ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೋಟ ಮಾಡಿದ ನೀವೇ ಬೇಲಿ ಸುತ್ತುವುದನ್ನು ಮರೆತರೆ ಹೇಗೆ?

By Staff
|
Google Oneindia Kannada News


ಬೇಲಿ ಹಾಕೋದು ಅಂದರೆ, ಮಗ ಎಲ್ಲಿಗೆ ಹೋಗ್ತಾನೆ?ಯಾರ ಜೊತೆ ಸೇರುತ್ತಾನೆ? ರಾತ್ರಿ ತಡವಾಗಿ ಬರ್ತಾನಾ? ಬಂದಾಗ ಬಾಯಲ್ಲಿ ಸಿಗರೇಟು ವಾಸನೆ, ಬಿಯರ್‌ ವಾಸನೆ ಬರುತ್ತಾ ಅಂತ ನೋಡುವುದಷ್ಟೆ ಅಲ್ಲ. ಅದನ್ನೆಲ್ಲ ಇವತ್ತಿನ ದಿನಮಾನದಲ್ಲಿ ಬೆಳೆಯುವ ಮಕ್ಕಳಿರುವ ಮನೆಗಳಲ್ಲಿ ಮಾಡಲೇಬೇಕು. ಅದರ ಜೊತೆಗೆ, ಮಗನೊಟ್ಟಿಗೆ ತಂದೆ ತಾಯಿಗಳೂ ಒಂದೊಂದೇ ಕ್ಲಾಸು ಪಾಸಾಗುತ್ತ ಬರಬೇಕು!

ನೀವೇನೂ ತೀರ ಅಕ್ಷರ ಬಾರದ ಅಮಾಯಕರಲ್ಲವಲ್ಲ? ಒಂದನೇ ಕ್ಲಾಸಿನಲ್ಲಿ ಮಗು ಅಕ್ಷರ ತಿದ್ದುತ್ತಿತ್ತು. ಅದು ನಿಮಗೆ ಅರ್ಥವಾಗುತ್ತಿತ್ತು. ಚೆನ್ನಾಗಿ ತಿದ್ದಲಿ ಅಂತು ಟ್ಯೂಷನ್ನಿಗೆ ಕಳಿಸಿದಿರಿ. ಆರನೇ ಕ್ಲಾಸಿನ ತನಕ ಗಟ್ಟಿಯಾಗಿ ಓದುತ್ತಾ ಕುಳಿತಾಗ, ಏನು ಓದುತ್ತಿದೆಯೆಂಬುದು ನಿಮಗೆ ಅರ್ಥವಾಗುತ್ತಿತ್ತು. ಆಗ ನೀವೇ ಜೊತೆಗೆ ಕೂತು ಸುಮ್ಮನೆ ಕೇಳಿಸಿಕೊಂಡಿದ್ದಿದ್ದರೂ ಸಾಕಿತ್ತು; ಪಿಯೂಸಿಗೆ ಬಂದ ಮಗ ಯಾಕೋ ಮೊದಲಿನ ಶ್ರದ್ಧೆಯಿಂದ ಓದುತ್ತಿಲ್ಲ ಅಂತ ಅರ್ಥವಾಗಿ ಬಿಡುತ್ತಿತ್ತು.

ನೀವು ಮಾಡಿದ ತಪ್ಪೆಂದರೆ, ಓದಲಿಕ್ಕೆ ಟ್ಯೂಷನ್ನಿಗೆ ಕಳಿಸಿದಿರಿ. ಓದಲು ಕೂಡುತ್ತಾನೋ ಇಲ್ಲವೋ ಅಂತ ನೋಡಲು ಹೆಂಡತಿಗೆ ಹೇಳಿದಿರಿ. ನೋಡುನೋಡುತ್ತ ಮಗ ಪಿಯುಸಿಗೆ ಬಂದ. ನೀವು ಆರನೇ ಕ್ಲಾಸಿನಲ್ಲೇ ಉಳಿದು ಹೋದಿರಿ. ಬೇಲಿ ಹಾಕೋದನ್ನ ಮರೆಯುವುದು ಅಂದರೆ ಇದೇ.

