• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರೆತ ನಾಗದಾಳಿ ಹಣ್ಣಿನ ನೆನಪುಗಳ ಗುಚ್ಛ

By ಸ. ರಘುನಾಥ, ಕೋಲಾರ
|

ಪ್ರಕೃತಿ ತಿನ್ನುವ, ತಿನ್ನಬಾರದ ಹಣ್ಣುಗಳನ್ನು ತನ್ನ ಮಡಿಲ ಸಸ್ಯಗಳಲ್ಲಿ ತುಂಬಿಸಿರುತ್ತದೆ. ಇಂಥವನ್ನು ಬಳಸುವ, ಬಳಸದಿರುವ ವಿವೇಚನೆ ನಮಗೆ ಸೇರಿದ್ದು. ತಿನ್ನುವ ಹಣ್ಣುಗಳಿಗೆ ಅವುಗಳದೇ ಆದ ರೂಪ, ಬಣ್ಣ, ರುಚಿ, ಗಂಧಗಳಿರುವಂತೆ ತಿನ್ನಬಾರದ ಹಣ್ಣುಗಳಿಗೂ ನಿಸರ್ಗ ಪ್ರಸಾದಿಸಿರುತ್ತದೆ.

ಮನುಷ್ಯನಿಗೆ ಹಿತವಲ್ಲದ ಹಣ್ಣುಗಳು ಪ್ರಾಣಿಪಕ್ಷಿಗಳಿಗೆ ಆಹಾರವೂ ಹಿತವೂ ಆಗಿರುತ್ತವೆ. ಯಾವ ಜೀವಿಗೂ ಬೇಕಿಲ್ಲದವು ಪರಿಸರದ ಚಲುವಿಗೋ ಸಮತೋಲನೆಗೋ ಅಗತ್ಯವಾಗಿರುತ್ತವೆ. ಅಲ್ಲದೆ ಅಂತಹವುಗಳಲ್ಲಿ ನಾವು ತಿಳಿಯದ ಔಷಧೀಯ ಗುಣಗಳೂ ಇದ್ದಾವು.

ಬೊಚ್ಚುಬಾಯಲ್ಲೂ ಜೊಲ್ಲುಕ್ಕಿಸುವ ಆಳಂಬೆ ಮಸಾಲೆ ಸಾರು

ಉದಾಹರಣೆಗೆ, ಹಣ್ಣೆಣಿಸಿಕೊಳ್ಳದ ಎಕ್ಕದ ಕಾಯಿ ಬಲಿತು ಒಣಗಿ ಸಿಡಿದಾಗ, ಅದರಿಂದ ಹೊರಹೊಮ್ಮುವ ಬೀಜಸಹಿತವಾದ ಚಿತ್ತಾರದ ಹತ್ತಿ ಗಾಳಿಯಲ್ಲಿ ತೇಲಿ ಹೋಗುವುದು ಪುಟ್ಟ ಬಿಳಿಚಿಟ್ಟೆಯಂತೆ ಕಂಡು ಮನಸ್ಸಿಗೆ ಮುದನೀಡುತ್ತದೆ. ಮಕ್ಕಳು ಅದನ್ನು ಹಿಡಿವ ಆಟವಾಡುತ್ತಾರೆ. ಇದರಿಂದ ತನ್ಮಯತೆಯ ಕಲಿಕೆಯೂ ನಡೆಯುತ್ತದೆ. ಬೂರುಗದ ಕಾಯಿಯೂ ಇದರಂತೆಯೇ.

ಕ್ಷಣಾರ್ಧದಲ್ಲಿ ಬಾಯಲ್ಲಿ ನೀರೂರಿಸುವ ಹುಣಸೆರಾಯನ ಮಹಾತ್ಮೆ!

