ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೂರಿನ ಇಟ್ಟುಮುನಿಗ, ಮುದ್ದಿಗಳ ಸೊಣ್ಣಪ್ಪರ ಊಟದ ಸಾಹಸಗಳು

By ಸ ರಘುನಾಥ, ಕೋಲಾರ
|
Google Oneindia Kannada News

ಊಟ ಎಂದ ಕೂಡಲೆ ಅನೇಕ ಅಡುಗೆಗಳು, ಅವನ್ನು ಉಣ್ಣುವವರ ರೀತಿ, ರಿವಾಜುಗಳೂ 'ಭರ್ಜರಿ' ಊಟ ಮಾಡುವವರು ನೆನಪಾಗುತ್ತಾರೆ. ಹಾಗೆಯೇ ಆ ಕುರಿತ ನಾಟಕ, ಸಿನೆಮಾ ಹಾಡುಗಳು, ಕಾವ್ಯ-ಪದ್ಯಗಳು ಮನಸ್ಸಿಗೆ ಬರುತ್ತವೆ. ನಾನು ಮೊದಲಿಗೆ ಕೇಳಿದ ಊಟದ ಹಾಡೆಂದರೆ, 'ರಾಜರ ವನದೊಳು ಭೋಜನವೆಂದರೆ ಯೋಜನವಾದರು ಪೋಗುವೆವು' ಎಂಬುದು.

ಬಹುಶಃ ಇದು ನಮ್ಮೂರಲ್ಲಿ ಆಡುತ್ತಿದ್ದ ಸದಾರಮೆ ನಾಟಕದಿದ್ದೀತು. ನೆನಪಿಲ್ಲ. ನಂತರದ್ದು ಸತ್ಯಹರಿಶ್ಚಂದ್ರ ಸಿನೆಮಾದ 'ಶ್ರಾದ್ಧದೂಟ ಸುಮ್ಮನೆ, ನೆನೆಸಿಕೊಂಡ್ರೆ ಜುಮ್ಮನೆ, ನೀರೂರಿ ನಾಲಗೆ, ಕುಣಿವುದಯ್ಯ ಕಮ್ಮಗೆ' ಎಂಬುದು. ಆಮೇಲಿನದು ಮಾಯಾಬಜಾರ್ ಸಿನೆಮಾದ 'ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು' ಎಂಬುದು.

ಮರೆತ ನಾಗದಾಳಿ ಹಣ್ಣಿನ ನೆನಪುಗಳ ಗುಚ್ಛಮರೆತ ನಾಗದಾಳಿ ಹಣ್ಣಿನ ನೆನಪುಗಳ ಗುಚ್ಛ

ಇದೇ ಹಾಡು ತೆಲುಗಿನಲ್ಲಿಯೂ ಇದ್ದು, (ವಿವಾಹ ಭೋಜನಂಬು, ವಿಚಿತ್ರ ವಂಟಕಂಬು, ಇವಾಲ ನಾಕು ವಿಂದು) ಇಂದಿಗೂ ಜನಪ್ರಿಯತೆಯನ್ನು ಕನ್ನಡ ಹಾಡಿಗಿಂತಲೂ ಹೆಚ್ಚು ಉಳಿಸಿಕೊಂಡಿದೆ. ಮಂಗರಸನು ವಾರ್ಧಕಷಟ್ಪದಿಯಲ್ಲಿ ರಚಿಸಿರುವ 'ಸೂಪಶಾಸ್ತ್ರ'ದಲ್ಲಿ ಸುಮಾರು ಇನ್ನೂರ ಅರವತ್ಮೂರು ಬಗೆಯ ಪಾಕಗಗಳನ್ನು ವಿವರಿಸಿದ್ದಾನೆ.

ಇನ್ನು ದಾಸರು, ಮಹಿಳಾ ಕೀರ್ತನಕಾರರ ಪದಗಳಲ್ಲಿ ಅಡುಗೆ, ತಿನಿಸುಗಳ ಮೆರವಣಿಗೆಯೇ ಕಂಡುಬರುವುದು. ದೂರ್ವಾಸ ಪರಿವಾರಕ್ಕೆ ಇಕ್ಕಿದ ಭೋಜನದಲ್ಲಿ ಮೂವತ್ತಕ್ಕೂ ಹೆಚ್ಚಿನ ಭಕ್ಷ್ಯ, ಪಾನೀಯಗಳು ಕಂಡುಬರುತ್ತವೆ. ಅನಾಮಿಕ ಕವಿ ವಿರಚಿತ 'ಊಟದ ರಗಳೆ'ಯಲ್ಲಿ ಉಂಡವರ ಆನಂದದ ಬಣ್ಣನೆಯೇ ಮನೋಹರವಾದುದು.

