• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರವಿ ಬೆಳಗೆರೆ ಓದುಗರಿಗೆ ‘ಸಮಾಧಾನ’!

By Staff
|

‘ಹಾಯ್‌ ಬೆಂಗಳೂರ್‌’ ಸೋದರ ಪತ್ರಿಕೆ ‘ಓ ಮನಸೇ’. ಈ ಪತ್ರಿಕೆಯ ಜನಪ್ರಿಯ ಅಂಕಣಗಳಲ್ಲಿ ‘ಸಮಾಧಾನ’ಕ್ಕೆ ಅಗ್ರಸ್ಥಾನ! ಹಸ್ತ ಮೈಥುನದ ದಿಗಿಲಿನಿಂದ ಹಿಡಿದು, ಎಂಬಿಎ ಮಾಡೋದು ಹೇಗೆ? ಅನ್ನುವವರೆಗೆ ಇಲ್ಲಿ ಹತ್ತಾರು ಪ್ರಶ್ನೆಗಳು. 13-14ವರ್ಷದ ಹುಡುಗ/ಹುಡುಗಿಯರಿಂದ, ಮಧ್ಯ ವಯಸ್ಸಿನ ಗೃಹಿಣಿ/ಬದುಕಿನ ಇಳಿ ಸಂಜೆಯಲ್ಲಿರುವವರ ವರೆಗೆ ಹತ್ತಾರು ಸಮಸ್ಯೆಗಳ ನಿವೇದನೆ. ‘ಓದುಗರ ಪ್ರಶ್ನೆ ಮತ್ತು ರವಿ ಬೆಳಗೆರೆ ಸಮಾಧಾನ ಹೇಗಿರುತ್ತವೆ?’ ಎಂಬುದಕ್ಕೆ ಇಲ್ಲೆರಡು ಉದಾಹರಣೆ.

Ravi Belageres counselling on O Manaseಅಲ್ಲೊಬ್ಬಳು ನಿವೇದಿತಾ ಆಂಟಿ ಅಂತ ಕೂತಿರ್ತಾರೆ!

ತಂದೆಯೇ,

ನಿಮ್ಮ ಮಕ್ಕಳಲ್ಲಿ ಒಬ್ಬಳು ಅಂದುಕೊಂಡು ಈ ಪತ್ರ ಬರೆಯುತ್ತಿದ್ದೇನೆ. ನನ್ನ ತಂದೆ ತೀರಿ ಹೋಗಿ ನಾಲ್ಕು ವರ್ಷಗಳಾದವು. ತಾಯಿ ತುಂಬ ತಿಳಿದವರಲ್ಲ. ನಾವು ನಾಲ್ಕು ಜನ ಮಕ್ಕಳು. ನನ್ನ ತಂದೆ ಮದ್ಯವ್ಯಸನಿಯಾಗಿದ್ದರು. ನಮ್ಮನ್ನೆಲ್ಲ ಹೊಡೆಯುತ್ತಿದ್ದರು. ಖಾಯಿಲೆಯಾಗಿ ತೀರಿಕೊಂಡರು. ಅವರು ಬದುಕಿದ್ದಾಗಲೂ ನಮಗೆ ನರಕಯಾತನೆ. ಸತ್ತ ನಂತರ ಇನ್ನೂ ಹೆಚ್ಚಾಗಿದೆ.

ನಾನು ಪ್ರಥಮ ವರ್ಷದ ಸೆಕ್ರೇಟರಿಯಲ್‌ ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ಪಿಯುನಲ್ಲಿ ತುಂಬ ಒಳ್ಳೆ ಆಂಕ ಗಳಿಸಿದರೂ ಇಂಜಿನೀಯರಿಂಗ್‌ ಮತ್ತು ಮೆಡಿಸಿನ್‌ ಆಸೆಗಳನ್ನು ಬಿಟ್ಟು ಈ ಕೋರ್ಸಿಗೆ ಸೇರಿದೆ. ನನ್ನ ತಂಗಿ ಎಸ್ಸೆಸ್ಸೆಲ್ಸಿ ಫೇಲಾಗಿ ಮನೆಯಲ್ಲಿದ್ದಾಳೆ. ಒಬ್ಬ ತಮ್ಮ ಈಗ ಎಸ್ಸೆಸ್ಸೆಲ್ಸಿ. ಇನ್ನೊಬ್ಬ 9ನೇ ಕ್ಲಾಸು.

