ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇರೆ ಏನನ್ನು ಕಳೆದುಕೊಂಡರೂ ಪರವಾಗಿಲ್ಲ ನೋಡಿ

By Staff
|
Google Oneindia Kannada News

Self confidence is my assetನನ್ನ ಮತ್ತು ನನ್ನಂಥವರ ಅಸಲಿ ಬಂಡವಾಳವೇ ಧೈರ್ಯ. ಅದನ್ನು ಭಂಡ ಧೈರ್ಯ ಅನ್ನುತ್ತಿರೋ, ಮೊಂಡು ಧೈರ್ಯ ಅನ್ನುತ್ತಿರೋ ನಿಮಗೆ ಬಿಟ್ಟಿದ್ದು.

ರವಿ ಬೆಳಗೆರೆ

ಆ ಹುಡುಗಿ ಹತ್ತಿರಕ್ಕೆ ಬಂದಳು

"ನನಗೆ ಕಣ್ಣು ಕಾಣೋದಿಲ್ಲ. ನಮ್ಮ ತಾಯಿ ನಿಮ್ಮ ಜೊತೆ ಮಾತಾಡಬೇಕು ಅಂತಿದ್ದಾರೆ. ಅವರನ್ನ ಯಾವಾಗ ಕರ್ಕೋಂಡು ಬರಲಿ?" ಕೇಳಿದಳು.
ಹದಿನಾರೋ, ಹದಿನೆಂಟೋ, ಇಪ್ಪತ್ತೋ, ಇಪ್ಪತ್ತೆರಡೋ ವರ್ಷವಿರಬೇಕು ಅವಳಿಗೆ, ಇಂತಿಷ್ಟೇ ವಯಸ್ಸು ಅಂತ ಹೇಳಲಾಗದಷ್ಟು ಪೀಚಾಗಿ, ಬಲಹೀನವಾಗಿ ಇದ್ದಳು. ಸರಿಯಾಗಿ ನಡೆಯಲು ಬರುವುದಿಲ್ಲ.ನಿಚ್ಚಳವಾದ ಬೆಳಕಿಲ್ಲದಿದ್ದರೆ ಅವಳಿಗೆ ಸರಿಯಾಗಿ ಕಾಣಿಸುವುದಿಲ್ಲ. ಅದನ್ನು ಇರುಳುಗಣ್ಣು ಅನ್ನುತ್ತಾರೆ. ಇರುಳು ಕುರುಡು ಅಂತಲೂ ಅನ್ನುತ್ತಾರೆ. ಅವರಿಗೆ ಸಂಜೆಯಾದಂತೆಲ್ಲ ಕಣ್ಣು ಮಂಜಾಗುತ್ತದೆ. ಕತ್ತಲಾಯಿತೆಂದರೆ, ಪೂರ್ತಿ ಕತ್ತಲೇ, ಅವರ ಸಮಸ್ಯೆ ಕರೆಕ್ಟಾಗಿ ಏನು ಅಂತ ನಿಮಗೆ ಅರ್ಥವಾಗಬೇಕಾದರೆ, ನೀವು ಒಂದು ನಿಮಿಷ ಓದುವುದನ್ನು ನಿಲ್ಲಿಸಿ ತಲೆ ಮೇಲಕ್ಕೆತ್ತಿ, ಎದುರಿಗಿರುವ ಕಿಟಕಿಯನ್ನೋ. ಅಲ್ಮೇರವನ್ನೋ, ಕ್ಯಾಲೆಂಡರನ್ನೋ ನೋಡಿ. ನಿಮಗೆ ಅದೊಂದೇ ವಸ್ತು ಕಾಣಿಸುವುದಿಲ್ಲ. ದೃಷ್ಟಿ ಅದರ ಮೇಲೆ ನೆಟ್ಟಿರುತ್ತದಾದರೂ ಕಣ್ಣಿನ ಇಕ್ಕೆಲಗಳಿಗೆ ಬೇರೆ ಬೇರೆ ವಸ್ತುಗಳೂ ಕಾಣಿಸುತ್ತಿರುತ್ತವೆ ಅಲ್ವಾ? ಇದನ್ನು field vision ಅಂತಾರೆ. ಇರುಳುಗಣ್ಣಿನ ಸಮಸ್ಯೆಯೆಂದರೆ ಈ field vision ನಶಿಸುತ್ತಾ, ಚಿಕ್ಕದಾಗುತ್ತಾ ಹೋಗಿ ಎರಡು ಕೊಳವೆಗಳಲ್ಲಿ ಕಣ್ಣಿಟ್ಟು ನೋಡಿದಂತೆ ಕಾಣಿಸತೊಡಗುತ್ತದೆ. ಅದನ್ನು tubal vision ಅಂತಾರೆ. ಅಂದರೆ ದೃಷ್ಟಿಯ ವೈಶಾಲ್ಯ ಚಿಕ್ಕದಾಗುತ್ತ ಆಗುತ್ತ ಆಗುತ್ತ ಹೋಗಿ ಒಂದು ಹಂತದಲ್ಲಿ ಆಕೊಳವೆಗಣ್ಣೂ ಮುಚ್ಚಿ ಹೋಗಿ ಅಂಧತ್ವ ಉಂಟಾಗುತ್ತದೆ. ಭಯವಾಗುವುದೇ ಆ ಕಾರಣಕ್ಕೆ.

