• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ

By Staff
|
Google Oneindia Kannada News

ಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ ಟೌನ್ ಹಾಲ್ ಸಭಾಂಗಣದ ಮುಂದೆ ಪ್ರಗತಿಪರ ಸಂಸ್ಥೆಯ ಸಾಹಿತಿಗಳು, ಮಾಧ್ಯಮಮಿತ್ರರು ಧರಣಿ ನಡೆಸಲಿದ್ದಾರೆ.

* ರವಿಬೆಳೆಗೆರೆ

ಮಂಗಳೂರಿನ ಪತ್ರಕರ್ತ ಬಿ.ವಿ. ಸೀತಾರಾಂ ಅವರಿಗೆ ಕೋಳ ತೊಡಿಸಿ ಪೊಲೀಸರು ಕರೆದೊಯ್ದದ್ದನ್ನು ಕಂಡಾಗ ಸಂಕಟವಾದದ್ದು ನಿಜ. ಕರ್ನಾಟಕವೊಂದೇ ಏಕೆ, ಇಡೀ ಭಾರತದಲ್ಲೇ ಸಕ್ರಿಯವಾಗಿ ಕೆಲಸ ಮಾಡುವ ಅಷ್ಟೂ ಜನ ಸಂಪಾದಕರ ಮೇಲೆ ಮಾನನಷ್ಟ ಮೊಕದ್ದಮೆಗಳಿವೆ. ಮಾನನಷ್ಟ ಮೊಕದ್ದಮೆ ಎದುರಿಸುವ ಸಂಪಾದಕರು ನ್ಯಾಯಾಲಯಕ್ಕೆ, ಅವರು ಆದೇಶಿಸಿದ ದಿನಾಂಕದಂದು ಹೋಗದೆ ಇದ್ದರೆ ವಾರಂಟು ಹೋಗುತ್ತದೆ. ಪೊಲೀಸರು ಬಂದು ಮನೆಗಳ, ಕಚೇರಿಗಳ ಬಾಗಿಲಿಗೆ ನಿಲ್ಲುತ್ತಾರೆ, ಇನ್ಸ್ ಪೆಕ್ಟರುಗಳಿಂದ ಹಿಡಿದು ಐಜಿಪಿಗಳ ತನಕ ಫೋನು ಮಾಡಿ 'ನೀವು ಕೋರ್ಟಿಗೆ ಹಾಜರಾಗದಿದ್ದರೆ ನಾವು ಕ್ರಮ ಜರುಗಿಸಬೇಕಾಗುತ್ತದೆ' ಅಂತ ನಮ್ಮನು ಎಚ್ಚರಿಸುತ್ತಿರುತ್ತಾರೆ. ಪ್ರಕಟಿಸಿದುದರಲ್ಲಿ ಸತ್ಯವಿದೆಯೋ ಇಲ್ಲವೋ, ಅದು ಬೇರೆ ಮಾತು.

