• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಷಣಾರ್ಧದಲ್ಲಿ ಬಾಯಲ್ಲಿ ನೀರೂರಿಸುವ ಹುಣಸೆರಾಯನ ಮಹಾತ್ಮೆ!

By ಸ ರಘುನಾಥ, ಕೋಲಾರ
|

ಬರಹದಲ್ಲಿ/ಮುದ್ರಣದಲ್ಲಿ ನೋಡಿ, ಧ್ವನಿಯಲ್ಲಿ ಕೇಳಿಸಿಕೊಳ್ಳಿ... ಹಣ್ಣು ಅನ್ನೋ ಶಬ್ದ ಕೇಳಿ ಅನೇಕ ಹಣ್ಣುಗಳ ರೂಪ, ಆಕಾರ, ಬಣ್ಣ, ರುಚಿ, ವಾಸನೆ ಸಹಿತ ಮನಸ್ಸಿಗೆ ಬಂದುಬಿಡುತ್ತವೆ. ಇಷ್ಟವಾದ ಹಣ್ಣಂತೂ ಬಾಯಲ್ಲಿ ನೀರೂರಿಸಿಬಿಡುತ್ತದೆ. ಈ ನೀರೂರಿಸುವ ಗುಣ ಬರೀ ಹಣ್ಣುಗಳಿಗೆ ಮಾತ್ರವಲ್ಲ ಹಲವು ಕಾಯಿಗಳಿಗೂ ಇದ್ದದ್ದೇ. ಅವುಗಳಲ್ಲಿ ಮುಖ್ಯವಾದವು ಹುಣಿಸೆ ಮತ್ತು ಮಾವು.

ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು

ಬಸುರಿಯರ ಬಯಕೆಯ ವಸ್ತು, ಕಾಯಿಗಳಲ್ಲಿ ಪ್ರಧಾನವಾದವು ಈ ಹುಣಿಸೆ ಮಾವುಗಳೇ. ಹುಣಿಸೆಕಾಯಿ ಹುಟ್ಟಿಸುವ ಆಸೆ ಹಾಗು ಬಾಯಲ್ಲಿ ನೀರೂರಿಸುವ ರೀತಿಯನ್ನು ಬಣ್ಣಿಸುವುದು ಕವಿ-ಸಾಹಿತಿಗಳಿಂದಲೂ ಅಸಾಧ್ಯ ಎಂಬುದು ನಿಜವಿದ್ದೀತು. ಪುಂಖಾನುಪುಂಖ ಮಾತನಾಡುವವರ ಬಾಯಿಗೆ ಕ್ಷಣವಾದರೂ ಬ್ರೇಕು ಹಾಕುವ ಶಕ್ತಿಯಂತೂ ಹುಣಿಸೆಕಾಯಿಗಿದೆ. ಹಾಗೆ ಮಾತುನಾಡುವವರ ಮುಂದೆ ನಿಂತೋ ಕೂತೋ ಹುಣಿಸೆಕಾಯನ್ನು ಅವರು ನೋಡುವಂತೆ ಕಚ್ಚಿ ಸಾಕು. ಅವರ ಬಾಯಲ್ಲಿ ನೀರೂರಿ, ಮಾತು ಕ್ಷಣದ ಮಟ್ಟಿಗಾದರೂ ನಮ್ಮಮ್ರಾಣೆಗೂ ನಿಲ್ಲುತ್ತೆ. ನಿಲ್ಲದಿದ್ದರೆ ಮುಂದೆಂದೂ ಹುಣಿಸೆಕಾಯನ್ನು ಮುಟ್ಟೊಲ್ಲ ಅಂತ ಶಪಥ ಮಾಡಿಬಿಡಿ.

