• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾಕೆ ವಿವಾಹಿತ ಗಂಡಸಿನ ಹಿಂದಿನ ಪರಸಂಗ

By Staff
|

ಭಾವುಕ ಹುಡುಗಿಯರು, ಬದುಕಿನಲ್ಲಿ ನೆಲೆಕಂಡುಕೊಳ್ಳಲು ಹವಣಿಸುವ ಸ್ಥಿತಿಯವರು, ಬ್ರೋಕನ್ ಫ್ಯಾಮಿಲಿಗಳಿಂದ ಬಂದವರು, ಆಲ್ಕೋಹಾಲಿಕ್ ತಂದೆಯ ಮಕ್ಕಳು, ಭವಿಷ್ಯದ ಬಗ್ಗೆ ನಿರ್ದಿಷ್ಟ ಕನಸುಗಳಿಲ್ಲದವರು ; ಇದೇ ಮುಂತಾದವರು ವಿವಾಹಿತ ಗಂಡಸಿನ ಬೆನ್ನು ಬಿದ್ದಿರುತ್ತಾರೆ.

  • ರವಿ ಬೆಳಗೆರೆ

ಯಾಕೆ ವಿವಾಹಿತ ಗಂಡಸಿನ ಹಿಂದಿನ ಪರಸಂಗ“ನಂಗೊತ್ತಿದೆ : ನೀನು ಸ್ವಲ್ಪ ಸುಮ್ಮನಿರು. ಅತೀ ಅನ್ನಿಸೋ ಹಾಗೆ ರಿಯಾಕ್ಟ್ ಮಾಡಬೇಡ. ಅಸಲಿಗೆ ರಿಯಾಕ್ಟ್ ಮಾಡಬೇಡ. ಒಂದು ಸಲ ನಿನ್ನ ಹತ್ರ ನಾನು ಕೂತು ಮಾತಾಡ್ತೀನಿ. ಆಮೇಲೆ ಈ ವಿಷಯದಲ್ಲಿ ಮುಂದುವರಿಯುವಿಯಂತೆ" ಎಂದು ಆಕೆಗೆ ನಾನು ಹೇಳಿದೆ. ತುಂಬ ಗೊಂದಲದಲ್ಲಿದ್ದ ಹೆಣ್ಣು ಮಗಳು “ಆಯ್ತು ರವೀ" ಅಂದು ಫೋನಿಟ್ಟಳು.

ಅವತ್ತಷ್ಟೆ ಆಕೆಯ ಮನೆಯ ಅಗ್ಗಿಷ್ಟಿಕೆ ಧಗ್ಗೆಂದಿತ್ತು. ಅದೇನೂ ಬೇರೆ ಯಾವುದೇ ಮನೆಯಲ್ಲಿ ಆಗದಂತಹುದಲ್ಲ. ತೀರ ತಲೆ ಹೋಗುವಂತಹದೂ ಅಲ್ಲ. ಅನೇಕರ ಮನೆಗಳಲ್ಲಿ ಪ್ರತಿನಿತ್ಯ ಧಗ್ಗೆಂದು, ಧಗಧಗನೆ ಉರಿರು ಕ್ರಮೇಣ ನಂದಿ ಹೋಗುವಂಥ ಸಮಸ್ಯೆಯೇ. ಒಮ್ಮೊಮ್ಮೆ ಅಪರೂಪಕ್ಕೆ ಈ ಅಗ್ಗಿಷ್ಟಿಕೆ ಇಡೀ ಮನೆಯನ್ನು ಸುಟ್ಟು ಬಿಡುವುದೂ ಉಂಟು. ಹಾಗೇನಾದರೂ ತನ್ನ ಮನೆಯಲ್ಲಿ ಆಗಿಬಿಡಬಹುದಾ ಅಂತ ಧಾವಂತಗೊಂಡಿದ್ದಳು, ನನಗೆ ಫೋನು ಮಾಡಿದಾಕೆ.

