• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀದಿಗೆ ಬೀಳುವುದರಲ್ಲೂ ವಿಧಾನಗಳಿವೆ!

By Staff
|

ಕೆಲಸ ಮಾಡಬೇಕಲ್ಲಾ ಎಂಬುದು ದುಃಖವಲ್ಲ. ಕೆಲಸ ಕೇಳಬೇಕಲ್ಲಾ ಎಂಬುದೂ ದುಃಖವಲ್ಲ. ಈ ವಯಸ್ಸಿನಲ್ಲಿ ಕೆಲಸ ಕೇಳಬೇಕಲ್ಲಾ ಎಂಬುದು ನಿಜವಾದ ದುಃಖ ಮತ್ತು ಹಿಂಸೆ. ಆ ವಯಸ್ಸಿಗೆ ನಲವತ್ತೈದು ಅನ್ನುತ್ತಾರೆ!

  • ರವಿ ಬೆಳಗೆರೆ

ಬೀದಿಗೆ ಬೀಳುವುದರಲ್ಲೂ ವಿಧಾನಗಳಿವೆ!ಅತ್ತ,ಆಯ್ತು ಬಿಡಪ್ಪಾ ದುಡಿಯುವ ವಯಸ್ಸು ಮುಗಿಯಿತು ಅಂತ ತೀರ್ಮಾನಿಸಿ ರಿಟೈರ್ ಮೆಂಟಿನ ನೆಮ್ಮದಿಗಳನ್ನು ಹುಡುಕುವ ವಯಸ್ಸಲ್ಲ. ಇತ್ತ, ಹೊಸದೊಂದು ಲೈನ್ ಆರಿಸಿಕೊಂಡು, ಹೊಸ ಕುದುರೆ ಪಳಗಿಸಿಕೊಂಡು ನಾಗಾಲೋಟದಲ್ಲಿ ಹೊರಟು ಹೊಸ ಸಾಧನೆಗಳನ್ನು ನಮ್ಮದಾಗಿಸಿಕೊಳ್ಳುವ ವಯಸ್ಸೂ ಅಲ್ಲ.

ಒಂದು ಕಚೇರಿಗೋ, ಫ್ಯಾಕ್ಟರಿಗೋ, ಕಂಪೆನಿಗೋ ಹೋಗಿ ಕೆಲಸ ಕೇಳೋಣವೆಂದರೆ, ಯಾವ ಕೆಲಸ ಅಂತ ಕೇಳೋದು? ಅನೇಕ ಸಂಸ್ಥೆಗಳಲ್ಲಿ ಮಧ್ಯವಯಸ್ಕರಿಗಾಗಿಯೇ ಕೆಲವು ನೌಕರಿಗಳಿರುತ್ತವೆ. ಸೂಪರ್ ವೈಸರಿ ಜಾತಿಯ ಕೆಲಸಗಳು. ಆದರೆ ಆ ಹುದ್ದೆಗಳಿಗೆ ಎಲ್ಲ ಕಡೆ ಕೆಳಗಿನ ಸ್ತರಗಳಲ್ಲಿ ದುಡಿದು, ಅನುಭವ ಹೊಂದಿ ಬಡ್ತಿ ಪಡೆದವರು ಬಂದು ಕುಳಿತಿರುತ್ತಾರೆ. ಮೇನೇಜರ್ ಅನ್ನಿಸಿಕೊಂಡಿರುತ್ತಾರೆ. ಫೋರ್ ಮನ್ ಗಳಾಗಿರುತ್ತಾರೆ. ಸೆಕ್ಷನ್ ಹೆಡ್ ಗಳಾಗಿರುತ್ತಾರೆ. ಕೆಳಸ್ತರದಲ್ಲಿ ದುಡಿದು ಅನುಭವಿಗಳಾಗಿ ಬಡ್ತಿ ಪಡೆದವರು ಎಂಬ ಕಾರಣಕ್ಕಾಗಿಯೇ ಅವರಿಗೆ ವಿಶೇಷವಾದುದೊಂದು ಗೌರವ ಸಿಗುತ್ತಿರುತ್ತದೆ. ಆ ಜಾಗಕ್ಕೆ ನಾವು ಹೋಗಿ ಕೂಡುವುದು ನಿಜಕ್ಕೂ ಮುಜುಗರದ ಸಂಗತಿಯೇ!

