• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿನಗಾಗಿ ನಾನೇ ಕಟ್ಟಿದ ಮಲ್ಲಿಗೆ ಹೂ ದಂಡೆ ಹೇಗಿದೆ ಹೇಳು ಚೆಲುವೆ

By ಸ.ರಘುನಾಥ, ಕೋಲಾರ
|

ಹೂ ಮೊಗದ ಶಕುಂತಲೇ,

ಮೈಸೂರು ಮಲ್ಲಿಗೆ, ಆಂಬೂರು ಮಲ್ಲಿಗೆ ಎಂದು ಮಲ್ಲಿಗೆಗಳ ಹೆಸರುಗಳನ್ನು ನೀನು ಬಲ್ಲೆ. 'ನಮ್ಮೂರ ದುಂಡುಮಲ್ಲಿಗೆ' ಎಂಬುದನ್ನು ಬಲ್ಲೆಯಾ? ನಮ್ಮೂರಿನಲ್ಲಿ ಮಲ್ಲಿಗೆ ಗಿಡ ಯಾರಲ್ಲಿ ಇಲ್ಲವೆಂದು ಹುಡುಕಾಡಬೇಕು ಶಕುಂತಲೆ. ಮನೆಗೆ ಒಂದೆರಡು ಗಿಡವಾದರೂ ಇದೆ. ಎಲ್ಲವೂ ಒಂದೇ ರೀತಿಯ, ಜಾತಿಯವು. ಅಂದರೆ ದುಂಡುಮಲ್ಲಿಗೆ. ಹೀಗೇಕೆಂದರೆ ಒಬ್ಬರು ಬೆಳೆಸಿದ ಗಿಡದಿಂದ ಇನ್ನೊಬ್ಬರು ಬಳ್ಳಿಯನ್ನು ತೆಗೆದುಕೊಂಡು ಹೋಗಿ ನೆಟ್ಟಿದ್ದರಿಂದ ಹೀಗಾಯಿತು.. ಇದಕ್ಕೊಂದು ಹಿನ್ನೆಲೆ ಇದೆ.

ವಸಂತ ನಿಜ ಹೇಳಲೆ? ಕೇಳುವ ಬದಲು ಮುತ್ತು ಕೊಡಬಾರದಿತ್ತೆ?ವಸಂತ ನಿಜ ಹೇಳಲೆ? ಕೇಳುವ ಬದಲು ಮುತ್ತು ಕೊಡಬಾರದಿತ್ತೆ?

ನಮ್ಮೂರಿನಲ್ಲಿ ಮೊದಲ ಮಲ್ಲಿಗೆ ಗಿಡ ಬೆಳೆಸಿದವಳು ಮುನೆಮ್ಮ. ಅವಳು ಆಂಧ್ರದ ಮಟುಕು ಎಂಬ ಊರಿನಿಂದ ಎನುಮುಲೋಳ್ಳು (ಎಮ್ಮೆಗಳೋರು) ಎಂಬ ಮನೆಗೆ ಸೊಸೆಯಾಗಿ ಬಂದಳು. ಆಗ ಊರಿನಲ್ಲಿ ಒಂದೂ ಮಲ್ಲಿಗೆ ಗಿಡವಿರಲಿಲ್ಲ. ಈ ಹೂ ಬೇಕಾದವರು ಪಟ್ಟಣದಿಂದ ಕೊಂಡು ತರುತ್ತಿದ್ದರು. ಇದನ್ನು ಕಂಡ ಅವಳು ಆಷಾಢಕ್ಕೆ ತವರಿಗೆ ಹೋಗಿ ಹಿಂದಿರುಗಿ ಬರುವಾಗ ಮಲ್ಲಿಗೆ ಬಳ್ಳಿಯೊಂದನ್ನು ತಂದು ನೆಟ್ಟು, ಗಿಡ ಮಾಡಿದಳು.