ಅವತ್ತಷ್ಟೆ ಬೆಳಗ್ಗೆ ಆಕೆ ತನ್ನ ಗಂಡನ ಮೊಬೈಲ್‌ನಲ್ಲಿ ಹುಡುಗಿಯೊಬ್ಬಳ ಮೆಸೇಜು ಬಂದು ಬಿದ್ದಿರುವುದನ್ನು ಅಕಸ್ಮಾತ್ತಾಗಿ ನೋಡಿದ್ದಳು. ಯಥಾಪ್ರಕಾರದ ಗೋಳು. ಗಂಡನಿಗೊಬ್ಬ ಗರ್ಲ್‌ಫ್ರೆಂಡ್ ಗಂಟು ಬಿದ್ದಿದ್ದಾಳೆ. ಈ ಗೃಹಿಣಿಯ ಎದೆಯಲ್ಲಿ ಆತಂಕವೆಂಬುದು ಪೌಂಡಿಂಗ್ ಮಷೀನನಂತೆ ಕುಟ್ಟತೊಡಗಿದೆ.

ಅನೇಕ ಗೃಹಿಣಿಯರು ಈ ವಿಷಯದಲ್ಲಿ ಒಂದೇ ತೆರನಾದ ತಪ್ಪುಗಳನ್ನು ಮಾಡುತ್ತಾರೆ. ಯಾವಳೋ ಗಂಟು ಬಿದ್ದಿದ್ದಾಳೆ ಅಥವಾ ಗಂಟು ಬಿದ್ದಿರಬಹುದು ಅನ್ನಿಸಿದ ತಕ್ಷಣ ಅದನ್ನು ನೂರಕ್ಕೆ ನೂರು ಜನ ನಿಜ ಅಂದುಕೊಂಡು ಬಿಡುತ್ತಾರೆ. ಅದು ಮೊದಲನೆಯ ತಪ್ಪು. ತನ್ನ ಗಂಡ ತೀರ ಹೇಳಿ ಮಾಡಿಸಿದ ಹೆಣ್ಣು ಬಾಕ ಅಂತ ಖಚಿತಗೊಂಡಿದ್ದರೆ, ಆ ಮಾತು ಬೇರೆ. ಅಂಥ ಯಾವುದೇ ಸೂಚನೆಗಳಿಲ್ಲದಿರುವಾಗ ಗಂಡನನ್ನು ಅನುಮಾನಿಸುವುದು ಮೊದಲ ತಪ್ಪು. ಅನುಮಾನಕ್ಕೆ ಒಳಗಾದರೆ, ಆ ಸಂಬಂಧದಲ್ಲಿ ದೂಷಣೆಯ ಮಾತು ಕೇಳಿದರೆ ಹೆಂಗಸರಿಗೆ ಆದ ಹಾಗೇಯೇ ಗಂಡಸರಿಗೂ ನೋವಾಗುತ್ತದೆ, ಅವಮಾನವಾಗುತ್ತದೆ ಎಂಬುದು ಅನೇಕ ಗೃಹಿಣಿಯರಿಗೆ ಗೊತ್ತಿರುವುದಿಲ್ಲ. “ನೀವು ಅವಳ ಹತ್ರ ಅಷ್ಟು ಹೊತ್ತು ಮಾತಾಡ್ತ ನಿಂತಿದ್ದಾಗಲೇ ಅಂದುಕೊಂಡೆ... ನಿಮ್ಮ ಬುದ್ಧಿ ನಂಗೊತ್ತಿಲ್ಲವಾ?" ಎಂಬಂಥ ಮಾತುಗಳನ್ನೂ ಕ್ಯಾಷುಯಲ್ಲಾಗಿ ಆಡುತ್ತಲೇ ಇರುತ್ತಾರೆ. ಸರಿಯಲ್ಲ ಅದು. ತಕ್ಷಣದಲ್ಲಿ ಅಲ್ಲದಿದ್ದರೂ ನಿಧಾನವಾಗಿ ಇಂಥ ಮಾತುಗಳು ಗಂಡಸಿನ ಚಾರಿತ್ರ್ಯ ಮತ್ತು ನಿಯತ್ತುಗಳ ಮೇಲೆ ಪರಿಣಾಮ ಬೀರತೊಡಗುತ್ತವೆ. ಗಂಡಾಗಲೀ ಹೆಣ್ಣಾಗಲೀ ತನ್ನ ಚಾರಿತ್ರ್ಯ ಮತ್ತು ನಿಯತ್ತುಗಳ ಬಗ್ಗೆ ನಿರಂತರವಾದ ಕಾಮೆಂಟ್ ಹಾಗೂ ಅನುಮಾನದ ಮಾತುಗಳನ್ನು ಭರಿಸಲಾರರು.

