ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ ರಘುನಾಥ ಅಂಕಣ: ಸುಮಲತ ಜೊತೆಗೂಡಿದ ಅಳಿಲು ಹಾಗೂ ತೊಗಲುಗೊಂಬೆಯಾಟ

By ಹಿಟ್ಟುಗೊಜ್ಜು
|
Google Oneindia Kannada News

ನಾಲಕ್ಕನೆಯ ದಿನ (19.12.2021) ಬೆಳಗ್ಗೆ ಎತ್ತ ಹೋಗುವುದೆಂದು ಆಲೋಚಿಸುತ್ತಿದ್ದಾಗ, ಫೋನು ಸದ್ದು ಮಾಡಿತು. ಶ್ರೀನಿವಾಸ, ತೊಗಲುಗೊಂಬೆ ಎಂಬ ಹೆಸರು ಕಾಣಿಸಿಕೊಂಡಿತು. ಆತನ ಮಗ ಚಲಪತಿಯನ್ನು 'ನಮ್ಮ ಮಕ್ಕಳು' ಮೂಲಕ ಓದಿಸುತ್ತಿದ್ದೆ. ಬಿ.ಕಾಂ.ಗೆ ಸೇರಿದ್ದ ಅವನಿಗೆ ಫೀಸು ಕಟ್ಟಬೇಕಿದ್ದುದು ನೆನಪಾಯಿತು. ಅದಕ್ಕಾಗಿ ಫೋನು ಮಾಡಿದ್ದಾನು ಎಂದು ಕರೆಯನ್ನು ಸ್ವೀಕರಿಸಿದೆ. ಚಲಪತಿಯ ಅಮ್ಮ ಸುಮಲತ 'ನಿನ್ನು ಸೂಡ್ಡಾನಿಕಿ ವಸ್ತುನ್ನಾಮು' (ನಿನ್ನನ್ನು ನೋಡಲು ಬರುತ್ತಿದ್ದೇವೆ) ಅಂದಳು. ಏಕೆ ಅಂದೆ. ತುಂಬಾ ದಿನಗಳಾದವು ನೋಡಿ ಅಂದಳು. ಬರುವುದಿದ್ದರೆ ಮುವ್ವರೂ ಬನ್ನಿ ಎಂದೆ. 'ಏಮನ್ನಾ ತೀಸುಕು ರಾವಾಲ?' (ಏನಾದರು ತರಬೇಕೆ?) ಅಂದಳು. ಏನೂ ಬೇಡ, ನೀವು ಬಂದರೆ ಸಾಕು ಎಂದೆ. ಎತ್ತ ಹೋಗುವುದೆಂಬ ಆಲೋಚನೆ ಮನಸ್ಸಿನಿಂದ ಅಳಿಸಿ ಹೋಯಿತು.

ಇಂತಹವರು ಮನೆಗೆ ಬರುವುದು ನನ್ನ ಹೆಂಡತಿಗೆ ಇಷ್ಟವಿಲ್ಲದ್ದು. 'ನಮ್ಮ ಮಕ್ಕಳು'ನಲ್ಲಿದ್ದವರು ಹಾಗು ಇವರಂತಹವರು ತನಗೆ ಸಲ್ಲಬೇಕಾದ ಹಣವನ್ನು ಸಲ್ಲದಂತೆ ಮಾಡುತ್ತಾರೆಂಬ ಭ್ರಮಿತ ಆರೋಪ ಮತ್ತು ತನ್ನವರಲ್ಲಿ ದೂರುವುದು ಇಪ್ಪತ್ತೇಳು ವರ್ಷಗಳಿಂದ ನಡೆಯುತ್ತಿತ್ತು. ಆಕೆಯ ಅಣ್ಣ, ಮಗಳು, ಅಳಿಯ, ಕಡೆಗೆ ಮೊಮ್ಮಗನೂ ಇದನ್ನೇ ಮಾಡುತ್ತಿದ್ದರು. ನನ್ನನ್ನು ತಡೆಯುವ, 'ನಮ್ಮ ಮಕ್ಕಳ'ನ್ನು ಬಿಟ್ಟುಬಿಡುವಂತೆ ಮಾಡುವ ಅವರ ಪ್ರಯತ್ನಗಳು ಗೆದ್ದಿರಲಿಲ್ಲ. ಆ ಮಕ್ಕಳಾಗಲಿ, ನಮ್ಮ ಮಕ್ಕಳು' ಮೂಲಕ ನೆರವು ಹೊಂದುವವರಾಗಲಿ ಮನೆಗೆ ಬರುಂತಿದ್ದರೆ ಆಕೆ ಮನೆಯಲ್ಲಿರದಿರುವುದನ್ನು ಶ್ರೀನಿವಾಸಪುರದಲ್ಲಿದ್ದಾಗಲೇ ಅಭ್ಯಾಸ ಮಾಡಿಕೊಂಡು ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಳು.