ಹುಣಿಸೆಕಾಯನ ಈ ಮಹಾತ್ಮೆಯನ್ನು ಅಲ್ಲಗಳೆಯಲೇಬೇಕೆಂಬ ಹಠದಿಂದಲೋ, ನನ್ನ ಆಣೆಯನ್ನು ಸುಳ್ಳುಗೈವ ಛಲದಿಂದಲೋ ಚುನಾವಣೆ ಕಾಲದಲ್ಲಿ ಭಾಷಣಗಳ ಜಡಿ ಹಿಡಿಸುವ ರಾಜಕಾರಣಿ, ಅವರಂತೆ ಭಾಷಣಗಳ ಬಿಗಿಯುವವರ ಮುಂದೆ ಹುಣಿಸೆಕಾಯನ್ನು ಕಡಿದರೂ, ಇಲ್ಲವೆ ಇಡೀ ಕಾಯನ್ನು ತಿಂದರೂ ಅವರ ಬಾಯಲ್ಲಿ ನೀರೂರದೆ, ಮಾತು ನಿಲ್ಲದಿದ್ದರೆ ಹುಣಿಸೆಕಾಯಿ ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ ಎಂದು ಪುರಂದರದಾಸರ ಪದವನ್ನು ಹಾಡದಿರದು. ಅದನ್ನು ಅನುಸರಿಸಿ ಸುಳ್ಳುಗಾರ ನಾನಲ್ಲ ಆ ಅಪರಾಧ ನನದಲ್ಲ ಎಂದು ಹಾಡುವೆ.

ಮಳೆಗಾಲದ ಲೇಖನದಲ್ಲಿ ಮನಸಾರೆ ತೋಯಿರಿ...

ಆ ಮಾತು ಬಿಡಿ. ಅವರನ್ನೇಕೆ ಆಡಿಕೊಂಡು ಅವರಿಗೆ ಬೇಸರ, ಕೋಪ ತರಿಸಬೇಕು. ನನ್ನ ಅಜ್ಜಿ ಹೇಳಿದ, ಹುಣಿಸೆಕಾಯಿ ಮೇಳದವನೊಬ್ಬನ ಮೇಳ ಕೆಡಿಸಿದ ಕಥೆಯೊಂದನ್ನು ಕೇಳಿ. ಒಳ್ಳೇ ಮೇಳಗಾರದವನೊಬ್ಬನಿದ್ದ. ಅವನಂತೆ ಊದಲಾಗದ ಇನ್ನೊಬ್ಬ ಅವನ ತಂಡದಲ್ಲಿದ್ದ. ಏನಾದರೂ ಮಾಡಿ ಇವನ ಊದುವಿಕೆಯನ್ನು ಕೆಡಿಸಿ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಬೇಕೆಂದು ಸಮಯ ಕಾಯುತ್ತಿದ್ದ. ಎಷ್ಟು ದಿನವಾದವರೂ ಹಾಗೆ ಮಾಡೋ ಅವಕಾಶ ಸಿಕ್ಕಿದ್ದಿಲ್ಲ.

ಒಂದು ದಿನ ಮನೇಲಿ ಕೂತು ಮೇಳ ಊದೋ ಅಭ್ಯಾಸ ಮಾಡ್ತಿದ್ದ. ಆಗ ಅವನ ಮಗ ಯಾತಕ್ಕೋ ಮೊಂಡುಮಾಡಿ ಅಳುತ್ತಿದ್ದ. ಮಗೂನ ತಾಯಿಗೆ ಅವನ ಅಳು ನಿಲ್ಲಿಸುವುದು ಹೇಗೆಂದು ತಿಳೀದೆ, ಅದೇ ತಾನೆ ಸಾರಿಗೆಂದು ಕಿತ್ತು ತಂದಿದ್ದ ಹುಣಿಸೆಕಾಯಿಗಳಲ್ಲಿ ಒಂದನ್ನು ಅವನ ಕೈಗಿತ್ತಳು. ಅಳು ನಿಲ್ಲಿಸಿದ ಮಗ ಅದನ್ನು ತಿನ್ನುತ್ತ ಅಪ್ಪನ ಬಳಿಗೆ ಬಂದ. ಅಷ್ಟೇ. ಅವನ ಬಾಯಲ್ಲಿ ನೀರೂರಿಬಿಟ್ಟಿತು. ಮೇಳದ ಧ್ವನಿ ಬಂದಾಯಿತು.

