• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಕೆಟ್ ಬೆಟ್ಟಿಂಗ್ ವಂಚಕ ಪ್ರಪಂಚ

By Staff
|

Rahul Dravidಬರೀ ಟೆಲಿಫೋನ್‌ಗಳ ಮುಖಾಂತರ ಮಾತ್ರವಲ್ಲ ಆನ್‌ಲೈನ್‌ನಲ್ಲಿಯೂ ಬೆಟ್ಟಿಂಗ್ ನಡೆಯುತ್ತದೆ. ಹಣದ ಆಸೆಗೆ ಬಿದ್ದ ಕೆಲ ಕ್ರಿಕೆಟ್ಟಿಗರಿಂದ ಇಡೀ ಕ್ರಿಕೆಟ್ ರಂಗಕ್ಕೇ ಕಳಂಕ ಬಂದಿರುವುದು ಜಗಜ್ಜಾಹೀರಾತು. ಈ ದಂಧೆಯಿಂದ ಬುಕ್ಕಿಗಳು ಕೋಟಿ ಕೋಟಿ ಹಣ ಮಾಡಿಕೊಳ್ಳುತ್ತಿದ್ದರೆ, ಅಮಾಯಕರು ಬೀದಿಗೆ ಬೀಳುತ್ತಿದ್ದಾರೆ. ಪಾಕ್ ಮಾಜಿ ಕೋಚ್ ಬಾಬ್ ವೂಲ್ಮರ್ ಬಲಿಯಾಗಿದ್ದು ಈ ಅಮಾನವೀಯ ದಂಧೆಗೆ ಹಿಡಿದ ಕನ್ನಡಿ. ಇದರ ಕರಾಳ ಮುಖ ರಾಹುಲ್ ಅಂಥವರ ಮೇಲೂ ಗೂಬೆ ಕೂಡಿಸುವಂತೆ ಮಾಡಿದೆ.

* ರವಿ ಬೆಳಗೆರೆ

ಒಂದು ಕಡೆ ಚುನಾವಣೆಗಳು ಅಬ್ಬರಿಸಿ ದಾಂಗುಡಿಯಿಟ್ಟು ಬರುತ್ತಿದ್ದರೆ, ಇನ್ನೊಂದು ಕಡೆ ಬೀದಿಬೀದಿಯಲ್ಲೂ ಕ್ರಿಕೆಟ್ ಮೇನಿಯಾ ಆರಂಭವಾಗಿದೆ. ಸಾವಿರಾರು ಕೋಟಿಗಳಿಗೆ ಬಾಳುವ ವಿಜಯಮಲ್ಯ, ಮುಖೇಶ್ ಅಂಬಾನಿ, ಪ್ರೀತಿ ಜಿಂಟಾ, ವಾಡಿಯಾ, ಶಾರುಕ್ ಖಾನ್ ಮುಂತಾದವರು ಕುದುರೆ ಖರೀದಿಸಿದಂತೆ ಜಗತ್ತಿನ ಪ್ರಮುಖ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿ ತಮ್ಮತಮ್ಮವೇ ಆದ ತಂಡಗಳನ್ನು ರಚಿಸಿಕೊಂಡು ಅಖಾಡಾಕ್ಕೆ ಇಳಿದಿದ್ದಾರೆ. ಈಗ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ಟಿನ ಸ್ವರ್ಣಕಾಲ. ಶುಕ್ರವಾರದಿಂದ ಚೆಂಡು ಪುಟಿಯುತ್ತಿದೆ. ಅಂತೆಯೇ ರಾಜ್ಯದಲ್ಲಿ ಕ್ರಿಕೆಟ್ ಬುಕಿಂಗ್‌ನ ಪೆನ್ನಾಗರ ದೊಡ್ಡ ಮಟ್ಟದಲ್ಲಿ ತಲೆ ಎತ್ತಲಿದೆ.

