• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೀಡಿಯೋಕರ್ ಪ್ರಪಂಚದಲ್ಲಿ ಒಬ್ಬ ದನಿಯೆತ್ತುತ್ತಾನೆ!

By * ರವಿ ಬೆಳಗೆರೆ
|

ಅವನಾ...? ಅವನು ಬಿಡು, ಮೀಡಿಯೋಕರ್" ಅಂದಳು ಮಾಳವಿಕಾ. ನಾವಿಬ್ಬರೂ ಮಾತನಾಡುತ್ತಿದ್ದುದು ಒಬ್ಬ ಅಂಕಣಕಾರನ ಬಗ್ಗೆ. ನಂಗೊತ್ತು. ಮೀಡಿಯೋಕರ್ ಗಳು ಅಥವಾ ಮೀಡಿಯೋಕ್ರಿಟಿ ಎಂಬುದು ವಿಶ್ವವ್ಯಾಪಿ. ಆದರರ್ಥ, ಅಸಾಮಾನ್ಯರಲ್ಲದವರು ಎಲ್ಲ ರಂಗಗಳಲ್ಲೂ, ಎಲ್ಲ ದೇಶಗಳಲ್ಲೂ, ಎಲ್ಲ ಕಾಲದಲ್ಲೂ ಇರುತ್ತಾರೆ. ಒಬ್ಬ ಮಾಮೂಲಿ ವೈದ್ಯ, ಆರಕ್ಕೇರದ ಲೇಖಕ, ಮೂರು ದಾಟದ ವ್ಯಾಪಾರಿ, ಬಹಳ ಸಾಮಾನ್ಯವೆನ್ನಿಸುವಂತಹ ಚಿತ್ರಗಳನ್ನು ಬರೆಯುವ ಕಲಾವಿದ, ಇವತ್ತಿನ ಯುಗದಲ್ಲೂ ತಂಗಿ-ತವರು ಮನೆ-ಬಳೆ ಎಂಬಂತಹ ಸಬ್ಜೆಕ್ಟುಗಳನ್ನಿಟ್ಟುಕೊಂಡು ಸಿನೆಮಾ ಮಾಡುವ ನಿರ್ದೇಶಕ, ಹೊಸದನ್ನೇನನ್ನೂ ಕೊಡದಂತಹ ಪತ್ರಿಕೆ-ಇವೆಲ್ಲ ಇದ್ದೇ ಇರುತ್ತವೆ. ಇವು ಕೆಲವು ಸಲ ಗೆದ್ದಂತೆಯೂ ಕಾಣುತ್ತವೆ. ಆವತ್ತಿನ ಮಟ್ಟಿಗೆ ಗೆದ್ದೂ ಇರಬಹುದು.

ಕೆಲವು ಸಹ ಒಂದಿಡೀ ದಶಕದಲ್ಲಿ ಬಂದ ಸಾಹಿತ್ಯವನ್ನು ಎದುರಿಗೆ ಗುಡ್ಡೆಹಾಕಿಕೊಂಡು ಕುಳಿತರೆ ಥತ್, ಬರೀ ಮೀಡಿಯೋಕರ್ ಸಾಹಿತ್ಯವೇ ಬಂತು ಅನ್ನಿಸಿಬುಡುತ್ತದೆ. ಮನೆಯಲ್ಲಿ ಆಗುವ ಅಡುಗೆಯಿಂದ ಹಿಡಿದು ಯೂನಿವರ್ಸಿಟಿಯಲ್ಲಿ ರೂಪುಗೊಳ್ಳುವ ಸಂಶೋಧನಾ ಪ್ರಬಂಧಗಳ ತನಕ ಎಲ್ಲವುದರಲ್ಲೂ ಈ ಮೀಡಿಯೋಕ್ರಿಟಿ ಇದ್ದೇ ಇರುತ್ತದೆ.

