ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಚನೆ ಮಾಡುವ ಶೈಲಿ ಈಗಿನಿಂದಲೇ ಬದಲಾಗಲಿ..

By Staff
|
Google Oneindia Kannada News


'ನಾನು ಅಂಥ ಕೆಲಸ ಮಾಡಲ್ಲ'ಅಂತ ನಿರ್ಧರಿಸುವುದರಲ್ಲಿ ನಿಜವಾದ positive ಆದ ego ಇರುತ್ತದೆ. ಅದು ತುಂಬ ಸಹಾಯವನ್ನು ಮಾಡುತ್ತದೆ. ಅಂಥ ಕೆಲಸ 'ನಾನು'ಮಾಡಬಾರದು ಅಂತ ನಿರ್ಧರಿಸಿ, ಅವಡುಗಚ್ಚಿಕೊಂಡು ಸುಮ್ಮನಾಗಿ ಬಿಡಿ. ಆಮೇಲೆ ನಿಮಗೆ ನಿಮ್ಮ ಬಗ್ಗೆಯೇ ಅದೆಂಥ ಗೌರವ ಮೂಡುತ್ತದೋ ನೋಡಿ.

  • ರವಿ ಬೆಳಗೆರೆ

A positive role for Ego 'ನೋಡಿದ್ಯಾ.. ನಾನು ಹೇಳಿದಂಗೇ ಆಯ್ತು!ನಾನು ಮೊದಲೇ ಹೇಳಿರ್ಲಿಲ್ವಾ?'ಅಂತ ನಾವೆಲ್ಲ ಒಂದಲ್ಲ ಒಂದು ಸಲ ಉದ್ಗರಿಸುತ್ತೇವೆ. ಹೆಮ್ಮೆ ಪಟ್ಟು ಮೀಸೆ ಹುರಿ ಮಾಡಿರುತ್ತೇವೆ. 'ನಾನು ಅಂದ್ಹಾಗೇ ಆಯ್ತು' ಅನ್ನೋದರ ಹಿಂದೆ ನಮ್ಮ ಅನುಭವ ಗೆದ್ದಿತು, ನಮ್ಮ ವಿವೇಕ ಗೆದ್ದಿತು, ನಮ್ಮ ಧೈರ್ಯ ಗೆದ್ದಿತು ಅನ್ನುವಂಥ ಭಾವವಿರುತ್ತದೆ.

ಜನಸಾಮಾನ್ಯರಿಗೆ ಹೀಗೆ ಉದ್ಗರಿಸಿ, ಮೀಸೆ ಹುರಿ ಮಾಡುವ ಅವಕಾಶ ತುಂಬ ಅಪರೂಪಕ್ಕೆ ಸಿಗಬಹುದೇನೋ? ಆದರೆ ಪತ್ರಕರ್ತರಿಗೆ ಮೇಲಿಂದ ಮೇಲೆ ಇಂಥ ಅವಕಾಶ ದೊರೆಯುತ್ತದೆ. ಕನ್ನಡದ ನಿವೃತ್ತ ಪತ್ರಿಕೆಯೊಂದರ ಸಂಪಾದಕರಂತೂ ತಮ್ಮ ಬರಹವನ್ನು 'ನಾನು ಕಳೆದವಾರ ಹೇಳಿದಂತೆಯೇ ಆಯಿತು!'ಅಂತಲೇ ಆರಂಭಿಸುತ್ತಿದ್ದರು. ಪ್ರತಿನಿತ್ಯದ ಆಗುಹೋಗುಗಳನ್ನು ಗಮನಿಸುವವರಿಗೆ, ಅದರ ಕುರಿತೇ ಯೋಚಿಸುವವರಿಗೆ, ವಿವರ ಕಳೆಹಾಕುವವರಿಗೆ ಸಹಜವಾಗಿಯೇ ನಾಳೆ ಹೊತ್ತಿಗೆ ಏನಾದೀತು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗಿಬಿಡುತ್ತದೆ. ಅದಕ್ಕೆ ಅಂಥ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ಕೊಂಚ ಮಾತ್ರದ ಅನುಭವ ಮತ್ತು ಕಾಮನ್ ಸೆನ್ಸ್ ಸಾಕು. ಸಾವಿರಾರು ಕ್ರೈಂ ವರದಿಗಳನ್ನು ಬರೆದವನಿಗೆ ಒಂದು ಹತ್ಯೆ ಹೀಗೆ ಆಗಿದ್ದೀತು ಅಂತ ಊಹಿಸುವುದು ಕಷ್ಟದ ಮಾತಲ್ಲ.