ಜಗತ್ತಿನಲ್ಲಿ ಎಲ್ಲೇ ಕ್ರಿಕೆಟ್ ನಡೆದರೂ ಅದಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆಯುತ್ತದೆ. ಅದು ಕೆಲವು ಸಾವಿರ ಕೋಟಿ ರುಪಾಯಿಗಳ ವ್ಯವಹಾರ. ಒಂದು ಚೀಟಿಯೂ ಇಲ್ಲದೆ, ಯಾವ ಸರ್ಕಾರಕ್ಕೂ ತೆರಿಗೆ ಕಟ್ಟದೆ, ಯಾರ ಕಣ್ಣಿಗೂ ಬೀಳದೆ ನಡೆದು ಹೋಗುವ ಈ ದಂಧೆಯ ಹಿಂದಿರುವವರು ಯಾರು? ಇದರ ನೆಟ್‌ವರ್ಕಿಂಗ್ ಹೇಗೆ? ಅಂತಿಮವಾಗಿ ಲಾಭ ಪಡೆಯುವವರು ಯಾರು? ಈ ಜೂಜಿನಿಂದ ಸಾಮಾನ್ಯ ಮನುಷ್ಯ ಹೇಗೆ ದಿವಾಳಿಯಾಗಿ ಹೋಗುತ್ತಾನೆ? ಇದನ್ನು ತಡೆಯಲು ಪೊಲೀಸರು ಏನು ಮಾಡಬಹುದು? ಎಲ್ಲವನ್ನೂ 'ಪತ್ರಿಕೆ' ಬಯಲು ಮಾಡುತ್ತಿದೆ.

ಕ್ರಿಕೆಟ್ ಬೆಟ್ಟಿಂಗ್‌ನ ಹಿಂದೆ ದಾವೂದ್ ಇಬ್ರಾಹಿಂ ಇದ್ದಾನೆ. ನಿಮ್ಮ ಊರಿನ ಚಿಕ್ಕ ಗಲ್ಲಿಯ ಪುಡಿ ರೌಡಿಯೂ ಇರುತ್ತಾನೆ. ಇದರ ಪ್ರಮುಖ ತಲೆಗಳಿಗೆ ರಾಜಕಾರಣಿಗಳೊಂದಿಗೆ ನಂಟಿದೆ. ಈ ತನಕ ಚಿಕ್ಕಪುಟ್ಟ ಬುಕ್ಕಿಗಳನ್ನು ಬಂಧಿಸಿರುವುದು ಬಿಟ್ಟರೆ ಪೊಲೀಸರು ಯಾವುದೇ ದೊಡ್ಡ ಕುಳದ ಹೆಗಲಿಗೆ ಕೈ ಹಾಕಿಲ್ಲ. ಅಂತಿಮವಾಗಿ, ಹುಡುಕುತ್ತ ಹೋದರೆ ನಾವು ಈ ಪರಿಯಾಗಿ ಮೆಚ್ಚುವ ನಮ್ಮ ಕ್ರಿಕೆಟ್ಟಿಗರೇ ಖದೀಮರಾಗಿ ಹೋಗಿದ್ದಾರೆ ಎಂಬ ಅನುಮಾನವೂ ದೃಢಗೊಳ್ಳದೆ ಇರದು.