ಪ್ರಕರಣ ನಡೆಯುವ ತನಕ ನಾವು ನ್ಯಾಯಾಲಯದಲ್ಲಿ ಆರೋಪಿಗಳ ಸ್ಥಾನದಲ್ಲಿ ಕೈಕಟ್ಟಿಕೊಂಡು ಕಟೆಕಟೆಯಲ್ಲಿ ನಿಲ್ಲಲೇಬೇಕು. ಈ ಟೀವಿಯ ಮುಖ್ಯಸ್ಥ ರಾಮೋಜಿರಾಯರಿಂದ ಹಿಡಿದು ನನ್ನ ತನಕ ಎಲ್ಲ ಪತ್ರಿಕೆ, ಎಲ್ಲ ಮಾಧ್ಯಮಗಳವರ ಮೇಲೂ ಇಂಥ ಸಮನ್ಸ್ ಗಳು,ವಾರಂಟುಗಳು ಇದ್ದೇ ಇವೆ. ಇವು ನಾವಿರುವ ತನಕ, ಪತ್ರಿಕೆ ನಡೆಸುವ ತನಕ ಇದ್ದೇ ಇರುತ್ತವೆ. ಕೆಲವೊಮ್ಮೆ ತಿಂಗಳುಗಟ್ಟಲೆ ಪರಸ್ಪರರನ್ನು ಭೇಟಿಯಾಗದ ನಾವು ಕೋರ್ಟಿನ ಕಟಕಟೆಗಳಲ್ಲಿ ಪಕ್ಕಪಕ್ಕ ನಿಲ್ಲುತ್ತೇವೆ. ಕಷ್ಟ ಸುಖ ಮಾತಾಡಿಕೊಳ್ಳುತ್ತೇವೆ. ಇರುವ ದೈನಂದಿನ ಕೆಲಸಗಳನ್ನೆಲ್ಲ ಬಿಟ್ಟು, ಮದುವೆ -ಸಾವು-ಸಭೆ-ಸನ್ಮಾನ ಎಲ್ಲ ರದ್ದುಗೊಳಿಸಿ ಕರ್ನಾಟಕದ ಯಾವುದೋ ಮೂಲೆಯ ಕೋರ್ಟೊಂದಕ್ಕೆ ಹಾಜರಾಗಿ ಮೈಲುಗಟ್ಟಲೆ ಪ್ರಯಾಣ ಮುಗಿಸಿ ಬಂದಿರುತ್ತೇವೆ.

ನಾವೆಲ್ಲ ಅನುಭವಿಸಿದುದನ್ನೇ ಮಂಗಳೂರಿನ 'ಕರಾವಳಿ ಅಲೆ' ಪತ್ರಿಕೆಯ ಸಂಪಾದಕ ಬಿ.ವಿ. ಸೀತಾರಾಂ ಅನುಭವಿಸಿದ್ದಾರೆ. Of course, ಕೊಂಚ ಅತಿಯಾಗಿಯೇ ಅನುಭವಿಸುತ್ತಿದ್ದಾರೆ. ಯಾರೇ ಹೋಗಿ ಅವರನ್ನು ಭೇಟಿಯಾದರೂ "ಗೃಹಸಚಿವ ವಿ.ಎಸ್. ಆಚಾರ್ಯರು ನನ್ನನ್ನು ಕೊಲ್ಲಿಸುತ್ತಾರೆ" ಅಂತಲೇ ಹಲಬುತ್ತಾರೆ. ಗೃಹ ಸಚಿವ ವಿ.ಎಸ್ ಆಚಾರ್ಯರು ಪತ್ರಕರ್ತರೊಬ್ಬನನ್ನು ಕೊಲ್ಲಿಸುವ ಮಟ್ಟದ ರಾಜಕಾರಣಿಯಲ್ಲ. ಒಬ್ಬ ಪತ್ರಕರ್ತನಿಗೆ 'ನಾನು ಕೊಲೆಯಾಗುತ್ತೇನೆ' ಅಂತ ಅನ್ನಿಸುವುದು ಸುಮ್ಮನೆ ಮಾತಲ್ಲ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ನಾವು ಸಂಪಾದಕರ್ಯಾರು ತೀರ ಜೀವ ಭಯದಲ್ಲಿ ಕೆಲಸ ಮಾಡುತ್ತಿಲ್ಲ. ಉಳಿದೆಡೆಗಳಲ್ಲಿ ಆದಂತೆ ಕರ್ನಾಟಕದಲ್ಲಿ ಪತ್ರಕರ್ತರ ಹತ್ಯೆಗಳೂ ಆಗಿಲ್ಲ. ಚಿಕ್ಕ ಪುಟ್ಟ ಹಲ್ಲೆಗಳಾದರೂ ಅವುಗಳನ್ನು ನಾವು ತಾರತಮ್ಯವಿಲ್ಲದೆ ಖಂಡಿಸಿದ್ದಿದೆ. ಪತ್ರಿಕೋದ್ಯಮದ ಮೇಲೆ ಸರ್ಕಾರಗಳು ಸುತ್ತಿಗೆ ಎತ್ತಿದ್ದನ್ನು ಒಟ್ಟಾರೆಯಾಗಿ ಪತ್ರಕರ್ತರಾದ ನಾವ್ಯಾರೂ ಸಹಿಸಿಕೊಂಡಿಲ್ಲ. ಅಂತೆಯೇ ಈ ದೇಶದ ಪ್ರಧಾನಮಂತ್ರಿಯ ಪದವಿಯ ತನಕ ಹೋಗಿ ಬಂದ ದೇವೇಗೌಡರಿಂದ ಹಿಡಿದು ಒಬ್ಬ ಮಂಡಲ ಪಂಚಾಯ್ತಿ ಸದಸ್ಯನವರೆಗೂ, ತಪ್ಪು ಸಿಕ್ಕಾಗ ನಾವು ಖಂಡಿಸದೆ ಬಿಟ್ಟಿಲ್ಲ. ಇದೆಲ್ಲದರ ಅರ್ಥವಿಷ್ಟೆ: ಕರ್ನಾಟಕದಲ್ಲಿ ಇವತ್ತಿಗೂ ಮುಕ್ತ ಪತ್ರಿಕೋದ್ಯಮ ನಡೆಸುವ ವಾತಾವರಣವಿದೆ.