ಆದರೆ 'ನಾನು ಹೇಳಿದಂಗೆ ಆಯ್ತು ನೋಡಿ!'ಅಂತ ಉದ್ಗರಿಸುವವರು 'ನಾನು ಹಾಗೆ ಮಾಡಬಾರದು'ಅಂತ ಅಂದುಕೊಳ್ಳಬೇಕಾದ ಅವಶ್ಯಕತೆಯೂ ಇದೆ ಎಂಬುದನ್ನು ಮರೆತು ಬಿಡುತ್ತೇವೆ. 'ನಾನು ಹೇಳಿರ್ಲಿಲ್ವಾ? ಈ ಸಲ ನೀನು ಪಾಸಾಗಲ್ಲ ಅಂತ?'ಎಂದು ಫೇಲಾದವನೊಬ್ಬನನ್ನು ಹಂಗಿಸುವ ಮೇಷ್ಟು, ವಿದ್ಯಾರ್ಥಿನಿಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸುವ ಮುನ್ನ ಮೇಷ್ಟ್ದಾದ 'ನಾನು'ಈ ಕೆಲಸವನ್ನು ಮಾಡಬಾರದು ಅಂತ ಒಂದು ಕ್ಷಣ ಅಂದುಕೊಂಡು ಬಿಟ್ಟರೆ ಸಾಕು! ಆತನಿಂದ ಘಟಿಸಬಹುದಾದ ಅತಿ ದೊಡ್ಡ ಅಪರಾಧ ತಪ್ಪಿ ಹೋಗುತ್ತದೆ.

ಇದು ಕೇವಲ ಪತ್ರಕರ್ತರಿಗೆ, ಶಿಕ್ಷಕರಿಗೆ, ರಾಜಕಾರಣಿಗಳಿಗೆ ಸಂಬಂಧಿಸಿದ ಮಾತಲ್ಲ. ನೀವು ಯಾರೇ ಆಗಿರಿ : ನಿಮ್ಮ ವಯಸ್ಸು ಬೆಳೆಯುವುದರೊಂದಿಗೆ ಸುತ್ತಲಿನ ಸಮಾಜದ ದೃಷ್ಟಿಯಲ್ಲಿ ನಿಮ್ಮ ಗೌರವ ಮತ್ತು ಜವಾಬ್ದಾರಿಗಳೂ ಬೆಳೆಯುತ್ತಿರುತ್ತವೆ. ನಿನ್ನೆ ಹಾಗಿದ್ದವರು. ಅವತ್ತಾಗಲೇ ನೀವು ಹಾಗಲ್ಲ! ನಿಮ್ಮ ತಮ್ಮ ಬೆಳೆಯತೊಡಗಿದ್ದಾನೆ. ತಂಗಿಗೆ ಎಲ್ಲ ಅರ್ಥವಾಗುವ ವಯಸ್ಸು. ಸಿಗರೇಟು ಹಚ್ಚುವ ಮುನ್ನ, ಕ್ಲಾಸ್ ಬಂಕ್ ಮಾಡುವ ಮುನ್ನ, ಮೊದಲ ಬಿಯರ್ ಕುಡಿಯುವ ಮುನ್ನ ಒಂದು ಸಲ 'ನಾನು'ಈ ಕೆಲಸ ಮಾಡಬಾರದು ಅಂದುಕೊಂಡು ನೋಡಿ.

