• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀವೇ ನಿಮ್ಮ ಸೈನ್ಯ! ಅಭಿಮನ್ಯುವಿನಂತೆ ನೀವೊಬ್ಬರೇ ಕಾದಾಡಿ...

By Staff
|

ಯಾರನ್ನೇ ಆಗಲಿ, ಎದುರು ಹಾಕಿಕೊಳ್ಳುವವನು ಸದಾ ಒಬ್ಬನೇ ಇರಬೇಕು! ನಾಶವಾಗಿ ಹೋದರೂ ಸರಿಯೇ, ಸತ್ಯ ಹೇಳುತ್ತಲಿರಬೇಕು. ಅಭಿಮಾನಿಯಾಬ್ಬನ, ಬೆಂಬಲಿಗನ ದೂರದ ಚಪ್ಪಾಳೆ- ಅದೆಷ್ಟೇ ಕ್ಷೀಣವಾಗಿದ್ದರೂ ಸರಿಯೇ, ಅವನಲ್ಲಿ ಧೈರ್ಯ ತುಂಬುತ್ತಿರಬೇಕು. ಅಭಿಮನ್ಯು ಚಿರಕಾಲ ಬದುಕಿರಬೇಕು: ಒಬ್ಬಂಟಿಯಾಗಿ!

‘ಎದುರು ಹಾಕಿಕೊಳ್ಳುವಾಗ ಎಚ್ಚರವಿರಲಿ’ ಅಂದವರು ಬಹಳ ಮಂದಿ. ಆದರೆ ಬದುಕೇ ವಿಚಿತ್ರ. ಪ್ರತಿನಿತ್ಯ ನಾವು ಒಬ್ಬರಲ್ಲ ಒಬ್ಬರನ್ನು ಎದುರು ಹಾಕಿಕೊಳ್ಳುತ್ತಿರುತ್ತೇವೆ. At least ಹಿಂದಕ್ಕೆ, ಪಕ್ಕಕ್ಕೆ, ಮೇಲಕ್ಕೆ, most of the times ಕೆಳಕ್ಕೆ ಹಾಕಿಕೊಳ್ಳುತ್ತಲೇ ಇರುತ್ತೇವೆ. ಯಾಕೆಂದರೆ, ನಾವೆಲ್ಲ ಒಬ್ಬರೇ ಇರಲಿಕ್ಕೆ ಹೆದರುತ್ತೇವೆ. ಏನಾದರೂ ಸಂಭವಿಸಿಬಿಡುತ್ತದೇನೋ ಎಂಬ ಹೆದರಿಕೆ. ಏನಾದರೂ ಸಂಭವಿಸಿದಾಗ ನಾವು ಒಬ್ಬರೇ ಆಗಿ ಬಿಡುತ್ತೇವೇನೋ ಎಂಬ ಹೆದರಿಕೆ. ನಾವಿಲ್ಲದಿದ್ದಾಗ ಮತ್ತೆಲ್ಲೋ ಮತ್ತೇನೋ ಸಂಭವಿಸಿಬಿಡುತ್ತದೆಂಬ ಹೆದರಿಕೆ. ಏನೂ ಸಂಭವಿಸದಿದ್ದರೆ ಗತಿಯೇನು ಎಂಬ ಹೆದರಿಕೆ. ಹೆದರಿಕೆಯಾಗಿಬಿಟ್ಟರೆ ಹೇಗೆ ಅಂತ ಹೆದರಿಕೆ.

ಹೀಗೆ, ಹೆದರಿಕೆಯಾಂದಿಗೇ ಜೀವಿಸುತ್ತಿರುತ್ತೇವೆ. ಆದರೂ ಅವರಿವರನ್ನು ಎದುರು ಹಾಕಿಕೊಂಡು ಧೈರ್ಯವಂತರೆನಿಸಿಕೊಳ್ಳುತ್ತಿರುತ್ತೇವೆ. ಹಾಗೆ ಯಾರಾದರೂ ಅಂದಾಗಲೇ ನಮಗೆ ನಾವು ಧೈರ್ಯವಂತರು ಅನ್ನಿಸತೊಡಗುತ್ತದೆ. ಅವರು ಮತ್ತೆ ಮತ್ತೆ ಅಂದಾಗೆಲ್ಲ ನಾವು ಮತ್ತೆ ಮತ್ತೆ ಧೈರ್ಯವಂತರಾಗುತ್ತೇವೆ. ಸಾಮಾನ್ಯವಾಗಿ ಮನುಷ್ಯ ತನ್ನ ಅನ್ನಕ್ಕೆ, ಜಾಗಕ್ಕೆ, ಕಾಮಕ್ಕೆ ಅಡ್ಡಿ ಬಂದಾಗ, ಅಭ್ಯಂತರ ಬಂದಾಗ ಬಡಿದಾಟಕ್ಕೆ ನಿಲ್ಲುತ್ತಾನೆ. ಬಡಿದಾಡುವುದೆಂದರೇನೇ ಎದುರು ಹಾಕಿಕೊಳ್ಳುವುದು ಅಂದುಕೊಳ್ಳುತ್ತಾನೆ. ಎದುರು ಹಾಕಿಕೊಂಡವನೇ ಧೈರ್ಯವಂತ ಅಂದುಕೊಳ್ಳುತ್ತಾನೆ.

