ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೆಲ್ಲಿಂದ ತೆಗೆದ ಕುಮಾರಣ್ಣ ಜಾತಿವಾದದ ಭಗವದ್ಗೀತೆಯನ್ನ?

By ಅಂಕಣಕಾರ : ರವಿ ಬೆಳಗೆರೆ
|
Google Oneindia Kannada News

Caste politics : All Chief Ministers are same!ಮೊನ್ನೆ ವಿಧಾನಸಭೆಯಲ್ಲಿ ನಿಂತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಸಗೊಬ್ಬರ ಸಮಸ್ಯೆಯ ಬಗ್ಗೆ ಮಾತನಾಡಿದ್ದನ್ನು ನೀವು ಕೇಳಿರಬೇಕು. ನಿಜಕ್ಕೂ ಕುಮಾರಸ್ವಾಮಿ ಚೆನ್ನಾಗಿ ಮಾತನಾಡಿದರು. ಅವರು ನೋಟ್ಸ್ ರೆಡಿ ಮಾಡಿಕೊಂಡು ಬಂದ ರೀತಿ, ಸದನದಲ್ಲಿ ವಿಷಯವನ್ನು ಪ್ರಸೆಂಟ್ ಮಾಡಿದ ರೀತಿ, ಕೇಳುವವರಿಗೆ ಇಂಪ್ರೆಸ್ ಮಾಡಿದ ರೀತಿ ನಿಜಕ್ಕೂ ಭೇಷ್ ಅನ್ನುವಂತಿತ್ತು. ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ರಸಗೊಬ್ಬರ ಎಲ್ಲೂ ಸಿಗ್ತಾ ಇಲ್ಲ ಕಣ್ರೀ. ಬೇಕಿದ್ರೆ ತಗಳಿ ಐನೂರು ಕೋಟಿ ರುಪಾಯಿ ಡಿಡಿ ನಿಮ್ ಕೈಗೆ ಕೊಡ್ತೀನಿ. ನೀವೇ ತಂದು ಕೊಡಿ ಗೊಬ್ರ ಅಂದರಲ್ಲ? 'ಅಲ್ರೀ ಯಡಿಯೂರಪ್ಪ, ನಾವು ಗೊಬ್ರ ತಂದು ಕೊಡೋದಾದ್ರೆ ನೀವ್ಯಾಕ್ರೀ ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕು? ಹೋಗ್ರಿ ರಾಜೀನಾಮೆ ಕೊಟ್ಟು ಮನೆ ಕಡೆ ಹೋಗ್ರಿ' ಅಂದರು.

ಕುಮಾರಸ್ವಾಮಿಯ ಆ ದಿಟ್ಟತನದ ಮಾತು ಕೇಳಿದಾಗ ಎಲ್ಲೋ ಒಂದು ಕಡೆ ಹೌದಲ್ಲಾ ಈ ಯಪ್ಪ ಸಿಎಂ ಆಗಿದ್ದಾಗಲೂ ಇಷ್ಟು ಚಂದಗೆ ಮಾತಾಡಿರಲಿಲ್ಲ ಅನ್ನಿಸಿದ್ದು ನಿಜ. ರಾಧಿಕೆ ನಿನ್ನ ಸರಸವಿದೇನೇ... ಅನ್ನುವ ಬದಲು ಇದೇ ರೀತಿ ಕುಮಾರಸ್ವಾಮಿ ಸಿರೀಯಸ್ ಆಗಿದ್ದಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ಆದರೆ ಹಾಗಲಿಲ್ಲ, ಆ ಮಾತು ಬೇರೆ. ಇರಲಿ, ಆವತ್ತು ಎಷ್ಟು ಚೆನ್ನಾಗಿ ಮಾತನಾಡಿದ ಕುಮಾರಸ್ವಾಮಿ ಕಡೆ ಕ್ಷಣದಲ್ಲಿ ತೊಪ್ಪಂತ ಕೆಳಗೆ ಬಿದ್ದ ರೀತಿ ಮಾತ್ರ ಖೇದ ಹುಟ್ಟಿಸುವಂತಿತ್ತು. ಅವಸರದಲ್ಲಿ ಅಜ್ಜಿ ಮೈ ನೆರತಳು ಅನ್ನುವ ಹಾಗೆ, ಇಷ್ಟೆಲ್ಲಾ ಚೆಂದಾಗಿ ಮಾತನಾಡಿದ ಕುಮಾರಸ್ವಾಮಿ ಇದ್ದಕ್ಕಿದ್ದ ಹಾಗೆ ಜಾತಿಯ ಬಾಲ ಹಿಡಿದು ಯಡವಟ್ಟು ಮಾಡಿಕೊಂಡುಬಿಟ್ಟರು.

