• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾತಿ-ಧರ್ಮ ಮತ್ತು ಸಾಹಿತಿಗಳು (ಭಾಗ-1)

By ರವಿ ಬೆಳಗೆರೆ
|

‘ಒಬ್ಬ ಬ್ರಾಹ್ಮಣ ಮತ್ತು ಒಂದು ನಾಗರಹಾವು ಏಕಕಾಲಕ್ಕೆ ಎದುರಿಗೆ ಬಂದರೆ ಮೊದಲು ಬ್ರಾಹ್ಮಣನನ್ನು ಕೊಲ್ಲು ಅಂದರು ಮಹಾನ್‌ ನಾಸ್ತಿಕ ಹೋರಾಟಗಾರ ಪೆರಿಯಾರ್‌!’ ಅಂತ ಬರೆದ ಕನ್ನಡ ಲೇಖಕನ ಹೆಗಲ ಮೇಲೆ ಕೈಹಾಕಿ ಮುಗುಳ್ನಗುತ್ತಾ, ‘ಎಂಥ ಬ್ರೆೃಟ್‌ ರೈಟಿಂಗ್‌ ಕಣಯ್ಯಾ ನಿಂದೂ.. ! ಎಷ್ಟೊಂದು ಓದಿಕೊಂಡಿದೀಯಾ.. ’ ಅಂದರು. ಹಾಗಂದವರು ಬ್ರಾಹ್ಮಣರೂ ಆಗಿದ್ದರು!

‘ಪುರೋಹಿತಶಾಹಿ ಮನಸ್ಥಿತಿ ನಿರ್ನಾಮವಾಗಬೇಕು! ಇವತ್ತಿನ ಸಮಾಜದ ಎಲ್ಲ ದುಷ್ಟತನ, ದೌರ್ಜನ್ಯ, ಶ್ರೇಣೀಕೃತ ವ್ಯವಸ್ಥೆಗೆ ಬ್ರಾಹ್ಮಣರೇ ಕಾರಣ! ಶತಶತಮಾನಗಳಿಂದ ಬ್ರಾಹ್ಮಣರು ನಮ್ಮನ್ನು ಶೋಷಿಸುತ್ತ ಬಂದಿದ್ದಾರೆ.. ’ ಅಂದರು. ಕೇಳಿಸಿಕೊಂಡವರು ಚಪ್ಪಾಳೆ ಹೊಡೆದರು.

‘ಬ್ರಾಹ್ಮಣರು ಮಾಂಸ ತಿನ್ನೋಕೆ ಶುರುವಾದಾಗಿನಿಂದಲೇ ಮಾಂಸದ ರೇಟು ಜಾಸ್ತಿಯಾಯಿತು’ ಅಂದರು.

ಬ್ರಾಹ್ಮಣರನ್ನು ಹೀಯಾಳಿಸಿ ನಾಟಕ ಬರೆದರು. ಸಿನಿಮಾ ತೆಗೆದರು. ಉತ್ತರ ದೇಶದಲ್ಲಿ ತಿಥಿ ಮಾಡಿಸುವ ಬ್ರಾಹ್ಮಣರನ್ನು ‘ಪಂಡ’ ಎನ್ನುತ್ತಾರೆ. ಹಾಗನ್ನುವುದಕ್ಕೆ ಮೂಲ ಕಾರಣ ‘ಷಂಡ’ ಎಂಬುದು ಅಂದರು. ಬ್ರಾಹ್ಮಣನ ಬುದ್ಧಿವಂತಿಕೆ ಅಂದರೆ, ಅದು ಕುತಂತ್ರ ಅಂದರು. ಆಚಾರಿ, ಪೂಜಾರಿ, ಭಟ್ಟ, ಶಾಸ್ತ್ರೀ, ಅಯ್ಯಂಗಾರಿ, ಪುಳಿಚಾರು -ಇವೆಲ್ಲವೂ ಲೇವಡಿಯ ,ಗೇಲಿಯ, ಅಪಹಾಸ್ಯದ ಶಬ್ದಗಳಾದವು.

