ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುರೂಪ ರಾಕ್ಷಸಿಯೇ, ನಿನಗೊಂದು ಪ್ರೀತಿಯ ಗುಡ್‌ ಮಾರ್ನಿಂಗ್‌!

By Staff
|
Google Oneindia Kannada News


‘ಹಾಯ್‌ ಬೆಂಗಳೂರ್‌!’ ಓದುಗರಿಗೆ ‘ಲವ್‌ಲವಿಕೆ’ ಗೊತ್ತು. ಮಾತ್ರವಲ್ಲ, ಈ ಅಂಕಣ ಒಂದು ವಾರ ಮಿಸ್‌ ಆದರೆ, ಬೆಳಗೆರೆ ಜೊತೆ ಜಗಳವಾಡುವುದೂ ಗೊತ್ತು! ‘ಲವ್‌ಲವಿಕೆ’ ಜನಪ್ರಿಯತೆ ಯಾವ ಮಟ್ಟಕ್ಕಿದೆ ಎಂದರೆ, ಇತರೆ ಪತ್ರಿಕೆಗಳು ಬೇರೆ ಬೇರೆ ಹೆಸರಿನಿಂದ ಇಂಥದ್ದೇ ಬರಹಗಳನ್ನು ಪ್ರಕಟಿಸುತ್ತಿವೆ! ‘ಸೂರ್ಯಶಿಕಾರಿ’ಯಲ್ಲಿನ ಏಕತಾನತೆ ತಪ್ಪಿಸಲು ಈ ವಾರ ‘ಲವ್‌ಲವಿಕೆ’ ನಿಮ್ಮ ಮುಂದೆ..

Oh My dear Horrible Beauty.. Lovely Good Morning for you..ನನ್ನ ಮನಸೇ,

ನಿನ್ನ ಕೆನ್ನೆಗಳಿಗೆ ನನ್ನ ತುಟಿ ಕಳಿಸಿದ ಗುಡ್‌ ಮಾರ್ನಿಂಗ್‌ ಮೆಸೇಜಿನ ಹೆಸರು ಐ ಲವ್‌ ಯೂ! ಈ ಹೊತ್ತಿಗೆ ತಲುಪಿರಬೇಕು. ನಾಚಿಕೊಂಡಾಗ ಅದ್ಭುತವಾಗಿ ಕಾಣುತ್ತೀ. ನಿನ್ನ ಇನ್ನೊಂದು ಹೆಸರೇ ಮಧು ಭಾಷಿಣಿ.

ಈ ಹೊತ್ತಿಗೆ ಕೆಲಸಕ್ಕೆ ಹೊರಡಲು ರೆಡಿಯಾಗುತ್ತಿರುತ್ತೀ ಅಂತ ಗೊತ್ತು. ಹಾಡು ಕೇಳುತ್ತ ಶುಭ್ರ ಸ್ನಾನ ಮಾಡಿದವಳ ಮೈಯಿಂದ ಪೃಥ್ವಿಗಂಧ. ಮೊದಲ ಮಳೆಯ ತುಂತುರಿಗೆ ತೊಯ್ದ ಭೂಮಿಯ ಘಮ ನಿನ್ನದು. ಕಾಟನ್‌ ಸೀರೆಯ ನೆರಿಗೆಗಳನ್ನು ಬೆರಳಂಚಿನಲ್ಲೇ ಗದರಿಸಿ ಮಡಚಿಕ್ಕುವಾಗ ನನ್ನ ನೆನಪಾಗಲಿ : ನಿನ್ನ ಹೊಕ್ಕುಳ ಹೂವಿನಲ್ಲಿ ನಗೆಯಾಗಿ ಅರಳಿದವನು ನಾನು.

ರವಿಕೆಯ ಬಿಗಿಯನ್ನೂ ಧಿಕ್ಕರಿಸಿ ಇಣುಕುವ ಬೆನ್ನ ಮೇಲಿನ ನಿನ್ನ ಕಡುಗಪ್ಪು ಮಚ್ಚೆಗೊಂದು ಬೆಚ್ಚನೆಯ ಮುತ್ತು : ಹ್ಯಾವ್‌ ಎ ಗ್ರೇಟ್‌ ರೊಮ್ಯಾಂಟಿಕ್‌ ಡೇ!

