• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ ರಘುನಾಥ ಅಂಕಣ; ಬೇಸ್ತವಾರದ ಸಭೆಯಲ್ಲಿ...

By ಸ ರಘುನಾಥ, ಕೋಲಾರ
|
Google Oneindia Kannada News

ಬೇಸ್ತವಾರ ನಸುಕಿಗೆ ಇಡಿ ಊರೇ ಲಬುಬಗೆಯಿಂದ ಕೂಡಿತ್ತು. ಮೊದಲಿಗೆ ಸಂತೆಗೆ ಹೋಗುವ ತರಾತುರಿ. ಸಂಜೆಗೆ ಚಲ್ಲಾಪುರಮ್ಮನ ಗುಡಿ ಒಪ್ಪಾರದಲ್ಲಿ ಸಭೆ. ಯಾರು ಯಾರು ಪಾತ್ರ ಬಯಸುತ್ತಾರೆ? ಯಾರಿಗೆ ಯಾವ ಪಾತ್ರ ಕೊಡಬಹುದು? ಬೇಡವೆನ್ನುವವರಾರು? ಮುನಿಸಿಕೊಳ್ಳುವವರಾರು? ಯಾರು ಯಾರನ್ನು ಸಮಾಧಾನಪಡಿಸಲು ಮುಂದಾಗುವರು? ಸೀನರಿಗಳನ್ನು ಎಲ್ಲಿಂದ ತರಿಸುವರು? ಸ್ಟೇಜು ಹಾಕುವುದೆಲ್ಲಿ? ಊರ ಮುಂದಿನ ಅರಳಿಕಟ್ಟೆ ಮುಂದೋ? ಚಲ್ಲಾಪುರಮ್ಮನ ಗುಡಿ ಮುಂದೋ?

ನೀರುಬಾವಿ ದಾರಿಯಲ್ಲೊ? ಸ್ಟೇಜಿನ ಮುಖ ಹೊತ್ತು ಹುಟ್ಟೋ ಕಡೆಗೊ, ಹೊತ್ತು ಮುಳುಗೊ ಕಡೆಗೊ? ಈವರೆಗೆ ಉತ್ತರಕ್ಕೆ, ದಕ್ಷಿಣಕ್ಕೆ ಇಟ್ಟಿದ್ದಿಲ್ಲ. ಆವತ್ತಿಗೆ ಎದುರು ಚುಕ್ಕೆ ಯಾವ ಕಡೆಗಿರುತ್ತೊ ನೋಡಬೇಕಲ್ಲ? ಈ ಸಾರಿ ಪೂಜಾರಿ ಶೇಷಪ್ಪ ನೋಡ್ತಾನೊ, ಅಪ್ಪಯ್ಯನೇ ನೋಡ್ತಾನೊ ಅಥವಾ ನರಸಿಂಗರಾಯನೊ? ತಬಲ ಏನೋ ಮೋಟಪ್ಪಂದೇ. ಲೆಗ್ಗಾರ್ಮನೀನೊ, ಕೈಯಾರ್ಮನೀನೊ? ಪಿಟೀಲು ತಲಕಾಯಿ ರಾಮಣ್ಣಂದೊ, ಆಚೆಯಿಂದ ಕರೆಸುತ್ತಾರೊ? ಖರ್ಚು ಊರ ಮುಖ್ಯ ಕುಳಗಳದೊ, ಪಾರ್ಟುದಾರರೂ ಕೊಡಬೇಕೊ? ಮನೆಗಿಷ್ಟು ಅಂತಾಗುತ್ತೊ? ಹೊರಟ ಉತ್ತರಗಳು ತಾಳೆಯಾಗಿ, ನಾನು ಅಂದುಕೊಂಡಂತೇ ಆಯಿತು ಎಂದು ಬೀಗಲು ಸಂಜೆ ಸಭೆ ಸೇರಿ, ಮಾತು ನಡೆದು, ತೀರ್ಮಾನವಾಗಲು ರಾತ್ರಿಯಾಗಬೇಕು.