‘ಈ ನಾಡಿನ ದಲಿತ, ಹಿಂದುಳಿದ, ಅಲ್ಪಸಂಖ್ಯಾತರೆಲ್ಲ ಒಂದಾಗಬೇಕು’ ಅಂದರು.

ಬ್ರಾಹ್ಮಣರಲ್ಲಿರುವ ಸ್ಮಾರ್ತ, ವೈಷ್ಣವ, ಶ್ರೀವೈಷ್ಣವರು ಒಂದು ಕಡೆ ಸೇರಿ ‘ಬ್ರಾಹ್ಮಣ ಸಭಾ’ ಕಾರ್ಯಕ್ರಮ ಮಾಡುತ್ತೇವೆ ಅಂದರೆ -‘ದುಷ್ಟರೆಲ್ಲ ಒಂದಾಗಿ ಬಿಟ್ಟಿರಿ’ ಅಂದರು. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯಗಳೆರಡೂ ನಮ್ಮ ಕ್ರಾಂತಿಕಾರಿಗಳ ಕಣ್ಣಿಗೆ ಎಲ್ಲ ಶತಮಾನಗಳಲ್ಲೂ ಅಪಾಯಕಾರಿಗಳಾಗಿ, ಶೋಷಣೆ ಮಾಡುವವರಾಗಿ, ಯಾವತ್ತೂ ಕೈಗೆ ಸಿಕ್ಕರೂ ಒದೆಯ ಬೇಕಾದವರಾಗಿ ಕಾಣಿಸಿದರು.

‘ನೀವು ಶತಶತಮಾನಗಳಿಂದ ಮಾಡುತ್ತ ಬಂದಿದ್ದ ಶೋಷಣೆಗೆ ಇವತ್ತು ನಿಮ್ಮ ತಲೆಮಾರು ಕಂದಾಯ ಕಟ್ಟಲೇ ಬೇಕು ’ ಅಂದರು. ‘ಇಕ್ರಲಾ’ ಅಂದರು. ‘ಒದೀರಲಾ’ ಅಂದರು!

ಫೈನ್‌. ಅವೆಲ್ಲವೂ ಕ್ರಾಂತಿಕಾರಿಯಾಗಿ ಕಾಣಿಸಿದವು.

ಒಬ್ಬ ಮುಸಲ್ಮಾನನನ್ನು ನಿಲ್ಲಿಸಿ?

ಕವಿ ಕೆ.ಎಸ್‌.ನಿಸಾರ್‌ ಅಹಮದ್‌ರೊಬ್ಬರನ್ನು ಬಿಟ್ಟರೆ, ಕನ್ನಡದಲ್ಲಿ(ಅದೂ ಕರಾವಳಿಯಲ್ಲಿ) ಯಾವುದೇ ಮುಸ್ಲಿಂ ಗಂಡು ಅಥವಾ ಹೆಣ್ಣು ಪದ್ಯ ಬರೆದರೆ, ಕತೆ, ಕಾದಂಬರಿ ಬರೆದರೆ ‘ಅವರದು ಮುಸ್ಲಿಂ ಸಂವೇದನೆಯಿರುವ ಕ್ರಿಯಾಶೀಲತೆ ’ ಅಂದರು. ಅಪ್ಪಿ ತಪ್ಪಿ ಕೂಡ ಹಿಂದೂ ಸಂವೇದನೆಯನ್ನು ಇವರು ಗೌರವಿಸಿ ಮಾತನಾಡಲಿಲ್ಲ.

