• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬ್ಬಾಳ ಪಾಪಯ್ಯನ ಹೆಂಡತಿ ಪ್ರೀತಿ ಮುಂದೆ 'ಕಳ್ಳು' ಆಸೆಯೂ ಕನಿಷ್ಠ

By ಸ ರಘುನಾಥ, ಕೋಲಾರ
|

ಬದುಕಿನ ದಿನಗಳಲ್ಲಿ ನಡೆಯುವುದೆಲ್ಲ ಸಾಕ್ಷಿಯನ್ನು ಇಟ್ಟುಕೊಂಡೇ ನಡೆಯುವುದಿಲ್ಲ. ಅದರಲ್ಲೂ ಗಂಡ, ಹೆಂಡತಿ ಮಧ್ಯೆ ನಡೆಯುವುದಕ್ಕೆ ಅವರೇ ಸಾಕ್ಷಿ. ಸಾಮಾನ್ಯವಾಗಿ ಅವರು ಹೊರಗಿನ ಸಾಕ್ಷಿಗೆ ಹೋಗುವುದು ಕಡಿಮೆ ಅಂದರೆ ಕಡಿಮೆ. ಆದರೆ ಪ್ರಸಂಗವಾಗಿ ಹೊರಗೆ ಹರಿದಾಡಬಹುದು. ಅದೂ ಅವರಲ್ಲೊಬ್ಬರು ಅಥವಾ ಇಬ್ಬರೂ ಹೊರಗೆ ಹೇಳಿಕೊಂಡರೆ ಮಾತ್ರ.

ಕಬ್ಬಾಳ ಪಾಪಯ್ಯನ 'ಫುಲ್ ಬಾಟ್ಲಿ' ಪ್ರಸಂಗ ನನ್ನವರೆಗೆ ಬಂದುದರಿಂದ ನನಗೆ ತಿಳಿಯಿತು. ಗಂಡ- ಹೆಂಡಿರು ಮಾತಾಡಿಕೊಂಡು ಹೇಳಿದ್ದಲ್ಲ; ಪಾಪಯ್ಯ ಹೇಳಿದ್ದು. ಅವನ ಮಡದಿ, ಕಬ್ಬಾಳ ಮುನೆಮ್ಮ ಬದುಕಿದ್ದಾಗ ಹೇಳಿದ್ದಲ್ಲ. ಅವಳು ಸತ್ತ ಒಂದು ವರ್ಷದ ಮೇಲೆ ಒಂದು ತಿಂಗಳಿಗೆ, ಯುಗಾದಿ ಹೋದ ಮಾರನೆಯ ದಿನವಾದ ವರ್ಷ ತೊಡಕಿನಂದು, ಮಧ್ಯಾಹ್ನ 'ಮರಿ(ಕುರಿ)ಬಾಡು' ಗಮಗಮ ಬೇಯುತ್ತಿದ್ದಾಗ.

ಒಂದು ಪೋಸ್ಟ್ ಕಾರ್ಡಿನಲ್ಲಿ ಸಿಕ್ಕ ಇತಿಹಾಸ, ಭೂಗೋಳ ಹಾಗೂ ಸಮಾಜ ವಿಜ್ಞಾನ

ಮಲಿಯಪ್ಪನಹಳ್ಳಿ ಪಾಸಲೆಯ ನಾಲ್ಕೂರುಗಳಲ್ಲಿ ಘಟೋತ್ಕಚ ಪಾತ್ರ ಖ್ಯಾತಿಯ ಅವನ ದಿನದ ಎರಡು ಹೊತ್ತಿನ ಊಟದ ಮತ್ತು ಇತರೆ - ವಿಶೇಷ - ದಿನಗಳ ಊಟವನ್ನು ಕಂಡಂತೆ ಹೇಳಿ, 'ಫುಲ್ ಬಾಟ್ಲಿ' ವಿಷಯಕ್ಕೆ ಬರುತ್ತೇನೆ. 'ತಲಕಾಯಿ ತಾರದ' (ತಲೆಯ ಗಾತ್ರದ) ರಾಗಿಮುದ್ದೆ, ದೊಡ್ಡ ಸೌಟು ದಂಟುಸೊಪ್ಪು ಸಾರು, ಇಲ್ಲವೆ ಕನ್ನೆಸೊಪ್ಪು ಸೀಸೊಪ್ಪು, ಅಥವಾ ಹರಿವೆಸೊಪ್ಪು ಹುಳಿಸೊಪ್ಪು, ಮೇಲೆ ದೊಡ್ಡ ಹಿಡಿಯಷ್ಟು ಹುರಿದ ಕರಿ(ಒಣ)ಬಾಡು, ತಂಬಿಗೆ ನೀರುಮಜ್ಜಿಗೆ. ಇದು ಅವನ ಹಸಿದ ಹೊಟ್ಟೆಯ ಅಳತೆ.

