• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವುದಕ್ಕೂ ಒಂದ್ಸಲ ಡಾಕ್ಟ್ರ ಹತ್ರಕ್ಕೆ ಹೋಗಿ ಬನ್ನಿ..

By Staff
|
ಒನ್ ಮಿನಿಟ್ ಹೃದಯ ನಾಳ ಪರೀಕ್ಷೆ ಮಾಡಿಸಿಕೊಂಡಿರಾ? ಇಷ್ಟಕ್ಕೂ ಯಾರ್ಯಾರು ಮಾಡಿಸಿಕೊಳ್ಳಬೇಕು ಅಂದರೆ ; ನೂರಮೂವತ್ತು ಬೈ ತೊಂಬತ್ತರಷ್ಟು ಬ್ಲಡ್ ಪ್ರೆಷರ್ ಇರುವವರು, ಡಯಾಬಿಟಿಸ್ ಮತ್ತು ವಿಪರೀತ ಕೊಲೆಸ್ಟ್ರಾಲ್ ಇರುವವರು, ನನ್ನಂತೆ ಸ್ಥೂಲಕಾಯದವರು, ಸಿಗರೇಟು ಅಥವಾ ಬೀಡಿ ಸೇದುವವರು, ಕೂತಲ್ಲೇ ಕೆಲಸ ಮಾಡಿ ದಿನ ಕಳೆಯುವವರು, ಒಂದೇ ಮಾತಿನಲ್ಲಿ ಹೇಳುವುದಾದರೆ ನಲವತ್ತೈದು ವರ್ಷ ದಾಟಿದವರು!

Take Good Care of Your Health!ಅನುಮಾನ ಬಂದಾಗ ಒಂದ್ಸಲ ಡಾಕ್ಟ್ರ ಹತ್ರಕ್ಕೆ ಹೋಗಿ, ಪೂರ್ತಿ ಚೆಕ್ ಮಾಡಿಸಿಕೊಂಡು, ಏನೂ ಕಾಯಿಲೆ ಇಲ್ಲ ಅನಿಸಿಕೊಂಡು ಬಂದು ಬಿಡಬೇಕು ನೋಡಿಅಂತ ಐದಾರು ವರ್ಷಗಳ ಹಿಂದ ಹೇಳಿದ್ದ ಹೆಣ್ಣುಮಗಳ ಹೆಸರು ರಾಧಾ. ಆಕೆ ಕರ್ನಾಟಕ ಬ್ಯಾಂಕಿನ ಹಿರಿಯ ಉದ್ಯೋಗಿ. ಇವತ್ತಿಗೂ ಆ ಮಾತು ಹೇಳಿದಾಗ ಆಕೆ ಕುಳಿತಿದ್ದ ಜಾಗ, ಮಾತಿನ ಧಾಟಿ, ಉಟ್ಟ ಸೀರೆ -ಪ್ರತಿಯೊಂದು ನನ್ನ ನೆನಪಿಗಿವೆ. ನನ್ನ ನೆನಪಿನ ಶಕ್ತಿಯ ಸಮಸ್ಯೆಯೇ ಅದು. ಯಾವ ಚಿಕ್ಕ ವಿವರವನ್ನೂ ನನಗೆ ಮರೆಯಲು ಬರುವುದಿಲ್ಲ. ಮಿದುಳಿನ ಕಂಪ್ಯೂಟರಿನಲ್ಲಿ ಡಿಲೀಟ್ ಎಂಬ ಹೆಸರಿನ ಕಮ್ಯಾಂಡು ನನ್ನ ಪಾಲಿಗೆ ಸೃಷ್ಟಿಯೇ ಆಗಿಲ್ಲ.

ಅದಿರಲಿ, ಹೆಚ್ಚು ಕಡಿಮೆ ಅವೇ ದಿನಗಳಲ್ಲಿ ಬೆಂಗಳೂರಿನ ಡಯಾಕಾನ್ ಆಸ್ಪತ್ರೆಯ ಡಾ.ಅರವಿಂದ ನನ್ನ ಕೈಲಿದ್ದ ಸಿಗರೇಟ್ ಕಿತ್ತಿಕೊಂಡು ನೆಲಕ್ಕೆ ಬಿಸಾಡಿ ತುಳಿದು ಇನ್ನೊಂದು ಮಾತು ಹೇಳಿದ್ದರು.

