ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಪುಂಸಕ ಸಂಸದರೂ, ಕಣ್ಮರೆಯಾಗಲಿರುವ ತಲೆಗಳೂ!

By ರವಿ ಬೆಳಗೆರೆ
|
Google Oneindia Kannada News

Former CM of Karnataka H.D. Kumarswamyಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾವ ಘಳಿಗೆಯಲ್ಲಿ ಅಂಥ ಮಾತಾಡಿದರೋ; ಆದರೆ ಬಂಗಾರದಂಥ ಮಾತನ್ನೇ ಆಡಿದ್ದಾರೆ. ಕರ್ನಾಟಕದ ಎಲ್ಲ ಸಂಸದರೂ ನಪುಂಸಕರು ಅಂದಿದ್ದಾರೆ. ಅವರ ತಂದೆ ಕೂಡ ಸಂಸದರ ಪೈಕಿ ಒಬ್ಬರು ಎಂಬುದು ಈ ಮನುಷ್ಯನಿಗೆ ಮರೆತು ಹೋಗಿತ್ತೇ? ಅಥವಾ ಪದೇಪದೆ ಹೀಗೆ ಮಾತನಾಡುವುದು ಕುಮಾರಸ್ವಾಮಿಗೆ ಅಭ್ಯಾಸವೇ? ಕೆಲವೇ ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರ ಹುಟ್ಟಿನ ಬಗ್ಗೆ ತೀರ ರಸ್ತೆ ಪಕ್ಕದ ಪೋಲಿಗಳೂ ಆಡಲಿಕ್ಕೆ ಹಿಂಜರಿಯುವಂತಹ ಮಾತನ್ನಾಡಿ ರಾದ್ಧಾಂತ ಮಾಡಿಕೊಂಡಿದ್ದರು. ಅದು ಯಾವ ಪರಿ ವಿಕೋಪಕ್ಕೆ ಹೋಗಿತ್ತೆಂದರೆ, ಡೀಕೇಶಿ ತಮ್ಮ ತಾಯಿಯನ್ನೇ ಸಾತನೂರಿನ ಸಭೆಗೆ ಕರೆತಂದು ಕುಮಾರಸ್ವಾಮಿಗೆ ಸವಾಲೆಸೆದಿದ್ದರು. ಈಗ ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ, ಅಪ್ಪನನ್ನು ಸೇರಿಸಿ ಸಂಸದರೆಲ್ಲರೂ ನಪುಂಸಕತ್ವದ ಆರೋಪ ಹೊರಿಸಿದ್ದಾರೆ. ನಮ್ಮ ರಾಜಕೀಯ ನಾಯಕರ ಭಾಷೆ, ಚಿಂತನೆ, ಅವರ ಸಂಸ್ಕಾರಗಳು ಕಡೆಗೆ ಯಾವ ಮಟ್ಟಕ್ಕೆ ಮುಟ್ಟಿವೆ ಎಂಬುದಕ್ಕೆ ಕುಮಾರಸ್ವಾಮಿಯ ಇಂಥ ಮಾತುಗಳಿಗಿಂತ ಬೇಕೆ ಸಾಕ್ಷ್ಯ ಬೇಕಿಲ್ಲ.

ಇಂಥ ಕುಮಾರಣ್ಣ ಮೊನ್ನೆ ರೆಸಾರ್ಟೊಂದರಲ್ಲಿ ಉತ್ತರ ಬೆಂಗಳೂರಿನಲ್ಲಿ ಜೆಡಿಎಸ್ ಪರವಾಗಿ ಸ್ಪರ್ಧಿಸಬಯಸುವ ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದಿದ್ದರಂತೆ. ಅದಕ್ಕೆ 400 ಜನ ಆಕಾಂಕ್ಷಿಗಳು ಹೋಗಿದ್ದರಂತೆ. "ನಮಗೆ ಒಂದು ರುಪಾಯಿ ಬ್ಯಾಡ ಕಣಣ್ಣ, ಟಿಕೀಟು ಕೊಡಿ ಸಾಕು, ಗೆದ್ದು ಬರ್ತೀವಿ. ಹೋದ್ರೆ ಎರಡು ಎಕರೆ ಹೋಗ್ತದೆ" ಅಂತ ಬಂದವರಲ್ಲಿ ಹೆಚ್ಚಿನವರು ಹೇಳಿದರಂತೆ. ಎಕರೆಯ ಬಗ್ಗೆ ಮಾತಾಡಿದರು ಅಂದರೆ, ಕುಮಾರಣ್ಣನ ಬಳಿಗೆ ಟಿಕೀಟು ಕೇಳಲು ಹೋದವರಲ್ಲಿ ಹೆಚ್ಚಿನವರು ಭೂಗಳ್ಳರು ಮತ್ತು ರಿಯಲ್ ಎಸ್ಟೇಟ್ ಕುಳಗಳು ಅಂತಲೇ ಆಯಿತಲ್ವ?