Under world don Dawood Ibrahimಭಾರತದ ಮಟ್ಟಿಗೆ ಕ್ರಿಕೆಟ್ ಬೆಟ್ಟಿಂಗ್ ನಡೆಯುವುದು ದುಬೈನಿಂದ ನಿಯಂತ್ರಿತವಾಗಿ. ಅದರ ಹಿಂದಿರುವವನು ದಾವೂದ್ ಇಬ್ರಾಹಿಂ. ದುಬೈನ ದೊರೆಗಳೊಂದಿಗೆ ನೇರ ಸಂಪರ್ಕವಿರುವವರು, ಗುಜರಾತ್‌ನಲ್ಲಿರುವ ದಾವೂದ್‌ನ ಜನ. ಅಲ್ಲಿಂದ ದಿಲ್ಲಿ, ಹೈದರಾಬಾದ್, ಮುಂಬೈ, ಕಲ್ಕತ್ತಾ, ಬೆಂಗಳೂರು-ಹೀಗೆ ಬೆಟ್ಟಿಂಗ್ ಜಾಲ ಹರಡಿಕೊಳ್ಳುತ್ತದೆ. ಕರ್ನಾಟಕವನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಅಂತ ಮೂರು ಭಾಗಗಳಾಗಿ devide ಮಾಡಿಕೊಂಡು ಈ ಪ್ರದೇಶಗಳನ್ನು ಸಂಭಾಳಿಸಲು ಒಬ್ಬ ಮುಖ್ಯ ಬುಕ್ಕೀ ಇರುತ್ತಾನೆ. ಇವನ ಕೈಕೆಳಗೆ ಹತ್ತಿಪ್ಪತ್ತು ಜನ ಲ್ಯಾಪ್‌ಟಾಪ್ ಹೊಂದಿದ ಚುರುಕಾದ ಹುಡುಗರು ಕೆಲಸ ಮಾಡುತ್ತಿರುತ್ತಾರೆ. ಹೆಚ್ಚಿನದಾಗಿ ಮೈಸೂರಿನಲ್ಲಿ ಕುಳಿತುಕೊಂಡೇ ಬೆಟ್ಟಿಂಗ್ ದಂಧೆ ಸಂಭಾಳಿಸುವ ಮದನ್‌ನನ್ನು 'main bookie' ಎಂದು ಕರೆದರೆ, ರಾಜ್ಯಾದ್ಯಂತ ಜನರಿಂದ ಜೂಜಿನ ಹಣ ಪಡೆದು ಆಟ ಆಡಿಸುವ ಏಜೆಂಟರನ್ನು 'ಬುಕ್ ಮೇಕರ್ಸ್' ಎಂದು ಕರೆಯುತ್ತಾರೆ. ಇವರು ಪ್ರತಿ ಜಿಲ್ಲಾ, ಪ್ರತಿ ತಾಲೂಕು ಕೇಂದ್ರಗಳಲ್ಲೂ ಇರುತ್ತಾರೆ.

ಬುಕ್ ಮೇಕರುಗಳು ಇಂತಿಷ್ಟು ಹಣ (ಅವರು ತಾಕತ್ತಿಗೆ ಬಿಟ್ಟಿದ್ದು) ಅಂತ ಒಯ್ದು ಮೇನ್ ಬುಕ್ಕೀಗೆ ಡೆಪಾಜಿಟ್ ಆಗಿ ಕೊ‌ಡಬೇಕು. ಜೊತೆಗೆ ಒಂದು ಮೊಬೈಲನ್ನೂ ಆತನಿಗೆ ಕೊಟ್ಟು ಬರಬೇಕು. ಹಾಗೆ ಡೆಪಾಜಿಟ್ ಕಟ್ಟಿ ಬಂದ ಮೇಲೆ ಇವರು ಜನರಿಂದ ಹಣ ಕಟ್ಟಿಸಿಕೊಳ್ಳತೊಡಗುತ್ತಾರೆ. ಕುದುರೆ ಜೂಜಿನಂತೆಯೇ ಇಲ್ಲೂ ಹಣ ಕಟ್ಟುವವರನ್ನು ಪಂಟರುಗಳೆಂದು ಕರೆಯುತ್ತಾರೆ. ಆದರೆ ಇದು ಕುದುರೆ ಜೂಜಿಗಿಂತ ತುಂಬ ವಿಭಿನ್ನ ಮತ್ತು ವಿಚಿತ್ರ. ಅಲ್ಲಿ ಕ್ರಿಕೆಟ್ ಆಟ ಆರಂಭವಾಗುವುದಕ್ಕೆ ಒಂದು ತಾಸಿರುವಂತೆಯೇ ಯಾವ ತಂಡ ಟಾಸ್ ಗೆಲ್ಲುತ್ತದೆ ಎಂಬುದರ ಬಗ್ಗೆ ಬಂಟ್ಟಿಂಗ್ ಆರಂಭವಾಗುತ್ತದೆ. ಇಂಥ ತಂಡವೇ ಟಾಸ್ ಗೆಲ್ಲುತ್ತದೆ ಅಂತ ಪಂಟರುಗಳು ಬೆಟ್ ಕಟ್ಟುವುದು ತಮ್ಮ ಊರಿನ ಬುಕ್ ಮೇಕರ್‌ಗೆ. ಅವನು ತಕ್ಷಣ ತಾನು ಕೊಟ್ಟು ಬಂದ ಮೊಬೈಲ್‌ಗೆ ಫೋನು ಮಾಡಿ ಇಂತಿಷ್ಟು ಹಣ ಕಟ್ಟಲಾಗಿದೆ ಅಂತ ಮೇನ್ ಬುಕ್ಕೀಗೆ ತಿಳಿಸುತ್ತಾನೆ. ಈ ಕೆಲಸಕ್ಕಾಗಿ ಅವನಿಗೆ ಶೇ.10ರಷ್ಟು ಕಮೀಶನ್ ಸಿಕ್ಕತ್ತದೆ.

