ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ ಮನಸುಗಳು

By Staff
|
Google Oneindia Kannada News

Who is Pramod Mutalik to stop Valentine's Day?
ಕಾಲ ಬದಲಾಗಿದೆ. ಹುಡುಗ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರೆ ಅವರನ್ನು ದಾರಿಗೆ ತರಲು ಬೇಕಾದಷ್ಟು ಮಾರ್ಗಗಳಿವೆ, ಆದರೆ ಪುಂಡಾಟಿಕೆಯಿಂದಲ್ಲ. ಇದನ್ನು ಮುತಾಲಿಕ್ ಮತ್ತು ಅವರ ಶ್ರೀರಾಮಸೇನೆ ಅರಿತುಕೊಳ್ಳುವುದು ಉತ್ತಮ.

* ರವಿ ಬೆಳಗೆರೆ

"ಹುಡುಗ ಹುಡುಗಿ ಒಟ್ಟಿಗಿರುವುದನ್ನು ನೋಡಿದರೆ ನಮ್ಮ ಶ್ರೀರಾಮಸೇನೆ ಪುರೋಹಿತರ ಸಮೇತ ಹೋಗಿ ಅಲ್ಲೇ ಅವರಿಗೆ ಮದುವೆ ಮಾಡಿಸುತ್ತದೆ. ಪ್ರೇಮಿಗಳಾಗಿದ್ದರೆ ಒಂದೋ ಅವರು ತಾಳಿ ಕಟ್ಟಬೇಕು. ಸೋದರ ಸೋದರಿಯರಾಗಿದ್ದರೆ ಅವರು ರಾಖಿ ಕಟ್ಟಬೇಕು! ಒಟ್ಟಿನಲ್ಲಿ ವ್ಯಾಲಂಟೈನ್ಸ್ ಡೇ ಆಚರಿಸುವಂತಿಲ್ಲ" ಎಂಬುದು ಪ್ರಮೋದ್ ಮುತಾಲಿಕ್ ಗುಡುಗು.

ಇದು ಗುಡುಗೋ ಖಾಯಿಲೆಯ ಅನಾವರಣವೋ, ತಿಳಿದವರು ಹೇಳಬೇಕು. ಮಂಗಳೂರಿನ ಪಬ್‌ನಲ್ಲಿ ಅಶ್ಲೀಲ ನೃತ್ಯ ನಡೆಯುತ್ತಿತ್ತು. ಅದನ್ನು 'ನೇನಾ'ಧಿಪತಿಗಳು ದಾಳಿ ಮಾಡಿ ತಡೆದರು. ಅಲ್ಲಿದ್ದ ಹುಡುಗಿಯರನ್ನು ಬಡಿದುದನ್ನು ಬಿಟ್ಟರೆ ಉಳಿದದ್ದನ್ನು ಯಾರೂ ಅಷ್ಟಾಗಿ ಖಂಡಿಸಲಿಲ್ಲ. ನಮ್ಮ ಸಮಾಜ ಕುಡಿತ ಮತ್ತು ಲೈಂಗಿಕತೆಯನ್ನು ಸಲೀಸಾಗಿ ಸ್ವೀಕರಿಸುವುದಿಲ್ಲವಾದ್ದರಿಂದ ಸೇನಾ ದಾಳಿಗೆ ಸಮಾಜದ ಒಂದು ವರ್ಗದಲ್ಲೇ ಸರಿಬಿಡಿ ಎನ್ನುವಂತಹ ಬೆಂಬಲ ಸಿಕ್ಕಿತು.

