ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಳೆತನ ಮಾಡಲು ಜಿಪುಣತನವೇಕೆ?

By * ರವಿ ಬೆಳಗೆರೆ
|
Google Oneindia Kannada News

Do care about true friendship
ರಕ್ತ ಸಂಬಂಧಗಳ ವಿಷಯದಲ್ಲಿ ನಂಗೆ ಛಾಯ್ಸ್ ಇಲ್ಲ : ಆದರೆ ಗೆಳೆಯರ ವಿಷಯದಲ್ಲಿ ನಾನು ಸಕತ್ ಛೂಸಿ! ಹೀಗಂತ ಒಂದು ಪಾಲಿಸಿ ಮಾಡಿಕೊಳ್ಳದಿದ್ದರೆ ಯಾರದೇ ಆದರೂ ಆ ಬದುಕು ತೊಂದರೆಗೆ ಈಡಾಗುತ್ತದೆ. ನಾನು ಸಾಮಾನ್ಯವಾಗಿ, ಲವ್ ಮ್ಯಾರೇಜ್ ಮಾಡಿಕೊಂಡು ಹತ್ತು ಹನ್ನೆರಡು ತಿಂಗಳು ಸಂಸಾರ ಮಾಡಿದ ದಂಪತಿಗಳನ್ನು ಭೇಟಿಯಾದಾಗ ಅವರ ಬದುಕುಗಳಲ್ಲಿ ಪ್ರೀತಿ ಮತ್ತು ಸಂತೋಷ ಎಷ್ಟರ ಮಟ್ಟಿಗೆ ಉಳಿದಿದೆ ಅಂತ ಕಿರುಗಣ್ಣಲ್ಲೇ ಗಮನಿಸಿ ಲೆಕ್ಕ ಹಾಕುತ್ತಿರುತ್ತೇನೆ. ಹೀಗೆ ಲೆಕ್ಕ ಹಾಕಿ ನಿರ್ಧರಿಸಲು, ನಿಶ್ಚಿತವಾದ ಮಾನದಂಡಗಳೇನೂ ಇಲ್ಲ. ಕೆಲವು ಪ್ರಶ್ನೆಗಳನ್ನು ಅವರಿಗೇ ಕೇಳಿಕೊಳ್ಳಲು ಬಿಡುತ್ತೇನೆ.

ಇವನನ್ನು ಯಾಕೆ ಮದುವೆಯಾದೆ? ಇವಳನ್ನೇಕೆ ಕಟ್ಟಿಕೊಂಡೆ? ಅವತ್ತಿಗದು ಅನಿವಾರ್ಯವಾಗಿತ್ತಾ? ಮಾಡಿಕೊಂಡ ಮದುವೆ ಹತ್ತು ವರ್ಷದ ನಂತರವೂ ಅರ್ಥಪೂರ್ಣವಾಗಿ ಉಳಿದಿದೆಯಾ? ಪ್ರೀತಿಯ ತೀವ್ರತೆ, ಉತ್ಕಟತೆಗಳಲ್ಲಿ ಏರುಪೇರು ಇರಬಹುದು. ಇವತ್ತು ತುಂಬ ಇಷ್ಟವಾಗಿ ಬಿಡುವ ಹೆಂಡತಿ, ನಾಳೆ ಮಧ್ಯಾಹ್ನದ ಹೊತ್ತಿಗೆ 'ಒಂದಷ್ಟು ದಿನ ತವರು ಮನೆಗಾದರೂ ಹೋಗಿ ಬರಬಾರದೆ" ಅನ್ನಿಸಬಹುದು.