ಇವತ್ತಿನ ತನಕ ಈ ಸಮಸ್ಯೆಗೆ ವೈದ್ಯಕೀಯ ಪರಿಹಾರ ಸಿಕ್ಕಿಲ್ಲ. ತುಂಬ ರಿಸರ್ಚು ನಡೆಯುತ್ತಿದೆ. ಆದರೆ ಇಂತಿಷ್ಟು ವರ್ಷಗಳ ನಂತರ ನಿನಗೆ ಕಣ್ಣು ಕಾಣಿಸುವುದಿಲ್ಲ ಅಂತ ಹೇಳಿ ಬಿಟ್ಟರೆ ಗತಿ?

ಆ 'ಗತಿ' ಇದೆಯಲ್ಲ? ಅದಕ್ಕೆ ಸಿದ್ಧರಾಗಬೇಕು. ಕುಳಿತಲ್ಲಿಂದ ಏಳಬಾರದು ಅಂತ ನನಗೆ ಯಾರಾದರೂ ಅಪ್ಪಣೆ ಕೊಟ್ಟರೆ ಅವರನ್ನು ಕೊಂದೇ ಹಾಕುವಷ್ಟು ಸಿಟ್ಟು ಬರುತ್ತದೆ ನನಗೆ. ಅಥವಾ ಹಾಗಂತಾಂದುಕೊಳ್ಳುತ್ತಿದೆ. ಆದರೆ ಬಿದ್ದು ಮೊಳಕಾಲು ಮುರಿದುಕೊಂಡಿರುವುದರಿಂದ ಬೇರೆ ದಾರಿಯೇ ಇಲ್ಲ. ಕಳೆದ ಹನ್ನೆರಡು ದಿನದಿಂದ ಕೂತೇ ಇರುವ 'ಗತಿ' ಬಂದಿದೆ. ಕೂತಿದ್ದೇನೆ. ಆದರೆ ಸುಮ್ಮನೆ ಕೂತಿದ್ದೇನಾ? ನಿಮ್ಮ ಬುದ್ಧಿವಂತಿಕೆಯಿರುವುದು ಆ 'ಗತಿ'ಯನ್ನು ಎದುರಿಸುವಲ್ಲಿ. ಅದನ್ನ enjoyಮಾಡುವುದರಲ್ಲಿ, ಅದನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳುವುದರಲ್ಲಿ,ಇನ್ನು ಹತ್ತು ವರ್ಷಕ್ಕೆ ನನ್ನ ಕಣ್ಣು ಹೋಗುತ್ತದೆ ಅಂತ ಯಾರಾದರೂ ನನಗೆ ಹೇಳಿದರೆ, ಅದಕ್ಕೇನಾದರೂ ಚಿಕಿತ್ಸೆ ಇದೆಯಾ ಅಂತ ತಿಳಿದುಕೊಳ್ಳಲು ಚಡಪಡಿಸುವುದಿಲ್ಲ. ಬದಲಿಗೆ ಬ್ರೆಯಿಲ್ ಕಲಿಯುತ್ತೇನೆ. ಆಸಿಡ್ ಬಿದ್ದು ಎರಡು ಕಣ್ಣೂ ತೂತಾಗಿ ಹೋಗಿರುವ ಹಸೀನಾ ಈಗಾಗಲೇ ಅದನ್ನು ಕಲಿತಿದ್ದಾಳೆ. ಬ್ರೆಯಿಲ್ ಶೈಲಿಯನು ಅನುಕರಿಸಿ ನನಗೊಂದು ಚೆಂದನೆಯ ನವಿಲಿನ ಚಿತ್ರಮಾಡಿ ತಂದುಕೊಟ್ಟಿದ್ದಾಳೆ. ಅದನ್ನು ಎದುರಿಗೆ ಇಟ್ಟುಕೊಂಡಿದ್ದೇನೆ. ಈ ಸಲ ಜೋಯಿಡಾಕ್ಕೆ ಹೋದಾಗ ಹಾಗೆಯೇ ಅಂಕೋಲಾಕ್ಕೆ ಹೋಗಿ ಅದನ್ನು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವವಿನೂಗೆ ಕೊಟ್ಟು ಬರಬೇಕು.