ಆದರೆ ಕುತ್ತು, ಆಪತ್ತು ಬಂದಿರುವುದು ಸದ್ಯಕ್ಕೆ ಬಿ.ವಿ.ಸೀತಾರಾಂ ಅವರೊಬ್ಬರಿಗೇನೇ. ಅದಕ್ಕೆ ಸಂಘ ಪರಿವಾರದವರು ಕಾರಣವಿರಬಹುದು. ಆದರೆ ಸೀತಾರಾಂ ಅವರಿಗೆ ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿಕೊಳ್ಳುವ ಮಟ್ಟದ ಸ್ವಯಂಕೃತ ಅವಿವೇಕವಿದೆ. ಅದು ಸ್ವಭಾವ ಜನ್ಯವಾದದ್ದು. "ವಿಶ್ವೇಶ್ವರಭಟ್ಟರು ಆರೆಸ್ಸೆಸ್ಸಿನವರಿಂದ 35ಲಕ್ಷ ರುಪಾಯಿ ಲಂಚ ಪಡೆದಿದ್ದಾರೆ" ಅಂತ ಮುಖಪುಟದ ಸುದ್ದಿ ಬರೆಯುತ್ತಾರೆ. ಆರೆಸ್ಸೆಸ್ಸಿನವರು ಯಾರಿಗಾದರೂ ಲಂಚ ಕೊಡುವುದು ಹಾಗಿರಲಿ, ಅರ್ಜೆಂಟಿಗೆ ಬೇಕು ಅಂದರೆ ಹೆಂಡತಿಗೊಂದು ಮುತ್ತು ಕೊಡುವುದನ್ನೂ ದೇಶಭಕ್ತಿಗೆ ವಿರುದ್ಧವಾದೀತಾ ಅಂತ ಯೋಚಿಸುವ ಜನ. ಹಾಗಿರುವಲ್ಲಿ ಅವರೇಕೆ ಭಟ್ಟರಿಗೆ ಲಂಚ ಕೊಡುತ್ತಾರೆ? ಲಂಚ ಕೊಟ್ಟು ಭಟ್ಟರಿಂದ ಮಾಡಿಸಿಕೊಳ್ಳಬಹುದಾದ ಕೆಲಸವಾದರೂ ಆರೆಸ್ಸೆಸ್ಸಿನವರಿಗೆ ಯಾವುದಿದೆ; ಅವರದೇ ಸರಕಾರವಿರುವಾಗ? ಇಂಥ ಕಾಮನ್ ಸೆನ್ಸಿಗೆ ನಿಲುಕುವಂಥ ವಿಷಯಗಳನ್ನೂ ಬಿ.ವಿ.ಸೀತಾರಾಂ ಯೋಚಿಸುವುದಿಲ್ಲ. ಅವರು ಹಿಡಿದ ಮೊಲಕ್ಕೆ ಮೂರೇ ಕಾಲು, ಆರೇ ಕೊಂಬು.