Fight your own battles lonely like Abhimanyuಆದರೆ ಎದುರು ಹಾಕಿಕೊಳ್ಳುವಾಗ ಅನೇಕರು ಮರೆತು ಹೋಗುವ ಸಂಗತಿಯೆಂದರೆ, ಈ ಎದುರು ಬೀಳುವಿಕೆ- ಈ ಯುದ್ಧ- ಈ ಬಂಡಾಯಗಳೆಲ್ಲ ನಮ್ಮ ಸಮಾಜಕ್ಕೆ ಇಷ್ಟ. ಹತ್ತು ಜನ ರೌಡಿಗಳೊಂದಿಗೆ ಹೀರೋ ಬಡಿದಾಡಿದರೆ ಇಷ್ಟ. ಪತ್ರಿಕೆ ಖಾರವಾದಷ್ಟೂ ಇಷ್ಟ. ಏಕೆಂದರೆ, ಸಜ್ಜನರಿಗೆ ಸಮಾಧಾನಪಡಲಿಕ್ಕೆ ಇರುವ ದಾರಿಗಳು ಇವಿಷ್ಟೇ. ನಮಗೆ ಅಭಿಮನ್ಯು ಇಷ್ಟವಾದದ್ದು, ಅವನು ಅಷ್ಟೇಲ್ಲ ಬಲಿಷ್ಠ ಕೌರವರನ್ನ ಎದುರು ಹಾಕಿಕೊಂಡು ಚಕ್ರವ್ಯೂಹಕ್ಕೆ ನುಗ್ಗಿದನೆಂಬ ಕಾರಣಕ್ಕೆ. ಸುಭಾಷ್‌ಚಂದ್ರ ಬೋಸ್‌ ಕೂಡ ಅಷ್ಟೆ.

ಪಡೆ ಕಟ್ಟಿಕೊಂಡು ದಂಡೆತ್ತಿಹೋದ ಅಶೋಕ ಚಕ್ರವರ್ತಿಗಿಂತ ನಂದರನ್ನು ಮುಗಿಸಲು ಶಿಖೆಯ ಮುಡಿಕಟ್ಟಿದ ಚಾಣಕ್ಯ ಇಷ್ಟವಾದದ್ದು ಇದೇ ಕಾರಣಕ್ಕೆ. ನಾವೆಲ್ಲ ಅವರನ್ನು ಅಭಿಮಾನಿಸಿದ ಜನ. ಅವರಿಗೋಸ್ಕರ ಕಣ್ಣೀರಿಟ್ಟ, ಹರಸಿದ, ಅವರು ಗೆಲ್ಲಲೆಂದು ಹಾರೈಸಿದ ಜನಸಾಮಾನ್ಯರು ನಾವು.

