• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳಲು ಹೊರಡುವುದೇನಾ ವಿವೇಕವೆಂದರೆ?

By Staff
|

‘ವಿವೇಕವೆಂದರೆ ಇದೇ’ ಅಂತ ಡಿಫೈನ್‌ ಮಾಡುವುದಕ್ಕೂ ವಿವೇಕ ಬೇಕು. ನಮಗೆ ಗೊತ್ತಿಲ್ಲದನ್ನು ‘ಗೊತ್ತಿಲ್ಲಪ್ಪ’ ಅಂತ ಒಪ್ಪಿಕೊಳ್ಳಲಿಕ್ಕೆ ಚಿಕ್ಕ ಪ್ರಾಮಾಣಿಕತೆ ಸಾಕು. ಆದರೆ ‘ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಂಡು ಹೇಳುತ್ತೇನೆ’ ಅಂದು ಹೊರಡುವುದಕ್ಕೆ ವಿವೇಕ ಬೇಕು! ಆ ವಿವೇಕದ ಅನ್ವೇಷಣೆಯೇ ಅಲ್ಲವೆ, ಬದುಕು?

Wisdom is altogether different from intelligence‘ಅವನು ತುಂಬ ಇಂಟೆಲಿಜೆಂಟು’ ಅನ್ನುತ್ತಿರುತ್ತೇವೆ. ತುಂಬ ಓದಿದವನು, ತುಂಬ ಕಲಿತವನು, ತುಂಬ ಮಾರ್ಕ್‌ ತಂದುಕೊಂಡವನು, ಚಟಚಟ ಚಟಪಟಾಂತ ಇಂಗ್ಲಿಷ್‌ ಮಾತನಾಡಬಲ್ಲವನು, ಎಲ್ಲಿ ಕೇಳಿದರೂ ಫಕ್ಕನೆ ಸರಿಯಾದ ಮಗ್ಗಿ ಹೇಳಬಲ್ಲವನು, ಅದ್ಭುತವಾಗಿ ಕಂಠಪಾಠ ಮಾಡಿ ಒಪ್ಪಿಸಬಲ್ಲವನು, ಸೂಕ್ಷ್ಮವಾದ ನೆನಪಿನ ಶಕ್ತಿಯುಳ್ಳವನು, ಡಿಬೇಟುಗಳಲ್ಲಿ ಗೆಲ್ಲಬಲ್ಲವನು -ಇವರೆಲ್ಲರೂ ಜಗತ್ತಿನ ಅರ್ಥದಲ್ಲಿ ಜಾಣರು ಅನ್ನಿಸಿಕೊಳ್ಳುತ್ತಾರೆ.

ಆದರೆ ಜಾಣತನ ಮತ್ತು ವಿವೇಕ ಒಂದೇನಾ? learning and wisdom ಒಂದೇನಾ? ನಮ್ಮನ್ನು ನಾವೇ ಕೇಳಿಕೊಳ್ಳಬೇಕು.

ಕ್ಲಾಸಿನಲ್ಲಿ ಸದಾ ಫಸ್ಟ್‌, ಪರೀಕ್ಷೆಯಲ್ಲಿ ನೂರಕ್ಕೆ ತೊಂಬತ್ತೊಂಬತ್ತು, ಮ್ಯಾಥಮೆಟಿಕ್ಸ್‌ನಲ್ಲಂತೂ ಯಾವತ್ತಿಗೂ ನೂರಕ್ಕೆ ನೂರು ಅಂಕ. ಆದರೆ ಹುಡುಗ ವಿವೇಕವಂತನಾ ಅಂತ ನೋಡಿದರೆ, ಅದರ ಕುರುಹೇ ಕಾಣಿಸುವುದಿಲ್ಲ. ಒಬ್ಬ ಮನುಷ್ಯ ಎಷ್ಟು ದುಡ್ಡು ಮಾಡಿದ, ಎಷ್ಟು ಆಸ್ತಿ ಸಂಪಾದಿಸಿದ ಎಂಬುದರ ಮೇಲೆ ಆ ಮನುಷ್ಯ ಎಷ್ಟರಮಟ್ಟಿಗೆ ವಿವೇಕವಂತ ಅಂಥ ನಿರ್ಧರಿಸಲಾಗುವುದಿಲ್ಲ.