ಈ ಹಿಂದೆ ಜೈನ ಮುನಿಗಳ ಬೆತ್ತಲೆತನದ ಬಗ್ಗೆ ಬರೆದರು. ವೀರೇಂದ್ರ ಹೆಗ್ಗಡೆಯವರ ಬಗ್ಗೆ ಬರೆದರು. ಚಿಕಿತ್ಸಕ ದೃಷ್ಟಿಯಿಂದ ಬರೆಯುವುದಾದರೆ ಯಾರ ಬಗ್ಗೆ ಬೇಕಾದರೂ ಬರೆಯಬಹುದು. ಒಬ್ಬ ಮನುಷ್ಯನನ್ನು ತಿದ್ದುವ, ಒಂದು ಪ್ರಕರಣವನ್ನು ಬಯಲಿಗೆಳೆಯುವ, ಅನ್ಯಾಯವನ್ನು ಸರಿಪಡಿಸುವ ಅಕ್ರಮವನ್ನು ಪ್ರತಿಭಟಿಸುವ ಉದ್ದೇಶದಿಂದ ಆ ಥರದ ಬರವಣಿಗೆಗಳನ್ನು ಪ್ರಕಟಿಸಲಿಕ್ಕೆ ನಾವೆಲ್ಲರೂ ಸ್ವತಂತ್ರರೇ. ಆದರೆ ಒಬ್ಬ ಭಕ್ತಿ, ಒಂದು ಧರ್ಮ ಅಥವಾ ಒಂದು ಸಂಸ್ಥೆಯ ಬಗ್ಗೆ ಎಷ್ಟು ಸಲ ಬರೆಯುವುದು? ಈ ಪ್ರಶ್ನೆಯನ್ನು ಸೀತಾರಾಂ ಕೇಳಿಕೊಳ್ಳುವುದಿಲ್ಲ. ಬೆನ್ನತ್ತಿ ಬಿಡುತ್ತಾರೆ. ತಾವು ಅಂದುಕೊಂಡಿದ್ದೇ ಸರಿ ಎಂದು ವಾದಿಸುತ್ತಾರೆ. ಆ ವಾದವನ್ನು ನೀವು ಒಪ್ಪಲೇಬೇಕು ಎಂದು ಹಟ ಹಿಡಿಯುತ್ತಾರೆ. ಫಜೀತಿಯಾಗುವುದೇ ಅಲ್ಲಿ. ಹೀಗಾಗಿಯೇ, ಬಿ.ವಿ. ಸೀತಾರಾಂ ಒಂದು ವರ್ಷದ ಅಂತರದಲ್ಲಿ ಎರಡು ಸಲ ಜೈಲು ಕಾಣುವಂತಾಗಿದೆ.