ಅಂಥ ಕೆಲಸವನ್ನು ಆಗಿದಾಂಗ್ಲೆ drop ಮಾಡಿ ನೋಡಿ. ನಿಮ್ಮಲ್ಲಿನ positive ego ಎಷ್ಟು ಉಬ್ಬಿ ನಲಿಯುತ್ತದೋ! ಅದರಿಂದ ಉಂಟಾಗುವ ಅಸಮಧಾನ, ಸಂತೋಷ ಕ್ಲಾಸ್ ಬಂಕ್ ಮಾಡುವುದರಿಂದ, ಸಿಗರೇಟಿನಿಂದ, ಬಿಯರು ಕುಡಿಯುವುದರಿಂದ ಖಂಡಿದ ಆಗದು. 'ಅವರೆಲ್ಲ ಸೇದ್ತಿಲ್ವಾ? ಕುಡೀತಿಲ್ವಾ? ಅದಕ್ಕೆ ಕುಡ್ದೆ!'ಅಂತ ಉತ್ತರ ಕೊಟ್ಟುಕೊಳ್ಳುವ ನಾವು ಹಾಗೆ ಸೇದುವ -ಕುಡಿಯುವ ಪ್ರಕ್ರಿಯೆಯಲ್ಲಿ ಜಾಣತನದಿಂದ 'ನಾನು 'ಎಂಬ factorನ ಬೇಕೆಂತಲೇ ಹೊರಗಿಟ್ಟು ಬಿಡುತ್ತೇವೆ. ನನ್ನ ಓರಗೆಯವರಿಗೆಲ್ಲ 'ನಾನು'ಕುಡಿಯುವುದನ್ನು ಕಲಿಸಿದೆ ಅಂತ ಯಾರೂ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ನಾಲ್ಕು ಜನ ಮೆಚ್ಚುತ್ತಾರೆ ಅಥವಾ ನಮ್ಮ ego ಉಬ್ಬಿ ನಲಿಯುತ್ತದೆ ಅಂತ ಗ್ಯಾರಂಟಿಯಾದಾಗ 'ನಾನು'ಮಾಡಿದ್ದು ಗೊತ್ತಾ ಅಂತ ಬೀಗುತ್ತೇವೆ.

ನಿಜ. ಒಮ್ಮೊಮ್ಮೆ ಯಾರ ಮೇಲೋ ತುಂಬ ಸಿಟ್ಟು ಬರುತ್ತದೆ. ಅವರು ನಮಗಿಂತ ಬಲಹೀನರು ಅಂತಲೂ ಗೊತ್ತು. ಎದ್ದು ಹೋಗಿ ಎರಡು ಒದೆ ಒದ್ದೂ ಬಿಡಬಹುದು. ಆದರೆ ಅಂಥ ಕೆಲಸ 'ನಾನು'ಮಾಡಬಾರದು ಅಂತ ನಿರ್ಧರಿಸಿ, ಅವಡುಗಚ್ಚಿಕೊಂಡು ಸುಮ್ಮನಾಗಿ ಬಿಡಿ. ಆಮೇಲೆ ನಿಮಗೆ ನಿಮ್ಮ ಬಗ್ಗೆಯೇ ಅದೆಂಥ ಗೌರವ ಮೂಡುತ್ತದೋ ನೋಡಿ. ಇದೆಲ್ಲ ದೊಡ್ಡ ಮಟ್ಟದ ತಪ್ಪು ಅಥವಾ ಅಪರಾಧಗಳಿಗೆ ಸಂಬಂಧಿಸಿದ ಮಾತೇ ಆಗಬೇಕೆಂದಿಲ್ಲ. ಇಂಜಿನೀಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬನ ಡೈರಿ ತೆಗೆದು ನೋಡಿ?