ಒಬ್ಬ ಯುವಕ ನೂರಕ್ಕೆ ತೊಂಬತ್ತು ಮಾರ್ಕ್ಸ್‌ ತಂದುಕೊಂಡ ಅಂದರೆ, ಅವನು ಬುದ್ಧಿವಂತ ಅನ್ನುತ್ತೇವೆ. ಅದೇ ವಯಸ್ಸಿನವನೊಬ್ಬ ಕೋಟ್ಯಂತರ ರುಪಾಯಿ ದುಡ್ಡು ಮಾಡಿದರೆ, ಅವನಿಗೆ ಲೋಕಜ್ಞಾನವಿದೆ, ವ್ಯವಹಾರ ಜ್ಞಾನವಿದೆ ಅನ್ನುತ್ತೇವೆ. ಅದನ್ನೇ ಇಂಗ್ಲಿಷಿನಲ್ಲಿ street smartness ಅನ್ನುತ್ತಾರೆ.

ಇವೆರಡಕ್ಕಿಂತ ವಿಭಿನ್ನವಾದದ್ದು ವಿವೇಕ.

ವಿವೇಕವಂತನಾದ ಮನುಷ್ಯ ಬುದ್ಧಿವಂತ ಅಥವಾ ಬ್ರಿಲಿಯಂಟ್‌ ಆಗಿರಬೇಕಿಲ್ಲ. ಅವನು ಚಾಣಾಕ್ಷ ವ್ಯಾಪಾರಿಯೋ ವ್ಯವಹಾರಿಯೋ ಆಗಿರಬೇಕಿಲ್ಲ. ಆದರೆ ವಿವೇಕವಂತನಾಗಿರಬಲ್ಲ. ಈ ವಿವೇಕವೆಂಬುದು ಜನ್ಮತಃ ಬರುವಂಥದ್ದಾ? ಸರಿಯಾದ ಓದುವಿಕೆ ನಮ್ಮನ್ನು ವಿವೇಕವಂತರನ್ನಾಗಿಸುತ್ತದಾ? ಸಹವಾಸದಿಂದ ನಾವು ವಿವೇಕವಂತರಾಗುತ್ತೇವಾ?

ಉತ್ತರಿಸುವುದು ಕಷ್ಟ.

ತೀರ ಏಳನೇ ಕ್ಲಾಸೂ ಓದಿರದ ಅಜ್ಜಿಯರಲ್ಲಿ ನಾನು ಅತ್ಯಂತ ವಿವೇಕವಂತರನ್ನು ನೋಡಿದ್ದೇನೆ. ದುರ್ಭರವೆನ್ನಿಸುವಂತಹ ವೈಧವ್ಯ, ಬಡತನ, ನಿರಾದರ -ಎಲ್ಲವನ್ನೂ ಶಾಪದಂತೆ ಹೊತ್ತು, ಅನುಭವಿಸಿ ಕೂಡ ನಗುನಗುತ್ತ ನೆಮ್ಮದಿಯಾಗಿಯೇ ಬಾಳುವಂಥವರನ್ನು ನೋಡಿದ್ದೇನೆ. ಕೈತುಂಬ ಡಿಗ್ರಿ, ಮಾರ್ಕು, ಸಂಬಳ, ಪಾಸ್‌ಪೋರ್ಟು, ವೀಸಾ, ಡಾಲರು -ಎಲ್ಲ ಇಟ್ಟುಕೊಂಡೂ ಮೂರ್ಖರಂತೆ ವರ್ತಿಸುವ ಅವಿವೇಕಿಗಳನ್ನು ಕಂಡಿದ್ದೇನೆ.