ಆದರೆ ಮುತಾಲಿಕ್‌ಗೆ ಪಬ್ ಮತ್ತು ಅದರಿಂದಾಗಿ ದೊರೆತ ಪಬ್-ಲಿಸಿಟಿ ಏಕ್‌ದಂ ನೆತ್ತಿಗೇರಿದಂತಿವೆ. ನಾಡಿನ ಯುವತಿ-ಯುವಕರ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಕೈ ಹಾಕಿದ್ದಾರೆ. ಇದು ಮುತಾಲಿಕರ ಮನಸ್ಸಿನ ವ್ಯಾಧಿ. ಪ್ರೇಮಿಗಳ ದಿನ ಆಚರಿಸಲು ಈ ದೊಣ್ಣೆ ನಾಯಕನ ಅನುಮತಿಯನ್ನು ಯಾರೂ ಪಡೆಯಬೇಕಿಲ್ಲ. ಅಸಲಿಗೆ ಚಿಕ್ಕ ವಯಸ್ಸಿನ ಯುವತಿ ಯುವಕರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ, ವ್ಯವಧಾನ ಮತ್ತು ಒಳ್ಳೆಯತನ - ಮೂರೂ ಮುತಾಲಿಕ್‌ಗೆ ಇಲ್ಲ. ವ್ಯಾಲಂಟೈನ್ಸ್ ಡೇ ಅಂದ ಕೂಡಲೆ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವವರೆಲ್ಲ ರಸ್ತೆಗಿಳಿದು, ತೆಕ್ಕೆ ಬಡಕೊಂಡು ಉರುಳಾಡಿ ಬಿಡುತ್ತಾರೆ ಎಂದು ಭಾವಿಸುವುದು ಮುತಾಲಿಕರ ಫೋಬಿಯಾ. ವ್ಯಾಲಂಟೈನ್ಸ್ ಡೈಯನ್ನು ಆರು ಎಂಟನೇ ಕ್ಲಾಸಿನ ಮಕ್ಕಳು ಕೂಡ ಉಲ್ಲಾಸದಿಂದ ಆಚರಿಸಿಕೊಳ್ಳುತ್ತವೆ. ಪರಸ್ಪರರನ್ನು greet ಮಾಡಿಕೊಳ್ಳುತ್ತವೆ. ಆ ಮಕ್ಕಳಲ್ಲಿ ಪ್ರೇಮ ಹಾಳುಮೂಳು ಯಾವುದೂ ಇರುವುದಿಲ್ಲ. ಹಾಗೊಂದು ವೇಳೆ ಬೆಳೆದ ಹುಡುಗ-ಹುಡುಗಿಯರು ಅವತ್ತಿನ ದಿನ ಪ್ರೇಮ ನಿವೇದನೆ ಮಾಡಿಕೊಂಡರೆ, ಪರಸ್ಪರರನ್ನು ಒಪ್ಪಿಕೊಂಡರೆ, ಕೈಲಿರುವ ಕಾರ್ಡು ಬದಲಿಸಿಕೊಂಡರೆ, ನವಿಲುಗರಿ ಕೊಟ್ಟುಕೊಟ್ಟರೆ, ಕೈಕೈ ಹಿಡಿದು ಓಡಾಡಿದರೆ, ಅಕ್ಕ ಪಕ್ಕ ಕುಳಿತು ಮನಸು ಬಿಟ್ಟಿ ಮಾತನಾಡಿದರೆ, ಬೈಕಿನಲ್ಲೊಂದು ರೈಡ್ ಹೋಗಿ ಬಂದರೆ, ಒಟ್ಟಿಗೆ ಕಪ್ಪು ಕಾಫಿ ಕುಡಿದರೆ, ಸಿನೆಮಾ ನೋಡಿದರೆ ಅದು ಮುತಾಲಿಕರಲ್ಲೇಕೆ ದಿಗಿಲು ಹುಟ್ಟಿಸಬೇಕು?

ಇದೆಲ್ಲ ಹಿಂದೂ ಸಂಸ್ಕೃತಿಯಲ್ಲ ಎಂಬುದು ಮುತಾಲಿಕರ ವಾದವಾದರೆ, ಪ್ಯಾಂಟು ಅಂಗಿ ಹಾಕಿಕೊಳ್ಳುವುದು, ಚೌರಕ್ ಮಾಡಿಸಿಕೊಳ್ಳುವುದು ಕೂಡ ಹಿಂದೂ ಸಂಸ್ಕೃತಿಯಲ್ಲ. ಸಮಾಜವನ್ನು ಯಾವ ಯುಗಕ್ಕೆ ಕರೆದೊಯ್ಯಲು ಇಚ್ಛಿಸುತ್ತಿದ್ದಾರೆ ಮುತಾಲಿಕ್? ಕಾಲ ಬದಲಾಗುತ್ತಲೇ ಇರುತ್ತದೆ. What is permanent ಎಂಬ ಪ್ರಶ್ನೆಗೆ change is permanent ಎಂಬುದೇ ಉತ್ತರ. ಬದಲಾಗುವ ಕಾಲದೊಂದಿಗೆ ಮನುಷ್ಯ ಜೀವನೂ ಬದಲಾಗುತ್ತದೆ. ಮನುಷ್ಯನ ಧೋರಣೆ ಬದಲಾಗುತ್ತವೆ. ಒಬ್ಬರನ್ನೊಬ್ಬರು reach ಆಗುವ ವಿಧಾನ ಬದಲಾಗುತ್ತದೆ. ಇಬ್ಬರ ನಡವಿನ ಸಂವಹನ ಬದಲಾಗುತ್ತದೆ. ಯಾವುದೂ ಬದಲಾಗದೆ ಉಳಿಯುವುದು ಮುತಾಲಿಕರಂತಹ ಜಂಗು ತಿಂದ ಮನಸ್ಸುಗಳೇ.