ಮಾಗಿದ ಚಳಿಯಲ್ಲಿ ಮೈ ಬಿಸಿಯೇಕೋ

ಇದೆಲ್ಲ ನನ್ನ ಬದುಕಿನಲ್ಲಿ ಘಟಿಸಬಹುದು ಅಂದುಕೊಂಡೇ ಇರಲಿಲ್ಲ. ಬಾಲ್ಯ ಮುಗಿದು ಹೋದ ಘಟಿಸಬಹುದು ಅಂದುಕೊಂಡೇ ಇರಲಿಲ್ಲ. ಬಾಲ್ಯ ಮುಗಿದು ಹೋದ ಎಷ್ಟೋ ವರ್ಷಗಳ ನಂತರವೂ ಮಗುವಿನಂತೆ, ಗಲ್ಲ ಒರಟಾದ ಹುಡುಗನಂತೆ ಬದುಕಿದವನು ನಾನು. ಅಲ್ಲೆಲ್ಲೋ ಹುಡುಗಿಯರ ಹಿಂಡು ಕಂಡರೆ ಇಲ್ಲಿಂದಲೇ ನಾನು ಜಾಗ ಖಾಲಿ.

ಸಿತಾರ್‌ ಕ್ಲಾಸಿನ ಪದ್ಮ ಸುಮ್ಮನೆ ದಿಟ್ಟಿಸುತ್ತಿದ್ದರೆ, ಕುಳಿದಲ್ಲೇ ಕಂಗಾಲಾಗಿ ಬಿಡುತ್ತಿದ್ದೆ. ಗೆಳತಿಯರು ಅಂತ ಒಬ್ಬಿಬ್ಬರಿದ್ದರು. ಅವರು ನನಗಿಂತ ನಿರುಪದ್ರವಿಗಳು. ಅವರ ಪೈಕಿ ಒಬ್ಬಳು ಹುಟ್ತಾನೆ ಹೊಟ್ಟೆನೋವಿನಿಂದ ನರಳೋಳ ಥರಾ ಓಡಾಡ್ತಿದ್ಲು. ಇನ್ನೊಬ್ಬಳಿಗೆ ಗೂರ್ಲು. ಹತ್ತಿರಕ್ಕೆ ಬಂದರೆ ಸಾಕು, ಅವಳ ಹೊಟ್ಟೇಲಿ ಯಾರೋ ಕೂತು ಪಿಟೀಲು ಕುಯ್ತಿದಾರೆ ಅನ್ನೋದು.

ನಿಜ ಹೇಳಬೇಕು ಅಂದ್ರೆ love was never a priority. ಆದರೆ ಚಿನ್ನಾ, ತಿಳಿ ನೀಲಿ ಜೀನ್ಸ್‌ನ ಮೇಲೆ ಅವತ್ತು ನೀನು ಯಾವ ಟಾಪು ಹಾಕ್ಕೊಂಡಿದ್ಯೋ ಗೊತ್ತಾಗಲಿಲ್ಲ ; ಅದರ ಮೇಲೆ ಹಾಕ್ಕೊಂಡಿದ್ದ ಬ್ಲಡ್‌ರೆಡ್‌ ಸ್ವೆಟ್ಟರಿನ ಮೇಲಾಣೆ : ನೋಡಿದ ದಿನವೇ ನಾನು ಫಿದಾ! ಹತ್ತಿರಕ್ಕೆ ಬಂದು ನಿನ್ನ ಹೆಸರು ಕೇಳಿಯೇ ಬಿಡಬೇಕು ಅನ್ನಿಸಿತ್ತು. ಆಷ್ಟರಲ್ಲಿ ನಿನ್ನನ್ನ ಯಾರೋ ಜೋರಾಗಿ ಕರೆದರು, ಹೆಸರಿಟ್ಟು.