ಮೊನ್ನೆ ಆ ಇರುಳುಗಣ್ಣಿನ ಹುಡುಗಿ ತನ್ನ ತಾಯಿಯನ್ನು ಕರೆತಂದಿದ್ದಳು. ಒಂದು ಕಾಲಕ್ಕೆ ಇದ್ದುದರಲ್ಲೇ ಚೆಂದಾಗಿ ಬದುಕಿದವರು. "ಈಗ ಎಲ್ಲ ಕಳಕೊಂಡು ಇಲ್ಲಿಗೆ ಬಂದು ಬಿಟ್ಟಿವ್ರೀ..." ಅಂದರು ಆಕೆ.

ತುಂಬ ನೊಂದು ಬಂದವರಿಗೆ ಧೈರ್ಯ ಹೇಳುವುದು ಅತ್ಯಂತ ಕಷ್ಟದ ಕೆಲಸ. ಒಂದು ಸಲ ಎಡವಿದವರಿಗೆ ಮತ್ತೆ ಮತ್ತೆ ಎಡುವುವ ಭಯ ಬೆಳೆದು ಬಿಡುತ್ತದೆ. ಸೋಲು ಕೂಡ ಅಂತಹುದೇ. ಈಗಿರುವುದಕ್ಕಿಂತ ಇನ್ನೂ ಹೆಚ್ಚಿನ ದುರ್ಗತಿ ಬಂದುಬಿಡುತ್ತದೇನೋ ಅಂತ ಹೆದರಿಯಾಗುತ್ತಿರುತ್ತದೆ. ಚಿಕ್ಕದೊಂದು ಕೆಲಸಮಾಡಲಿಕ್ಕೂ ಭಯ. ಇದರಲ್ಲೂ defeat ಆದರೆ? defeat ಆಗುತ್ತೇನೆಂಬ ಆತಂಕವೇ ಮನುಷ್ಯನನ್ನು ಮತ್ತೆ ಮತ್ತೆ ಸೋಲಿಸುತ್ತ ಹೋಗುತ್ತದೆ. ಅದರ ಬದಲಿಗೆ ನಿಮ್ಮ ನಿಲುವನು ಕೊಂಚ(I mean, ಅಕ್ಷರಶಃ ಕೊಂಚ)ಬದಲಿಸಿಕೊಳ್ಳಿ.