ಇದಕ್ಕಿರುವ ಮುಖ್ಯ ಕಾರಣವೆಂದರೆ ಧರ್ಮ. ನೋಡಿ, ಬಾಂಬೆಯ ಮೇವೆ ಅನಾಹುತಕಾರಿಯಾದ ಭಯೋತ್ಪಾದಕ ದಾಳಿ ನಡೆಯಿತು. ಮುತಾಲಿಕರ ಪಡೆ ಅದರ ಬಗ್ಗೆ ಗಂಭೀರ ಚಿಂತನೆಯನ್ನೇ ಮಾಡಲಿಲ್ಲ. ಇವರ 'ಸೇನಾ' ಕಾರ್ಯಕರ್ತರನ್ನು ಸಾಲಾಗಿ ನಿಲ್ಲಿಸಿ ಕೇಳಿ: ಭಾರತದ ವಿರುದ್ಧ ಯಾವ್ಯಾವ ಮುಸ್ಲಿಂ ಉಗ್ರರ ಸಂಘಟನೆಗಳು ಕೆಲಸ ಮಾಡುತ್ತಿವೆ ಮತ್ತು ಅವುಗಳ ನಾಯಕರು ಯಾರು? ಉಹುಂ. ದೇಶಭಕ್ತಿಯ ಪರಾಕಾಷ್ಠೆ ಮುಟ್ಟಿದವರಂತೆ ಮಾತನಾಡುವ ಮುತಾಲಿಕ್ ಬ್ರೀಡಿನ ಮಂದಿಗೆ ನಮ್ಮ ದೇಶದ ಅಸಲಿ ಶತ್ರು ಯಾರು ಎಂಬುದು ಸ್ಥೂಲವಾಗಿ ಕೂಡ ಗೊತ್ತಿರುವುದಿಲ್ಲ. ಈ ವಿಷಯದಲ್ಲಿ ಪಾಕಿಸ್ತಾನದ ಭಯೋತ್ಪಾದಕ ಮೌಲಾನಾ ಮಸೂದ್ ಅಝರ್‌ನೇ ವಾಸಿ. ದ್ರೋಣಾಚಾರ್ಯ-ಏಕಲವ್ಯರಿಂದ ಹಿಡಿದು, ಚಾಣಕ್ಯನ ತನಕ ಪುಂಖಾನುಪುಂಖವಾಗಿ ಮಾತನಾಡುತ್ತಾನೆ. ಅವನಿಗೊಂಡು study ಆದರೂ ಇದೆ. ಮುತಾಲಿಕ್ ಬ್ರಾಂಡಿನವರಿಗೆ ನಮ್ಮ ಶತ್ರುವಿನ ಬಗ್ಗೆ ಅಂಥ study ಕೂಡ ಇಲ್ಲ.

