ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್

By Staff
|
Google Oneindia Kannada News

Gopal Hosur, Mangaluru IGP
ಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.

'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ ಬಿದರಿಯವರನ್ನ. ಅದು ನನ್ನ ಮತ್ತು ಅವರ ನಡುವಿನ ಆತ್ಮೀಯತೆ. ನಾನು ಹಾಗೆ ಪ್ರೀತಿಯಿಂದ ಮಾತನಾಡಿಸುವ ಕೇಲವೇ ಕೆಲವು ಪೊಲೀಸ್ ಅಧಿಕಾರಿಗಳು ರಾಜ್ಯದಲ್ಲಿದ್ದಾರೆ. ನಾನು ಪತ್ರಿಕೋದ್ಯಮಕ್ಕೆ ಬಂದ ಹೊಸತರಲ್ಲಿ ಅಧಿಕಾರಿಗಳಾಗಿದ್ದವರಲ್ಲಿ ಅನೇಕರು ಈಗ ನಿವೃತ್ತರು. ಕೆಲವರು ಗತಿಸಿಯೂ ಹೋಗಿದ್ದಾರೆ. ಕೆಲವರು ಅತ್ಯುನ್ನತ ಸ್ಥಾನಗಳಿಗೆ ತಲುಪಿಕೊಂಡಿದ್ದಾರೆ. ಮೊನ್ನೆ ಡಿಜಿಪಿ ಆಗಿ ನಿವೃತ್ತರಾದ ಆರ್. ಶ್ರೀಕುಮಾರ್ ನನ್ನ ಅಂತರಂಗದ ಮಿತ್ರರಾಗಿದ್ದವರು. ಈಗಿನ ಡಿಜಿಪಿ ಅಜಯ್ ಕುಮಾರ್ ಸಿಂಗ್ ಅವರು ಎಂಥ ನಿಸ್ಪೃಹರೆಂದರೆ, ನಾನು ಅವರ ಅಭಿಮಾನಿ.

ಹಾಗಂತ ನಾನು ಪೊಲೀಸ್ ಪಡೆಯ ಬಗ್ಗೆ ಯಾವತ್ತೂ ಅಂಥ ಬೆರಗು, ಆಕರ್ಷಣೆ ಇಟ್ಟುಕೊಂಡವನಲ್ಲ. ತುಂಬ ಹೊತ್ತು ಪೊಲೀಸರೊಂದಿಗೆ ಕಳೆದವನೂ ಅಲ್ಲ. ಬಿಕೆ ಶಿವರಾಂರಂತಹ ಮಿತ್ರರು ನನಗೆ ಬೇರೆಯದೇ ಕಾರಣಕ್ಕೆ ಆತ್ಮೀಯರಾದವರು. ಪೊಲೀಸ್ ಅಧಿಕಾರಿಗಳ ಜೊತೆಗೆ ಹಗಲೂ ರಾತ್ರಿ ಓಡಾಟ, ಒಡನಾಟ ಇಟ್ಟುಕೊಂಡುಬಿಟ್ಟರೆ ಏನೇನು ಅನಾಹುತಗಳಾಗುತ್ತವೆ ಎಂಬುದನ್ನು ನಾನು ನಮ್ಮ ವರದಿಗಾರರಿಗೆ ಎಚ್ಚರಿಸಿ ಹೇಳುತ್ತಿರುತ್ತೇನೆ. ಈ ಹುಡುಗರು, ಅದರಲ್ಲೂ ಕ್ರೈಂ ರಿಪೋರ್ಟರುಗಳು ಕ್ರಮೇಣ ಪೊಲೀಸರವೇ ಮ್ಯಾನರಿಸಂಗಳನ್ನು ಕಲಿಯುತ್ತಾರೆ. ಅವರಂತೆಯೇ ಮಾತನಾಡತೊಡುತ್ತಾರೆ. ಶೈಲಿ ಅತಿರಂಜಕವಾಗಿಬಿಡುತ್ತದೆ. ಒಬ್ಬ ಪತ್ರಕರ್ತನಿಗೆ ಇವೆಲ್ಲ ಕ್ರಮೇಣ ವ್ಯಸನಗಳಾಗಿ, ಲಿಮಿಟೇಶನ್ನುಗಳಾಗಿ ಪರಿಣಮಿಸಿಬಿಡುತ್ತವೆ. ಪತ್ರಕರ್ತ ಬ್ಲಾಟಿಂಗ್ ಪೇಪರಿನಂತಾಗಬಾರದು. ದೂರ ನಿಂತು ವಾಚ್ ಮಾಡುವ, ಗೇಜ್ ಮಾಡುವ, ಇದು ಇಷ್ಟೇ ಎಂದು ತೀರ್ಮಾನ ಮಾಡುವ, ಹೀಗೂ ಇರಬಹುದಾ ಅಂತ ಅನುಮಾನ ಪಡುವ ಮೆಚ್ಯೂರಿಟಿ ಅವನದಾಗಿರಬೇಕು. ಒಬ್ಬ ಅಧಿಕಾರಿಯನ್ನು ವರ್ಷಗಟ್ಟಲೆ ಟ್ರ್ಯಾಕ್ ಮಾಡಬೇಕು. ಆತನ ಸಾಧನೆ, ನಿಲುವು, ಸ್ವಭಾವ, ಆಸ್ತಿ, ಜನಪ್ರಿಯತೆ, ಜನಪರತೆ ಎಲ್ಲವನ್ನೂ ಮನನ ಮಾಡಿಕೊಳ್ಳಬೇಕು. ಕೇಳಿದರೆ, ಅರ್ಧಗಂಟೆಯಲ್ಲಿ ಅಧಿಕಾರಿಯದೊಂದು ವ್ಯಕ್ತಿಚಿತ್ರ ಬರೆದುಕೊಡುವಂತಿರಬೇಕು.