ಅಂದಿನಿಂದ ಅವಳು ಊರಿನಲ್ಲಿ ಮಲ್ಲೆಚೆಟ್ಟು(ಮಲ್ಲಿಗೆಗಿಡದ) ಮುನೆಮ್ಮ ಎಂದು ಹೆಸರಾದಳು. ಮನೆತನಕ್ಕಿದ್ದ 'ಎನುಮುಲೋಳ್ಳು' ಎಂಬ ಹೆಸರು ಹೋಗಿ 'ಮಲ್ಲೆಚೆಟ್ಟೋಳ್ಳು' ಎಂದಾಯಿತು. ಅವಳಿಂದಲೇ ಊರಿನಲ್ಲಿ ಮಲ್ಲಿಗೆ ಬಿತ್ತನೆಯಾಯಿತು. ನನ್ನ ಅಮ್ಮನೂ ಅವಳಿಂದಲೇ ಬಳ್ಳಿ ಪಡೆದು, ನಮ್ಮ ತೋಟದ ಬದುವಿನಲ್ಲಿ ನೆಟ್ಟಿದ್ದು. ಅದು ಇಂದು ನಾಕಾರು ಬೊಗಸೆ ಹೂ ಬಿಡುವ ಗಿಡವಾಗಿದೆ. ನಾನೀಗ ಮಲ್ಲಿಗೆ ದಂಡೆ ಕಟ್ಟುವುದನ್ನು ನಿನಗೆ ಹೇಳಬೇಕಾಗಿರುವುದರಿಂದ ಈ ಪುರಾಣವನ್ನು ಬಿಚ್ಚಿದೆ.

ನೊಗಕ್ಕೆ ಹೆಗಲು ಕೊಟ್ಟ ಈ ಯುವಕರ ಬದುಕಿನ ಪಾಠ ನಮಗೂ ಒಂದಿಷ್ಟಿರಲಿ ನೊಗಕ್ಕೆ ಹೆಗಲು ಕೊಟ್ಟ ಈ ಯುವಕರ ಬದುಕಿನ ಪಾಠ ನಮಗೂ ಒಂದಿಷ್ಟಿರಲಿ

ನಮ್ಮ ಮಲ್ಲಿಗೆ ಗಿಡಕ್ಕೆ ಎಲ್ಲ ಆರೈಕೆಯೂ ಸರಿಯಾಗಿ ಇರುವುದರಿಂದ ಸೊಂಪಾಗಿ ಬೆಳೆದಿದೆ. ನೀನು ನಿಮ್ಮ ಮನೆಯವರ ಆರೈಕೆಯಿಂದ ಬೆಳೆದಿರುವ ಹಾಗೆ. ಅದು ಮೊಗ್ಗುಗಳನ್ನು ತುಂಬಿಕೊಂಡು ನಿನ್ನ ಮುಖದಂತೆ ಸುಂದರವಾಗಿ ಕಂಗೊಳಿಸುತ್ತಿರುತ್ತದೆ. ಮೊನ್ನೆ ಸಂಜೆ ತೋಟದಿಂದ ಮನೆಗೆ ಹೋಗುವಾಗ ಮೊಗ್ಗುಗಳನ್ನು ಬಿಡಿಸಿಕೊಂಡು ಹೋಗಿ ಅಮ್ಮನ ಮುಂದೆ ಸುರಿದೆ. ನಾನು ಮುಖ ತೊಳೆದು ಬರುವಷ್ಟರಲ್ಲಿ ಅಮ್ಮ ದಂಡೆ ಕಟ್ಟಲು ಪ್ರಾರಂಭಿಸಿದ್ದಳು.