ಒಂದೇ ಒಂದು ಚಿಕ್ಕ ಮಾತು ಆಡಿದರೆ ಸಾಕು : ಛಕ್ಕನೆ ಅರ್ಥಮಾಡಿಕೊಂಡು ಅನತಿ ದೂರಕ್ಕೆ ಸರಿದು ನಿಂತು ಸಂಬಂಧವನ್ನು ಸರಿಮಾಡಿಕೊಂಡು ಬಿಡುವವರದು ವಿವೇಕ. ನೇರವಾಗಿ ಹೇಳಿದರೂ ಅರ್ಥಮಾಡಿಕೊಳ್ಳದೆ ಛೀ-ಥೂ ಅನ್ನಿಸಿಕೊಂಡು, ತಾವೂ ನೊಂದು-ಇನ್ನೊಬ್ಬನ್ನು ನೋಯಿಸಿ ದೂರವಾಗುವವರದು ಅವಿವೇಕ. ಕಲಿಕೆಯೆಂಬುದು ಅವರಿಗೆ ಬೇರೆಲ್ಲವನ್ನು ತಂದು ಕೊಟ್ಟಿರುತ್ತದೆ ; ವಿವೇಕವನ್ನಲ್ಲ.

‘ಒಂದು ಮಗು ತುಂಬ ಚೆನ್ನಾಗಿ ಲೆಕ್ಕ ಮಾಡುತ್ತದೆ, ಗಣಿತದಲ್ಲಿ ಎಕ್ಸ್‌ಟ್ರಾರ್ಡಿನರಿ ಬುದ್ಧಿವಂತಿಕೆಯಿದೆ’ ಎಂಬ ಮಾತಿದೆಯಲ್ಲ , ‘ಒಂದು ಮಗು ನೋಡೋಕೆ ತುಂಬ ಚೆನ್ನಾಗಿದೆ’ ಎಂಬ ಮಾತಿನಂತಹುದೇ ಮಾತು. ಅನೇಕ ಸಲ ಬುದ್ಧಿವಂತಿಕೆ ಕೂಡ ತಂದೆ-ತಾಯಿಯರ ಬಣ್ಣದಂತೆ, ದೇಹದಂತೆ, ಧ್ವನಿಯಂತೆ,ಕಣ್ಣ ಬಣ್ಣದಂತೆ ಮಕ್ಕಳಿಗೆ ಅನುವಂಶಿಕವಾಗಿ ಬಂದಿರುತ್ತದೆ. ಅದಕ್ಕೆ ಸರಿಯಾದ ಪರಿಸರ ದೊರಕಿ, ಮೇಷ್ಟು ದೊರಕಿ, ಪೋಷಣೆ ಸಿಕ್ಕಿದರೆ ಅಲ್ಲೊಂದು ಬ್ರಿಲಿಯಂಟ್‌ ಸ್ಟೂಡೆಂಟ್‌ ಬೆಳೆಯುತ್ತಾನೆ : ಒಬ್ಬ ಬ್ಯೂಟಿ ಕ್ವೀನ್‌ ಬೆಳೆದಂತೆ.

ಅದಕ್ಕಿಂತ ಕೊಂಚ ಭಿನ್ನವಾದ ಮಾತೆಂದರೆ,

‘ಅವನು ತುಂಬ ಕಷ್ಟ ಪಟ್ಟು ಓದಿದ’ ಅನ್ನುತ್ತಿರುತ್ತೇವೆ. ಅದರರ್ಥ, ಕಂಡವರ ಮನೆಗೆ ನೀರು ಹೊತ್ತು ಬೀದಿ ದೀಪದ ಕೆಳಗೆ ಓದಿದ ಅಂತ ಅಲ್ಲ. ತನಗಿದ್ದ ಬುದ್ಧಿವಂತಿಕೆಯ ಕೊರತೆಯನ್ನು ಆ ಹುಡುಗ ಮತ್ತೆ ಮತ್ತೆ ಓದುವುದರಿಂದ ಮನನ ಮಾಡಿಕೊಳ್ಳುವುದರಿಂದ, ಹೇಳಿಸಿಕೊಳ್ಳುವುದರಿಂದ, ಸಹಪಾಠಿಗಳ ನೆರವಿನಿಂದ ತುಂಬಿಸಿಕೊಂಡ ಅಂತ ಅರ್ಥ. ಮಾಮೂಲಿ ರೂಪಿನ ಹುಡುಗಿಯಾಬ್ಬಳು ಕ್ರೀಮು, ಐ ಲೈನರು, ಕಾಡಿಗೆ, ಪೌಡರು ಇತ್ಯಾದಿಗಳ ನೆರವಿನಿಂದ ಸುಂದರಿಯಾಗಿ ಕಾಣುವ ಪ್ರಯತ್ನ ಮಾಡಿದಂತೆ!

