ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡಿನಾ? ಸ್ಟಾರ್ಟ್.. 1,2,3

By Staff
|
Google Oneindia Kannada News

ಬರ್ತ್ ಡೇ ಗೆ ಬಾಕಿ ಉಳಿದ 180 ದಿನಗಳೊಳಗಾಗಿ ಇಂಥದ್ದನ್ನು ಸಾಧಿಸಿ ತೋರಿಸ್ತೀನ್ನೋಡು ಅಂತ ಎಲ್ಲರಿಗೂ ಹೇಳಬೇಡಿ. ಅವರಿಗೊಂದು surprise ಕಾದಿರಲಿ. ತೀರ ಅವಶ್ಯಕವೆನ್ನಿಸಿದರೆ ಯಾರಾದರೂ ಒಬ್ಬ ಆತ್ಮೀಯರೊಂದಿಗೆ ನಿಮ್ಮ ಕನಸು ಹಂಚಿಕೊಳ್ಳಿ. ಅವರೂ ಆಸಕ್ತಿ ತೋರಿಸದಿದ್ದರೆ, ಗೋಲಿಮಾರ್. ನಿಮ್ಮ ಬರ್ತ್ ಡೇ ಕಡೆಗೆ ನೀವೇ ನಡೆಯಬೇಕು. ಒಬ್ಬಂಟಿಯಾಗಿ ಅದರೂ ಸರಿ. Ready.. start!

  • ರವಿ ಬೆಳಗೆರೆ

Time bound task! ನಿಮಗೀಗ ಎಷ್ಟು ವರ್ಷವೋ ಗೊತ್ತಿಲ್ಲ. ಒಂದಷ್ಟು ವರ್ಷ ಆಗಿರುತ್ತೆ ಬಿಡಿ. ಆದರೆ ಬರಲಿರುವ ಬರ್ತ್ ಡೇಗೆ ನಿಮಗೆ ಎಷ್ಟು ವರ್ಷಗಳಾಗಲಿವೆ? ನಲವತ್ತಾ? ಸರಿ. ನಿಮ್ಮ ಬರ್ತ್ ಡೇಗೆ ಇನ್ನುಎಷ್ಟು ಕಾಲವಿದೆ. 'ನಂಗೆ ನಲವತ್ತಾಗಲಿಕ್ಕೆ ಇನ್ನು ಆರು ತಿಂಗಳು ಬಾಕಿ'ಅಂತ ನೀವು ಉತ್ತರಿಸಿದರೆ ನೀವು ಕೊಂಚ ದಡ್ಡರು.
'ನಲವತ್ತಾಗಲಿಕ್ಕೆ ನನಗಿನ್ನು ನೂರ ಎಂಬತ್ತೇ ದಿನ ಬಾಕಿ!'ಅಂತ ಉತ್ತರಿಸಿದರೆ your are sensitive. 'ಇನ್ನೂ ಆರು ತಿಂಗಳಿದೆ'ಅಂದುಕೊಂಡರೆ ಅದೆಲ್ಲೋ ದೂರದ ಮಾತು ಅನಿಸುತ್ತದೆ. ಆದರೆ 'ಉಳಿದಿರುವುದು ಕೇವಲ 180 ದಿನ 'ಅಂದುಕೊಂಡಾಗ ಮನಸ್ಸು ಕೌಂಟಿಂಗಿಗೆ ಬೀಳುತ್ತದೆ.

ಒಮ್ಮೆ ಅಂದುಕೊಂಡು ಟ್ರೈ ಮಾಡಿ. ಎದುರಿಗೊಂದು ಪುಟ್ಟ writing ಬೋರ್ಡ್ ತಂದು ಹಾಕಿಕೊಂಡು ಪ್ರತಿನಿತ್ಯ ಅಳಿಸುತ್ತ, ಬರೆಯುತ್ತ ನಲವತ್ತು ತುಂಬಲಿಕ್ಕೆ ಇನ್ನಷ್ಟು ದಿನ ಉಳಿದವು ಅಂತ ಲೆಕ್ಕ ಹಾಕುತ್ತ ಹೋಗಿ. ನಿಮಗೇ ಸಣ್ಣಗೆ ದುಗುಡ ಶುರುವಾಗುತ್ತೆ. ಅಥವಾ ಅದು ಹುರುಪೂ ತುಂಬಬಹುದು.