ಮೊದಲನೆಯದಾಗಿ, ನಿಮಗೆ ಈ ಮುಂಚೆ ಇರದಂತಹ ದುರ್ಗತಿ ಈಗ ಬಂದಿದೆ ಅಂತ ಒಪ್ಪಿಕೊಳ್ಳಿ. ಎಲ್ಲವನ್ನೂ ಕಳೆದುಕೊಂಡು ಬೆಂಗಳೂರಿಗೆ ಬಂದು ಬಿದ್ದಿದ್ದೀರಿ ಎಂಬುದನ್ನು ಒಪ್ಪಿಕೊಳ್ಳಿ.'ನಂಗೇನಾಗಿದೆ" ಏ....ನಾನು ತುಂಬ ಚೆನ್ನಾಗಿದ್ದೇನೆ' ಅಂತ ಮನಸ್ಸಿಗೆ ಸುಳ್ಳು ಹೇಳಿಕೊಳ್ಳಬೇಡಿ. ಮೇಲುನೋಟಕ್ಕೆ ಅದು positive thinking ಅಂತ ಅನ್ನಿಸಿದರೂ ಅದು ಕೇವಲ false hope ಕೊಡುತ್ತದೆ. ಬದಲಿಗೆ ನಿಮಗೆ ಒದಗಿರುವ 'ಗತಿ'ಯನ್ನು 'ಆಯ್ತು' ಅಂತ ಒಪ್ಪಿಕೊಳ್ಳಿ. ಆಮೇಲೆ ಕೂತುಕೊಂಡು ಏನೇನನ್ನು ಕಳೆದುಕೊಂಡಿದ್ದೀರಿ ಎಂಬುದರ ಪಟ್ಟಿ ಮಾಡಿ.

ಮುಖ್ಯವಾಗಿ ದುಡ್ಡು ಕಳೇಸುಕೊಂಡಿರುತ್ತಾರೆ. ಅದರಿಂದಾಗಿ ಸಾಲಗಳಿಗೆ ತುತ್ತಾಗಿಅನೇಕರಿಗೆ ಸುಳ್ಳು ಹೇಳಿ ಅವತ್ತಿನ ತನಕ ಚಿಕ್ಕ ಊರಿನಲ್ಲಿ ಇತರರಿಗೆ ತಮ್ಮ ಬಗ್ಗೆ ಇದ್ದ ವಿಶ್ವಾಸ ಕಳೆದುಕೊಂಡಿರುತ್ತಾರೆ. ಸ್ವಲ್ಪ ಮಟ್ಟಿಗೆ ಆರೋಗ್ಯ ಕಳೆದುಕೊಂಡಿರುತ್ತಾರೆ. ವಿಪರೀತವಾದ ಚಿಂತೆ ಮತ್ತು ಟೆನ್ಷನ್ ರಕ್ತದ ಒತ್ತಡ, ಡಯಾಬಿಟಿಎಸ್ ನಂತಹ ಸಮಸ್ಯೆಗಳನ್ನು ತಂದಿಡುತ್ತದೆ. ಆಯಿತು, health ಕಳಕೊಂಡಿದ್ದಾರೆ ಅಂತಲೇ ಇಟ್ಟುಕೊಳ್ಳೋಣ. ಪರಿಸ್ಥಿತಿಯ ಪ್ರಭಾವವೋ, ಬಲಹೀನತೆಯೋ ಮತ್ತೇನು ಸುಡುಗಾಡ್; ಕ್ಯಾರೆಕ್ಟರನ್ನೂ ಕಳೆದುಕೊಂಡಿರಬಹುದು. FIne, ಕೆಲಸ ಸಂಗತಿಗಳನ್ನು ತುಂಬ ನಿರ್ಲಿಪ್ತವಾಗಿ ನೋಡುವುದು ರೂಢಿಯಾಗಿರುವುದರಿಂದ ಅದು ಕೂಡ ನನಗೆ ಅಂಥ ಮುಖ್ಯವಾದ ಸಂಗತಿ ಅನ್ನಿಸುವುದಿಲ್ಲ. ಇಂಗ್ಲಿಷಿನಲ್ಲಿರುವ ಆ ಗಾದೆ ಮಾತನ್ನು ನೀವೂ ಕೇಳಿರುತ್ತಿರಿ. "ಹಣ ಕಳೆದುಕೊಂಡರೆ ಏನನ್ನೂಕಳೆದುಕೊಂಡಂತಾಗುವುದಿಲ್ಲ. ಆರೋಗ್ಯ ಕಳೆದುಕೊಂಡರೆ ಸ್ವಲ್ಪ ಮಟ್ಟಿಗಿದನ್ನು ಕಳೆದುಕೊಂಡಂತಾಗುತ್ತದೆ. ಆದರೆ ಕ್ಯಾರೆಕ್ಟರು ಕಳೆದುಕೊಂಡಿರೋ? ಎಲ್ಲವನ್ನೂ ಕಳೆದುಕೊಂಡಂತಾಗುತ್ತದೆ"