ನನ್ನ ಅನುಭವದ ಬಗ್ಗೆ ಹೇಳುವುದಾದರೆ, ಕೊಂಚ ಸಲೀಸಾಗಿ ನಿಯತ್ತು ತಪ್ಪ ಬಲ್ಲ, ಸುಲಭವಾಗಿ ಗಂಡಂದಿರನ್ನು ಯಾಮಾರಿಸಬಲ್ಲ ಒಂದಷ್ಟು ಹೆಂಗಸರು ನನಗೆ ಪರಿಚಯವಿದ್ದಾರೆ. ಅವರು ಅಂಥ ಸ್ವಭಾವದವರು ಎಂಬುದೂ ನನಗೆ ಗೊತ್ತು. ಆದರೆ ಅಪ್ಪಿತಪ್ಪಿ ಕೂಡ ಅವರೊಂದಿಗೆ ನಾನು ಆ ವಿಷಯ ಮಾತನಾಡುವುದಿಲ್ಲ. ಆ ಬಗ್ಗೆ ತಮಾಷೆ ಕೂಡ ಮಾಡುವುದಿಲ್ಲ. ಏಕೆಂದರೆ, ಅವರ ಬದುಕಿನ ಆ part ಕಟ್ಟಿಕೊಂಡು ನನಗೆ ಆಗಬೇಕಾದ್ದೇನೂ ಇರುವುದಿಲ್ಲ. ನಮ್ಮ ಹತ್ತಿರದವರೊಂದಿಗೂ ಇಂಥದ್ದೇ ನಿಲುವು ತಳೆಯುವುದು ಕ್ಷೇಮ. ತೀರ ಪ್ರಸಂಗ ಬಂದರೆ “ಆಕೆಯೊಂದಿಗಿನ ನಿಮ್ಮ ಸ್ನೇಹ ನಂಗೆ ಇಷ್ಟವಾಗುತ್ತಿಲ್ಲ" ಅಂತ ನೇರವಾಗಿ ಹೇಳಬೇಕೆ ಹೊರತು, “ಅಯ್ಯೋ, ನಿಮ್ಮ ಸ್ವಭಾವ ನಂಗೊತ್ತಿಲ್ಲವಾ?" ಎಂಬಂಥ ಉಡಾಫೆಯ, ಸಲುಗೆಯ ಮಾತನ್ನು ಆಡಬೇಡಿ. ಅದರಿಂದಾಗಿ ನಿಮ್ಮದೇ ವ್ಯಕ್ತಿತ್ವದ, ನಿಮ್ಮ ತಕರಾರಿನ, ಮಾತಿನ ಬಿಕ್ಕಟ್ಟು ತಪ್ಪಿ ಹೋಗುತ್ತದೆ.