ಈ ದಿನವೂ ಮಗಳ ಮನೆಗೆ ಹೋಗುವ ಮೂಲಕ ಚಿಕ್ಕಬಳ್ಳಾಪುರದಲ್ಲಿಯೂ ತನ್ನ ನಿಲುವಿನಲ್ಲಿ ಬದಲಾವಣೆಯಿಲ್ಲವೆಂಬುದನ್ನು ಪ್ರಕಟಿಸಿದಳು. ಇದಕ್ಕೆ ನನ್ನಲ್ಲಿ ಎಂದಿಗೂ ಪ್ರತಿಕ್ರಿಯೆ ಇದ್ದುದಿಲ್ಲ. ಇಂದೂ ಅಷ್ಟೆ. ಆದರೆ ಹೀಗೆ ಬಂದವರಿಗೆ ಕಾಫಿಯೋ ಟೀಯೋ ಮಾಡಿಕೊಡುವ ಅವಕಾಶ, ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೆ. ನಾನೇ ಮಾಡಿಕೊಡುತ್ತ ಪಾತ್ರೆ ತೊಳೆದಿಡುತ್ತಿದ್ದರೂ ಯಾರು ಯಾರನ್ನೋ ಅಡುಗೆಮನೆಗೆ ಸೇರಿಸುತ್ತಾನೆ ಎಂಬ ಗೊಣಗು ಆರೋಪ ಇರುತ್ತಿತ್ತು. ಇದಕ್ಕೆ ನಾನೆಂದೂ ತಲೆಕೊಡಿಸಿಕೊಂಡವನಲ್ಲ. ಮನೆಗೆ ಬರುತ್ತಿದ್ದ ಇಂಥ ಜನ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಇದೂ ಒಂದುರೀತಿಯ ಅನುಕೂಲವೇ ಆಗಿತ್ತು.

Column: Squirrel accompanied by Sumalatha

ಹನ್ನೆರಡು ಗಂಟೆ ಹೊತ್ತಿಗೆ ಶ್ರೀನಿವಾಸ, ಸುಮಲತ ಮಗನೊಂದಿಗೆ ಬಂದರು. ಹೇಳಿಕೊಳ್ಳಲು ಸುಖಕ್ಕಿಂತ ಕಷ್ಟಗಳೇ ಹೆಚ್ಚು. ತೊಗಲುಗೊಂಬೆ ಆಡಿಸುವ ಕಷ್ಟ, ಆಟ ಆಡಿಸಲು ಹಳ್ಳಿಗಳಲ್ಲಿ ದಿನಗಟ್ಟಲೆ ಇರುತ್ತ ಕಾಯುವ ಕಷ್ಟವನ್ನು ತೋಡಿಕೊಂಡರು. ಗೊಂಬೆಯಾಡಿಸುವುದನ್ನು ಕೀಳೆಂದುಕೊಳ್ಳದೆ ಕಲಿತು ಆಡಿಸಿದರಷ್ಟೆ ಚಲಪತಿಯ ವಿದ್ಯಾಭ್ಯಾಸಕ್ಕೆ 'ನಮ್ಮ ಮಕ್ಕಳು' ನೆರವು ಸಿಗುವುದೆಂಬ ನನ್ನ ವಾಕ್ಕರಾರಿನಂತೆ ಅವನು ನಡೆದುಕೊಂಡು ಓದುತ್ತಿರುವುದಾಗಿ ಹೇಳಿದ್ದು ಸಂತೋಷ ತಂದಿತು.