ಪಾಗಲ್‌ ಮನವಾ ಸೋಚ್‌ ಮೇ ಡೂಬಾ
ಸಪನೋಂಕಾ ಸನ್ಸಾರ್‌ ಲಿಯೇ... ಕೌನ್‌ಆಯಾ..?

ಹಾಗೆ ನೀನು ಎಂಟ್ರಿ ಕೊಟ್ಟ ಮೇಲೆ ನಿನ್ನ ಪ್ರೀತಿಯಿಂದ, ಆಕರ್ಷಣೆಯಿಂದ, ಮೋಹದಿಂದ, ಆಸೆಯಿಂದ ಎಸ್ಕೇಪ್‌ ಆಗೋ ದಾರಿಗಳೆಲ್ಲ ಮುಚ್ಚಿ ಹೋದವು. ಸ್ವಲ್ಪ ದಿನ ಕಾದೆ, ಇದು ಬರೀ ಮೋಹವೇನೋ? ಎರಡು ದಿನ ಕಾಡಿ ಸುಮ್ಮನಾಗುತ್ತೇನೋ ಅಂತ ನೋಡಿದೆ. ಆದರೆ ಮನಸು ರಚ್ಚೆ ಹಿಡಿದಿತ್ತು. ಹಾಗೂ ಹೀಗೂ ಮಾಡಿ ಐದು ದಿನ ಸುಮ್ಮನಿದ್ದವನು ಆರನೆಯ ಸಾಯಂಕಾಲದ ಹೊತ್ತಿಗೆ ನಿನ್ನ ನಂಬರು ಸಂಪಾದಿಸಿ, ಫೋನು ಮಾಡಿದರೆ ಎರಡನೇ ರಿಂಗ್‌ಗೇ ಫೋನೆತ್ತಿಕೊಂಡವಳು ನೀನು! ‘ನೀವು ಫೋನ್‌ ಮಾಡೇ ಮಾಡ್ತೀರಿ ಅಂದ್ಕೊಂಡಿರಲಿಲ್ಲ’ ಅಂದೆ. ಒಂದು ತುಂಬಿದ ಮೋಡ ಹೆಗಲು ತಾಕಿದಂತಾಯಿತು.

ಲಗೆ ಅಬ್ರ್‌ ಸಾ
ಏ ಬದನ್‌ ತೆರಾ...

ನನಗೆ ಬೆಳಗಿನ ಜಾವಗಳನ್ನು ಮರೆಯಲು ಬಹುಶಋ ಈ ಜನ್ಮದಲ್ಲಂದೂ ಸಾಧ್ಯವಿಲ್ಲ. ನೀನು ಟ್ರ್ಯಾಕ್‌ ಪ್ಯಾಂಟ್‌ ಹಾಕಿ, ಮೇಲೊಂದು ಫುಲ್‌ ಓವರ್‌ ಹಾಕಿಕೊಂಡು, ಬೆಳ್ಳಿಯಲ್ಲಿ ತೊಯ್ಡ ಮಲ್ಲಿಗೆಯಂಥ ಷೂ ಹಾಕಿಕೊಂಡು, ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಮನೆಯಿಂದ ಹೊರಬೀಳುತ್ತಿದ್ದೆ.

ಬೀದಿಯ ತುದಿಯಲ್ಲಿ ನಿಂತು ನಿನ್ನನ್ನು ಕಣ್ಣು ತುಂಬಿಕೊಳ್ಳುವುದಕ್ಕಾಗಿ ಕಾಯುತ್ತಿದ್ದುದು ನಾನು ಮತ್ತು ಗುರುಗುಡುವ ನನ್ನ ಮೊಬೈಕು. ಎಷ್ಟು ದೂರಕ್ಕೆ drive ಹೋಗ್ತಾ ಇದ್ವಿ ಅಲ್ವಾ? ಬೆನ್ನಲ್ಲಿ ಕುಳಿತವಳ ನೆನಪಿಗೆ ಯಾವುದೋ ಹಾಡು ನಿಲುಕಿರುತ್ತಿತ್ತು. ನನ್ನ ಮನಸಿನಲ್ಲಿ ಸೂರ್ಯ ಸಮ್ಮುಖದ ನವಿರುಗನಸು. ಅಂಥ ಎಷ್ಟೊಂದು ಸೂರ್ಯೋದಯಗಳಿದ್ದವಲ್ಲ ನಮ್ಮ ಪಾಲಿಗೆ?

