ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ಮಕ್ಕಳಿಗೆ ಸಂಸ್ಕಾರ, ಆತ್ಮಾಭಿಮಾನವನ್ನು ಆಸ್ತಿಯಾಗಿ ಕೊಟ್ಟ ಗಾಂಧಿ ಅನುಯಾಯಿ

By ಸ. ರಘುನಾಥ
|
Google Oneindia Kannada News

ಗೌನಿಪಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಆಪ್ತಮಿತ್ರ ಚೌಡರೆಡ್ಡಿ, 'ರಾವಯ್ಯ ಐವಾರ ರಾಯಲಪಾಡುಕಿ ಪೊಯ್ಯಿ ವದ್ದಾಮು' (ಬಾರಯ್ಯ ಮೇಷ್ಟ್ರೆ ರಾಯಲಪಾಡಿಗೆ ಹೋಗಿ ಬರೋಣ) ಅಂದಾಗ, ಶಾಲೆಯ ಕೆಲಸವಿದೆ ಅಂದೆ. ಮಕ್ಕಳು, ಪ್ರಾಣಿಗಗಳನ್ನು ಒಂದು ದಿನಕ್ಕಾದರೂ ಮರೆತು ಹೊರಡು ಅಂದರು. ಏನು ವಿಶೇಷವೆಂದೆ.

ಇಬ್ಬರಿಗೂ ಆಪ್ತರಾದ, ತೊಗಲುಗೊಂಬೆ ಕಲಾವಿದ ಖಂಡೆ ಕುಳ್ಳಾಯಪ್ಪನ ಸ್ನೇಹಕ್ಕೆ ಕಾರಣನಾಗಿದ್ದ ಹಿರಿಯ ಪಶುಪರೀಕ್ಷಕ ಪುಟ್ಟಚೌಡಯ್ಯ, 'ಪದವಯ್ಯಾ ಕಥಲು ಚಾಲುಗಾನಿ' (ನಡೆಯಯ್ಯಾ ಕಥೆಗಳು ಸಾಕು) ಎಂದು ಚೌಡರೆಡ್ಡಿಯವರಿಗೆ ತಾಳ ಹಾಕಿದ. ಯಾವುದಾದರೂ ಪ್ರಮುಖವಾದುದಿದ್ದರೆ ಆ ಇಬ್ಬರು ಮಾತಾಡಿಕೊಂಡು ಗುಟ್ಟುಮಾಡಿ ಕರೆದೊಯ್ಯುತ್ತಿದ್ದರು. ಗುಟ್ಟು ಒಡೆಯುತ್ತಿದ್ದು ಘಟನೆಯೊಂದಿಗೆ.
ಅವರು ರಾಯಲಪಾಡಿನಲ್ಲಿ ಒಂದು ಮನೆಗೆ ಕರೆದುಕೊಂಡು ಹೋದರು. 'ಒಹೋಹೊ, ಮನ ಡಾಕ್ಟರ್ಲು! ರಾವಾಲಿ, ರಾವಾಲಿ' (ಒಹೊಹೊ, ನಮ್ಮ ಡಾಕ್ಟರರು! ಬರಬೇಕು ಬರಬೇಕು) ಎಂದು ವಯಸ್ಸಾದರೂ ಮುಖದಲ್ಲಿ ಉತ್ಸಾಹದ ಕಳೆ ಹೊಳೆಯುತ್ತಿದ್ದ ಹಿರಿಯರೊಬ್ಬರು ಬರಮಾಡಿಕೊಂಡರು. ಚೌಡರೆಡ್ಡಿಗೆ ನನ್ನನ್ನು ಪರಿಚಯಿಸಿದರು.

