• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಡ್ಯದ ಜುಬಿಲಿಪಾರ್ಕ್‌ ಚಳವಳಿಯನ್ನು ಹುಡುಕಿ ಕೊಡುತ್ತೀರಾ?

By Staff
|

ಇಷ್ಟು ಖರ್ಚು ಮಾಡಿ, ಇಷ್ಟು ವರ್ಷ ಕಾದ ನಮ್ಮ ರಾಜಕಾರಣಿಗಳಿಗೆಲ್ಲ ಗೊತ್ತಿದ್ದ ಸತ್ಯವೆಂದರೆ ಜಗತ್ತಿನ ಯಾವ ನೀರಿನ ಜಗಳವೂ ನ್ಯಾಯಾಧಿಕರಣ ಅಥವಾ ಕೋರ್ಟುಗಳಲ್ಲಿ ಬಗೆಹರಿದಿಲ್ಲ. ಅದೇನಿದ್ದರೂ ಕೂತು ಮಾತನಾಡಿ ಕೊಟ್ಟು-ತೆಗೆದುಕೊಂಡು ಬಗೆಹರಿಸಿಕೊಳ್ಳಬೇಕಾದ ಸಂಗತಿ. ಆದರೆ ಹೀಗೆ ಬಗೆಹರಿಸಿಕೊಳ್ಳಲು ಯಾವ ರಾಜಕಾರಣಿಗೂ ಇಷ್ಟವಿಲ್ಲ. ಪ್ರಬಲ ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಚಳವಳಿಯೇ ಬೇಕಾಗಿಲ್ಲ.

ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಚಳವಳಿ ಮಾಡುತ್ತಿದ್ದವರು ಜನತಾ ಬ್ರ್ಯಾಂಡಿನವರು. ಅವರೆಲ್ಲ ಈಗ ಸರ್ಕಾರದಲ್ಲಿದ್ದಾರೆ. ಒಂದೇ ಒಂದು ಕೂಗು ಹಾಕಿದರೆ ಕನಿಷ್ಠ ಪಕ್ಷ ಒಂದು ಲಕ್ಷ ಜನರನ್ನು ಸೇರಿಸುವ ತಾಕತ್ತು ನಮ್ಮ ರೈತನಾಯಕರಿಗಿತ್ತು, ಹಿರಿಯ ನಾಯಕ ಮಾದೇಗೌಡರಿಗಿತ್ತು, ಪುಟ್ಟಣ್ಣಯ್ಯನವರಿಗಿತ್ತು. ಪಾಪ, ಅವರೇಕೋ ಕೂಗೇ ಹಾಕುತ್ತಿಲ್ಲ. ಎಸ್ಸೆಂ ಕೃಷ್ಣ ಇರಿಸಿ ಹೋದ ಬೆಣ್ಣೆ ಮುದ್ದೆ ಇವರ್ಯಾರ ಗಂಟಲುಗಳಿಂದಲೂ ಇನ್ನೂ ಕೆಳಕ್ಕಿಳಿದಿಲ್ಲ. ಇವತ್ತು ಚಳವಳಿ ಮಾಡದಿದ್ದರೆ, ನಮ್ಮ ಪ್ರತಿಭಟನೆ ದಾಖಲಿಸದಿದ್ದರೆ, ಬಿರುಸಾದ-ಕ್ರಮಬದ್ಧ ನ್ಯಾಯಾಂಗ ಹೋರಾಟ ಮುಂದುವರೆಸದಿದ್ದರೆ ಇನ್ನು ಇಪ್ಪತ್ತು ವರ್ಷಗಳ ನಂತರ ಹಿಂದೊಮ್ಮೆ ನಾವು ತಮಿಳರನ್ನು ಬಡಿದು, ಗದುಮಿಕೊಂಡು ಹೋಗಿ ಊರು ಬಿಡಿಸಿದಂತೆ ನಮ್ಮದೇ ರೈತರನ್ನು, ಕನ್ನಡಿಗರನ್ನು ಊರುಬಿಡಿಸಬೇಕಾಗುತ್ತದೆ. ನಗರ ಮತ್ತು ಗ್ರಾಮಾಂತರ ಜನ ನಮ್ಮದೇ ಕಾವೇರಿ ನೀರಿಗಾಗಿ ಕದನಕ್ಕೆ ಬೀಳುತ್ತಾರೆ. ಅಂಥದ್ದೊಂದು ದೂರದರ್ಶಿತ್ವ ನಮ್ಮ ಯಾವ ಪಕ್ಷದ ನಾಯಕನಿಗೂ ಇಲ್ಲ.