ನಾನು ಸುಮಾರು ಇಪ್ಪತ್ತೈದು ವರ್ಷಗಳಿಂದ ಹಾಗೆ ಟ್ರ್ಯಾಕ್ ಮಾಡಿದ ಅಧಿಕಾರಿಯ ಹೆಸರು ಗೋಪಾಲ್ ಹೊಸೂರ್. ಮೊನ್ನೆ ಮೊನ್ನೆಯತನಕ ಬೆಂಗಳೂರೆಂಬ ದುರ್ಗಮ ಕೋಟೆಯನ್ನು ಕಾಯ್ದ ಜಾಯಿಂಟ್ ಕಮೀಶನರ್ ಹೊಸೂರ್ ಅವರು ಮಂಗಳೂರಿಗೆ ಐಜಿಪಿಯಾಗಿ ಹೋಗಿದ್ದಾರೆ. ಇಂಗ್ಲಿಷಿನಲ್ಲಿ unassuming ಎಂಬ ಶಬ್ದವೊಂದಿದೆ. ಅದಕ್ಕೆ ಹೇಳಿ ಮಾಡಿಸಿದವರು ಗೋಪಾಲ ಹೊಸೂರ್. ಪ್ರಚಾರಪ್ರಿಯರಲ್ಲ: ಆದರೆ ಪತ್ರಕರ್ತರಿಗೆ ವ್ಯಕ್ತಿಗತ ಮಟ್ಟದಲ್ಲಿ ಆಪ್ತರು. ಯಾವ ರಾಜಕಾರಣಿಗೂ, ಯಾವ ಅಧಿಕಾರಿಗೂ ಅಂಗಲಾಟಿ ಕಾಣಿಸಿಕೊಂಡವರಲ್ಲ. ಆದರೆ ಬೆಂಗಳೂರು ಕಂಡ ಒಂಬತ್ತು ಮಂದಿ ಪೊಲೀಸ್ ಕಮೀಷನರುಗಳ ಪಾಲಿಗೆ ಅತ್ಯಂತ ಸಂಬಿಗಸ್ಥ, ಆತ್ಮೀಯ blue eyed boy ಆಗಿದ್ದವರು.

