• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಡ್ಯದ ಜುಬಿಲಿಪಾರ್ಕ್‌ ಚಳವಳಿಯನ್ನು ಹುಡುಕಿ ಕೊಡುತ್ತೀರಾ?

By Staff
|

‘ಕಾವೇರಿ ನೀರನ್ನು ಎಂಗೆ ಬಿಡ್ತಾನೆ ನೋಡ್ತೀವಿ’ ಅಂದ ಮಾದೇಗೌಡರೇ ಎಡಗೈಯಲ್ಲಿ ಎಸ್ಸೆಂ ಕೃಷ್ಣ ಸರ್ಕಾರದಿಂದ ಸೈಟಿಸಿದುಕೊಂಡು, ತಮಿಳುನಾಡಿಗೆ ನೀರು ಹರಿಯುವುದನ್ನು ನೋಡಿ ಮನೆಗೆದ್ದು ಹೋದರು. ರೈತ ನಾಯಕ ಪುಟ್ಟಣ್ಮಯ್ಯನವರದೂ ಇದೇ ಪಾಡಾಯಿತು. ಕಾವೇರಿ ಕಣಿವೆಯ ರಾಜಕಾರಣ... ಭ್ರಷ್ಟತೆಯ ರೂಪ ಒಂದೆರೆಡಲ್ಲ!

ಕುಮಾರಸ್ವಾಮಿ ಕದಲುತ್ತಿಲ್ಲ. ದೇವೇಗೌಡರು ಗಂಟಲ ನಾಳಕ್ಕೇ ಮಲಬದ್ಧತೆಯಾದವರಂತೆ ಆಡಲೋ ಬೇಡವೋ ಅಂತ ಮಾತಾಡುತ್ತಿದ್ದಾರೆ. ಕಾಂಗ್ರೆಸ್ಸಿಗರಿಗೆ ಏನು ಮಾತಾಡಿದರೆ ಎಂಥ ಆಪತ್ತೋ ಎಂಬ ಸನ್ನಿ ಸುತ್ತಿಕೊಂಡಿದೆ. ತುಂಬ ನಿರೀಕ್ಷೆ ಇರದೆ ಹೋದರೂ, ನಮ್ಮ ರೈತ ನಾಯಕರು ಹೀಗೆ ಮಳೆಯಲ್ಲಿ ಹಾಸಿಗೆಗಳಂತಾಗಿಬಿಡುತ್ತಾರೆ ಅಂದುಕೊಂಡಿರಲಿಲ್ಲ. ಇದೆಲ್ಲದರ ನಡುವೆ ಅಂಗೈ ತೋರಿಸಿ ಅಪಶಕುನವೆನ್ನಿಸಿಕೊಂಡವರು ಗಿರೀಶ್‌ ಕಾರ್ನಾಡ್‌.

ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಹೊರಬಿದ್ದಾಗಲೇ ಹೊತ್ತಿ ಉರಿದಿದ್ದ ಕರ್ನಾಟಕ, ಅಂತಿಮ ತೀರ್ಪು ಕೇಳಿಸಿಕೊಂಡು ದಾವಾನಲವೇ ಆದೀತೆಂದು ಭಾವಿಸಿ ಆತಂಕಗೊಂಡಿದ್ದವರಿಗೆ-ಕಣ್ಣೆದುರು ಕಾಣುತ್ತಿರುವುದು ವಾಟಾಳ ನಾಗರಾಜರ ಕತ್ತೆ-ಕುರಿ ಚಳವಳಿಗಳೆಂಬ ಪ್ರಹಸನಗಳು ಮಾತ್ರ!

‘ಕನ್ನಡಿಗರಾದ ನಿಮಗೆ ನರವೇ ಇಲ್ಲ’ ಎಂದು ತೀರ್ಮಾನಿಸಿದಂತಿರುವ ಇಂಗ್ಲಿಷ್‌ ಮತ್ತು ಕನ್ನಡ ‘ಟೈಮ್‌ ಸಾಫ್‌ ಇಂಡಿಯಾ’ಗಳೆರಡೂ ಮುಖಪುಟದಲ್ಲಿ ಕಾವೇರಿ ತೀರ್ಪಿನ ಬಗ್ಗೆ ಗೇಣುದ್ದದ ಸುದ್ದಿ ಪ್ರಕಟಿಸಿ ಸುಮ್ಮನಾದವು.

‘ಕನ್ನಡ ಪ್ರಭ’ ಕಿರುಚಲೆತ್ನಿಸುತ್ತಿದೆಯಾದರೂ, ಅದರ ಕೂಗು ಕನ್ನಿಂಗ್‌ಹ್ಯಾಮ್‌ ರೋಡು ದಾಟುವುದು ಕಾಣೆ. ‘ಪ್ರಜಾವಾಣಿ’ಯ ಮುಖಪುಟದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆಯೆಂಬ ಧಾಟಿಯಿದೆ. ಒಳಪುಟಗಳಲ್ಲಿ ನ್ಯಾಯಾಧಿಕರಣದ ತೀರ್ಪಿನ ಲಾಭಗಳ ಪಟ್ಟಿಯಿದೆ. ಇದ್ದುದರಲ್ಲಿ ‘ವಿಜಯ ಕರ್ನಾಟಕ’ವೇ ಮೇಲು. ಒಂದು ಟಿ.ಎಂ.ಸಿ. ಎಂದರೆ ಎಷ್ಟು ನೀರು ಅಂತ ವಿವರಿಸಲು ಯತ್ನಿಸುವುದರಿಂದ ಹಿಡಿದು, ದೂರದರ್ಶಿತ್ವವಿಟ್ಟುಕೊಂಡು ಈ ತೀರ್ಪಿನ ಕುರಿತು ಬರೆದಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾವೇರಿಯ ತೀರ್ಪಿಗೆ ಸಂಬಂಧಪಟ್ಟಂತೆ ಜನರಲ್ಲಿ ಸ್ಪಷ್ಟ ನಿಲುವು ಮೂಡಿಸಲಾಗದ ಗೊಂದಲ ಪತ್ರಿಕೆಗಳಲ್ಲೇ ಇದೆ.