 ಬೇತಾಳನಂತೆ ನಿಮಗೆ ಹಿಡಿಯುತ್ತಾನೆ ಇರಿ

ಬೇತಾಳನಂತೆ ನಿಮಗೆ ಹಿಡಿಯುತ್ತಾನೆ ಇರಿ

ಇಂಥ ಸಮಯದಲ್ಲಿ ಪುಟ್ಟಚೌಡಯ್ಯ, 'ಪರಿಚಯ ಆಯ್ತಲ್ಲ, ಇನ್ನು ಬೇತಾಳನಂತೆ ನಿಮಗೆ ಹಿಡಿಯುತ್ತಾನೆ ಇರಿ' ಎಂದು ಹಾಸ್ಯದ ಮಾತಾಡಿದ. ಇಂಥವರೆಂದರೆ ನನಗೆ ಇಷ್ಟ ಅಂದರವರು. ಗೋಡೆಯಲ್ಲಿ ಗಾಂಧೀಜಿ ಸಹಿತ ಅನೇಕ ಫೋಟೋಗಳು ಇದ್ದವು. ತಲೆಯಲ್ಲಿ ಬಿಳಿಟೋಪಿಯಿದ್ದ, ಸರಳ ಉಡುಪಿನ ಯುವಕ ನಮ್ಮ ದೇಶದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರಿಗೆ ಹೂಮಾಲೆ ಹಾಕುತ್ತಿದ್ದ. ಈ ಹಿರಿಯರ ಮುಖಚಹರೆಯೊಂದಿಗೆ ಆ ಯುವಕನ ಮುಖ ಹೋಲುತ್ತಿತ್ತು. ಯಜಮಾನರೇ ಇವರು ಅಂದೆ. ನಾನೇ ಅಂದರು. ನಾನು ಊಹಿಸುತ್ತಿದ್ದುದು ನಿಜವಾಗಿತ್ತು. ಹೆಸರನ್ನಷ್ಟೆ ಕೇಳಿದ್ದ, ಭೇಟಿ ಬಯಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಪಿ. ರಾಮಪ್ಪ ನಾಯ್ಡು.!

ಚಿಂತಾಮಣಿ ಬಳಿಯ ಬೂರಗಮಾಕಲಹಳ್ಳಿ ಆಂಜನೇಸ್ವಾಮಿ ಗುಡಿಯಲ್ಲಿ ಅವರನ್ನು ಕಂಡಿದ್ದೆ. ಅಲ್ಲಿ ಅವರು ಕೈಂಕರ್ಯ ನಡೆಸುತ್ತಿದ್ದರು. ಮಕ್ಕಳ ಒತ್ತಾಯಕ್ಕೆ ಮಣಿದು ಮನೆಗೆ ಬಂದಿದ್ದರು. ದೇವಾಲಯಗಳಿಗೆ ಹೋಗಿ ಪುರಂದರ, ಕನಕ, ಭದ್ರಾಚಲ ರಾಮದಾಸು, ತ್ಯಾಗರಾಜರ ಕೀರ್ತನೆಗಳನ್ನು ಹಾಡುತ್ತಿದ್ದರು. ಇವರ ಕೀರ್ತನಾ ಸೇವೆ ಆಂಧ್ರದಲ್ಲಿಯೂ ನಡೆಯುತ್ತಿತ್ತು. ಇವರಿಗೂ ತೆಲುಗು ತಾಯಿಭಾಷೆ, ಕನ್ನಡ ಹೃದಯ ಭಾಷೆಯಾಗಿತ್ತು. ಶಾಲೆಗಳಿಗೆ ಹೋಗಿ, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕಥೆಗಳಾಗಿ ಹೇಳುತ್ತಿದ್ದರು.
 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು

1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು

ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ, 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ರಾಯಲಪಾಡು ಪೊಲೀಸ್ ಠಾಣೆಗೆ ದಾಳಿಯಿಟ್ಟು ಬಡಿಸಿಕೊಂಡಿದ್ದರು. ಈ ಸಮಯದಲ್ಲಿ ತಾಯಿ ಅಚ್ಚಮ್ಮ, ತಂದೆ ರಾಮಪ್ಪನವರು ಸುಬ್ಬಮ್ಮ ಎಂಬ ಹುಡಿಗಿಯೊಂದಿಗೆ ಮದುವೆ ನಿಶ್ಚಯಿಸಿದ್ದರು. ಕಲ್ಯಾಣ ಮಂಟಪಕ್ಕೆ ಹೋಗಬೇಕಿದ್ದ ರಾಮಪ್ಪ ನಾಯ್ಡು ಹೋಗಿದ್ದು ಜೈಲಿಗೆ. ಸುಬ್ಬಮ್ಮ ಇವರ ಬಿಡುಗಡೆಯವರೆಗೆ ಕಾದಿದ್ದು ಕೈಹಿಡಿದರು. ಮಡದಿಯನ್ನು ಮನೆಯಲ್ಲಿ ಬಿಟ್ಟು, ರಾತ್ರಿ ವೇಳೆ ಹಳ್ಳಿಗಳಿಗೆ ಹೋಗಿ, ದೇಶದ ಸ್ವಾತಂತ್ರ್ಯದ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದರು. ಇದಕ್ಕೂ ಸುಬ್ಬಮ್ಮನವರ ಸಮ್ಮತಿ ಸಿಕ್ಕಿತ್ತು.