ಗಂಡ ಟೂರಿಗೆ ಹೋದರೆ ನಾಲ್ಕು ದಿನ ನೆಮ್ಮದಿಯಾಗಿರಬಹುದು ಅಂತ ಹೆಂಡತಿಗೆ ಅನ್ನಿಸಿದರೆ, ಅದು ತೀರಾ ದಾಂಪತ್ಯ ಹಳಸಿ ಹೋದುದರ ಸಂಕೇತವೇನಲ್ಲ. ಎಷ್ಟೇ ಪ್ರೀತಿಯಿಂದ ಎತ್ತಿಕೊಂಡರೂ, ತುಂಬ ಹೊತ್ತು ಅಪ್ಪಿಕೊಂಡರೆ ಮಗುವಿಗೂ ಉಸಿರುಗಟ್ಟಿದಂತಾಗುತ್ತದೆ. ಅಂಥ ಚಿಕ್ಕಪುಟ್ಟ ರಿಲೀಫುಗಳನ್ನು ದಾಂಪತ್ಯ ಬೇಡುತ್ತದೆ. ನಾನು ಅದರ ಬಗ್ಗೆ ಮಾತಾಡುತ್ತಿಲ್ಲ. ಆದರೆ, ಈ ವ್ಯಕ್ತಿಯನ್ನ ಅಪ್ಪಿಕೊಂಡು ತುಂಬ ತಪ್ಪು ಮಾಡಿದೆ. "I fell into wrong hands' ಅಂತ ಪದೇಪದೆ ತುಂಬ ಗಂಭೀರವಾಗಿ ಅನ್ನಿಸತೊಡಗಿದೆಯಾ? ಅದು ಹಳಸಿದುದರ ಸಂಕೇತ.

ಎಷ್ಟೋ ಸಲ ನಾವು 'ಬೇರೆ ದಾರಿಯಿಲ್ಲ" ಎಂಬ ಕಾರಣಕ್ಕೆ ಕೆಲವು ಕೆಲಸಗಳನ್ನು ಮಾಡಿಬಿಟ್ಟಿರುತ್ತೇವೆ. ಸರಿಯಾಗಿ ಆಲೋಚಿಸಿ ನೋಡಿದರೆ 'ಬೇರೆ ದಾರಿ"ಗಳನ್ನು ನಾವು ಹುಡುಕಿರಲೇ ಇಲ್ಲ ಅಂತ ಎಷ್ಟೋ ವರ್ಷಗಳಾದ ಮೇಲೆ ಗೊತ್ತಾಗಿರುತ್ತದೆ. ಮಾಡಲು ಬೇರೆ ಏನೂ ಕೆಲಸವಿಲ್ಲ ಎಂಬ ಕಾರಣಕ್ಕಾಗಿ ನಮ್ಮ ಟೇಸ್ಟಿಗೆ ಸಂಬಂಧವೇ ಇಲ್ಲದ ಒಂದು ಸಿನಿಮಾಕ್ಕೆ ಹೋಗಿಬಿಟ್ಟಂತೆ...! ಕ್ಲಾಸಿನಲ್ಲಿ ಇದ್ದವಳು ಇವಳೊಬ್ಬಳೇ ಸುಂದರಿ ಎಂಬ ಕಾರಣಕ್ಕೆ ಅವಳ್ಯಾವಳನ್ನೋ, ತನ್ನ ಟೇಸ್ಟಿಗೆ ಸಂಬಂಧವೇ ಇರದಂಥ ಹುಡುಗಿಯೊಬ್ಬಳನ್ನು ಅವನು ಪ್ರೀತಿಸಿಬಿಟ್ಟಿರುತ್ತಾನೆ.

ಸಿನಿಮಾಕ್ಕೆ ಹೋಗುವ ಬದಲು ಪುಸ್ತಕ ಓದಬಹುದಿತ್ತು, ಸಂಗೀತ ಕೇಳಬಹುದಿತ್ತು, walk ಮಾಡಬಹುದಿತ್ತು ಅಂತೆಲ್ಲ ಆ ಮೇಲೆ ಅನ್ನಿಸುತ್ತದೆ. ಇವಳನ್ನು ಪ್ರೀತಿಸಿ ಬಿಡುವ ಬದಲು, ಗೆಳೆಯನಾಗಿರಬಹುದಿತ್ತು ಅಂತಲೂ ಅನ್ನಿಸುತ್ತದೆ. ನೀವು ಪರೀಕ್ಷಿಸಿ ನೋಡಿ, ಅತ್ಯುತ್ತಮ ಗೆಳೆಯನಾಗಿರಬಹುದಾದ ಮನುಷ್ಯನೊಬ್ಬ ಮದುವೆಯಾಗಿ ಅತಿ ಕೆಟ್ಟ ಗಂಡ ಅನ್ನಿಸಿಕೊಂಡಿರುತ್ತಾನೆ. ಗೆಳೆತನದ ಅವಯನ್ನು ಒಂದು ವರ್ಷದಿಂದ ಒಂದೇ ತಿಂಗಳಿಗೆ reduce ಮಾಡಿಕೊಂಡು, ಇವನನ್ನು ಬಿಟ್ಟರೆ ಗತ್ಯಂತರ ಇಲ್ಲವೆಂಬಂತೆ ಗಬಗಬನೆ ಪ್ರೀತಿಸಲಾರಂಭಿಸಿದ್ದು, - ಇವಳ ತಪ್ಪಲ್ಲವೆ?