ಆದರೆ ನಿಜವಾದ ಗೆಲುವು, ಸಾಧನೆ, ಯಶಸ್ಸು ಮತ್ತು ಸಾರ್ವಕಾಲಿಕತೆ ಇರುವುದು ಈ ಮೀಡಿಯೋಕ್ರಿಟಿಯನ್ನು ಯಾವನಾದರೂ ದಾಟಿದಾಗ. ಅದು ಕೆಲವರಿಂದ ಮಾತ್ರ ಸಾಧ್ಯವಾಗುತ್ತದೆ. ಜಗತ್ತಿನ ಅಸಂಖ್ಯ ಸ್ಟುಡಿಯೋಗಳಲ್ಲಿ ಲಕ್ಷಾಂತರ ಜನ ಪಿಟೀಲು ಕುಯ್ಯುತ್ತಲೇ ಇರುತ್ತಾರೆ, ರಾಗ ಸಂಯೋಜನೆ ಆಗುತ್ತಲೇ ಇರುತ್ತದೆ. ಆದರೆ ಒಂದು ಸಲ ಇದ್ದಕ್ಕಿದ್ದಂತೆ ಎಆರ್ ರೆಹಮಾನ್ ಎದ್ದು ನಿಂತು ಬಿಡುತ್ತಾನೆ : ಜೈಹೋ! ಅಲ್ಲಿಯ ತನಕ ಹಾಡುಗಳು ಬಂದೇ ಇರಲಿಲ್ಲ ಅಂತ ಅಲ್ಲ. ಬಂದುವುಗಳ ಪೈಕಿ ಹಿಟ್ ಆದಂತಹವುಗಳು ಇರಲೇ ಇಲ್ಲ ಅಂತಲೂ ಅಲ್ಲ. ಪ್ರತಿನಿತ್ಯ ಮೀಡಿಯೋಕ್ರಿಟಿಯ ದರ್ಶನವಾಗುತ್ತಲೇ ಇತ್ತು. ಆದರೆ ಚಿಚ್ಛಕ್ತಿ ಕಾಣಿಸಿದ್ದು ರೆಹಮಾನ್ ನಲ್ಲಿ. ಅವನು ಮೀಡಿಯೋಕ್ರಿಟಿಯನ್ನು ಎಡಗಾಲಲ್ಲಿ ಒದ್ದು ನಿಂತುಬಿಟ್ಟ.

ನೀವು ಲತಾ ಮಂಗೇಶ್ಕರ್ ವಿಷಯಕ್ಕೇ ಬನ್ನಿ. ಆಕೆ ಸುಮಾರು ಅರ್ಧ ಶತಮಾನ ಹಾಡಿದವರು. ನಿನ್ನೆ ಮೊನ್ನೆ ತನಕ ಹಾಡಿದರು. ಅವರ ದನಿ ಮೀಡಿಯೋಕರ್ ಆಗಿದ್ದಿದ್ದರೆ, ಅವರ ಜಾಗಕ್ಕೆ ಇನ್ನೊಬ್ಬಾಕೆ ಯಾವತ್ತಿಗೋ ಬಂದು ಕೂತಿರುತ್ತಿದ್ದಳು. ಹಾಗೆ ನೋಡಿದರೆ, ಲತಾಗಿಂತ ಮುಂಚೆಯೂ ಹಾಡುವವರಿದ್ದರು. ಲತಾ ಬಂದ ಮೇಲೆ ಅವರೆಲ್ಲ ಮರೆಯಾಗಿ ಹೋದರು. ಸಮಸ್ಯೆ ಇದ್ದುದು ಅದೇ ಮೀಡಿಯೋಕ್ರಿಟಿಯಲ್ಲಿ. ಅವರು ಒಳ್ಳೆಯ ಹಾಡುಗಳನ್ನು ಹಾಡಿದ್ದೂ ನಿಜ. ಅವು ಹಿಟ್ ಆದದ್ದೂ ನಿಜ. ಆದರೆ ಅವರೆಲ್ಲರನ್ನೂ ಮೀರಿ ಲತಾಜಿ ಬಂದುಬಿಟ್ಟರು. ಓಪಿ ನಯ್ಯರ್ ಎಂಬ ಅಪರೂಪದ ಸಂಗೀತ ನಿರ್ದೇಶಕ ಲತಾಜಿಯವರಿಂದ ಒಂದೇ ಒಂದು ಹಾಡು ಹಾಡಿಸಲಿಲ್ಲ. ಗೀತಾದತ್ ನ ನಂತರ ಆತ ಹಾಡಿಸಿದ್ದು ಕೇವಲ ಆಶಾ ಭೋಂಸ್ಲೆಯವರಿಂದ. ಯಾಕೆ ಹೀಗೆ ಅಂತ ಕೇಳಿದರೆ, 'ನನ್ನ ಸ್ವರ ಸಂಯೋಜನೆಗಳಿಗೆ ಆಕೆಯ ಕಂಠ ಸರಿ ಹೋಗುವುದಿಲ್ಲ' ಅಂದಿದ್ದ. ಹಾಗಂತ ಆತ ಲತಾರನ್ನು ಮೀಡಿಯೋಕರ್ ಗಾಯಕಿ ಅಂತ ಭಾವಿಸಿದ್ದನಾ? 'ಲತಾರಂತಹ ಗಾಯಕಿಯನ್ನು ಭಗವಂತ ಮದನ್ ಮೋಹನ್ ರಿಗಾಗಿ ಸೃಷ್ಟಿಸಿದ್ದಾನಾ? ಅಥವಾ ಮದನ್ ಮೋಹನ್ ರಂಥ ಅಮೋಘ ಸಂಗೀತ ನಿರ್ದೇಶಕರಿಗಾಗಿ ಲತಾ ಹುಟ್ಟಿದ್ದಾರಾ ಹೇಳುವುದ ಕಷ್ಟ' ಎಂದು ನಯ್ಯರ್ ಪ್ರಶಂಸಿಸಿದ್ದ. ಆದರೆ ಆತ ಆಶಾ ಭೋಂಸ್ಲೆಯವರಲ್ಲಿ ಮೀಡಿಯೋಕ್ರಿಟಿಯನ್ನು ಮೀರಿ ನಿಲ್ಲುವ ಪ್ರತಿಭೆಯಿದೆ ಅಂತ ಮನಗಂಡಿದ್ದ.