ಆದರೆ ವಿವೇಕವೆಂಬುದು ಇದ್ಯಾವುದಕ್ಕೂ ಸಂಬಂಧ ಪಟ್ಟಿದ್ದಲ್ಲ. ನಮ್ಮ ಪ್ರತಿದಿನದ, ಪ್ರತಿಕ್ಷಣದ ವರ್ತನೆ ನಮ್ಮ ವಿವೇಕದ ಮೇಲೆ ಆಧಾರಪಟ್ಟಿರುತ್ತದೆ. ನಮ್ಮ ಸಾಹಸ, ನಮ್ಮ ಹೆದರಿಕೆ, ನಮ್ಮ ವಿಶ್ವಾಸ, ನಮ್ಮ ಅಳುಕು-ಎಲ್ಲವೂ ವಿವೇಕದ ಮೇಲೆಯೇ ಆಧಾರಪಟ್ಟಿರುತ್ತದೆ. ನಮ್ಮ ವಿವೇಕವನ್ನು ಉಳಿದೆಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಮಾತು ಪ್ರತಿಫಲಿಸುತ್ತದೆ.

ನಿಮಗೆ ಆಶ್ಚರ್ಯವಾಗಬಹುದು, ವಿವೇಕವಂತನ ಕಣ್ಣುಗಳು ಉಳಿದವರ ಕಣ್ಣುಗಳಿಗಿಂತ ಭಿನ್ನವಾಗಿರುತ್ತವೆ. ಅಲ್ಲಿ ಬುದ್ಧಿವಂತಿಕೆಯ brightness ಇರಬೇಕಿಲ್ಲ. ಚಾಣಾಕ್ಷತೆಯ ಫಳಫಳಿಕೆ ಕಾಣಬೇಕಿಲ್ಲ. ಮಹಾಜ್ಞಾನಿಯ ಸೋಗೂ ಬೇಕಾಗಿಲ್ಲ. ಆದರೆ ಮನಸ್ಸಿನೊಳಗಿನ ವಿವೇಕವನ್ನು ಕಣ್ಣು ಹೊರಹಾಕುತ್ತಿರುತ್ತದೆ. ಎಂಥ ಅದ್ಭುತ ನಟ ಕೂಡ ತನ್ನ ಕಣ್ಣುಗಳನ್ನು ವಿವೇಕವನ್ನು ನಟಿಸಿ ತೋರಿಸಲಾರ. ತುಂಬ ಪ್ರಯತ್ನ ಪಟ್ಟರೆ ಅಮಾಯಕತೆಯನ್ನು ತೋರ್ಪಡಿಸಬಲ್ಲ. ಆದರೆ wisdom ಎಂಬುದು ಹೊಳೆಯುವುದು ವಿವೇಕವಂತನ ಕಣ್ಣುಗಳಲ್ಲೇ.

