ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮ

By ಸ ರಘುನಾಥ, ಕೋಲಾರ
|
Google Oneindia Kannada News

ಉಪದೇಶ ಎಂಬಂತಹುದೇನನ್ನೂ ಹೇಳದೆ ಬದುಕುತ್ತ, ಆ ಬದುಕನ್ನೇ ಜೀವನ ಸಂದೇಶ, ಆದರ್ಶವಾಗಿ ಕಾಣಿಸುವ ಜನರಿಗೆ ಕೊರತೆ ಇಲ್ಲ. ಆದರೆ ಇಂತಹ ಎಲ್ಲರೂ ಪ್ರಚಾರಕ್ಕೆ ಸಿಕ್ಕಿದವರಲ್ಲ. ಇವರು ವನಸುಮದಂತೆ ಜೀವನವನ್ನು ಅರಳಿಸಿಕೊಂಡವರು. ಕಣ್ಣು, ಮನಸ್ಸು ಇದ್ದವರಿಗೆ ಮಾತ್ರ ಇವರು ಗೋಚರಿಸುತ್ತಾರೆ. ಆಗ ಅವರು ಅರಳಿಸುವ ಬಾಳಪರಿಮಳ ಅನುಭವಕ್ಕೆ ಬರಲು ಸಾಧ್ಯ. ಇಂಥ ವಿರಳರಲ್ಲಿ ಶ್ರೀನಿವಾಸಪುರ ತಾಲೂಕಿನ ಕಶೆಟ್ಟಿಪಲ್ಲಿಯ ನೂರಹತ್ತು ವರ್ಷದ ಅಜ್ಜಿ ಸಾಕಲೋಳ್ಳ ವೆಂಕಟಮ್ಮ ಒಬ್ಬರು.

ಮರೆತ ನಾಗದಾಳಿ ಹಣ್ಣಿನ ನೆನಪುಗಳ ಗುಚ್ಛಮರೆತ ನಾಗದಾಳಿ ಹಣ್ಣಿನ ನೆನಪುಗಳ ಗುಚ್ಛ

ಈ ತಾಯಿಯ ದೇಹದ ವಯಸ್ಸು ನೂರಹತ್ತು ವರ್ಷ. ಆದರೆ ಸಜ್ಜನಿಕೆ, ಜೀವನೋತ್ಸಾಹ, ಜೀವನ ಧಾರ್ಮಿಕತೆಗಳಿಗೆ ಎಷ್ಟು ವಯಸ್ಸೆಂದು ಅಂದಾಜಿಸಲೂ ಸಾಧ್ಯವಿಲ್ಲ. ಹಾಗೊಂದು ವೇಳೆ ಅಂದಾಜಿಸುವುದಾದರೆ ಅವುಗಳ ವಯಸ್ಸು ಈ ಜಗದ ಸಂಸ್ಕೃತಿ ಪರಂಪರೆಗಳಷ್ಟು ಎಂದು ಹೇಳಬೇಕಾದೀತು. ವೆಂಕಟಮ್ಮ ಬಾಲವಿಧವೆ. ಮದುವೆಯಾದ ಮೇಲೆ ಮೈನೆರೆದು ಗುಡಿಸಿಲಲ್ಲಿ ಕುಳಿತು ಒಸಗೆ ಹಾಕಿಸಿಕೊಂಡು ಗಂಡನ ಮನೆ ಹೊಸಿಲಲ್ಲಿ ಅಕ್ಕಿಯ ಪಡಿ ಒದ್ದು ಸಂಸಾರಕ್ಕೆ ನಿಂತು, ಎರಡು ಮಕ್ಕಳನ್ನು ಹಡೆದು, ಮೂರನೆಯದನ್ನು ಬಸುರಲ್ಲಿ ಸಾಕುತ್ತಿರುವಾಗಲೇ ವಿಧವೆಯಾದಾಕೆ. ಬಸಿರೊಂದಿಗೆ ಎರಡು ಕಂದಮ್ಮಗಳೊಂದಿಗೆ ತವರುಮನೆ ಸೇರಿದಾಗ ವಯಸ್ಸು ಹದಿನಾರೂ ದಾಟಿದ್ದಿಲ್ಲ.