ಪಿತ್ರಾರ್ಜಿತ ತುಂಡು ಭೂಮಿ, ಪುಟ್ಟ ಮನೆ ಇವರ ಚರಾಸ್ತಿ. ಸ್ವಾತಂತ್ರ್ಯ ಹೋರಾಟಗಾರಿಗೆ ಕೊಡುತ್ತಿದ್ದ ಪಿಂಚಣಿ ಸರಳ ಬದುಕಿಗಾದರೆ, ಸರಕಾರ ಕೊಟ್ಟಿದ್ದ ಬಸ್‌ ಪಾಸು ಸಂಚಾರಕ್ಕೆ. ಇಷ್ಟಕ್ಕೇ ತೃಪ್ತ ಜೀವನ. ಯಾರಾದರೂ ಕಾರ್ಯಕ್ರಮಕ್ಕೆ ಕರೆದು, ವಾಹನ ವ್ಯವಸ್ಥೆ ಮಾಡುವುದಾಗಿ ಹೇಳಿದರೆ, ಸರಕಾರಿ ಬಸ್ಸಿದೆ, ಪಾಸಿದೆ ಅನ್ನುತ್ತಿದ್ದರು. 2013ರಲ್ಲಿ ನಡೆದ ಶ್ರೀನಿವಾಸಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗಲೂ ಹೀಗೆಯೇ ಹೇಳಿದ್ದರು. ಆಗ ಅವರ ವಯಸ್ಸು ಎಂಬತ್ತೇಳು ವರ್ಷಗಳು.

 ನಮ್ಮ ಜೀವನದ ಬಹುದೊಡ್ಡ ಆಸ್ತಿ

ನಮ್ಮ ಜೀವನದ ಬಹುದೊಡ್ಡ ಆಸ್ತಿ

ಹಣ್ಣುಮುದಿ ವಯಸ್ಸಿನಲ್ಲಿಯೂ ಮನೆಯಿಂದ ಹೊರಗೆ ಮೈಲುಗಟ್ಟಲೆ ತಿರುಗಾಡುತ್ತಾರೆಂಬುದು ಮನೆಯವರ ಆತಂಕ, ಆಕ್ಷೇಪ. ಆದರೆ ಕಿವಿಗೊಡುವ ಜೀವವಲ್ಲ ರಾಮಪ್ಪ ನಾಯ್ಡು ಅವರದು.

ಇವರ ಇಬ್ಬರು ಗಂಡುಮಕ್ಕಳಲ್ಲಿ ಹಿರಿಯ ಪುತ್ರ ಪಿ.ಆರ್. ರಾಮದಾಸ ನಾಯ್ಡು, ಕನ್ನಡ ಚಿಲನಚಿತ್ರ ರಂಗದಲ್ಲಿ ಪ್ರತಿಭಾವಂತ ನಿರ್ದೇಶಕ, ನಿರ್ಮಾಪಕ, ಸಾಹಿತಿ ಹಾಗು ವಿಶ್ವ ಸಿನಿಮಾದ ಇತಿಹಾಸಕಾರ. ಕಿರಿಯ ಮಗ ವಿಶ್ವನಾಥ ನಾಯ್ಡು ಶಾಲಾ ಅಧ್ಯಾಪಕ. ಮೂರು ಮಂದಿ ಹೆಣ್ಣುಮಕ್ಕಳು ಗೃಹಿಣಿಯರು. 'ನಮ್ಮ ಅಪ್ಪ ಬಯಸಿದ್ದರೆ, ಏನೇನೋ ಮಾಡಿಕೊಳ್ಳಬಹುದಿತ್ತು. ಅದಾವುವೂ ಅವರಿಗೆ ಬೇಕಿರಲಿಲ್ಲ. ಅವರು ಮಕ್ಕಳಿಗೆ ಕೊಟ್ಟ ಬಹುದೊಡ್ಡ ಆಸ್ತಿಯೆಂದರೆ ಸಂಸ್ಕಾರ ಮತ್ತು ಆತ್ಮಗೌರವ. ಇದು ನಮ್ಮ ಜೀವನದ ಬಹುದೊಡ್ಡ ಆಸ್ತಿ,' ಎಂದು ರಾಮದಾಸ ನಾಯ್ಡು ಹೇಳುತ್ತಲೇ ಇರುತ್ತಾರೆ.

