• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರ ಕನಸಿನ ಹಕ್ಕಿಯ ರೆಕ್ಕೆ ಮುರಿಯದಿರಲಿ...

By Staff
|

ನಿನಗೋಸ್ಕರ ಮೊದಲು ಏನನ್ನಾದರೂ ಮಾಡಿಕೋ. ನಿನಗೆ ಒಳ್ಳೆಯದನ್ನು ಮಾಡಿಕೊಳ್ಳದೆ ಯಾರಿಗೂ ಒಳ್ಳೆಯದನ್ನ ಮಾಡಲಾರೆ, ನೆನಪಿಟ್ಟುಕೋ...’ ಅಂತ ಹೇಳುತ್ತಿರುತ್ತೇನೆ : ಅವರ ಕನಸಿನ ರೆಕ್ಕೆ ಮುರಿಯದಿರಲಿ ಅಂತ!

  • ರವಿ ಬೆಳಗೆರೆ

Hold fast to dream, for if dreams die life is a broken winged bird that can not fly.

-ಹಾಗಂತ ಎರಡು ಸಾಲು ಒಂದು ಚೀಟಿಯಲ್ಲಿ ಬರೆದಿಟ್ಟು ಹೋದರು ನನ್ನ ಮಿತ್ರರಾದ ಡಾ.ವೆಂಕಟಸುಬ್ಬರಾವ್‌. ಅವರು ನನ್ನ ಸ್ನೇಹಿತರು. ನನ್ನ ಡಾಕ್ಟರು-ಮನಸ್ಸಿಗೂ, ದೇಹಕ್ಕೂ ಎರಡಕ್ಕೂ-ಪ್ರಿಸ್ಕಿೃಪ್ಷನ್‌ ಕೊಡುತ್ತಾರೆ. ಬೇಸರವಾದಾಗ ಅವರೊಂದಿಗೆ ಮಾತನಾಡುತ್ತೇನೆ. ಸೌಖ್ಯವಿಲ್ಲದಂತಾದಾಗ ಅವರನ್ನು ಕಾಣುತ್ತೇನೆ. ‘ಕನಸುಗಳಿಗೆ ಕಚ್ಚಿಕೊಳ್ಳದಿದ್ದರೆ ಈ ಬದುಕು ಹಾರಲಾಗದೆ, ರೆಕ್ಕೆ ಮುರಿದ ಹಕ್ಕಿಯಂತಾಗುತ್ತದೆ.’ ಎಂಬರ್ಥದ ಸಾಲೊಂದನ್ನು ಅವರು ಬರೆದಿಟ್ಟು ಹೋದದ್ದು ಎಷ್ಟು ಸತ್ಯವಲ್ಲವಾ? ಯೋಚಿಸುತ್ತಿದ್ದೆ.

ನಿದ್ದೆಯಲ್ಲಿ ಬೀಳುವ ಕನಸುಗಳು, ಅವು ನಮ್ಮ ಆಹ್ವಾನವಿಲ್ಲದೆ ತಂತಾನೆ ಬರುತ್ತವೆ. ಕೆಲವು ನೆನಪಿರುತ್ತವೆ, ಕೆಲವು ಮರೆತುಹೋಗುತ್ತವೆ. ಆದರೆ ಒಬ್ಬರೇ ಕೂತು ಬದುಕಿನ ಬಗ್ಗೆ ಕಾಣುವ ಕನಸುಗಳಿವೆಯಲ್ಲ? ಅವು ನಿದ್ದೆ ಹತ್ತದಂತೆ ಮಾಡುತ್ತವೆ. ನಾವು ಕಚ್ಚಿಕೊಳ್ಳಬೇಕಾದದ್ದು ಅಂಥ ಕನಸುಗಳಿಗೆ. ಒಬ್ಬ ಕನಸುಗಾರ ಮಾತ್ರ ನಾಯಕನಾಗಬಲ್ಲ, ಏನನ್ನಾದರೂ ಸಾಧಿಸಬಲ್ಲ, ಬಡಿದಾಡಬಲ್ಲ, ಚಂಡಮಾರುತವನ್ನೆದುರಿಸಿ ನೆಲಕ್ಕೆ ಕಾಲೂರಿ ನಿಲ್ಲಬಲ್ಲ.