Do you want to know secret of good health of this Supercentenarian

ತನಗಿರಲಿ, ಮಕ್ಕಳನ್ನು ಮಲಗಿಸಲು ಒಂದು ತುಂಡು ಮೆತ್ತನೆಯ ಹಾಸಿಗೆಯೂ ಇಲ್ಲದ ತವರದು. ತಂದೆ ತಾಯಿ ತೀರಿಕೊಂಡಾಗ ಬದುಕಿನ ಹೋರಾಟದಲ್ಲಿ ಒಂಟಿ. ಕುಲಕಸುಬು ಅಗಸಗಾರಿಕೆಯೊಂದಿಗೆ ಕೂಲಿನಾಲಿ ಆಸರೆ. ಊರಿನ ಕೆಲ ಕರುಣಾಳುಗಳ ನೆರವಿನ ಬೆಂಬಲ. ಜನರ ಕರುಣೆ ತಂದಿತ್ತ ಧೈರ್ಯ. ಮನಸ್ಸಿನ ನೆಮ್ಮದಿಗೆ ತಾಯಿಯಿಂದ ಕಲಿತ ತತ್ವಪದಗಳ ಹಾಡಿಕೆ. ಇದ್ದುದನ್ನು ಬಿಟ್ಟು ಇರದುದರೆಡೆಗೆ ತುಡಿಯದ ಜೀವನ.

ಊಟ, ತಿಂಡಿ, ನಿದ್ರೆ ಎಲ್ಲವೂ ಆ ಕಸದ ರಾಶಿ ಮಧ್ಯದಲ್ಲಿ!ಊಟ, ತಿಂಡಿ, ನಿದ್ರೆ ಎಲ್ಲವೂ ಆ ಕಸದ ರಾಶಿ ಮಧ್ಯದಲ್ಲಿ!

ಮೂವರು ಮಕ್ಕಳನ್ನು (ಮುನೆಂಕಟಮ್ಮ, ಗೌರಮ್ಮ, ಶ್ರೀನಿವಾಸ) ದೊಡ್ಡ ಓದು ಓದಿಸಲಾಗದಿದ್ದರು ಒಳ್ಳೆಯ ನಡವಳಿಕೆ ಕಲಿಸಿದ್ದು ದೊಡ್ಡ ಓದಿಗಿಂತ ಹೆಚ್ಚಿನದು. ಅವರಿಗೆ ಗುರುವಾಗಿ ಕಲಿಸಿದ್ದು ತತ್ವಪದಗಳನ್ನು. ಇಂದಿಗೂ ಅವರು ತಾಯಿಯ ಜೊತೆ ಕುಳಿತು ಹಾಡುತ್ತಾರೆ. ಹಿಂದೆ ವೆಂಕಟಮ್ಮ ಊರೂರಿಗೆ ಹೋಗಿ ಹಾಡಿದಂತೆಯೇ ಇವರೂ ಹೋಗಿ ದೇವಾಯಗಳಲ್ಲಿ ಹಾಡುತ್ತಾರೆ. ದೋಬಿ ಸೀನಪ್ಪ ಎಂದು ಕರೆಸಿಕೊಳ್ಳುವ ಶ್ರೀನಿವಾಸ ಭಜನೆ, ಪಂಢರ ಭಜನೆ, ತತ್ವಪದ ಹಾಡುವುದಲ್ಲದೆ ಸಾಸಲು ಚಿನ್ನಮ್ಮ ಕೇಳಿಕೆಯಲ್ಲಿ ವೇಷ ಕಟ್ಟುತ್ತಾರೆ. ಈ ವಯಸ್ಸಿನಲ್ಲಿಯೂ ವೆಂಕಟಮ್ಮ ತತ್ವಪದಗಳನ್ನು ನೆನಪಿಟ್ಟುಕೊಂಡು ಹಾಡುತ್ತಾರೆ.

