• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಿಮಗೆ ತಿಳಿದದ್ದು ಕೊಡಿ ಎಂಬ ಅವ್ಯವಹಾರಿಕನೊಂದಿಗೆ...

By Staff
|

ಪರಿಚಯದವರು ಕಡಿಮೆ ಬೆಲೆಗೆ ಮಾಡಿಕೊಡುತ್ತಾರೆ. ಸದ್ಯಕ್ಕೆ ಹಣ ಕೊಡದಿದ್ದರೂ ನಡೆಯುತ್ತೆ, ಬರೋ ಲಾಭ ನೋಡಿಕೊಂಡು ಕೊಡೋಣ ಇವೆಲ್ಲ ಅವ್ಯವಹಾರಿಕ ಲಕ್ಷಣಗಳು. ‘ನನ್ನಲ್ಲಿ ಇರೋದೇ ಇಷ್ಟು. ಮಾಡಿಕೊಡ್ತೀಯಾದರೆ ನೋಡು’ ಅನ್ನುವುದಿದೆಯಲ್ಲ? ಅದು ನಿಚ್ಚಳ ವ್ಯವಹಾರ.

How to handle business matters?‘ಸರ್‌, ನಂಗೆ ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ’ ಅಂತ ಯುವಕನೊಬ್ಬ ಎದುರಿಗೆ ನಿಂತುಕೊಂಡು ಕೇಳಿದ.

‘ಹೌದಾ’ ಅಂದವನು ಅವನನ್ನೇ ದಿಟ್ಟಿಸಿ ನೋಡಿದೆ. ಶಾಲೆಯಲ್ಲಿ ಕೆಲಸ ಮಾಡುವ ಸರಿಸುಮಾರು ಮುನ್ನೂರು ಮಂದಿಯ ಪೈಕಿ ನನಗೆ ಕೆಲವರು ಗುರುತು ಸಿಗಲಾರರೇನೋ: ಅದು ಬಿಟ್ಟರೆ ಪತ್ರಿಕೆಯಲ್ಲಿ ಕೆಲಸ ಮಾಡುವ ಯಾರು ಕೂಡ ನನಗೆ ಅಪರಿಚಿತರಲ್ಲ. ಇಷ್ಟು ವರ್ಷಗಳಲ್ಲಿ ನನಗೆ ನಾಲ್ಕು ತಿಂಗಳಿಂದ ಸಂಬಳವಾಗಿಲ್ಲ ಅಂತ ಯಾರೂ ಹೀಗೆ ನಿಂತು ದೂರು ಹೇಳಿದ್ದಿಲ್ಲ.

ಈತ ಹತ್ತಿರದ ತಾಲೂಕೊಂದರಲ್ಲಿದ್ದುಕೊಂಡು ಪತ್ರಿಕೆಗೆ ಬಾತ್ಮಿ ನೀಡುತ್ತಾನೆ. ನಮಗೆ ಬಾತ್ಮೀದಾರರು ತುಂಬ ಮುಖ್ಯ. ಆದರೆ ಅವರು ವರದಿಗಾರರಲ್ಲ. ವರದಿಗಾರನಿಗೆ ಸುದ್ದಿ ಸಂಗ್ರಹಣೆ, ಫೋಟೋ ಸಂಗ್ರಹಣೆ, ವರದಿಗೊಂದು ಸಮಗ್ರತೆ ನೀಡುವಿಕೆ, ದಾಖಲೆ ಒದಗಿಸುವಿಕೆ -ಹೀಗೆ ಅನೇಕ ಜವಾಬ್ದಾರಿಗಳಿರುತ್ತವೆ.