ಇಷ್ಟಾದ ಮೇಲೆ ಟಾಸ್ ಗೆದ್ದ ತಂಡ ಬ್ಯಾಂಟಿಂಗ್ ಮಾಡುತ್ತದೋ ಬೌಲಿಂಗ್ ಕೈಗೆತ್ತಿಕೊಳ್ಳುತ್ತದೋ ಅಂತ ಬೆಟ್ಟಿಂಗ್ ಆರಂಭವಾಗುತ್ತದೆ. ಅದಾದ ನಂತರ '15 ಓವರ್‌ಗಳಲ್ಲಿ ಒಂದು ತಂಡ ಇಂತಿಷ್ಟು ರನ್ ಹೊಡೆಯುತ್ತದೆ' ಅಂತ ದುಬೈನಲ್ಲಿ ಕುಳಿತ ಅತಿ ಪ್ರಮುಖ ಬುಕ್ಕೀ ಘೋಷಿಸುತ್ತಾನೆ. ಅದು ಬುಕ್ ಮೇಕರ್ಸ್‌ಗೆ ಆತ ಮಾಡುವ ಆಫರು. ಇಷ್ಟಾಗುತ್ತಿದ್ದಂತೆಯೇ ಹದಿನೈದು ಓವರುಗಳಲ್ಲಿ ಅಷ್ಟು ರನ್ ಬರುತ್ತದೋ ಇಲ್ಲವೋ ಎಂದು ಬುಕ್ ಮೇಕರ್‌ಗಳು ಪಂಟರ್‌ಗಳಿಂದ ಬೆಟ್ ಕಟ್ಟಿಸುತ್ತಾರೆ. ಹೀಗೆಯೇ ರನ್ ಗಳಿಕೆಗೆ ಸಂಬಂಧಿಸಿದಂತೆ ಮುವತ್ತು, ನಲವತ್ತು ಹಾಗೂ ಐವತ್ತನೇ ಓವರ್‌ಗಳವರೆಗೂ ಬೆಟ್ ನಡೆಯುತ್ತದೆ. ಮೊದಲರ್ಧ ಭಾಗದ ಆಟ ಮುಗಿದ ಮರುಕ್ಷಣವೇ ಯಾವ ತಂಡ ಗೆಲ್ಲುತ್ತದೆ ಎಂಬ ವಿಷಯವಾಗಿ ಬೆಟ್ಟಿಂಗ್ ಶುರುವಾಗುತ್ತದೆ. ಒಂದು ವೇಳೆ ಬಲಿಷ್ಠ ತಂಡ ಸೋಲುತ್ತದೆ ಎಂದು ಬೆಟ್ ಕಟ್ಟುವುದಾದರೆ ಒಂದಕ್ಕೆರಡರಷ್ಟು ಹಣ ಕೊಡುವುದಾಗಿ ದುಬೈನಲ್ಲಿ ಕೂತ ಪ್ರಮುಖ ಬುಕ್ಕೀ ಘೋಷಿಸುತ್ತಾನೆ. ಒಂದಕ್ಕೆರಡರಷ್ಟು ಹಣ ಅಂದಾಕ್ಷಣ ಯಾರಿಗುಂಟು ಯಾರಿಗಿಲ್ಲ ಅಂದುಕೊಂಡು ಪಂಟರ್‌ಗಳು ದುಡ್ಡು ಎಸೆಯಲು ಸಿದ್ಧರಾಗುತ್ತಾರೆ.