ಬ್ರಾಹ್ಮಣ ಲೇಖಕ ಜಾತಿ ಬಿಟ್ಟು ಮದುವೆಯಾದರೆ, ಮಾಂಸ ತಿನ್ನುವುದನ್ನು ರೂಢಿಸಿಕೊಂಡರೆ, ತನ್ನದೇ ಮನೆಯಲ್ಲಿ ಜಾತ್ಯಂತರ ವಿವಾಹ ನಡೆಸಿಕೊಟ್ಟರೆ ಅದನ್ನು ‘ಲಿಬರೇಟೆಡ್‌ ಮೈಂಡ್‌’ ಅಂದರು. ‘ಜಾತಿ ವಿನಾಶವಾಗಿ ಸಮಸಮಾಜ ಬರಬೇಕಾದರೆ ಮೇಲ್ಜಾತಿಯವರು ಕೆಳಜಾತಿಯವರನ್ನು ಮದುವೆಯಾಗಬೇಕು’ ಅಂದರು. ಹಿಂದೂ ಹುಡುಗಿ, ಒಬ್ಬ ಮುಸ್ಲಿಂ ಯುವಕನೊಂದಿಗೆ ಓಡಿ ಹೋದರೆ ‘ಅದು ಕ್ರಾಂತಿಕಾರಿ ಘಟನೆ’ ಅಂದರು.

ಮುಸ್ಲಿಂ ಹುಡುಗನೊಬ್ಬ ಹಿಂದೂ ಹುಡುಗಿ ತನ್ನೊಂದಿಗೆ ಬರಲು ಒಪ್ಪದಿದ್ದಾಗ ಅವಳನ್ನು ಕೊಂದು ಹಾಕಿದರೆ ‘ಯಾರೋ ಒಬ್ಬ ಮುಸಲ್ಮಾನ ತಪ್ಪು ಮಾಡಿದನೆಂದು, ನೀವು ಎಲ್ಲಾ ಮುಸಲ್ಮಾನರನ್ನೂ ದ್ವೇಷಿಸಿದರೆ ಹೇಗೆ? ನಿಮ್ಮದು ಮನು ಪೀಡಿತ ಮನಸ್ಸು ’ ಅಂದರು. ಮದರಸಾಗಳಿಂದ ಎದ್ದು ಹೋದ ಪಾನ್‌ ಇಸ್ಲಾಮಿಕ್‌ ಪ್ರೇರಿತ ಯುವಕರು ಸೆಂಟ್ರಲ್‌ ಮಾರ್ಕೆಟ್ಟಿನಲ್ಲಿ ಬಾಂಬು ಸಿಡಿಸಿ ಹಿಂದೂ-ಮುಸ್ಲಿಂರೆನ್ನದೆ ನೂರಾರು ಜನರನ್ನು ಕೊಂದು ಹಾಕಾದಾಗ, ‘ಅವರು ವಿದ್ಯೆಯಿಂದ ವಂಚಿತರಾದ ಅಮಾಯಕರು. ಅವರನ್ನು ದ್ವೇಷಿಸುವುದಕ್ಕಿಂತ, ಅವರು ಹಿಂದೂ ಬಹುಸಂಖ್ಯಾತರ ಮಧ್ಯೆ ಅನುಭವಿಸುತ್ತಿರುವ ಅಭದ್ರತೆಯನ್ನ, ಇನ್‌ಸೆಕ್ಯೂರಿಟಿಯನ್ನ ನಾವು ಅರ್ಥಮಾಡಿಕೊಳ್ಳಬೇಕು!’ ಅಂದರು.