ಆದರೆ ಬಾತ್ಮೀದಾರರು ಹಾಗಲ್ಲ. ಅವನು ಒಂದ್ಯಾವುದೋ ಮೂಲೆಯ ಸುದ್ದಿ ತಲುಪಿಸುತ್ತಾನೆ. ಇಡೀ ವರದಿಗೆ ಆತ answerable ಅಲ್ಲ. ಬಾತ್ಮೀದಾರರು ಎಷ್ಟು ಮುಖ್ಯ ವ್ಯಕ್ತಿಗಳಾಗಿರುತ್ತಾರೆ ಅಂದರೆ, ಅವರು ನೀಡುವ ಬಾತ್ಮೀಗೆ informationಗೆ ಅವರಿಗೆ ಕೈ ತುಂಬಾ ಹಣ ಕೊಟ್ಟು, ಅವರನ್ನು ಅವಘಡ, ಅಪಾಯಗಳಿಂದಲೂ ಪತ್ರಿಕೆ ರಕ್ಷಿಸುತ್ತದೆ. ಆದರೆ ಅವರು ಪತ್ರಿಕೆಯ ನೌಕರರಲ್ಲ. ನೌಕರರಿಗೆ ಪ್ರತಿ ತಿಂಗಳು ಇಂತಿಷ್ಟು ಸಂಬಳ, ಇಂಥ ತಾರೀಖಿಗೆ ಪಾವತಿಯಾಗಬೇಕು ಎಂಬ ನಿಯಮವಿರುತ್ತದೆ.

ಬಾತ್ಮೀದಾರ ತಾನು ಕೊಟ್ಟ ಮಾಹಿತಿಯನುಸಾರವಾಗಿ, ಅದರ ಪ್ರಾಮುಖ್ಯತೆಗೆ ತಕ್ಕಂತೆ ಸಂಭಾವನೆ ಪಡೆಯುತ್ತಾನೆ. ಈತ ಕಳೆದ ನಾಲ್ಕು ತಿಂಗಳಿಂದ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸಂಬಳ ಕೇಳುತ್ತಿದ್ದಾನೆ.

‘ಕಳೆದ ನಾಲ್ಕು ತಿಂಗಳಲ್ಲಿ ನೀನು ಕೊಟ್ಟ ಮಾಹಿತಿ, ಅದರ ಆಧಾರದ ಮೇಲೆ ಪ್ರಕಟವಾದ ವರದಿಗಳೆಷ್ಟು ಅಂತ ಒಂದು ಹಾಳೆಯಲ್ಲಿ ಬರೆದುಕೊಡು. ಇವತ್ತೇ payment ಮಾಡಿಸ್ತೇನೆ’ ಅಂದೆ.

ಅವನು ಸುಮ್ಮನೇ ನಿಂತ.

‘ನೀವು ಕೆಲಸಕ್ಕೆ ತಗೊಂಡಿದೀರಿ ಅಂದುಕೊಂಡೆ... ’ ಅಂದ.

ತಪ್ಪು ಎಲ್ಲಾಗಿದೆ ಅಂತ ತಕ್ಷಣ ಅರ್ಥವಾಯಿತು. ಅವನು ನೀಡಿದ ಮಾಹಿತಿಗೆ ಹಿಂದೊಮ್ಮೆ ಅವನಿಗೆ ನನ್ನ ಕಡೆಯಿಂದ payment ಆಗಿತ್ತು. ಮಾಹಿತಿ ನೀಡದಿದ್ದರೂ ಮುಂದೆ ಪ್ರತಿತಿಂಗಳೂ ಹೀಗೆ ಹಣ ಕೊಡಲಾಗುತ್ತದೆ ಅಂತ ಅವನು ಅಂದುಕೊಂಡ. ‘ಇದು ನೀನು ಕೊಟ್ಟ ಮಾಹಿತಿಗೆ ಸಂಭಾವನೆ ಕಣಯ್ಯಾ. ಇನ್ಮೇಲೆ ನೀನು ಬೇರೇನಾದರೂ ಮಾಹಿತಿ ಕೊಟ್ಟರೆ ನಿನಗೆ ಹಣ ಕೊಡುವುದುಂಟು. ಇಲ್ದಿದ್ರೆ ಇಲ್ಲ’ ಅಂತ ನಾನು ಕಡ್ಡಿ ಮುರಿದ ಹಾಗೆ ಹೇಳಬೇಕಿತ್ತು. ಹೇಳಿರಲಿಲ್ಲ.

