ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತೆ ಹಾಲು ಮಾರುವ ಸರೋಜಮ್ಮ ಹೇಳಿಕೊಂಡ ಅನ್ನ ನೀಡುವ 'ಲಕ್ಷ್ಮಿ'ಯ ಕಥೆ

By ಸ ರಘುನಾಥ, ಕೋಲಾರ
|
Google Oneindia Kannada News

ಯಾವತ್ತಿಗೂ ಮತ್ತೊಬ್ಬ ಮನುಷ್ಯರ ಬದುಕೇ ಬಹಳ ಆಸಕ್ತಿಕರ. ಅದೇನೇ ಇಂಟರ್ ನೆಟ್, ಫೇಸ್ ಬುಕ್ ಮತ್ತೊಂದು ಬಂದು ಜಗತ್ತು ಬದಲಾಗಿ ಹೋದರೂ ನನ್ನಂಥ ಹಳ್ಳಿ ಮನುಷ್ಯನಿಗೆ ಮತ್ತೊಬ್ಬ ವ್ಯಕ್ತಿಯ ಬದುಕು, ಜನಪದ, ಸಾಹಿತ್ಯದಷ್ಟು ಆಪ್ಯಾಯಮಾನವಾಗಿ ಇನ್ನೇನೂ ಕಾಣುವುದಿಲ್ಲ.

ಅಲ್ಲಿ ಇಲ್ಲಿ ಎಂದು ಅಲೆದಾಡುವ ಜಾಯಮಾನದವನಾದ ನಾನು ಹೀಗೆ ಸುತ್ತಾಟ ನಡೆಸಿದ್ದೆ. ಯಾವಾಗಲೂ ಹಸು-ಎಮ್ಮೆಗಳನ್ನು ಮೇಯಿಸಿಕೊಂಡು ಹೋಗುವವರನ್ನೇ ನೋಡಿ ರೂಢಿ ಆಗಿಹೋಗಿದೆ. ಅಂಥದ್ದರಲ್ಲಿ ಯಲ್ದೂರಿನ ಹತ್ತಿರ ಒಬ್ಬ ಹೆಂಗಸು ಐದು ಕತ್ತೆಗಳ ಜತೆಗೆ ನಡೆದು ಹೋಗುತ್ತಾ ಇರುವುದು ಕಾಣಿಸಿತು. ಆಕೆಯನ್ನು ನೋಡಿದ ಮೇಲೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮನಸ್ಸಾಗದೇ, ಅಲ್ಲೇ ಗಾಡಿ ನಿಲ್ಲಿಸಿ, ಹಾಗೇ ಮಾತಿಗೆ ಎಳೆದೆ.

ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್ಇಂಡಿಗೋ ವಿಮಾನದಲ್ಲೊಂದು ಭಾವನಾತ್ಮಕ ಕ್ಷಣ: ವಿಡಿಯೋ ವೈರಲ್

ಪಾಪ, ಆಕೆಗೋ ಪೂರ್ತಿಯಾಗಿ ಕನ್ನಡ ಬಾರದು. ತೆಲುಗಿನಲ್ಲಿ ಕೂಡ ಪ್ರಶ್ನೆ ಮಾಡದ ಹೊರತು ಹೇಳುವ ವಿಚಾರ ಅರ್ಥವಾಗದು. ಆದರೂ ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು, ಫೋಟೋ ತೆಗೆಯುತ್ತಾ ಆಕೆ ಬಗ್ಗೆ ಕೇಳುತ್ತಾ ಇದ್ದರೆ, ನಾನು ಯಾವುದೋ ದೊಡ್ಡ ಮಾಧ್ಯಮದ ಕಡೆಯವನು. ಕಷ್ಟಗಳನ್ನೆಲ್ಲ ಹೇಳಿಕೊಂಡು ಬಿಟ್ಟರೆ ಸರಕಾರದಿಂದ ತನ್ನ ಕುಟುಂಬಕ್ಕೊಂದು ಮನೆ ಸಿಕ್ಕಬಹುದೇನೋ ಎಂಬ ಆಸೆ ಆಕೆಯದು.

ಅಯ್ಯೋ, ನಿನ್ನ ಹಾಗೇ ಅದೆಷ್ಟು ಜನ ಮಾತನಾಡಿಸಿ, ಫೋಟೋ ತೆಕ್ಕೊಂಡು ಹೋದರೂ ಯಾರೂ ನನ್ನ ಬಗ್ಗೆ ಹಾಕಲಿಲ್ಲ ಎಂದು ಆಕ್ಷೇಪ ಮಾಡಿದರೂ ನಾನು ಕೇಳಿದ ಯಾವ ಪ್ರಶ್ನೆಗೂ ಹೇಗೆಂದರೆ ಹಾಗೆ ಉತ್ತರ ಹೇಳಲಿಲ್ಲ. ಆಕೆ ಹಂಚಿಕೊಂಡ ವಿಚಾರ ನಿಮಗೂ ತಿಳಿದಿರಲಿ, ಯಾಕೆಂದರೆ ಇದು ಬಹಳ ಆಸಕ್ತಿಕರವಾಗಿದೆ.