ನೀವು ನೋಡುತ್ತಿರಿ, ಈ ಬಾರಿಯ ವಿಧಾನಸಭಾ ಚುನಾವಣೆ ಮೂರು ಪ್ರಮುಖ ಪಕ್ಷಗಳಿಂದ ಭಯಂಕರ ಪರೋಡಿಗಳನ್ನೇ ಅಸೆಂಬ್ಲಿಗೆ ಕರೆತರಲಿದೆ. ಅದರಲ್ಲೂ ಬೆಂಗಳೂರು! ಪ್ರದೇಶಿಕ, ಸಾಮಾಜಿಕ, ಆರ್ಥಿಕ ಸಮತೋಲನವನ್ನು ಸಂಪೂರ್ಣವಾಗಿ ನಾಶಮಾಡಿ ಹಾಕಿರುವ ಈ ಕ್ಷೇತ್ರ ಮರುವಿಂಗಡಣೆ ದೊಡ್ಡ ಮಟ್ಟದ ಅನಾಹುತಗಳನ್ನು ಎಸಗಲಿದೆ. ಮಿಡತೆಗಳಂತೆ ಆರಿಸಿ ಬರುವ ಬೆಂಗಳೂರಿನ ಶಾಸಕರು ಯಾವುದೇ ಪಕ್ಷದಿಂದ ಬಂದರೂ ರಾಜಧಾನಿಯನ್ನು ಅಡ್ಡಗಲ ಸೀಳಿ ಸೈಟುಗಳನ್ನಾಗಿ ಮಾಡಿ ಮಾರಿ ಬಿಡುತ್ತಾರೆ. ನೆಲಗಳ್ಳತನಕ್ಕೆ ಒಂದು ಅಧಿಕೃತತೆ ಬರುತ್ತದೆ. ಬೆಳೆದು ನಿಲ್ಲಲಿರುವ ಮೈನಿಂಗ್ ಲಾಬಿಗೆ ಸರಿಸಮನಾಗಿ ಈ ರಿಯಲ್ ಎಸ್ಟೇಟ್ ಲಾಬಿ ರಾಜ್ಯದ ಜನತೆಯ ಪಾಲಿಗೆ ಶತ್ರು ಸದೃಶವಾಗಲಿದೆ. ಬೆಂಗಳೂರಿನ ಕ್ಷೇತ್ರಗಳ ಪೈಕಿ ಒಂದೆರಡು ಹೊಸ ಹಳೆಯ ಸೌಮ್ಯ ಮುಖಗಳು ಎದ್ದು ಬರಬಹುದು. ಉಳಿದಂತೆ, ಅದೇ ಗೋಪಾಲಯ್ಯ, ಕಬಡ್ಡಿ ಬಾಬು ತರಹದ ಸಂಸತಿಯೇ.