ಬೆಟ್ಟಿಂಗ್ ದಂಧೆಯ ಅಸಲಿಯತ್ತು ಅಡಗಿರುವುದೇ ಇಲ್ಲಿ. ಆ ಕಡೆ ದುಬೈನಲ್ಲಿ ಕೂತ ಪ್ರಮುಖ ಬುಕ್ಕೀ ಕೋಟಿಯ ಲೆಕ್ಕದಲ್ಲಿ ದುಡ್ಡು ಎಣಿಸಿಕೊಳ್ಳುತ್ತಿರುತ್ತಾನೆ. ಇನ್ನೊಂದೆಡೆ ಬೆಂಗಳೂರು, ಮೈಸೂರು ಮುಂತಾದ ಕಡೆಯಲ್ಲಿದ್ದು 'ಆಟ ಆಡಿಸುವ' ಬುಕ್ ಮೇಕರ್‌ಗಳಿಗೂ ಕಮೀಶನ್ ಹಣ ಸಂದಾಯವಾಗುತ್ತಿರುತ್ತದೆ. ಈ ಕಮಿಶನ್ ಹಣವೇ ಸಾವಿರಾರು ರು.ಗಳಲ್ಲಿರುತ್ತದೆ. ಆದರೆ ಆಟವನ್ನು, ಆಟಗಾರರನ್ನು, ಯಾವುದೋ ಅಂದಾಜನ್ನು ನಂಬಿ ದುಡ್ಡು ಕಟ್ಟುವ ಪಂಟರ್ ಮಾತ್ರ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುತ್ತಾನೆ.

ಇಂಥ ಬುಕ್ಕಿಗಳ ಪೈಕಿ ಪ್ರಮುಖನೇ ಮದನ್. ಈತ ಯಡಿಯೂರಪ್ಪನವರಿಗೆ ಪರಮಾಪ್ತ. ವಾರದ ಹಿಂದೆ ಮೈಸೂರಿನಲ್ಲಿ ಬಿಜೆಪಿಯ ಚುನಾವಣಾ ಸಮಾವೇಶ ನಡೆಯಿತಲ್ಲ, ಅದರ ಖರ್ಚು ನೋಡಿಕೊಂಡವನೇ ಈ ಮದನ್. ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿ ಮದನ್‌ಗೆ ಅರಮನೆಯಂಥ ಬಂಗಲೆಯಿದೆ. ಸುಸಜ್ಜಿತ ಆಫೀಸಿದೆ. ಎಂಟು ಹುಡುಗರು ಕೆಲಸಕ್ಕಿದ್ದಾರೆ. ಅಷ್ಟೂ ಜನರ ಬಳಿ ಲ್ಯಾಪ್‌ಟಾಪ್‌ಗಳಿವೆ.