'ಅಪ್ಪ ಅಮ್ಮ ನನ್ನ ಮೇಲೆ ಇಟ್ಟು ನಂಬಿಕೆ ಉಳಿಸಿಕೊಳ್ಳಲಾಗುತ್ತಿಲ್ಲ. ನಾನು ದುಡಿದು ಅವರನ್ನು ಸಾಕಬೇಕು. ಬದಲಿಗೆ ಅವರೇ ಸಾಕುವಂತಾಗಿದೆ.. 'ಎಂಬ ಧಾಟಿಯ ಸಾಲುಗಳಿರುತ್ತವೆ. ಲೆಕ್ಕಾ ಹಾಕಿದರೆ ಆರರ ಪೈಕಿ ಎರಡು ಸೆಮಿಸ್ಟರಿನಲ್ಲಿ ಫೇಲಾಗಿರುತ್ತಾನೆ! ಕ್ಲಾಸಿಕೆ ಬಂಕ್ ಹೊಡೆಯುವ ಕ್ಷಣದಿಂದ ಹಿಡಿದು, ಪುಸ್ತಕದ ಕಡೆಗೆ ತಿರುಗಿಯೇ ನೋಡದೆ ತಿಂಗಳುಗಟ್ಟಲೆ ಓತ್ಲಾ ಹೊಡೆಯುವುದರ ತನಕ, ಪ್ರತಿ ಹಂತದಲ್ಲೂ 'ಛೆ, ನಾನು ಆ ಕೆಲಸ ಮಾಡಬಾರದು'ಅಂದುಕೊಂಡು ಬಿಟ್ಟಿದಿದ್ದರೆ, ಈ ಡೈರಿಯಲ್ಲಿ ಇಂಥ ಸಾಲು ಹುಟ್ಟುವ ಅವಕಾಶವೇ ಇರುತ್ತಿರಲಿಲ್ಲ. ಅಲ್ವೇ?

ಹಾದರವಾದರೂ, ಲಂಚಕೋರತನವಾದರೂ, ದೌರ್ಜನ್ಯವಾದರೂ, ವಂಚನೆಯಾದರೂ ಎಲ್ಲವೂ ಕಂಟ್ರೋಲಿಗೆ ಬರುವುದು 'ನಾನು'ಆ ಕೆಲಸ ಮಾಡಬಾರದು ಅಂದುಕೊಳ್ಳುವುದರಿಂದ ಮಾತ್ರ.

ಕೆಲವರಿರುತ್ತಾರೆ ;

ನ್ಯಾಯ ಅನ್ಯಾಯಗಳ ವಿಷಯ ಬಂದಾಗ 'ಏ, ಆ ಮನುಷ್ಯ ಅನ್ಯಾಯ ಮಾಡಲ್ಲ ಕಣಯ್ಯಾ'ಅಂತ ಎಲ್ಲರಿಂದಲೂ ಅನ್ನಿಸಿಕೊಂಡಿರುತ್ತಾರೆ. 'ಛೇ ಛೆ, ಅವರು ದುಡ್ಡು-ಕಾಸು ಮುಟ್ಟೋರಲ್ಲ'ಅನ್ನಿಸಿಕೊಂಡಿರುತ್ತಾರೆ. 'ನನ್ನ ಮಗಳು ಅಂಥವಳಲ್ಲ'ಅನ್ನಿಸಿಕೊಂಡ ಹುಡುಗಿಯರಿರುತ್ತಾರೆ. ಅವರ್ಯಾರು ಈ ಭೂಮಿಯ ಮೇಲೆ ವಿಶೇಷವಾಗಿ ಸೃಷ್ಟಿಯಾದ special people ಅಲ್ಲ. ಶುದ್ಧ ಹಸ್ತದ ಅಧಿಕಾರಿ, ಪ್ರಾಮಾಣಿಕ ಪತ್ರಕರ್ತ, ಮನೆಗೆಲಸ ಮಾಡೇನಾದರೂ ಸರಿ ; ಹಾದರ ಮಾಡಲಾರೆ ಅಂತ ತೀರ್ಮಾನಿಸಿದ ಬಡ ಗೃಹಿಣಿ ಇವರೆಲ್ಲರೂ ನಮ್ಮಂಥವರೇ, ನಿಮ್ಮಂಥವರೇ. ಅವರಲ್ಲಿರುವ ಒಂದೇ ಒಂದು ವಿಶೇಷ ಗುಣವೆಂದರೆ 'ನಾನು 'ಆ ಕೆಲಸ ಮಾಡಬಾರದು ಅಂತ ಬದುಕಿನ ಪ್ರತಿ ಹಂತದಲ್ಲೂ ಅಂದುಕೊಳ್ಳುವುದು.

