ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವತ್ತರ ಇಳಿಜಾರಲ್ಲಿ ಹೆಜ್ಜೆ ಹುಶಾರು ಸರ್!

By * ರವಿ ಬೆಳಗೆರೆ
|
Google Oneindia Kannada News

Be careful when you cross 50
ಹತ್ತುವುದು ಸುಲಭ. ಪರ್ವತವೊಂದಷ್ಟೇ ಅಲ್ಲ: ಬದುಕಿನ ಏಣಿ ಹತ್ತುವುದೂ ಸುಲಭ. ಮೇಲಿರುವವರು ಯಾರೋ ಕೈಯ್ಯಾಸರೆ ಕೊಟ್ಟು ಎಳೆದುಕೊಂಡು ಬಿಡುತ್ತಾರೆ. ಕೆಳಗಿನವರು ಯಾವುದೋ ಪ್ರೀತಿಗೆ ಬಿದ್ದು ಮೇಲಕ್ಕೆ ಎತ್ತುತ್ತಾರೆ. ಹತ್ತಿದ ಸುಸ್ತು ಗೊತ್ತಾಗುವುದರೊಳಗಾಗಿ ಮೇಲಕ್ಕೆ ತಲುಪಿ ಬಿಡುತ್ತೇವೆ. ಹತ್ತಿದ್ದು ನಾನೇನಾ ಅಂತ ಆಶ್ಚರ್ಯವಾಗುವಂಥ ಯಮ ಎತ್ತರಗಳಿಗೆ ಹತ್ತಿಬಿಟ್ಟಿರುತ್ತೇವೆ. ನಾನಂತೂ ಸಮುದ್ರದ ಮಟ್ಟಕ್ಕಿಂತ ತುಂಬ ಕೆಳಗಿರುವ ಮೋರಿಯ ಆಳದಿಂದ ಮೇಲೆ ಬಂದವನು. ಏಣಿಯ ತುತ್ತುದಿ ತಲುಪಿಬಿಟ್ಟಿದ್ದೇನೆಂದು ಬೀಗಲಾರೆ. ಆದರೆ ನನಗೆ ನನ್ನದೇ ಆದ ಎತ್ತರವಿದೆ. ನನ್ನದೇ ಆದ ನಿಲುಕು ನನಗಿದೆ.

ಹಾಗಂತ ಸುಲಭಕ್ಕೆ ಹತ್ತಿ ನಿಂತು ಬಿಡಬಹುದಾದ ಎತ್ತರವೇನಲ್ಲ ಇದು. ಹತ್ತುವ ಯತ್ನದಲ್ಲಿ ಎಷ್ಟು ಸಲ ಜಾರಿದೆವೋ? ಎಷ್ಟು ಸಲ ಬಿದ್ದೆವೋ? ಎಂಥ ಪರಿ ಮೊಳಕಾಲು, ತೊಡೆ, ಮುಂಗೈ, ಅಂಗೈ, ಮುಸುಡಿ ಎಲ್ಲ ತರಚಿ ಹೋಯಿತಲ್ಲ? ಕೆಲವೊಮ್ಮೆಯಂತೂ ಪಾತಾಳಕ್ಕೇ ಬಿದ್ದುಬಿಟ್ಟೆವೇನೋ ಎಂಬಂತೆ! ಮತ್ತೊಮ್ಮೆ ಎದ್ದು ಹತ್ತಲು ಸಾಧ್ಯವೇ ಇಲ್ಲದ ಹಾಗೆ defeat ಆಗಿ ಹೋದಂತೆ.

ಆದರೂ ಅಂದುಕೊಂಡ ಹೈಟು, ತುದಿ ತಲುಪಿದಾಗ ಅದ್ಯಾವುದೂ ಗೊತ್ತಾಗಲಿಲ್ಲ ಬಿಡಿ. ಎಲ್ಲ ಮರೆತು ಹೋಗುವಂತೆ ಮಾಡಿಬಿಡುತ್ತದೆ ಗೆಲುವು. ತರಚುಗಾಯ, ಒಡೆದ ಮುಸುಡಿ, ಮುರಿದ ಮೂಳೆ ಎಲ್ಲ ತಮಗೆ ತಾವೇ ಸರಿಹೋಗಿಬಿಡುತ್ತವೆ. ಇನ್ನೂ ಎಷ್ಟು ಮಹಾ ವಯಸ್ಸು. ನಲವತ್ತು ಕೂಡ ಒಂದು ವಯಸ್ಸಾ? Come on.