ಅವತ್ತು ಮಧ್ಯಂತರ ತೀರ್ಪು ಹೊರಬಿದ್ದಾಗ ನಾವೆಲ್ಲ ಸಿಡಿದು ನಿಂತದ್ದು ನೆನಪಿದೆ. ಬೆಂಗಳೂರು ರಣರಂಗವಾಗಿತ್ತು. ಮಂಡ್ಯದ ನಾಲ್ಕು ತಾಲೂಕುಗಳ ರೈತರ ಮಟ್ಟಿಗೆ ಕಾವೇರಿ ಎಂಬುದು ಕೇವಲ ಕಬ್ಬಿನ-ಅನ್ನದ ಪ್ರಶ್ನೆಯಲ್ಲ. ಭಾವನಾತ್ಮಕವಾಗಿ ಅವರ ಬದುಕುಗಳೊಂದಿಗೆ ಬೆಸುಗೆ ಹಾಕಿಕೊಂಡಿರುವ ಜೀವಜಲ ಕಾವೇರಿ. ಅವತ್ತು ಹೋರಾಟ ಸಮಿತಿ ಅಂತ, ಎಲ್ಲ ಪಕ್ಷಗಳೂ ಸೇರಿ ಮಾಡಿಕೊಂಡಿದ್ದರು. ಹಿರಿಯರಾದ ಮಾದೇಗೌಡರ ಕೈಯಲ್ಲಿ ನಾಯಕತ್ವವಿತ್ತು. ಸಮಿತಿಯ ನಿರ್ಣಯವನ್ನು ಸರ್ಕಾರವೊಂದೇ ಏಕೆ, ಇಡೀ ನಾಡು ಆತಂಕದಿಂದ ನಿರೀಕ್ಷಿಸುತ್ತಿತ್ತು. ಒಂದು ಕೂಗು ಹಾಕಿದರೆ ಲಕ್ಷಾಂತರ ರೈತರು ಬೀದಿಗಿಳಿಯುತ್ತಿದ್ದರು.

ಮೈಸೂರಿಗೂ-ಬೆಂಗಳೂರಿಗೂ ಮಧ್ಯದ ಹೆದ್ದಾರಿಯೇ ದಿನಗಟ್ಟಲೆ ತುಂಡಾಗಿ ಬಿಡುತ್ತಿತ್ತು. ಕೇವಲ ಮಂಡ್ಯ ಜಿಲ್ಲೆಯ ರೈತರನ್ನು ನಿಯಂತ್ರಿಸಲು ಆ ಕಾಲಕ್ಕೆ ಆರು ಜನ ಎಸ್ಪಿಗಳು ಹಗಲೂ ರಾತ್ರಿ ಶ್ರಮಿಸುತ್ತಿದ್ದರು. ಕೆ.ಆರ್‌.ಎಸ್‌.ನ ಅಷ್ಟೂ ದಾಖಲೆಗಳು ಉರಿದು ಬೂದಿಯಾಗುವಂತೆ ಕಚೇರಿಗೇ ಬೆಂಕಿ ಬಿದ್ದು ಉರಿದು ಹೋಯಿತು. ಹಳ್ಳಿ ಹಳ್ಳಿ ಸರದಿಯ ಮೇಲೆ, ತನ್ನ ಜಾನುವಾರುಗಳನ್ನು ಬೀದಿಗೆ ಬಿಟ್ಟುಕೊಂಡು ಕಾವೇರಿಗೆಂದು ಸತ್ಯಾಗ್ರಹ ಮಾಡುತ್ತಿದ್ದವು. ಅವತ್ತು ಕತ್ತಲಾದರೊಂದು ಪಂಜಿನ ಮೆರವಣಿಗೆ, ಬೆಳಕಲ್ಲಿ ಅರೆಬೆತ್ತಲೆ ಮೆರವಣಿಗೆ, ಸಂಜೆಗಳಲ್ಲಿ ದಿಟ್ಟ ದನಿಯ ರೈತನೇತಾರರ ಮಾತು, ಭಾಷಣ! ಕನ್ನಡಿಗರ ಆಕ್ರೋಶಕ್ಕೆ ಚಾಮರಾಜನಗರದಲ್ಲಿ ಲಾರಿಗಳಿಗೆ ಬೆಂಕಿ ಬಿದ್ದರೆ, ತಮಿಳುನಾಡಿನ ದಿಂಬಮ್‌ತನಕ ಬೆಂಕಿ ಹತ್ತಿಕೊಂಡ ಲಾರಿಗಳ ಮೆರವಣಿಗೆ ನಡೆದಿತ್ತು.