ವಾರಕ್ಕೊಮ್ಮೆ, ಮಾಲೂರಿನ ಗುರುವಾರದ ಸಂತೆಯ ದಿನ ಸಾಯಂಕಾಲ ಕಡ್ಡಾಯವಾಗಿ ಕೊತ್ತಂಬರಿ ಬೀಜದ ಪುಡಿ ಚೆಲ್ಲಿದ ಅರ್ಧ ಕೆ.ಜಿ. ಹಂದಿಬಾಡು ಎಕ್ಸ್ ಟ್ರಾ ಅಷ್ಟೆ. ಅದಕ್ಕೂ ಮೊದಲು ಮುನೆಮ್ಮನ ಒಪ್ಪಿಗೆಯಲ್ಲಿ ಕ್ವಾರ್ಟರ್ 'ನಿಪ್ಪು ಸಾರ'(ಭಟ್ಟಿಸಾರಾಯಿ). ನಿದ್ದೆ ಬರುವವರೆಗೆ ತನ್ನ ಪಾತ್ರವಿದ್ದ 'ಶಶಿರೇಖಾ ಪರಿಣಯ, ಕುರುಕ್ಷೇತ್ರ' ಕೇಳಿಕೆಗಳ 'ಮಟ್ಟು'ಗಳ 'ದರುವು' (ಆಲಾಪನೆ ಸಹಿತ ಗಾಯನ). ಹಾಗಾಗಿ 'ಜಮಾಯಿಂಪು'(ತಾಲಿಮು) ನೆಪ ಮಾತ್ರ. ಕೇಳಿಕೆ ಮೇಷ್ಟ್ರಿಗೆ ಇವನ ಪಾತ್ರದ ತಲೆನೋವಿರುತ್ತಿರಲಿಲ್ಲ.

ಆ ಕನಸು ಕೂಡ ದೋಚಿಕೊಳುವ ದೊರೆಗಳೇತಕೆ?

ಸಂಕ್ರಾಂತಿ ಕಳೆದ ವಾರದ ದಿನಗಳಲ್ಲಿ ಕೋಳಿ ಪಂದ್ಯದಲ್ಲಿ ಗೆದ್ದ ಹುಂಜನ ಬಾಡಾಮ್ರ. ಯುಗಾದಿಯ ವರ್ಷತೊಡಕಿನ ದಿನ 'ಚೀಟಿ ಬಾಡು' (ಚೀಟಿ ಹಾಕಿ ಪಡೆದ ಮಾಂಸ) ಸಾರಿನಲ್ಲಿ ಮುನೆಮ್ಮ ಮುಕ್ಕಾಲು ಪಾಲು ಪಾಪಯ್ಯನಿಗೆ ಮೀಸಲಿಡುತ್ತಿದ್ದಳು. ಮುದ್ದೆ ಮಾತ್ರ ಅದೇ ಸೈಜು. ಈ ಎರಡು ದಿನಗಳಲ್ಲಿ 'ಹಾಫ್ ಬಾಟ್ಲಿ'ಗೆ ಅವಳ ಒಪ್ಪಿಗೆ ಇತ್ತು.

ಜೇನಾಗಿ ನಿನ್ನ ಬಳಿ ಬರುವೆನೆಂಬ ಮಾತು ಒಪ್ಪಿ ಬೆಪ್ಪನಾದೆನೇ ಶಕುಂತಲಾ!

