ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗಷ್ಟೇ ನೀವೊಂದು ಕೆಲಸ ಮಾಡಿ ಮುಗಿಸಿದ್ದೀರಾದರೆ :ನಿಮಗೊಂದು ಪ್ರಶ್ನೆ!

By Staff
|
Google Oneindia Kannada News


ಯಾವ ಗೆಲುವೇ ಆದರೂ, ಅದು ತಾತ್ಕಾಲಿಕ. ಇವತ್ತಿನ ಸಂಭ್ರಮ ಇನ್ನು ಕೆಲವೇ ದಿನಗಳಿಗೆ ಇರುವುದಿಲ್ಲ.ಮುಂದೇನು?ಅಂತ ಯೋಚಿಸದಿದ್ದರೆ ನೀವು ಒಂದೇ ಒಂದು ಗೆಲುವಿಗೆ ಸೀಮಿತರಾಗುತ್ತೀರಿ. ಅಲ್ಪ ತೃಪ್ತರಾಗಬೇಕಾಗುತ್ತದೆ. ಸಾಧನೆ ಮೊಟಕಾಗುತ್ತದೆ!



Now, think what next!ಮೊನ್ನೆ ಹಂಸಲೇಖಾ ಬಂಗಾರದಂಥ ಮಾತು ಹೇಳಿದರು. ಅವರು ಮೊಟ್ಟ ಮೊದಲಬಾರಿಗೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರಂತೆ. ಮದರಾಸಿನ ಸ್ಟುಡಿಯೋದಲ್ಲಿ ರೆಕಾರ್ಡಿಂಗು. ಒಂದುನೂರ ಐವತ್ತು ಜನ ವಾದ್ಯಗಾರರನ್ನಿಟ್ಟುಕೊಂಡು ದೊಡ್ಡ ಸಾಹಸ ಮಾಡುತ್ತಿದ್ದ ಘಳಿಗೆ. ರೆಕಾರ್ಡಿಂಗ್ ನಡೆಸುತ್ತಿದ್ದಷ್ಟು ಹೊತ್ತೂ ಒಬ್ಬ ಸೌಂಡ್ ಇಂಜಿನೀಯರ್ ಅಲ್ಲೇ ನಿಂತು ಎಲ್ಲವನ್ನೂ ನೋಡಿ, ಕೇಳಿಸಿಕೊಂಡು ಹ್ಯಾಗಾಯ್ತು?ಎಂಬಂತೆ ತನ್ನತ್ತ ನೋಡಿದ ಹಂಸಲೇಖಾ ಅವರಿಗೆ, ನೀವು ಸಿಗರೇಟು ಸೇದುತ್ತೀರಾ?ಅಂತ ಕೇಳಿದರಂತೆ.

ಸೇದ್ತೇನೆಅಂದಿದ್ದಕ್ಕೆ ಹಾಗಾದರೆ ಹೊರಗಡೆ ಹೋಗಿ ಒಂದು ಸಿಗರೇಟು ಸೇದಿ ನಿರಾಳಗೊಂಡು ವಾಪಸು ಬನ್ನಿಅಂದರಂತೆ. ಸಿಗರೇಟೆಳೆದು ನಿಜಕ್ಕೂ ನಿರಾಳಗೊಂಡು ಹಿಂತಿರುಗಿದ ಹಂಸ್ ಗೆ ಆತ ಹೇಳಿದ್ದು, Now, think what next!

ಮೊನ್ನೆ ಮೀರಾ ಮಾಧವ ರಾಘವಸಿನಿಮಾದ ಆಡಿಯೋ ಸಿ.ಡಿ. ಬಿಡುಗಡೆ ಮಾಡುತ್ತಾ ಮಿತ್ರರಾದ ಟಿ.ಎನ್.ಸೀತಾರಾಂ ಅವರಿಗೆ ಹಂಸಲೇಖಾ ಹೇಳಿದ್ದೂ ಅದನ್ನೇ. ಮುಂದೇನು? ಯೋಚನೆ ಮಾಡಿ.