ಇನ್ನು moral policyಯ ಬಗ್ಗೆ ಮಾತನಾಡೋಣ. ಹುಡುಗಿಯೊಬ್ಬಳು ಕೆಟ್ಟದಾಗಿ ದಿರಿಸು ಹಾಕಿಕೊಂಡು ಬೀದಿಗೆ ಬಂದರೆ, ಕೇರಿಯ ಕೊನೆಯಲ್ಲಿರುವ ಅಜ್ಜಿಯೇ, 'ಏನೇ, ನೆಲ ಕಾಣ್ತಿಲ್ಲವಾ?' ಅಂತ ಗದರಿಸುತ್ತಾಳೆ. ಹಾಗೆ ಗದರಿಸುವ ಅಜ್ಜಿಗೆ ಹಿಂದೂಧರ್ಮ, ಸಂಸ್ಕೃತಿ ಮುಂತಾದ ಯಾವುದೂ ಗೊತ್ತಿರಬೇಕಿಲ್ಲ. ಹುಡುಗಿಯ ಒಳಿತು, ಸಮಾಜದ ಸ್ವಾಸ್ಥ್ಯ ಎರಡು ಮಾತ್ರ ಗೊತ್ತಿರುತ್ತದೆ. 'ಊಟ ತನ್ನಿಚ್ಛೆ, ಉಡುಗೆ ಪರರಿಚ್ಛೆ' ಎಂಬ ಗಾದೆಯೇ ಇದೆ. ನಾವು ಉಡುಗೆ ಧರಿಸುವುದೇ ಇನ್ನೊಬ್ಬರಿಗೋಸ್ಕರ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕೋಸ್ಕರ, ಆಕರ್ಷಿಸುವುದಕ್ಕೋಸ್ಕರ, ಇನ್ನೊಬ್ಬರಿಂದ ರಕ್ಷಿಸಿಕೊಳ್ಳುವುದಕ್ಕೋಸ್ಕರ. ಆದರಲ್ಲಿ ಅತಿರೇಕಗಳಿರಬಾರದು. ಎಕ್ಸಿಬಿಷನಿಸಮ್ ಇರಬಾರದು. ಶಾಲೆ-ಕಾಲೇಜು-ಆಫೀಸುಗಳಲ್ಲಿ ಉಡುಪಿಗೆ ಸಂಬಂಧಿಸಿದಂತೆ ತೀರ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅಂತ ಇರದಿದ್ದರೂ, ಒಂದಳಚೆಯಲ್ಲಿ ಅಚ್ಚುಕಟ್ಟಾಗಿ ಬರಬೇಕು ಎಂಬ ಅಲಿಖಿತ ನಿಯಮವಿರುದ್ದತೆ. ಯಾರೂ ಒತ್ತಾಯಿಸದಿದ್ದರೂ ಈ ನಿಯಮ ಜಾರಿಯಲ್ಲಿ ಇದ್ದೂ ಇರುತ್ತದೆ. ಆದರೆ ತೀರ ಮುತಾಲಿಕರಂಥವರು 'ಇಂಥ ಉಡುಪು ಧರಿಸಕೂಡದು' ಅಂತ ಅಬ್ಬರಿಸಿದಾಗ, "ಕೇಳುವುದಕ್ಕೆ ನೀನ್ಯಾವ ಪೋತಪ್ಪ ನಾಯಕ?" ಅಂತ ಮನಸ್ಸುಗಳು ತಿರುಗಿ ಬೀಳುತ್ತವೆ. ಉಡಿಗೆ ಪರರಿಚ್ಛೆ ಎಂಬುದನ್ನು ಒಪ್ಪಿಕೊಂಡ ನಂತರವೂ ವ್ಯಕ್ತಿಗತವಾದ ದಿರಿಸು, ಅದರ ಬಣ್ಣ, ಚೆಂದ ನವಿರು, ಪಾರದರ್ಶಕತೆ, ಅಳತೆ, ನುಣುಪು- ಇವುಗಳನ್ನು ನಿರ್ದೇಶಿಸಲಿಕ್ಕೆ ಶ್ರೀರಾಮನ್ಯಾರು? ಅವನ ಸೇನೆಯವರ್ಯಾರು?

ಕೆಲವೊಮ್ಮೆ ಮುತಾಲಿಕ, ನಾರಾಯಣ ಗೌಡ, ಪ್ರವೀಣ ಶೆಟ್ಟಿ ಮುಂತಾದವರು ಸಾರ್ವಜನಿಕ ನ್ಯೂಯಿಸೆನ್ಸ್‌ಗಳು ಅನ್ನಿಸಿದರೂ ಅಂಥವರನ್ನು ತೀರ ಖಂಡಿಸಲಿಕ್ಕೆ ಹೋಗುವುದಿಲ್ಲ! 'ನಾರಾಯಣ ಗೌಡರಂಥವರು ಬೀದಿಗಿಳಿದಿರುವುದರಿಂದಲೇ ಸಾಫ್ಟ್‌ವೇರ್ ಕಂಪನಿಗಳು ಕಡೇಪಕ್ಷ ಕನ್ನಡಿಗರಿಗೆ ಕಸಗುಡಿಸುವ ಕೆಲಸ ಕೊಡುತ್ತಿವೆ ಸುಮ್ಮನಿರಿ' ಅಂತ ನಾವೇ ಮಾತನಾಡಿಕೊಳ್ಳುತ್ತೇವೆ. ಹಿಂದೂ ಅಜೆಂಡಾಗಳನ್ನಿಟ್ಟುಕೊಂಡು ಹೊರಟ ಮುತಾಲಿಕರಂಥವರಿಗೆ 'ಇವರೂ ಇಲ್ಲದೆ ಹೋದರೆ ನಮ್ಮ ರಾಜಕಾರಣಿಗಳು ಸಾಬರನ್ನು ತೀರ ಮುದ್ದು ಮಾಡಿ ತಲೆ ಮೇಲೆ ಕೂಡಿಸಿಕೊಂಡು ಬಿಡ್ತಾರೆ ಸುಮ್ನಿರಿ' ಎಂಬಂತಹ ರಿಯಾಯಿತಿಗಳನ್ನು ಕೊಡುತ್ತವೆ. ಹಜ್ ಯಾತ್ರೆಗೆ ಸರ್ಕಾರ ಕೊಡುವುದನ್ನು ಮುತಾಲಿಕ್ ಪ್ರಶ್ನಿಸುವುದರಲ್ಲಿ ತಲ್ಲೇನಿಲ್ಲ ಅನಿಸುತ್ತದೆ.