ರಾಜ್ಯ ಮಟ್ಟದ ಅಷ್ಟೂ ಪಕ್ಷಗಳ ನಾಯಕರ ಮುಖಗಳತ್ತ ನೋಡಿದರೆ, ಅವುಗಳಲ್ಲಿ ಮರಣ ದಂಡನೆಗೆ ಈಡಾದಂತೆ ಕಾಣುತ್ತಿರುವವರ ಸಂಖ್ಯೆಯೇ ದೊಡ್ಡದು ಅನಿಸುತ್ತದೆ. ಎಸ್ಸೆಂ ಕೃಷ್ಣರಿಂದಲೇ ಪಟ್ಟಿ ಪ್ರಾರಂಭಿಸೋಣ. ಈತ ವ್ಯಕ್ತಿಗತವಾಗಿ ಎಲ್ಲಿ ನಿಂತರೂ ಗೆಲ್ಲಬಹುದು. ಆದರೆ ಕಾಂಗ್ರೆಸ್ಸು ಅಧಿಕಾರಕ್ಕೆ ಬಾರದೆ ಹೋದರೆ, ಅವರದು ಮುಟ್ಟು ನಿಂತ ಹೆಂಗಸಿನ ಪರಿಸ್ಥಿಯೇ. ಮುಂದಿನ ಚುನಾವಣೆ ಹೊತ್ತಿಗೆ ಏನೋ ಎಂತೋ? ದೇವೇಗಡರ ಪರಿಸ್ಥಿತಿಯೂ ಭಿನ್ನವೇನಲ್ಲ. ಅವರನ್ನು ಬಲ್ಲ ಪೊಲಿಟಿಕಲ್ ಪಂಡಿತರ ಪ್ರಕಾರ ಈ ಸಲ ದೇವೇಗೌಡರು ಮತ್ತು ಅವರ ಮಕ್ಕಳು ಕಾನ್ಸನ್‌ಟ್ರೇಟ್ ಮಾಡುವುದು ಖಚಿತವಾಗಿ ಗೆಲ್ಲುವ ಬರೀ 60 ಸೀಟುಗಳ ಮೇಲಷ್ಟೇ. ಅಷ್ಟು ಸೀಟು ಕೈಲಿಟ್ಟುಕೊಂಡು ಎಂದಿನಂತೆ ಅಪ್ಪ ಮಗ ಇತರೆ ಪಕ್ಷಗಳೊಂದಿಗೆ ಆಟವಾಡುತ್ತಾರೆ. ಅಷ್ಟು ಸಂಖ್ಯೆಯ ಸೀಟುಗಳು ಬರದಿದ್ದರೆ ಮಾತ್ರ ತಂಡೆ ಮಕ್ಕಳ ಚಾಂಡಾಲ ರಾಹು ಯೋಗ ಮುಗಿದಂತೆಯೇ.

ಅಲ್ಲಿ ಎಂ.ಪಿ.ಪ್ರಕಾಶ್ ಮಹಾಭಾರತದ ಭೀಷ್ಮನಂತೆ ಧರಾಶಾಯಿಯಾಗಿ ಮಲಗಿ ಬಿಟ್ಟಿದ್ದಾರೆ. ಅವರ ಹಡಗಲಿಯನ್ನು ಮೀಸಲಾತಿ ತಿಂದಿದೆ. ಮಗನಿಗಾಗಿ ಹರಪನಹಳ್ಳಿ ಕೊಡಿ ಅಂತ ಕೇಳುತ್ತಿದ್ದಾರೆ. ಇನ್ನು ಕಣದಲ್ಲಿ ಪ್ರಕಾಶ್ ಇರುವುದಿಲ್ಲ. ಹೀಗಾಗಿ ಅಸೆಂಬ್ಲಿಯಲ್ಲೂ ಇರರು. ಹಿರಿಯೂರಿನ ಡಿ.ಮಂಜುನಾಥರಿಗೂ ಇದು ರಾಜಕೀಯವಾಗಿ ಅಂತಿಮ ಕಾಲ. ರಂಗನಾಥ್‌ರಂತೆ ಅವರೂ ಮೂಲೆ ಹಿಡಿಯಲಿದ್ದಾರೆ. ಗಣಿ ಹಗರಣದ ಗಿಣಿ ಚೆನ್ನಿಗಪ್ಪನ ಚೆಡ್ಡಿಯೇ ಉದುರಿ ಹೋಯಿತು ಎಂಬಂತೆ ಕೊರಟಗೆರೆ ಕ್ಷೇತ್ರವೇ ಖಲಾಸಾಗಿದೆ. ಇನ್ನು ಅಸೆಂಬ್ಲಿಯಲ್ಲಿ ಈ ಮಾಜಿ ದಫೇದಾರನ ಆರ್ಭಟವಿರಲಾರದು. ಹಾಗೇನೇ ಸೋಲುವ ಭೀತಿಯನ್ನು ಬೇಧಿ ಮಾತ್ರೆಯಂತೆ ನುಂಗಿರುವ ಎಚ್.ಸಿ.ಶ್ರೀಕಂಠಯ್ಯ, ಚನ್ನರಾಯಪಟ್ಟಣದಲ್ಲಿ ಮಗ ಗೆದ್ದರೆ ಸಾಕು ಅಂತ ಲಲಿತಾ ಸಹಸ್ರನಾಮ ಜಪಿಸುತ್ತಿದ್ದಾರೆ. ಮಾತಿನಮಲ್ಲ ಡಿ.ಬಿ.ಚಂದ್ರೇಗೌಡರು ಅದೇನು ಕುಡಿದಿದ್ದಾರೋ ಎಲ್ಲಿ ನಿಂತರೂ ಬೀಳುತ್ತಾರೆ. ಜಾಫರ್ ಷರೀಫ್‌ಗೆ ಮುಖ್ಯಮಂತ್ರಿಯಾಗುವ ಆಸೆ. ಆದರೆ ಆರೋಗ್ಯ, ನಿಯತ್ತು, ನಸೀಬು ಎಲ್ಲವೂ ಕೆಟ್ಟಿವೆ. ರಾಜಕೀಯದಿಂದ ನಿರ್ಗಮಿಸುವ ಕಾಲ ದೂರವಿಲ್ಲ. ಏನೇನೂ ಮಾಡದೆ ಎಲ್ಲ ಸವಲತ್ತೂ ಅನುಭವಿಸಿ, ಮೂರು ಪಕ್ಷಗಳಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಜಶೇಖರ ಮೂರ್ತಿಗೆ ಈಗಿನದು ಅಂತಿಮ ಸುತ್ತಿನ ಕದನ. ಈಗ ಸೋತರೆ, ನ ಭವಿಷ್ಯತಿ!