ಒಂದು ಸಲ ಭಾರತದ ಮಠಾಧೀಶರು, ದಾರ್ಶನಿಕರು, ಧರ್ಮಪ್ರವರ್ತಕರು ಬರೆದಿರುವ ಧರ್ಮ ಸಂಬಂಧಿ ಪುಸ್ತಕಗಳನ್ನೇ ತಿರುವಿ ಹಾಕಿ ನೋಡಿ. ನಿಮಗೆ ತಲೆ ಚಿಟ್ಟು ಹಿಡಿದು ಬೋರೆದ್ದು ಹೋಗುವಂತಹ ಕಸ ಹೇರಳವಾಗಿ ಸಿಗುತ್ತದೆ. ಅವೆಲ್ಲವುಗಳ ಮಧ್ಯೆ ಚಿಚ್ಛಕ್ತಿ ಹೊಳೆಯುವುದು ಆಚಾರ್ಯ ರಜನೀಶರ ಪುಸ್ತಕ ಮತ್ತು ಮಾತುಗಳಲ್ಲಿ. ಆತನಿಗೆ ತಾನು ಮೀಡಿಯೋಕರ್ ಅಲ್ಲ ಎಂಬುದು ಎಷ್ಟು ಬೇಗನೆ ಅರ್ಥವಾಗಿತ್ತೆಂದರೆ, ಆತ ಮೀಡಿಯೋಕರ್ ದರ್ಜೆಯ ಭಕ್ತರನ್ನು ಕೂಡ ಉಗಿದು ಆಚೆಗಟ್ಟುತ್ತಿದ್ದ.