'ಇನ್ನೇನು, ಕೇವಲ 179ದಿನ ಉಳಿದವು'ಅನ್ನಿಸಿದಾಗ ಬೆಳಗಿನ ಜಾವದ ಸಕ್ಕರೆ ನಿದ್ರೆ ಎಳೆಯುತ್ತಿದ್ದರೂ ತಲೆ ಕೊಡವಿ ಕೊಂಡು ಎದ್ದು ಕೂಡುತ್ತೀರಿ. 'ಆರು ತಿಂಗಳಲ್ಲಿ ಹೆಂಗೆ ಬಾಡಿ ಬಿಲ್ಡ್ ಮಾಡಿ ತೋರಿಸ್ತೀನಿ ನೋಡು'ಅಂದು ಕೊಂಡಿರುತ್ತೇವಾದರೂ, ಬರ್ತ್ ಡೇ ಇನ್ನು ಆರು ವಾರಗಳಿರುವಾಗ ಹೊಟ್ಟೆ ಬಿಟ್ಟುಕೊಂಡು ಓಡಾಡುತ್ತಿರುತ್ತೇವೆ. ಆದರೆ 180 ದಿನಗಳೊಳಗಾಗಿ 1800 ಪುಟ(ದಿನಕ್ಕೆ ಹತ್ತರಂತೆ) ಬರೆದು ಓದುಗರ ಕೈಗಿಡುತ್ತೇವೆ ಅಂದುಕೊಂಡ ನನ್ನಂಥವನು ಕೊನೇ ಆರು ವಾರಗಳಲ್ಲಿ ಏನೂ ಬರೆಯದೇ ಕಂಗಾಲಾಗಿ ಹೋಗುತ್ತೇನೆ. ಹಾಗಾಗಬಾರದೆಂದೇ, 170ದಿನ ಬಾಕಿ ಉಳಿದಿರುವಾಗ, ಕೈಯಲ್ಲಿ ನೂರು ಪುಟಗಳ ಸರಕು ಸಿದ್ಧವಾಗಿದೆಯಾ ಅಂತ ನೋಡಿಕೊಳ್ಳಲಿಕ್ಕಾಗಿ ಈ ವ್ಯವಸ್ಥೆ ಮಾಡಿಕೊಂಡಿರುತ್ತೇನೆ.

ಮನೆಯಲ್ಲಿ ಹೀಗೆ ಬೋರ್ಡ್ ನೇತಾಡಿಸಿಕೊಂಡು ಇರುವುದು ಕಷ್ಟವೆನ್ನಿಸಿದರೆ, ನಿಮ್ಮ ಮೊಬೈಲ್ ನ ಆಪ್ಷನ್ ಗೆ ಹೋಗಿ ಕ್ಯಾಲೆಂಡರ್ ಓಪನ್ ಮಾಡಿ. ನಿಮ್ಮ ಬರ್ತ್ ಡೇ ಗೆ ಇವತ್ತಿನಿಂದ 180 ದಿನಗಳಿದ್ದರೆ, ಇವತ್ತಿನ ದಿನಾಂಕಕ್ಕೆ ಸರಿಯಾಗಿ 180 ಅಂತ ಲೋಡ್ ಮಾಡಿಕೊಳ್ಳಿ. ನಾಳಿನ ದಿನಾಂಕಕ್ಕೆ 179, ನಾಡಿದ್ದಕ್ಕೆ 178 -ಹೀಗೆ ರಿಸೀಡ್ ಆಗುತ್ತಾ ನಿಮ್ಮ ಬರ್ತ್ ಡೇ ಹೊತ್ತಿಗೆ, ಅವತ್ತಿಗೆ ಸರಿಯಾಗಿ 0 ಬರುವಂತೆ ಫೀಡ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್ ಪ್ರತೀ ಬೆಳಗ್ಗೆ 'ಇನ್ನು ಇಷ್ಟೇ ದಿನ ಉಳಿದದ್ದು'ಅಂತ ಎಚ್ಚರಿಸುತ್ತ ಹೋಗುತ್ತದೆ. ಕೊನೆಯ ದಿನದ ಹೊತ್ತಿಗೆ ನಿಮ್ಮ ಸಾಧನೆಯ ಸಿವುಡು ನಿಮ್ಮ ಕೈಲಿರುತ್ತದೆ.