ಎಷ್ಟೋ ಸಲ ಹಾಗಾಗುತ್ತದೆ. ಒಂದು ಕೆಲಸಕ್ಕೆ ಎಷ್ಟು ಕೊಡಬೇಕು ಅಂತ ಮೊದಲು ಮಾತಾಡಿಕೊಂಡಿರುವುದಿಲ್ಲ. ‘ನೀವೇ ಎಷ್ಟಾದರೂ ಕೊಡಿ. ನಿಮಗೆ ಗೊತ್ತಲ್ವ?’ ಅಂತ ಅವರಂದಿರುತ್ತಾರೆ. ಇಷ್ಟು ಕೊಟ್ಟರಾಯಿತು ಅಂತ ನಾವಂದುಕೊಂಡಿರುತ್ತೇವೆ. ಅಷ್ಟು ಕೊಡಲು ಹೋದಾಗಲೇ ತಕರಾರು ಶುರುವಾಗೋದು.

ಆತ ‘ಇಷ್ಟೇನಾ’ ಅನ್ನುತ್ತಾನೆ. ನಾವು ‘ಇಷ್ಟೊಂದಾ?’ ಅನ್ನುತ್ತೇವೆ. ಕೆಲಸ ಆಗಲಿಕ್ಕೆ ಮುಂಚೆಯಾದರೆ, ‘ಇಷ್ಟೊಂದಾಗೋದಾದರೆ ನನಗೆ ಬೇಡ’ ಅನ್ನುವ ಸ್ವಾತಂತ್ರ್ಯವಿರುತ್ತದೆ. ಕೆಲಸ ಮಾಡಿಸಿಕೊಂಡ ನಂತರ ಅವನು ಕೇಳಿದಷ್ಟು ಕೊಡಲೇಬೇಕಾಗುತ್ತದೆ.

ಕೆಲವು ವ್ಯವಹಾರಗಳೇ ಹಾಗಿರುತ್ತವೆ. ಇಂತಿಷ್ಟು ಖರ್ಚು ಅಂತ ಯಾವುದಕ್ಕೂ ನಿಗದಿಯಿರುವುದಿಲ್ಲ. ಒಂದು ಕಡೆಯಿಂದ ಖರ್ಚು ಮಾಡುತ್ತಲೇ ಇರುತ್ತೇವೆ. ಇಡೀ ಪ್ರಾಜೆಕ್ಟು ಮುಗಿಯುವ ತನಕ ಒಟ್ಟು ಖರ್ಚು ಅಥವಾ ಇನ್ವೆಸ್ಟುಮೆಂಟ್‌ ಎಷ್ಟಾಯಿತೆಂದು ಗೊತ್ತೇ ಆಗಿರುವುದಿಲ್ಲ. ‘ಇಷ್ಟಾಗಾತ್ತದೆ’ ಅಂತ ಸಂಬಂಧ ಪಟ್ಟವರು ಹೇಳಿರುವುದೂ ಇಲ್ಲ. ಅಕಸ್ಮಾತು ಹೇಳಿದ್ದರೂ ತುಂಬ ಮುಗುಮ್ಮಾಗಿ ‘ಹತ್ತು ಲಕ್ಷ ಆಗಬಹುದು. ಸ್ವಲ್ಪ ಆಚೆ-ಈಚೆ ಆಗಬಹುದು’ ಅಂದಿರುತ್ತಾರೆ. ‘ಆಚೆ’ಯೆಂದರೆ ಎಷ್ಟು? ಅದು ಎಷ್ಟು ಬೇಕಾದರೂ ಆಗಬಹುದು!