ಹೀಗೆ ಬರೆದೆನೆಂಬ ಮಾತ್ರಕ್ಕೆ ನನಗೆ ಶ್ರೇಷ್ಠತೆಯ ವ್ಯಸನವಿದೆ ಅಂದುಕೊಳ್ಳಬೇಡಿ. ಶ್ರೇಷ್ಠತೆಯ ವ್ಯಸನ ಇವತ್ತಿನ ಇಡೀ ಜಗತ್ತಿಗೆ ಶುರುವಾಗಿದೆ. ನಾವು ತೆಗೆದುಕೊಳ್ಳುವ ಚಪ್ಪಲಿಯಿಂದ ಹಿಡಿದು, ಯಾವ ಆಸ್ಪತ್ರೆಯಲ್ಲಿ ನಮ್ಮ ಬಿಪಿ ಚೆಕ್ ಮಾಡಿಸುತ್ತೇವೆ ಎಂಬುದರ ತನಕ ನೋಡುತ್ತ ಹೋದರೆ, ಪ್ರತಿಯೊಂದರಲ್ಲೂ ನಾವು ದಿ ಬೆಸ್ಟನ್ನೇ ಹುಡುಕುತ್ತ ಹೋಗುತ್ತೇವೆ. ಗುಡ್ ಅಲ್ಲ, ಬೆಟರ್ ಅಲ್ಲ, ದಿ ಬೆಸ್ಟೇ ಬೇಕು ಎಂಬುದು ಇವತ್ತಿನ ಜಗನ್ನಿಯಮ. ಮೊದಲಾದರೆ ಚಪ್ಪಲಿ ಅಂಗಡಿಯವನು ನಿಮ್ಮ ಕಿಸೆಗೆ ಒಪ್ಪುವ ಚಪ್ಪಲಿ ತೆಗೆದು ತೋರಿಸುತ್ತಿದ್ದ. ಆಮೇಲೆ ನಿಮ್ಮ ಮುಖಕ್ಕೊಪ್ಪುವ ಕಾಲಿಗೊಪ್ಪುವ ಚಪ್ಪಲಿ ಹೆಕ್ಕಿ ಕೊಡುವವರು ಬಂದರು. ಈಗ ಅವರೆಲ್ಲ ಹೋಗಿ, ಇವತ್ತಿನ ಜಗತ್ತಿಗೊಪ್ಪುವ ಚಪ್ಪಲಿ ತೆಗೆದು ತೊಡಿಸುವವರು ಬಂದಿದ್ದಾರೆ. ಅವರಿಗೂ ಗೊತ್ತಾಗಿ ಹೋಗಿದೆ, ಮೀಡಿಯೋಕ್ರಿಟಿ ತುಂಬ ದಿನ ಬಾಳಿಕೆ ಬರುವುದಿಲ್ಲ.

ಇದೆಲ್ಲ ಬಿಡಿ. ಒಂದು ಇಡ್ಲಿ-ವಡೆಯ ವಿಷಯಕ್ಕೆ ಬನ್ನಿ. ಕನಿಷ್ಠ ಇಪ್ಪತ್ತು ವರ್ಷಗಳಿಂದ ನಾನು ಉಮಾ ಟಾಕೀಸ್ ಎದುರಿನ ಸಂದಿಯ ಬ್ರಾಹ್ಮಣರ ಕಾಫಿ ಕೇಂದ್ರದಲ್ಲಿ ಆಗಾಗ ತಿಂಡಿ ತಿನ್ನುತ್ತ ಬಂದಿದ್ದೇನೆ. ಅದೇ ರೀತಿ ಗಾಂಧಿಬಜಾರ್ ನ ವಿದ್ಯಾರ್ಥಿ ಭವನವೂ ಇದೆ. ಆವತ್ತಿನಿಂದ ಇವತ್ತಿನ ತನಕ ಈ ಹೊಟೇಲಿನವರು ತಮ್ಮ ಬೆಂಚು, ಕುರ್ಚಿ, ಟೇಬಲ್ಲು, ಗಲ್ಲಾ, ಕಡೆಗೆ ಬೋರ್ಡು ಬದಲಿಸಿಲ್ಲ. ಅವುಗಳ ಹಚ್ಚಹಳೆಯ ಇಂಟೀರಿಯರ್ ಗಳು ಹಾಗೆಯೇ ಇವೆ. ಅಲ್ಲಿಗೆ ಮುಖ್ಯಮಂತ್ರಿಗಳೂ ತಮ್ಮ ಹೆಂಡತಿಯರೊಂದಿಗೆ ಬಂದು ಹೋಗಿದ್ದಾರೆ. ಉಹುಂ, ಯಾವುದೂ ಬದಲಿಸಿಲ್ಲ. ಏಕೆಂದರೆ, ಇಡ್ಲಿ-ವಡೆಯ ರುಚಿ ಬದಲಾಗಿಲ್ಲ. ಯಾವುದೋ ರಾಯನ ಕಾಲಕ್ಕೆ ಅವರು ಬೆಂಗಳೂರಿನ ಎಲ್ಲ ಮೀಡಿಯೋಕರ್ ರುಚಿಯ ಹೊಟೇಲುಗಳ ತಲೆಯ ಮೇಲೆ ಹೊಡೆದಂತೆ ತಮ್ಮ ಛಾಪು ಸ್ಥಾಪಿಸಿಬಿಟ್ಟರು. ಆಮೇಲೆ ಯಾವುದನ್ನೂ ಬದಲಿಸಬೇಕು ಅಂತ ಅವರಿಗೆ ಅನ್ನಿಸಲೇ ಇಲ್ಲ. ಅವರ ನಂತರ ಬೆಂಗಳೂರಿನಲ್ಲಿ ಎಷ್ಟು ಪಂಚತಾರಾ ಹೊಟೇಲುಗಳೂ, ಎಷ್ಟು ಸಾಗರ್ ಗಳೂ, ಎಷ್ಟು ದರ್ಶಿನಿಗಳೂ ಬಂದವೋ ನೋಡಿ. ವಿದ್ಯಾರ್ಥಿ ಭವನದವರು ಮೀಡಿಯೋಕರ್ ಆಗಿದ್ದಿದ್ದರೆ ಈ ಫಾಸ್ಟ್ ಫುಡ್ ಗಳ ಕಾಲದಲ್ಲಿ ಬದುಕಿ ಉಳಿಯುತ್ತಿದ್ದರಾ?