ಇವನ್ಯಾರು? ಎಲ್ಲೋ ಇದ್ದವನನ್ನು ತಂದು ನಮ್ಮ ತಲೆಯ ಮೇಲೇಕೆ ಕೂರಿಸಿದರು ಎಂಬ ಗೊಣಗು ಶುರುವಾಗುತ್ತದೆ. ಆ ಜಾಗಕ್ಕೆ ಬರಬೇಕಾದವನ ಸಿಡಿಮಿಡಿ ಕಿವಿಗೆ ಬೀಳುತ್ತಿರುತ್ತದೆ. ನಮಗೆ ಬಾರದ, ಗೊತ್ತಿರದ ಹೊಸ ಕೆಲಸಕ್ಕೆ ಹೋಗಿಬಿಟ್ಟರಂತೂ ಹೆಜ್ಜೆಗೊಮ್ಮೆ ನಗೆಪಾಟಲಿಗೀಡಾಗಿ ಬಿಡುತ್ತೇವೆ. ಯಾರದೋ ಮರ್ಜಿ ಅಥವಾ ಶಿಫಾರಸು ದೊರೆಯಿತೆಂಬ ಕಾರಣಕ್ಕಾಗಿ ನೌಕರಿಗಳಿಗೆ ಸೇರಿಬಿಟ್ಟವರು, ಹೆಚ್ಚಿನ ಸಲ ಈ ನಟೆಪಾಟಲು ಭರಿಸಲಾಗದೇ ಸಿಕ್ಕ ನೌಕರಿಬಿಟ್ಟು ಬರಿಗೈಲಿ ಮನೆಗೆ ಬಂದುಬಿಡುತ್ತಾರೆ. 'ನಮ್ಮ ತವರು ಮನೆಯವರು ಮಾಡೋ ಪ್ರಯತ್ನವನ್ನೆಲ್ಲ ಮಾಡಿದರು. ಇವರು ಎಲ್ಲೂ ಸ್ಥಿರವಾಗಿ ನಿಲ್ಲಲಿಲ್ಲ'ಎಂದು ಹೆಂಡತಿ ಗೊಣಗುತ್ತಿರುತ್ತಾಳೆ. ನಲವತ್ತೈದು ದಾಟಿದವನು ಎಲ್ಲೂ ಸ್ಥಿರವಾಗಿ ನಿಂತುಕೊಳ್ಳಲಾರ ಎಂಬ ಕಷ್ಟ ಆಕೆಗೆ ಗೊತ್ತಾಗುವುದಿಲ್ಲ.

ಅದರಲ್ಲೂ ಚಿಕ್ಕದೊಂದು ವ್ಯಾಪಾರ ಮಾಡಿ, ನಷ್ಟ ಅನುಭವಿಸಿ, ಸಾಲ ತೀರಿಸಲಿಕ್ಕೆ ಹೆಂಡತಿಯ ಕಡೆಯವರಿಂದ ಹಣ ತೆಗೆದುಕೊಂಡು ಬೀದಿಗೆ ಬಿದ್ದಿರುತ್ತೇವಲ್ಲ? ಆ ಸ್ಥಿತಿಯಲ್ಲಿ ಏನು ಮಾಡಿದರೂ ತಪ್ಪೇ. ಮಾಡುತ್ತಿದ್ದ ವ್ಯಾಪಾರದಲ್ಲಿ ಯಾಕೆ ನಷ್ಟವಾಯಿತು, ಲೆಕ್ಕಾಚಾರ ತಪ್ಪಿದ್ದೆಲ್ಲಿ, ಪರಿಸ್ಥಿತಿ ಎಷ್ಟರ ಮಟ್ಟಿಗೆ ಪ್ರತಿಕೂಲವಾಗಿತ್ತು ಅಂತ ಯಾರೂ ಯೋಚಿಸುವುದಿಲ್ಲ. ಕೆಲಸಕ್ಕೆ ಬಾರದವನೊಬ್ಬ, ಇದ್ದುದೆಲ್ಲ ಕಳೆದುಕೊಂಡು ಬಂದು ಹೆಂಡತಿ ಮನೆ ಸೇರಿದ್ದಾನೆ ಅಂತಲೇ ಯೋಚಿಸುತ್ತಾರೆ. ಚೆನ್ನಾಗಿ ನಡೆಯುತ್ತಿದ್ದ ಕಾಲದಲ್ಲಿ ಹೊಲಿಸಿಕೊಂಡ ಒಳ್ಳೆ ಬಟ್ಟೆಗಳನ್ನು ಹಾಕಿಕೊಳ್ಳಲಿಕ್ಕೂ ಮುಜುಗರ. ತೀರ ಹೆಂಡತಿಯ ಕಣ್ಣಲ್ಲೂ ನಿಕೃಷ್ಟನಾಗಿ ಬಿಟ್ಟಿರುತ್ತಾನೆ ಮನುಷ್ಯ.