ಕೃಷಿಯಿಂದ ಬೆಳೆಸುವ ಹಣ್ಣುಗಳು ನಮಗೆ ಅಂನ್ನಾಂಗಗಳು, ಜೀವಸತ್ವಗಳನ್ನು ಒದಗಿಸುವಂತೆಯೇ, ಬೆಳೆಸದ ಹಣ್ಣುಗಳು ಅಂದರೆ ಕಾಡುಹಣ್ಣುಗಳೂ ಖನಿಜ, ರಂಜಕ, ಕಬ್ಬಿಣ ಮುಂತಾದವನ್ನು ಒದಗಿಸುತ್ತವೆ. ಇದನ್ನು ಹಳ್ಳಿಗರು(ಜನಪದರು) ಚೆನ್ನಾಗಿ ಬಲ್ಲರು. ಬಲ್ಲರಷ್ಟೇ ಅಲ್ಲ, ಬಳಸುವವರೂ ಆಗಿದ್ದಾರೆ.

ಬಡವರ ಪಾಲಿನ ಆರೋಗ್ಯ ವರ್ಧಕಗಳು

ಬಡವರ ಪಾಲಿನ ಆರೋಗ್ಯ ವರ್ಧಕಗಳು

ಕುರುಟಿ, ಕಾಚಿ, ಕಾರೆ, ಈಚಲು, ಮಿಂಡಿ, ಚಿಟ್ಟುಂಡೆ, ಎಲ(ಳ)ಚಿ ಅಥವಾ ಬೋರೆ, ಬುಡಮೆ, ಬುಡ್ಡೆ ಮುಂತಾದವು ಅಂತಹ ಹಣ್ಣುಗಳಾಗಿವೆ. ನಿಕೃಷ್ಟ ಅನ್ನಿಸುವ ಗಬ್ಬು (ಲಂಟಾನ) ಹಣ್ಣು ಸಹ ಬಾಯಿ ಚಪ್ಪರಿಕೆಗೆ ಬರುತ್ತದೆ. ತಿನ್ನುವಾಗ ಕಾಡುವ ಅಂಟಿನ ಚಳ್ಳೆ ಹಣ್ಣು ಪ್ರಿಯವಾಗುತ್ತದೆ. ಕರಿಬೇವಿನ ಹಣ್ಣನ್ನು ಚಪ್ಪರಿಸುವವರೆಗೆ ಸಮೃದ್ಧ ಖನಿಜಾಂಶ ಮೈಸೇರುತ್ತದೆ. ಪ್ರಾಕೃತಿಕ ಹಣ್ಣುಗಳಲ್ಲಿ (ಸಿ) ಅನ್ನಾಂಗ ಅಧಿಕ. ಇವು ಬಡವರ ಪಾಲಿಗಂತೂ ಆರೋಗ್ಯ ವರ್ಧಕಗಳು. ಜೊತೆಗೆ ಸಣ್ಣ ಪ್ರಮಾಣದ ಆರ್ಥಿಕ ಮೂಲವೂ ಆಗಿವೆ.

ನಾಗದಾಳಿ ಹಣ್ಣು ತಿನ್ನುವ ಮುನ್ನ ಎಚ್ಚರ

ನಾಗದಾಳಿ ಹಣ್ಣು ತಿನ್ನುವ ಮುನ್ನ ಎಚ್ಚರ

ಇವುಗಳ ನಡುವೆ ನೋಡಲು ಸುಂದರವೂ ಆದರೆ ತಿನ್ನಲು ಅತ್ಯಂತ ಎಚ್ಚರಿಕೆ ವಹಿಸಬೇಕಾದ ಹಣ್ಣುಗಳಲ್ಲಿ ನಾಗದಾಳಿಯೂ ಒಂದು. ಇದರ ಹೆಸರೇ ಸೂಚಿಸುವಂತೆ ಇದರ ದೊಡ್ಡದೊಡ್ಡ ಮುಳ್ಳುಗಳು ನಾಗರ ಕೋರೆಯನ್ನು ಹೋಲುತ್ತವೆ. ದೊಡ್ಡ ಮುಳ್ಳು ಜೊತೆಜೊತೆ ಸೂಕ್ಷ್ಮವಾದ ಗುಚ್ಚ ಮುಳ್ಳುಗಳಿರುತ್ತವೆ. ಹಣ್ಣಿನ ಮೇಲು ಸಣ್ಣ ಮುಳ್ಳಿನ ದ್ವೀಪಗಳಿರುತ್ತವೆ ಆದುದರಿಂದ ಅನುಭವಿಗಳು ಮಾತ್ರ ಅಪಾಯವಿಲ್ಲದೆ ಕೀಳಬಲ್ಲರು.