ಐದು ಕತ್ತೆಯಿಂದ ಕಾಲು ಲೀಟರ್ ಹಾಲು ಹಿಂಡುತ್ತಾರೆ

ಐದು ಕತ್ತೆಯಿಂದ ಕಾಲು ಲೀಟರ್ ಹಾಲು ಹಿಂಡುತ್ತಾರೆ

ಆ ಮಹಿಳೆಯ ಊರು ಪುಂಗನೂರು ಹತ್ತಿರದ ಶಾಂತಿನಗರ. ಹೆಸರು ಸರೋಜಮ್ಮ. ತನ್ನ ಕುಟುಂಬದ ಜತೆಗೆ ಕಳೆದ ಇಪ್ಪತ್ತು ವರ್ಷದಿಂದ ನಂದಗುಡಿ ಹತ್ತಿರ ವಾಸ. ಆಕೆ ಹತ್ತಿರ ಐದು ಕತ್ತೆಗಳಿವೆ. ಅವುಗಳ ಹಾಲು ಮಾರಾಟವೇ ಆಕೆ ಕುಟುಂಬದ ಪಾಲಿನ ಆದಾಯ. ಕತ್ತೆ ಹಾಲನ್ನು ಒಂದು ಒಳಲೆಗೆ ಇಷ್ಟು ಅಂತ ಮಾರಾಟ ಮಾಡುತ್ತಾರೆ. ಆ ಹಾಲನ್ನು ನೂರು, ನೂರೈವತ್ತು ಹಾಗೂ ಇನ್ನೂರು ರುಪಾಯಿ ತನಕ ಮಾರುತ್ತಾರೆ. ಹಾಗಂತ ಇವರಿಗೆ ಭರ್ಜರಿ ಆದಾಯ ಅಲ್ಲವಾ ಅಂದುಕೊಳ್ಳುವ ಹಾಗಿಲ್ಲ. ಏಕೆಂದರೆ ಕತ್ತೆಗಳು ಹಸು-ಎಮ್ಮೆ ಥರ ಲೀಟರ್ ಗಟ್ಟಲೆ ಹಾಲು ನೀಡಲ್ಲ. ಐದು ಕತ್ತೆಗಳು ಸೇರಿ ಇನ್ನೂರೈವತ್ತು ಮಿಲಿ ಲೀಟರ್ ಅಂದರೆ ಕಾಲು ಲೀಟರ್ ಹಾಲು ದೊರೆಯುತ್ತದೆ. ಅದನ್ನು ಒಳಲೆಗೆ ಐವತ್ತು ರುಪಾಯಿಯಂತೆ ಮಾರಿದರೆ ಒಂದು ದಿನಕ್ಕೆ ಅಂದಾಜು ಸಾವಿರ ರುಪಾಯಿ ಸಂಪಾದನೆ ಆಗಬಹುದು.