ದೇವತೆಗಳು ಅಮೃತ ಕೊಟ್ಟರೂ ಬದಲಿಗೆ ರೊಟ್ಟಿ- ಹುಚ್ಚೆಳ್ಳು ಚಟ್ನಿ ಕೊಡಲ್ಲ...ದೇವತೆಗಳು ಅಮೃತ ಕೊಟ್ಟರೂ ಬದಲಿಗೆ ರೊಟ್ಟಿ- ಹುಚ್ಚೆಳ್ಳು ಚಟ್ನಿ ಕೊಡಲ್ಲ...

'ಆಹಾ ಉಂಡೆವು ಉಂಡೆವು ಯೆನ್ನುತ| ಹೋ ಹೋ ದಣಿದೆವು ದಣಿದೆವುಯೆನ್ನುತ|| ಜೋಲುಕಚ್ಚೆಯ ಸಂವರಿಸುತ್ತೆ| ಕಾಲುಗಳೊಂದರೊಳಗೊಂದಕ್ಕೆಕೆಡವುತ್ತಾ|| ಉದಕದ ತಂಬಿಗೆ ಕೈಯಲಿ ಪಿಡಿದು| ಮುದುಕರ ಹಲ್ಲಿಗೆ ಕಡ್ಡಿಯೊಳಿರಿದು|| ಕೈಕಾಲ್ತೊಳೆದಾಚಮನವ ಮಾಡಿ| ಕೈಗಳ ದಕ್ಷಿಣೆಗಾಗವೆ ನೀಡಿ|| .....'

ಕಾವ್ಯಗಳಲ್ಲಿ ಊಟೋಪಚಾರ ಒಂದು ಭಾಗ

ಕಾವ್ಯಗಳಲ್ಲಿ ಊಟೋಪಚಾರ ಒಂದು ಭಾಗ

ವಡ್ಡಾರಾಧನೆ, ಸುಕುಮಾರ ಚರಿತೆ, ಬಸವರಾಜದೇವರ ರಗಳೆ, ಲೀಲಾವತಿ, ಸಿದ್ಧರಾಮ ಚಾರಿತ್ರ, ಪಾರ್ಶ್ವನಾಥ ಪುರಾಣ, ಶಾಂತೀಶ್ವರ ಪುರಾಣ, ಬಸವಪುರಾಣ, ಸನತ್ಕುಮಾರ ಚರಿತೆ, ಭರತೇಶ ವೈಭವ, ಪ್ರಭುಲಿಂಗಲೀಲೆ, ಗದುಗಿನ ಭಾರತ, ಚೆನ್ನಬಸವ ಪುರಾಣ, ಸೌಂದರ ವಿಳಾಸ, ಸಿದ್ಧೇಶ್ವರ ಪುರಾಣ, ಕಂಠೀರವ ನರಸರಾಜೇಂದ್ರ ವಿಜಯ, ಪ್ರಭುದೇವರ ಪುರಾಣ, ಮೌನೇಶ್ವರ ಬಾಲಲೀಲೆ, ಲಿಂಗಪುರಾಣ, ಮೋಹನ ತರಂಗಿಣಿ, ರಾಮಾಶ್ವಮೇಧಂ ಮುಂತಾದ ಕನ್ನಡ ಕೃತಿಗಳಲ್ಲಿ ಭೋಜನ ಸಮಾರಾಧನೆಳ ಚಿತ್ರಣವಿದೆ. ಕಥಾ ನಿರೂಪಣೆಯಲ್ಲಿ ಊಟೋಪಚಾರ ಒಂದು ಭಾಗ. ಆರೋಗ್ಯದಲ್ಲಿ ಇದರ ಪಾತ್ರ ಬಹು ದೊಡ್ಡದು.

ಮಾರ್ಗ ಸಾಹಿತ್ಯದಲ್ಲಿ ಕಂಡುಬರುವ ಉಣಿಸುಗಳಿಗೂ ಜನಪದರ ಊಟ ಪದಾರ್ಥಗಳಿಗೂ ಅಂತರವಿದೆ. ಆಹಾರ ತಯಾರಿಕೆಯಿಂದ ಹಿಡಿದು ಬಡಿಸುವ, ಉಣ್ಣುವ ಕ್ರಮದಲ್ಲಿಯೂ ವ್ಯತ್ಯಾಸ ಕಂಡುಬರುವುದು.