Do you want to know secret of good health of this Supercentenarian

ವಯಸ್ಸಿನ ಪರಿಣಾಮದಿಂದಾಗಿ ಕಣ್ಣು ಕಾಣಿಸದು. ನೂರರ ಹತ್ತಿರವಿದ್ದಾಗ ಮನೆ ಛಾವಣಿಯ ಮೇಲಿಂದ ಬಿದ್ದು ಕಾಲು ಊನವಾಗಿ ನಡೆಯಲಾಗದು. ಆದರೆ ಬೆಳಗೆದ್ದು ಮುಖ ತೊಳೆದು, ಹಣೆಗೆ ವಿಭೂತಿ ಬೊಟ್ಟಿಟ್ಟು ಮನೆಯವರು ಅಂಗಳದಲ್ಲಿ ಕೂಳಿಸಿದಾಗ ಸೂರ್ಯನಮಸ್ಕಾರ ಮಾಡುತ್ತಾರೆ. ಇದು ತಪ್ಪದ ದಿನಚರಿಗಳಲ್ಲೊಂದು. ಈಕೆ ಎಂಥ ಅದೃಷ್ಟವಂತೆಯೆಂದರೆ ಮನೆಯವರಾರೂ ಈಕೆಯ ಆರೈಕೆಯಲ್ಲಿ ಅಸಡ್ಡೆ ತೋರುವುದಿಲ್ಲ. ಕೊಂಚವೂ ಅಗೌರವ ತೋರುವುದಿಲ್ಲ. ತಮ್ಮ ಹಿರಿಯರನ್ನು ವೃದ್ಧಾಶ್ರಮಗಳಿಗೆ ಬಿಡುವವರು ಈ ಕುಟುಂಬದಿಂದ ಪಾಠ ಕಲಿಯಬೇಕು. ಇದು ತುಂಬು ಆರೋಗ್ಯವಂತ ಜೀವ. ಇದಕ್ಕೆ ಕಾರಣ ಕಷ್ಟದಲ್ಲಿಯೂ ನೆಮ್ಮದಿ ಕಳೆದುಕೊಳ್ಳದೆ ಜೀವನ ನಡೆಸಿದ್ದು.

ಮಲ್ಲಿಗೆ ಹೂವಿನ ಪರಿಮಳದಲ್ಲಿ ತಣಿಯುವ ಮಳೆಯ ಹನಿಮಲ್ಲಿಗೆ ಹೂವಿನ ಪರಿಮಳದಲ್ಲಿ ತಣಿಯುವ ಮಳೆಯ ಹನಿ

ಈಗ ಜೀರ್ಣಶಕ್ತಿ ಕಡಿಮೆಯಾಗಿದ್ದು ಮಧ್ಯಾಹ್ನ ಒಂದು ರಾಗಿಮುದ್ದೆಯಷ್ಟೆ ಹೊಟ್ಟೆಗೆ ಆಹಾರ. "ಮುದ್ದಲು ಮುದ್ದಲು ಸಂಗಿಟಿ ತಿನಿ, ಮಾದಲು ಮಾದಲು ಬಟ್ಟಲುದಿಕಿನ ಜೀವಮು. ರೋಗಾಲೆಂದು ಕೊಸ್ತಾಯಿ" (ಮುದ್ದೆಗಳು ಮುದ್ದೆಗಳು ಉಂಡು, ಮೂಟೆ ಮೂಟೆ ಬಟ್ಟೆಗಳನ್ನು ಒಗೆದ ಜೀವ. ರೋಗಗಳು ಯಾಕೆ ಬರುತ್ತವೆ) ಎಂದು ದುಡಿಮೆಯಿಂದ ಆರೋಗ್ಯ ಎಂಬ ತತ್ವವನ್ನು ಕಿವಿಮಾತಾಗಿ ಹೇಳುತ್ತಾಳೆ.