ಇದು ಕೇವಲ ಅರೆಸಾಕ್ಷರರ ಅಥವಾ ಕಡಿಮೆ ಓದಿದವರ ಮನೆಗಳ ಸಮಸ್ಯೆಯಲ್ಲ. ತುಂಬ ಓದಿಕೊಂಡ ಪೋಷಕರ ಮನೆಗಳಲ್ಲೂ ಇದೇ ಸಮಸ್ಯೆಯಿದೆ. ಕಾಲೇಜಿಗೆ ಫೀ ಕಟ್ಟಿದೆ. ಅವರಿವರ ಮರ್ಜಿ ಹಿಡಿದು ಅತ್ಯುತ್ತಮ ಕೋರ್ಸು ಕೊಡಿಸಿದೆ. ಪ್ರತ್ಯೇಕ ರೂಮು ಕೊಟ್ಟೆ. ಕಂಪ್ಯೂಟರ್‌ ಕೊಡಿಸಿದೆ, ಟ್ಯೂಷನ್ನಿಗೆ ಕಳಿಸಿದೆ-fine. ಇವೆಲ್ಲವೂ ಮಾಡಿ ತೋಟ ಮಾಡಿದೆನೆಂಬ ತೃಪ್ತಿ ಅನುಭವಿಸಿದಿರಿ. ಅದರೆ ಬೇಲಿ?

ನಮ್ಮ ಮಗ ಏನನ್ನು ಓದುತ್ತಿದ್ದಾನೆ, ಹೇಗೆ ಓದುತ್ತಿದ್ದಾನೆ ಅಂತ ವಿಚಾರಿಸಿದರೆ, ತಿಳಿದುಕೊಂಡರೆ ಸಾಲದು. ಜೊತೆಗೆ ನಾವೂ ಓದಬೇಕು! ನನ್ನ ಮನೆಯಾಕೆ ತನಗೆ ಸಂಬಂಧವೇ ಇಲ್ಲದ ಬಿ.ಬಿ.ಎಂ., ಕೋರ್ಸಿನ ಐದು ವರ್ಷದ ಕ್ವೆಶ್ಚ ನ್‌ ಪೇಪರುಗಳನ್ನಿಟ್ಟುಕೊಂಡು ತಾನೊಂದು ಪ್ರಶ್ನೆ ಪತ್ರಿಕೆ set ಮಾಡುತ್ತಿರುತ್ತಾಳೆ.

‘ನಿನಗೇನು ತಿಳಿಯುತ್ತೆ ಆ ಸಬ್ಜೆಕ್ಟು ?’ ಅಂತ ಕೇಳಿದರೆ,

‘ಪೂರ್ತಿಯಾಗಿ ತಿಳಿಯುತ್ತೋ ಇಲ್ವೋ ಆದರೆ ಒಟ್ಟಾರೆಯಾಗಿ ಮಗ ಏನನ್ನು, ಹೇಗೆ ಓದುತ್ತಿದ್ದಾನೆ ಅಂತ ತಿಳಿಯುತ್ತೆ; ಅವನಿಗೆ ಇದೇನೋ ಅಮ್ಮನಿಗೆ ಅರ್ಥವಾಗುತ್ತಿರುವಂತಿದೆ ಅಂತ ತಿಳಿಯುತ್ತೆ. ಅಷ್ಟಾದರೆ ಸಾಕು’ ಅನ್ನುತ್ತಾಳೆ. ರಾತ್ರಿ ಓದಲಿಕ್ಕೆಂದು ಮಗನ ಗೆಳೆಯರು ಮನೆಗೆ ಬರುತ್ತಾರೆ. ಅವನಿಗೆ ಪ್ರತ್ಯೇಕ ಕೋಣೆಯಿದೆ. ಆದರೆ ಇವಳೊಂದು ಕಪ್‌ ಕಾಫಿ ಮಾಡಿಕೊಂಡು, ಕೈಲೊಂದು ಪುಸ್ತಕ ಹಿಡಿದುಕೊಂಡು ಆ ಹುಡುಗರ ಮಧ್ಯೆ ಕುಳಿತಿರುತ್ತಾಳೆ, ಕಂಪ್ಯೂಟರಿನ ಮುಂದೆ ಕುಳಿತು ಅವನೇನೋ ಮಾಡುತ್ತಿದ್ದರೆ, ಇವಳು ಬಡಕ್ಕನೆ ಹೋಗಿ ಬೆನ್ನ ಹಿಂದೆ ನಿಂತಿರುತ್ತಾಳೆ. ಹಾಗಂತ ಮಗನನ್ನು ಅನುಮಾನಿಸುತ್ತಾಳೆ ಅಂತಲ್ಲ. ಮಗನಿಗೆ unexplained privacyಯನ್ನು ಅನುಭವಿಸಲು ಅವಳು ಬಿಡುವುದಿಲ್ಲ. ಬೇಲಿ ಸುತ್ತುವುದೆಂದರೆ ಅದೇ!