ಆರು ತಿಂಗಳಲ್ಲಿ ವಾಯೊಲಿನ್ ಕಲಿತೀನಿ, ಬಾಡಿ ಬಿಲ್ಡ್ ಮಾಡ್ತೀನಿ -ಅಂತೆಲ್ಲ ಅಂದುಕೊಳ್ಳುವುದು ಒಂಥರಾ ಪಿಯುಸಿ ಫೇಲಾದ ಹುಡುಗ ಐಎಎಸ್ ಓದ್ತೀನಿ ಅಂತ ಶಪಥ ಮಾಡಿದ ಹಾಗೆ. ವಾಯೊಲಿನ್ ಕಲಿತದ್ದು, ಬಾಡಿ ಬಿಲ್ಡ್ ಮಾಡಿದ್ದು -ಎಣಿಸಿದರೆ, ಅಳೆದರೆ ಲೆಕ್ಕಕ್ಕೆ ಸಿಗುವಂಥದ್ದಲ್ಲ.ಸಾಮಾನ್ಯವಾಗಿ ಇಂಥ time bound ಚಾಲೆಂಜುಗಳನ್ನು ನಮಗೆ ನಾವೇ ಹಾಕಿಕೊಳ್ಳುವಾಗ ಎಣಿಕೆಗೆ ಸಿಗುವಂಥ taskಗಳನ್ನೇ ಹಾಕಿಕೊಳ್ಳಬೇಕು. ನನ್ನ ಮಟ್ಟಿಗೆ ಅದು ತುಂಬ ಸುಲಭ.

'ದಿನಕ್ಕಿಷ್ಟು'ಎಂಬ ಲೆಕ್ಕದಲ್ಲಿ ಆರು ತಿಂಗಳಿಗಿಷ್ಟು ಪುಟ ಬರೀತೀನಿ ಅಂತ ಹಾಕಿಕೊಳ್ಳಬಹುದು. ನಿತ್ಯದ ಜಂಜಡ, ಪತ್ರಿಕೆಗೆ ಬರೆಯಬೇಕಾದ ಬರವಣಿಗೆ, ಆಡ್ಮಿನಿಸ್ಟ್ರೇಷನ್ನು, ಸಿನಿಮಾ, ಸಭೆ, ಕೋರ್ಟ್ , ಹಾಳುಮೂಳುಗಳ ನಡುವೆ 'ದಿನಕ್ಕಿಷ್ಟು'ಅಂತ extra ಪುಟ ಬರೆಯಬೇಕು. extra ಬೆಳೆಯಬೇಕು. ಬಾಯಿಗೆ ಹಿತ ನಾಲಗೆಗೆ ರುಚಿ ಅಂತ extra ತಿಂತಾ ತಿಂತಾ ನಾವು extra ಬೆಳೆದುಬಿಟ್ಟಿರುತ್ತೇವೆ, ಗೊತ್ತೇ ಆಗಿರುವುದಿಲ್ಲ. ದಿನಕ್ಕೆ ಕಾಲು ಕೇಜಿ ತೂಕ ಇಳಿಸುತ್ತೇನೆ ಅಂತ ಹೊರಟು ನೋಡಿ? ಎಷ್ಟು extra ವ್ಯಾಯಾಮ ಮಾಡಬೇಕಾಗುತ್ತದೋ!