ಕೆಲ ದಿನಕ್ಕೆ ಊರಿನಲ್ಲಿ ದೇವರುತ್ಸವ. ಗುಡಿಮುಂದೆ ಮೇಳವಾದ್ಯದ ಕಛೇರಿ. ಇವನು ಮಗನ ಜೋಬಿನಲ್ಲೊಂದು ಹುಣಿಸೆಕಾಯಿ ಇರಿಸಿ, ನಾನು ಸನ್ನೆ ಮಾಡಿದಾಗ ತಿನ್ನಬೇಕೆಂದು ತಾಕೀತು ಮಾಡಿ, ಜೊತೆಯಲ್ಲಿಟ್ಟುಕೊಂಡು ಹೋಗಿದ್ದ. ಏನು ವಾದನವದು! ಇಡೀ ಸಭೆಯಲ್ಲಿ ಮೇಳದ ನಾದವೊಂದೇ ಕೇಳುತ್ತಿದ್ದುದು! ಆಗ ಅಪ್ಪ ಸನ್ನೆ ಮಾಡಿದ. ಮಗ ಹುಣಿಸೆಕಾಯಿ ತೆಗೆದು ಕಚ್ಚಿದ. ಅಷ್ಟೇ. ಮೇಳದ ಧ್ವನಿ ನಿಂತಿತು. ಬಾಯಿತುಂಬ ಮೇಳ ಊದಲಾಗದಷ್ಟು ನೀರು ತುಂಬಿಕೊಂಡಿತ್ತು. ಅವನು ಅಪಮಾನದಿಂದ ತಲೆ ತಗ್ಗಿಸಿ ಕುಳಿತ.

ಹುಣಸೇಹಣ್ಣಿನ ಗೊಜ್ಜು ಅದೆಷ್ಟು ಹುಳಿಯಾಗಿಬಿಟ್ಟಿತ್ತೆಂದರೆ

ಹುಣಿಸೆಕಾಯಿಯ ಪರಿಮಳಕ್ಕೂ ಬಾಯಲ್ಲಿ ನೀರೂರಿಸುವ ಗುಣವಿದೆ. ಅಳೈಕ್ಳು ಬೀಜುಗುಳು ಬರುದ ಪಿಂದಿಗುಳನ ಕಿತ್ತೊಂಬಂದು, ಉಪ್ಪು ಅಸೇಮೆಣಸಕಾಯಿ ಆಕಿ ಬಂಡಿಗಳ ಮ್ಯಾಗ ನೂರೋವಾಗ ಗಮುಲು ಆಸು ದೂರಕ ಬಡೀತದ. ಅವುರು ಲೊಟಿಕಾಕ್ಕೊಂಡು ನೆಕ್ಕುಲಾಡೋದನ ನೋಡಿದರೆ ಮುಸಿಲೋರೂ ವಯಸು ಮತರುತು ನೆಕ್ಕುಬೇಕು ಅನಕೋತಾರ. ಇದಪ್ಪಾ ಉಣಿಸಿಕಾಯಿ ತಡಾಕ.

ಬಲಿತ ಹುಣಿಸೆಕಾಯ ದೊಗ್ಗಡೊಯ್ದು (ಆರೆಬರೆ ಕುಟ್ಟಿ), ನಾರು ಬೀಜ ತೆಗೆದು, ಹಸೀಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಉಪ್ಪು ಹಾಕಿ ರುಬ್ಬಿ, ಇಂಗು ಸಾಸಿವೆ ಒಗ್ಗರಣೆ ಕೊಟ್ಟುಬಿಟ್ಟಿರೋ ಅದರ ಘಮಲೋ ಘಮಲು, ರುಚಿಯೋ ರುಚಿ. ಉಡುಕುಡುಕು ದೊಡ್ಡಬೈರ್‍ನೆಲ್ಲು ಅಕ್ಕಿ ಅನ್ನದ ಮೇಲೆ ನಿಮ್ಮಕಾಯಿ ತಾರ(ದಪ್ಪ) ಈ ತೊಕ್ಕುನ ಆಕ್ಯಂಡು, ನಾಟಿ ಎಮ್ಮಿದೋ ಹಸೀನ್ದೋ ತುಪ್ಪಟ್ಟಿಕ್ಯಂಡು ಸೆಂದಾಕಿ ಕಲಿಸೊಂಡು ತುತ್ತು ಮ್ಯಾಗ ತುತ್ತು ನುಂಗುತಿದ್ರೆ ಸಿವುನೇ ಚಿಕಣ್ಣು (ಚಿಕನ್) ಬಿರಿಯಾನಿ ತಂದು ಎದುರೂಕಿಕ್ಕಿದ್ರೂ ಬೇಕು ಅನ್ನುಸಿದುರೆ ಕೇಳು ನನ್ನ ಕಣುಗುಳಾಣೆ.