ಇವತ್ತಿನ ತನಕ ಚಂದ್ರಶೇಖರ ಪಾಟೀಲ, ಲಂಕೇಶ್‌, ಅನಂತಮೂರ್ತಿ, ದೇವನೂರ ಮಹಾದೇವ, ಸಿದ್ಲಿಂಗಯ್ಯ ಅಥವಾ ಮತ್ಯಾವುದೇ ಹೆಸರಾಂತ ಕನ್ನಡ ಲೇಖಕನೂ ಮುಸ್ಲಿಂರ ಪೈಕಿ ಒಬ್ಬೇ ಒಬ್ಬ ಮುಸಲ್ಮಾನನ್ನು ನಿಲ್ಲಿಸಿ, ‘ನೀನು ನಿನ್ನ ಜಾತಿಯ ನಿರ್ಗತಿಕರನ್ನು ಶೋಷಣೆ ಮಾಡ್ತಿದೀಯ. ಕಾಂಡೋಮ್ನ ಬಳಸಬೇಡಿ ಅಂತ ಬೋಧಿಸಿ ಬಡತನ ಹೆಚ್ಚಿಸುತ್ತಿದ್ದೀಯ. ಸೈನ್ಸ್‌ ಓದಿಕೊಳ್ಳಲು ಬಿಡದೆ ನಿನ್ನ ಮಕ್ಕಳಿಗೆ ಅರಬ್ಬಿ-ಫಾರ್ಸಿ ಕಲಿಸುತ್ತಿದ್ದೀಯ. ನೀನೊಬ್ಬ ಶೋಷಕ. ಬ್ರಾಹ್ಮಣರ ಜುಟ್ಟಿನಂತೆಯೇ ನಿನ್ನ ಗಡ್ಡ ಕೂಡ ಶೋಷಕ ಧರ್ಮದ ಸಂಕೇತ!’ ಅಂತ ಹೇಳಿಲ್ಲ.

ಒಂದು ಕಡೆಯಿಂದ ಲೆಕ್ಕ ಹಾಕುತ್ತ ಬಂದರೆ, ಜಾತಿ ನಾಶದ ಪ್ರಯತ್ನ-ಕ್ರಾಂತಿಕಾರಿ ನಿಲುವುಗಳು, ಸಮಸಮಾಜದ ನಿರ್ಮಾಣ ಪ್ರಯತ್ನ, ಪುರೋಹಿತ ಶಾಹಿ ವಿರೋಧಿ ಹೋರಾಟ, ಉಳಿದವರಿಗಿಂತ ಮೊದಲು ನಾವು-ನಾವು ನಮ್ಮ ಜಾತಿಗಳನ್ನು ಕಳೆದುಕೊಳ್ಳಬೇಕು ಎಂಬ ಉದಾತ್ತ ಚಡಪಡಿಕೆ -ಇವೆಲ್ಲ ಆರಂಭವಾಗಿ ನಲವತ್ತು ವರ್ಷಗಳೇ ಆದವು. ನೂರಾರು, ಸಾವಿರಾರು ಬ್ರಾಹ್ಮಣರು ಜಾತಿ ಧಿಕ್ಕರಿಸಿ ಲಿಬರೇಟ್‌ ಆದರು. ಮಾಂಸ ತಿಂದರು. ಜಾತ್ಯಂತರ ವಿವಾಹಗಳಾದರು. ತಮ್ಮದೇ ಜಾತಿಯ ಮಡಿ ಹೆಂಗಸರನ್ನು ಧಿಕ್ಕರಿಸಿದರು. ಅವಹೇಳನ ಮಾಡಿ ಬರೆದರು.

ಹಂದಿ ತಿಂದರಾ?

ಇಷ್ಟಾಯಿತಲ್ಲ? ಈ ನಲವತ್ತು ವರ್ಷದ ಕ್ರಾಂತಿ ಪಥದಲ್ಲಿ, ಬದಲಾವಣೆಯಲ್ಲಿ, ಸಂಕ್ರಮಣದಲ್ಲಿ ಒಬ್ಬೇ ಒಬ್ಬ ಮುಲ್ಲಾ ಅಥವಾ ಒಬ್ಬೇ ಒಬ್ಬ ಮುಸಲ್ಮಾನ ಕುರಾನದ ವಿರುದ್ಧ, ಸುನ್ನಿ ಅಥವಾ ಷಿಯಾ ಸಂಪ್ರದಾಯಗಳ ವಿರುದ್ಧ ಮಾತಾಡಿದುದನ್ನು ಕೇಳಿದ್ದೀರಾ? ಒಬ್ಬ ಕ್ರಾಂತಿಕಾರಿ ಮುಸಲ್ಮಾನ ತನ್ನ ಮನೆಯಲ್ಲಿ ಜಾತ್ಯಂತರ ವಿವಾಹ ಮಾಡಿಸಿದುದನ್ನು ನೋಡಿದ್ದೀರಾ? ಒಬ್ಬೇ ಒಬ್ಬ ಲಿಬರಲ್‌ ಮುಸಲ್ಮಾನ ಹಂದಿ ತಿನ್ನುವುದಾಗಿ ಘೋಷಿಸಿದುದು ನಿಮ್ಮ ಗಮನಕ್ಕೆ ಬಂದಿದೆಯೇ?