ಭೀಮ, ಬಕಾಸುರ, ಕುಂಭಕರ್ಣರೇ ಹೆಸರುವಾಸಿ

ಭೀಮ, ಬಕಾಸುರ, ಕುಂಭಕರ್ಣರೇ ಹೆಸರುವಾಸಿ

ಉಣ್ಣುವ ಎಲ್ಲರೂ ಸಮಾನ ಉಣ್ಣುಗರಲ್ಲ. ಹಿಡಿಅನ್ನ (ಮುದ್ದೆ), ಪಾವಕ್ಕಿ, ಪಡಿಯಕ್ಕಿ, ಸೇರಕ್ಕಿ ಅನ್ನ ಉಣ್ಣುವವರಿದ್ದಂತೆ, ಒಂದು ಮುದ್ದೆಯಿಂದ ಮೂರು ಮುದ್ದೆ ನುಂಗುವವರೂ ಇರುವವರೇ. ಮೇಲಿಂದ ಮೇಲೆ, ಹೆಚ್ಚು ಹೆಚ್ಚು ಉಣ್ಣುವವನಿಗೆ ಹೊಟ್ಟೆಬಾಕ, ತಿಂಡಿಪೋತ ಎಂಬಂತಹ ಅಡ್ಡ ಹೆಸರುಗಳುಂಟು. ಉಣ್ಣುವುದರಲ್ಲಿ ಭೀಮ, ಬಕಾಸುರ, ಕುಂಭಕರ್ಣರು ಹೆಸರುವಾಸಿ. ಭೀಮನಿಗಂತೂ ವೃಕೋದರ ಎಂಬ ಪರ್ಯಾಯನಾಮವೇ ಇದೆ. ಇಂಥವರು ಪ್ರಸಿದ್ಧಿಗೆ ಬರದಿದ್ದರೂ ಇರುವುದಂತೂ ನಿಜ.

ಗಾದೆ, ನಾಣ್ನುಡಿಗಳು

ಗಾದೆ, ನಾಣ್ನುಡಿಗಳು

ಉಣ್ಣುವವರ ಕುರಿತ ಗಾದೆ, ನಾಣ್ನುಡಿಗಳೂ ಇರುವವೇ. ಅಂಥವುಗಳಲ್ಲಿ 'ಹೊಟ್ಟೆ ತುಂಬಿದರೂ ಕಣ್ಣು ತುಂಬೊಲ್ಲ, ಸೂಜಿಗಂಟಲು, ಬಾನೆ ಹೊಟ್ಟೆ, ಹೊಟ್ಟೇನೋ ಕಂದುಕೂರಿ ಚೆರುವೋ (ಕೆರೆಯೋ), ಮಡಿಕೇಲಿರೋದು ನನ್ನ ಎಲೇಲಿ ಇರಲಿ ಅನ್ನುವಂಥೋನು, ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.....' ಹೀಗೆ.

ಭೀಮನಿಗೆ ಸ್ತ್ರೀ ಲಿಂಗ ವಾಚಕ

ಭೀಮನಿಗೆ ಸ್ತ್ರೀ ಲಿಂಗ ವಾಚಕ

ಉಣ್ಣುವ ವಿಷಯದಲ್ಲಿ ಗಂಡಸರ ಹೆಸರೇ ಹೆಚ್ಚಿಗೆ ಕೇಳಿ ಬರುತ್ತದೆ. ಆದರೆ ಹೆಂಗಸರಲ್ಲಿಯೂ ಪ್ರಚಾರಕ್ಕೆ ಬಾರದ ಬಕಾಸುರಿಯರು ಇದ್ದಾರೆ. ಭೀಮನಿಗೆ ಸ್ತ್ರೀಲಿಂಗ ರೂಪ ಕೊಡುವುದು ಹೇಗೆಂದು ನನಗೆ ತಿಳಿಯಲಿಲ್ಲವಾಗಿ ಹೇಳಿಲ್ಲ. 'ಭೀಮಿ' ಅನ್ನಬಹುದೆ? ವೃಕೋದರಿ ಎಂದು ಅವನ ಪಕ್ಕಕ್ಕೆ ತರೋಣವೆ?