ಇದು ಸಂತಸ ಬೇಡುವ ಸಮಯ. ಗೆಲುವನ್ನು ಸೆಲೆಬ್ರೇಟ್ ಮಾಡುವ ದಿನಗಳು. ಹಿಂದೆಂದಿಗಿಂತ ಹೆಚ್ಚು ಸಂತೋಷದಿಂದ ಬರ್ತ್ ಡೇ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಸೊಗಸಾದ ಅಡುಗೆ, ಸುಮ್ಮನೆ ಒಂದು ಉಪ್ಪು-ತುಪ್ಪ-ಅನ್ನ ತಿಂದರೂ ಅಮೃತ! ಆದರೆ ಸುಖ ಯಾವಾಗಲೂ ಕೈ ಚಾಚುತ್ತಲೇ ಇರುತ್ತದೆ. ಉಪ್ಪು ತುಪ್ಪ ಎರಡೇ ಸಾಕಾಗುವುದಿಲ್ಲ. ಪಂಚ ಭಕ್ಷ್ಯ ಮಾಡಿಸಿಕೊಂಡು ತಿನ್ನುತ್ತೇವೆ. ಸಾಯಂಕಾಲವಾದರೆ ವಿಸ್ಕಿ, ಗೋಡಂಬಿ, ಚೀಜ್, ಹುಡುಗಿಯ ಕೆನ್ನೆಯಷ್ಟು ಮೃದುವಾದ ಮಾಂಸ. ಅದೇನಾಗುತ್ತದೋ ಏನೋ? ನಲವತ್ತರ ತನಕ 'ಹೀಗೂ ಇರಬಹುದು' ಅಂದುಕೊಳ್ಳುತ್ತಿದ್ದವರು ನಲವತ್ತಾದ ಮೇಲೆ 'ಹೇಗೆ ಬೇಕಾದರೂ ಇರಬಹುದು' ಅಂತ ನಿರ್ಧರಿಸಿದವರಂತೆ ಬದುಕತೊಡಗುತ್ತೇವೆ. ಯಾವನಾದರೂ ಬಂದು 'ಯೋಗ ಕ್ಲಾಸಿಗೆ ಸೇರೋಣವಾ?' ಅಂತ ಕೇಳಿದರೆ, 'ಮುಫತ್ತಾಗಿ ಐವತ್ತು ರುಪಾಯಿ ಕೊಡ್ತೀನಿ, ಪ್ರಾಣ ತಿನ್ನಬೇಡ ಹೋಗಿಬಿಡು' ಅಂತ ಗದರಿಸಿ ಕಳಿಸುತ್ತೇವೆ. ಬೆಚ್ಚಗೆ ನಾಲ್ಕು ಪೆಗ್ ಕುಡಿದು ಹೊಟ್ಟೆ ತುಂಬ ಮಾಂಸ, ತುಪ್ಪ, ಚೀಜು ತಿಂದು, ಬಿಗ್ಗಿಯಾಗಿ ಎರಡು ಸಿಗರೇಟೆಳೆದು, for a change ಹಿತಮಂಚದಲ್ಲಿ ಜೀಕಿ ಮಲಗುವುದು ಬಿಟ್ಟು ಯೋಗವಂತೆ ಯೋಗ-ಅಂದಿರುತ್ತದೆ ಮನಸ್ಸು. ಹೀಗೆ ಯಶಸ್ಸನ್ನು ಅಕ್ಷರಶಃ ದೈಹಿಕವಾಗಿ ಅನುಭವಿಸುತ್ತಲೇ ಹತ್ತು ವರ್ಷ ಕಳೆದು ಬಿಟ್ಟಿರುತ್ತೇವೆ. One fine ಮುಂಜಾನೆ ಮಗಳು ಬಂದು ಎಬ್ಬಿಸಿ ಕೊರಳಿಗೆ ಬಿದ್ದು 'ಪಪ್ಪಾ, ಹ್ಯಾಪಿ ಬರ್ತ್ ಡೇ' ಅಂದಾಗಲೇ ನಮಗೆ ಐವತ್ತು ತುಂಬಿತೆಂಬುದು ನೆನಪಿಗೆ ಬರೋದು. ಇನ್ನು ಇಳಿಕೆ ಶುರು!

ನಿಜವಾದ ಸಮಸ್ಯೆಯೂ ಅಲ್ಲಿಂದಲೇ ಶುರು. ಹತ್ತುವುದು ಎಷ್ಟು ಸುಲಭವೆ, ಇಳಿಯುವುದು ಅದಕ್ಕಿಂತ ಕಷ್ಟ. ಹತ್ತುವಾಗ, ಉಳಿದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕೈಯಲ್ಲಿ ಯೌವನವೆಂಬ ನೂಲೇಣಿ ಇರುತ್ತದೆ. ಉತ್ಸಾಹದ ಉಕ್ಕಿನ ಕೊಕ್ಕೆ ಇರುತ್ತದೆ. ಹಟವಿರುತ್ತದೆ. ಕೈಯ ತುದಿಯಲ್ಲಿ ಜಿಗಿ, ಕಾಲ ಮೀನಖಂಡದಲ್ಲಿ ಕಸುವು ಇರುತ್ತದೆ. ಆದರೆ, ಇಳಿಕೆ ಆರಂಭವಾದಾಗ ಅದ್ಯಾವೂ ಇರುವುದಿಲ್ಲ. ನಿಂತು ನೋಡಿಕೊಂಡರೆ ಡೊಳ್ಳು ಹೊಟ್ಟೆ, ಕೈಕೈಲು ಸಣ್ಣ, ನೆರೆತ ಕೂದಲು, ಅಲುಗುವ ಹಲ್ಲು, ಕೊಂಡದ್ದಲ್ಲದೆ ತಾನಾಗಿಯೇ ಎನಾಗಿಯೇ ಎರಡೂ ಕಣ್ಣುಗಳಿಗೆ ಬಂದ ಸೈಟು!