ಒಂದು ಕತ್ತೆಗೆ ನಲವತ್ತೈದರಿಂದ ಅರವತ್ತು ಸಾವಿರ ಬೆಲೆ

ಒಂದು ಕತ್ತೆಗೆ ನಲವತ್ತೈದರಿಂದ ಅರವತ್ತು ಸಾವಿರ ಬೆಲೆ

ದಿನಕ್ಕೆ ಒಂದು ಸಾವಿರ ರುಪಾಯಿ ಅಂದರೆ ಮೂವತ್ತು ಸಾವಿರ ಆದಾಯ ಅಲ್ಲವಾ? ಅನ್ನಿಸಬಹುದು. ಆದರೆ ಖರ್ಚಿನ ವಿಷಯಕ್ಕೆ ಇನ್ನೂ ಬಂದಿಲ್ಲ. ಒಂದು ಕತ್ತೆ ನಲವತ್ತೈದರಿಂದ ಅರವತ್ತು ಸಾವಿರ ರುಪಾಯಿ ಬೆಲೆ ಆಗುತ್ತದೆ. ಅದರಲ್ಲೂ ಸರೋಜಮ್ಮನ ಹತ್ತಿರ ಇರುವ ಬೂದು ಬಣ್ಣದ ಕತ್ತೆಗೆ ಅರವತ್ತು ಸಾವಿರ ರುಪಾಯಿ ಬೆಲೆಯಂತೆ. ಇವರು ದಿನವಿಡೀ ನಡೆದಾಡುತ್ತಾ, ಊರಿಂದ ಊರು ಸುತ್ತಾಡುತ್ತಾ ಹಾಲು ಮಾರಾಟ ಮಾಡಬೇಕಾಗುತ್ತದೆ. ಅವರ ಖರ್ಚು-ವೆಚ್ಚ ಎಲ್ಲ ಕಳೆದು, ಕುಟುಂಬವನ್ನು ನೋಡಿಕೊಳ್ಳುವುದು ಬಹಳ ಕಷ್ಟ ಸ್ವಾಮಿ ಅಂತಾಳೆ ಸರೋಜಮ್ಮ. ಕತ್ತೆ ಹಾಲನ್ನು ಮಕ್ಕಳಿಗೆ ಕೂಡಿಸಿದರೆ ಕೆಮ್ಮು, ಕಫದ ಸಮಸ್ಯೆಗಳು ಹೋಗುತ್ತವೆ. ಮಕ್ಕಳು ಬುದ್ಧಿವಂತರಾಗುತ್ತಾರೆ ಅನ್ನೋ ಮಾತಿದೆ. ಕತ್ತೆ ಹಾಲಿನ ರುಚಿಯ ಬಗ್ಗೆ ಕೇಳಿದರೆ, ಒಮ್ಮೆ ಗಿಣ್ಣು ಹಾಲಿನ ರೀತಿ ಗಟ್ಟಿಯಾಗಿ ಇರುತ್ತದೆ ಅಂತಲೂ, ಮತ್ತೊಂದು ಸಲ ತೆಳುವಾಗಿ ನೀರಿನಂತೆ ಇರುತ್ತದೆ ಎನ್ನುತ್ತಾಳೆ ಸರೋಜಮ್ಮ. ಗುಂಪಾಗಿ ಜನ ಸೇರಿರುವ ಕಡೆಗೆ ಹೋಗಿ, ನಿಂತುಕೊಂಡು ಇವರು ಕತ್ತೆ ಹಾಲು ಮಾರುತ್ತಾರೆ. ವಾರದ ಎಲ್ಲ ದಿನಗಳಲ್ಲೂ ಕೊಳ್ಳುವವರು ಇರುತ್ತಾರೆ ಅನ್ನೋ ಖಾತ್ರಿಯೂ ಇಲ್ಲ.

ದಿನಕ್ಕೆ ಒಂದು ಹೊತ್ತು ಮಾತ್ರ ಹಾಲು ಹಿಂಡುತ್ತಾರೆ

ದಿನಕ್ಕೆ ಒಂದು ಹೊತ್ತು ಮಾತ್ರ ಹಾಲು ಹಿಂಡುತ್ತಾರೆ

ದಿನದಲ್ಲಿ ಒಂದು ಹೊತ್ತು ಮಾತ್ರ ಹಾಲು ಹಿಂಡುತ್ತಾರೆ. ಆಗ ಕತ್ತೆಗಳ ಕಾಲಿಗೆ ಹಗ್ಗ ಕಟ್ಟಿರಲೇಬೇಕು. ಇಲ್ಲದಿದ್ದರೆ ಬಲವಾಗಿಯೇ ಒದೆಯುತ್ತವೆ. ಬೆಳಗ್ಗೆ ಏಳರಿಂದ ಒಂಬತ್ತು ಗಂಟೆ ಮಧ್ಯೆ ಹಾಲು ಹಿಂಡಿ, ಆ ನಂತರ ಮಾರಾಟ ಶುರು ಮಾಡುತ್ತಾರೆ. ವಾರದ ದಿನಗಳಲ್ಲಿ ಒಂದೆರಡು ಗಂಟೆ ಮಾತ್ರ ಮಾರಾಟ. ಭಾನುವಾರದ ದಿನ ಮಕ್ಕಳು ಮನೆಯಲ್ಲಿ ಇರುತ್ತವೆ. ಮಧ್ಯಾಹ್ನ ಹನ್ನೆರಡು ಗಂಟೆ ತನಕ ಹಾಲು ಮಾರುತ್ತಾರೆ. ಇವರ ಬಗ್ಗೆ ಗೊತ್ತಿರುವವರು, ಫೋನ್ ನಂಬರ್ ತೆಗೆದುಕೊಂಡು, ಹುಡುಕಿಕೊಂಡು ಬಂದು ಹಾಲು ಖರೀದಿ ಮಾಡುತ್ತಾರೆ. ಅಂಥ ಸನ್ನಿವೇಶ ಬಹಳ ಕಡಿಮೆ. ಈ ಕುಟುಂಬವೇ ರಾಜ್ಯದ ನಾನಾ ಕಡೆಗೆ ಸುತ್ತಾಡುತ್ತಾ, ಹಾಲನ್ನು ಮಾರುತ್ತಾ ಜೀವನ ನಡೆಸುತ್ತದೆ. ಕಾಲು ಲೀಟರ್ ನಷ್ಟು ಹಾಲು ಹಿಡಿದ ನಂತರ ಉಳಿದಿದ್ದನ್ನು ಅವುಗಳ ಮರಿಗೆ ಬಿಡಲಾಗುತ್ತದೆ. ಕತ್ತೆಗಳು ಚೆನ್ನಾಗಿ ಮೇಯುತ್ತವೆ. ಆ ಕಾರಣಕ್ಕೆ ಮರಿಗಳಿಗೂ ಹಾಲಿಗೆ ಕೊರತೆ ಏನೂ ಆಗಲ್ಲ. ಅವುಗಳ ಹಾಲನ್ನೂ ನಾವು ಕಿತ್ತುಕೊಂಡು ಸಂಸಾರ ಮಾಡಬೇಕಾ ಸ್ವಾಮಿ? ಎಂಬ ಆಕೆ ಉತ್ತರ ಕೇಳಿ, ಯಾಕೆ ಕರುಳು ಚುರ್ ಎಂದಿತು. ನಾನು ಆ ಪ್ರಶ್ನೆಯನ್ನು ಕೇಳಬಾರದಿತ್ತೇನೋ ಅಂತಲೂ ಬಾಧೆ ಪಟ್ಟೆ.