ಮೈಸೂರು, ಚಾಮರಾಜನಗರ, ಮಂಡ್ಯ, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗಗಳ ಬೆಟ್ಟಿಂಗ್ ದಂಧೆ ನಡೆಸುವ ಮದನ್‌ಗೆ ಹಾಸನದಲ್ಲೇ ಶಶಿ, ಮಣಿ, ಮಾಸ್ಟರ್ ನಂದೀಶ, ಭುವನಹಳ್ಳಿ ಸೀನ, ರಂಗೋಲಿ ಹಳ್ಳದ ಗೆಡ್ಡಾ ಕುಮಾರ, ಹೇಮಂತ, ಬಿ.ಎಂ. ರಸ್ತೆಯ ದಿನಸಿ ಅಂಗಡಿ ಆನಂದ ಎಂಬ ಬುಕ್ ಮೇಕರ್ಸ್ ಇದ್ದಾರೆ. ನಿಮಗೆ ಆಶ್ಚರ್ಯವಾಗಬಹುದು. ನಾಗಮಂಗಲದಂಥ ಊರಿನಲ್ಲೂ ಮದನ್ ಕಡೆಯ ಬುಕ್ ಮೇಕರುಗಳಿದ್ದಾರೆ. ಆ ಪೈಕಿ ರಾಮು ಮತ್ತು ಹರೀಶ ಎಂಬಿಬ್ಬರು ನಾಗಮಂಗಲ ಮತ್ತು ಕುಣಿಗಲ್‌ನಲ್ಲಿ ಇನ್ನಿಲ್ಲದ ಆಮಿಷವೊಡ್ಡಿ ಪಂಟರ್‌ಗಳಿಂದ ಬೆಟ್ ಕಟ್ಟಿಸುತ್ತಾರೆ. ಈ ಕಡೆ ಬೆಂಗಳೂರಿಗೆ ಬಂದರೆ ಚಿಕ್ಕಪೇಟೆಯಲ್ಲಿ ಬುಕ್ಕಿಗಳಾಗಿ ಮಾರ್ವಾಡಿ ಹುಡುಗರಿದ್ದಾರೆ. ಚಾಮರಾಜಪೇಟೆಯಲ್ಲಿ ರೌಡಿ ಲೋಕೇಶನ ತಮ್ಮಂದಿರಾದ ಅನಿಲ್ ಮತ್ತು ಸುನೀಲ್ ಜೆ.ಸಿ.ರಸ್ತೆಯಲ್ಲಿ ಒಂದು ಆಫೀಸ್ ತೆರೆದೇ ಈ ದಂಧೆ ನಿಭಾಯಿಸುತ್ತಿದ್ದಾರೆ. ಇವರಿಗೆ ರಾಮನಗರ, ಚನ್ನಪಟ್ಟಣ, ಕೋಲಾರ, ತುಮಕೂರುಗಳಲ್ಲಿರುವ ಬುಕ್ ಮೇಕರ್‌ಗಳ ಕಡೆಯಿಂದ ದುಡ್ಡು ಬರುತ್ತದೆ.

ಅಂದಹಾಗೆ, ಬೆಂಗಳೂರು-ಮೈಸೂರಿನಲ್ಲಿ ನಡೆಯುತ್ತದಲ್ಲ, ಅದಕ್ಕಿಂತ ಎರಡುಪಟ್ಟು ಜೋರಾಗಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತದೆ. ಅಲ್ಲಿನ ಪ್ರಮುಖ ಬುಕ್ಕಿಗಳಾದ ಗಜಾನನ ಕಬಾಡಿ, ಶೀತಲ್ ಸಂಗ್ಲಾದ್, ಅನಿಲ್ ಡೋಂಗ್ರೆ, ಉದಯ್ ಗಣೇಶ‌್‌ಕಾರ್, ಸಂಜಯ ಕಲಾಲ್, ಮೋಹನ್ ಮೆಹರವಾಡೆಗೆ ಇದೇ ಫುಲ್‌ಟೈಂ ಕಸುಬು ಅಂದರೆ ಈ ದಂಧೆಯ ಆಳ-ಅಗಲ ಎಂಥದಿರಬೇಕೋ ಲೆಕ್ಕ ಹಾಕಿ.