ಈ ಪರಿಸ್ಥಿತಿಗಳಲ್ಲಿ ಗೃಹಿಣಿಯರು ಮಾಡುವ ಎರಡನೇ ತಪ್ಪೆಂದರೆ, ತಮ್ಮ ಸಂಸಾರದ ಟೈಟಾನಿಕ್‌ಗೆ ಸಿಡಿಲು ಬಡಿದು, ಪೂರ್ತಿ ಸಾಮ್ರಾಜ್ಯವೇ ಮುಳುಗಿ ಹೋಯಿತು ಎಂಬಂತೆ react ಮಾಡುತ್ತಾರೆ. ಕೆಲವು ಸಲ ಗಂಡಸಿನ ಮನೆಯಾಚೆಗಿನ ಸಂಬಂಧಗಳು ಈ ಸಂಸಾರವನ್ನೇ ಛಿದ್ರಗೊಳಿಸಿಬಿಡುವುದು ಉಂಟಾದರೂ, ಎಲ್ಲ ಸಲ ಹಾಗಾಗುವುದಿಲ್ಲ. ವರ್ಷಗಟ್ಟಲೆ ಜೊತೆಗಿದ್ದು, ಪ್ರೀತಿಸಿ, ಮಕ್ಕಳಾಗಿ, ಅವರನ್ನು ಹಚ್ಚಿಕೊಂಡು, ಕುಟುಂಬವೆಂಬುದು ಎಲ್ಲ ರೀತಿಯಲ್ಲೂ ಮನೋದೈಹಿಕ ಡಿಪೆಂಡೆನ್ಸ್ ಉಂಟುಮಾಡಿರುವಾಗ ಗಂಡಸು ಅಷ್ಟು ಸುಲಭವಾಗಿ ಕುಟುಂಬದಿಂದ ಹೊರಬಿದ್ದು ಬಿಡಲಾರ. ಅಲ್ಲದೆ ಹೊರಗಿನ ಸಂಬಂಧ ಅಷ್ಟು ಬೇಗ ಬೇರೂರಿ ಗಟ್ಟಿಗೊಂಡಿರುವುದೂ ಇಲ್ಲ. ಒಂದು ಚಿಕ್ಕ ಗದರಿಕೆಗೆ, ಗಲಾಟೆಗೆ ಮನೆಯಾಚೆಗಿನ ಹುಡುಗಿ ತಲ್ಲಣಗೊಂಡು, ಇದರ ಸಹವಾಸವೇ ಬೇಡ ಅಂತ ನಿರ್ಧರಿಸಿ ಸಂಬಂಧ ಕಳಚಿಕೊಂಡು ಬಿಡುತ್ತಾಳೆ. ಯಾಕೆಂದರೆ, ಮನೆಯಾಚೆಗಿನ ಅಂಥ ಸಂಬಂಧಕ್ಕೆ ಭಾವುಕ ನೆಲೆಗಟ್ಟು ಇರಬಹುದೇ ಹೊರತು, ನೈತಿಕವಾದ ಯಾವುದೇ strength ಇರುವುದಿಲ್ಲ.

ಈ ಮನೆಯ ಹಡಗನ್ನೇ ಮುಳುಗಿಸಿ ಬಿಡುವ, ಸಾಂಸಾರಿಕ ಸಾಮ್ರಾಜ್ಯವನ್ನೇ ನುಂಗಿ ಬಿಡುವ ಶಕ್ತಿ ಮನೆಯಾಚೆಗಿನ ಹುಡುಗಿಗೆ ಇರುವುದಿಲ್ಲ. ಆ ಪರಿಯ ಶಕ್ತಿ ಮತ್ತು ಬುದ್ಧಿವಂತಿಕೆ ಇರುವವಳೇ ಆಗಿದ್ದರೆ ಅವಳೇಕೆ ಈ sold out ಸರುಕಿನಂತಹ ವಿವಾಹಿತನಿಗೆ ಗಂಟು ಬೀಳುತ್ತಿದ್ದಳು? ಹೆಚ್ಚಿನ ಸಲ ಭಾವುಕ ಹುಡುಗಿಯರು, ಬದುಕಿನಲ್ಲಿ ನೆಲೆಕಂಡುಕೊಳ್ಳಲು ಹವಣಿಸುವ ಸ್ಥಿತಿಯವರು, ಬ್ರೋಕನ್ ಫ್ಯಾಮಿಲಿಗಳಿಂದ ಬಂದವರು, ಆಲ್ಕೋಹಾಲಿಕ್ ತಂದೆಯ ಮಕ್ಕಳು, ಭವಿಷ್ಯದ ಬಗ್ಗೆ ನಿರ್ದಿಷ್ಟ ಕನಸುಗಳಿಲ್ಲದವರು ; ಇದೇ ಮುಂತಾದವರು ವಿವಾಹಿತ ಗಂಡಸಿನ ಬೆನ್ನು ಬಿದ್ದಿರುತ್ತಾರೆ. ಸರಿಯಾದ ತಿಳಿವಳಿಕೆ ಕೊಟ್ಟರೆ ಕೂಡಲೇ ಬಿಟ್ಟುಹೋಗುತ್ತಾರೆ. “ನಾನು ಯಾವ ರೀತಿಯಲ್ಲೂ ಆತನ ಸಂಸಾರಕ್ಕೆ ತೊಂದರೆ ಮಾಡುವುದಿಲ್ಲ. ಆತ ನನ್ನನ್ನು ಪ್ರೀತಿಸಿದರೆ ಸಾಕು. ಜೀವನ ಪರ್ಯಂತ ನಾನು ಮದುವೆ ಕೂಡ ಆಗಲ್ಲ. ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡು ಬಿಡ್ತೀನಿ" ಎಂಬಂಥ ಐಲುಫೈಲು ಮಾತನ್ನಾಡುವ ಈ ಭಾವುಕ ಹುಡುಗಿಯರಿರುತ್ತಾರಲ್ಲ? ಇವರ ಬಗ್ಗೆ ವಿಪರೀತ ಹೆದರಿಕೊಳ್ಳುವ ಪ್ರಮೇಯವಿಲ್ಲ. ಇವು ಮೊದಲ ಬೆದರಿಕೆಗೇ ಉದುರಿ ಹೋಗುವ ತರಗೆಲೆಗಳು.