ಪತ್ರಿಕೆಯ ವಿಷಯದಲ್ಲಿ ಅಷ್ಟೆ. ನಾನು ಬಣ್ಣಕ್ಕಿಂತ ಹೆಚ್ಚಾಗಿ ಬರಹವನ್ನು ನಂಬಿದವನು. ಗರಿಗರಿ ಹಾಳೆ, ಢಾಳ ಢಾಳ ಬಣ್ಣ, ನುಣುಪು ನುಣುಪು ಪುಟಗಳು, ಚೆಂದ ಚೆಂದ ಫೋಟೋಗಳು. ಒಂದು ತಗಂಡ್ರೆ ಹನ್ನೊಂದು ಫ್ರೀ ಎಂಬಂತಹ ಆಫರುಗಳೂ- ಇವೆಲ್ಲ ಚೆಂದವೇ. ಆದರೆ ಓದುಗ ಬಯಸುವುದು ಬರಹದಲ್ಲಿನ ಬಿಸುಪನ್ನ. ನೀವು ಏನೇ ಬೆಳ್ಳಿತಗಡಿನಲ್ಲಿ ಸುತ್ತಿ ಕೊಡಿ, ಒಳಗಿರುವ ಸರಕು ಮೀಡಿಯೋಕರ್ ಆಗಿದ್ದರೆ ಓದುಗ ದೊರೆ ಅದನ್ನು ಎತ್ತಿ ಪಕ್ಕಕ್ಕಿಟ್ಟು ಬಿಡುತ್ತಾನೆ. ಈ ಹದಿನೈದು ವರ್ಷಗಳಲ್ಲಿ ಮೀಡಿಯೋಕರ್ ಗಳು ಅನೇಕ ಪತ್ರಿಕೆ ಮಾಡಿದರು. ಉಳಿದ ಗಟ್ಟಿ ಕಾಳು ಕೆಲವೇ. ಒಂದೇ ಸಬ್ಜೆಕ್ಟು, ಒಂದೇ ಐಡಿಯಾಲಜಿ ಅಥವಾ ಒಂದೇ ನಿಲುವು ಇಟ್ಟುಕೊಂಡು ಬರೆಯುತ್ತ ಹೋದರೆ ಎಂಥೆಂಥ ಅಂಕಣಕಾರರೂ ಬೋರಾಗಿ ಬಿಡುತ್ತಾರೆ. ಇನ್ನು ಸಂಪಾದಕರು ಬೋರಾಗದೆ ಇದ್ದಾರೆಯೆ?

ಇಷ್ಟೆಲ್ಲ ಆದರೂ ಮೀಡಿಯೋಕರ್ ಗಳು ಬದುಕೇ ಇರುತ್ತಾರೆ. ಮೀಡಿಯೋಕ್ರಿಟಿ ಇದ್ದೇ ಇರುತ್ತದೆ. ಆದ್ದರಿಂದಲೇ ಜಗತ್ತು-ಅದರ ವ್ಯವಹಾರಗಳು ಜಾರಿಯಲ್ಲಿರುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more