ನಿಮ್ಮ ಕಾರ್ಯದರ್ಶಿಗಳಿದ್ದಾರಲ್ಲ? ಅವರು ಒಬ್ಬ ಅಧಿಕಾರಿ ಹತ್ರ ಏನು ಮಾತಾಡಿದ್ದಾರೆ ಅಂತ ನಂಗೂತ್ತು ಕಣ್ರೀ. ಅರವತ್ತು ಜನ ಅಧಿಕಾರಿಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ವರ್ಗಾವಣೆ ಮಾಡಿದ್ರಲ್ಲಾ? ಹೀಗೆ ವರ್ಗಾವಣೆ ಮಾಡುವಾಗ ಒಂದು ಸಮಾಜದ ಅಧಿಕಾರಿಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದೀರಿ. ಇದು ಸರಿಯಲ್ಲ ಅಂದು ಬಿಟ್ಟರು ಕುಮಾರಸ್ವಾಮಿ. ಭಪ್ಪರೇ ಕುಮಾರ ಅನಿಸಿದ್ದು ಆಗ. ಅವರ ಮಾತಿನ ಅರ್ಥದಲ್ಲಿ ಲಿಂಗಾಯತರ ಸಾಮ್ರಾಜ್ಯದಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ ಅನ್ನುವುದು. ಕುಮಾರ ಹೇಳಿದ್ದರಲ್ಲಿ ತಪ್ಪು ಇದೆ ಅಂತಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಒಂದಿಷ್ಟು ಲಿಂಗಾಯತ ಅಧಿಕಾರಿಗಳು ಆಯಾಕಟ್ಟಿನ ಜಾಗಕ್ಕೆ ಬಂದು ಕುಂತಿದ್ದು ನಿಜ. ಆ ಪೈಕಿ ಮುಖ್ಯರಾದವರು ಎಂದರೆ ಮುಖ್ಯಮಂತ್ರಿಗಳ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಬಂದು ಕೂತಿರುವ ವಿ.ಪಿ.ಬಳಿಗಾರ್. ಗುಪ್ತದಳಕ್ಕೆ ಬಂದು ಸೆಟ್ಲಾಗಿರುವ ಶಂಕರ ಬಿದರಿ, ಜತೆಗೆ ದಯಾಶಂಕರ್ ಥರದ ಒಂದಿಷ್ಟು ಅಧಿಕಾರಿಗಳು ತಲೆಬಾಗಿಲಿಗೆ ಬಂದು ಕುಳಿತಿದ್ದಾರೆ. ಇದು ಜಾತಿವಾದ ಅಂತ ಸಾಮಾನ್ಯ ಮತದಾರನೊಬ್ಬ ಹೇಳಿದರೆ ಫೈನ್. ಆದರೆ ಇದನ್ನು ಗುರುತಿಸಿ ಭಗವದ್ಗೀತೆ ಶುರುವಿಟ್ಟುಕೊಳ್ಳುವ ನೈತಿಕತೆ ಕುಮಾರಸ್ವಾಮಿಗಿದೆಯೇ ಅನ್ನುವುದು ಸದ್ಯದ ಪ್ರಶ್ನೆ.