ನಾನು ಹೊಸೂರ್ ಅವರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಅವರು ಡಿವೈಎಸ್ಪಿ ಆಗಿದ್ದಾಗ. ಅದಕ್ಕೆ ಮುಂಚೆಯಾಗಲೇ ಅವರು ಅರಸೀಕೆರೆಯಲ್ಲಿ ಇದ್ದು ಬಂದಿದ್ದರು. ಚಿತ್ರದುರ್ಗದಲ್ಲಿ ಜೀಜಾ ಹರಿಸಿಂಗ್ ಮತ್ತು ಶಂಕರ ಬಿದರಿಯವರ ಕೈಕೆಳಗೆ ದುಡಿದು ಪಳಗಿದ್ದರು. ಇವರು ಹೊಸಪೇಟೆಯಲ್ಲಿದ್ದಾಗ ಸರಣಿ ಹತ್ಯೆಗಳಾಗತೊಡಗಿದ್ದವು. ಆದರೆ ಸತ್ತವರ್ಯಾರೂ ಶ್ರೀಮಂತರಲ್ಲ. ಕೆಲವು ಕಡೆ ಸತ್ತವರ ಪರವಾಗಿ ಕಂಪ್ಲೇಂಟು ಕೊಡುವವರೂ ದಿಕ್ಕಿರುತ್ತಿರಲಿಲ್ಲ. ಹೆಚ್ಚಿನವರು ಯಲ್ಲಮ್ಮ ದೇವಿಯ ಕೊಡ ಹೊತ್ತು ತಿರುಗುವ ಜೋಗತಿಯರು. ಆದರೆ ಹೊಸೂರ್ ಅದೊಂದು ದಿನ ವಡ್ಡರ ಸುಂಕ ಎಂಬ ಹಂತಕನನ್ನು ಬಂಧಿಸಿ ತಂದೇಬಿಟ್ಟರು. ಜೋಗಿತಿಯರನ್ನು ಕರೆದೊಯ್ದು ಕೊಲೆ ಮಾಡುವುದು ಅವನ ಪಾಲಿಗೆ ವ್ಯಸನವಾಗಿತ್ತು. ನ್ಯಾಯಾಲಯದಲ್ಲಿ ಸುಂಕನಿಗೆ ಮರಣದಂಡನೆ ಆಗುವತನಕ ಹೊಸೂರ್ ಕೇಸಿನ ಬೆನ್ನು ಬಿಟ್ಟಿರಲಿಲ್ಲ.

ಆಗಲೇ ಪತ್ರಕರ್ತ ಮಿತ್ರರಿಗೆ ಹೊಸೂರ್ ಬಗ್ಗೆ ವಿಶ್ವಾಸ ಮೂಡತೊಡಗಿದ್ದು. ಮುಂದೆ ಕೆಲಕಾಲ ಬೆಂಗಳೂರಿನಲ್ಲಿ ಎಸಿಪಿಯಾಗಿದ್ದ ಹೊಸೂರ್ ಎಂಥ ಉತ್ಸಾಹಿಯೆಂದರೆ, ವೀರಪ್ಪನ್‌ನನ್ನು ಬಂಧಿಸಲು STF ರಚನೆಯಾದಾಗ ಸ್ವಯಂಪ್ರೇರಿತರಾಗಿ ಸರ್ಕಾರವನ್ನು ವಿನಂತಿಸಿ, ಕಾಡಿಗೆ ಹೋದರು. ಆಗ ವೀರಪ್ಪನ್‌ನ ಪೈಶಾಚಿಕತೆ ಪರಮಾವಧಿ ಮುಟ್ಟಿತ್ತು. ಹರಿಕೃಷ್ಣ ಎಂಬ ಅಧಿಕಾರಿ STF ಪಡೆಯ ಮುಖ್ಯಸ್ಥರಾಗಿದ್ದರು. ವೀರಪ್ಪನ್ ವಿರುದ್ಧ ಯಾವ ರೀತಿಯ ಕಾರ್ಯಾಚರಣೆ ಮಾಡಬೇಕು ಎಂಬ ವಿಷಯದಲ್ಲಿ ಹರಿಕೃಷ್ಣ ಮತ್ತು ಹೊಸೂರ್ ಮಧ್ಯೆ ಭಿನ್ನಾಭಿಪ್ರಾಯಗಳು ಬಂದವು. ಹರಿಕೃಷ್ಣ ದಿಟ್ಟ ಅಧಿಕಾರಿಯೇ ಆದರೂ ವಿಪರೀತ ಹುಂಬತನ ಅವರಲ್ಲಿತ್ತು. ಅವರೊಂದಿಗೆ ಹಾಕ್ಯಾಡಿ ಪ್ರಯೋಜನವಿಲ್ಲವೆಂದು ತೀರ್ಮಾನಿಸಿ ಗೋಪಾಲ ಹೊಸೂರ್ ಮಲೆಮಹದೇಶ್ವರ ಬೆಟ್ಟದಿಂದ ಹಿಂತಿರುಗಿಬಿಟ್ಟರು. ಅತ್ತ ಹರಿಕೃಷ್ಣ ತಾವೂ ಹತರಾದರಲ್ಲದೆ ತಮ್ಮ ಸಿಬ್ಬಂದಿಯ್ನೂ ಬಲಿ ಕೊಟ್ಟರು.