ನಾವು ಆ ಕೆಲಸ ಮಾಡುವುದೇ ಇಲ್ಲ. ಹಳೆಯ ಸಂಭ್ರಮಗಳಲ್ಲೇ ತುಂಬ ದಿನ ಮುಂದುವರೆಯುತ್ತೇವೆ. ಒಂದು ಗೆಲುವು, ಒಂದು ಸಾಧನೆ ನಮ್ಮನ್ನು ತುಂಬ ದಿನ ಖುಷಿಯಿಂದ ಇಟ್ಟುಬಿಡುತ್ತದೆ. ಮುಂದೇನು ಮಾಡಬೇಕು ಅಂತ ಯೋಚಿಸಲಿಕ್ಕೂ ಬಿಡದಂಥ ಗೆಲುವಿನ ಅಮಲು ಅದು. ಗೆಲುವಿನ ಅಮಲು ತಂದಿಡುವ ವಿಕಾರಗಳ ಪೈಕಿ ಈ ಮೈಮರೆವೂ ಒಂದು.

ಗೆಲುವು ನಮ್ಮಲ್ಲೊಂದು ಕ್ರೌರ್ಯವನ್ನು ಸ್ಥಾಪಿಸಬಲ್ಲದು. ಕೊಂಚ ಉಡಾಫೆ ಮೈಗೂಡಿಸಿಕೊಳ್ಳಬಹುದು. ಇದ್ದಕ್ಕಿದ್ದಂತೆ ಉಳಿದವರಿಗೆ ಅಡ್ವೈಸು ಮಾಡುವ ಪ್ರವಾದಿ ಗೆಟಪ್ಪು ಬಂದು ಬಿಡಬಹುದು. ಅತಿಯಾದಕಾನ್ಫಿಡೆನ್ಸ್ ಮೈಗೂಡಬಹುದು. ಉಳಿದವರನ್ನೆಲ್ಲ ಕಸ ಎಂಬಂತೆ ಕಾಣುವ ಹಾಗೆ ಮಾಡಬಹುದು. ಇವೆಲ್ಲವನ್ನೂ ಮೈಗೂಡಿಸಿಕೊಂಡರೆ ಆಗಬಹುದಾದ ಅಪಾಯವಿದೆಯಲ್ಲ? ಅದಕ್ಕಿಂತ ದೊಡ್ಡ ಅಪಾಯವೆಂದರೆ, ಗೆಲುವಿನ ಮೈಮರೆವು.

ಯಾವ ಗೆಲುವೇ ಆದರೂ, ಅದು ತಾತ್ಕಾಲಿಕ. ಇವತ್ತಿನ ಸಂಭ್ರಮ ಇನ್ನು ಕೆಲವೇ ದಿನಗಳಿಗೆ ಇರುವುದಿಲ್ಲ. ಕಟ್ಟಿಸಿದ ಮನೆಯನ್ನು ಎಷ್ಟು ದಿನಾ ಅಂತ ಗೆಳೆಯರಿಗೆ ಕರೆಕರೆದು ತೋರಿಸುತ್ತೀರಿ? ರ್ಯಾಂಕ್ ಬಂದದ್ದಕ್ಕೆ ಇನ್ನಷ್ಟು ದಿನ ಬೀಗುತ್ತೀರಿ? ಯಾವ ಸಂತೋಷವೂ ಶಾಶ್ವತವಲ್ಲ. ಕ್ರಮೇಣ ಎಲ್ಲವೂ ರೊಟೀನಿಗೆ ಬೀಳುತ್ತದೆ.

ಮುಂದೇನು?ಅಂತ ಯೋಚಿಸದಿದ್ದರೆ ನೀವು ಒಂದೇ ಒಂದು ಗೆಲುವಿಗೆ ಸೀಮಿತರಾಗುತ್ತೀರಿ. ಅಲ್ಪ ತೃಪ್ತರಾಗಬೇಕಾಗುತ್ತದೆ. ಅಥವಾ ಇಷ್ಟು ಸಾಕಪ್ಪಎಂಬ ಅನುಕೂಲ ಸಿಂಧು ವೇದಾಂತ.

ಒಂದಾದ ಮೇಲೊಂದರಂತೆ ಕದನ ಗೆದ್ದು ಗೆಲುವಿನ ಗುಡ್ಡೆ ಹಾಕಿಕೊಳ್ಳಲು ಬಯಸುವ ಮನುಷ್ಯ What next?ಅಂತ ಯೋಚಿಸುತ್ತಲೇ ಇರುತ್ತಾನೆ. ಅದು ಮಾತ್ರ ನಮ್ಮನ್ನು ಚಲನಶೀಲವಾಗಿಡಬಲ್ಲದು.