ಅಲ್ಲಿ ವೈಜನಾಥ್ ಪಾಟೀಲರಿಗೆ ವಯಸ್ಸೂ, ಮರೆವು ಎರಡೂ ಜಾಸ್ತಿಯಾಗಿ, ಕಾಡಿನಿಂದ ಬಿಡಿಸಿಕೊಂಡು ಬಂದಾಗಿನ ಡಾ.ರಾಜಕುಮಾರ್ ಥರಾ ಆಡುತ್ತಿದ್ದಾರೆ. ಜನರ ಪ್ರೀತಿಯೂ ಮೊದಲಿನಂತಿಲ್ಲ. ಅವರಿಗೂ ಇದು ಕೊನೆ ಪ್ರಸ್ತ. ಇನ್ನು ತುಮಕೂರಿನ ಸೊಗಡು ಶಿವಣ್ಣನವರಿಗೆ ಲೋಕಲ್ ಕೌನ್ಸಿಲರ್ ಚುನಾವಣೆಯನ್ನೇ ನಿಭಾಯಿಸುವ ತಾಕತ್ತಾಗಲಿಲ್ಲ. ಇನ್ನೆಲ್ಲಿ ಗೆದ್ದಾರು? ಮಾಜಿ ಮಂತ್ರಿ ಬಸವಣ್ಣೆಪ್ಪನ ಚಲ್ಲಣವೇ ಹರಿದುಹೋದಂತೆ, ಹೊಳೆಹೊನ್ನೂರು ಕ್ಷೇತ್ರವೇ ಮಾಯವಾಗಿದೆ. ಹೀಗಾಗಿ ಅವರ ಬೆನ್ನಿಗೆ ದಬ್ಬೆ ಕಟ್ಟಿದ್ದರೂ ಅವರು ನಿಲ್ಲಲ್ಲ. ಹಾಗೇನೇ ಮೀಸಲು ಪಾಲಾದ ಕ್ಷೇತ್ರಗಳ ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ ಮತ್ತು ಸೂರ್ಯನಾರಾಯಣ ರೆಡ್ಡಿ ಕತ್ತಲಲ್ಲಿ ಕಂದೀಲು ಹುಡುಕುತ್ತಿದ್ದಾರೆ. ಇಬ್ಬರಿಗೂ ಮುಂದಿನ ಅಸೆಂಬ್ಲಿಯ ಕದ ಮುಚ್ಚಿ ಹೋಗಬಹುದು. ಪಾಪ, ಧರಂಸಿಂಗ್‌ಗೆ ಇದೇ ಕೊನೆಯ ಮುತ್ತೈದೆತನ. ಮಗನನ್ನು ಫೀಲ್ಡಿಗೆ ಬಿಡುವ ಯತ್ನವನ್ನು ದಿವಂಗತ ರಾಜಕಪೂರ್ ಶೈಲಿಯಲ್ಲಿ ಮಾಡುತ್ತಿದ್ದಾರೆ. ಇತ್ತ ಡಿ.ಟಿ.ಜಯಕುಮಾರ್ ಅವರ ಆರೋಗ್ಯ, ಕ್ಷೇತ್ರ ಎರಡನ್ನೂ ಕಸಿದುಕೊಳ್ಳಲಾಗಿದೆ. ವಿಜಯಲಕ್ಷ್ಮಿ ಬಂಡಿಸಿದ್ದೇಗೌಡರದು ಸ್ವಂತ ಮನೆಯ ಕಡೆಗೆ ಜೈತ್ರಯಾತ್ರೆ! ಬೇಸರದ ಸಂಗತಿಯೆಂದರೆ ಸಜ್ಜನ ರಾಜಕಾರಣಿಯಾದ ಜಯಪ್ರಕಾಶ್ ಹೆಗ್ಡೆ ಅವರ ಕ್ಷೇತ್ರವೇ ಮಾಯವಾಗಿದೆ. ಇದೇ ಸ್ಥಿತಿ ಗಂಡಸಿ ಶಿವರಾಮು ಅವರದು. ಅವರ ಕ್ಷೇತ್ರವೇ ಇಲ್ಲದಂತಾಗಿದೆ. 'ಹೊಳನರಸೀಪುರದಿಂದ ನಿಲ್ತೀನಿ' ಅನ್ನುತ್ತಾರಾದರೂ, ಅವರನ್ನು ರೇವಣ್ಣ ಕೂಡಲಿಕ್ಕೆ ಬಿಡಲಾರ. ಹರಿಹರದ ನಾಗಪ್ಪ, ಹುಬ್ಬಳ್ಳಿಯ ಜಬ್ಬಾರ್ ಖಾನ್ ಹೊನ್ನಳ್ಳಿ ಇಬ್ಬರಿಗೂ ಉಬ್ಬಸ. ಕೆಲಸ ಮಾಡಿದ್ದು ಶೂನ್ಯ. ಗೆಲ್ಲುವ ಉಮ್ಮೇದಿಯೂ ಇಲ್ಲ.