ತಪ್ಪು ಅವರದಲ್ಲ. ‘ಆಚೆ’ ಅಂದರೆ ಎಷ್ಟು ಅಂತ ನಾವೇ ಗೆರೆ ಎಳೆದಂತೆ ಕರಾರುವಾಕ್ಕಾಗಿ ಕೇಳಿರುವುದಿಲ್ಲ. ಅನೇಕ ಸಲ ‘ಆಚೆ’ಅಂದರೆ ಎಷ್ಟು ಅಂತ ಅವರಿಗೂ ಗೊತ್ತಿರುವುದಿಲ್ಲ. ಕೊಡ್ತಾರೆ ಬಿಡು, ಸಾಕಷ್ಟು ದುಡ್ಡಿರುವ ಜನ ಅಂದುಕೊಂಡು ಬಿಟ್ಟಿರುತ್ತಾರೆ. ಅವರು ಆ ಪ್ರಾಜೆಕ್ಟ್‌ನಲ್ಲಿ ತುಂಬ ತಲ್ಲೀನರಾಗಿ ಕೆಲಸವನ್ನು ಮಾಡುತ್ತಿರುತ್ತಾರೆ. ‘ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಅಂದಮೇಲೆ ಕೊಡದೆ ಇರುತ್ತಾರಾ?’ ಎಂಬ ಭಾವನೆಯಾಂದು ಅವರಲ್ಲಿರುತ್ತದೆ. ಅದಿರುತ್ತದಾದ್ದರಿಂದಲೇ ಅವರು ತುಂಬ ತಲ್ಲೀನರಾಗಿ ಕೆಲಸ ಮಾಡುತ್ತಿರುತ್ತಾರೆ.

‘ಉಹುಂ, ನೀನು ಕೇಳಿದಷ್ಟು ಕೊಡಲಿಕ್ಕಿಲ್ಲ. ಆಗಲ್ಲ ಮಾರಾಯಾ. ಇದಕ್ಕೆ ನಾನು ಕೊಡೋದು ಇಷ್ಟೇ’ ಅಂತ ಆರಂಭದಲ್ಲೇ ಹೇಳಿ ನೋಡಿ?

ಖಂಡಿತವಾಗಿಯೂ ಆತನ ತಲ್ಲೀನತೆ ಕಡಿಮೆಯಾಗುವುದಿಲ್ಲ. ಒಪ್ಪಿಕೊಂಡ ಕೆಲಸವನ್ನು ಖಂಡಿತ ಕರಾರುವಾಕ್ಕಾಗಿ ಮಾಡಿ ಮುಗಿಸುತ್ತಾನೆ. ಕೊಟ್ಟ payment ತೆಗೆದುಕೊಂಡು ಹೋಗುತ್ತಾನೆ. ಕಡ್ಲೆ ತಿಂದ ಕೈ ತೊಳೆದುಕೊಂಡಂತೆ ಎಲ್ಲವೂ ನಿಸೂರು. ಅಂತ್ಯ ನಿಷ್ಠೂರದ ಆತಂಕವಿರುವುದಿಲ್ಲ. ವ್ಯವಹಾರವನ್ನು ಹಾಗೆ ಮಾಡಿದರೇನೆ ಸರಿ.

ನೀವು ಒಂದು ಸಲ ಜಿಂದಲ್‌(ಬೆಂಗಳೂರಿನ ಜಿಂದಲ್‌ ಅಲ್ಯುಮಿನಿಯಮ್‌ ಲಿಮಿಟೆಡ್‌)ನವರೊಂದಿಗೆ ಅಥವಾ ‘ಈಟೀವಿ’ಯವರೊಂದಿಗೆ ವ್ಯವಹರಿಸಿ ನೋಡಿ. ಅವರಲ್ಲಿ ಈ ತೆರನಾದ ಕರಾರುವಾಕ್ಕುತನವಿರುತ್ತದೆ. ‘ಇಷ್ಟೇ ಕೊಡೋದು’ಅಂತ ಹೇಳಿಯೇ ವ್ಯವಹಾರ ಆರಂಭಿಸುತ್ತಾರೆ. ಹೇಳಿದಷ್ಟನ್ನು ಗೆರೆ ಗೀಚಿದಂತೆ ಕೊಟ್ಟು ಕೈತೊಳೆದುಕೊಳ್ಳುತ್ತಾರೆ.