ಅನೇಕ ಕಾದಂಬರಿಕಾರರು ತಮ್ಮ ಕೃತಿ ಪ್ರಿಂಟಾಗಿ ಬರುವುದಕ್ಕೆ ಮುಂಚೆಯೇ ಮತ್ತೊಂದು ಕೃತಿಯ ಚೌಕಟ್ಟು ಕಟ್ಟಿಕೊಳ್ಳತೊಡಗಿರುತ್ತಾರೆ. ಸಿನಿಮಾ ನಿರ್ದೇಶಕರು, ಪತ್ರಕರ್ತರು ಕೂಡ. ಪತ್ರಿಕೋದ್ಯಮದಲ್ಲಂತೂ ಎಲ್ಲವೂ ಕ್ಷಣಿಕ. ಇವತ್ತು ಮಹಾನ್ ಸ್ಫೋಟಕ ವರದಿ ಬರೆದವನನ್ನು ನಾಳೆಗಾಗಲೇ ಓದುಗರು ಮರೆತಿರುತ್ತಾರೆ. ವರದಿಯೊಂದಿಗೆ ಅವನ ಬೈಲೈನ್ (ಹೆಸರು)ಬಂತಾ? ಅವತ್ತಷ್ಟೇ ಅವನು ಜೀವಂತ. ಯು ಆರ್ ರಿಮೆಂಬರ್ಡ್ ಬೈ ಯುವರ್ ಲಾಸ್ಟ್ ಬೈ ಲೈನ್ಎಂಬಂದು ಪತ್ರಿಕೋದ್ಯಮದ ಅತಿ ದೊಡ್ಡ ಎಚ್ಚರಿಕೆ.

ಹಾಗಂತ, ಕೇವಲ ಮುಂದೇನು ಅಂತ ಮಾತ್ರ ಯೋಚಿಸಿದರೆ ಸಾಲದು.

ಒಂದು ಕೋರ್ಸಿಗೆ ಸೇರಿಕೊಳ್ಳುವ ಹುಡುಗ ಹತ್ತು ವರ್ಷಗಳ ನಂತರವೂ ಈ ಕೋರ್ಸ್ ನನಗೆ ಉಪಯೋಗಕ್ಕೆ ಬರುಬಲ್ಲುದಾ ಅಂತ ಯೋಚಿಸಬೇಕು. ಇವತ್ತಿನದಷ್ಟೆ ಯೋಚಿಸಿದರೆ, ಅದು ಬೀದಿ ಬದಿಯಲ್ಲಿ ಬಟ್ಟೆಯ ಡೇರೆ ಹಾಕಿ ಹರಿಯಾಣ ಹ್ಯಾಂಡ್ ಲೂಮ್ ಮಾರಾಟ ಮಳಿಗೆ ತೆರೆದಂತೆ. ಎರಡು ವಾರದ ನಂತರ ಅದು ಟೆಂಟು ಬಿಚ್ಚಿಕೊಂಡು ಹೊರಡಬೇಕು. ಆದರೆ ಶಾಶ್ವತತೆ ಬಯಸುವವನು ಏನನ್ನೇ ಮಾಡಹೊರಟರೂ ಹತ್ತು ವರ್ಷದ ನಂತರ ಇದರ ಸ್ವರೂಪ, ಸ್ಥಿತಿಗತಿ ಹೇಗಿರಬಹುದು ಅಂತ ಮುಂಚಿತವಾಗಿ ಆಲೋಚಿಸುತ್ತಾನೆ. ಅದಕ್ಕೆ ಅನುಗುಣವಾಗಿ ಪ್ಲಾನ್ ಮಾಡುತ್ತಾನೆ. ಹತ್ತು ವರ್ಷಗಳ ನಂತರ ನಾವು ಮಾಡಿದ ಕೆಲಸ ಅಥವಾ ಸಾಧನೆಯ ವಿಸ್ತಾರ ಮತ್ತು ಎತ್ತರ ದೊಡ್ಡದಾಗದಿದ್ದರೆ ಏನನ್ನಾದರೂ ಯಾಕೆ ಮಾಡಬೇಕು?