ರಕ್ತವೃದ್ಧಿಯ ಹಣ್ಣೆಂದು ಹಳ್ಳಿಯಲ್ಲಿ ಜನಜನಿತ

ರಕ್ತವೃದ್ಧಿಯ ಹಣ್ಣೆಂದು ಹಳ್ಳಿಯಲ್ಲಿ ಜನಜನಿತ

ಹೂವಿನೊಂದಿಗೇ ಹೀಚು ಹುಟ್ಟುತ್ತದೆ. ಕಾಯಿಯದು ಬೂದು ಹಸಿರು ಬಣ್ಣ. ಬಲಿತ ಹಾಗೆಲ್ಲ ಬುಡದ ಭಾಗದಿಂದ ಕೆಂಪೇರುತ್ತ ಹೋಗುತ್ತದೆ. ಇದು ರಕ್ತವೃದ್ಧಿಯ ಹಣ್ಣೆಂದು ಹಳ್ಳಿಗರಲ್ಲಿ ಜನಜನಿತವಾಗಿದೆ. ಆದರೆ ಮುಳ್ಳುಗಳ ಕಾರಣದಿಂದಾಗಿ ಇದನ್ನು ಕಿತ್ತು ತಿನ್ನುವುದು ಸುಲಭವಲ್ಲ. ಕಿತ್ತ ಮೇಲೆ ಅದರ ಮೇಲಿನ ಅತಿಸಣ್ಣ ಮುಳ್ಳುಗಳು ಹೋಗಲು ಕಲ್ಲಿನ ಮೇಲೆಯೊ ಇಲ್ಲವೆ ಹುಲ್ಲಿನ ಮೇಲೆ ಉಜ್ಜುತ್ತಾರೆ. ಹೀಗೆ ಉಜ್ಜುವಾಗ ಸಣ್ಣ ಮುಳ್ಳುಗಳು ಹಣ್ಣಿನ ಒಳಗೆ ಸೇರಬಾರದು. ನಂತರ ಹಣ್ಣಿನ ತಲೆಯ ಭಾಗವನ್ನು ಕತ್ತರಿಸಬೇಕು. ಈಗ ಅದರಲ್ಲಿರುವ ಗಂಟಲು ಮುಳ್ಳು (ತಲೆಯ ಭಾಗದಲ್ಲಿ ಚಕ್ರಕಾರದ ಮುಳ್ಳಿರುತ್ತದೆ ಇದೆ ಗಂಟಲು ಮುಳ್ಳು) ಇದನ್ನು ಪರೀಕ್ಷಿಸಿಯೇ ತಿನ್ನಲು ಕೊಡುತ್ತಾರೆ. ಒಳಗೆ ಬೀಜಸಹಿತವಾದ ರಕ್ತ ವರ್ಣದ ತಿರುಳು ಮತ್ತು ರಸ ಸಿಹಿಯಾಗಿರುತ್ತದೆ. ದೋರೆಯಲ್ಲಿ ಕೊಂಚ ಹುಳಿ ರುಚಿ ಇರುತ್ತದೆ.