ಬೈಕು ನಿಲ್ಲಿಸಿ ಸುಮ್ಮನೆ ಕಾಡೊಳಕ್ಕೆ ನಡೆದು ಹೋಗಿ ಬಿಡುವ ಮೋದ. ತಬ್ಬಿದ ಹೆಗಲುಗಳಿಗೆ, ಬೆರಳ ಸೌಖ್ಯದ ಸ್ಪರ್ಶಕ್ಕೆ, ಕಣ್ಣುಗಳಿಗೆ ದಕ್ಕಿದ ಸುಖದ ಭರವಸೆಗಳಿಗೆ ಮಾತಿನ ಹಂಗೇ ಇರಲಿಲ್ಲವಲ್ಲ? ಹಾಗೆ ನೀನು ಮುಂಜಾವಿನಿಂದ ಮುಂಜಾವಿಗೆ, ಕ್ಷಣದಿಂದ ಕ್ಷಣಕ್ಕೆ ನನ್ನವಳಾಗುತ್ತ ಹೋದೆ. ನಮ್ಮ ಮಧುರ ಮಿಲನಕ್ಕೆ ಸಾಕ್ಷಿಯಾದದ್ದು ನಿತ್ಯ ಹಸುರಿನ ಕಾಡು.

ಗಿಡಗಂಟೆಗಳ ಕೊರಳೊಳಗಿಂದ
ಹಕ್ಕಿಗಳ ಹಾಡೂ ಹೊಮ್ಮಿತೂ...

ಮತ್ತೆ ಮತ್ತೆ ಅದೇ ಸುಖದ ನೆನಪು. ಕಾಡು ಮರದ ಬೊಡ್ಡೆಗೆ ಆತು ನಿಂತು ನೀನು ಪಿಸುಗುಟ್ಟಿದ್ದು ನೆನಪಿದೆ : ‘ ಇದೆಲ್ಲ ಸಂತೋಷ ನಂಗ್‌ ನಂಗೇ ಬೇಕು.. ನಂಗೆ ಮಾತ್ರ!’ ಅಂದದ್ದು ನೆನಪಿದೆ. ಆಗ ನಿನ್ನ ಕಣ್ಣುಗಳಲ್ಲಿ ಸುಖದ ಕೆನೆಯಿತ್ತು. ನನ್ನ ತಬ್ಬುಗೆಯಲ್ಲಿ ತೊಯ್ದು ಹೋದವಳ ದನಿಯಲ್ಲಿ ವೀಣೆಯ ಸುಖದ ನಿಟ್ಟುಸಿರು.

ಚಿನ್ನ, ನೀನು ಕೊಟ್ಟ ಅದೆಲ್ಲ ಸಂತಸಕ್ಕೆ ಋಣಿ. ಟೇಬಲ್ಲಿನ ಮೇಲೆ ಅಮ್ಮ ತಂದಿಟ್ಟ ಕಾಫಿ ತಣ್ಣಗಾಗಿದೆ. ಆಫೀಸಿಗೆ ಹೊರಡುವ ಘಳಿಗೆ ಸಮೀಪಿಸುತ್ತಿದೆ. ಮನಸು ನಿನ್ನ ಬಿಟ್ಟು ಕದಲುತ್ತಿಲ್ಲ.

ಅನುರೂಪ ರಾಕ್ಷಸಿಯೇ, ನಿನಗೆ ಇನ್ನೊಂದು ಗುಡ್‌ ಮಾನಿಂಗ್‌.

-ನಿನ್ನವನು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X