ಕಷ್ಟ ಬಂದಾಗ ಅದರ ಪರಿಹಾರಕ್ಕಾಗಿ ಬಡಿದಾಡುವುದು ದೊಡ್ಡ ಮಾತಲ್ಲ. ಅದನ್ನು ಎಲ್ಲರೂ ಮಾಡುತ್ತಾರೆ. ಆದರೆ ಕಂಡ ಕನಸು, ಕೈಗೊಂಡ ನಿರ್ಣಯ, ಕೊಟ್ಟ ಮಾತು, ತೆಗೆದುಕೊಂಡ ನಿಲುವು -ಇವುಗಳ ಸಾಕಾರಕ್ಕಾಗಿ ಬಡಿದಾಡುವುದಿದೆಯಲ್ಲ? ಅದಕ್ಕೆ ತುಂಬ ಸಹನೆ ಬೇಕು. ತುಂಬ ಎನರ್ಜಿ ಬೇಕು. ಮುಖ್ಯವಾಗಿ ಕನಸೊಂದಕ್ಕೆ, ಅದು ಈಡೇರುವ ತನಕ ಗಂಟುಬೀಳಬಲ್ಲ ಹಟ ಬೇಕು.

ಅಷ್ಟು ಕಷ್ಟಪಟ್ಟು,ಅಪ್ಪ-ಅಮ್ಮನನ್ನು ಪೀಡಿಸಿ-ಕಾಡಿಸಿ ಹಟ ಮಾಡಿ ಇಂಜೀನಿಯರಿಂಗ್‌ ಸೇರಿಕೊಂಡಿರುತ್ತಾರೆ ಹುಡುಗರು, ಹುಡುಗಿಯರು. ಮೊದಲ ಸೆಮಿಸ್ಟರ್‌ ಮುಗಿಯುವ ಹೊತ್ತಿಗೆ, ನಾನು ಇಂಜಿನೀರಿಂಗ್‌ ಬದಲು ಬೇರೇನೋ ಮಾಡಬೇಕಿತ್ತು. ಪತ್ರಕರ್ತನಾಗಬೇಕಿತ್ತು, ಪ್ಯೂರ್‌ಸೈನ್ಸ್‌ ಓದಬೇಕಿತ್ತು, ಏರೋನಾಟಿಕ್ಸ್‌ ತಗೋಬೇಕಿತ್ತು ಅಂತೆಲ್ಲ ಯೋಚಿಸುವುದಿದೆಯಲ್ಲ? ಅದು ಕನಸು ಕೈಬಿಟ್ಟವರ ಲಕ್ಷಣ.

ಇಂಜಿನೀಯರಿಂಗ್‌ ಮಾಡಿದ ನಂತರವೂ ನೀವು ಕವಿ, ಪತ್ರಕರ್ತ, ಪ್ಯೂರ್‌ಸೈನ್ಸ್‌ನ ವಿದ್ಯಾರ್ಥಿ, ಏರೋನಾಟಿಕಲ್‌ ಇಂಜಿನೀರ್‌ -ಇವೆಲ್ಲ ಆಗಬಹುದಲ್ಲವಾ? ಈಗ ಕೈಗೆತ್ತಿಕೊಂಡಿರುವ ಇಂಜಿನೀರಿಂಗ್‌ನ ಕನಸಿಗೆ ಇವ್ಯಾವುವೂ ಭಂಗ ತರಬಾರದಲ್ಲವಾ? ಈ ಮಾತು ಹಿಂದೆಯೂ ಬರೆದಿದ್ದೇನೆ. ಮನಸು ತುಂಬ ಟ್ರಿಕ್ಕಿಯಾದುದು. ಪರೀಕ್ಷೆ ಇದಿರಾದಾಗ, ಸಮಸ್ಯೆಯಾಂದಿಗೆ ಸೆಣೆಸಾಡಬೇಕಾದಾಗ ನಿಧಾನವಾಗಿ ಪಲಾಯನದ ರೂಟು ಹೇಳಿಕೊಡುತ್ತೆ.