ಮೊದಮೊದಲಿಗೆ ಬರ್ತ್ ಡೇ ಹೊತ್ತಿಗೆ ಇಷ್ಟೆಲ್ಲ ಮಾಡಲಾದೀತಾ ಅನ್ನಿಸಿ, ಮೊದಲ ದಿನವೇ ಉಸ್ಸೆನ್ನಿಸಿ, ಯಾವನಿಗೆ ಬೇಕು ಟಾಸ್ಕ್ ಅನ್ನಿಸುವುದು ಹೌದಾದರೂ, ಕೊಂಚ ಹಿತಾಭ್ಯಾಸ(!)ಗಳನ್ನು ಹಿಡಿತದಲ್ಲಿಟ್ಟುಕೊಂಡು ಕ್ಯಾಲೆಂಡರಿನೊಂದಿಗೆ ರೊಚ್ಚಿಗೆ ಬಿದ್ದವರಂತೆ ಸ್ಪರ್ಧೆಗಿಳಿದರೆ ಅದರ ಉಲ್ಲಾಸವೇ ಬೇರೆ.
ಆದಷ್ಟು ಈ time bound ಟಾಸ್ಕುಗಳು ಸುಲಭವಾಗಿ ಹೆಚ್ಚಿನ ಪ್ರಯಾಸವಿಲ್ಲದೆ ಅಛೀವ್ ಮಾಡುವಂಥವನ್ನೇ ನೋಡಿ ಆಯ್ದುಕೊಳ್ಳಿ. ತೂಕವಿಳಿಸೋದು, ಇಷ್ಟು ಪುಟ ಓದುತ್ತೇನೆ ಅಂದುಕೊಳ್ಳೋದು, ಇಷ್ಟು ನಿಮಿಷಗಳಲ್ಲಿ ಇಷ್ಟು ಕಿಲೋ ಮೀಟರ್ ನಡೆಯುತ್ತೇನೆ ಅಂದುಕೊಳ್ಳೋದು ಇಂಥವು easy ಮತ್ತು ಆರೋಗ್ಯಕಾರಿ. ಸುಲಭಕ್ಕೆ ಎಣಿಕೆಗೂ ಸಿಗುತ್ತವೆ. 'ನೂರ ಮೂವತ್ತು ದಿನಗಳೊಳಗಾಗಿ ಅವಳ ಮನಸ್ಸು ಗೆಲ್ಲುತ್ತೇನೆ'ಅಂತ ಪ್ರಾಜೆಕ್ಟು ಹಾಕಿಕೊಂಡು ಬಿಟ್ಟರೆ ಮುಗಿದೇ ಹೋಯ್ತು. ಆ ಪುಣ್ಯಾತಗಿತ್ತಿ 129ನೇ ದಿನ 'ಬ್ಯಾಡ ಹೋಗ್'ಅಂದು ಬಿಟ್ಟರೆ ಬರ್ತ್ ಡೇ ಪೂರ್ತಿ ಗೋಳೇ.