ಇದಕ್ಕಿಂತ ಗೊಂದಲವಿರುವುದು ಹಳೇ ಮೈಸೂರಿನ ರಾಜಕಾರಣಿಗಳಲ್ಲಿ ಹಾಗೂ ರೈತ ನಾಯಕರಲ್ಲಿ! ಈತನಕ ಕಾವೇರಿ ತೀರ್ಪಿಗಾಗಿ ನಾವು(ಸರ್ಕಾರದವರು) ಕೊಟ್ಟ ಲಾಯರ್‌ ಫೀಜೇ ನೂರಾ ಹನ್ನೆರಡು ಕೋಟಿ ರೂಪಾಯಿಗಳು ಅಂದರೆ ನಂಬುತ್ತೀರಾ? ಆ ಪೈಕಿ ಒಂಬತ್ತು ಕೋಟಿ ರೂಪಾಯಿಗಳನ್ನಷ್ಟೇ ನಾವು ಜೂನಿಯರ್‌ ಅಡ್ವೋಕೇಟುಗಳ ಮೇಲೇ ಖರ್ಚು ಮಾಡಿದ್ದೇವೆ. ಗಮನಿಸಬೇಕಾದ ಸಂಗತಿಯೆಂದರೆ ಇತ್ತೀಚೆಗೆ ಎರಡು ವರ್ಷದಿಂದ ಸೇರ್ಪಡೆಯಾದ ಬ್ರಿಜೇಶ್‌ ಕಾಳಪ್ಪ ಎಂಬುವವರನ್ನು ಹೊರತುಪಡಿಸಿದರೆ, ಕಾವೇರಿ ಕೇಸಿಗಾಗಿ ಬಡಿದಾಡಿದ ವಕೀಲರಲ್ಲಿ ಒಬ್ಬೇ ಒಬ್ಬರು ಕೂಡ ಹಳೇ ಮೈಸೂರಿನ ವಕೀಲರಿರಲಿಲ್ಲ! ಹೊರರಾಜ್ಯದ ವಕೀಲರದು ಸಿಂಹಪಾಲು.

ಉಳಿದಂತೆ ಮೋಹನ್‌ ಕಾತರಕಿ, ಜವಳಿ ಮುಂತಾದ ವಕೀಲರೆಲ್ಲ ಉತ್ತರ ಕರ್ನಾಟಕದವರು. ಇದೊಂದು ದೊಡ್ಡ ಅಬ್ಜೆಕ್ಷನಲ್‌ ಸಂಗತಿ ಅಂತ ಅಲ್ಲವಾದರೂ, ವಕೀಲರ ನೇಮಕಾತಿಗಳು ನಮ್ಮನ್ನಾಳಿದ ಮುಖ್ಯಮಂತ್ರಿಗಳು, ನೀರಾವರಿ ಮಂತ್ರಿಗಳು, ಹಿರಿಯ ಅಧಿಕಾರಿಗಳು ಮುಂತಾದವರ ವಶೀಲಿಯಿಂದಾಗಿ ಆದವು ಎಂಬುದನ್ನು ‘ನಮ್ಮ ಪ್ರಜೆ’ಗಮನಿಸಬೇಕು. ಬೊಕ್ಕಸದಿಂದ ಹರಿದು ಹೋದ ನೂರಾ ಹನ್ನೆರಡು ಕೋಟಿ ರೂಪಾಯಿಗಳ ಲಾಯರ್‌ ಫೀಸು ಹೇಗೆಲ್ಲ ಖರ್ಚಾಯಿತು ಎಂಬುದರ ವಿವರ ನೋಡಿದರೆ, ಕಾವೇರಿ ತೀರದ ಮತ್ತು ತೆರಿಗೆದಾರನ ಕಣ್ಣೀರು ಕಪಾಳಕ್ಕೆ ಹರಿದಾವು. ದಿಲ್ಲಿಯಿಂದ ಈ ವಕೀಲರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆಗೆ ಬರುವಾಗಲೆಲ್ಲ ವಿಮಾನಗಳಲ್ಲಿ ಬಂದರು, ಹೆಂಡತಿ ಮಕ್ಕಳೊಂದಿಗೆ ಬಂದರು, ಪಂಚತಾರಾ ಹೊಟೇಲುಗಳಲ್ಲಿ ತಂಗಿದರು, ತಮ್ಮೂರುಗಳಿಗೆ ಹೋಗಿ ಬಂದರು! ಇವರಿಗೆ ಕೊಟ್ಟ ಲಾಯರು ಫೀಜಿನಲ್ಲಿ ಚಿಕ್ಕದೊಂದು ನೀರಾವರಿ ಪ್ರಾಜೆಕ್ಟೇ ಆಗಿಬಿಡುತ್ತಿತ್ತೇನೋ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X