ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಚ್ಚುಬಾಯಲ್ಲೂ ಜೊಲ್ಲುಕ್ಕಿಸುವ ಆಳಂಬೆ ಮಸಾಲೆ ಸಾರು

By ಸ.ರಘುನಾಥ, ಕೋಲಾರ
|
Google Oneindia Kannada News

ಈ ವರ್ಷವೂ ಸೇರಿ ಕಳೆದ ಕೆಲವು ವರ್ಷಗಳಿಂದ ಮಳೆಯೊಂದಿಗೆ ಬೆಳೆಗಳೂ ಕಡಿಮೆ. ಬಿತ್ತಿ ಬೆಳೆಯುವ ಬೆಳೆಗಳೇ ಅಲ್ಲ, ಸ್ವಾಭಾವಿಕವಾಗಿ ಬೆಳೆದುಕೊಂಡು ಜನರ ಹೊಟ್ಟೆ ಸೇರುವಂಥವೂ ಸಿಗಲಿಲ್ಲ. ಅಂಥವುಗಳಲ್ಲಿ ಆಳಂಬೆಯೂ ಸೇರಿತ್ತು. ಆಳಂಬೆ ಅದೃಷ್ಟವಿದ್ದರಿಗೆ ಸಿಗುವುದು ಹೆಚ್ಚು ಎಂಬ ಮಾತು ಈ ವರ್ಷವಂತೂ ಸುಳ್ಳಾಯಿತು. ಆಳಂಬೆ ಸಾರು ಮಾಡುಂಡು ಸುಖಿಸಿದವರು ಇಲ್ಲವೆನ್ನಬಹುದಷ್ಟೆ.

ಆಳಂಬೇನ(ಅಣಬೆ) ತರೋದೆಂದರೆ ಅದು ರಕ್ತರಹಿತ ಬೇಟೆಯೇ. ಹುಡುಕಿಕೊಂಡು ಹೋಗಬೇಕು. ಸಿಕ್ಕಿದರೆ ಸಿಕ್ಕಿತು, ಇಲ್ಲಾಂದ್ರೆ ಇಲ್ಲ. ಕೆಲವರಿಗಂತೂ ಮಕ್ಕರಿಗಟ್ಲೆ ಸಿಕ್ಕಿಬಿಟ್ಟರೆ, ಕೆಲವರಿಗೆ ಅಷ್ಟಿಷ್ಟಷ್ಟೆ. ಮತ್ತೆ ಕೆಲವರಿಗೆ ಬರಿಗೈ. ಹಿಂದೆ ಹೆಚ್ಚಿಗೆ ಸಿಕ್ಕಿದವರು ನೆರೆಯವರಿಗೆ ಹಂಚುತಿದ್ದರು. ಈಗ ಅಂಥದು ಕಡಿಮೆ. ಮಾರಿಕೊಳ್ಳುತ್ತಾರೆ. ಕಿಲೋಗೆ ನೂರೈವತ್ತರಿಂದ ಇನ್ನೂರೈವತ್ತರವರೆಗೆ ಬೆಲೆ ಇರುತ್ತೆ.

ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!

ಸಹಜ ಅಣಬೆ ತಿಂದವರಿಗೆ ಕೃತಕ ಅಣಬೆ ಸಿಪ್ಪೆ ತಿಂದಂತೆ ಅನ್ನಿಸುತ್ತೆ. ಇದನ್ನ ನೆಲದ ಆಳಂಬೆ ಮುಂದೆ ನಿವಾಳಿಸಿ ಎಸೆಯಬೇಕು. ಇದೇ ಇದರ ಗಮ್ಮತ್ತು. ಕೃತಕವಾಗಿ ಬೆಳೆಸುವ ಆಳಂಬೆ ಬೇಗ ಬೆಳೆಯಲು ಮತ್ತು ದಪ್ಪವಾಗಲು ಯೂರಿಯಾ ಮುಂತಾದವನ್ನು ಬಳಸುವರೆಂಬ ಸುದ್ದಿ ಇದೆ. ರಾಸಾಯನಿಕಗಳನ್ನು ಬಳಸಿ ಬೆಳೆದ ಅಣಬೆಯ ಕೆಳಭಾಗ ಕೊಂಚ ಕಪ್ಪಾಗಿರುತ್ತದೆ.