ಇದಂಗಿರ್‍ಲಿ ತಾಯ್ಗಾ, ಕಾರ್‍ದಣ್ಣು ವಂಟಕ(ಅಡುಗೆ)ನಂಗೆ ಕೇಳಿಸಿಕ್ಯಾ. ಇದನ ಪರಿಸಿಕ ಜೀವುಗಳ ಮಾರಾಕ, ಕೊಣ್ಣಾಕ ಓತಿದ್ದೋರು ಮಾಡಿಸಿಕ್ಯಂಡು ಓತಿದ್ರು ಅಪ್ಪುನೇ. ಸಣ್ ಟೆಂಕಾಯಿ ತಾರ ಉಣಿಸಣ್ಣು, ಅದರಕ ಕಾರಾಪುಡಿ, ಜೀರಿಗೆಪುಡಿ ರವಾಸು, ಬೆಳ್ಳುಳ್ಳಿ, ಈರುಳ್ಳಿ, ಉಪ್ಪಾಕಿ ಸೆಂದಾಗಿ ದಂಚಿಚಂಚಿ(ಕುಟ್ಟಿಕುಟ್ಟಿ) ವಳ್ಳೆ ಮೇಣದಂಗೆ ಮಾಡಿ ಉಂಟಿ(ಮುದ್ದೆ) ಕಟ್ಟಿ, ಬೈರ್‍ನಲ್ಲಕ್ಕಿ ಅನ್ನನ ಮುದ್ದಿಗಳನ ಅಳೇ ಪಂಚೆಬಟ್ಟೇನಾಗ ಕಟ್ಟಿಕ್ಯಂಡು ಒಂಟ್ರೇ ಸಿವುನೇ ಒಂದ್ವಾರಾದ್ರೂ ಅದುನ ಮಾಡಿದ ನನ್ನೆಂಡ್ರು ಬಳಿಗಳಾಣೆ ಕೆಡೂದ್ಲ, ಹಳಸೂದ್ಲ. ವಟ್ಟಿಕ(ಹೊಟ್ಟೆಗೆ) ದೋಕಾ ಇಲ್ಲ. ಇದಕ್ಕೆ ಒಂದು ನಿಂಬೆಹಣ್ಣಿನ ಗಾತ್ರದ ಬೆಲ್ಲ ಇಲ್ಲವೆ ತಾಟಿಬೆಲ್ಲವನ್ನು ಹಾಕಬಹುದು.

ಇದಕ್ಕೆ ಗೊಡ್ಡುಕಾರ ಅನ್ನೋದೂ ಉಂಟು. ಎರಡು ಮೂರು ದಿನಗಳಲ್ಲಿ ಬಳಸುವುದಾದರೆ ಕೊತ್ತಂಬರಿಸೊಪ್ಪನ್ನು ಬಳಸಬಹುದು. ಮುದ್ದೆ, ರೊಟ್ಟಿ ಇಂಥವಕ್ಕೂ ಇದು ವ್ಯಂಜನವೇ. ಜೀರ್ಣಕಾರಿ ಹಾಗು ದೇಹಕ್ಕೆ ಹಿತ. ಹುಣಿಸೆ ಹಣ್ಣಿನ ಗೊಜ್ಜು. ಹಣ್ಣನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಕಿವುಚಿ, ಹಸಿಮೆಣಸಿನಕಾಯಿ ಇಲ್ಲದಿದ್ದರೆ ಒಣಮೆಣಸಿನಕಾಯಿ, ಈರುಳ್ಳಿ, ವಾಸನೆಯ ಸಹ್ಯವಿದ್ದರೆ ಬೆಳ್ಳುಳ್ಳಿ, ಕೊತ್ತಂಬರಿಸೊಪ್ಪು ಹಾಕಿದರೆ ಆಯ್ತು.