‘ಈ ಲಡಕಾಸಿ ಇಂಜಿನೀರಿಂಗ್‌ ಯಾಕೆ ಮಾಡ್ತೀದಿಯಾ? ಸಮಾಜಸೇವೆ ಮಾಡು, ವಿವೇಕಾನಂದರ ಕುರಿತು ಓದು, ಚಳವಳಿಗೆ ಸೇರಿಕೋ, ಪತ್ರಕರ್ತನಾಗು!’ ಹೀಗೆ ನೂರು ದಾರಿ ಸೂಚಿಸುತ್ತೆ. ಅವೆಲ್ಲವೂ ನೋಡಲಿಕ್ಕೆ, ಕಾಣಲಿಕ್ಕೆ, ಮಾತಾಡಲಿಕ್ಕೆ ತುಂಬ ಉದಾತ್ತವಾದಂಥವು ಅನ್ನಿಸುತ್ತಿರುತ್ತದೆ. ನಿಜಕ್ಕೂ ಅವು ಉದಾತ್ತವಾದವುಗಳೇ. ಆದರೆ ಅವುಗಳ ನೆಪದಲ್ಲಿ, ಮಾಡಬೇಕಿರುವ ಇಂಜಿನೀರಿಂಗ್‌ ಬಿಟ್ಟು ಹೋಗಿಬಿಡುವುದಿದೆಯಲ್ಲ? ಅದು ಶುದ್ಧ ಪಲಾಯನ.

ಅಂಥ ಪರ್ಯಾಯಗಳ ಬಗ್ಗೆ ಯೋಚಿಸಲೇ ಬೇಡಿ. ಇಂಥ ಪಲಾಯನಗಳಿಂದ ತುಂಬ ಸಹಾಯವೇನೂ ಆಗಲ್ಲ. ಹೆಚ್ಚೆಂದರೆ ನೀವೊಬ್ಬ ಇಂಜಿನೀರಿಂಗ್‌ ಡ್ರಾಪ್‌ ಔಟ್‌ ಅನ್ನಿಸಿಕೊಳ್ಳುತ್ತೀರಿ. ನೀವು ವಿವೇಕಾನಂದರಾಗುವುದಿಲ್ಲ. ಪಟ್ಟಾಗಿ ಕೂತು ಓದಲಾಗದವರು ಒಳ್ಳೆಯ ಪತ್ರಕರ್ತರೂ ಆಗುವುದಿಲ್ಲ. ಯಾವುದರಲ್ಲಿ ಯಶಸ್ಸು ಕಾಣಬೇಕಾದರೂ, ಅದಕ್ಕೋಸ್ಕರ ನಿರಂತರವಾಗಿ ದುಡಿಯಬೇಕು. ಉಳಿದೆಲ್ಲ ಕನಸು-ಚಪಲ-ಪಲಾಯನಗಳನ್ನು ಮರೆತು, ಎಲ್ಲ ಕಿಟಕಿ-ಬಾಗಿಲು ಮುಚ್ಚಿಕೊಂಡು ಕುಳಿತು ಕೆಲಸ ಮಾಡಬೇಕು.

ನನ್ನಲ್ಲಿಗೆ ಬರುವ ಯುವಕರಲ್ಲಿ ಕೆಲವರು, ‘ಅಣ್ಣಾ, ಈ ಸಮಾಜಕ್ಕೋಸ್ಕರ ಏನನ್ನಾದರೂ ಮಾಡಬೇಕು, ನನ್ನ ತಾಯಿಗೋಸ್ಕರ ಏನನ್ನಾದರೂ ಮಾಡಬೇಕು, ತಂಗೀರಿದ್ದಾರೆ : ಅವರಿಗೋಸ್ಕರ ಏನನ್ನಾದರೂ... ’ ಅಂತ ಮಾತಾಡುತ್ತಿದ್ದಂತೆಯೇ.

‘ಪರೀಕ್ಷೆ ಯಾವಾಗ? ನಿನಗೋಸ್ಕರ ಮೊದಲು ಏನನ್ನಾದರೂ ಮಾಡಿಕೋ. ನಿನಗೆ ಒಳ್ಳೆಯದನ್ನು ಮಾಡಿಕೊಳ್ಳದೆ ಯಾರಿಗೂ ಒಳ್ಳೆಯದನ್ನ ಮಾಡಲಾರೆ, ನೆನಪಿಟ್ಟುಕೋ...’ ಅಂತ ಹೇಳುತ್ತಿರುತ್ತೇನೆ : ಅವರ ಕನಸಿನ ರೆಕ್ಕೆ ಮುರಿಯದಿರಲಿ ಅಂತ!

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more