ಆತನ ಹೆಸರೇ ಇಟ್ಟುಮುನಿಗ

ಆತನ ಹೆಸರೇ ಇಟ್ಟುಮುನಿಗ

ರಾಮಕ್ಕ ಎಂಬ ಕುಳ್ಳನೆಯ ಹೆಂಗಸೊಬ್ಬಳನ್ನು ನಾನು ಕಂಡಿದ್ದೆ. ಆಕೆ ಅರ್ಧ ಸೇರು ಹಿಟ್ಟಿನ ಮೂರು ಮುದ್ದೆಗಳನ್ನು ಹೊತ್ತಿಗೆ ಉಣ್ಣುತ್ತಿದ್ದಳು. ಅವಳ ಗಂಡ ಮುನೆಪ್ಪ 'ಇವಳಕ ನಾನು ತಂದಾಕಲಾರಿನಿ' ಅನ್ನುತ್ತಿದ್ದ. ಆದರೂ ಉಣ್ಣಲು ಕಡಿಮೆ ಮಾಡಿದವಳಲ್ಲ. ಅಷ್ಟುಣ್ಣುತ್ತಿದ್ದ ಆಕೆ ಎರಡಾಳಿನ ಕೆಲಸ ಮಾಡುತ್ತಿದ್ದಳು. ಬರ್ರಿಗಳಮುನಿ ಎಂಬಾಕೆ ರಾಮಕ್ಕನಿಗೆ ತಕ್ಕ ಪೈಪೋಟಿಯಲ್ಲಿ ಮುದ್ದೆ ಮುರಿಯುತ್ತಿದ್ದಳು. ಗಂಟೆಗೊಮ್ಮೆ ಬಡಿಸಿದರೂ ಉಣ್ಣುತ್ತಿದ್ದ ಮುನಿಗ ಎಂಬುವವನನ್ನು ಊರ ಜನ 'ಇಟ್ಟುಮುನಿಗ' ಎಂದು ಕರೆಯುತ್ತಿದ್ದರು.

ಉಣಲಿಕ್ಕುವ ಔದಾರ್ಯ ಬೇಕು

ಉಣಲಿಕ್ಕುವ ಔದಾರ್ಯ ಬೇಕು

ಸೊಣ್ಣಪ್ಪ ಎಂಬಾತ ಮುದ್ದೆಯನ್ನು ನಾಲ್ಕು ತುತ್ತಿಗೇ ಮುಗಿಸಿಬಿಡುತ್ತಿದ್ದ. ಆತನಿಗೆ 'ಮುದ್ದಿಗಳ ಸೊಣ್ಣಪ್ಪ'ನೆಂದು ಹೆಸರಿಟ್ಟಿದ್ದರು. ಮರಿಪಲ್ಲಿಯಲ್ಲಿದ್ದ ವೆಂಕಟರಾಯಪ್ಪ ಎಂಬಾತನ ಹೊತ್ತಿನ ಊಟವೆಂದರೆ ಎರಡು ಸೇರು ರಾಗಿಮುದ್ದೆ, ಒಂದು ಸೇರು ಅಕ್ಕಿ ಅನ್ನ, ಬಕೆಟ್ಟು ಸಾರು. ಹೊಟ್ಟೆ ತುಂಬಿತ ಅಂದರೆ ಎಂದು ಕೇಳಿದರೆ 'ಚೆರುವುಕಿ ಚೆಂಬುಡು ನೀಳ್ಳು ಎಕ್ಕಡಿಕಿ?' (ಕೆರೆಗೆ ತಂಬಿಗೆ ನೀರು ಎಲ್ಲಿಗೆ) ಎಂದು ಮಾರ್ಮಿಕವಾಗಿ ಹೇಳುತ್ತಿದ್ದ.

ಹಿಂದೆ ಇಂತಹ ಊಟಗಾರರಿಗೆ ಸಂತೋಷ, ಅಕ್ಕರೆಯಿಂದ ಬಡಿಸುವ ತಾಯಂದಿರು ಹೆಚ್ಚಿಗಿದ್ದರು. ಈಗಲೂ ಇಲ್ಲವೆಂದಲ್ಲ. ಆದರೆ ವಿರಳ. ಅಗುಳು ಎಣಿಸಿ ಹಾಕುವ ಕಾಲವಿದು. ಈ ಕಾಲದಲ್ಲಿಯೂ 'ಉಣ್ಣು'ವ ಧೀರರಿದ್ದಾರೆ. ಉಣಲಿಕ್ಕುವ ಔದಾರ್ಯ ಇರಬೇಕಷ್ಟೆ.

English summary
Food- it dispel starvation. But it will not end with this. Some people eats like demons. Here is talk about foodies, food culture by One India columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X