ಹುಣಿಸೆಹಣ್ಣಿಗೆ ಜೀರಿಗೆ, ಕರಿಮೆಣಸಿನಪುಡಿ, ಹಳೇಬೆಲ್ಲ ಅಥವಾ ತಾಟಿಬೆಲ್ಲ, ಉಪ್ಪು/ಸೈಂದ್ರಲವಣ ಹಾಕಿ ನೀರು ಸೋಕಿಸದೆ ಚೆನ್ನಾಗಿ ಕುಟ್ಟಿ, ಗಜ್ಜಿಕಾಯಿ ಗಾತ್ರಕ್ಕೆ ಉಂಡೆಕಟ್ಟಿ, ದಿನಕ್ಕೆ ಎರಡು ಹೊತ್ತು ಊಟವಾದ ಮೇಲೆ ಚಪ್ಪರಿಸಿಕೊಂಡು ತಿಂದರೆ ಅಜೀರ್ಣ ನಿವಾರಣೆಯಾಗುವುದಲ್ಲದೆ, ಅರುಚಿಯನ್ನು ಕಳೆಯುತ್ತದೆ. ಕೊಂಚ ಮಟ್ಟಿಗೆ ಅಸಿಡಿಯನ್ನೂ ನೀಗುತ್ತದೆ. ಪಿತ್ತದ ಬಾಧೆಯಿಂದ ಉಪಶಮನ ದೊರೆಯುತ್ತದೆ. ದುಡ್ಡಿಗೆ ಮಾರುಕಟ್ಟೆಯಲ್ಲಿ ಸಿಗುವ ಹಾಜ್ಮೋಲ ಇಂಥದೇ. ಇದರ ರುಚಿ ಹತ್ತಿದರೆ ಮಕ್ಕಳು ಇನ್ನೂ ಕೊಡುವಂತೆ ಹಠ ಹಿಡಿದು ಬೇಡಿ ತಿನ್ನುತ್ತವೆ. ವಾಕರಿಕೆ, ವಾಂತಿಯಿಂದ ಬಳಲುವ ಬಸುರಿಯರಿಗೂ ಇದು ಉಪಯುಕ್ತ, ನಿರಪಾಯಕಾರಿ. ಹುಣಿಸೆಯಿಂದ ತಯಾರಿಸಬಹುದಾದ ಅಡುಗೆಗಳು ಇನ್ನೂ ಬಹಳವಿವೆ.

ಪ್ರೊಫೆಸರ್ ಹುಚ್ಚೂರಾಯ ಎಂಬ ನರಸಿಂಹರಾಜು ಅವರ ಸಿನೆಮಾದ ಹಾಡೊಂದರಲ್ಲಿ ಖಾರದ ಅಡುಗೆ ಏನೇ ಮಾಡಲಿ ಕಾಯ್ತುರಿ ಹುಳಿ ಮುಂದಿರಬೇಕು..... ಎಂಬ ಸಾಲಿದೆ. ನಾಟಿ ಮೀನುಸಾರಿಗಂತೂ ಈ ಹುಳಿ ಹೆಚ್ಚಿರುತ್ತದೆ. ಇಲ್ಲವೆಂದರೆ ಅದನ್ನು ತಿನ್ನಲಾಗುವುದಿಲ್ಲ. ಉಣಿಸಿಗಳ ಬಸಿದ ಸಾರಿಗಂತೂ ಹುಳಿ ಮುಂದಿರಲೇಬೇಕು. ಇಲ್ಲದಿದ್ದರೆ ಅದರ ರುಚಿ ಕೆಡುವುದು, ಮಜವೂ ಇರದು.