ಅವತ್ತೊಂದೇ ಅಲ್ಲ : ಸರಿಯಾಗಿ ಮಳೆಯಾಗದೆ, ತಮಿಳುನಾಡಿಗೆ ನೀರು ಬಿಡಬೇಕೆಂಬ ಸಂಕಟ ಸೃಷ್ಟಿಯಾದಾಗಲೆಲ್ಲ ‘ನಾವು ನೀರು ಬಿಡೆವು’ ಅಂತ ರೈತ ಕೆರಳಿ ನಿಲ್ಲುತ್ತಿದ್ದ. ಅನಿವಾರ್ಯವಾಗಿ ನ್ಯಾಯಾಲಯದ ತೀರ್ಪಿಗೆ ತಲೆಬಾಗಬೇಕಾಗಿ ಬಂದಾಗಲೂ ನಮ್ಮ ಸರ್ಕಾರಗಳು ಕದ್ದು ಮುಚ್ಚಿ ಕಬಿನಿ, ಹಾರಂಗಿಗಳಿಂದ ನೀರು ಬಿಡುತ್ತಿದ್ದರೇ ಹೊರತು ಕೆ.ಆರ್‌.ಎಸ್‌.ನ ತೂಬಿಗೆ ಕೈ ಹಾಕುವ ಸಾಹಸ ಮಾಡುತ್ತಿರಲಿಲ್ಲ. ಆಗ ಅಲ್ಲೂ ಹೋರಾಟ ಸಮಿತಿಗಳು, ಹಿತರಕ್ಷಣಾ ಸಮಿತಿಗಳು ಹುಟ್ಟಿಕೊಂಡವು. ಕೇವಲ ಹದಿನೈದು ವರ್ಷದ ಕೆಳಗೆ ಹಳೇ ಮೈಸೂರಿನಲ್ಲಿ ದಿವಿನಾದ ರೈತ ಜಾಗೃತಿಯಿತ್ತು.

ಅಂಥದೊಂದು ಜಾಗೃತಿಯನ್ನು ಕುಲಗೆಡಿಸಿದ ಮೊದಲ ರಾಜಕಾರಣಿಯೆಂದರೆ, ಕುಂಟ ನಾಗೇಗೌಡ! ಒಂದು ಕಡೆಯಿಂದ ಕಾವೇರಿ ಬೆಲ್ಟಿನ ರೈತ ನಾಯಕರಿಗೆ ಚಿಕ್ಕಪುಟ್ಟ ಕಾಂಟ್ರಾಕ್ಟುಗಳನ್ನು ವಿ.ಪಿ.ನಾಲಾ ಕಾಮಗಾರಿಯಲ್ಲಿ ಕೊಡಿಸಿ, ಮೊದಲ ಸುತ್ತಿನಲ್ಲೇ ಅವರನ್ನು ಹಳ್ಳ ಹಿಡಿಸಿದ. ಅಂಥದೊಂದು ತಂತ್ರ ರೂಪಿಸಿಕೊಟ್ಟದ್ದು ಅಂದಿನ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ. ಆಮೇಲೆ ನ್ಯಾಯಾಲಯದ ತೀರ್ಪಿನ ವಿರುದ್ಧ ಪಾದಯಾತ್ರೆ ಹೊರಟ ನಾಟಕವಾಡಿದ ಎಸ್ಸೆಂ ಕೃಷ್ಣ ಅತ್ಯಂತ ಸೋವಿ ರೇಟಿಗೆ, ಪುಟಗೋಸಿಯಗಲದ ಸೈಟಿಗೆ, ಮಗನ ಚುನಾವಣಾ ಸೀಟಿಗೆ ಅಂತ, ಅಂಥ ಮಾದೇಗೌಡರನ್ನೇ ಹಳ್ಳಹಿಡಿಸಿಬಿಟ್ಟರು. ‘ಕಾವೇರಿ ನೀರನ್ನು ಎಂಗೆ ಬಿಡ್ತಾನೆ ನೋಡ್ತೀವಿ’ ಅಂದ ಮಾದೇಗೌಡರೇ ಎಡಗೈಯಲ್ಲಿ ಸೈಟಿಸಿದುಕೊಂಡು, ತಮಿಳುನಾಡಿಗೆ ನೀರು ಹರಿಯುವುದನ್ನು ನೋಡಿ ಮನೆಗೆದ್ದು ಅದೇ ಹೋದರು. ರೈತ ನಾಯಕ ಪುಟ್ಟಣ್ಮಯ್ಯನವರದೂ ಇದೇ ಪಾಡಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more