ನಾವು ಕೋಟ್ಯಂತರ ಜನ ಇದ್ದೇವೆ. ದುರಂತವೆಂದರೆ, ನಾವು ಬಿಡಿ ಬಿಡಿಯಾಗಿದ್ದೇವೆ. Scattered ಆಗಿದ್ದೇವೆ. ಒಬ್ಬೊಬ್ಬರೇ ಇದ್ದೇವೆ. ನಮ್ಮಲ್ಲಿ ಒಳ್ಳೆಯತನವಿದೆ, ಸಜ್ಜನಿಕೆಯಿದೆ, ಧೂರ್ತರು ಸೋಲಲೆಂಬ ಹೆಬ್ಬಯಕೆ ನಮಗಿದೆ. ನಮ್ಮಪ್ಪ ಅಮ್ಮ, ನಮ್ಮ ತಂಗಿ-ಯಾರಿಗೂ ಅನ್ಯಾಯ ಮಾಡದೆ ಬದುಕುವ ಒಳ್ಳೆಯ ಜನ. ದೇಶಕ್ಕೆ ಆಪತ್ತು ಬಂದಾಗ ಬಂದ ಸಂಬಳದಲ್ಲೇ ಪ್ರಧಾನಮಂತ್ರಿಗೆ ಸ್ವಲ್ಪ ಮುಡಿಪಿನಂತೆ ಹಣವೆತ್ತಿಟ್ಟು ಕಳಿಸಿದ ಜನ. ಭಾರತದ ಸೈನಿಕ ಸಾಯದಿರಲೆಂದು ದೇವರಿಗೆ ಹರಕೆ ಹೊತ್ತ ಜನ ನಾವು. ನಮ್ಮ ತಾಯಂದಿರು ಪ್ರಾಮಾಣಿಕರು. ಹೀಗಾಗಿ ದೇಶದಲ್ಲಿ ಸಾವಿರಾರು ಕ್ಷುದ್ರ ರಾಜಕಾರಣಿಗಳು, ರೌಡಿಗಳು, ವಂಚಕರು, ಓಡಾಡುತ್ತಿದ್ದರೂ, ಆರ್ಭಟಿಸುತ್ತಿದ್ದರೂ ನಮ್ಮ ಸಾಮಾಜಿಕ ಸ್ವಾಸ್ಥ್ಯ ಭಯವಾಗುವಷ್ಟು ಕೆಟ್ಟಿಲ್ಲ. ಪ್ರಾಮಾಣಿಕರ ಸಂಖ್ಯೆ ಕುಗ್ಗಿಲ್ಲ.

ಆದರೆ ಅಂಥವರೆಲ್ಲ, ಒಂದು ಕಡೆಯಿಲ್ಲ. ಅವರು ಈ ದೇಶದ ಊರು ಪಟ್ಟಣ ಹಳ್ಳಿ ಕಾಡುಗಳಲ್ಲಿ ಚೆದುರಿ ಹೋಗಿದ್ದಾರೆ. ಎದುರು ಹಾಕಿಕೊಳ್ಳುವವನಿಗೆ ಗೊತ್ತಿರಲೇಬೇಕು ಇದು. ಅವನನ್ನು ಬೆಂಬಲಿಸುವವರು, ಪ್ರೀತಿಸುವವರು, ಮೆಚ್ಚುವವರು, ಅಭಿಮಾನಿಸುವವರು- ತುಂಬ ಜನ ಇದ್ದಾರೆ: ಲಕ್ಷ ಲಕ್ಷ, ಕೋಟಿ ಕೋಟಿ. ಆದರೆ ಅವರು ಎದುರು ಹಾಕಿಕೊಂಡ ಹತ್ತೇ ಹತ್ತಿಪ್ಪತ್ತು ಬಲಿಷ್ಠರಿದ್ದಾರಲ್ಲ? ಅವರೆಲ್ಲ ತುಂಬಾ ಒಗ್ಗಟ್ಟಾಗಿದ್ದಾರೆ. ಒಟ್ಟಿಗೇ ಇದ್ದಾರೆ. ಒಬ್ಬರ ಕೆಳಗೆ, ಒಬ್ಬರ ಪಕ್ಕಕ್ಕೆ, ಒಬ್ಬರ ಹಿಂದಕ್ಕೆ, ಮತ್ತೊಬ್ಬರ ಮರೆಯಲ್ಲಿ, ಇನ್ನೊಬ್ಬರ ಒರೆಯಲ್ಲಿ- ಒಟ್ಟು ಅವರೆಲ್ಲ ಒಂದೇ ಕಡೆಯಿದ್ದಾರೆ. ಬಹಳ ಬೇಗನೆ organise ಆಗುತ್ತಾರೆ. ತಂತಮ್ಮ ಕದನ ಮರೆಯುತ್ತಾರೆ.

ಅವರಿಗೆ ಎದುರುಹಾಕಿಕೊಂಡವನು, ಬೈದವನು, ಬಯಲು ಮಾಡಿದವನು, ಚಕ್ರವ್ಯೂಹ ಹೊಕ್ಕವನು, ಅವರ ವಿರುದ್ಧ ಕನಸು ಕಂಡವನು, ಅವಡುಗಚ್ಚಿದವನು ಒಬ್ಬನೇ ಸಿಗುವುದು ಬೇಕು. ಏಕಾಂಗಿಯಾಗಿ ಇದಿರಾಗಬೇಕು. ಎಷ್ಟು ಸಮರ್ಥವಾಗಿ ಹಣಿದುಬಿಡುತ್ತಾರೆ ಗೊತ್ತಾ? ಹತ್ತು ಜನ ಹಾದರಗಿತ್ತಿಯರು ಸೇರಿ ಒಬ್ಬ ತಾಯಿ ಮನಸಿನ ಪತಿವ್ರತೆಯ ಹೆಸರು ಕೆಡಿಸಿದ ಹಾಗೆ! ನೂರು ಟೈರುಗಳ ಲಾರಿಯಾಂದು ನಿಸ್ಸಹಾಯಕ ಮಗುವಿನ ಮೇಲೆ ಹರಿದು ಹೋದ ಹಾಗೆ! ಹಿಂಡು ಹಿಂಡು ಪೊಲೀಸರು ಸೇರಿ ಪತ್ರಕರ್ತನ ಕೈಲಿರುವ ಪೆನ್ನು ಕಸಿದುಕೊಂಡು ಜೈಲಿಗೆ ನೂಕಿದ ಹಾಗೆ.

