ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನೋ’ ಹೇಳುವುನ್ನು ಕಲಿಯಿರಿ... ಸುಖವಾಗಿರಿ...!!

By Staff
|
Google Oneindia Kannada News


ಸಹಾಯ ಮಾಡುವುದೇ ಬೇರೆ ಮತ್ತು ದಾಕ್ಷಿಣ್ಯಕ್ಕೆ ಬಿದ್ದು ಒಲ್ಲದ ಕೆಲಸವನ್ನು ಮಾಡುವುದೇ ಬೇರೆ ಎಂಬುದು ತುಂಬ ಚೆನ್ನಾಗಿ ಅರ್ಥವಾಗಿದೆ . ಸ್ವಲ್ಪ ಮಟ್ಟಿಗಿನ ಸಾರ್ವಜನಿಕ ಜೀವನದಲ್ಲಿ ಇದ್ದವರಾದರೆ, ಇದು ನಿಮಗೂ ಅರ್ಥವಾಗಿಬಿಡುತ್ತದೆ.

Why we say yes, when we need to say no...?ನಿಂಗೆ ಒಂಚೂರು ಡಿಸಿಪ್ಲೀನಿಲ್ಲ. ಮಟ್ಟಸ ಇಲ್ಲ ಅಂತ ಅಮ್ಮ, ತಾನು ಬದುಕಿರುವಷ್ಟು ದಿನ ಬೈದಳು. ಆಕೆ ಇಡೀ ಅರವತ್ತೇಳು ವರ್ಷದ ಬದುಕನ್ನ ಎಂಥ ಕಾಯಿಲೆಯಲ್ಲೂ ಕೂದಲೆಳೆಯಷ್ಟು ಶಿಸ್ತು ಆಚೀಚೆಯಾಗದೇ ಬದುಕಿದಳು.

ನನಗೆ ಆ ತೆರನಾದ ಡಿಸಿಪ್ಲೀನು ಬರಲಿಲ್ಲ. ಇವತ್ತಿಗೂ ನಾಗ್ತಿ ‘ನೀನು ಆರು ಗಂಟೆಗೆ ಸಭೆ ಅಂದ್ರೆಏಳಕ್ಕೆ ಬರ್ತೀಯಾ ನಿಂಗೆ ಶಿಸ್ತೇ ಇಲ್ಲ’ ಅಂತ ಬಯ್ಯುತ್ತಿರುತ್ತಾನೆ. ಅದು ನಂಗೂ ಗೊತ್ತಿದೆ. ಅನೇಕ ಸಲ ಪತ್ರಿಕೆ ಲೇಟು ಮಾಡಿಕೊಳ್ಳುತ್ತೇನೆ. ಕೋರ್ಟುಗಳಿಗೆ ಹೊರಡುವಾಗ ವಿಪರೀತ ತಡವಾಗಿ ಹೊರಟು ಪ್ರಾಣ ಹೋಗುವಂಥ ಅಪಾಯಕಾರಿ ವೇಗದಲ್ಲಿ ಕಾರಿನಲ್ಲಿ ಹೋಗುತ್ತೇನೆ. ಅಂದುಕೊಂಡ ಅವಧಿಯಲ್ಲಿ ಪುಸ್ತಕ ಬರೆದು ಮುಗಿಸಲಾಗದೆ ಫಜೀತಿ ಪಡುತ್ತೇನೆ. ನನ್ನನ್ನು ನಂಬಿ ಕಾಯುತ್ತ ನಿಂತವರಿಗೆ ಭಯಂಕರ ತೊಂದರೆ ಕೊಡುತ್ತೇನೆ.

ಇದೆಲ್ಲ ನನಗೆ ಗೊತ್ತಿಲ್ಲ ವೆಂದಲ್ಲ.

ಇವೆಲ್ಲ ಯಾಕಾಗುತ್ತದೆ ಅಂತಲೂ ಗೊತ್ತಿದೆ. ಆದರೂ ಒಂದು ನಿರ್ಣಯಕ್ಕೆ ಬಂದು ನಾಳೆಯಿಂದ ‘ಹ್ಯಾಗಿರ್ತೇನ್ನೋಡು’ ಅಂತ ಅವಡುಗಚ್ಚಲಿಕ್ಕೆ ನನಗೆ ಬರುವುದಿಲ್ಲ.

