ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ನೋಟದಲ್ಲೇ ನನ್ನ ಮನಸು ಹಿಡಿದಿಟ್ಟ ಚಂದನಗಂಧಿ ಶಕುಂತಲೆಗೆ

|
Google Oneindia Kannada News

ಪ್ರಿಯ ಶಕುಂತಲೇ ಕುಶಲವೆ?

ನನ್ನ ಕುಶಲದ ಗುರುತಾಗಿ ಈ ಓಲೆ.

ನೀನು ರೈಲು ಹತ್ತಿ, ಗಾರ್ಡ್ ಪೀಪಿಯೂದಿ, ಚಾಲಕ ಬೋಂ ಎಂದು ಕೂಗಿಸಿದಾಗ ನನ್ನಲ್ಲಿ ಏನಂಥ ವಿಶೇಷವೆಂದು ಮೆಚ್ಚುಗೆ ಮತ್ತು ಪ್ರೀತಿ ತಳೆದೆ ಎಂದು ನಮ್ಮ ಅನೇಕ ಭೇಟಿಗಳ ನಂತರ ಹೂವು, ಕಟ್ಟುವ ಬೆರಳುಗಳ ನಡುವಿನ ಮಾತಿನಂತೆ ಕೇಳಿದ್ದು ರೈಲಿನ ಅರಚಿನ ನಡುವೆಯೂ ನಿನ್ನ ಧ್ವನಿಯ ಏರಿಳಿತಗಳೊಂದಿಗೆ ಸ್ಪಷ್ಟವಾಗಿ ಕೇಳಿಸಿತು.

ನಾನು ಹೇಳಲು ತುಟಿ ಅಲುಗಿಸಿದಾಗ, ನೀನು ಆಲಿಸಲು ಗಮನವೆಲ್ಲ ಕಿವಿಗೆ ತಂದಾಗ ಚಲಿಸಿಬಿಟ್ಟಿತು ರೈಲು. ಇದು ಒಂದು ರೀತಿಯಲ್ಲಿ ಅನುಕೂಲವೇ ಆಯಿತು. ಆಗ, ನೀನು ಆಡಿದ ಮಾತು ಅನಿರೀಕ್ಷಿತ. ಆ ಅನಿರೀಕ್ಷಿತದಲ್ಲಿ ನನ್ನ ಮಾತು ಕೇಳುವುದಾಗಿದ್ದಲ್ಲಿ ಅದು ಸಹಜ ನಿಜದ್ದಾಗಿರುತ್ತಿತ್ತು ಅನ್ನಲಾರೆ. ಆಗಿದ್ದರೂ ಪೂರ್ಣವಾಗಿರುತ್ತಿತ್ತು ಎಂದು ಹೇಳಲಾರೆ. ಹೊರಗಿನ ಶಬ್ದಗಳು ಅನನುಕೂಲಿ ಆಗಿದ್ದರೂ ಒಮ್ಮೊಮ್ಮೆ, ಅನುಕೂಲಿಯಾಗುವುದು ಅನ್ನುವುದಕ್ಕೆ ಈ ಪ್ರಸಂಗ ಸಾಕ್ಷಿ.

'ನನ್ನ ಪ್ರೀತಿಯ ಕಾಪಾಡೊ ಗೊವಿಂದ' ದೇವರಿಗೆ ಯುವತಿ ಪತ್ರ'ನನ್ನ ಪ್ರೀತಿಯ ಕಾಪಾಡೊ ಗೊವಿಂದ' ದೇವರಿಗೆ ಯುವತಿ ಪತ್ರ

ಶಕುಂತಲೇ, ನಿನ್ನ ಬೀಳ್ಕೊಡುಗೆ ಸಮಯದಲ್ಲಿ ನೀನಾಡಿದ್ದರಲ್ಲಿ ಉತ್ತರಕ್ಕೆ ಪ್ರಶ್ನೆಯೂ ಇತ್ತು, ಮನಸ್ಸಿನ ಭಾವಕ್ಕೆ ಹಿತವೆನಿಸುವ ಮಾತಿನ ನಿರೀಕ್ಷೆಯೂ ಇತ್ತು ಅನ್ನಿಸುವುದು. ಈ ಎರಡಕ್ಕೂ ತಕ್ಕ ಹಾಗೆ ಯೋಚಿಸಿ ಹೇಳಲು ಈಗ ಸಮಯವೂ ಸಿಕ್ಕಿದೆ. ಅಂದರೆ, ಯೋಚಿಸಿ ಹೇಳುವುದಾದರೆ ಅದು ಪ್ರೀತಿಯ ಮಾತು ಹೇಗಾದೀತೆಂದು ನೀನು ಆಕ್ಷೇಪಿಸುವಿಯೇನೊ? ಅನಿರೀಕ್ಷಿತವಾದುದಕ್ಕೆ ಅನಿರೀಕ್ಷಿತವಾಗಿಯೇ ಹೇಳಲಾಗದಲ್ಲವೆ? ಮಾತನ್ನು ಹೀಗೆ ವೈಚಾರಿಕಗೊಳಿಸುವುದು ಬೇಡ. ಮುಗ್ಧ ಪ್ರೇಮಿಯಾಗಿ ನುಡಿಯುವುದರಲ್ಲಿ ಸುಗಂಧವಿರುತ್ತೆ.