ಎಷ್ಟೋ ಸಲ ಹುಡುಗಿಯರನ್ನು 'ಅವನನ್ನು ಯಾಕೆ ಪ್ರೀತಿಸಿದೆ?" ಅಂತ ಕೇಳಿದರೆ, 'ಈ ಪ್ರಶ್ನೆಗೆ ಹೇಗೆ ಉತ್ತರ ಹೇಳೋಕಾಗುತ್ತೆ? ಮನಸ್ಸು ಯಾವ ಕ್ಷಣದಲ್ಲಿ, ಯಾರ ಮೇಲೆ, ಹೇಗೆ ಒಲಿದು ಬರುತ್ತೋ...?" ಎಂಬಂತಹ stupid ಉತ್ತರ ಕೊಡುತ್ತಾರೆ. ಆ ಉತ್ತರ ನಿಜವಲ್ಲ. ಅವತ್ತು, ಆ ಕ್ಷಣದಲ್ಲಿ, ಅವನು ಸರಿ ಅನ್ನಿಸಿದ್ದ. ಅವತ್ತು, ಆ ಕ್ಷಣದಲ್ಲಿ, ಮತ್ತೊಬ್ಬ ತನ್ನ ಪರಿಯಲ್ಲಿರಲಿಲ್ಲ. ಅವತ್ತಿನ ಆ ಕ್ಷಣದಲ್ಲಿ ಅವಳ ಬದುಕಿಗೆ ಬೇರೆ ಪ್ರಯಾರಿಟಿಗಳಿರಲಿಲ್ಲ. ಅವತ್ತಿನ ಆ ಕ್ಷಣ- ಅವಳು ತರ್ಕಬದ್ಧವಾಗಿ ಏನನ್ನೂ ಯೋಚಿಸದೆ ತನ್ನ ನಿಲುವು, ಮನೋಭಾವ, ಅಂತಸ್ತು, ಟೇಸ್ಟು, ವ್ಯಕ್ತಿತ್ವಗಳಿಗೆ ಸಂಬಂಧವೇ ಇಲ್ಲದಂಥ, ಕೆಲಸಕ್ಕೆ ಬಾರದ ಡಿಂಗೋ ವೆಂಕಟರಮಣನನ್ನು ಪ್ರೀತಿಸಿ ಮದುವೆಯಾದಳು ಎಂಬುದು ಹೆಚ್ಚು ನಿಜ!