ಆದರೆ ಎಲ್ಲದಕ್ಕೂ ಒಂದು ಮಿತಿಯಿರುತ್ತದೆ. 'ಐ ಲವ್ ಯೂ' ಅನ್ನುವದಕ್ಕೂ ಕನ್ನಡದಲ್ಲೇ ಹೇಳು ಎಂದು ಯಾವನಾದರೂ ಹೋರಾಟಗಾರ ಚಳವಳಿ ಮಾಡಿದರೆ ಹೇಗೆ ಒದೆ ತಿಂದು ನಗಣ್ಯನಾಗುತ್ತಾನೆಯೇ, ಮನಸಿನ ಪಿಸುಮಾತು ಆಡಬೇಡ ಅನ್ನಲು ಹೋದರೆ ಮುತಾಲಿಕರ ಹಿಂದೂ ಒದೆ ತಿಂದು ಮನೆ ಸೇರಬೇಕಾಗುತ್ತದೆ. ಮನುಷ್ಯ ಉಳಿದೆಲ್ಲ ಸಹಿಸಿಕೊಳ್ಳುತ್ತಾನೆ. ತನ್ನ ಜಾಗ, ತನ್ನ ಮಾನ, ತನ್ನ ಅನ್ನ, ತನ್ನ ಕಾಮ, ತನ್ನ ಅಪಿಯರೆನ್ಸು, ವ್ಯಕ್ತಿಗತ ಭಾಷೆ, ಆಹಾರ ಮುಂತಾದವುಗಳ ವಿಷಯಕ್ಕೆ ಯಾರಾದರೂ ತಲೆ ಹಾಕಿದರೆ ತಕ್ಷಣ ಸಿಡಿಯುತ್ತಾನೆ. ಯಾವ ಹೋರಾಟಗಾರನೂ ಸಾರ್ವಜನಿಕರ ಈ ಸಂಗತಿಗಳಿಗೆ ತಲೆ ಹಾಕಬಾರದು. ಈ ದೇಶದಲ್ಲಿ ಕಮ್ಯುನಿಸ್ಟರು ದೇವರನ್ನು ಬೈದೇ ವಿಫಲರಾದರು.