ಗೃಹಿಣಿಯಾದವಳು ಇಂಥ ಪರಿಸ್ಥಿತಿ ಇದಿರಾದಾಗ ತುಂಬ ಸಮಚ್ಚಿತ್ತವಿಟ್ಟುಕೊಂಡು, composed ಆದ ರೀತಿಯಲ್ಲಿ ವರ್ತಿಸಬೇಕು. ಏನನ್ನೋ ಕಳೆದುಕೊಂಡು ಬಿಡುತ್ತೇನೆ ಎಂಬ insecurityಗೆ ಬಿದ್ದವರಂತಾಗಬಾರದು. 'ನಿನ್ನ ಗಂಡನ್ನ ನೀನು ಸರಿಯಾಗಿಟ್ಕೋ" ಅನ್ನುವಂಥ ಮಾತುಗಳನ್ನು ಮನೆಯಾಚೆಗಿನವಳು ಆಡಬಹುದೇನೋ. ಆದರೆ ಒಂದು ಭಾನುವಾರ ಬೆಳಗ್ಗೆ ಅವಳ ಮನೆಯಲ್ಲಿ ಎಲ್ಲರೂ ಇರುವಾಗ ನೇರವಾಗಿ ಹೋಗಿ ಮನೆ ಮಂದಿಯ ಮಧ್ಯದಲ್ಲೇ ಕುಳಿತು, “ಗಂಡನ್ನ ಸರಿಯಾಗಿ ಇಟ್ಕೊಳ್ಳೋದು ಆಮೇಲೆ ಹೇಳಿಕೊಡುವಿಯಂತೆ, ನೀನು ಮಾಡ್ತಿರೋದು ಸರಿಯಾಗಿದೆ ಅಂತ ನಿನ್ನ ಮನೆಯವರನ್ನೇ ಕನ್ವಿನ್ಸ್ ಮಾಡಿ ಬಿಡುವಂತೆ ಬಾಮ್ಮ ಸಾಕು" ಅಂತ ಕುಳಿತು ಬಿಟ್ಟರೆ ಅವಳ ಕತೆ ಮುಗಿದೇ ಹೋಗುತ್ತದೆ.

ಕೊನೆಯ ಮಾತು : ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದಕ್ಕಿಂತ ಅದನ್ನು ಎದುರಿಸಬೇಕಾದ ಗೃಹಿಣಿ ಎಷ್ಟು ಧೃಡವಾಗಿದ್ದಾಳೆ ಎಂಬುದು ಈ ವಿಷಯದಲ್ಲಿ ಹೆಚ್ಚು ಕೌಂಟ್ ಆಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more