ಜೀವನ ನಡೆಸುವುದೇ ಕಷ್ಟವಾಗಿದೆ. ಬೆಳಗ್ಗೆ ಒಂಬತ್ತೂವರೆಯಿಂದ ನಾಲ್ಕುವರೆವರೆಗೆ ಕಾಲೇಜು. ಉಳಿದ ಸಮಯ ನಾನಿರುವುದು ಊರಿಗೂ ಬೆಂಗಳೂರಿನಲ್ಲಿರುವ ಕಾಲೇಜಿಗೂ ಓಡಾಡುವುದರಲ್ಲೇ ಕಳೆದು ಹೋಗುತ್ತದೆ. ಬೆಳಗ್ಗೆ ಆರೂವರೆಗೆ ನಮ್ಮೂರಿನಿಂದ ಬಸ್‌ ಹತ್ತುತ್ತೇನೆ. ಏನಾದರೂ ಕೆಲಸ ಮಾಡಿಕೊಂಡು, ಹಣ ಸಂಪಾದಿಸೋಣವೆಂದರೆ ಹೇಗೆ ಸಾಧ್ಯ?

ಕೆಲಸ ಮಾಡದಿದ್ದರೆ ನಮ್ಮ ಪರಿಸ್ಥಿತಿ ತೀರಾ ಹೀನಾಯವಾಗುತ್ತದೆ. ಏನು ಮಾಡಲಿ ಹೇಳಿ?

-ಕೆ.ಎನ್‌.

ಪ್ರೀತಿಯ ಮಗಳೇ,

ಸೋಮವಾರದಿಂದ ಶನಿವಾರದ ಒಳಗೆ, ಬೆಳಗ್ಗೆ ಒಂಬತ್ತರಿಂದ ಸಂಜೆ ಆರರೊಳಗಾಗಿ ನಮ್ಮ ಆಫೀಸಿಗೆ ಬಂದರೆ, ಎರಡಗಡೆ ತುದಿಯ ಛೇಂಬರಿನಲ್ಲಿ ‘ಜೋಗಿ’ಥರದ ಹೇರ್‌ ಸ್ಟೈಲ್‌ನಲ್ಲಿ ಕನ್ನಡಕವನ್ನಿಟ್ಟುಕೊಂಡು ಸೀರಿಯಸ್ಸಾಗಿ ಕೂತು ಕೆಲಸ ಮಾಡುವ ನಿವೇದಿತಾ ಅಂತ ಒಬ್ಬ ಆಂಟಿ ಸಿಗುತ್ತಾರೆ(ಅವರು ನಮ್ಮ ಆಫೀಸಿಗೆಲ್ಲ ಅತ್ತೆ!).

ಅವರಿಗೆ ನಿನ್ನ ಅಷ್ಟೂ ಮಾಕ್ಸ್‌ ಕಾರ್ಡ್‌ ತೋರಿಸು. ನಮ್ಮ ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಅಂತ ಒಂದು ಸ್ಕೀಮ್‌ ಇದೆ. ಅದರ ಪ್ರಕಾರ ನಿನ್ನ ಓದು ಮುಗಿಯುವವರೆಗಿನ ನಿನ್ನ ಪುಸ್ತಕ, ಫೀ, ಓಡಾಟ ಇತ್ಯಾದಿಗಳ ಖರ್ಚನ್ನು ನಾವು ವಹಿಸಿ(ಡೊನೇಷನ್‌ ಬಿಟ್ಟು)ಕೊಳ್ಳುತ್ತೇವೆ. ನೀನು ಎಲ್ಲಿಯ ತನಕ ಓದಿದರೂ ಓದಿಸುತ್ತೇವೆ. ಮಧ್ಯೆ ಒಂದೇ ಒಂದು ಸಲ ಫೇಲಾದರೂ ಸ್ಕಾಲರ್‌ಷಿಪ್‌ ನಿಲ್ಲಿಸಿಬಿಡುತ್ತೇವೆ.

ಪ್ರತೀ ಪರೀಕ್ಷೆಯ ಮಾಕ್ಸ್‌ ಕಾರ್ಡ್‌, ಪ್ರೋಗ್ರೆಸ್‌ ರಿಪೋರ್ಟ್‌, ಅಟೆಂಡೆನ್ಸ್‌ ಇತ್ಯಾದಿಗಳನ್ನೆಲ್ಲ ನಿವೇದಿತಾ ಖುದ್ದಾಗಿ ನೋಡುತ್ತಾರೆ. ಗದರಿಸುತ್ತಾರೆ. ಸೂಪರ್‌ವೈಸ್‌ ಮಾಡುತ್ತಾರೆ.