ಒಂದು ಅಂದಾಜಿನ ಮೇಲೆ, ಅಥವಾ ಅದೃಷ್ಟದ ಮೇಲೆ ಬೆಟ್ಟಿಂಗ್ ನಡೆಯುತ್ತದೆ ಎಂದು ಭಾವಿಸಿದರೆ ಅದಕ್ಕಿಂದ ಮಿಗಿಲಾದ ಮೂರ್ಖತನವಿಲ್ಲ. ದುಬೈನಲ್ಲಿರುವ ಮೇನ್ ಬುಕ್ಕೀಯ ಕಡೆಯಿಂದ ಬುಕ್ ಮೇಕರ್ಸ್‌ಗೆ ಪ್ರತಿ ಬೆಟ್‌ಗೂ ಕಮೀಶನ್ ಸಿಗುತ್ತದೆ. ಜೊತೆಗೆ ಪಂಟರ್ ಕಟ್ಟುವ ಹಣದಲ್ಲಿ ಕೂಡ ಐದರಿಂದ ಹತ್ತು ಪರ್ಸೆಂಟ್ ದುಡ್ಡು ಇವನ ಕಿಸೆ ಸೇರಿರುತ್ತದೆ. ಈ ಕಾರಣದಿಂದಲೇ ಬೆಟ್ಟಿಂಗ್‌ನಿಂದ ಪಂಟರುಗಳು ಹಾಳಾಗುತ್ತಾರೆಯೇ ವಿನಾ ಬುಕ್ ಮೇಕರ್‌ಗಳಿಗೆ ನಯಾಪೈಸೆಯ ಲಾಸ್ ಕೂಡ ಆಗುವುದಿಲ್ಲ.

ಅದಿರಲಿ, ಪಂದ್ಯ ಶುರುವಾಗುವ ಮೊದಲೇ ಯಾವ ತಂಡ ಟಾಸ್ ಗೆಲ್ಲತ್ತದೆ, ಪಿಚ್ ರಿಪೋರ್ಟ್ ಹೇಗಿದೆ ಎಂದು ಬುಕ್ಕೀಗಳಿಗೆ ತಿಳಿಯುವುದಾದರೂ ಹೇಗೆ ಎಂಬ ಅಮಾಯಕ ಪ್ರಶ್ನೆ ನಿಮ್ಮದಾದರೆ ಅದಕ್ಕೂ ಇಲ್ಲಿ ಉತ್ತರವಿದೆ. ಉದಾಹರಣೆಗೆ ಭಾರತ ತಂಡ ವಿದೇಶಕ್ಕೆ ಆಡಲು ಹೋಯಿತು ಅಥವಾ ಒಂದು ವಿದೇಶಿ ತಂಡ ಭಾರತಕ್ಕೆ ಬಂದಿತೆನ್ನಿ, ಆಗ ಬುಕ್ಕಿಗಳ ತಂಡದ ವ್ಯಕ್ತಿಯೊಬ್ಬ ಅದು ಹೇಗೋ ತಂಡದ ಆಟಗಾರರಿಗೆ ಪರಿಚಯವಾಗುತ್ತಾನೆ. ತನ್ನ ಪ್ರಭಾವ ಬಳಿಸಿಯೇ ತಂಡಕ್ಕೆ ಪಾರ್ಟಿ ಕೊಡುತ್ತಾನೆ. ಆ ಸಂದರ್ಭದಲ್ಲಿಯೇ ತಂಡದ ಯಾರಾದರೊಬ್ಬ ಆಟಗಾರನನ್ನು 'ಫಿಕ್ಸ್' ಮಾಡಿಕೊಳ್ಳುತ್ತಾನೆ. ನಂತರ ದಿನದಿನವೂ ಆತನಿಂದ 'ಅಂತರಂಗ'ದ ಎಲ್ಲ ಮಾಹಿತಿಯನ್ನೂ ಪಡೆಯುತ್ತಾನೆ. ಟಾಸ್ ಗೆದ್ದ ನಂತರ ಒಂದು ತಂಡ ಬ್ಯಾಟಿಂಗ್ ಆಯ್ದುಕೊಳ್ಳುತ್ತದೋ ಅಥವಾ ಫೀಲ್ಡಿಂಗ್‌ಗೆ ಹೋಗುತ್ತದೋ ಎಂದು ಬುಕ್ಕೀಗೆ ಮೊದಲು ತಿಳಿಯುವುದೇ ಹೀಗೆ. ಬೆಟ್ಟಿಂಗ್‌ನ ಒಳಗುಟ್ಟು ಈಗ ಅರ್ಥವಾಯಿತಲ್ಲವೇ?