ಎದುರಿಗೆ ನೋಡಿದರೆ ಎರಡನೇ ಐವತ್ತು ವರ್ಷಗಳೆಂಬ ಮಹಾ ಪ್ರಪಾತ. ಇದಿನ್ನು ಇಳಿಕೆಯ ಹಾದಿ ಅಂತ ಮೊದಲೇ ಗೊತ್ತು ಮಾಡಿಕೊಂಡಿರಾ? ನೀವು ಬುದ್ಧಿವಂತರು. ಅದು ಗೊತ್ತು ಮಾಡಿಕೊಳ್ಳದವರು ಆರಂಭದಲ್ಲೇ ಮುಗ್ಗರಿಸಿಬಿಡುತ್ತಾರೆ. ಕೆಲವರು ಬದುಕಿನ ಫಸಲು ಕೈಗೆ ಬರುವ ಹೊತ್ತಿಗೆ, ಅಂದರೆ ಐವತ್ತಕ್ಕೇ ತೀರಿ ಹೋಗುತ್ತಾರೆ. ಕೆಲವರಿಗೆ ಹೃದಯಾಘಾತವಾಗಿರುತ್ತದೆ. ಪಾರ್ಶ್ವವಾಯು ಅರ್ಧ ದೇಹವನ್ನು ತಿಂದಿರುತ್ತದೆ. ಅವರು ಐವತ್ತನೇ ಬರ್ತ್ ಡೇ ನೀಡಿದ ವಾರ್ನಿಂಗನ್ನು ಕೇಳಿಸಿಕೊಳ್ಳದವರು. ಅದನ್ನು ಸ್ವಲ್ಪ ಕಿವಿಗೊಟ್ಟು ಕೇಳಿಸಿಕೊಳ್ಳಿರಿ. ಐವತ್ತಾಯಿತು ಅಂತ ಮಾತ್ರಕ್ಕೆ ನಿಮಗೇನೂ ಮುಪ್ಪು ಬಂದಿಲ್ಲ. ಆದರೆ ನೀವು ಇಪ್ಪತ್ತೈದರ ಯುವಕರೂ ಅಲ್ಲ. ಸಾಲದ್ದಕ್ಕೆ, ಹತ್ತು ಹದಿನೈದು ವರ್ಷ ಉಪ್ಪು-ತುಪ್ಪ-ಅನ್ನ, ಹಾಲು-ಹೋಳಇಗೆ, ವಿಸ್ಕಿ-ಗೋಡಂಬಿ ತಿನ್ನಿಸಿ ದೇಹವನ್ನು ಅನಗತ್ಯವಾಗಿ ಮುದ್ದು ಮಾಡಿಬಿಟ್ಟಿದ್ದೀರಿ. ಅಪ್ಪಿತಪ್ಪಿ ಎಲ್ಲೋ ಒಂದು ಸಲ ನಿಮ್ಮ ಮನಸ್ಸಿನೊಂದಿಗೆ ನೀವು ಮಾತನಾಡಿಕೊಂಡಿದ್ದಿರಬಹುದೇನೋ? ಆದರೆ ದೇಹದೊಂದಿಗೆ ಮಾತನಾಡಿಕೊಂಡು ಯಾವ ಕಾಲವಾಯಿತು ಸರ್? ನಾವು ಮೈಮರೆತು ನಿದ್ದೆ ಮಾಡಿದಾಗಲೂ ನಮ್ಮ ದೇಹದಲ್ಲಿ ಕೆಲವು ಲಕ್ಷ ಕೋಟಿ ಕಣಗಳು, ಸೆಲ್ ಗಳು, ಟಿಷ್ಯೂಗಳು, ನರಗಳು, ಧಮನಿಗಳು, ನೆತ್ತರು, ಮೂಳೆ, ಮಾಂಸ, ಮಜ್ಜೆ ಕೆಲಸ ಮಾಡುತ್ತಿರುತ್ತವೆ. ನಾವು ಒಂದೇ ಒಂದು ಸಲಕ್ಕೂ ಅವುಗಳಿಗೆ thanx ಹೇಳಿರುವುದಿಲ್ಲ.