ಎಲ್ಲಾ ಪರೀಕ್ಷೆ ಪಾಸಾದ ಮೇಲೆ ನೀನು ಕೆಲಸ ಹುಡುಕಿಕೊಳ್ಳಬೇಕು. ನಿನಗೆ ಎಷ್ಟು ಸಂಬಳ ಬರುತ್ತೆ ಅಂತ ನಮಗೆ ತಿಳಿಸಿ ಒಂದು ಕಾರ್ಡ್‌ ಬರೆಯಬೇಕು. ಅಷ್ಟು ಹೊತ್ತಿಗೆ, ನಿನ್ನ ಹಾಗೇನೇ ತುಂಬ ಜಾಣೆಯಾದ, ತುಂಬ ಬಡವಳಾದ ಇನ್ನೊಬ್ಬ ಮಗಳು ನನಗೆ ನಿನ್ನಂತೆ ಪತ್ರ ಬರೆದಿರುತ್ತಾಳೆ. ಅವಳನ್ನು ನಿನ್ನ ಹತ್ತಿರಕ್ಕೆ ಕಳಿಸುತ್ತೇವೆ. ನಿವೇದಿತಾ ಆಂಟಿ ನಿನ್ನ ಓದಿಸಿದ ಹಾಗೆಯೇ ಅವಳನ್ನು ನೀನು ಓದಿಸಬೇಕು. ಹೀಗೆ ಒಂದು ಚೈನ್‌ ಮುಂದುವರೆಯುತ್ತೆ. ಅಂದ್ಹಾಗೆ, ನಿನ್ನ ಜಾತಿ ಯಾವುದು?

ಅದನ್ನು ನಾವು ಕೇಳುವುದಿಲ್ಲ. ನೀನೂ ಯಾರನ್ನೂ ಕೇಳಬಾರದು. ಪ್ರೀತಿಗೆ ಜಾತಿ ಇರುತ್ತಾ? ನಮ್ಮ ಆಫೀಸಿಗೂ ಜಾತಿಯಿಲ್ಲ. ಬಂದು ಹೋಗು ಮರೀ, ಗುಡ್ಲಕ್‌.

-ಬೆಳಗೆರೆ

***

ಅವರು ಮಾತಿಗೇ ಸಿಕ್ಕುವುದಿಲ್ಲ ಏನು ಮಾಡಲಿ?

ರವಿ ಬೆಳಗೆರೆ ಅವರಿಗೆ,

ನಾನು ಐದು ವರ್ಷಗಳಿಂದ ನಿಮ್ಮ ಓದುಗಳು. ಈಗ ಮದುವೆಯಾಗಿ ಎರಡು ವರ್ಷಗಳಾಗಿವೆ. ಇನ್ನೂ ಮಕ್ಕಳಿಲ್ಲ. ನಮ್ಮದು ವ್ಯಾಪಾರಸ್ಥರ ಕುಟುಂಬ. ನನ್ನ ಗಂಡ ಈ ಮನೆಯಲ್ಲಿ ಐದನೇ ಮಗ. ಹೆಣ್ಣು ಮಕ್ಕಳ ಪೈಕಿ ಇಬ್ಬರಿಗೆ ಇನ್ನೂ ಮದುವೆಯಾಗಿಲ್ಲ.

ಒಟ್ಟು ಕುಟುಂಬವಾದ್ದರಿಂದ ಮನೆಯಲ್ಲಿ ವಿಪರೀತ ಜನ. ಮೇಲಾಗಿ ಮನೆಗೆ ಬರುವವರ ಸಂಖ್ಯೆಯೂ ಜಾಸ್ತಿ. ಬೆಳಗ್ಗೆ ಎದ್ದು ಅಂಗಡಿಗೆ ಹೋಗಿಬಿಟ್ಟರೆ, ಮನೆಯವರು ಮತ್ತೆ ಬರುವುದು ರಾತ್ರಿಯೇ. ಆರಂಭದಲ್ಲಿ ಇದಕ್ಕೆ ಹೇಗೋ ಹೊಂದಿಕೊಂಡೆನಾದರೂ ಇತ್ತೀಚೆಗೆ ಕಷ್ಟವೆನಿಸುತ್ತಿದೆ. ಖಾಸಗಿಯಾಗಿ ಮಾತನಾಡಲಿಕ್ಕೆ ಗಂಡನೊಂದಿಗೆ ಆಗುವುದೇ ಇಲ್ಲ.

ಹಾಗಂತ ಮನೆಯಲ್ಲಿ ಕೆಟ್ಟವರ್ಯಾರು ಇಲ್ಲ. ಯಾರ ಮೇಲೂ ನನಗೆ ದೂರು ಹೇಳಿಕೊಳ್ಳಬೇಕಾಗಿಲ್ಲ. ಆದರೆ ಗಂಡ ಮಾತಿಗೆ ಸಿಕ್ಕುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಅಂತ ಏನಾದರೂ ಇದೆಯೇ?