ನೀನು ದುಡ್ಡಿನ ಆಸೆಗೆ ಸಿನಿಮಾಗಳಲ್ಲಿ ಮಾಡ್ತಿದೀಯಅಂತ ಗೆಳೆಯನೊಬ್ಬ ನನ್ನೊಂದಿಗೆ ಮೊನ್ನೆ ಜಗಳವಾಡುತ್ತಿದ್ದ. ಆ ಮಾತು ನಿಜ. ದುಡ್ಡು ಅಥವಾ ಆತ್ಮತೃಪ್ತಿ ಸಿಕ್ಕದ ಕೆಲಸಗಳನ್ನು ನಾನು ಮಾಡುವುದಿಲ್ಲ.

ಇವತ್ತು ಸಿನಿಮಾದಲ್ಲಿ ಪಾತ್ರ ಮಾಡಲು ಒಪ್ಪಿಕೊಂಡೆನೆಂದರೆ, ಅದು ಮೋಜಿಗೆ ಒಪ್ಪಿಕೊಂಡಂತಹುದಲ್ಲ. ಹತ್ತು ಹನ್ನೆರಡು ದಿನ ಒಬ್ಬ ನಿರ್ದೇಶಕನೊಂದಿಗೆ, ಒಂದು ಸಿನಿಮಾ ಯೂನಿಟ್ ನೊಂದಿಗೆ ಇರುವಂತಹ ಅವಕಾಶ ನನಗೆ ಯಾವತ್ತೂ ಸಿಗುವುದಿಲ್ಲ. ಪಾತ್ರ ಅಂತ ಮಾಡಿದರೆ ಸಿನಿಮಾ ಅರ್ಥವಾಗುತ್ತದೆ, ತಂತ್ರ ಅರ್ಥವಾಗುತ್ತದೆ. ಅನುಭವವಾಗುತ್ತದೆ. ನಾಳೆ ಯಾವತ್ತಾದರೂ ಸಿನಿಮಾ ಮಾಡಬೇಕು ಅನ್ನಿಸಿದರೆ:who knows? ಇದೆಲ್ಲ ಸಹಾಯಕ್ಕೆ ಬರುತ್ತದಲ್ಲವೆ?

ಇನ್ನೇನು ಮಗನಿಗೆ ನೌಕರಿಯಾಯಿತು, ಮಗಳ ಮದುವೆಯಾಯಿತು. ನನ್ನ ಜವಾಬ್ದಾರಿಗಳೆಲ್ಲ ಮುಗಿದವುಅಂತ ಮಾತಾಡುವ retired hurt ಧಾಟಿಯ ಹಿರಿಯರನ್ನು ನೋಡಿದ್ದೇನೆ. ನಮ್ಮ ಬೆಳಗೆರೆಯ ಶಾಲೆಗೊಂದು ಹೊಸ ಕೋರ್ಸು ಬೇಕಯ್ಯಾಅಂತ ಫೈಲು ಹಿಡಿದುಕೊಂಡು ಬೆಂಗಳೂರಿನ ಕೆಂಪು ಬಸ್ಸು ಹತ್ತಿಕೊಂಡು ಬರುವ ತೊಂಬತ್ತೊಂದು ವರ್ಷ ವಯಸ್ಸಿನ ಬೆಳಗೆರೆ ಕೃಷ್ಣ ಶಾಸ್ತ್ರಿಗಳನ್ನೂ ನೋಡಿದ್ದೇನೆ. What nextಎಂಬ ಪ್ರಶ್ನೆಯೊಂದೇ ಅಂಥವರನ್ನು ಈ ಪರಿ ಸಕ್ರಿಯವಾಗಿ, ಜೀವಂತವಾಗಿ ಇಟ್ಟಿದೆ.

ಲೈಫಲ್ಲೇನಿದೆ ಸಾರ್?ಅಂತ ಕೊರಗುವ ಅಳುಮುಂಜಿ ಯುವಕರನ್ನು ಈ ಬದುಕು ಹೆಜ್ಜೆಗೊಂದು ಡಿಫೀಟು ಮಾಡುತ್ತದೆ. ಈಗಷ್ಟೇ ನೀವೊಂದು ಕೆಲಸ ಮುಗಿಸಿದ್ದೀರಾದರೆ, ಡಿಗ್ರಿ ಪಡೆದಿದ್ದೀರಾದರೆ, ಅಂದುಕೊಂಡದ್ದನ್ನು ಸಾಧಿಸಿದ್ದೀರಾದರೆ ತಕ್ಷಣ ಈ ಪ್ರಶ್ನೆ ಕೇಳಿಕೊಳ್ಳಿ : What next?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X