ಈ ಸಲದ ಅವಘಡಕ್ಕೆ ಕಾರಣವಾದದ್ದು, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಎಂಬಾತನನ್ನು ಸೀತಾರಾಂ ಬೆನ್ನತ್ತಿ ಬರೆಯತೊಡಗಿದ್ದು, ನಿಮಗೆ ಗೊತ್ತಿರುವಂತೆ, ಸಿದ್ದಗಂಗೆ ಮಠ ಅಥವಾ ಸುತ್ತೂರು ಮಠದಂತಹ ಕೆಲವು ಸಮಾಜಮುಖಿ ಮಠಗಳ ಮತ್ತು ಸ್ವಾಮಿಗಳ ಹೊರತಾಗಿ ಕರ್ನಾಟಕದ ಅತಿ ಹೆಚ್ಚು ಮಠಗಳನ್ನು ಕೊಡವಿ ಜಾಲಾಡಿ, ನೇರಾನೇರ ಎದುರು ಹಾಕಿಕೊಂದವನು ನಾನು. ಶಿರಸಿಯ ಪಾದುಕಾ ಮಠದಂತಹವು 'ಪತ್ರಿಕೆ'ಯ ವರದಿಗಳ ಹೊಡೆತಕ್ಕೆ ಸಿಕ್ಕು ಉಟ್ಟ ಲಂಗೋಟಿ ಕಳಚಿ ಬಿದ್ದು ಕಂಗಾಲಾಗಿ ಹೋದವು. ಆದರೆ ಇವತ್ತಿಗೂ ಗದುಗಿನ ಡಂಬಳ ಮಠದ ಸ್ವಾಮಿಗಳೊಂದಿಗೆ ನನ್ನ ವ್ಯಕ್ತಿಗತ ಸಂಬಂಧ, ಸ್ನೇಹಗಳು ಆರೋಗ್ಯಪೂರ್ಣವಾಗಿಯೇ ಇವೆ. ಪತ್ರಿಕೆ ನಡೆಸುವುದೆಂದರೆ ಎಲ್ಲರನ್ನೂ ಅವಮಾನಿಸುತ್ತ ಹೋಗುವುದು ಅಂತ ಅಲ್ಲವಲ್ಲ? ಸೀತಾರಾಂ ಪ್ರತಿನಿತ್ಯ ಆ ಕೆಲಸವನ್ನು ಮಾಡುತ್ತಾರೆ. 'ವಿಜಯ ಕರ್ನಾಟಕ' ಬಂದ ನಂತರ ಪತ್ರಿಕೆಯ ಪ್ರಸಾರಕ್ಕೆ ಹೊಡೆತ ಬಿತ್ತು. ಕೆಲವು ವರದಿಗಾರರು, ಸರ್ಕ್ಯುಲೇಷನ್ನಿನವರು ಬಿಟ್ಟು ಹೋದರು. ಈ ಪರಿಸ್ಥಿತಿ ಅನೇಕ ಪತ್ರಿಕೆಗಳಿಗಾಗಿದೆ. ಆದರೆ ಸೀತಾರಾಂ ಇದನ್ನು ವೈಯಕ್ತಿಕ ಮಟ್ಟದಲಿ ತೆಗೆದುಕೊಂಡುಬಿಡುತ್ತಾರೆ. ವಿಶ್ವೇಶ್ವರಭಟ್ಟರ ಮೇಲೆ ಸುಖಾ ಸುಮ್ಮನೆ ಕೆಂಡ ಕಾರತೊಡಗುತ್ತಾರೆ.