ನನ್ನ ಹತ್ತಿರಕ್ಕೊಬ್ಬ ಇಪ್ಪತ್ನಾಲ್ಕರ ಯುವಕ ಕೆಲಸ ಕೇಳಿಕೊಂಡು ಬಂದರೆ, 'ಈಗಿರೋ ಸಿದ್ಧತೆ ಸಾಲದು. ಎಲ್ಲಾದರೂ ಚಿಕ್ಕ ಪತ್ರಿಕೇಲಿ ಕೆಲಸ ಮಾಡಿ ಇನ್ನೊಂದಷ್ಟು ಕೆಲಸ ಕಲಿತುಬಾರಯ್ಯ'ಅಂತ ಹೇಳಿ ಕಳಿಸುತ್ತೇನೆ. ಹಾಗೆ ಹೇಳಿದ್ದುಕೇಳಿ, ಕೆಲಸ ಕಲಿತು ಬಂದವರೂ ಇದ್ದಾರೆ. ಆದರೆ 45 ದಾಟಿದ ಮನುಷ್ಯನನ್ನು ಕಲಿತು ಬಾ ಅಂತ ಹೇಳಿ ಎಲ್ಲಿಗೆ ಕಳುಹಿಸಲಿ?

ಆ ವಯಸ್ಸಿನಲ್ಲಿ ಹೊಸತನ್ನು ಕಲಿಯುವುದು ಕಷ್ಟ. ಅವರನ್ನು ಸಾಹಸಗಳಿಗೆ ಇಳಿಸುವುದೂ ಕಷ್ಟ. 45ವರ್ಷದ ತನಕ ಏನು ಮಾಡುತ್ತಿದ್ದರೋ, ಅದೇ ಲೈನ್ ನಲ್ಲಿ ಮುಂದುವರಿಯುವಂತಹ ಕೆಲಸವನ್ನೇ ಅವರಿಗೋಸ್ಕರ ಹುಡುಕಬೇಕು. ಆದರೆ ಕೆಲವು ಸಲ ಆ ಲೈನಿಗೆ ಲೈನೇ ಮುಚ್ಚಿ ಹೋಗಿರುತ್ತದೆ. ಉದಾಹರಣೆಗೆ, ಕೈಯಲ್ಲಿ ಮೊಳೆ ಜೋಡಿಸಿ ಅಚ್ಚು ಮಾಡುವಂತಹ ಪ್ರಿಂಟಿಂಗ್ ಪ್ರೆಸ್ ಗಳು! ಅವು ಸಾರಸಗಟಾಗಿ ಮುಚ್ಚಿಯೇ ಹೋದವಲ್ಲ. ಮೊಳೆಯ ಜಾಗಕ್ಕೆ ಈಗ ಕಂಪ್ಯೂಟರ್ ಬಂದು ಕಳಿತಿದೆ. 45ತುಂಬಿದ ಮನುಷ್ಯ ಎಲ್ಲಿಂದ ಕಂಪ್ಯೂಟರ್ ಕಲಿಯಲಾರಂಭಿಸಿಯಾನು?

ಇದು ಮಿಡ್ ಲೈಫ್ ಕ್ರೈಸಿಸ್ ನ ಒಂದು ಅತ್ಯಂತ ಮುಖ್ಯ ಮತ್ತು ಕ್ಲಿಷ್ಟಕರವಾದ ಭಾಗ. ವಯಸ್ಸಲ್ಲದ ವಯಸ್ಸಿನಲ್ಲಿ ವೃತ್ತಿ ಬದಲಿಸಿ ಹೊಸ ನೌಕರಿ ಕೇಳಿಕೊಂಡು ಹೊರಡುವವರು ತೀರ ಎಂಥ ಖಿನ್ನತೆಗೆ ಒಳಗಾಗುತ್ತಾರೆಂದರೆ , ಅವರಿಗೆ ಮನೋವೈದ್ಯರ ಕೌನ್ಸಿಲಿಂಗ್ ಬೇಕಾಗುವುದೂ ಉಂಟು.

ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು ಎಂದು ಸದಾ ಲೆಕ್ಚರ್ ಕೊಡುತ್ತಿರುತ್ತೇವಾದರೂ, ಆ ಕಷ್ಟ ಹೊಂದಿಕೊಳ್ಳುವವರಿಗಷ್ಟೇ ಗೊತ್ತು. ಇನ್ನೂ ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದಾಗಲೇ ವಿಆರ್ಎಸ್ ತೆಗೆದುಕೊಳ್ಳಬೇಕಾದ ಅವಶ್ಯಕತೆಗೆ ಒಳಗಾಗುವವರು, ಕಂಪೆನಿ ಲಾಕ್ ಔಟ್ ಆಗಿ ಇದ್ದಕ್ಕಿದ್ದಂತೆ ನಿರುದ್ಯೋಗಿಗಳಾಗುವವರು ಇಂಥವರು ಬಲುಬೇಗ ಕುಡಿತದಂಥ ಚಟಕ್ಕೆ ಬೀಳುತ್ತಾರೆ. ಕೈಯಲ್ಲಿ ಅಷ್ಟಿಷ್ಟು ಹಣವಿದ್ದರೆ ಇಸ್ಪೀಟು, ಸಟ್ಟಾದಂತಾಹ speculation ದಂಧೆಗಳ ಮೇಲೆ ಹಣ ಹೂಡಿಬಿಡುತ್ತಾರೆ. ತಕ್ಷಣಕ್ಕೆ ಮಾರಲಾಗದೆ, ಖರೀದಿಸುವವರು ಸಿಗದ, ಸಿಕ್ಕರೂ ತುಂಬ ಕಡಿಮೆ ರೇಟಿಗೆ ಮಾರಾಟ ಮಾಡಬೇಕಾದಂತಹ ಆಸ್ತಿಗಳನ್ನು ಖರೀದಿಸಿ ಇದ್ದ ಅಷ್ಟಿಷ್ಟು ಹಣವನ್ನು ಅಲ್ಲಿ lock ಮಾಡಿಕೊಂಡುಬಿಡುತ್ತಾರೆ.

ಮತ್ತೆ ಕೆಲವು ಮಧ್ಯ ವಯಸ್ಕರು ನಿಧಿ ಹುಡುಕಾಟ, ಇಂದಿರಾಗಾಂಧಿಯ ನಾಣ್ಯ, ಚೇಳು ಮಾರ್ಕಿನ ಸ್ಟೋವ್, ರೈಸ್ ಫುಲ್ಲಿಂಗ್ ಮಷೀನ್ ಮುಂದಾದ ಭ್ರಮೆಗಳ ಬೆನ್ನತ್ತಿಕೊಂಡು ಹೊರಡುತ್ತಾರೆ. ಸ್ವಲ್ಪ ಆಧ್ಯಾತ್ಮದತ್ತ ತಿರುಗಿದಂತೆ ಕಾಣಿಸಿದರೂ ಅಲ್ಲಿ ಮತ್ತೆ ಕಲ್ಕಿ, ಸಾಯಿಬಾಬಾ ತರಹದ short cutಗಳನ್ನು ಹಿಡಿಯುತ್ತಾರೆಯೇ ಹೊರತು ಗಂಭೀರವಾದ ಅಧ್ಯಯನ, ಸಾಧನೆ ಕೋರುವಂತಹ ಮಾರ್ಗಗಳನ್ನು ಅನುಸರಿಸುವುದಿಲ್ಲ.

ಮನೆ ಮನೆಗೂ ಡಿಜಿಟಲ್ ಕೆಮೆರಾಗಳು, ಮೊಬೈಲ್ ಕೆಮೆರಾಗಳು ಬಂದ ಮೇಲೆ ಸ್ಟುಡಿಯೋಗಳು ಮುಚ್ಚಿಹೋದವು. ಫೋಟೋಗಳನ್ನು ಪ್ರಿಂಟ್ ಹಾಕಿ ಕೊಡುತ್ತಿದ್ದ ಕಲರ್ ಲ್ಯಾಬ್ ಗಳು ಖಾಲಿಯಾದವು. ವಿಡಿಯೋ ಗ್ರಾಫರ್ ಗಳು ನಿರುದ್ಯೋಗ ಪರ್ವಕ್ಕೆ ಸಿಲುಕಿದರು. ನೇರವಾಗಿ ಕಣ್ಣಿಗೆ ಕಾಣದಿದ್ದರೂ ಪ್ರತಿ ಊರಿನಲ್ಲೂ ಒಂದಷ್ಟು ಮಂದಿ ನಿರುದ್ಯೋಗಿಗಳು, ಅದರಲ್ಲೂ ಮಧ್ಯವಯಸ್ಕ ನಿರುದ್ಯೋಗಿಗಳು ಸೃಷ್ಟಿಯಾದರು. ಅವರಿಗೆ ಬೇರೆ ಕೆಲಸ ಬರದು. ಮಾಡುತ್ತೇವೆಂದು ಹೊರಟರೂ ಹೊಸ ವೃತ್ತಿ ಅಷ್ಟು ಬೇಗನೆ ಸಿಗದು.