ಇಂಥ ತಪ್ಪುಗಳು ಕೇವಲ ಮದುವೆಗಳ ವಿಷಯದಲ್ಲಿ ಆಗಿರುವುದಿಲ್ಲ. ಅದಕ್ಕಿಂತ ಹೆಚ್ಚು repeated ಆಗಿ ನಾವು ಆಯ್ಕೆ ಮಾಡಿಕೊಳ್ಳುವ ಗೆಳೆಯರ ವಿಷಯದಲ್ಲಿ ಆಗಿಬಿಟ್ಟಿರುತ್ತವೆ. ಕಾಲೇಜಿಗೆ ಹೋದ ಹೊಸತರಲ್ಲಿ ಬೇರೆ ಯಾರೂ ಸಿಕ್ಕಲಿಲ್ಲ, ಬಸ್ಸಿನಲ್ಲಿ ಜೊತೆ ಅಂತ ಯಾರೂ ಇರಲಿಲ್ಲ, ನನ್ನ ಅತ್ಮ ಸಂಗಾತಿ ಯಾವುದೋ ಊರಿಗೆ ಹೋಗಿ ಕುಕ್ಕರಬಡಿದಿದ್ದ , ನಮ್ಮ ಊರಿನವನಲ್ವಾ- ಇವೇ ಮುಂತಾದ ಕಾರಣಗಳಿಂದಾಗಿ ನಮ್ಮ ವ್ಯಕ್ತಿತ್ವ, ಅಭಿಪ್ರಾಯ, ಬುದ್ಧಿವಂತಿಕೆಗಳಿಗೆ ಸಂಬಂಧವೇ ಇಲ್ಲದಂಥವನೊಬ್ಬನನ್ನು ಫ್ರೆಂಡ್ ಮಾಡಿಕೊಂಡು ಬಿಟ್ಟಿರುತ್ತೇವೆ. ಫ್ರೆಂಡ್‌ಶಿಪ್ ಆಗಲಿ, ಆದರೆ ಅದೇ ಒಂದು ಕಾರಣವಾಗಿ ಆತ ಅಥವಾ ಆಕೆಯ ಫ್ರೆಂಡ್‌ಶಿಪ್‌ನಿಂದ ಹೆಜ್ಜೆ ಮುಂದೆಹೋಗಿ ಇಮೋಷನಲಿ ಡಿಪೆಂಡೆಂಟ್ ಆಗಿ ಬಿಟ್ಟರೆ ಕೊನೆಗಾದರೂ ಸುಖ ಸಿಗತ್ತಾ?

ತೀರ ಚಿಕ್ಕ ವಯಸ್ಸಾದರೆ ಆ ಮಾತು ಬೇರೆ. ಕೇರಿಯಲ್ಲೇ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳಬೇಕು. ಶಾಲೆಯಲ್ಲಿ ಸಿಕ್ಕವರೇ ಗೆಳೆಯರಾಗಬೇಕು. ಆದರೆ ಬೆಳೆಯುತ್ತ ಬೆಳೆಯುತ್ತ ಈ ಬದುಕು ನಮಗೆ ಸಾವಿರ lessonsಗಳನ್ನ ಕೊಡುತ್ತದೆ. ವಯಸ್ಸಿನ ಅಂತರವೇ ಇಲ್ಲದೆ ಗೆಳೆಯರಾಗಬಲ್ಲಂಥವರು ದೊರಕುತ್ತಾರೆ. ಎಂಥ ಸಂದರ್ಭದಲ್ಲೂ ಮಿಸ್ ಬಿಹೇವ್ ಮಾಡದ, ದಾರಿ ತಪ್ಪಿಸದ, ಸುಳ್ಳು ಹೇಳದ, ವಂಚಿಸದ, ನಮ್ಮನ್ನು ತೊರೆದ ನಂತರವೂ ನಮ್ಮ ಬಗ್ಗೆ ಕೆಟ್ಟ ಮಾತಾಡದ ಸ್ನೇಹಿತರು ಸಿಗುತ್ತಾರೆ. ನಿಮಗೆ wild lifeನಲ್ಲಿ ಆಸಕ್ತಿಯಿದ್ದರೆ ಅದಕ್ಕೆ ಅಂತಲೇ ಒಂದು ಗೆಳೆಯರ ಬಳಗ, ಸಾಹಿತ್ಯಾಸಕ್ತಿಗೇ ಅಂತಲೇ ಒಂದು ಪುಟ್ಟ ಸಮೂಹ, ಹಣಕಾಸಿನ ವ್ಯವಹಾರಕ್ಕೆ ಅಂತಲೇ ಕೆಲವು ಮಿತ್ರರು, ಭಾವುಕವಾಗಿ related ಆಗಲಿಕ್ಕೆ ಅಂತಲೇ ಒಂದು ಗೆಳೆತನ- ಹೀಗೆ ತುಂಬ choosi ಆಗಿ ಇರಲಿಕ್ಕೆ ಸಾಧ್ಯ.