ಹುಕ್ಕೇರಿಯ ಶಶಿಕಾಂತ ನಾಯಕ್ ತೋಟಗಾರಿಕಾ ಸಚಿವರಾಗಿದ್ದರು. ತೋಟ ಮತ್ತು ಹೆಸರು ಎರಡೂ ಕೆಡಿಸಿಕೊಂಡರು. ಅಕಸ್ಮಾತ್ ಗೆದ್ದರೆ ಬಿಜೆಪಿ ಅಲೆ(?)ಯಿಂದಾಗಿ ಗೆಲ್ಲಬೇಕು.

ಶಿವಮೊಗ್ಗದಲ್ಲಿ ಈಶ್ವರಪ್ಪನವರು ಬಂಗಾರಪ್ಪನ ಹೆಸರು ಕೇಳಿದರೇನೇ ತೋಳ ಅವಚಿಕೊಂಡ ಕುರಿಯಂತೆ ಪತರಗುಡುತ್ತಾರೆ. ಅಲ್ಲಿಂದ ಬಂಗಾರಪ್ಪ ಸ್ಪರ್ಧಿಸಿಬಿಟ್ಟರೆ ಈಶ್ವರಪ್ಪ ಬೋರ್ಡಿನಿಂದಲೇ ಎಗರಿಹೋಗಿ ಯಡ್ಡಿಯ ಮುಖದಲ್ಲಿ ಶೋಭೆ ಮಂದಹಾಸ! ಕೊನೆಯದಾಗಿ, ಖರ್ಗೆ ಅವರಿಗೆ ಇದು do or die ಎಂಬ ಹೋರಾಟ. ಅವರ ಗುರುಮಿಠಕಲ್ ಕ್ಷೇತ್ರ ಜನರಲ್ ಆಗಿದೆ. ಅಲ್ಲಿಂದ ಗೆದ್ದರೆ, ಕಾಂಗ್ರೆಸ್‌ಗೆ ಬಹುಮತ ಬಂದರೆ, ಅವರೇ ರಾಜ್ಯಕ್ಕೆ ಮುಂದಿನ ಅಧಿನಾಯಕ. ರಾಜ್ಯ ಕೂಡ ಒಬ್ಬ ದಲಿತ ಮುಖ್ಯಮಂತ್ರಿಯನ್ನು ಕಾಂಬ ಸೌಭಾಗ್ಯ ಪಡೆದೀತು. ಆದರೆ, ಕಾಂಗ್ರೆಸ್ಸಿಗರೇ ಅವರ ಸೋಲಿಗೆ ಬಿಜೆಪಿಯವರಿಗೆ ಸುಪಾರಿ ಕೊಡಲಿದ್ದಾರಾ? ಗೊತ್ತಿಲ್ಲ.

ಒಟ್ಟಿನಲ್ಲಿ ಈ ಬಾರಿ ಅನೇಕ ತಲೆಗಳು ಕಣ್ಮರೆಯಾಗಲಿವೆ. ಒಂದರ್ಥದಲ್ಲಿ ಒಳ್ಳೆಯದೇ ಏನೋ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X