ಏಕೆಂದರೆ ‘ನೋ’ ಅನ್ನಬೇಕಾದ ಅನೇಕ ಕಡೆ ನಾನು ‘ಯಸ್‌’ ಅಂದಿರುತ್ತೇನೆ. ಇದನ್ನು ಉತ್ತರ ಕರ್ನಾಟಕದ ‘ಭಿಡೆಗೆ ಬಿದ್ದು ಬಸಿರಾಗಿ ಹಡೀಲಾರದೆ ಸತ್ತರು’ ಅಂತಾರೆ. ನನ್ನಂಥವರಿಗೆ ಸಾಯಲಿಕ್ಕೂ ಭಿಡೆಯಾಗಿ ಹಡೆದು ಸಾಯಲು ಸಿದ್ಧನಾಗಿಬಿಡುತ್ತೇನೆ! ನಿಮಗೂ ಆ ಸಮಸ್ಯೆಯಿದ್ದರೆ ದಯವಿಟ್ಟು ಇದನ್ನು ಮುಂದಕ್ಕೆ ಓದಿ. ಒಟ್ಟಿಗೆ ಕುಳಿತು ಇದಕ್ಕೊಂದು ಪರಿಹಾರ ಹುಡುಕೋಣ.

ಮೊನ್ನೆ ಆಫೀಸಿನ ಬಳಿ ಒಬ್ಬ ಹುಡುಗ ನಿಂತಿದ್ದ. ತುಂಬ ಹೊತ್ತಿನಿಂದ ನಿಂತಿದ್ದಾನೆ ಅಂತ ಆಫೀಸಿನ ಹುಡುಗ ಹೇಳಿದ್ದ.

‘ಏನಪ್ಪಾ?’ ಅಂದೆ. ಒಬ್ಬ ಹುಡುಗೀನ ಪ್ರೀತಿಸಿದ್ದೇನೆ. ಅವಳೂ ಪ್ರೀತಿಸಿದ್ದಾಳೆ. ಆದರೆ ಅವಳ ಮನೆಯವರು ಒಪ್ಪುತ್ತಿಲ್ಲ. ‘ನೀವು’ ಒಪ್ಪಿಸಿದರೆ ಅವರು ಖಂಡಿತ ಒಪ್ಪುತ್ತಾರೆ. ನಂಗೋಸ್ಕರ ಸರ್‌... ಪ್ಲೀಸ್‌! ಅಂದ. ಇನ್ನು ಎರಡೇ ಎರಡು ನಿಮಿಷ ಅವನೆದುರಿಗೆ ನಿಂತಿದ್ದರೆ ಅವನ ವಿನಂತಿಗೆ ಕರಗಿ, ತಕ್ಷಣ ಕಾರಿನಲ್ಲಿ, ಕೂಡಿಸಿಕೊಂಡು ಆ ಹುಡುಗಿ ಮನೆಗೆ ಹೋಗಿ, ಅವನ ಪರವಾಗಿ ಕನ್ಯೆ ಕೇಳಿಯೇ ಬಿಡುತ್ತಿದ್ದೇನೇನೋ ಅನ್ನಿಸಿ, ಗಾಬರಿಯಾಗಿ ‘ನಾನು ಈ ನಡುವೆ ಅದನ್ನೆಲ್ಲ ಮಾಡ್ತಿಲ್ಲ ಕಣಯ್ಯ’ ಅಂತ ಕಡ್ಡಿ ಮುರಿದಂತೆ ಹೇಳಿ ಹೊರಟುಬಿಟ್ಟೆ.

ಮೊದಲಾದರೆ ಹೀಗಾಗುತ್ತಿರಲಿಲ್ಲ. ಅವರ ಮನೆಗೆ ಹೋಗಿ ಹುಡುಗೀನ ಒಪ್ಪಿಸಿ, ಅವಳನ್ನು ಕರೆತಂದು ಇವನಿಗೆ ಮದುವೆ ಮಾಡಿ, ಮನೆ ಮಾಡಿಕೊಳ್ಳಲು ಅಡ್ವಾನ್ಸು ಕೊಟ್ಟು, ಪಾತ್ರೆ ಪಡಗ ಕೊಡಿಸಿ, ಅವರ ಜಗಳ ಕದನ ಬಗೆ ಹರಿಸಿ- ಓ ರಾಮಾ! ನನ್ನ ಭಿಡೆಯ ಅಂತಿಮ ಪರಿಣಾಮವಾಗಿ ನಾನು ಮದುವೆ ಮಾಡಿಸಿದ ಹೆಣ್ಣು ಮಕ್ಕಳ ಬಾಣಂತಿತನಗಳನ್ನು ಕಡೆಗೆ ಲಲಿತೆ ಮಾಡಿದ್ದೂ ಅಗಿದೆ.