ಸ ರಘುನಾಥ ಅಂಕಣ; ಬೇಸ್ತವಾರಕ್ಕೆ ಮೂರು ದಿನ ಮುಂಚೆ...ಸ ರಘುನಾಥ ಅಂಕಣ; ಬೇಸ್ತವಾರಕ್ಕೆ ಮೂರು ದಿನ ಮುಂಚೆ...

ಹಿಂದೆ ಪಾರ್ಟು ಕಟ್ಟಿದೋರಲ್ಲಿ ಯಾರು ಯಾರು ಖಾಯಿಷು ಉಳಿಸಿಕೊಂಡಿದ್ದೀರ? ನನಗೆ ಬೇಡ ಅನ್ನೋರು ಯಾರಾದ್ರು ಇದ್ದಾರ ಅಂತ ಮೊದಲು ಗೊತ್ತಾಗಲಿ ಎಂದು ದುಗ್ಗಪ್ಪ ಸಭೆಯ ಮೊದಲ ಮಾತಾಡಿದ. ನಮ್ಮ ಪಾರ್ಟು ನಮಗಿರಲಿ ಅಂದವರು ಮುನಿಕೃಷ್ಣಪ್ಪ, ನಾರಾಯಣಪ್ಪ ಮಾತ್ರ. ನಾಲ್ಕೈದು ಮಂದಿ ನಮ್ಮ ಪಾರ್ಟುಗಳು ನಮ್ಮ ಹುಡುಗರಿಗಿರಲಿ ಎಂದರು. ಬೀರಣ್ಣ ನಿಂದೇನು? ಅಂದ ತಬಲ ಮೋಟಪ್ಪ. ನನ್ನ ಪಾರ್ಟುನ ನಮ್ಮ ಸೋಮೇಶನಿಗೆ ಅಂದ್ಕೊಂಡಿದ್ದೆ. ಆದ್ರೆ ಅವನಿಗೆ ಬೇಡ ಅಂದ. ಯಾಕೆ ಬೇಡ ಅಂದ ಅನ್ನೋದು ಕೆಲವರಿಗೆ ಅರ್ಥವಾಯಿತು.

ಬೇಡ ಅನ್ನೋದ್ಯಾಕೆ? ಉಮೇಶ ಪಾರ್ಟು ಮಾಡಲಿ ಅಂದ ನರಸಿಂಗರಾಯ. ಬೋಡೆಪ್ಪ, ಪಿಲ್ಲಣ್ಣರ ಹಲ್ಲುಗಳು ಕಟಕಟ ಅಂದದ್ದು ನರಸಿಂಗರಾಯನಿಗೆ ಕೇಳಿಸಿತು. ಕಣ್ಣಲ್ಲೇ ಏನೋ ಹೇಳಿದ. ಅವರಿಗೆ ಅರ್ಥವಾಗಿ ಸುಮ್ಮನಾದರು. ಲಕ್ಷ್ಮೀನಾರಾಯಣ ಬಾಯಿ ತೆಗೆದ. ನರಸಿಂಗರಾಯ ಅವನ ತೊಡೆ ಚಿವುಟಿದ. ಬೀರಣ್ಣನಿಗೆ ಆಶ್ಚರ್ಯ. ಅಪ್ಪಯ್ಯನ ಮುಖದಲ್ಲಿ ನಿನ್ನದು ಅಧಿಕಪ್ರಸಂಗವಾಯಿತು ನರಸಿಂಗ ಎಂಬ ಭಾವ. ಮುನೆಕ್ಕನಿಗೆ ಎದ್ದು ಹೋಗುವಷ್ಟು ಅಸಹನೆ. ಆದರೆ ಅಪ್ಪಯ್ಯನ ಭಯ.