ಇದರ ಮೇಲೆ ಒಂದು ಹನಿಗೂ ಸಮ್ಮತಿಯಿರಲಿಲ್ಲ. ಇದು ಅವರಿಬ್ಬರಿಬ್ಬರ ನಡುವಿನ ಕುಡಿತದ - ರಾಜಿಯ - ಒಪ್ಪಂದ. ಇದು ಮನೆ ದೇವರು ತಿರುಪತಿ ತಿಮ್ಮಪ್ಪನಿಗೆ ಮುಡುಪು ಕಟ್ಟಿಸಿ ಮಾಡಿಸಿದ ಪ್ರಮಾಣ. ಪಾಪಯ್ಯ ಅದನ್ನು ಮುರಿದವನೇ ಅಲ್ಲ. ಇನ್ನೂ ಹೆಚ್ಚಿನದೆಂದರೆ, ಮುನೆಮ್ಮ ಗಂಡನ ಕುಡಿತವನ್ನು ನಿಯಂತ್ರಿಸಲು ಮಾಡಿದ ತಂತ್ರೋಪಾಯ. ಹೇಳಿಕೊಟ್ಟವಳು ಈ ತಂತ್ರದಿಂದ ಯಶಸ್ಸು ಕಂಡಿದ್ದ ಅವಳ ಅಮ್ಮ.

ಪಾಪಯ್ಯ ಕುಲಾಚಾರವಾಗಿ ಬಂದಿದ್ದ, ಶ್ರಾವಣ ಮಾಸದಲ್ಲಿ ಮಾಂಸ ಮುಟ್ಟದ ನಿಯಮದಲ್ಲಿದ್ದ. ಮುನೆಮ್ಮ ಅದರ ಜೊತೆಗೆ ವರ್ಷಕ್ಕೊಮ್ಮೆ ಅಯ್ಯಪ್ಪನ ಮಾಲೆ ಹಾಕಿಸಿ, ನವೆಂಬರಿನಲ್ಲಿ ಇಪ್ಪತ್ತೆಂಟು ದಿನಗಳು ಮದ್ಯ, ಮಾಂಸದ ಉಪವಾಸವಿರಿಸುತ್ತಿದ್ದಳು. ಅವನೂ ಇರುತ್ತಿದ್ದ.

ಪಾಪಯ್ಯ ತನ್ನ ಹೊಲ ಉತ್ತ ಮೇಲೆ ಕೂಲಿಗೆ ನೇಗಿಲು ಹೋಗುತ್ತಿದ್ದ. ದೊಡ್ಡ ಕಡತೂರಿನ ಬಂಡೆ ಒಡೆದು ಮಾಡುತ್ತಿದ್ದ ಸೈಜುಕಲ್ಲುಗಳನ್ನು ಮಾಲೂರಿಗೆ ಸಾಗಿಸಲು ಬಾಡಿಗೆಗೆ ಗಾಡಿ ಹೊಡೆಯುತ್ತಿದ್ದ. ಕಲ್ಲಿನ ಸೈಜು ನೋಡಿಕೊಂಡು ಇಪ್ಪತ್ತು, ಇಪತ್ತೈದು ಕಲ್ಲುಗಳ ಮೇಲೆ ಒಂದೇವೊಂದು ಕಲ್ಲನ್ನೂ ಹಾಕಿಸುತ್ತಿರುತ್ತಿರಲಿಲ್ಲ.