ನನ್ನ ಉಸಿರಿದ್ದರೇ ನೀನು ಓದುವಷ್ಟು ಓದಬಹುದು. ಐಎಎಸ್, ಐಪಿಎಸ್, ಐಎಫ್ಎಸ್, ಸಿಎ ಯಾವುದಾದರೂ ಸರಿ ಮಾಡಬೇಕು. ಆದರೆ ತೊಗಲುಗೊಂಬೆ ಆಡಿಸುವುದನ್ನು ಬಿಡಬಾರದು ಎಂದೆ. ಮಾವನೋ ಬಿಡುವನೋ ಆಗಲಿ ಎನ್ನುವಂತೆ ತಲೆ ಆಡಿಸಿದ. ಅವರಿಗೆ ಆಸ್ತಿಯಾಗಿದ್ದ ಒಂದಿಷ್ಟು ಕುರಿಗಳ ಏಳಿಗೆಯನ್ನು ಕುರಿತು ಮಾತಾಡಿದೆವು. ಚಲಪತಿ ತನ್ನ ತಾಯಿಯ ಸ್ವೆಟರ್ ಜೇಬಿನಿಂದ ತಲೆ ಹೊರಚಾಚಿ ಪಿಳಿಪಿಳಿ ನೋಡುತ್ತಿದ್ದ ಅಳಿಲು ಮರಿಯ ಫೋಟೋ ತೋರಿಸಿದ, ನನ್ನ ಮೆಚ್ಚುಗೆ ಪಡೆಯವಯುವುದು ಅವನ ಉದ್ದೇಶವಾಗಿತ್ತು. ಇಂಥದಕ್ಕೊಂದು ಕಥೆ ಇರುವುದೆಂದು ನನ್ನ ಅನುಭವಕ್ಕೆ ತಿಳಿದಿತ್ತು. ಏನಿದರ ಕಥೆಯೆಂದೆ. ಮುವ್ವರೂ ಆ ಘಟನೆಯನ್ನು ಹಂಚಿಕೊಳ್ಳುತ್ತ ಹೇಳಿದರು.

ಮನೆಯ ಮುಂದಿನ ಹುಣಿಸೆಮರದಿಂದ ಇಳಿದ ತಪ್ಪಿಗೆ ನಾಯಿಯ ದಾಳಿಯಿಂದ ಕಂಗಾಲಾಗಿ ತಪ್ಪಿಸಿಕೊಂಡು ಮನೆಯೊಳಕ್ಕೆ ನುಗ್ಗಿಬಂದ ಅಳಿಲಿನ ಮರಿ ಹೆದರಿ ಹೊರಗೆ ಹೋಗಿರಲಿಲ್ಲ. ಹೆದರಕೆಯ ಜೊತೆಗೆ ಹಸಿವೆ ಬೇರೆ. ಸುಮಲತ ಪ್ಲೇಟಿನಲ್ಲಿ ಹಾಲು ಹಾಕಿ ಮುಂಡಿಟ್ಟಾಗ ಹೆದರಿಕೆ ಹುಟ್ಟಿದ ಅಳುಕಿನಲ್ಲಿ ಕುಡಿಯಲೊ, ಬೇಡವೊ ಎಂಬ ತಾಕಲಾಟದಲ್ಲಿ ಅಡಗಿದ್ದ ಜಾಗದಿಂದ ಸುಮಲತಳತ್ತಲೇ ನೋಡುತ್ತಿತ್ತು. ಆಕೆಯ ಕಣ್ಣುಗಲಲ್ಲಿದ್ದ ತಾಯ ಮಮತೆ ಧೈರ್ಯ ಕೊಟ್ಟಂತಿತ್ತು. ನಿಧಾನವಾಗಿ ತೆವಳಿ ಬಂದು, ಪೂರ್ಣವಾಗಿ ನಿವಾರಣೆಯಾಗದ ಅಳುಕಿನಿಂದ ಪ್ರಾಣರಕ್ಷಣೆಯ ಭರವಸೆಗಾಗಿ ಆಕೆಯತ್ತ ನೋಡುತ್ತ, ಅಪಾಯವಿಲ್ಲವೆಂದೆನಿಸಿ ಹಾಲು ಕುಡಿದು ಮೂಲೆಯಲ್ಲಿದ್ದ ಮೂಟೆಯ ಮರೆಗೆ ಹೋಯಿತು.