ಇಷ್ಟೆಲ್ಲ ಆಗಿ ಹುಡುಗ ಹುಡುಗಿಗೆ ಒಳ್ಳೆಯದಾಯಿತಾ? ಅವಳನ್ನು ಅವನು ಬಿಟ್ಟು ಹೋಗುತ್ತಾನೆ. ಅವಳ ತಂದೆ ತಾಯಿ ನನಗೆ ಹಿಡಿ ಶಾಪ ಹಾಕುತ್ತಾರೆ. ಇದು ಬೇಕಿತ್ತಾ- ಅಂತ ಎಲ್ಲರೂ ಛೀಮಾರಿ ಮಾಡುತ್ತಾರೆ. ‘ಯಾಕೆ ಬೇಕಿತ್ತು ನಂಗಿದು’ ಅಂತ ಯೋಚಿಸಿದರೆ, ಇದೇ ಉತ್ತರ. ‘ನಾನು ನೋ ಅನ್ನಬೇಕಾಗಿತ್ತು ಯಸ್‌ ಅಂದು ಬಿಟ್ಟೆ!’

ಯಾಕೆ ಯಸ್‌ ಅಂದೆ ಅಂದರೆ-

ಅದು ಮತ್ತೊಂದು ರಗಳೆ!

ಅನೇಕ ಸಲ ನಮ್ಮನ್ನು ನಾವು ಪರೋಪಕಾರಿಗಳು ಅಂದುಕೊಂಡು ಬಿಟ್ಟಿರುತ್ತೇವೆ. ನಮ್ಮ ಮಾತು ನಡೆಯುತ್ತೆ. ಅಂದುಕೊಂಡು ಬಿಟ್ಟಿರುವೆ. ‘ಅವನು ತುಂಬ ಉದಾರಿ, ದೊಡ್ಡ ಕೈ’ ಅಂತ ಯಾರೋ ಆರೋಪಿಸಿದ ಒಳ್ಳೆಯತನವನ್ನು ಹೌದು ಅಂದುಕೊಂಡುಬಿಟ್ಟಿರುತ್ತೇವೆ. ಒಳ್ಳೆಯವರಂತೆ, ರಕ್ಷಕರಂತೆ ಆಕ್ಟ್‌ ಮಾಡ್ತಾ ಮಾಡ್ತಾ ನಿಜವಾಗ್ಯೂ ಒಳ್ಳೆಯವರಾಗಿಬಿಟ್ಟಿರುತ್ತೇವೆ ಅಥವಾ ಹಾಗಂತ ಅಂದುಕೊಂಡು ಸಂಭ್ರಮಿಸುತ್ತಿರುತ್ತೇವೆ. ಇದೇ ಗುಂಗಿಗೆ ಬಿದ್ದು ಭಯಂಕರ ಈಗೋ ಬೆಳೆಸಿಕೊಂಡುಬಿಟ್ಟಿರುತ್ತೇವೆ.

ನಿಮ್ಮ ಮಗು ಚರಂಡಿಯಲ್ಲಿ ಬಿದ್ದ ಕಜ್ಜಿ ನಾಯಿಮರಿಯಾಂದನ್ನು ಎರಡೂ ಕೈಲಿ ಎತ್ತಿಕೊಂಡು ಬಂದು ‘ಇದನ್ನ ಸಾಕ್ತೀನಿ’ಅಂತ ಕೇಳಿದರೆ, ನಿಮ್ಮ ಮಗು ತುಂಬ ಕರುಣೆಯ ಮನಸ್ಸಿನದು ಅಂದುಕೊಳ್ಳಬೇಡಿ. ಅದಕ್ಕೆ ನಾಯಿಮರಿಯೆಂದರೆ ಇಷ್ಟ. ಹಾಗೆ ಎತ್ತಿಕೊಂಡು ಬಂದರೆ ನೀವು ‘ಎಷ್ಟು ಒಳ್ಳೇ ಮನಸ್ಸು ಮುಂಡೇದಕ್ಕೆ ಅಂಥ ಹೊಗಳುತ್ತೀರಿ’ ಒಮ್ಮೆ . ಹಾಗೆ ಹೊಗಳುವುದು ನೀವೇ. ಆಮೇಲೆ ಮಗು ನಾಯಿಮರಿಯನ್ನು ಬಿಟ್ಟು ಆಟಕ್ಕೆ ಹೋಗುತ್ತದೆ. ಸಾಕಬೇಕಾದವರೂ ನೀವೇ!