ನರಸಿಂಗರಾಯ ಎಲ್ಲವನ್ನೂ ಗಮನಿಸುತ್ತ ನಟರ ಹೆಸರುಗಳನ್ನು ಬರೆದುಕೊಳ್ಳುತ್ತಿದ್ದ. ಮುನಿಕೃಷ್ಣಪ್ಪ, ನಾರಾಯಣಪ್ಪರನ್ನು ಬಿಟ್ಟರೆ ಉಳಿದವರೆಲ್ಲ ಹೊಸಬರೇ. ಯಾರಿಗೆ ಯಾವ ಪಾರ್ಟು ಅನ್ನೋದನ್ನ ಅಪ್ಪಯ್ಯ, ಮೋಟಪ್ಪ, ನರಸಿಂಗ ತೀರ್ಮಾನಿಸಲಿ. ಇದಕ್ಕೆ ಒಪ್ಪಿಗೇನ ಎಂದ ದುಗ್ಗಪ್ಪ. ಎಲ್ಲರೂ 'ಓ' ಎಂದರು. 'ಸದಾರಮೆ ಪಾರ್ಟೋ?' ಅಂದ ಉಮೇಶನ ಬಾಲವಾಗಿದ್ದ ರಂಗ. ಅವನ ಬಾಲ ಸಿದ್ಧ, 'ಅವಳಲ್ಲ ನರಸಿಂಗನ...' ಅನ್ನುತ್ತಿರುವಾಗಲೆ ಮೇಲೆದ್ದ ಬೀರಣ್ಣ, 'ಊರಾಗ ಕಿಚ್ಚು ಮಡುಗೋ ತಿರುಬೋಕಿಗಳು' ಅಂದು ಆ ಇಬ್ಬರಿಗೂ ರಪರಪ ನಾಲ್ಕು ಬಾರಿಸಿಬಿಟ್ಟ.

ರಂಗ ಕೋಪದಿಂದ 'ಮಗನಿಗೆ ಪಾರ್ಟು ಕೊಟ್ಟ ಅಂತ ಹಿಂದಿನದನ್ನ...' ಅನ್ನುತ್ತಿರುವಾಗಲೇ ಇನ್ನೆರಡು ಏಟು ಬಿತ್ತು. ಸಭೆ ಹೋ ಎಂದಿತು. ಹಿರಿಯರು ಕೂಡಿ ಸಭೆಯನ್ನು ತಹಬಂದಿಗೆ ತಂದರು. ಹಣಕಾಸಿನ ವಿಚಾರವನ್ನು ಎತ್ತಿಕೊಂಡರು. ಬೀರಣ್ಣ ತನ್ನದು ಹತ್ತು ಸಾವಿರ ಇರಲಿ ಎಂದ. ಅಂದಾಜಿನ ಲೆಕ್ಕದ ಪ್ರಕಾರ ಇನ್ನು ಇಪ್ಪತ್ತು, ಇಪ್ಪತ್ತೈದು ಸಾವಿರ ಬೇಕಾಗುತ್ತೆ ಅಂದ ಅಪ್ಪಯ್ಯ. ಊರಲ್ಲಿರೋದು ಎಂಬತ್ತು ಮನೆ. ಅನುಕೂಲಸ್ಥರು ಅನ್ನೋವು ಹತ್ತು ಅಂದುಕೊಳ್ಳೋಣ. ಅವರು ಸಾವಿರ ಸಾವಿರ ಕೊಡಬೋದು. ಉಳಿದ ಎಪ್ಪತ್ತು ಮನೆಗಳೋರು ನೂರುನೂರು ಕೊಡಲಿ. ಇಪ್ಪತ್ತೇಳು ಸಾವಿರ ಆಗುತ್ತೆ ನಂದು ಮೂರುಸಾವಿರ ಸೇರಿಸಿ. ಮುವ್ವತ್ತಾಗುತ್ತೆ. ಮುನೆಕ್ಕ ವಸೂಲಿ ಮಾಡಲಿ ಎಂದ ದುಗ್ಗಪ್ಪ. ಶೇಷಪ್ಪ ಚಲ್ಲಾಪುರಮ್ಮನಿಗೆ ಮಂಗಳಾರತಿ ಮಾಡಿ, ಶ್ರೀಮದ್ರಮಾರಮಣ ಗೋವಿಂದೋ... ಅಂದ ಜನ 'ಗೋವಿಂದ' ಎಂದರು.

English summary
There is a discussion on alloting different parts in drama at village. Narasingaraya started to write names of parts,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X