ಯಾಕೆಂದರೆ ಇದೇ ಯಡಿಯೂರಪ್ಪನವರ ಸಪೋರ್ಟ್ ತಗಂಡು ಸರ್ಕಾರ ಮಾಡಿದ ಕುಮಾರ ಕಂಠೀರವ, ಮತ್ತವನ ಹಿಂದಿದ್ದ ದೇವೇಗೌಡರು ಈ ನಾಡು ಮೆಚ್ಚಿ ಅಹುದಹುದು ಎನ್ನುವಂತೆ ನಡೆದುಕೊಂಡರೇ? ಜಾತಿವಾದ ಅನ್ನುವುದು ನೆತ್ತಿಯ ಮೇಲಿನ ಕೂದಲಿಗಿಂತ ಹುಲುಸಾಗಿ ಬೆಳೆಯಲಿಲ್ಲವೇ? ತೆಗೆದು ನೋಡಲಿ ಕುಮಾರಸ್ವಾಮಿ, ಮತ್ತವರಿಗಿಂತ ಹಿಂದಿದ್ದ ಎಸ್ಸೆಂ ಕೃಷ್ಣ ಅವರ ಕಾಲದಲ್ಲಿ ಮೆರೆದವರು ದಲಿತರೇ? ಹಿಂದುಳಿದವರೇ? ಲಿಂಗಾಯತರೇ? ಯಾರು ಅಂತ ಎದೆ ತಟ್ಟಿ ಹೇಳಲಿ?

ಕುಮಾರಸ್ವಾಮಿ ಕಾಲವನ್ನೇ ಗಮನಿಸಿ ನೋಡಿ. ಇವರ ಸರ್ಕಾರ ಕಣ್ಣು ಕಿವಿಯಾಗಿ ಇಂಟೆಲಿಜೆನ್ಸ್‌ನಲ್ಲಿ ಬಂದು ಕೂತಿದ್ದ ಕಿಶೋರ್ ಚಂದ್ರ ಯಾರು? ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋಧ್ಯಮ, ವಾರ್ತೆ, ಯುವಜನ ಮತ್ತು ಕ್ರೀಡೆ ಹೀಗೆ ಒಂದಲ್ಲ, ಎರಡಲ್ಲ ನಾಲ್ಕು ನಾಲ್ಕು ಇಲಾಖೆ ಉಸ್ತುವಾರಿ ವಹಿಸಿಕೊಂಡಿದ್ದ ವಿಠ್ಠಲಮೂರ್ತಿ ಯಾರು? ಹಾಗೇ ನಾರಾಯಣಗೌಡ ಎಂಬ ರಣ ಹಸಿವಿನ ಮನುಷ್ಯನನ್ನು ಟ್ರಾನ್ಸ್‌ಪೋರ್ಟ್ ಇಲಾಖೆಗೆ ತಂದು ಕೂಡಿಸಿ ರಾಡಿ ಮಾಡಿಕೊಂಡವರಾರು? ನೋಡುತ್ತ ಹೋದರೆ ಕುಮಾರಸ್ವಾಮಿ ಕಾಲದಲ್ಲಿ ಜಾತಿ ಅಟ್ಟಹಾಸ ಮೆರೆದಿತ್ತು. ಕುಮಾರನ ಪಕ್ಕ ಇದ್ದ ಜಾತ್ಯಸ್ಥ ಅಧಿಕಾರಿಗಳಲ್ಲಿ ದಕ್ಷರು ಇರಲಿಲ್ಲವೇ? ಅಂತ ಕೇಳಬಹುದು. ಪ್ರಶ್ನೆ ಅದಲ್ಲ, ಯಾಕೆಂದರೆ ಯಡಿಯೂರಪ್ಪ ಅಕ್ಕಪಕ್ಕ ತಂದು ಕೂರಿಸಿಕೊಂಡಿರುವ ಅಧಿಕಾರಿಗಳೂ ದಕ್ಷರೇ. ಬಳಿಗಾರ್ ಇರಬಹುದು, ಬಿದರಿ ಇರಬಹುದು ಅವರಿಗೂ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗೇ ಇದೆಯಲ್ಲ?