ಭಿಡೆಗೆ ಬಿದ್ದು., ಸಂಕೋಚಕ್ಕೆ ಬಿದ್ದು, ‘ನೋ’ ಅನ್ನಲಾರದೆ ‘ಯಸ್‌’ ಅಂದು ಉಪಕಾರ ಮಾಡಲು ಹೊರಟುಬಿಡುವವರ ಪೈಕಿ ಹೆಚ್ಚಿನವರು ಇಂಥದೇ ನಾಯಿಮರಿ ತಂದ ಮಗುವಿನ ಮನಸ್ಸಿನಂತಹವರು. ಖಂಡಿತವಾಗ್ಯೂ ಈ ಗೆಳೆಯ ಸಾಲ ಹಿಂತಿರುಗಿಸುವ ಸ್ಥಿತಿಯಲ್ಲಿ ಇಲ್ಲ ಅಂತ ಗೊತ್ತಿದ್ದರೂ ಅವನು ಕೇಳಿದಾಗ ‘ಆಯ್ತು ನಾಳೆ 50 ಸಾವಿರ ಕೊಡ್ತೀನಿ’ ಅಂದು ಬಿಟ್ಟಿರುತ್ತಾನೆ. ಅಂದ ತಪ್ಪಿಗೆ ತಾವು ಇನ್ನೊಂದು ಕಡೆಯಿಂದ ಸಾಲ ತಂದುಕೊಟ್ಟಿರುತ್ತಾರೆ. ಸಂಕೋಚಕ್ಕೆ , ದಾಕ್ಷಿಣ್ಯಕ್ಕೆ ಬಿದ್ದು ಬ್ಯಾಂಕಿನಲ್ಲಿ ಯಾರದೋ ಸಾಲಕ್ಕೆ ಷ್ಯೂರಿಟಿ ಹಾಕುವವರ ಫಜೀತಿಗಳಿವೆಯಲ್ಲ? ಅವರಿಗೆ ಸೈನು ಮಾಡಿದ ಕ್ಷಣದಿಂದಲೇ ನಿದ್ದೆ ಕಳೆದುಹೋಗಿರುತ್ತದೆ. ಮಾಡಿದ್ದು ವ್ಯರ್ಥ ಉಪಕಾರ ಅಂತ ಆಗಲೇ ಅನ್ನಿಸತೊಡಗುತ್ತದೆ. ಆಮೇಲೆ ಪಡಬಾರದ ಫಜೀತಿ ಪಡುತ್ತಾರೆ. ಆದರೆ ಬುದ್ಧಿ ಕಲಿಯುತ್ತಾರಾ? ನೋ ಛಾನ್ಸ್‌. ಪದೇ ಪದೇ ದಾಕ್ಷಿಣ್ಯಕ್ಕೆ ಬೀಳುತ್ತಲೇ ಇರುತ್ತಾರೆ.

ನನ್ನ ದಾಕ್ಷಿಣ್ಯಗಳು ತೀರ ಎಂಥವಿರುತ್ತವೆಂದರೆ, ಒಂದು ದೊಡ್ಡಗುಂಪಿನಲ್ಲಿ ಯಾರೋ ಮೊಬೈಲ್‌ ನಂಬರು ಕೇಳಿದರೆ ಇಲ್ಲ ವೆನ್ನಲಾಗದೆ ಹೇಳಿಬಿಡುತ್ತೇನೆ. ಸುತ್ತಲಿದ್ದ ಐವತ್ತು ಜನ ಅದನ್ನು ಬರೆದುಕೊಳ್ಳುತ್ತಾರೆ. ಸಂತೆಯಲ್ಲಿ ವಸ್ತ್ರ ಕಳೆದುಕೊಂಡವರ ಸ್ಥಿತಿ. ನಾಳೆ ಎದ್ದವನೇ ಮೊಬೈಲ್‌ ನಂಬರ್‌ ಬದಲಿಸಬೇಕು. ಗೆಳೆಯರಿಗೆಲ್ಲ ಫಜೀತಿ!