Columnist Sa Raghunatha love letter series 2

ಶಕುಂತಲೇ, ನನ್ನನ್ನು ಮೆಚ್ಚಿಸಿದ್ದು ಏನೆಂದು ನೆನಪಿಸಿಕೊಂಡೆ. ಪ್ರಶ್ನೆಗಳು ಹುಟ್ಟಿದವು. ನಿನ್ನ ನೀಳ ಜಡೆಯನ್ನೆ? ಅಂದು ನೀ ಮುಡಿದಿದ್ದ ಮಲ್ಲಿಗೆ ಮೊಗ್ಗಿನ ದಂಡೆಯೆ? ಕಣ್ಮನ ಎರಡನ್ನೂ ಸೆಳೆದ ನಿನ್ನ ವಿಗ್ರಹವೆ? ನಿಜ ಹೇಳುತ್ತೇನೆ ಈ ಎಲ್ಲವೂ. ನಿನ್ನ ಮನಸ್ಸು ಎನ್ನಲು ಅಂದಿಗೆ ನಿನ್ನೊಡನೆ ಒಂದೂ ಮಾತೂ ಆಡಿರಲಿಲ್ಲ. ಹಾಗಾಗಿ ಆಕರ್ಷಣೆಯೇ ಮೊದಲ ಮೆಚ್ಚುಗೆಗೆಗೆ ಕಾರಣ.

ನಿನ್ನ ಕಣ್ಣನ್ನು ನೋಡಿದಾಗ 'ನಿನ್ನ ಕಣ್ಣ ಕಾಡಿಗೆ ಕತ್ತಲಲಿ, ಹಗಲು ಇರುಳಾಯಿತು' ಎಂಬ ಕವಿಯ ಹಾಡಿನ ಭಾವ ನನ್ನ ಮಟ್ಟಿಗೆ ನಿಜವೇ ಅನ್ನಿಸಿತು. ನಿನ್ನ ಕಣ್ಣುಗಳು ಬೀರಿದ ಬೆಳಕಿನಲಿ ನನ್ನ ಪ್ರೀತಿಯನ್ನು ಕಂಡೆ. ಅದು ಮನಸ್ಸಿನಲ್ಲಿ ಬಾಡದ ಹೂವರಳಿಸಿತು. ಅದರ ಪರಿಮಳ ಜಲದಲ್ಲಿ ಮಿಂದೆ. ಮೆಚ್ಚಿದೆ, ಪ್ರೀತಿಸಿದೆ. ಇದು ಅಂದು ನೀನು ಮುಡಿದಿದ್ದ ಮಲ್ಲಿಗೆ ಮೊಗ್ಗಿನ ದಂಡೆಯ ಚೆಲುವು ಮತ್ತು ಪರಿಮಳದಾಣೆಗೂ ಸತ್ಯ.

ತನ್ನಡಿಯ ಮಲ್ಲಿಗೆ ಹೂ ಮೇಲೆ ಪಾರಿಜಾತ ಉದುರಿ ಹೊಮ್ಮಿದ ವಿಶಿಷ್ಟ ಸೌರಭ ತುಂಬಿಕೊಂಡ ಕೋಮಲ ಮನಸ್ಸಿನ ನನ್ನ ಶಕುಂತಲೇ, ನಮ್ಮ ಮದುವೆ ಮುಂದೂಡಿದ ಮಾತು ಕೇಳಿ ನಿನ್ನೆದೆಯ ಆತಂಕವನ್ನು ನಿನ್ನ ಕಣ್ಣುಗಳಲ್ಲಿ ಕಂಡೆ. 'ಹುಣ್ಣಿಮೆ ಹೆಣ್ಣಾದ'ವಳೇ ಭಯ ಬೇಡ. ನಮ್ಮಿಬ್ಬರ ನಡುವೆ ಕವಿಯದು ದೂರ್ವಾಸರ ಶಾಪದ ಕತ್ತಲೆ. ಕಳೆದುಕೊಳ್ಳಲು ನಾನು ಉಂಗುರ ಕೊಟ್ಟಿಲ್ಲ. ಕೊಟ್ಟಿರುವುದು ಮನಸ್ಸನ್ನು. ಅದು ಕಳೆದು ಹೋಗುವುದಿಲ್ಲ.

ಮದುವೆ ಮುಂದೂಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಇನ್ನಷ್ಟು ನನ್ನ ಪ್ರೇಮ ಭಾವನಾ ಸುಮಗಳಿಂದ ನಿನ್ನನ್ನು ಆರಾಧಿಸಬಹುದು. ನಿನ್ನ ಪ್ರೀತಿಯ ಚಂದನಗಂಧವ ನಿನ್ನ ಉಸಿರಾಟದ ಗಾಳಿ ನನ್ನೆದೆಗೆ ತರಬಹುದು.

ನನ್ನ ಚಂದನಗಂಧಿ ಶಕುಂತಲೇ, ನಮ್ಮಿಬ್ಬರ ದಿನಗಳಿಗಾಗಿ ನರಸಿಂಹಸ್ವಾಮಿಯವರ 'ಮಲ್ಲಿಗೆಯ ಮಾಲೆ' ಕವಿತೆಗಳನ್ನು ಓದುತ್ತಿರುವೆ. ನಿನಗೂ ಒಂದು ಪ್ರತಿಯನ್ನು ಕಳುಹಿಸಿರುವೆ.

English summary
Here is the columnist Sa Raghunatha love letter series 2. It will continue for a few weeks. He will express the intense love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X