ಬೆಳಿಗ್ಗೆ ಏಳೇಳುತ್ತಲೇ ಹಾಂ ಅಂತ ಬದುಕಿನ ಮೇಲೆ ಮುರಕೊಂಡು ಬಿದ್ದು ಬಿಡಬೇಡಿ. Easy easy, ಎದ್ದು ಕುಳಿತು ಅಥವಾ ಅಂಗಾತ ಮಲಗಿಕೊಂಡೇ ಬೆಳಗಿನ ಮೌನದಲ್ಲಿ ನಿಮ್ಮ ಅಂಗಾಲ ಬೆರಳುಗಳಿಂದ ಹಿಡಿದು ಒಂದೊಂದೇ ಅಂಗವನ್ನು ನೆತ್ತಿಯ ಬ್ರಹ್ಮರಂಧ್ರದ ತನಕ ಮಾತನಾಡಿಸುತ್ತಾ, relax ಮಾಡಿಕೊಳ್ಳುತ್ತಾ ಬನ್ನಿ. ನಿಮ್ಮ ಹೃದಯಕ್ಕೆ, ಮಿದುಳಿಗೆ, ಶ್ವಾಸಕೋಶಗಳಿಗೆ, ಕರುಳಿಗೆ, ಕಿಡ್ನಿಗಳಿಗೆ ನಿಮ್ಮದೇ ಮೌನ ಭಾಷೆಯಲ್ಲಿ thanx ಹೇಳಿಕೊಳ್ಳಿ. ಇದಕ್ಕೆಲ್ಲ ಕಂಪಲ್ಸರಿಯಾಗಿ ದೇವರನ್ನು ನಂಬಬೇಕು ಅಂತಿಲ್ಲ. ನಿಮ್ಮ ಮಾತು ನಿಮ್ಮದೇ ದೇಹದ ಜೀವಕೋಶಗಳಿಗೆ ಕೇಳಿಸುತ್ತದೆ ಅಂತ ನಂಬಿದರೆ ಸಾಕು. ಬೆಳಿಗ್ಗೆ ಬೇಗ ಎದ್ದು ಒಂದು ವಾಕ್ ಹೊರಡಿ. ಎದ್ದ ಎರಡು ತಾಸಿನ ತನಕ ಸಿಗರೇಟು ಮುಟ್ಟಬೇಡಿ. ಆಮೇಲೆ, ಆ ಉಪ್ಪು-ತುಪ್ಪ, ಹಾಲು-ಹೋಳಿಗೆ, ವಿಸ್ಕಿ-ಗೋಡಂಬಿ ನಿಲ್ಲಿಸಿ ಬ್ರದರ್. ದೇಹಕ್ಕೆ ಮುದ್ದು ಮಾಡಿದ್ದು ಜಾಸ್ತಿಯಾಯಿತು. ನಿಮಗ್ಯಾರಾದರೂ ಹವ್ಯಕರು ಗೊತ್ತಿದ್ದರೆ ವಿಚಾರಿಸಿ. ಅವರು ಸೊಪ್ಪುಸೋದೆ, ಕುಡಿಗಳನ್ನೆಲ್ಲ ಹಾಕಿ ತಂಬುಳಿ ಎಂಬ ಅದ್ಭುತ ಪದಾರ್ಥ ಮಾಡುವುದನ್ನು ಹೇಳಿಕೊಡುತ್ತಾರೆ. ಮೆಂತ್ಯೆ ಸೊಪ್ಪಿನಿಂದ ಹಿಡಿದು ದಾಳಿಂಬೆ ಚಿಗುರಿನತನಕ ಯಾವುದರ ತಂಬುಳಿ ತಿಂದರೂ ಒಳ್ಳೆಯದೇ.

ಇಳಿಜಾರಿನ ಹಾದಿಯಲ್ಲಿ ಬೀಳುವ ಅಪಾಯ ಹೆಚ್ಚು. ಏನೇ ಬಿದ್ದರೂ ಛಕ್ಕನೆ ಎದ್ದು ನಿಲ್ಲುವಂತಿರಬೇಕು, ಅಲ್ಲವೆ?

(ಸ್ನೇಹಸೇತು : ಹಾಯ್ ಬೆಂಗಳೂರು)

ನಿಮ್ಮ ಆರೋಗ್ಯಕ್ಕಾಗಿ
ಬೇಸಿಗೆ ಸ್ಪೆಷಲ್ ಮಾವಿನಕಾಯಿ ತಂಬಳಿ
ನಾನಾ ಪತ್ರೆಗಳ ತಂಬ್ಳಿ ಅಥವಾ ತಂಬುಳಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X