ಉಹುಂ, ಈ ಗಾದೆಯನ್ನು ಮಾಡಿದಾರೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಬೇಕಿತ್ತು. "ನೀವು ಧೈರ್ಯವನ್ನು ಕಳೆದುಕೊಂಡಿದ್ದೀರಾ? ಅದು ನಿಮ್ಮ total loss!"

ಧೈರ್ಯವೊಂದಿದ್ದುದೇ ಆದರೆ ಇವತ್ತಿನ ದಿನಮಾನದಲ್ಲಿ ಏನನ್ನಾದರೂ ಮತ್ತೆ ವಾಪಾಸ್ ಪಡೆಯಬಹುದು. ನನ್ನ ಮತ್ತು ನನ್ನಂಥವರ ಅಸಲಿ ಬಂಡವಾಳವೇ ಧೈರ್ಯ. ಅದನ್ನು ಭಂಡ ಧೈರ್ಯ ಅನ್ನುತ್ತಿರೋ, ಮೊಂಡು ಧೈರ್ಯ ಅನ್ನುತ್ತಿರೋ ನಿಮಗೆ ಬಿಟ್ಟಿದ್ದು. ನಾನು ಉಳಿದೆಲ್ಲವನ್ನೂ ಕಳೆದುಕೊಂಡೇನು: ಧೈರ್ಯ ಮಾತ್ರ ಕಳೆದುಕೊಳ್ಳಲಾರೆ. ಎಂಥ ಪರಿಸ್ಥಿತಿಯಾದರೂ ಸರಿಯೇ, ಅದರ ಸಮ್ಮುಖದಲ್ಲಿ ಧೈರ್ಯವೆಂಬುದು ನನ್ನ ಕಿಬ್ಬೊಟ್ಟೆಯಾಳದಿಂದ ಎದ್ದು ಬರುತ್ತದೆ. ಬೆನ್ನ ಮೂಳೆಯಾಳದಿಂದ ಎದ್ದು ನಿಲ್ಲುತ್ತದೆ. ಮೈಯೆಲ್ಲ ಪಸರಿಸಿ ನಿಂತು ತೋಳು ತೊಡೆ ಬಿಗಿ ಮಾಡುತ್ತದೆ. ಆದ್ದರಿಂದಲೇ ನಾನು ಹೀಗೆ ಬದುಕಿದ್ದೇನೆ, ಬಡಿದಾಡುತ್ತಿದ್ದೇನೆ.

ನನ್ನ ಓದುಗ ಮಿತ್ರ ಯಜ್ಞೇಶರಾವ್ ನನಗೊಂದು ಸಲಹೆ ಕೊಟ್ಟಿದ್ದಾರೆ. ತುಂಬ ಬುದ್ಧಿವಂತರಾದ, ಆರ್ಥಿಕ ಅವಶ್ಯಕತೆ ಇರುವ ಇಬ್ಬರನ್ನು adopt ಮಾಡಿಕೊಂಡು ಒಬ್ಬರನ್ನು ಇಂಜಿನೀಯರಿಂಗ್, ಮತ್ತೊಬ್ಬರನ್ನು ಮೆಡಿಕಲ್ ಓದಿಸಿ: ಐವತ್ತು ತುಂಬಿದ್ದಕ್ಕೆ ಸಾರ್ಥಕ ಅಂದಿದ್ದಾರೆ. ಈಗಾಗಲೇ ಆ ಕೆಲಸ ಮಾಡಿದ್ದೇನಾದ್ದರಿಂದ ಒಂದು ಚಿಕ್ಕ ಬದಲಾವಣೆ: ಈ ಇರುಳುಗಣ್ಣಿನ ಹುಡುಗಿ ನನಗೀಗ ಮಗಳು.
(ಸ್ನೇಹಸೇತು: ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X