Column: Squirrel accompanied by Sumalatha

ಎರಡುಮೂರು ದಿನ ಹೋಗೆ ಕಳೆದು ಮೊದಲು ಸುಮಾಲತಾಳೊಂದಿಗೆ, ನಂತರ ಶ್ರೀನಿವಾಸ, ಚಲಪತಿಯೊಂದಿಗೆ ಹೊಂದಿಕೊಂಡತು. ಅವರ ಮನೆಯಲ್ಲಿದ್ದ ಬೆಕ್ಕಿಗೆ ಇದರ ಮೇಲೆ ಕಣ್ಣುಬಿದಿತ್ತು. ಇದನ್ನು ಅರಿತಿದ್ದ ಸುಮಲತಳಿಗೆ ಇದ್ದ ಕೆಲಸಗಳ ಜೊತೆಗೆ ಬೆಕ್ಕಿನಿಂದ ಅಳಿಲನ್ನು ರಕ್ಷಿಸುವ ಕೆಲಸವೂ ಸೇರಿತು. ಹೀಗಿರುವಾಗ ಅಳಿಲು ತನ್ನ ಸುರಕ್ಷತೆಗಾಗಿ ತಾನೇ ಕಂಡುಕೊಂಡ ಜಾಗ ಗೂಟಕ್ಕೆ ನೇತು ಹಾಕಿದ್ದ ಸುಮಲತಳ ಸ್ವೆಟರಿನ ಕಿಸೆ. ಅದರ ಗೂಡೂ ಅದೇ ಆಯಿತು. ಎಷ್ಟು ದಿನ ತಪ್ಪಿಸಿಕೊಂಡು ಅಲ್ಲಿರುತ್ತೀಯೋ ನೋಡುತ್ತೇನೆ ಎಂಬಂತೆ ಬೆಕ್ಕು ಓಡಾಡಿಕೊಂಡಿತ್ತು. ತಾನು ಮಲಗುತ್ತಿದ್ದ ಸುಮಲತಾಳ ತೊಡೆಯ ಮೇಲೆ ಅಳಿಲಿರುತ್ತಿದ್ದುದು, ತನಗಿದ್ದ ಸಲಿಗೆ, ಸ್ವತಂತ್ರ ನಿನ್ನೆ ಮೊನ್ನೆ ಬಂದ ಅಳಿಲಿಗೆ ಸಿಕ್ಕಿದ್ದು ಅದರ ಹೊಟ್ಟೆ ಉರಿಸಿರಬೇಕು. ಮಿಯಾಂ ಎನ್ನುತ್ತಿದ್ದುದು 'ಸಮಯ ಬಂದಾಗ ನಿನ್ನನ್ನು ನೋಡಿಕೊಳ್ಳುತ್ತೇನೆ ಇರು' ಎಂದು ಹೇಳುತ್ತಿದ್ದುದ್ದೇನೊ?

ಬೆಕ್ಕು ಮನೆಯಲ್ಲಿಲ್ಲದಿದ್ದಾಗ ಅಳಿಲು ಧೈರ್ಯವಾಗಿ ಸುಮಲತಳ ಇಲ್ಲವೆ ಶ್ರೀನಿವಾಸ, ಚಲಪತಿಯ ಹಿಂದೆಮುಂದೆ ಓಡಾಡುತ್ತಿತ್ತು. ಇವರ ಕಣ್ಗಾವಲು ಬೆಕ್ಕಿನ ಮೇಲೆ ಬಿಗಿಯಾಗಿತ್ತು. ಆದರೆ ಬೆಕ್ಕಿಗೆ ಇಂದಲ್ಲ ನಾಳೆ ಅದು ತನ್ನ ಬೇಟೆಯೆಂದು ತಿಳಿದಿತ್ತು. ಅದು ನಿಜವೂ ಆಗಿತ್ತೆಂದು ಅಳಿಲಿಗಾಗಲಿ, ಸುಮಲತಗಾಗಲಿ ತಿಳಿದಿರಲಿಲ್ಲ.