-ಜಿ.ಎಲ್‌.

ಪ್ರೀತಿಯ ಜಿ.ಎಲ್‌.

ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿ ಇಳಿಸಂಜೆ ಹೊತ್ತಿನಲ್ಲಿ ತಿಂಡಿ ಮಾರುವವರದೊಂದು ಜಾತ್ರೆಯೇ ನೆರೆಯುತ್ತದೆ. ಅಲ್ಲಿಗೆ ಉಳಿದವರೂ ಬರುತ್ತಾರಾದರೂ, ಹೆಚ್ಚಿನವರು ಶ್ರೀಮಂತ, ವ್ಯಾಪಾರೀ ಕುಟುಂಬಳ ವೈಶ್ಯ(ಶೆಟ್ಟರು)ದಂಪತಿಗಳು.

ಇದೇನಿದು, ಹೊರಗಡೆ ತಿನ್ನುವ ಹಂಬಲ ಇಷ್ಟಿರುತ್ತದಾ ಅಂದುಕೊಂಡರೆ ಅದು ತಪ್ಪಾದೀತು. ಅದು, ತಿನ್ನುವ ನೆಪದಲ್ಲಿ ಮಾತನಾಡಲು ಹೊರಬೀಳುವ ಅನಿವಾರ್ಯತೆ. ಒಟ್ಟು ಕುಟುಂಬಗಳಲ್ಲಿ, ತುಂಬ ಕ್ರೌಡ್‌ ಆದ ಮನೆಗಳಲ್ಲಿ, ವಿಪರೀತ ಹೆಚ್ಚಿನ ಕೆಲಸದ ಒತ್ತಡವಿರುವ ದಂಪತಿಗಳ ಮಧ್ಯೆ ಇಂಥದ್ದೊಂದು ಮಾತನಾಡಲಾಗದ ಸ್ಥಿತಿ ಉಂಟಾಗಿಬಿಡುತ್ತದೆ.

ನನ್ನ ಪರಿಸ್ಥಿತಿಯನ್ನೇ ನೋಡಿ. ದಿನಗಟ್ಟಲೆ ನಾನು ಮನೆಗೆ ಹೋಗಿರುವುದಿಲ್ಲ. ಫೋನಿನಲ್ಲೇ ಉಭಯ ಕುಶಲೋಪರಿ ಸಾಂಪ್ರತ! ಆದರೆ ನಾವು ಭೇಟಿಯಾಗಿ ಮೂವತ್ತೊಂದು ವರ್ಷಗಳಾಗಿವೆ. ಮದುವೆಯಾಗಿ ಇಪ್ಪತ್ತೇಳು ವರ್ಷಗಳಾಗಿವೆ. ನಿಮ್ಮದಿನ್ನೂ ಹೊಸ ಸಂಸಾರ.

ಸಾಯಂಕಾಲದ ತಿಂಡಿ ಶಿಕಾರಿ, ಭಾನುವಾರದ ಸಿನಿಮಾ ನೆಪ, ತಿಂಗಳಿಗೊಂದು ಚಿಕ್ಕ ಪ್ರವಾಸ, ವರ್ಷಕ್ಕೊಂದು ಲಾಂಗ್‌ ಟೂರ್‌ -ಮಾತಾಡಿಕೊಳ್ಳಲಿಕ್ಕೆ ಇವತ್ತಿನ ದಿನಮಾನದಲ್ಲಿ ದೊರೆಯಬಹುದಾದದ್ದು ಇಷ್ಟೇ ತಂಗಿ. ಬೀ ಹ್ಯಾಪಿ.

-ಬೆಳಗೆರೆ

(ಸಮಾಧಾನ ಅಂಕಣಕ್ಕೆ ನಿಮ್ಮದೇನಾದರೂ ಪ್ರಶ್ನೆಗಳು ಮತ್ತು ಸಮಸ್ಯೆಗಳಿದ್ದರೇ ತಿಳಿಸಬಹುದು. ಪತ್ರ ಬರೆದು, ಕೊರಿಯರ್‌ ಅಥವಾ ಅಂಚೆ ಮೂಲಕ ಕಳಿಸಬಹುದು. ವಿಳಾಸ: ‘ಸಮಾಧಾನ’ ವಿಭಾಗ, ಓ ಮನಸೇ ಪಾಕ್ಷಿಕ, ನಂ.2, ಪೆಟ್ರೋಲ್‌ ಬಂಕ್‌ ಸಮೀಪ, 80ಅಡಿ ರಸ್ತೆ, ಕದಿರೇನಹಳ್ಳಿ, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 - -ಸಂ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more