ಆಗ ನಿನಗಾಗಿ ನಾನು ದಂಡೆ ಕಟ್ಟಲು ಕಲಿಯಬೇಕೆನಿಸಿತು. ಅಮ್ಮ ಬಲು ಸೊಗಸಾಗಿ ದಂಡೆ ಕಟ್ಟುತ್ತಾಳೆ. ಅವಳು ಅದನ್ನು ಕಲಿತದ್ದು ಮಲ್ಲೆಚೆಟ್ಟು ಮುನೆಮ್ಮನಿಂದ ಅಂತೆ. ಅವಳ ಮುಂದೆ ಕುಳಿತು ದಂಡೆ ಕಟ್ಟುವುದನ್ನು ಕಲಿಸು ಎಂದು ಕೇಳಿದೆ. ನಕ್ಕಳು. ಏಕೆಂದೆ. ಸುಮ್ಮನೆ ಅಂದಳು.

ಸುಮ್ಮನೆ ಅಲ್ಲ, ಏನೋ ಕಾರಣವಿದೆಯೆಂದೆ. ನಗುತ್ತಲೇ ಏನಿಲ್ಲ. ನಿನ್ನ ಅಪ್ಪನೂ ಹೀಗೆ ಅವರಮ್ಮನನ್ನು ಕೇಳಿದ್ದರಂತೆ. ಇಂಗಿತವನ್ನು ಅರಿಯುವ ಶಕ್ತಿಯಿದ್ದ ಆಕೆ ನಕ್ಕು ದಂಡೆ ಕಟ್ಟುವುದನ್ನು ಕಲಿಸಿದರಂತೆ. ನಿನ್ನಪ್ಪ ಕಲಿತು ಕಟ್ಟಿದ ದಂಡೆಯನ್ನು ಅದೇ ಕೆಲಸವಾಗಿ ನಮ್ಮೂರಿಗೆ ಬಂದು ತಂದುಕೊಟ್ಟಿದ್ದರು. ಅದು ನೆನಪಾಗಿ ನಗು ಬಂತು. ಇದನ್ನು ನನಗೆ ಹೇಳಿದ್ದು ನಿಮ್ಮ ಅಜ್ಜಿ ಎಂದು ಹೇಳಿದಳು.

ವಸಂತ, ನೀನು ಸೊಂಟ ಚಿವುಟಿದ್ದರಿಂದಲೇ ನಾನು ತುಟಿ ಕಚ್ಚಿಕೊಂಡೆ ವಸಂತ, ನೀನು ಸೊಂಟ ಚಿವುಟಿದ್ದರಿಂದಲೇ ನಾನು ತುಟಿ ಕಚ್ಚಿಕೊಂಡೆ

ಈಗೇನು ಮಾರಾಯನಾಗಿ ಕಲಿತುಕೋಪ್ಪಾ ಎಂದು ರಾಗ ಎಳೆದಳು. ದಾರ ಕೊಡು ಎಂದೆ. ಏತಕ್ಕೆ ಎಂದಳು. ದಂಡೆ ಕಟ್ಟಲು ಎಂದೆ. ಪೆದ್ದುಮುಂಡೆಗಂಡ, ಮೊದಲಿಗೆ ನಾನು ಕಟ್ಟುವುದನ್ನು ಗಮನಿಸು. ಆಮೇಲೆ ದಾರ ಅಂದಳು. ಗಮನಿಸತೊಡಗಿದೆ. ಅವಳ ಬೆರಳುಗಳು ಚಕಚಕ ಆಡುತ್ತಿದ್ದವು. ಮಲ್ಲಿಗೆ ಮೊಗ್ಗಿನ ಗುಡ್ಡೆ ಕರಗುತ್ತ ದಂಡೆಯಲ್ಲಿ ಮುದ್ದಾಗಿ ಕೂರುತ್ತ ಸುಂದರ ದಂಡೆಯಾಯಿತು. ಆದರೆ ಅದು ಹೇಗಾಗುತ್ತಿದೆಯೆಂದು ತಿಳಿಯಲಿಲ್ಲ.