ಇದನ್ನೇ ಅಫಘಾನಿಸ್ತಾನದಲ್ಲಿ ತಾಲಿಬಾನ್ ಮಾಡಿತು. ಕೈಗೆ ಮೆಹಂದಿ ಹಚ್ಚಬಾರದು, ಸಿನೆಮಾ ನೋಡಬಾರದು, ಗಾಳಿಪಟ ಹಾರಿಸಬಾರದು, ಫೋಟೋ ತೆಗೆಯಬಾರದು, ಇಷ್ಟೇ ಉದ್ದ ಗಡ್ಡ ಬಿಡಬೇಕು, ಹಾಡಬಾರದು, ಹಾಡು ಕೇಳಬಾರದು ಅಂತ ನಿಯಮ ಮಾಡಿತು. ಅಮೆರಿಕದ ದಾಳಿ ನಡೆದು, ಕಾಬೂಲ್ ಪತನವಾಗಿ ತಾಲಿಬಾನಿ ಸರ್ಕಾರ ತೊಲಗುತ್ತಿದ್ದಂತೆಯೇ - ಅಫಘಾನಿಸ್ತಾನದ ಜನ ಬೀದಿಗೆ ಬಂದು ಅತ್ಯಂತ ಖುಷಿಯಿಂದ, ಯಾವ್ಯಾವುದನ್ನು ಮಾಡಬಾರದು ಅಂತ ಅಪ್ಪಣೆಯಿತ್ತೇ, ಅದೆಲ್ಲವನ್ನೂ ಮಾಡಿದರು. ನನಗೆ ಮುಲ್ಲಾ ಒಮರ್ ಮತ್ತು ಮುತಾಲಿಕರಲ್ಲಿ ವ್ಯತ್ಯಾಸ ಕಾಣುತ್ತಿಲ್ಲ. ಮುಲ್ಲಾ ಒಮರ್ ಕೂಡ ಆರಂಭದಲ್ಲಿ ಇದೇ moral policing ಮಾಡಿದ. ಅದನ್ನು ಅಫಘಾನಿಸ್ತಾನದ ಮೂರ್ಕ ಸಮಾಜ, ಮುಂದೇನಾದೀತೆಂಬ ಪರಿವೆಯಿಲ್ಲದೆ ಬೆಂಬಲಿಸಿ, ಸ್ವಾಗತಿಸಿತು. ಕೊನೆ ಕೊನೆಗೆ ಮುಲ್ಲಾ ಒಮರ್‌ನ ವಿಕಾರಿ ಮನಸ್ಸು ಮಾನವ ಜೀವನವನ್ನೇ ಅಸಹನೀಯಗೊಳಿಸಿಬಿಟ್ಟಿತು.

ಧರ್ಮದ ಪರಿಣಾಮವೇ ಅದು. ಅದನ್ನು ಎಲ್ಲಿಡಬೇಕೋ ಅಲ್ಲಿಟ್ಟರೆ ಚೆಂದ. ಬೀದಿಗೆ ತಂದು ಮೈಗೆಲ್ಲ ಹಚ್ಚಿಕೊಂಡರೆ ಅದಕ್ಕಿಂತ ಅಸಹನೀಯ ಮತ್ತೊಂದಿಲ್ಲ. ಮುತಾಲಿಕ್ ಈಗಾಗಲೇ ಆ ಕೆಲಸ ಮಾಡಿಕೊಂಡಿದ್ದಾರೆ. ಅವರ ಹುಲಿವೇಷ ಅಸಹನೀಯ.

ಇವತ್ತು ಯಡಿಯೂರಪ್ಪ ಮತ್ತು ಅವರ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಮಾತು ಹೇಳುತ್ತಿದ್ದೇನೆ. ವ್ಯಾಲಂಟೈನ್ಸ್ ಡೇ ಹತ್ತಿರದಲ್ಲೇ ಇದೆ. ಕೈಗೆ ಸಿಕ್ಕ ಯಾರೋ ಪಾಪದ ಹುಡುಗ-ಹುಡುಗಿಯರನ್ನು ಹಿಂಸಿಸಿ, ತಾಳಿಗೀಳಿ ಕಟ್ಟಿಸಿ ಅದಕ್ಕೆ ಟೀವಿಗಳ ಪಬ್ಲಿಸಿಟಿ ಸಿಕ್ಕುಬಿಟ್ಟರೆ ಸಮಾಜದಲ್ಲಿ ಕಲ್ಲೋಲವಾಗಿ ಹೋದೀತು. ಮುತಾಲಿಕರ ಬಗ್ಗೆ ಯಡ್ಡಿಗೆ ಮೃದು ಧೋರಣೆಯಿದ್ದರೆ ಅವರನ್ನು ಬೇರೆ ರೀತಿಯಲ್ಲಿ ಸಹಿಸಿಕೊಳ್ಳಲಿ. ಆದರೆ ಬೆಳೆಯುವ ಹುಡುಗರ ವಿಷಯದಲ್ಲಿ ಅವರು ಚಿಕ್ಕದೊಂಡು ಪುಂಡಾಟಿಕೆ ಮಾಡಿದರೂ ಸರ್ಕಾರಕ್ಕೆ ತುಂಬ ಕೆಟ್ಟ ಹೆಸರು ಬರುತ್ತದೆ. ಎಚ್ಚರವಿರಲಿ.

(ಸ್ನೇಹ ಸೇತು : ಹಾಯ್ ಬೆಂಗಳೂರ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X