ಅಂದು ಬೆಕ್ಕು ಮನೆಯಲ್ಲಿರಲಿಲ್ಲ. ಸುಮಲತ ನಡುಮನೆಯಲ್ಲಿ ಕುಳಿತು ಆಟವಾಡಿಸಲು ಹೋಗುವ ತಯಾರಿಯಲ್ಲಿ ಗೊಂಬೆಗಳನ್ನು ಪೆಟ್ಟಿಗೆಯಲ್ಲಿ ಜೋಡಿಸುವ ಕೆಲಸದಲ್ಲಿ ತಲ್ಲೀನಳಾಗಿದ್ದಳು. ಅಳಿಲು ಸ್ವೆಟರಿನ ಕಿಸೆಯಿಂದಿಳಿದು ಗೊಂಬೆಗಳ ಮೇಲೆ ಜಿಗಿದಾಡುತ್ತಿತ್ತು.

Column: Squirrel accompanied by Sumalatha

ಹೊಂಚು ಹಾಕುತ್ತ ಮರರೆಯಲ್ಲತ್ತೋ, ಆ ವೇಳೆಯಲ್ಲಿ ಹೊಗಿನಿಂದ ಮನೆಗೆ ಬಂತೋ.... ಬೆಕ್ಕು ರಭಸದಿಂದ ನುಗ್ಗಿ ಬಂದು ಅಳಿಲನ್ನು ಕಚ್ಚಿಕೊಂಡು, ಸುಮಲತಳ ಕೂಗಾಟವನ್ನು ಲೆಕ್ಕಿಸದೆ, ಎದ್ದು ಅಟ್ಟಿಬಂದವಳ ಕೈಗೆ ಸಿಕ್ಕದೆ ಓಡಿಹೋಗಿ ತಿಂದ ಮೇಲೆಯೇ ಮನೆಗೆ ಹಿಂದಿರುಗಿದ್ದ.

ಇದನ್ನು ಹೇಳುವಾಗ ಸುಮಲತಳ ಧ್ವನಿಯಲ್ಲಿ ದುಃಖವಿತ್ತು. ಶ್ರೀನಿವಾಸ, ಚಲಪತಿಯ ಧ್ವನಿಯಲ್ಲಿ ಬೇಸರ, ವಿಷಾದವಿತ್ತು. ನಾನು ಹಿಂದೆ ಇಂತಹ ಘಟನೆಗಳಿಂದ ಅನುಭವಿಸಿದ ನೋವನ್ನು ಮೆಲುಕಿಗೆ ತಂದುಕೊಂಡು ಹೇಳಿದೆ.

ರಾತ್ರಿ ವೆಂಪಲ್ಲಿ ಎಂಬಲ್ಲಿ ಆಟವಿರುವುದಾಗಿ, ಇಲ್ಲಿಂದಲೇ ಹೋಗುತ್ತೇವೆಂದು ಹೇಳಿದರು. ನಂತರದ ಊರು ಯಾವುದೋ, ಅಲ್ಲಿ ಆಟಕ್ಕಾಗಿ ಎಷ್ಟು ದಿನ ಕಾಯಬೇಕೊ ಎಂಬುದು ತಿಳಿಯದು. ಆಟವಾಡಿಸುವ ದಿನದವರೆಗೆ ಸುಮಲತ ಒಂಟಿಯಾಗಿ ಗೊಂಬೆಗಳಿಗೆ ಕಾವಲು ಕಾಯಬೇಕು. ಆಕೆಯಿಂದ ಫೋನು ಬರುವವರೆಗೆ ಶ್ರೀನಿವಾಸ ಮನೆಯ ಉಸ್ತುವಾರಿಯಲ್ಲಿರಬೇಕು. ಚಲಪತಿ ಕಾಲೇಜಿಗೆ ಹೋಗಿಬರುತ್ತ ಅಪ್ಪನೊಂದಿಗೆ ಆಟ ಗೊತ್ತುಪಡಿಸಿದ ಊರಿಗೆ ಹೋಗಬೇಕು. ಇರುಳಿನಲ್ಲಿ ಪರದೆಯ ಮೇಲೆ ಗೊಂಬೆ ಆಡಿದರೆ ಕೈಗೆ ಮೂರುಕಾಸು, ಬೇಡಿ ಪದೆದ ದವಸದಿಂದ ಹೊಟ್ಟೆಗನ್ನ.

English summary
Sa Raghunatha column: Squirrel accompanied by Sumalatha her association withTogalu gombeyaata is a puppet show unique to the state of Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X