ಇಂಥ ಸಂಕಷ್ಟ ಇದಿರಾದವರಿಗೆ ಮುಖ್ಯವಾಗಿ ಬೇಕಾದುದು ಕುಟುಂಬದವರ ಬೆಂಬಲ. ಆಪ್ತರ ಸಲಹೆ ಮತ್ತು ಮಾರ್ಗದರ್ಶನ. ಚೆನ್ನಾಗಿ ಕೈ ನಡೆಯುತ್ತಿದ್ದ ಕಾಲದಲ್ಲಿ ಚಿಕ್ಕದೊಂದು ಆಲ್ಟರ್ನೇಟಿವ್ ಸಂಪಾದನೆಯನ್ನು ಮಾಡಿಕೊಂಡು ಬಿಡಬೇಕು. ಅಲ್ಲಾಗಲೇ ಮುಖ್ಯ ಕಳಸ ಮುಳುಗುತ್ತಿದೆ ಅನ್ನುತ್ತಿದ್ದಂತೆಯೇ ಇಲ್ಲಿ ಹೊಸ ದುಡಿಮೆಯ ಅನ್ವೇಷಣೆ ಆರಂಭಿಸಿ ಬಿಡುಬೇಕು. ಅನೇಕರು ಮಾಡುವ ತಪ್ಪೆಂದರೆ, ಎಲ್ಲ ಸರಿಹೋಗುತ್ತೆ ಬಿಡು ಅಂದುಕೊಳ್ಳುತ್ತಾರೆ. ಎಲ್ಲರಿಗೂ ಆಗಿದ್ದು ನಮಗೂ ಆಗುತ್ತೆ ಬಿಡು ಅಂದುಕೊಳ್ಳುತ್ತಾರೆ. ತೀರಾ ಬೀದಿಗೆ ಬಿದ್ದುಬಿಡ್ತೀವಾ? ಸರ್ಕಾರ ನಮ್ಮ ಸಹಾಯಕ್ಕೆ ಇಲ್ವಾ? ನಮ್ಮ ಯೂನಿಯನ್ ಹೋರಾಟ ಮಾಡದೇ ಇರುತ್ತಾ ಎಂಬಂಥ ಸಮಾಧಾನಗಳನ್ನು ತಮಗೆ ತಾವೇ ಹೇಳಿಕೊಂಡು ಹಡುಗು ಪೂರ್ತಿಯಾಗಿ ಮುಳುಗುವ ತನಕ ಕಾದುಬಿಡುತ್ತಾರೆ. ಅಂಥವರಿಗೆ ಹೆಚ್ಚಿನ ತೊಂದರೆಗಳಾಗುವುದು.

ಬೀದಿಗೆ ಬೀಳುವುದರಲ್ಲೂ ವಿಧಾನಗಳಿವೆ. ಮೊದಲು ಬೀದಿಗೆ ಬಿದ್ದವರು ತಕ್ಷಣ ಚೇತರಿಸಿಕೊಳ್ಳುತ್ತಾರೆ. ತೀರ ಕೊನೆಯಲ್ಲಿ ಬಿದ್ದವರಿಗೆ, ಎದ್ದು ವಾಪಸ್ ಹೋಗೋಣವೆಂದರೆ, ಆವತ್ತಿನ ತನಕ ಇದ್ದ ಮನೆಯೂ ಖಾಲಿ ಉಳಿದಿರುವುದಿಲ್ಲ.

ತುಂಬ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾದ ಕಾಲವಿದು.

(ಸ್ನೇಹ ಸೇತು : ಹಾಯ್ ಬೆಂಗಳೂರ್!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X