ಆಗೆಲ್ಲ ಅವರ ಕೈಗೆ ಸಿಕ್ಕವರು ಒಬ್ಬಂಟಿಯಾಗಿರುತ್ತಾರೆ. ತಮ್ಮನ್ನು ಅಭಿಮಾನಿಸುವವರು ಲಕ್ಷ ಲಕ್ಷ ಇದ್ದಾರೆಂಬುದು ಗೊತ್ತು. ಆದರೆ ಅವರೆಲ್ಲ ಒಟ್ಟಾಗಿ ಎದ್ದು ಬರಲಾರರಲ್ಲ? ಎಬ್ಬಿಸಿಕೊಂಡು ಬರೋಣವೆಂದರೆ, ಇವನು ಸೇನಾಪತಿಯಲ್ಲ, ಸಂಘಟಕನಲ್ಲ, ರಾಜಕಾರಣಿಯಲ್ಲ, ಧರ್ಮಗುರುವಲ್ಲ, ದುಡ್ಡಿನವನಲ್ಲ, ನಟನಲ್ಲ- ಉಹುಂ, ಇವನು ಕೇವಲ ಸತ್ಯ ಹೇಳುವ ಒಳ್ಳೆಯ ಮನುಷ್ಯ. ಅವನು ಮನಸ್ಸು ಬದಲಿಸಿ ತನ್ನನ್ನು ಬೆಂಬಲಿಸುವವರನ್ನೆಲ್ಲ ಎಬ್ಬಿಸಿಕೊಂಡು ಬರಲು ಹೊರಟು ಬಿಟ್ಟರೆ- ಉಹುಂ, ಸತ್ಯ ಹೇಳುವ, ಸತ್ಯ ಬರೆಯುವ, ಎದುರುಹಾಕಿಕೊಳ್ಳುವ ಕೆಲಸ ಬಿಟ್ಟು ಬಿಡುತ್ತಾನೆ. ಕಾಲಾಂತರದಲ್ಲಿ ತಾನೇ ಸೇನಾಪತಿಯಾಗಿಬಿಡುತ್ತಾನೆ. ಸೇನೆಯೆಂದರೆ ಮತ್ತೆ ಅದೇ ಬಲಿಷ್ಠ- ಬಲಿಷ್ಠರ ಮಧ್ಯದ ಯುದ್ಧ. ಅವನ ಕನಸು ಮುರುಟುತ್ತದೆ. ತುಂಬ ಜನರನ್ನು ಬೆನ್ನಿಗಿಟ್ಟುಕೊಂಡು ಹೊರಡುವವನು ತನ್ನದೇ ಹಾದಿಯಲ್ಲಿ, ತಾನೇ ಹಾದಿ ನಿರ್ಮಿಸಿಕೊಳ್ಳುತ್ತ ನಡೆಯಲಾರ.

ಹೀಗಾಗಿ, ಅವನು ಒಬ್ಬನೇ ಇರಬೇಕು. ನಾಶವಾಗಿ ಹೋದರೂ ಸರಿಯೇ, ಸತ್ಯ ಹೇಳುತ್ತಲಿರಬೇಕು. ಅಭಿಮಾನಿಯಾಬ್ಬನ, ಬೆಂಬಲಿಗನ ದೂರದ ಚಪ್ಪಾಳೆ- ಅದೆಷ್ಟೇ ಕ್ಷೀಣವಾಗಿದ್ದರೂ ಸರಿಯೇ, ಅವನಲ್ಲಿ ಧೈರ್ಯ ತುಂಬುತ್ತಿರಬೇಕು. ಅಭಿಮನ್ಯು ಚಿರಕಾಲ ಬದುಕಿರಬೇಕು: ಒಬ್ಬಂಟಿಯಾಗಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more