ಆದರೆ ಅಂಥದ್ದೊಂದು ವಿವೇಕ ಎಲ್ಲಿಂದ ಬರುತ್ತದೆ -ಎಂಬಲ್ಲಿಗೆ ಮತ್ತೆ ಪ್ರಶ್ನೆ ಬಂದು ನಿಲ್ಲುತ್ತದೆ. ಯಾರೂ ಹುಟ್ಟಿನಿಂದ ವಿವೇಕವಂತರಾಗಿರುವುದಿಲ್ಲ. ಆದರೆ ಕೆಲವರ ಸ್ವಭಾವದಲ್ಲೇ(ಅನುವಂಶಿಕವಾದ) ವಿವೇಕ, ಮೆಚ್ಯೂರಿಟಿ ಇದ್ದು ಬಿಡುತ್ತದಾ? ಒಂದು ಸಮಚಿತ್ತ, ಗ್ರಹಿಕೆ, ನಿರ್ಣಯ ಸ್ವಭಾವ -ಇವೆಲ್ಲ ಅವರಿಗೆ ಅನುವಂಶಿಕವಾಗಿ ಬಂದಿರುತ್ತವಾ? ಆಥವಾ ಮನೆಯ ಹಿರಿಯರಿಗಿರುವ ವಿವೇಕವನ್ನು ಅವರ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಅನುಕರಣೆ ಮಾಡಿ ಕಲಿಯುತ್ತವೆಯಾ? ದೊರಕುವ ವಿದ್ಯೆ, ಗೆಳೆತನ, ಮೇಷ್ಟ್ರುಗಳು, ಅನುಕೂಲ, ಅನುಭವ, ವಾತಾವರಣ -ಇವೆಲ್ಲ ಸೇರಿಕೊಂಡು ಮನುಷ್ಯನನ್ನು ವಿವೇಕವಂತನನ್ನಾಗಿ ಮಾಡುತ್ತವಾ? ಒಬ್ಬ ವ್ಯಕ್ತಿ ತುಂಬ ವಿದ್ಯಾವಂತನಾಗದೆ ಇರಬಹುದು : ಆದರೆ ತುಂಬ ವಿವೇಕವಂತನಾಗುವುದು ಸಾಧ್ಯವಿಲ್ಲವೆ?

ಇಷ್ಟಕ್ಕೂ ವಿವೇಕ ಅಂದರೆ ಏನು?

ಎಲ್ಲವೂ ಗೊತ್ತಿರುವುದು ವಿವೇಕ ಅಂದುಕೊಳ್ಳಬೇಡಿ. ಶುದ್ಧಾಂಗ ಶುದ್ಧ ಅವಿವೇಕಿಯಾಬ್ಬ ಕೂಡ ಅನೇಕ ಸಂಗತಿಗಳನ್ನು ತಿಳಿದುಕೊಂಡಿರುತ್ತಾನೆ. ಹಾಗಾದರೆ ಎಲ್ಲರ ಸಮಸ್ಯೆಗಳಿಗೂ ಪರಿಹಾರ ಹೇಳುವವನು ವಿವೇಕವಂತನಾ? ಉಹುಂ, ಅವನು ಉತ್ತಮ ಲೋಕಜ್ಞಾನ ಉಳ್ಳ ವ್ಯವಹಾರಿ. ಹಾಗಾದರೆ, ಜೀವನದ ಎಲ್ಲ ರಂಗಗಳಲ್ಲೂ ಯಶಸ್ವಿಯಾದವನು ವಿವೇಕವಂತನಾ? I doubt.

‘ವಿವೇಕವೆಂದರೆ ಇದೇ’ ಅಂತ ಡಿಫೈನ್‌ ಮಾಡುವುದಕ್ಕೂ ವಿವೇಕ ಬೇಕು. ನಮಗೆ ಗೊತ್ತಿಲ್ಲದನ್ನು ‘ಗೊತ್ತಿಲ್ಲಪ್ಪ’ ಅಂತ ಒಪ್ಪಿಕೊಳ್ಳಲಿಕ್ಕೆ ಚಿಕ್ಕ ಪ್ರಾಮಾಣಿಕತೆ ಸಾಕು. ಆದರೆ ‘ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಂಡು ಹೇಳುತ್ತೇನೆ’ ಅಂದು ಹೊರಡುವುದಕ್ಕೆ ವಿವೇಕ ಬೇಕು!

ಆ ವಿವೇಕದ ಅನ್ವೇಷಣೆಯೇ ಅಲ್ಲವೆ, ಬದುಕು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more