ಶಕುಂತಲೇ, ನಿನ್ನ ಕಾಗದದ ಪದಪದ ವಿರಹ ತಾಪವನ್ನು ಹೆಚ್ಚಿಸುತ್ತಿದೆ

ತನ್ನ ಹೆಚ್ಚುವರಿ ಗಳಿಕೆಗಿಂತ ಎತ್ತುಗಳ ಹಿತ ಮುಖ್ಯವಾಗಿತ್ತು. ವಾರಕ್ಕೆರಡು ದಿನ ಎತ್ತುಗಳಿಗೆ 'ಕುಡತಿ' (ಕಲಗಚ್ಚು) ಬದಲಿಗೆ ಒಂದೊಂದು ಸೇರು ಹುರುಳಿಹಾಲನ್ನು ಇಡುತ್ತಿದ್ದ. ಸೋಮವಾರವಂತೂ ಎತ್ತುಗಳ ಹೆಗಲಿಗೆ ನೊಗವನ್ನು ತಾಕಿಸುತ್ತಿರಲಿಲ್ಲ. ತುರ್ತಾಗಿ ಬಸುರಿಯನ್ನು ಆಸ್ಪತ್ರೆಗೆ ಸಾಗಿಸಬೇಕಾಗಿ ಬಂದರೆ, ಎತ್ತುಗಳಿಗೆ ನಮಿಸಿ, ಕ್ಷಮೆ ಕೋರಿ ಗಾಡಿಗೆ ಹೂಡುತ್ತಿದ್ದ. ಅದಕ್ಕೆ ಬಾಡಿಗೆ ಇರಲಿಲ್ಲ. ಆದರೆ ಎತ್ತುಗಳಿಗೆ ಅಂದಿನ ಮೇವನ್ನು ಬಸುರಿಯ ಮನೆಯವರು ಕೊಡಬೇಕಿತ್ತು.

ಹೀಗಿದ್ದ ಪಾಪಯ್ಯನಲ್ಲಿ ಒಂದು ಆಸೆಯಿತ್ತು. ಒಂದು ದಿನ, ಒಂದೇ ಒಂದುದಿನ 'ಫುಲ್ ಬಾಟ್ಲಿ' ಹಾಕಿ ಅದರ ಮಜಾ ಅನುಭವಿಸಬೇಕೆಂಬುದೇ ಆ ಆಸೆ. ಅನೇಕ ದಿನ, ಅದರಲ್ಲಿಯೂ ಹಂದಿ ಬಾಡು ಹುರಿದ ದಿನ 'ಪರ್ಮೀಸ್ನು' ಕೊಡುವಂತೆ ಮುನೆಮ್ಮನನ್ನು ಬೇಡುತ್ತಿದ್ದ, ಅಂಗಲಾಚುತಿದ್ದ. ಪ್ರಯೋಜನವಿಲ್ಲವಾದಾಗ, ಗುರುವಾರ ಸಂತೆಯಲ್ಲಿ 'ಶಾಲೆ'(ಸೀರೆ) ಕೊಡಿಸುವುದಾಗಿ ಆಸೆ ಹುಟ್ಟಿಸುತ್ತಿದ್ದ. ಆಗೆಲ್ಲ ಮುನೆಮ್ಮನದು 'ಉಹೂಂ' ಒಂದೇ ಧ್ವನಿ. ಅದಕ್ಕೆ ಪಾಪಯ್ಯ ಕ್ವಾರ್ಟರಿಗೇ ಒಪ್ಪುವಷ್ಟು ಶಕ್ತಿಯಿತ್ತು.

ಪಾಪಯ್ಯ ಸಾರಿನ ಮಡಕೆಯನ್ನು ಒಲೆಯ ಮೇಲಿಂದ ಇಳಿಸಿದಾಗ, 'ಮುನೆಮ್ಮ ಇಲ್ಲವಲ್ಲ. ಈಗ 'ಫುಲ್ ಬಾಟ್ಲಿ' ಮಜಾ ನೋಡಬಹುದಲ್ಲ. ತಂದುಕೊಡಲ?' ಎಂದೆ. ಥಟ್ಟನೆ ಹೇಳಿದ, 'ದೇವರಾಣೆ ಬೇಡ. ಅವಳು ಹೋದರೂ ಕೊಟ್ಟ ಮಾತಿದೆ. ಅದನ್ನು ಮುರಿಯುವುದು ದ್ರೋಹ. ಮುರಿದರೆ ನಾನು ಅವಳ ಗಂಡನಾಗಿ ಇರಲಾರೆ.'

English summary
Affection, love between husband and wife last longer; here is an example. Kabbala Papayya and Kabbala Muniyamma both are not alive today. But their love and affection set an example. Beautiful story narrated by Oneindia Kannada columnist Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more