲೆಯ ಮೇಲೆ ಅವರೇ ಅಡುಗೆ ಮಾಡುತ್ತಿದ್ದರು. ಹಗಲು ಮಾಡಿದ ಅಡುಗೆಯೇ ರಾತ್ರಿಗೂ. ಬೆಳಿಗ್ಗೆ ಶಾಲೆಗೆ ಹೋಗುವ ಮೊದಲು ಸುಂದರಪ್ಪ ನೀರು ತಂದು ಕೊಡುತ್ತಿದ್ದ. ಆ ವೇಳೆಗೆ ನಾನು ಸುಬ್ಬಮ್ಮಜ್ಜಿಯ ಮನೆಯಲ್ಲಿರುತ್ತಿದ್ದೆ. ಅಜ್ಜಿ ಅವನಿಗೆ ಕೈತುತ್ತು ಹಾಕುತ್ತ ನೀನೂ ಹಿಡಿ ಅನ್ನುತ್ತಿದ್ದರು. ನನಗೆ ಈ ಹೊತ್ತು ಬೇಡ ಅನ್ನುತ್ತಿದ್ದೆ. ಏಕೆಂದರೆ ನನಗೆ ಹಾಕಿಸಿಕೊಂಡರೆ ಅವನ ಅರೆಹೊಟ್ಟೆಯೂ ತುಂಬುತ್ತಿರಲಿಲ್ಲ.

Sa Raghunatha Column: Grand-mothers Delicious Cooking

ರಜೆಯ ದಿನಗಳಲ್ಲಿ ನಾವಿಬ್ಬರೂ ಮುಂಜಾನೆಯೇ ಸೌದೆಗೆ ಹೋಗುತ್ತಿದ್ದೆವು. ಮೊದಲು ತಂದುದನ್ನು ಸುಬ್ಬಮ್ಮಜ್ಜಿ ಮನೆಯ ಮುಂದೆ ಹಾಕಿ, ಅಜ್ಜಿ ಹಾಕಿದ ಕೈತುತ್ತು ತಿಂದು ನಮ್ಮ ಮನೆಗಳಿಗಾಗಿ ಮತ್ತೆ ಸೌದೆ ತರಲು ಹೋಗುತ್ತಿದ್ದೆವು. ಕಳೆದ ದಿನ ಮಾಡಿದ ಅಡುಗೆ ಅರೆ ಹಳಸಿರುತ್ತಿತ್ತು. ಅದರ ವಾಸನೆ ನಮ್ಮಿಬ್ಬರಿಗೂ ಪ್ರಿಯವಾದುದು. ಸೊಪ್ಪಿನ ಸಾರೊ, ಕಾಳು ಹುಳಿಯೊ ನವಿರು ಹಳಸಲು ವಾಸನೆ ಹಿಡಿದು ಬಹಳ ರುಚಿಯಾಗಿರುತ್ತಿತ್ತು.

ಅವರೆಕಾಯಿ ಕಾಲದಲ್ಲಿ ಹಸಿಯವರೆ ಹುಳಿ, ಹಿದುಕಿದ ಬೇಳೆ ಸಾರು ಹೀಗೆ ಹಳಸಿದ್ದರೆ ಅದರ ರುಚಿಯೇ ಬೇರೆ. ಅನ್ನಕ್ಕಿಂತ ಮುದ್ದೆಗೆ ಈ ರುಚಿ ಹೆಚ್ಚು. ನಾವಿಬ್ಬರು ಈ ರುಚಿಗೆ ಎಷ್ಟು ಒಗ್ಗಿಹೋಗಿದ್ದೇವೆಂದರೆ, ಹಳಸದಿದ್ದ ದಿನ ನಮಗೆ ಕೈತುತ್ತು ಅಷ್ಟೇನು ರುಚಿ ಅನ್ನಿಸುತ್ತಿರಲಿಲ್ಲ. ಮೊದಲೇ ಅಡುಗೆಯನ್ನು ರುಚಿಕಟ್ಟಾಗಿ ಮಾಡುತ್ತಿದ್ದರು ಸುಬ್ಬಮ್ಮಜ್ಜಿ. ಆ ರುಚಿಗೆ ನವಿರಾಗಿ ಹಳಸಿದ ರುಚಿ ಸೇರಿ ಮಹದಾದ್ಭುತವಾಗಿರುತ್ತಿತ್ತು.

ಸುಬ್ಬಮ್ಮಜ್ಜಿ ಅವರೆಕಾಳು ಹುಳಿಗೆ, ಬರಿಬೇಳೆ ಸಾರಿಗೆ ಇಂಗು, ಕಾಯಿತುರಿ ಬಳಸದಿದ್ದರೂ ರುಚಿ ಕೆಡುತ್ತಿರಲಿಲ್ಲ. ನನ್ನ ಅಜ್ಜಿ ಹೀಗೆಯೇ ಅಡುಗೆ ಮಾಡುತ್ತಿದ್ದಳು. ನನ್ನೊಂದಿಗೆ ಸುಂದರಪ್ಪನಿಗೂ ತಂಗಳನ್ನು ಕೈತುತ್ತು ಹಾಕುತ್ತಿದ್ದಳು. ಈ ಇಬ್ಬರ ಕೈ ಅಡುಗೆಯ ನಂತರ ನಾನು ಇದೇ ರುಚಿಯ ಹುಳಿ- ಸಾರು ತಿಂದಿದ್ದು, ನನ್ನ ಸೋದರತ್ತೆಯ ಮನೆಯಲ್ಲಿದ್ದ ಒಂದು ವರ್ಷದಲ್ಲಿ. ಆಕೆಯ ಸೊಸೆ ಸುಮಿತ್ರ ಕೈ ಅಡುಗೆಯ ರುಚಿಯೂ ಹೀಗೆಯೇ ಇರುತ್ತಿತ್ತು. ಹಳಸಿರದಿದ್ದುದು ವ್ಯತ್ಯಾಸವಷ್ಟೆ.

ನನ್ನ ಅಜ್ಜಿ ಮತ್ತು ಸುಬ್ಬಮ್ಮಜ್ಜಿ ಹಾಕುತ್ತಿದ್ದ ಮಾವಿನ ಉಪ್ಪಿನಕಾಯಿ ಇನ್ನೊಂದು ಮಾವಿನ ಋತುವಿನ ನಂತರವೂ ಇರುತ್ತಿತ್ತು. ಅದು ಕಪ್ಪಗಾಗಿ ಸಿಪ್ಪೆಯೂ ಕರಗಿ ಮಂದಗೊಜ್ಜಿನಂತಾಗಿರುತ್ತಿತ್ತು. ಅದಕ್ಕೆ ಇಂಗಿನ ಒಗ್ಗರಣೆ ಬೇರೆ. ಅದರಲ್ಲಿ ತಂಗಳು ಮುದ್ದೆ ಅನ್ನ ತಿನ್ನುವುದರ ರುಚಿಯನ್ನು ನಾನು ಇಂದೂ ಬಣ್ಣಿಸಲಾರೆ.

ಸುಬ್ಬಮ್ಮಜ್ಜಿ, ನನ್ನ ಅಜ್ಜಿ ತೀರಿಕೊಂಡು ದಶಕಗಳೇ ಕಳೆದಿವೆ. ಆದರೆ ಅವರ ನೆನಪಿನೊಂದಿಗೆ ಆ ಅಡುಗೆ, ಅರೆಹಳಸಲು ರುಚಿ ಮನದ ಪರಿಮಳವಾಗಿ ಉಳಿದಿದೆ.

English summary
Sa Raghunatha Column: Grand-mother's Delicious Cooking in Childhood days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X