ಈ ಅಜ್ಜಿಯ ದೊಡ್ಡ ಗುಣವೆಂದರೆ ತನ್ನ ಜೀವಮಾನದಲ್ಲಿ ಯಾರನ್ನೂ ಒಂದೂ ಕೆಟ್ಟ ಮಾತನಾಡದ್ದು. ವೆಂಕಟಮ್ಮ ಒಂದು ಕೆಟ್ಟ ಮಾತಾಡಿದ್ದನ್ನು ನಾವು ಕೇಳಿಯೇ ಇಲ್ಲ ಎಂದು ಊರಿನವರು ಹೇಳುವುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ. ನನಗೆ ಈ ಮಾತಿನಲ್ಲಿ ಅನುಮಾನ ಬಂದು, ಸೊಸೆಯಾದವಳು ಇದೇ ಮಾತು ಹೇಳಿದರೆ ನಂಬಬಹುದೆಂದು ಆಕೆಯನ್ನು ಬೇರೊಂದು ದಿನ ಭೇಟಿ ಮಾಡಿ, ಎಲೆಯಡಿಕೆ ಕೊಟ್ಟು ನಂಬಿಕೆಯುಂಟುಮಾಡಿ, ನಿನ್ನ ಅತ್ತೆ ಬೈದುದು, ಕಾಟಕೊಟ್ಟಿದ್ದು ಉಂಟೆ ಎಂದು ಕೇಳಿದೆ. ಆಕೆ ದೇವರ ಮೇಲೆ ಆಣೆಯಿಟ್ಟು ಹಾಗೆಂದೂ ನಡೆದುಕೊಂಡಿಲ್ಲವೆಂದು ಹೇಳಿದಳು. ಆ ಹಿರಿಯ ಜೀವವನ್ನು ಹೀಗೆ ಅನುಮಾನಿಸಿದ್ದಕ್ಕೆ ನನಗೆ ನಾಚಿಕೆಯಾಯಿತು.

Do you want to know secret of good health of this Supercentenarian

ಎಳೆ ವಯಸ್ಸು, ಕಡುಬಡತನ, ಮೂರು ಕಂದಮ್ಮಗಳ ಆರೈಕೆ ಸುಲಭವಲ್ಲ. ಮನಸ್ಸು ಕೊಂಚ ದುರ್ಬಲವಾದರೂ ಬದುಕೇ ಕೊನೆಗೊಳ್ಳುವಂತಹ ಸಂದರ್ಭ. ಆಗ ಈ ನತದೃಷ್ಟ ಜೀವಕ್ಕೆ ಕಂಡಿದ್ದು ದುಡಿಮೆ. ಈ ಅನಕ್ಷರಸ್ಥೆಗೆ ಯಾವ ದಾರ್ಶನಿಕನೂ ಇದನ್ನು ಬೋಧಿಸಿದ್ದಿಲ್ಲ. ಬದುಕುವ ಅಗತ್ಯತೆ, ಜವಾಬ್ದಾರಿ ನಿರ್ವಹಿಸುವ ಅರಿವು ಆಕೆಯಲ್ಲಿಯೇ ಬೆಳಗಿದ ಬೆಳಕಾಗಿತ್ತು. ದುಡಿಮೆಗೆ ಕಷ್ಟಗಳನ್ನು ಪರಿಹರಿಸುವ ಶಕ್ತಿಯಿದೆ ಎಂಬ ವಿಶ್ವಾಸ ಆಕೆಯ ಕೈ ಹಿಡಿದು ನಡೆಸಿತು. ಅದು ನಡೆಸಿದ ದಾರಿಯಲ್ಲಿ ನಡೆದು ಗುರಿ ಮುಟ್ಟಿದಳು. ಗೆದ್ದಳು. ಧೈರ್ಯ, ದುಡಿಮೆ, ಸಜ್ಜನಿಕೆ ಕಷ್ಟಗಳ ಕಡಲಿನಿಂದ ದಡಕ್ಕೆ ಒಯ್ಯುತ್ತವೆ ಎಂಬುದು ಆಕೆಯ ಜೀವನ ನಮಗೆ ಕಲಿಸುವ ಪಾಠ.

ವೆಂಕಟಮ್ಮನವರು ಸಾಮಾನ್ಯ ಬದುಕಿನ ಸಾಮಾನ್ಯ ವ್ಯಕ್ತಿ. ಆದರೆ ಜೀವನ ರೀತಿ ಆದರ್ಶದ್ದು. ತನ್ನದು ದೊಡ್ಡ ಬದುಕು ಎಂದು ತಿಳಿಯದೆಯೇ ಬದುಕುವ, ನಮ್ಮ ಅಕ್ಕಪಕ್ಕವೇ ಇರುವ ಇಂತಹವರನ್ನು ಕಾಣದ ಕುರುಡರಾಗಿ ಯಾರು ಯಾರನ್ನೋ ಕುಡುಕುವ ನಾವು ನಿಜಕ್ಕೂ ಬೆಪ್ಪರೇ.

English summary
This Supercentenarian lost her husband at the age of 16. By that time she had given birth to two and another in the womb. Still she faught the odds, has been leading fruitful life in Kashettipalli, Srinivasapura, Kolar. Human interest story by Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X