ಇನ್ನೂ ಒಂದು ಉದುಹಾರಣೆ ಕೇಳಿ. ಎರಡು ವರ್ಷದ ಹಿಂದೆ ಭಾರತ ತಂಡ ಪಾಕ್ ಪ್ರವಾಸ ಕೈಗೊಂಡಿತ್ತು. ಸಚಿನ್ ತೆಂಡೂಲ್ಕರ್ 194 ರನ್ ಹೊಡೆದಿದ್ದ. ಆತ ಡಬಲ್ ಸೆಂಚುರಿ ಹೊಡೆಯುವುದು ಗ್ಯಾರಂಟಿ ಎಂದೇ ಎಲ್ಲ ನಂಬಿದ್ದರು. ತೆಂಡೂಲ್ಕರ್ ಇನ್ನೂರು ರನ್ ಹೊಡೆದರೆ ಒಂದಕ್ಕೆರಡರಷ್ಟು ಹಣ ನೀಡುವುದಾಗಿ ದುಬೈನ ಬುಕ್ಕೀ ಘೋಷಿಸಿದ್ದ. ಡಬಲ್ ಸೆಂಚುರಿಗಾಗಿ ಎಲ್ಲರೂ ಕಾಯುತ್ತಿದ್ದಾಗ ನಾಯಕ ರಾಹುಲ್ ದ್ರಾವಿಡ್ ದಿಢೀರನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಅವತ್ತು ಗುಜರಾತ್‌ನ ಬುಕ್ಕೀಯೊಬ್ಬ ದ್ರಾವಿಡ್‌ರನ್ನು ಸಂಪರ್ಕಿಸಿ ಕೋಟ್ಯಂತರ ಹಣ ನೀಡುವ ಆಮಿಷ ಒಡ್ಡಿದನೆಂದೂ, ಹಣದಾಸೆಗೆ ದ್ರಾವಿಡ್ ಹಾಗೆ ಮಾಡಿದನೆಂದೂ ಆಗ ಸುದ್ದಿ ಹುಟ್ಟಿಕೊಂಡಿತ್ತು. ಇತ್ತ ತೆಂಡೂಲ್ಕರ್ ಪರವಾಗಿ ದುಡ್ಡು ಕಟ್ಟಿದ್ದ ಸಾವಿರಾರು ಮಂದಿ ಕೋಟ್ಯಾಂತರ ಹಣ ಕಳೆದುಕೊಂಡಿದ್ದರು. ವಿಪರ್ಯಾಸವೆಂದರೆ ಆಗಲೂ ಬೆಟ್ಟಿಂಗ್ ದಂಧೆಯ ಕರಾಳ ಸ್ವರೂಪ ಬಹಿರಂಗವಾಗಿರಲಿಲ್ಲ.

ಪೊಲೀಸರಿಗೆ ಅಮಾಯಕರ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಮೊದಲು ಈ ಬೆಟ್ಟಿಂಗ್ ದಂಧೆ ನಿಲ್ಲಿಸಲಿ. ಈ ಸಂಬಂಧವಾಗಿ ಮದನ್‌ನಂಥವರ ಮೊಬೈಲ್ ಟ್ಯಾಪ್ ಮಾಡಿದರೆ ಸಾಕು ಎಲ್ಲ ವಿವರವೂ ಬಹಿರಂಗವಾಗುತ್ತದೆ. ಮೇನ್ ಬುಕ್ಕೀಗಳಿಗೆ ಬುದ್ಧಿ ಕಲಿಸಿದರೆ, ಬುಕ್ ಮೇಕರ್‌ಗಳು ಹಾಗೂ ಪಂಟರ್‌ಗಳು ತಾವಾಗಿಯೇ ಕಾಲ್ಕೀಳುತ್ತಾರೆ. ಇನ್ನಾದರೂ ಪೊಲೀಸರು ಇತ್ತ ಗಮನ ಹರಿಸಬಾರದೆ?

(ಸ್ನೇಹಸೇತು : ಹಾಯ್ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more