ಇತ್ತೀಚಿನ ಪ್ರಕರಣವನ್ನೇ ನೋಡಿ. ಶಂಕರಪುರದ ಭೋಜರಾಜ ಶೆಟ್ಟಿ ಎಂಬಾತ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬುದಾಗಿ ಸೀತಾರಾಂ ಒಂದು ಸುದ್ದಿ ಪ್ರಕಟಿಸಿದರು. ಅದಕ್ಕೆ ಭೋಜರಾಜ ಶೆಟ್ಟಿ ಉಡುಪಿಯ ನ್ಯಾಯಾಲಯದಲ್ಲಿ ದಾವೆ ಹೂಡಿದರು. ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಹೊರಟಿತು. ಸೀತಾರಾಂ ಹಾಜರಾಗಲಿಲ್ಲ. ವಾರಂಟು ಹೊರಟಿತು. ಸೀತಾರಾಂ ಹಾಜರಾಗಲಿಲ್ಲ. ಪೊಲೀಸರು ಕೂಡ ಇಂಥ ಪ್ರಕರಣಗಳನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಮ್ಮನ್ನೆಲ್ಲ ಎಚ್ಚರಿಸಿದಂತೆಯೇ ಸೀತಾರಾಂ ಅವರನ್ನು ಎಚ್ಚರಿಸಿ ಸುಮ್ಮನಾದರು. ಯಾವಾಗ ಸೀತಾರಾಂ ಯಾವುದಕ್ಕೂ ಜಗ್ಗಲಿಲ್ಲವೋ. ಆಗ ದಾವೆ ಹೂಡಿದ ಭೋಜರಾಜ ಶೆಟ್ಟಿ ಪೊಲೀಸರ ಮೇಲೇಯೇ ಕೇಸು ಹಾಕಲು ಮುಂದಾದರು. ಈ ಹಂತದಲ್ಲಿ ಬೇರೆ ದಾರಿ ಕಾಣದೆ ಪೊಲೀಸರು ಸೀತಾರಾಂ ಅವರನ್ನು ಬಂಧಿಸಿದರು. ನ್ಯಾಯಾಲಯ ಸೀತಾರಾಂ ಅವರಿಗೆ ಜಾಮೀನು ನೀಡಿತು. ಆದರೆ ವಜ್ರದೇಹಿ ಮಠದ ಇನ್ನೊಂದು ಕೇಸಿತ್ತಲ್ಲ? ಅದರಲಿ ಸೀತಾರಾಂರನ್ನು ಬಂಧಿಸಲು ಬಜಪೆ ಪೊಲೀಸರು ಸಿದ್ಧರಾಗಿದ್ದರು. ಇದು ಗೊತ್ತಾಗಿದ್ದರಿಂದ ಸ್ವತಃ ಸೀತಾರಾಂ ಅವರೇ 'ನಂಗೆ ಜಾಮೀನು ಬೇಡ' ಅಂದರು. ಸದ್ಯಕ್ಕೆ ಅನಾರೋಗ್ಯದ ಕಾರಣ ಹೇಳಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಂದ ಮೈಸೂರು ಜೈಲಿಗೆ ಕಳಿಸಲಾಗಿದೆ.

ಇದರಲ್ಲಿ ಪತ್ರಿಕೋದ್ಯಮಕ್ಕೆ ಬಂದೊದಗಿದ ಗಂಡಾಂತರವಾಗಲೀ, ಆಪತ್ತಾಗಲೀ ಏನಿದೆ? ನ್ಯಾಯಾಲಯದ ಮಾತೂ ಮೀರುತ್ತೇನೆಂದು ಹೊರಟರೆ ಹೇಗೆ? ಇಷ್ಟಾಯಿತಲ್ಲ; ಸೀತಾರಾಂ ಬಂಧನವನ್ನು ಮಂಗಳೂರಿನ ಯಾವ ಪತ್ರಿಕೆಯೂ ಖಂಡಿಸಲಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘವೂ ಖಂಡಿಸಲಿಲ್ಲ. ಏಕೆಂದರೆ, ಅವರೆಲ್ಲರ ವಿರುದ್ಧವೂ ಸೀತಾರಾಂ ಸತತವಾಗಿ ಬರೆದಿದ್ದಾರೆ. ತಮ್ಮ ವರದಿಗಾರನ ಮೇಲೊಮ್ಮೆ ಶೇಖರಪ್ಪ ಎಂಬ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿದಾಗ ಅದನ್ನು ಪತ್ರಕರ್ತರ ಸಂಘ ಖಂಡಿಸಿತ್ತು. ಆದರೆ ಬಿ.ವಿ.ಸೀತಾರಾಂ ಸದರಿ ಸಂಘವನ್ನು' ನಂಪುಂಸಕ ವಸೂಲಿಗಾರರ ಸಂಘ' ಅಂತ ಟೀಕಿಸಿ ಬರೆದರು. ಈಗ ಸೀತಾರಾಂ ಜೈಲಿಗೆ ಹೋಗಿರುವುದನ್ನು, ಅವರಿಗೆ ಕೋಳ ಹಾಕಿ ಒಯ್ದದ್ದನ್ನು ಬೆಂಗಳೂರಿನ ಕೆಲವೇ ಪತ್ರಕರ್ತರು ಮತ್ತು ಬೆರಳೆಣಿಕೆಯ ಎಡ ಪಂಥೀಯರು ಖಂಡಿಸಿದ್ದಾರೆ.