ಇದು ಒಂದು ಕಡೆಗಿರಲಿ, ಕುಮಾರ ಮತ್ತವನ ತಂದೆ ಕುಂತು ಸರ್ಕಾರದ ದಂಡೊಂದನ್ನು ನಿಯೋಜಿಸಿಕೊಂಡರಲ್ಲ? ಅವರೆಲ್ಲ ಯಾರು? ಅವರಿಗೆ ನಿಷ್ಠರಾಗಿದ್ದವರು ತಾನೇ? ಹೆಸರಿಗೆ ಮೈತ್ರಿಕೂಟ ಅಂತಿದ್ದರೂ ಯಡಿಯೂರಪ್ಪ ಅವರ ತಂಡಕ್ಕೆ ತಮಗಿಷ್ಟ ಬಂದ ಅಧಿಕಾರಿಗಳನ್ನು ಹಾಕಿಕೊಳ್ಳಲು ಇವರು ಬಿಟ್ಟರೆ? ಇದೇ ಬಳಿಗಾರ್ ಅವರನ್ನು ಹಣಕಾಸು ಇಲಾಖೆಗೆ ತಗೊಳ್ತೀನಿ ಅರ್ಡರ್ ಹೊರಡಿಸಿ ಕುಮಾರಸ್ವಾಮಿ ಅಂತ ಯಡಿಯೂರಪ್ಪ ಗೋಳಾಡಿದರಲ್ಲ? ಯಾಕೆ ನೇಮಿಸಲಿಲ್ಲ ಕುಮಾರಸ್ವಾಮಿ? ಅಂದರೆ ಹಣಕಾಸು ಇಲಾಖೆಯಲ್ಲಿ ತಮಗೆ ಬೇಕಾದವರು ಬಂದು ಕೂಡಲಿ ಎಂಬ ಸ್ವಾರ್ಥ. ಉಳಿದಂತೆ ಬಿಜೆಪಿ ಮಂತ್ರಿಗಳ ಪಾಡು ಬಿಡಿ, ಅಶೋಕ್‌ನಿಂದ ಹಿಡಿದು ಕಾರಜೋಳರವರೆಗೆ ಎಲ್ಲ ಮಂತ್ರಿಗಳ ಇಲಾಖೆಯಲ್ಲೂ ದೇವೇಗೌಡರಿಗೆ ನಿಷ್ಠರಾದ ಅಧಿಕಾರಿಗಳ ದಂಡು ಕುಳಿತಿತ್ತು. ಇನ್ನು ದೇವೇಗೌಡರ ಪ್ಯಾಮಿಲಿಯವರಿಗೆ ಟೆಂಪಲ್ ಟೂರ್ ಮಾಡಿಸಲೆಂದೇ ರಾಮಸ್ವಾಮಿ ಥರದ ಅಧಿಕಾರಿಗಳನ್ನಿಟ್ಟುಕೊಳ್ಳಲಾಗಿತ್ತು.