ಹೀಗೆ ದಿನಗಳ ಲೆಕ್ಕದಲ್ಲಿ ಗುರಿ ತಲುಪಲು ಹೊರಡುವ ಮನುಷ್ಯನಿಗೆ ರಾಮಕೃಷ್ಣ ಪರಮಹಂಸರಿಗಿರುವಂಥ ಸಿನ್ಸಿಯಾರಿಟಿ ಇರಬೇಕು. ಪರಮಹಂಸರು ಪ್ರತೀ ರಾತ್ರಿ ಮಲಗುವ ಮುನ್ನ 'ಇವತ್ತೂ ದೇವರ ದರ್ಶನವಾಗಲಿಲ್ಲ' ಅಂತ ಹಣೆ ಜಪ್ಪಿಕೊಂಡು ಅಳುತ್ತಿದ್ದರಂತೆ. ಅಂದುಕೊಂಡ ಇವತ್ತಿನ ಟಾಸ್ಕು ಮುಗಿಸಲಾಗಲಿಲ್ಲ ಅಂತ ಮಲಗುವಾಗೊಮ್ಮೆ ನೆನಪಾದರೂ ಸಾಕು. ಮೂರನೆಯ ದಿನದ ಒಂದು ಬೇಕಾರ್ ಪಾರ್ಟ್ ಕ್ಯಾನ್ಸಲ್ ಮಾಡಿ,ಇವತ್ತಿನದೂ ಕೋಟಾ ಮುಗಿಸಿ ಮುಂದಕ್ಕೆ ನಡೆದಿರುತ್ತೇವೆ.

ಇಂಥ time bound ಹಟಗಳ ಬಹುದೊಡ್ಡ ಪ್ರಯೋಜನವೆಂದರೆ ತಿಂಗಳುಗಳನ್ನು ನೀವು ಹೇಗೆ ದಿನಗಳಿಗೆ ಕನ್ವರ್ಟ್ ಮಾಡಿಕೊಂಡಿರೋ, ಹಾಗೆಯೇ ನಿಮ್ಮ ಮನಸು ದಿನವನ್ನು ಗಂಟೆಗಳಿಗೆ ಕನ್ವರ್ಟ್ ಮಾಡಿಕೊಳ್ಳುತ್ತದೆ. ಗಡಿಯಾರದಿಂದ ಒಂದಷ್ಟು ಗಂಟೆ ಕದ್ದು ನನ್ನ ಕೆಲಸಕ್ಕೆ ಎತ್ತಿಟ್ಟುಕೊಳ್ಳಲು ಸಾಧ್ಯವಾ ಅಂತ ಜಾಣತನಕ್ಕೆ ಬೀಳುತ್ತದೆ. ಸುಳ್ಳೇ ಗೆಳೆಯರೊಂದಿಗೆ ನಿಂತು ಫಿಜೂಲು ಹರಟೆ ಹೊಡೆದು ಕಳೆಯುವ ಎರಡು ಗಂಟೆಗಳು ಇವತ್ತಿನಿಂದ ಎಷ್ಟೊಂದು ಅಮೂಲ್ಯ ಅನ್ನಿಸಿ -ಥಟ್ಟನೆ ಮನೆಗೆ ಬಂದು ಕೆಲಸಕ್ಕೆ ಕುಳಿತುಬಿಡುವಂತೆ ಮಾಡುತ್ತೇವೆ.

ಬರ್ತ್ ಡೇ ಗೆ ಬಾಕಿ ಉಳಿದ 180 ದಿನಗಳೊಳಗಾಗಿ ಇಂಥದ್ದನ್ನು ಸಾಧಿಸಿ ತೋರಿಸ್ತೀನ್ನೋಡು ಅಂತ ಎಲ್ಲರಿಗೂ ಹೇಳಬೇಡಿ. ಅವರಿಗೊಂದು surprise ಕಾದಿರಲಿ. ತೀರ ಅವಶ್ಯಕವೆನ್ನಿಸಿದರೆ ಯಾರಾದರೂ ಒಬ್ಬ ಆತ್ಮೀಯರೊಂದಿಗೆ ನಿಮ್ಮ ಕನಸು ಹಂಚಿಕೊಳ್ಳಿ. ಅವರೂ ಆಸಕ್ತಿ ತೋರಿಸದಿದ್ದರೆ, ಗೋಲಿಮಾರ್.

ನಿಮ್ಮ ಬರ್ತ್ ಡೇ ಕಡೆಗೆ ನೀವೇ ನಡೆಯಬೇಕು. ಒಬ್ಬಂಟಿಯಾಗಿ ಅದರೂ ಸರಿ. start!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X