ಅನ್ನ ನೀಡುವ ಲಕ್ಷ್ಮೀ ಸಮಾನ

ಅನ್ನ ನೀಡುವ ಲಕ್ಷ್ಮೀ ಸಮಾನ

ಸರೋಜಮ್ಮ ಹಾಗೂ ಆಕೆ ಕುಟುಂಬದವರ ಪಾಲಿಗೆ ಕತ್ತೆಗಳು ಅಂದರೆ ಲಕ್ಷ್ಮೀ ಸಮಾನ. ದಿನ ಬೆಳಗೆದ್ದು ಅವುಗಳ ಮುಖವನ್ನೇ ಮೊದಲು ನೋಡಬೇಕು. ಹಾಗೆ ನೋಡುವುದು ಅನಿವಾರ್ಯ ಕೂಡ. ಕತ್ತೆಗಳನ್ನು ಅದೃಷ್ಟ ಹಾಗೂ ದುರದೃಷ್ಟ ಎಂದು ಮಾತಿನಲ್ಲಿ ಗೆರೆ ಎಳೆಯುವವರನ್ನು ಕಂಡರೆ ಈ ಸರೋಜಮ್ಮನಿಗೆ ಬಲು ಸಿಟ್ಟು. ತಾನು ಬಾಯಿಗಿಡುವ ಪ್ರತಿ ತುತ್ತಿಗೂ ಇವುಗಳ ದಯೆ ಕಾರಣ ಎಂದು ಬಲವಾಗಿ ನಂಬುವ ಈಕೆ, ತನ್ನ ಕುಟುಂಬಕ್ಕೊಂದು ಕಾಯಂ ಸೂರು ದೊರೆಯಬಹುದೇ ಎಂಬ ಸಣ್ಣದೊಂದು ಆಸೆ. ಮಕ್ಕಳಿಗೆ- ಮೊಮ್ಮಕ್ಕಳಿಗೆ ಶಿಕ್ಷಣ, ಊರೂರು ಸುತ್ತುವ ತನ್ನ ಬದುಕಿಗೊಂದು ಕಾಯಂ ವಿಳಾಸ ಸಿಗಲಿ ಎಂಬ ಆಶಯ ಇದೆ. ಹಾಗಂತ ಎಲ್ಲವೂ ಪುಗ್ಸಟ್ಟೆ ಮಾಡಿಬಿಡಲಿ ಎಂಬ ನಿರೀಕ್ಷೆಯೂ ಇಲ್ಲ. ನಮ್ಮ ಸ್ಥಿತಿ ನೋಡಲಿ. ಏನು ಸಹಾಯ ಪಡೆಯಲು ನಮಗೆ ಹಕ್ಕು- ಅರ್ಹತೆ ಇದೆಯೋ ಅದನ್ನು ಮಾಡಲಿ. ನಮ್ಮಂಥವರು ಬಹಳ ಜನ ಇದ್ದಾರೆ. ಅವರಿಗೂ ಒಳ್ಳೆಯದು ಮಾಡಲಿ ಎನ್ನುತ್ತಾ ತನಗಿನ್ನು ಸಂತೆಗೆ ತೆರಳುವ ಹೊತ್ತಾಯಿತು ಎಂದು ನೆತ್ತಿಗೇರಿದ್ದ ಬಿಸಿಲಿನ ಮಧ್ಯೆ ಸರೋಜಮ್ಮ ನಾಪತ್ತೆ ಆಗಿಬಿಟ್ಟಳು.

English summary
Sarojamma, who sell donkey milk on street. How will be her life leads? Here is an interesting story about her family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X