 ವೈಷ್ಣವ ಜನತೋ ಪ್ರಾರ್ಥನಾ ಗೀತೆ ಇವರಿಗೂ ಪ್ರಿಯವಾಗಿತ್ತು

ವೈಷ್ಣವ ಜನತೋ ಪ್ರಾರ್ಥನಾ ಗೀತೆ ಇವರಿಗೂ ಪ್ರಿಯವಾಗಿತ್ತು

ರಾಮಪ್ಪ ನಾಯ್ಡುರಿಗೆ ಯಾರನ್ನಾದರೂ ನೋಡಬೇಕೆನಿಸಿದರೆ ಮನೆಯಿಂದ ಹೊರಟರೆಂದೇ ಲೆಕ್ಕ. ಬಿಸಿಲಿರಲಿ, ಮಳೆಗಾಲಿಯಿರಲಿ, ಎಷ್ಟೇ ದೂರವಾಗಲಿ ಬಸ್ಸು ಹೋಗುವವರೆಗೆ ಬಸ್ಸು. ಉಳಿದಂತೆ ಕಾಲ್ನಡಿಗೆ. ಹೆಗಲಲ್ಲಿ ಚೀಲ, ಕೈಯ್ಯಲ್ಲಿ ಊರುಗೋಲು. ಪ್ರೀತಿ, ಸ್ನೇಹ, ಸಮಾನತೆ, ಸಹಿಷ್ಣುಭಾವವೆಂದೇ ಬದುಕಿದ ಇವರು, ಇಹ ತ್ಯಜಿಸಿದಾಗ (29.08.2021ರಂದು, ಮಧ್ಯಾಹ್ನ 01.45) ತೊಂಬತ್ತೈದು ವರ್ಷಗಳು ತುಂಬಿದ್ದವು. ಮೂತ್ರಕೋಶದ ಸೋಂಕು ಜವರಾಯನನ್ನು ಆಹ್ವಾನಿಸಿತ್ತು.

ಗಾಂಜಿಯವರಿಗೆ ಪ್ರಿಯವಾಗಿದ್ದ 'ವೈಷ್ಣವ ಜನತೋ' ಪ್ರಾರ್ಥನಾ ಗೀತೆ ಇವರಿಗೂ ಪ್ರಿಯವಾಗಿತ್ತು. ಕಾರ್ಯಕ್ರಮಗಳಲ್ಲಿ ತಮ್ಮ ಮಾತನ್ನು ಆರಂಭಿಸುತ್ತಿದ್ದುದು ಈ ಪ್ರಾರ್ಥನೆಯ ಮೂಲಕ. ನಂತರದ್ದು 'ವಂದೇ ಮಾತರಂ' ಗೀತೆ. ಕನಕದಾಸರ 'ಮಾನವ ಜನ್ಮ ದೊಡ್ಡದು' ಪದ ಹಾಡದೆ ಮಾತು ಮುಗಿಸುತ್ತಿದ್ದು ವಿರಳ. 'ಈಸಬೇಕು ಇದ್ದು ಜಯಿಸಬೇಕು' ಎಂಬುದು ಅವರ ಜೀವನ ಮಂತ್ರವಾಗಿತ್ತು. ಕಿರಿಯರಿರಲಿ, ಹಿರಿಯರಿರಲಿ 'ಎಂದರೋ ಮಹಾನುಭಾವುಲು' ಎಂಬ ವಿನಯದಲ್ಲಿ ಹೆಗಲ ಮೇಲೆ ಕೈಹಾಕಿಮಾತನಾಡಿಸುತ್ತಿದ್ದರು. ಬಡತನ, ಸಿರಿತನ ಹರಿಯ ಪ್ರಸಾದವೆಂದು ಪ್ರತಿಸಲದ ಭೇಟಿಯಲ್ಲೂ ಹೇಳದೆ ಬೀಳ್ಕೊಡುತ್ತಿದ್ದುದಿಲ್ಲ.

English summary
Sa. Raghunath Column: Gandhi Follower P Ramappa Naidu given self-respect and self esteem as a property to his Children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X