ಒಂದು ಕಡೆ ಜಾತಿ ಅಧಿಕಾರಿಗಳ ದಂಡು, ಮತ್ತೊಂದು ಕಡೆ ಅಧಿಕಾರಿಗಳ ಹಿಂಡನ್ನಿಟ್ಟುಕೊಂಡು ಆಡಳಿತ ಮಾಡಿದ ಕುಮಾರ ಇವತ್ತು ಸಮಾಜದ ಅಧಿಕಾರಿಗಳನ್ನು ಟಾರ್ಗೆಟ್ ಮಾಡ್ತಿದೀರಿ ಹುಷಾರ್ ಅಂತ ಗದರಿಸಲು ಹೋಗುತ್ತಾರೆ. ಅಂದ ಹಾಗೆ ಒಬ್ಬ ವಿಠ್ಠಲಮೂರ್ತಿ, ಒಬ್ಬ ನಾರಾಯಣಗೌಡರಂತಹ ಅಧಿಕಾರಿಗಳನ್ನು ತಂದು ಕೂಡಿಸಿಕೊಂಡ ಮಾತ್ರಕ್ಕೆ ಒಕ್ಕಲಿತರ ಸಮುದಾಯ ಉದ್ಧಾರವಾಗಲಿಲ್ಲ. ನಾಳೆ ಬಳಿಗಾರ್, ಬಿದರಿ ಅವರಂಥವರು ಕೂತ ಮಾತ್ರಕ್ಕೆ ಲಿಂಗಾಯತರ ಬದುಕು ಬಂಗಾರ ಆಗುವುದಿಲ್ಲ. ಅನುಕೂಲ ಅಂತ ಅಗುವುದೇನಿದ್ದರೂ ಗದ್ದುಗೆಯ ಮೇಲೆ ಕುಳಿತ ಜನ ತಮ್ಮ ಸ್ವಾರ್ಥಕ್ಕೆ ಅವರನ್ನು ಬಳಸಿಕೊಂಡರೆ ರಾಜ್ಯದ ಹಿತ ಸಾಧನೆಯಾಗುವುದಿಲ್ಲ. ರಾಜ್ಯದ ಹಿತಕ್ಕೆ ಬಳಸಿಕೊಂಡರೆ ಒಳ್ಳೆಯ ಮುಖ್ಯಮಂತ್ರಿ ಅನ್ನಿಸಿಕೊಳ್ಳುತ್ತಾರೆ. ಈ ಎರಡರ ಪೈಕಿ ಕುಮಾರನ ಉದ್ದೇಶ ಏನಿತ್ತು? ಅನ್ನುವುದು ಎಲ್ಲರಿಗೂ ಗೊತ್ತು. ಈಗ ಯಡಿಯೂರಪ್ಪ ಅವರ ಸರದಿ. ಅವರೇನು ಮಾಡುತ್ತಾರೋ ಕಾದು ನೋಡೋಣ. ಅದನ್ನು ಬಿಟ್ಟು ತಮ್ಮ ಚೇಲಾಗಳಾಗಿದ್ದ ಅಧಿಕಾರಿಗಳಿಗೆ ಮೇಯಲು ಒಳ್ಳೇಯ ಜಾಗ ಕೊಡಲಿಲ್ಲ. ಅನ್ನುವ ಸಂಕಟಕ್ಕೆ ಜಾತಿಯ ದಾಳ ಬಳಸಿದರೆ ಕುಮಾರ ಅನುಕಂಪಕ್ಕೆ ಅರ್ಹನಾಗಬಹುದು ಇನ್ನೇನಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಕ್ಕಲಿಗ ಸಮಾಜದ ಅಧಿಕಾರಿಗಳಿಗೆ ಏನೋ ಗಂಡಾಂತರವಾಗಿದೆ ಅಂತ ಹೇಳುತ್ತಾರಲ್ಲ ಕುಮಾರಸ್ವಾಮಿ? ಇವರ ಕಾಲದಲ್ಲಿ ಸಾರಿಗೆ ಇಲಾಖೆಯಿಂದ ಹಿಡಿದು ಕಂದಾಯ ಇಲಾಖೆಯವರೆಗೆ ಯಾವ ಇಲಾಖೆಯಲ್ಲಿ ಒಕ್ಕಲಿಗರ ಹಿತ ಕಾಪಾಡಿದರು? ಹಾಗೆ ನೋಡಿದರೆ ತಮಗೆ ಅನುಕೂಲವಾದರೆ ಇವರಿಗೆ ಜಾತಿಬೇಕು. ಈಗಲೂ ಅಷ್ಟೇ. ಅವರು ಯಾರ ಪರ ವಕಾಲತ್ತು ಮಾಡಲು ಹೊರಟಿದ್ದಾರೋ? ಅವರೆಲ್ಲ ಇವರ ಕಾಲದಲ್ಲಿ ಚೆಂದೆಗೆ ಮೇಯ್ದು ದುಂಡಗಾದವರು. ಅವರಿಗೆ ಮೇಯಲು ಒಳ್ಳೇಯ ಜಾಗ ಕೊಡಲಿ ನೋಡೋಣ, ಕುಮಾರ ಗಪ್ ಚುಪ್.