ಆಳಂಬೆಯ ಹೆಸರೇ ಬಾಯಲ್ಲಿ ನೀರೂರಿಸುತ್ತೆ. ಅದಕ್ಕಿಕ್ಕುವ ಮಸಾಲೆ ಗಮಲು ಮನಸ್ಸಿನ ಮೂಗಿಗೆ ಬಡಿದು, ಯಾವಾಗಪ್ಪಾ ಅತ್ತೆ(ಹಸ್ತ), ಚಿತ್ತೆ ಮಳೆಗಳು ಬಂದಾವು ಅಂತ ಕಾಯುವ ಹಾಗಾಗುತ್ತದೆ. ಈ ಅತ್ತಿಮಳೆ ಬರುತ್ತಿದ್ದಂತೆ ಆಳಂಬೆ ಹುಟ್ಟುವ ಹುತ್ತ ಹಾಗು ಗೆದ್ದಲಿರುವಂಥ ಜಾಗಗಳನ್ನು ಕಣ್ಣಿನಲ್ಲಿ ಗುರುತು ಹಾಕಿಕೊಂಡಿರುತ್ತಾರೆ. ಚೆನ್ನಾಗಿ ಮಳೆಯಾದ ನಂತರ ಮುಂಜಾನೆದ್ದು ಹುಡುಕಿಕೊಂಡು ಹೋಗುತ್ತಾರೆ. ಬೆಳಗಿನ ಎಂಟುಗಂಟೆಯೊಳಗೆ ಬುಡ್ಡಿಗ್ಳು(ಮೊಗ್ಗೆ) ಮನೆ ಸೇರುತ್ತವೆ. ಪಂಗ ಯಾವ್ದೇಯಿರ್‍ಲಿ, ಆಳಂಬಿಗಳ್ನ ತೊಳುದು, ಮಸಾಲೆ ನೂರಿ, ಒಳೆಮ್ಯಾಲೆಸುರು ಮಡುಗಿದ ಮ್ಯಾಕ್ಕೇ ಬ್ಯಾರೆ ಪಂಗ. ಆಳಂಬಿಗುಳು ಬೇಯ್ತಿದ್ದರೆ ಬೀದೆಲ್ಲ ಅದ್ರಗಮಲೇ.

ಮಸಾಲೆ ಸಾರೆಂದರೆ ಮಾಂಸಾಹಾರಿಗಳಿಗಷ್ಟೇ ಬಾಯಲ್ಲಿ ನೀರೊಲ್ಲ, ಸಸ್ಯಾಹಾರಿಗಳಿಗೂ ಊರೋದೇ. ಇವರು ಕೆಲವು ತರಕಾರಿಗಳ ಮಸಾಲೆ ಸಾರು ಮಾಡಿ ಉಂಬುವರು. ನುಗ್ಗೇಕಾಯಿ, ಉರ್‍ಲಗಡ್ಡೆ(ಆಲೂಗೆಡ್ಡೆ), ಬೆಂಡೆಕಾಯಿ, ಹಾಗಲಕಾಯಿ, ಹಿದುಕುಬೇಳೆ, ಬದನೆಕಾಯೀ(ಎಣ್ಣಗಾಯಿ), ಇನ್ನು ಕೆಲವು ಮಸಾಲೆಯಲ್ಲಿ ಬೆಂದು ರುಚಿಯಾಗಿ ಕೊಟ್ಟೂರಮ್ಮನ ಕೊಳಗ ಎಂದು ಕರೆಸಿಕೊಂಡ ಹೊಟ್ಟೆಯನ್ನು ಸೇರಿ, ಮಸಾಲೆ ಖಾಯಿಷನ್ನು ತೀರಿಸುತ್ತವೆ.