ಇದಕ್ಕೆ ನಾನು ಕಂಡುಕೊಂಡ ಪರಿಹಾರವೆಂದರೆ, ಭಾಷಣಕ್ಕೆ ಬನ್ನಿ ಅಂತ ಕರೆದಾಗ ‘ಡೈರಿ ನಿವೇದಿತಾ ಹತ್ತಿರ ಇರುತ್ತೆ. ಡೇಟು ಅವಳನ್ನು ಕೇಳಿಬಿಡಿ ಅನ್ನುವುದು’. ಪದೇ ಪದೇ ಹಣ ಕೇಳಿ ಹಿಂತಿರುಗಿಸದ ಗೆಳೆಯ ‘ಯಾಕೋ ನಿನ್ನನ್ನು ನೋಡಬೇಕೆನ್ನಿಸುತ್ತಿದೆ’ಅಂತ ಫೋನು ಮಾಡಿದಾಗ ಇನ್ನೆರಡು ತಿಂಗಳು ಸಾಧ್ಯವೇ ಇಲ್ಲ ಅನ್ನುವುದು. ಎದುರಿಗಿರುವವರು ನನ್ನ ಸಮಯ ಕೇಳುತ್ತಿದ್ದಾರಾ ಅಂತ ಗೊತ್ತಾದ ಕೂಡಲೆ ಮಾತು ಮುಗಿಸಿ ಎದ್ದೇ ಬಿಡುವುದು. ಯಾರವೋ ವ್ಯಕ್ತಿಗತ ಸಮಸ್ಯೆಗಳನ್ನು ನಾನೇ ಕೂತು ಬಗೆಹರಿಸುತ್ತೇನೆ ಎಂಬ ಭ್ರಮೆ ಬಿಟ್ಟುಹೋಗಿರುವುದರಿಂದ ಅಂಥವಕ್ಕೆ ಕೈ ಹಾಕದಿರುವುದು, ಇಡೀ ಕಾದಂಬರಿ ಓದಿ ಮುನ್ನುಡಿ ಬರೆಯಿರಿ ಅಂತ ಯಾರಾದರೂ ಕೇಳಿದರೆ, ‘ಕಾದಂಬರಿ ನನಗೆ ಕನಿಷ್ಠ ಎರಡು ವರ್ಷ ಬೇಕಾಗುತ್ತೆ. ಪರವಾಗಿಲ್ವ?’ ಅಂತ ಕೇಳುವುದು. ಪಾರ್ಟಿಗಳಿಂದ ಕಡ್ಡಾಯವಾಗಿ ದೂರವಿರುವುದು. ಮೊಬೈಲನ್ನು ಸದಾ ಆಫ್‌ ಮಾಡಿಡುವುದು ಇವೇ ಮುಂತಾದ ದೈವಿಕ ವಿಧಾನಗಳನ್ನು ಕಲಿತಿದ್ದೇನೆ. ಫಾರ್‌ ಎ ಛೇಂಚ್‌ ಪಾಲಿಸುತ್ತಲೂ ಇದ್ದೇನೆ.

ಏಕೆಂದರೆ, ನನಗೆ ಸಹಾಯ ಮಾಡುವುದೇ ಬೇರೆ ಮತ್ತು ದಾಕ್ಷಿಣ್ಯಕ್ಕೆ ಬಿದ್ದು ಒಲ್ಲದ ಕೆಲಸವನ್ನು ಮಾಡುವುದೇ ಬೇರೆ ಎಂಬುದು ತುಂಬ ಚೆನ್ನಾಗಿ ಅರ್ಥವಾಗಿದೆ . ಸ್ವಲ್ಪ ಮಟ್ಟಿಗಿನ ಸಾರ್ವಜನಿಕ ಜೀವನದಲ್ಲಿ ಇದ್ದವರಾದರೆ, ಇದು ನಿಮಗೂ ಅರ್ಥವಾಗಿಬಿಡುತ್ತದೆ. ಮೊನ್ನೆ ಸೀತಾರಾಂ ಯಾರ ಮೇಲೋ ರೇಗುತ್ತಿದ್ದುದನ್ನು ಗಮನಿಸಿದೆ.

‘ಹಾಗೆಲ್ಲ ಮೊಬೈಲ್‌ ನಂಬರು ಕೇಳಬಾರದು!’ ಅಂತಿದ್ದರು.

ಹೌದಲ್ಲಾ ಅನ್ನಿಸಿ. ಈಗ ಲ್ಯಾಂಡ್‌ ಫೋನ್‌ ನಂಬರು ಹೇಳತೊಡಗಿದ್ದೇನೆ. ‘ನೋ’ ಅನ್ನಲಿಕ್ಕಾಗದವನಿಗೆ ಲ್ಯಾಂಡ್‌ ಲೈನಿನ ನಂಬರಾದರೂ ಜ್ಞಾಪಕವಿರಬೇಕು ಎಂಬುದು- ಹೊಸ ಗಾದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X