ಬ್ರಾಹ್ಮಣರಲ್ಲಿ, ಹಿಂದೂ ದೇಶದ ಮತ್ಯಾವುದೇ ಮೇಲು ಜಾತಿಗಳಲ್ಲಿ ಆದ ಯಾವ ಬದಲಾವಣೆಯೂ ಮುಸ್ಲಿಮ್‌ ಪುರೋಹಿತಶಾಹಿಯಲ್ಲಿ ಆಗಿಲ್ಲ. ಅಟ್‌ ಲೀಸ್ಟ್‌, ನಿಮ ಸಾಹಿತ್ಯ-ಭಾಷಣಗಳಿಂದಾಗಿ ಆಗಿಲ್ಲ. ಅಲ್ಲಿ ಬಂಡಾಯದ ಬಾವುಟ ಏಳಲಿಲ್ಲ.

ಗಮನಿಸಿ ನೋಡಿದರೆ, ಉಳಿದ ಮಡಿವಂತರಿಗಿಂತ ತೀವ್ರವಾಗಿ, ಭಯಂಕರವಾಗಿ ಮುಸ್ಲಿಮರಲ್ಲಿ ಅನೇಕರು ಆತಂಕಕಾರಿ ಉಗ್ರ ಇಸ್ಲಾಮಿಕ್‌ ಚಳವಳಿಯ ಕಡೆಗೆ ಆಕರ್ಷಿತರಾದರು. ಬ್ರಾಹ್ಮಣರಿಗಿಂತ, ಲಿಂಗಾಯಿತರಿಗಿಂತ, ವಕ್ಕಲಿಗರಿಗಿಂತ ಹೆಚ್ಚು ಉತ್ಸಾಹದಿಂದ ತಮ್ಮ ಧಾರ್ಮಿಕ ಮೂಲವನ್ನು ಅಸರ್ಟೈನ್‌ ಮಾಡಿಕೊಂಡರು. ಒಸಾಮಾ ಬಿನ್‌ ಲ್ಯಾಡೆನ್‌ ಮಾಡಿದ್ದು ಸರಿಯೆಂದರು, ಅವನ ಪರವಾಗಿ ಬೀದಿಗಳಿದರು.

ಇವತ್ತು ಇಡೀ ಪ್ರಪಂಚಕ್ಕೆ ತಲೆ ನೋವಾಗಿರುವುದು ಪಾಕ್‌ ಇಸ್ಲಾಮಿಕ್‌ ಉಗ್ರವಾದವೇ ಹೊರತು ಬ್ರಾಹ್ಮಣರಲ್ಲ, ಆರೆಸ್ಸೆಸ್ಸಲ್ಲ, ಹಿಂದೂ ಐಕಮತ್ಯವಲ್ಲ, ಬಿಜೆಪಿ ಅಲ್ಲವೇ ಅಲ್ಲ. ಆದರೆ ಯಾರೂ ಕೂಡ ಮುಸ್ಲಿಂ ಉಗ್ರವಾದವನ್ನು ಬೆಂಬಲಿಸುವ ಮುಲ್ಲಾನನ್ನು ನಿಲ್ಲಿಸಿ ‘ಏನ್ರಯ್ಯಾ ನೀವು ಮಾಡ್ತಿರೋದು .. ’ ಅಂತ ಗದರಿಸಿ ಕೇಳಲಿಲ್ಲ.

ಎರಡನೇ ಭಾಗ

English summary
True colors of Kannada literary stalwarts, intellectuals as seen in critical times for example : URA v/s SLB, 07
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X