ಕಡೇ ಪಕ್ಷ ಪಿಯೂ ಮುಗಿಯುವ ತನಕ, ಅವರ ಜವಾಬ್ದಾರಿ ಅವರಿಗೆ ಬರುವ ತನಕ ಇದನ್ನು ಮಾಡಲೇಬೇಕು. ಅವರೊಂದಿಗೆ ನಾವೂ ಕ್ಲಾಸು-ಕ್ಲಾಸು ಪಾಸಾಗಬೇಕು. ಸ್ವಲ್ಪ ಮಟ್ಟಿಗೆ ನಾನು ನನ್ನ ಹಿರಿಮಗಳನ್ನು ಹಾಗೆ ಓದಿಸಿದೆ. ತೀರ ಒಂದೇ ಸಲಕ್ಕೆ ಮಕ್ಕಳೆದುರು ಕಾವಲು ಕುಳಿತು ಬಿಟ್ಟರೆ ಅವರು ಸಿಟ್ಟು ಮಾಡಿಕೊಳ್ಳುತ್ತಾರೆ. ‘ಅನುಮಾನಿಸುತ್ತೀರಾ?’ ಎಂದು ಹಾರಾಡುತ್ತಾರೆ. ಚಿಕ್ಕ ಮಗುವಾಗಿರುವಾಗ ನೀವು ಮಗುವನ್ನು ಮಡಿಲಲ್ಲಿ ಕೂಡಿಸಿಕೊಂದು ಪುಸ್ತಕ ತೋರಿಸುತ್ತ, ಕಥೆ ಓದುತ್ತ, ಕಥೆ ಹೇಳಿದಿರಲ್ಲ? ಅದನ್ನೇ ಮುಂದುವರೆಸಿಕೊಂಡು ಬನ್ನಿ. ಅವರು ಓದುವುದು ನಿಮಗೆ ಪೂರ್ತಿಯಾಗಿ ತಿಳಿಯದಿದ್ದರೂ, ಆ ಓದು ನಿಮ್ಮ ಕಣ್ಣಿಗೆ ಕಾಣುತ್ತಿರಲಿ. ಕಿವಿಗೆ ಬೀಳುತ್ತಿರಲಿ. ಆಮೇಲೆ ಅವರು ಪಿಎಚ್‌.ಡಿ., ಪ್ರಬಂಧ ಬರೆಯುವಾಗ ಪಕ್ಕದಲ್ಲಿ ಕುಳಿತರೂ ಅವರು ಸಿಟ್ಟಾಗುವುದಿಲ್ಲ.

‘ಇಷ್ಟೆ ಲ್ಲ ಮಾಡಲಿಕ್ಕೆ ಯಾರಿಗೆ ಟೈಮಿರುತ್ತೆ?’ ಅಂತ ಕೇಳುವವರೂ ಇದ್ದಾರೆ.

ಎಷ್ಟು ಟೈಮೋ, ಅಷ್ಟು ಬೇಲಿ. ಏಷ್ಟು ಬೇಲಿಯೋ ಅಷ್ಟು ಭದ್ರ. ತೋಟ ಮಾಡಿದವನಿಗೆ ಬೇಲಿ ಸುತ್ತುವ ವ್ಯವಧಾನವಿರದಿದ್ದರೆ ಹೇಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X