ಮೊಗ್ಗುಗಳೆಲ್ಲ ಮುಗಿದ ಮೇಲೆ ದಂಡೆಯನ್ನು ಎತ್ತಿ ಹಿಡಿದು ಗೊತ್ತಾಯಿತಾ ಎಂದಳು. ಊಹೂ ಎಂದೆ. ನಾಳೆ ಕಟ್ಟುವಾಗ ನೀನು ಕಲಿವಿಯುಂತೆ. ಕಟ್ಟಿ ತೋರಿಸುತ್ತೇನೆ ಎಂದು ಕಾಲು ಚಾಚಿ, ಮಡಚಿ ಮೇಲೆದ್ದಳು.

ಮಾರನೇ ದಿನ ನಿಧಾನವಾಗಿ ಮೊಗ್ಗು ಮೊಗ್ಗಿಗೆ ದಾರದ ಗಂಟು ಬೀಳುವುದನ್ನು ತೋರಿಸಿದಳು. ದಾರ ಕೊಟ್ಟು ಕಟ್ಟು ಎಂದಳು. ನಾನು ಮೊಗ್ಗಿನ ತೊಟ್ಟಿಗೆ ದಾರ ಸುತ್ತಿ ಎಳೆದಾಗ ತೊಟ್ಟು ಹರಿದು ಹೋಗಿ ಮೊಗ್ಗಿನ ತಲೆ ನೆಲಕ್ಕುರುಳುತ್ತಿತ್ತು. ಆಗ ಸುತ್ತಿದ ದಾರವನ್ನು ಹೇಗೆ ಎಳೆಯಬೇಕೆಂದು ತೋರಿಸಿದಳು. ಒಂದು ವಾರದ ಸತತ ಪ್ರಯತ್ನದಲ್ಲಿ ಗೆದ್ದೆ.

ಅವಳಷ್ಟು ಚೆನ್ನಾಗಿ ಕಟ್ಟದಿದ್ದರೂ ಚೆನ್ನಾಗಿಯೇ ಕಟ್ಟದ ಮೊದಲ ದಂಡೆಯನ್ನು ನೋಡಿ ಭೇಷ್ ಎಂದಳು. ಇದನ್ನು ನಿನ್ನ ಶಕುಂತಲೆಗೆ ಕೊಡಬೇಕೆ ಎಂದಳು. ನಾನು ನಾಚಿ ಕುಳಿತೆ. ಅವಳು ಒಂದು ತುಂಡು ಒದ್ದೆ ಬಟ್ಟೆಯಲ್ಲಿ ಅದನ್ನು ಸುತ್ತಿ ಕೈಗೆ ಕೊಟ್ಟು, ಇನ್ನೇನು ರೈಲು ಬರಲಿದೆ. ಹೊರಡು ಎಂದಳು.

ಬಟ್ಟೆ ಬೇಡ. ಪ್ಲಾಸ್ಟಿಕ್ ಕವರಿನಲ್ಲಿ ಕೊಡು ಎಂದೆ. ನಿನ್ನಪ್ಪ ಹೀಗೆ ಕವರಿನಲ್ಲಿ ತಂದಾಗ ಅದು ಬಾಡಿ ಹೋಗಿತ್ತು. ಇದರಲ್ಲಿ ನಾಚಿಕೆ ಪಡುವಂಥದೇನೂ ಇಲ್ಲ ಎಂದು ನಿನ್ನೂರಿಗೆ ಹೊರಡಿಸಿದಳು. ಈಗ ನಿನ್ನ ಕೈಲಿರುವುದು ನಾನೇ ಕಟ್ಟಿದ ಮಲ್ಲಿಗೆ ದಂಡೆ ಶಕುಂತಲೆ. ಚೆನ್ನಾಗಿದೆಯೆ?

English summary
Series of love letter by Oneindia columnist Sa Raghunatha continued here. Vasantha writes letter to lady love Shakuntala with intense love with the metaphor of Jasmine flower.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X