ನೆಲ್ಲಿ, ನೇರಳೆಯಂತಹ ಹಣ್ಣುಗಳಿಂದ ರಸ

ನೆಲ್ಲಿ, ನೇರಳೆಯಂತಹ ಹಣ್ಣುಗಳಿಂದ ರಸ

ನನ್ನ ವೃತ್ತಿ ನಿವೃತ್ತಿಗೂ ಮುಂಚೆ ಇಂಥ ಕೆಲಸಗಳಿಗೆ ಒಗ್ಗುವಂತಹ ವಿದ್ಯಾರ್ಥಿಗಳ (ಎಲ್ಲರೂ ಹಳ್ಳಿ ಮಕ್ಕಳೇ) ತಂಡವನ್ನು ಕಟ್ಟಿ, ತರಬೇತುಗೊಳಿಸಿದ್ದೆ. ಶಾಲೆಯಲ್ಲಿ ನೆಲ್ಲಿ, ನೇರಳೆಯಂತಹ ಹಣ್ಣುಗಳಿಂದ ರಸ (ದ್ರಾಕ್ಷಿಯಿಂದ ವೈನ್ ತಯಾರಿಸುವಂತೆ) ತಯಾರಿಸುತ್ತಿದ್ದೆವು. ಅದರಂತೆ ನಾಗದಾಳಿಯಿಂದಲೂ ತಯಾರಿಸಲಾದೀತೆ ಎಂದು ಚರ್ಚಿಸಿ, ಧೈರ್ಯ ಮಾಡಿ ತಯಾರಿಸಿದೆವು.

ಮೊದಲ ಪ್ರಯೋಗ ನನ್ನ ಮೇಲೆ

ಮೊದಲ ಪ್ರಯೋಗ ನನ್ನ ಮೇಲೆ

ಹೀಗೆ ಹೊಸದಾಗಿ ಏನೇ ತಯಾರಿಸಿದರೂ ಮೊದಲಿಗೆ ಅದರ ಪ್ರಯೋಗವಾಗುತ್ತಿದ್ದುದು ನನ್ನ ಮೇಲೆ. ಏಕೆಂದರೆ ಮಕ್ಕಳಿಗೆ ತೊಂದರೆ ಆಗಬಾರದೆಂದು. ಇಪ್ಪತ್ತನಾಲ್ಕು ಗಂಟೆಗಳಲ್ಲಿ ನನಗೇನೂ ಅಡ್ಡ ಪರಿಣಾಮಗಳಾಗದಿದ್ದರೆ ಮಕ್ಕಳಿಗೆ ಕೊಡುತ್ತಿದ್ದೆ. ನಾಗದಾಳಿ ಹಣ್ಣಿನ ರಸ ಕೊಂಚ ಹುಳಿಯಾಗಿತ್ತು. ನನಗೆ ಅಸಿಡಿಟಿ ಸಮಸ್ಯೆ ಇದ್ದುದರಿಂದ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿತ್ತಷ್ಟೆ.

ಮಕ್ಕಳು ರುಚಿ ಅನುಭವಿಸಿ ಖುಷಿಪಟ್ಟರು

ಮಕ್ಕಳು ರುಚಿ ಅನುಭವಿಸಿ ಖುಷಿಪಟ್ಟರು

ನಾಗದಾಳಿ ಹಣ್ಣಿನ ರಸವನ್ನು ಮಕ್ಕಳು ಕುಡಿದರು. ಯಾರಿಗೂ ಯಾವ ಕೆಡುಕೂ ಆಗಲಿಲ್ಲ. ರಕ್ತ ವೃದ್ಧಿಯಾಯಿತೆ ಎಂದು ಪರೀಕ್ಷಿಸುವ ಅವಕಾಶ, ಅನುಕೂಲ ಆ ಹಳ್ಳಿ ಶಾಲೆಯಲ್ಲಿರಲಿಲ್ಲ. ಆದರೆ ಮಕ್ಕಳು ರುಚಿಯನ್ನು ಅನುಭವಿಸಿ ಖುಷಿಪಟ್ಟರು. ಮಾನವನ ಆಹಾರ, ಪಾನೀಯಗಳ ಅಭಿಲಾಷೆಗಳಲ್ಲಿ ರುಚಿಯೂ ಪ್ರಧಾನವಾದುದೇ ತಾನೆ.

English summary
Nature has many surprises in it's kitty. Several fruits naturally grown in the forest or villages, which city people don't even know, are used and consumed by village people. Sa Raghunatha introduces one such wonderful, tasty fruit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X