ಗೋಪಾಲ ಹೊಸೂರ್ ಅವರು ಹುಬ್ಬಳ್ಳಿ-ಧಾರವಾಡದ ಕಮೀಶನರ್ ಆಗಿದ್ದ ಕಾಲ, ಅದು ಅವಳಿ ನಗರಗಳ ಪಾಲಿಗೆ ಸುವರ್ಣ ಕಾಲ. ಜನಪರವಾದ ಅನೇಕ ಕೆಲಸಗಳನ್ನು ಮಾಡಿದ ಹೊಸೂರ್ ತಮ್ಮ ನಿಸ್ಪೃಹತೆಗೂ ಹೆಸರಾದರು. ಮುಂದೆ ಹೊಸೂರ ಮತ್ತು ಶಂಕರ ಬಿದರಿ ಜೋಡಿ STFನ ಬಾವುಟ ಹಿಡಿದು ಮತ್ತೆ ಮಲೆಮಹದೇಶ್ವರ ಬೆಟ್ಟ ಹತ್ತಿತ್ತು. ವೀರಪ್ಪನ್ ಮತ್ತೂ ವ್ಯಗ್ರನಾಗಿದ್ದ. ಅವನ ಬಲಗೈ ಬಂಟನಾಗಿದ್ದ ಗುರುನಾಥನನ್ನು ಹತ್ಯೆ ಮಾಡುವುದರಲ್ಲಿ ಗೋಪಾಲ ಹೊಸೂರ್‌ರ ಪಾತ್ರವಿತ್ತು. ಇದರಿಂದ ವೀರಪ್ಪನ್ ಎಷ್ಟು ವ್ಯಗ್ರನಾದನೆಂದರೆ, ಅದೊಂದು ದಿನ ಪೊಲೀಸ್ ಪಡೆಯ ಮೇಲೆಯೇ ಅನಾಹುತಕಾರಿ ರೀತಿಯಲ್ಲಿ ಮುರಕೊಂಡುಬಿದ್ದ. ಒಂದು ಗುಂಡು ಗೋಪಾಲ ಹೊಸೂರ ಅವರ ಕುತ್ತಿಗೆಗೆ ಹೊಕ್ಕಿತ್ತು. ಆಗ ಅವರು ಬದುಕುಳಿದದ್ದು ದೊಡ್ಡ ಪವಾಡ. ಗುಂಡು ಬಿದ್ದ ನಂತರವೂ ಹೊಸೂರ್ ಶತ್ರುವಿನತ್ತ ಫೈರ್ ಮಾಡುತ್ತಲೇ ಇದ್ದರು.

"ಎಲ್ಲ ಸರಿ ಸ್ವಾಮೀ, ಈ ಹನ್ನೆರಡು ಜನ ಮಹಿಳಾ ಇನ್ಸ್‌ಪೆಕ್ಟರುಗಳನ್ನು ಹೇಗೆ ಸಂಭಾಳಿಸುತ್ತೀರಿ" ಅಂತ ನಾವು ತಮಾಷೆ ಮಾಡುತ್ತಿದ್ದುದು, ವರದಕ್ಷಿಣೆ ವಿರೋಧಿ ದಳಕ್ಕೆ ಅವರು ಮುಖ್ಯಸ್ಥರಾಗಿದ್ದಾಗ! ಬೇರೆ ಯಾರಕೈಗಾದರೂ ಕೇಸು ಕೊಡಿ. ಈ ಮಹಿಳಾ ಇನ್ಸ್‌ಪೆಕ್ಟರುಗಳ ಕೈಗೆ ನಮ್ಮನ್ನು ಒಪ್ಪಿಸಬೇಡಿ ಎಂದು ಅನೇಕ ಗಂಡಸರು ಹೊಸೂರ್ ಅವರಿಗೆ ಮೊರೆಯಿಡುತ್ತಿದ್ದ ಕಾಲವದು. ಆದರೆ ಹೊಸೂರ್ ತುಂಬ ಜನಪರ ಕಾಳಜಿ ಪ್ರಕಟಪಡಿಸಿದ್ದು, ಅವರು ಬಳ್ಳಾರಿಗೆ ಮತ್ತೆ ಎಸ್ಪಿ ಆಗಿ ಬಂದಾಗ. ತುಂಗಭದ್ರಾ ನದಿಯನ್ನು ಪರಿಸರ ಮಾಲಿನ್ಯದಿಂದ ರಕ್ಷಿಸಲು ಈ ಅಧಿಕಾರಿ ಬಡಿದಾಡತೊಡಗಿದಾಗ BBCಯಂತಹ ಜಾಗತಿಕ ಮಟ್ಟದ ಸುದ್ದಿ ಸಂಸ್ಥೆ ಹೊಸರ್‌ರನ್ನು ಸಂದರ್ಶಿಸಿತ್ತು.