ಸಸ್ಯಾಹಾರವೋ ಮಾಂಸಾಹಾರವೋ

ಸಸ್ಯಾಹಾರವೋ ಮಾಂಸಾಹಾರವೋ

ಸಸ್ಯಾಹಾರವೋ ಮಾಂಸಾಹಾರವೋ ಮಸಾಲೆ ತಿನ್ನಲಾಗದವನಿಗೆ ನಾಟಿವೈದ್ಯ ಪಂಡಿತರ ಪರಿಭಾಷೆಯಲ್ಲಿ 'ಅಗ್ನಿಮಾಂದ್ಯ' ರೋಗ ಇರುವುದಂತೂ ಗ್ಯಾರಂಟಿ. ಸಹಜವಾಗಿ ಜೀರ್ಣಶಕ್ತಿ ಕುಂದಿರುವ ವೃದ್ಧರ ಬೊಚ್ಚುಬಾಯಲ್ಲೂ ಆಳಂಬೆ ಮಸಾಲೆ ಸಾರೆಂದರೆ ಆಸೆಯ ಜೊಲ್ಲುರಸ ಉಕ್ಕುತ್ತೆ.

ನಾಟಿಕೋಳಿ ಸಾರು ಮಾಡಿ ಒಂದು ಮುದ್ದೆ ವಡುದುರೆ

ನಾಟಿಕೋಳಿ ಸಾರು ಮಾಡಿ ಒಂದು ಮುದ್ದೆ ವಡುದುರೆ

ತೋಕುಗ ಮಸಾಲಿಕ್ಕಿ ನಾಟಿಕೋಳಿ ಸಾರು ಮಾಡಿ ಒಂದು ಮುದ್ದೆ ವಡುದುರೆ ಪಡಿಸಾ(ನೆಗಡಿ) ಎತ್ತಕೋತಾದೋ ಅನ್ನುತ್ತಾರೆ ನಮ್ಮ ಹಳ್ಳಿಗಳ ಹಳಬರು. ಈ ತೋಕು(ಚುರುಕು) ಮಸಾಲ ಉಂಬೂದುಕೂ ದಂ ಬೇಕಾತದ ಎಂಬುವದೂ ದಿಟವೇ. ಈ ತೋಕುನಲ್ಲಿರುತ್ತೆ ತೋಕೆಯೂ ಉರಿವಂಥ ಖಾರ. ಆಳಂಬೆ ಸಾರಿಗೂ ತೋಕುಮಸಾಲ ಇಕ್ಕದರೆ ಅದರ ಮಜಾನೇ ಬೇರೆ. ಉಣ್ಣುವವನಿಗೇ ಗೊತ್ತು ಉಣ್ಣುವುದರ ರುಚಿ.

ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದುಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು

ಪುಬ್ಬಾ ಮಳೆಯಲ್ಲಿ ಉಬ್ಬಿಕೊಂಡು ಹುಟ್ತದೆ

ಪುಬ್ಬಾ ಮಳೆಯಲ್ಲಿ ಉಬ್ಬಿಕೊಂಡು ಹುಟ್ತದೆ

ಆಳಂಬೆ ಉಬ್ಬೆ (ಪುಬ್ಬಾ) ಮಳೆಯಲ್ಲಿ ಉಬ್ಬುಬ್ಬಿಕೊಂಡು ಹುಟ್ತದೆ ಎಂಬ ಗಾದೆಗೆ ಕಾರಣವಾಗಿದೆ. ಸ್ವಾತಿ, ವಿಶಾಖಾ ಮಳೆಗಳ ಕಾಲದಲ್ಲಿಯೂ ಈ ಅಣಬೆಗಳು ಸಿಗುವುವಾದರೂ ವಿಷಯುಕ್ತವಾಗಿರುತ್ತವೆಯೆಂದು ಯಾರೂ ತಿನ್ನುವುದಿಲ್ಲ. ಸಿಗುವ ಅಣಬೆಗಳೆಲ್ಲ ತಿನ್ನಲು ಯೋಗ್ಯವಲ್ಲ. ವಳ್ಳೆ ಆಳಂಬೆ ಎಂದು ಕರೆಸಿಕೊಳ್ಳುವವು ಮಾತ್ರ ಆಹಾರವಾಗಿ ಯೋಗ್ಯ. ಪ್ರೋಟೀನು ಮುಂತಾದ ಆಹಾರಾಂಶಗಳು ಇದರಲ್ಲಿ ಹೇರಳ.

ವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವುವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವು

ರಾಗಿ ಮುದ್ದೆಗಂತೂ ಆಳಂಬೆ ಸಾರು ಭಲೇ ರುಚಿ

ರಾಗಿ ಮುದ್ದೆಗಂತೂ ಆಳಂಬೆ ಸಾರು ಭಲೇ ರುಚಿ

ಆಳಂಬೆಗೆ ಕೋಳಿ, ಇತರೆ ಮಾಂಸಗಳಿಗೆ ಹಾಕುವ ಮಸಾಲೆಯನ್ನೇ ಹಾಕುತ್ತಾರೆ. ಆಲೂಗೆಡ್ಡೆ ಗೊಜ್ಜಿಗೆ ಹಾಕುವ ಮಸಾಲೆಯೂ ಒಪ್ಪುತ್ತೆ. ರಾಗಿ ಮುದ್ದೆಗಂತೂ ಭಲೇ ರುಚಿಯ ಖುಷಿಕೊಡುವ ಸಾರು ಇದು. ಇದು ಮಾಂಸಾಹಾರಕ್ಕೆ ಸಮವೆಂದು ಭಾವಿಸುವ ಕೆಲವರು ತಿನ್ನುವುದಿಲ್ಲ. ಇರಲಿ ಬಿಡಿ, ಅವರವರಿಷ್ಟ.

ನಮ್ಮ ಸೀಮೆ ಹಳ್ಳಿ ಬಾಡು, ಊಟದ ಬಗ್ಗೆ ಒಂದು ನೀಟಾದ ವಿವರಣೆನಮ್ಮ ಸೀಮೆ ಹಳ್ಳಿ ಬಾಡು, ಊಟದ ಬಗ್ಗೆ ಒಂದು ನೀಟಾದ ವಿವರಣೆ

ಬ್ರಾಹ್ಮಣರು ಅಣಬೆ ತಿನ್ನುವುದು ಬಿಟ್ಟ ಕಥೆ

ಬ್ರಾಹ್ಮಣರು ಅಣಬೆ ತಿನ್ನುವುದು ಬಿಟ್ಟ ಕಥೆ

ಹಿಂದೆ (ಎಷ್ಟು ಹಿಂದೆಯೋ ಗೊತ್ತಿಲ್ಲ) ಇದನ್ನು ಬ್ರಾಹ್ಮಣರೂ ತಿನ್ನುತಿದ್ದರಂತೆ. ಅವರು ತಿನ್ನುವುದನ್ನು ಬಿಟ್ಟ ಬಗ್ಗೆ ಒಂದು ಕಥೆ ಹೀಗಿದೆ : ಮುಂಜಾನೆಯೆದ್ದ ಬ್ರಾಹಣನೊಬ್ಬ ಸ್ನಾನ, ಸಂಧ್ಯಾವಂದನೆಗೆಂದು ಕೆರೆಯತ್ತ ಹೊರಟನಂತೆ. ದಾರಿ ಪಕ್ಕ, ಮರೆಯಲ್ಲಿ ಆಳಂಬೆಗಳ ವನವೇ ಎದ್ದಿತ್ತಂತೆ. ಇದು ಯಾರಿಗೂ ಕಾಣಬಾರದೆಂದು ಅವನು ತನ್ನ ಪಂಚೆಯನ್ನು ಅದರ ಮೇಲೆ ಹೊದೆಸಿ, ಕೆರೆಗೆ ಹೋಗಿ, ಹಿಂತಿರುಗಿ ಬಂದು ಪಂಚೆ ತೆಗೆದು ನೋಡಿದರೆ ಅವನ ದುರಾಸೆಯಿಂದಾಗಿ ಅವೆಲ್ಲ ಮಾಂಸದ ತುಣುಕುಗಳಾಗಿದ್ದವಂತೆ. ಅಂದಿನಿಂದ ಬ್ರಾಹ್ಮಣರು ಆಳಂಬೆಯನ್ನು ತಿನ್ನುವುದನ್ನು ಬಿಟ್ಟರಂತೆ.

English summary
There is a saying that you must grow like a tree, not like a mushroom. But, no tree can beat mushroom when it comes to preparing delicious recipe of rasam or sambar using mushroom. Sa Raghunatha from Kolar writes one mouthwatering Kannada article on Mushroom which is called Anabe in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X