ಆದರೆ ಅನೇಕ ಸಲ ನಾವು ಭಿಡೆಗೆ ಬೀಳುತ್ತೇವೆ. ಅವನು ‘ತಿಳಿದಷ್ಟು ಕೊಡಿ’ ಅನ್ನುತ್ತಾನೆ. ‘ನಂಗೇನು ತಿಳಿಯುತ್ತೋ ಅದು ಕೊಡ್ತೀನಪ್ಪ’ ಅಂತ ನಾವನ್ನುತ್ತೇವೆ. ವ್ಯವಹಾರ ಮತ್ತು ದುಡ್ಡು ‘ತಿಳಿವಳಿಕೆ’ಯ ಸಂಗತಿಯಲ್ಲ. ಅದು ನಿರೀಕ್ಷೆಯ ಸಂಗತಿ. ಕೊಡುವವನ ತಾಕತ್ತಿಗೆ ಸಂಬಂಧಿಸಿದ ಸಂಗತಿ. ಕೆಲಸದ ಕಿಮ್ಮತ್ತಿಗೆ ಸಂಬಂಧಿಸಿದ ಮೊದಲ ಸಂಗತಿ. ಮೊದಲೇ ಎಲ್ಲವನ್ನೂ ಮಾತನಾಡಿಕೊಳ್ಳುವುದು ಸೂಕ್ತ.

ಒಮ್ಮೆ ನಮ್ಮ ಶಾಲೆಯ ಕಾರ್ಯಕ್ರಮವೊಂದಕ್ಕೆ ಸ್ಟೇಜ್‌ ಹಾಕಿಸುತ್ತಿದ್ದೆ. ‘ನಮ್ಮ ಶಾಲೆಯಲ್ಲಿ ಓದುವ ಮಗುವಿನ ತಂದೆಯೇ ಇದ್ದಾರೆ. ಡೆಕೋರೇಶನ್‌ ಅವರೇ ಮಾಡಿಕೊಡ್ತಾರಂತೆ. ನಿಮಗೆ ತಿಳಿದಷ್ಟು ಕೊಡಿ ಅಂದಿದ್ದಾರೆ. ಅವರ ಮಗು ನಮ್ಮಲ್ಲಿ ಓದ್ತಾ ಇದೆಯಲ್ಲಾ.. ’ ಅಂದರು ಶಾಲೆಯವರು. ‘ಆದರೂ ಅವರನ್ನೊಮ್ಮೆ ಅವರ ರೇಟು ಕೇಳಿನೋಡಿ’ ಅಂದೆ.

ನಾವು ನಿರೀಕ್ಷಿಸಿದ್ದಕ್ಕೆ ಸರಿಯಾಗಿ ಮೂರುಪಟ್ಟು ಜಾಸ್ತಿಯಿತ್ತು ಅವರು ಕೋಟ್‌ ಮಾಡಿದ ಸಂಭಾವನೆ.

ಅಂಥ ನಿರೀಕ್ಷೆಗಳನ್ನಿಟ್ಟುಕೊಳ್ಳುವುದೇ ತಪ್ಪು. ಪರಿಚಯದವರು ಕಡಿಮೆ ಬೆಲೆಗೆ ಮಾಡಿಕೊಡುತ್ತಾರೆ. ಸದ್ಯಕ್ಕೆ ಹಣ ಕೊಡದಿದ್ದರೂ ನಡೆಯುತ್ತೆ, ಬರೋ ಲಾಭ ನೋಡಿಕೊಂಡು ಕೊಡೋಣ ಇವೆಲ್ಲ ಅವ್ಯವಹಾರಿಕ ಲಕ್ಷಣಗಳು.

‘ನನ್ನಲ್ಲಿ ಇರೋದೇ ಇಷ್ಟು. ಮಾಡಿಕೊಡ್ತೀಯಾದರೆ ನೋಡು’ ಅನ್ನುವುದಿದೆಯಲ್ಲ? ಅದು ನಿಚ್ಚಳ ವ್ಯವಹಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more