ಈ ವಿಷಯ ಸಂಬಂಧಿಸಿದಂತೆ ಗೌರಿ ಲಂಕೇಶ್ ನನಗೆ ಫೋನು ಮಾಡಿದ್ದರು. ಅವರ ಕಳಕಳಿಯ ಬಗ್ಗೆ ನನಗೆ ಗೌರವವಿದೆ. ಸಹ ಪತ್ರಕರ್ತನೊಬ್ಬ ತೊಂದರೆಗೀಡಾದಾಗ, ಆತನೊಂದಿಗೆ ಏನೇ ಭಿನ್ನಾಭಿಪ್ರಾಯವಿದ್ದರೂ, ತೊಂದರೆ ಮಾಡಿದವರನ್ನು ನಾವು ಖಂಡಿಸಲೇಬೇಕು. ಗೌರಿಯ ನಿಲುವಿಗೆ ನನ್ನ ಸಮ್ಮತಿಯಿತ್ತು. ಆದರೆ ಬಿ.ವಿ.ಸೀತಾರಾಂ ಇಂಥ ಸಮಸ್ಯೆಗಳನ್ನು ಕರಾರುವಕ್ಕಾಗಿ ವರ್ಷಕ್ಕೊಮ್ಮೆ ಸೃಷ್ಟಿಸಿಕೊಳ್ಳುತ್ತಾರೆ. ಜೈಲಿಗೆ ಹೋಗುತ್ತಾರೆ. ಅವರಿಗೆ ಕೋಳ ಹಾಕಿದಾಗಲೆಲ್ಲ ನಾವು ಖಂಡಿಸಲು ಹೊರಟುಬಿಟ್ಟರೆ ಅದಕ್ಕೆ ಕೊನೆಯೆಲ್ಲಿ, ಅರ್ಥವೆಲ್ಲಿ? ಒಮ್ಮೆ ಸೀತಾರಾಂ ಅವರ ಪತ್ರಿಕೆಯನ್ನು ಯಾರಾದರೂ ಬಿಡಿಸಿ ನೋಡಲಿ. ಅದರಲ್ಲಿ ಅತಿ ಹೆಚ್ಚು ಬೈಯಲ್ಪಟ್ಟವರು ಇತರೆ ಪತ್ರಕರ್ತರೇ ಆಗಿರುತ್ತಾರೆ. ಸೀತಾರಾಂ ಅವರ 'ಕರಾವಳಿ ಅಲೆ' ಮತ್ತು 'ಜಯಕಿರಣ' ಎಂಬ ಎರಡು ಪತ್ರಿಕೆಗಳ ಕದನವನ್ನು ಕರಾವಳಿಯ ಜನ ಎಷ್ಟೂಂತ ಓದುತ್ತಾರೆ? ಎಷ್ಟು ದಿನ ಅಂತ ಓದುತ್ತಾರೆ?

ಇವತ್ತಿನ ಪರಿಸ್ಥಿತಿಯೆಂದರೆ ಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಅವರದೇ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಒಂದು ಪತ್ರಿಕೆಗೆ ಮಾಡಲು ಬೇಕಾದಷ್ಟು ಕೆಲಸವಿರುತ್ತದೆ. ಬರೆದಷ್ಟೂ ಸುದ್ದಿ ಸಿಕ್ಕುತ್ತದೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ವಿಶಾಲಗೊಳಿಸಿಕೊಳ್ಳಲಿ, ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ.

ಸೂಚನೆ : ಪತ್ರಕರ್ತ ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ ಟೌನ್ ಹಾಲ್ ಸಭಾಂಗಣದ ಮುಂದೆ ಪ್ರಗತಿಪರ ಸಂಸ್ಥೆಯ ಸಾಹಿತಿಗಳು, ಮಾಧ್ಯಮಮಿತ್ರರು ಧರಣಿ ನಡೆಸಲಿದ್ದಾರೆ ಎಂದು ಜನಶಕ್ತಿ, ಸುರೇಂದ್ರಸಮುದಾಯದ ಗುರುಶಾಂತ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X