ಆದರೆ ನಾವು ಅಂಥ option ಬಗ್ಗೆ ಯೋಚಿಸುವುದೇ ಇಲ್ಲ. ಹೊಸ ಗೆಳೆತನಗಳತ್ತ ಕೈ ಚಾಚುವುದೇ ಇಲ್ಲ. ಇರೋ ಚಿಕ್ಕ ಊರಿನಲ್ಲಿ, ಅದೇ ಕೇರಿಯಲ್ಲಿ, ಮತ್ತದೇ ಬಾರಿನಲ್ಲಿ, ನಮ್ಮನ್ನು ವಾಚಾಮಗೋಚರ ಹೊಗಳುವವರೋ ಅಥವಾ ನಮ್ಮ ಖರ್ಚಿನಲ್ಲಿ ಕುಡಿದು ಎದ್ದು ಹೋಗುವವರೋ- ಅಂಥವರದೊಂದು ವಲಯ ಸೃಷ್ಟಿಸಿಕೊಂಡು ಬಿಟ್ಟಿರುತ್ತೇವೆ. ಅದರಾಚೆಗೆ ನಾವೂ ಬೆಳೆಯುವುದಿಲ್ಲ. ಅವರಂತೂ ನಮ್ಮನ್ನು ಬೆಳೆಸುವ ಸಾಧ್ಯತೆಗಳಿರುವುದಿಲ್ಲ. ಕೊಂಚ ಪ್ರಯತ್ನಿಸಿ ನೋಡಿ. ಹೊಸ ಗೆಳೆತನಗಳಲ್ಲಿ ಸೌಖ್ಯವಿದೆ. ಹೊಸ ಜೀವನೋತ್ಸಾಹ ನುಗ್ಗಿ ಬರುವ ಸಾಧ್ಯತೆಯಿದೆ. ಒಂದು ನಿಮಿಷ. ನಿಲ್ಲಿ!

ಒಂದು ಆಸ್ತಿ ಖರೀದಿಸಿದರೆ ಇದರಿಂದ ಎಷ್ಟು ಲಾಭ ಅಂತ ನೀವು ಯೋಚಿಸುತ್ತೀರೋ ಇಲ್ಲವೋ: ಈ ಗೆಳೆತನದಿಂದ ನಷ್ಟವಿಲ್ಲ ತಾನೇ ಅಂತ ನಾನಂತೂ ಖಂಡಿತ ಯೋಚಿಸುತ್ತೇನೆ. ಹುಟ್ಟಿಕೊಂಡ ಹೊಸ ಮೈತ್ರಿ ನನ್ನನ್ನು ಬೌದ್ಧಿಕವಾಗಿ ಬೆಳೆಸುತ್ತದಾ, ನನ್ನ ಮನೆಗೆ ಒಳ್ಳೆಯದಾಗುತ್ತಾ? ಮನಸಿಗೆ ಹಿತ ನೀಡುತ್ತದಾ, ಹೊಸ ಅರಿವು ಮೂಡಿಸುತ್ತದಾ, ಕಡೇ ಪಕ್ಷ ನನ್ನ ದುಗುಡ ನೀಗಿ ನನಗೆ ಚಿಕ್ಕ ಚಿಕ್ಕ ಸಂತೋಷಗಳನ್ನಾದರೂ ಕೊಡಮಾಡುತ್ತದಾ ಅಂತ ಯೋಚಿಸುತ್ತೇನೆ.

'ಪ್ರಾಣಕ್ಕೆ ಪ್ರಾಣ ಕೊಡ್ತೀನಿ ಕಣೇ." ಅಂತ ಎಮೋಷನಲ್ ಆಗಿ ಮಾತನಾಡುವ ಗೆಳೆಯರಿಗಿಂತ ಪ್ರಾಣ ತಿನ್ನದೆ ತಮ್ಮ ಪಾಡಿಗೆ ತಾವಿದ್ದು, ಭಾವ-ಬುದ್ಧಿ ಬೆಳೆಸುವ ಗೆಳೆಯರ ಅವಶ್ಯಕತೆಯಿದೆ ಅಂತ ನಿಮಗನ್ನಿಸುವುದಿಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X