ಹಾಗೆ ನೋಡಿದರೆ ಒಂದು ಜಾತಿಯ ಮನುಷ್ಯ ಮುಖ್ಯಮಂತ್ರಿಯಾದಾಗ ಅವರ ಸುತ್ತ ಜಾತಿಯ ಅಧಿಕಾರಿಗಳ ದಂಡು ನೆರೆಯುವುದು ಸುಲಭ. ಈ ರೀತಿ ಜಾತಿವಾದಿಯಲ್ಲದ ಜೆ.ಎಚ್.ಪಟೇಲರಿಗೇ ತಮ್ಮ ಸುತ್ತ ಬಿ.ಎಸ್.ಪಾಟೀಲರಂಥವರು ನೆರೆಯುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಇನ್ನು ಯಡಿಯೂರಪ್ಪ ಅವರಂಥವರು ಹೇಗೆ ತಪ್ಪಿಸಲು ಸಾಧ್ಯ? ಆದರೆ ಹಿಂದೆ ಅಧಿಕಾರ ನಡೆಸಿದ ಎಸ್.ಎಂ.ಕೃಷ್ಣ, ಕುಮಾರಥರದವರು ಅಂತಹ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರೆ ಅದು ಸಾಧ್ಯವಾಗುತ್ತಿತ್ತು. ಆದರೆ ಕೃಷ್ಣ ಮತ್ತು ಕುಮಾರಸ್ವಾಮಿ ಅಂತಹ ಧೀಮಂತಿಕೆಯಿಂದ ನಡೆದುಕೊಳ್ಳಲಿಲ್ಲವಲ್ಲ? ಹೀಗಿರುವಾಗ ಅವರು ಯಡಿಯೂರಪ್ಪ ಅವರಿಂದ ಮಾನವತಾವಾದಿ ಬಸವಣ್ಣನ ನಡವಳಿಕೆಯನ್ನು ನಿರೀಕ್ಷೆ ಮಾಡಿದರೆ ಜನ ನಗುವುದಿಲ್ಲವೇ? ಅಂದ ಹಾಗೆ ಯಡಿಯೂರಪ್ಪ ಕೂಡಾ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೊಂದಿದೆ. ಅಧಿಕಾರ ಹಿಡಿದ ಕೂಡಲೇ ಅವರ ಕುಮಾರ ಅಧಿಕಾರಿಗಳನ್ನು ತೊಟ್ಟಿಲಲ್ಲಿ ಮಲಗಿಸಿ ಲಾಲಿ ಹಾಡುವ ಅಗತ್ಯ ಏನಿಲ್ಲ. ಆದರೆ ಉಳಿದಂತೆ ಒಕ್ಕಲಿಗ ಅಧಿಕಾರಿಗಳ ಮೇಲೆ ದ್ವೇಷ ಸಾಧಿಸುವ ಕೆಲಸವೂ ಆಗಬಾರದು. ಹಾಗೇನಾದರೂ ಮಾಡಿದರೆ ವಿಶ್ವಾಸಾರ್ಹತೆಯನ್ನು ಮುಳುಗಿಸುತ್ತದೆ.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X