ಅಗರಬತ್ತಿ ತಯಾರಿಕೆಯಲ್ಲಿ ಇದರ ಒಣತೊಗಟೆಯನ್ನು ಪುಡಿಮಾಡಿ ಬೆರೆಸಿ ಕಲಬೆರಕೆ ಮಾಡುತ್ತಾರೆ. ಹೀಗೆ ಕಲಬೆರಕೆಯಿಂದ ತಯಾರಾದ ಅಗರಬತ್ತಿಯನ್ನು ಉರಿಸಿದಾಗ ಚಿಟಚಿಟನೆ ಸಣ್ಣ ಕಿಡಿಗಳು ಹಾರುವುದನ್ನು ಕಾಣಬಹುದು. ಹುಣಿಸೆಕಾಯಿ ಉದುರಿಸಿದ ನಂತರ ಇದನ್ನು ಸಂಗ್ರಹಿಸಿ ಅಗರಬತ್ತಿ ತಯಾರಕರಿಗೆ ಪೂರೈಸುತ್ತಾರೆ. ಇದು ಬಡವರ ಪಾಲಿಗೆ ಒಂದು ನಿರ್ದಿಷ್ಟವಲ್ಲದ ಆದಾಯದ ಮೂಲವೂ ಆಗಿದೆ.

ಹುಣಿಸೆಕಾಯಿ ಉದುರಿಸುವುದು ಕಷ್ಟಕರವಾದ ಕೆಲಸಗಳಲ್ಲೊಂದು. ಮರದಿಂದ ಕಾಯಿ ಉದುರಿಸುವವರು, ಉದುರಿಸಿದ ಕಾಯಿಗಳನ್ನು ಆರಿಸುವವರು ಜಾನಪದ ಹಾಡುಗಳಲ್ಲಿ ಒಂದು ಪ್ರಕಾರವಾದ ಯಾಲಪದಗಳನ್ನು ಹಾಡುತ್ತಾರೆ. ಅವು ಹಾಸ್ಯ ಹಾಗು ಶೃಂಗಾರಪದಗಳಾಗಿರುವುದಷ್ಟೇ ಅಲ್ಲದೆ ಪ್ರೇಮ ಸಂದೇಶ ಕೊಡುವ ಪದಗಳೂ ಆಗಿರುತ್ತವೆ. ಹುಣಿಸೆ ಮರವೇರಿ ಕಾಯಿ ಉದುರಿಸುವುದು ಅಪಾಯಕಾರಿಯೂ ಹೌದು. ಕೊಂಚ ಯಾಮಾರಿದರೂ ಅಪಾಯ ಗ್ಯಾರಂಟಿ. ಬಿದ್ದು ಪ್ರಾಣ ಕಳೆದುಕೊಂವರು ಬಹುಮಂದಿ. ಶಾಶ್ವತ ಅಂಗವಿಕಲರಾದವರೂ ಇದ್ದಾರೆ.

ಹುಣಿಸೆಯ ಪ್ರಾಚೀನತೆ, ಬಳಕೆಯ ವ್ಯಾಪಕತೆ, ಅದರಲ್ಲಿನ ಔಷಧೀಗುಣ, ಅದರ ವಾಣಿಜ್ಯ ಮೌಲ್ಯ ಇತ್ಯಾಧಿಗಳನ್ನು ಪರಿಗಣಿಸಿ ಪಾರಂಪರಿಕ ವೃಕ್ಷದ ಸಾಲಿಗೆ ಸೇರಿಸಬೇಕಿದೆ. ಈ ಅರ್ಹತೆ ಹುಣಿಸೆಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamarind is a multipurpose fruit. There are several health benefits if you use mouth watering tamarind properly. Sa Raghunatha, a teacher by profession, narrates how tamarind has become part of lifestyle of village people and what all delicacies can be prepared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more