'ಇವತ್ತಿನ ಸಮಾಜವೇ ಹಾಗೆ, ಎಲ್ಲ ನಡೆಯುತ್ತೆ ಬಿಡಿ, ತಪ್ಪು ಮಾಡಿದೋನು ನಾನು ಒಬ್ಬನೇನಾ, ನ್ಯಾಯಾ-ನೀತಿ ಅಂತ ಹೋದರೆ ಉಪಾಸವೇ ಗತಿ, ಅವರೆಲ್ಲ ಮಾಡ್ತಿರುವಾಗ ನಾನೊಬ್ಬ ಪ್ರಾಮಾಣಿಕನಾಗಿ ಉಳಿದರೆ ಏನುಪಯೋಗ, ನಾನೇನು ಯಾರು ಮಾಡದಿರೋ ತಪ್ಪನ್ನು ಮಾಡಿದೀನಾ?'ಎಂಬಂತಹ ಸಮರ್ಥನೆಗಳು ಆ ಕ್ಷಣಕ್ಕೆ ಮುದ ನೀಡಬಹುದು : ಅಷ್ಟೆ. ಇಂಥ ಸಮರ್ಥನೆಗಳಲ್ಲಿ 'ನಾನು'ಎಂಬುದಿರುವುದೇ ಇಲ್ಲ. 'ಅವರ್ಯಾರೋ 'ಮಾಡಿದರಾದ್ದರಿಂದ ನಾನೂ ಮಾಡಿದೆ ಎಂಬ ಗೊಣಗು, ಒಂದು excuse ಅಥವಾ ಒಂದು ಅಪಾಲಜಿ ಇರುತ್ತದೆ.

'ನಾನು ಅಂಥ ಕೆಲಸ ಮಾಡಲ್ಲ'ಅಂತ ನಿರ್ಧರಿಸುವುದರಲ್ಲಿ ನಿಜವಾದ positive ಆದ ego ಇರುತ್ತದೆ. ಅದು ತುಂಬ ಸಹಾಯವನ್ನು ಮಾಡುತ್ತದೆ. ಮೊದಮೊದಲಿಗೆ 'ನಾನು'ಲಂಚ ತಗೊಳಲ್ಲ ಅಂದುಕೊಂಡು ಆನಂದ ಪಡುತ್ತಿರುತ್ತೇವೆ. ಕ್ಷಮೇಣ 'ಅವನು ಹಂಗೆಲ್ಲ ದುಡ್ಡು ಮುಟ್ಟಲ್ಲ ಬಿಡಿ'ಎಂಬ ಪ್ರಶಂಸೆ ಕಿವಿಗೆ ಬೀಳತೊಡಗುತ್ತದೆ. ಕಡೆಗೊಂದು ದಿನ, 'ನಿಜವಾದ ಪ್ರಾಮಾಣಿಕ ಕಣಯ್ಯಾ!'ಎಂಬ ನಮ್ಮ ಬಗೆಗಿನ ಮಾತು ನಮ್ಮ ಮಕ್ಕಳ ಕಿವಿಗೆ ಬೀಳ ತೊಡಗುತ್ತದೆ. ಬದುಕು ಸಾರ್ಥಕ ಅನ್ನಿಸುವುದು ಆವಾಗಲೇ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X