ಆಮೇಲೆ ಹೊಸೂರ್ ದಾವಣಗೆರೆಗೆ ಹೋದರು. ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಅವರು ಮಾಡಿದ ಸೇವೆ ದೊಡ್ಡದು. ಹೊಟೇಲ್ ಅಶೋಕಾದಲ್ಲಿ ಫಾರಿನ್ ಎಕ್ಸ್‌ಚೇಂಜ್ ಏಜೆಂಟರೊಬ್ಬರನ್ನು ಕೊಂದು ಪರಾರಿಯಾಗಿದ್ದ ಅತಿ ಚಾಣಾಕ್ಷ ಹಂತಕ ಭಸಕ್‌ನನ್ನು ಇವರು ಕಲ್ಕತ್ತಾದಿಂದ ಹಿಡಿದು ತಂದಾಗ ಊರೇ ನಿಬ್ಬೆರಗಾಗಿತ್ತು. ಇವತ್ತಿಗೂ ಭಸಕ್ ಬೆಂಗಳೂರು ಜೈಲಿನಲ್ಲೇ ಇದ್ದಾನೆ. ಕೇಸನ್ನು ಅಷ್ಟು ಪಕ್ಕಾಗ ರೀತಿಯಲ್ಲಿ ಸಿದ್ದಪಡಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು ಹೊಸೂರ್. ಆಮೇಲೇನಿದೆ, ಬೆಂಗಳೂರಿನಲ್ಲಿ ಸುಮಾರು ಐವತ್ತು ಅತ್ಯಂತ ಸೆನ್ಸೇಷನಲ್ ಹತ್ಯೆಗಳಾದವು. ಪ್ರತಿ ಪ್ರಕರಣದಲ್ಲೂ ಹೊಸೂರ್ ಆಸಕ್ತಿವಹಿಸಿದರು. ಚೆಮ್ಮನೂರು ಜ್ಯುಯೆಲರಿ ದರೊಡೆಯಾಗಿ ಕೇಜಿಗಟ್ಟಲೆ ಬಂಗಾರ ಹೋಯಿತು. ಆ ಪ್ರಕರಣದಲ್ಲೂ ಹೊಸೂರ್ ದರೊಡೆಕೋರರನ್ನು ಹಿಡಿದು ತಂದರು. ಎಲ್ಲಕ್ಕಿಂತ ಹೆಚ್ಚು, ಕಿಡ್‌ನ್ಯಾಪಿಂಗ್‌ಗಳಾದಾಗ ಹೊಸೂರ್ ವಹಿಸುತ್ತಿದ್ದ ಮುಂಜಾಗರೂಕರೆ ಮತ್ತು ಕೈಕೆಳಗಿನ ಅಧಿಕಾರಿಗಳಿಗೆ ನೀಡುತ್ತಿದ್ದ ಮಾರ್ಗದರ್ಶನ ಗಮನಾರ್ಹವಾಗಿರುತ್ತಿದ್ದವು.

ಇಷ್ಟು ಸುದೀರ್ಷ ಅನುಭವವಿರುವ ಹೊಸೂರ್, ಈಗ ನಾಲ್ಕು ಜಿಲ್ಲೆಗಳಿಗೆ ಅಧಿಪತಿಯಾಗಿ ಮಂಗಳೂರಿಗೆ ಹೋಗಿದ್ದಾರೆ. ಅಲ್ಲಿ ಸಮಸ್ಯೆಗಳ ಬೆಟ್ಟವೇ ಇದೆ. ಹಿಂದೂ-ಮುಸ್ಲಿಂ ಪುಂಡರು ಸಮಸಂಖ್ಯೆಯಲ್ಲಿದ್ದಾರೆ. ಮುಂಬಯಿಯ ಅಂಡರ್‌ವರ್ಲ್ಡ್‌ಗೆ ಮಂಗಳೂರು ಬ್ರ್ಯಾಂಚ್ ಆಫೀಸು. ಪಾಕಿಸ್ತಾನದ ಕೈಗಳು ಕರಾವಳಿಯ ತನಕ ಹಬ್ಬಿವೆ. ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ನೊಂದ ಬಡವರ ಮಧ್ಯೆ ಸಕ್ಸಲರಿದ್ದಾರೆ. ಅಂತೆಯೇ ಜಯಂತ್ ಶೆಟ್ಟಿ, ರವಿ ನಾರಾಯಣ್‌ರಂತಹ ಡಿಪೆಂಡೇಬಲ್ ಅಧಿಕಾರಿಗಳೂ ಇದ್ದಾರೆ.

ಗೋಪಾಲ ಹೊಸೂರ್ ಉಳಿದೆಲ್ಲ ಕಡೆ ಸಾಧಿಸಿದ್ದನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಂಗಳೂರಿನಲ್ಲಿ ಸಾಧಿಸಲಿ.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X