ಇದೊಂದನ್ನು ಬಿಟ್ಟು ಬಿಡಿ ರವೀ, ಇವತ್ತು ನಿಮಗೆ ಗೊತ್ತಾಗಲ್ಲ. ಆದರೆ ಒಂದು ವಯಸ್ಸಿನಲ್ಲಿ ಸಣ್ಣಗೆ ಎದೆ ನೋವು ಶುರುವಾಗುತ್ತೆ. ನಮ್ಮಭಾಷೇಲಿ ಅದನ್ನು ಆಂಜೈನಲ್ ಪೇಯ್ನ್ ಅಂತೀವಿ. ಹೃದ್ರೋಗದ ಸ್ಪಷ್ಟ ಆರಂಭ ಅದು. ಹಾಗೆ ಶುರುವಾಗೋ ಹೃದ್ರೋಗ ನಿಮ್ಮ ಜೀವನದ ಕ್ವಾಲಿಟಿಯನ್ನೇ ಹಾಳು ಮಾಡಿ ಬಿಡುತ್ತೆ. ಈಗಿರೋ ಹಾಗೆ ಚುರುಕಾಗಿ, ನಿಮಗೆ ಬೇಕಾದ ಹಾಗೆ ಓಡಾಡಿಕೊಂಡು ಇರೋಕಾಗಲ್ಲ. listen to meಅಂದಿದ್ದರು. ಅವತ್ತು ಅವರು ನಿಂತಿದ್ದ ಭಂಗಿ, ಅವರ ಅಂಗಿ, ಅದರ ಕಲರು -ಎಲ್ಲವೂ ನೆನಪಿದೆ.

ನಮಗೇನಾಗಿದೆ? ಚೆನ್ನಾಗೇ ಇದೀವಿ.. ಅನ್ನಿಸ್ತಾ ಇರುತ್ತೆ. ಆದರೆ ರವೀ, ಇದ್ದಕ್ಕಿದ್ದ ಹಾಗೆ ಒಂದು ಹಂತದಲ್ಲಿ ತುಂಬ ಫಾಸ್ಟ್ ಆಗಿ ನಮಗೆ ವಯಸ್ಸಾಗೋಕೆ ಶುರುವಾಗಿ ಬಿಡುತ್ತೆ. ಮಧ್ಯ ವಯಸ್ಕರು ನಾವು ಅಂದುಕೊಳ್ತಾ ಇರುವಾಗಲೇ, ನಮಗೇ ಗೊತ್ತಿಲ್ಲದ ಹಾಗೇನೇ ಮುದುಕರಾಗಿ ಬಿಟ್ಟಿರ್ತೇವೆ. youg must be carefulಅಂದವರು ಡಾ.ಜವಳಿ. ಫೋನ್ ನಲ್ಲಿ ಮಾತಾಡುತ್ತಿದ್ದರಾದ್ದರಿಂದ ಅವರ ದನಿಯಷ್ಟೇ ನೆನಪಿದೆ.

***

ಮೊನ್ನೆ ಶುರುವಾಯಿತು ನೋಡಿ ಅಂಥದ್ದೊಂದು ಸಣ್ಣ ಎದೆ ನೋವು! ಕೂತಲ್ಲೇ ಚಿಕ್ಕದೊಂದು ಛಳುಕು. ಎದೆಯ ಬಲಗಡೆ ನೋವಾಗ್ತಿದೆ, ಹಾರ್ಟ್ ಪ್ರಾಬ್ಲಮ್ ಇರಲಿಕ್ಕಿಲ್ಲ ಬಿಡು ಅಂದುಕೊಂಡು ಎದೆ ನೀವುತ್ತಾ ಬರವಣಿಗೆ ಮುಂದುವರೆಸುತ್ತಿದ್ದಾಗಲೇ ಕರೆಕ್ಟಾಗಿ ಎಡಗಡೆ ಎದೆ ಛಳಕ್ಕಂತು. ಹೀಗೆ ಮೂರ್ನಾಲ್ಕು ದಿನ ಆಗೊಮ್ಮೆ ಈಗೊಮ್ಮೆ ಎದೆ ನೋವು ಕಾಣಿಸಿಕೊಂಡಾಗ ನನ್ನ ಪಾಲಿನ ಧನ್ವಂತರಿ ಡಾ.ವೆಂಕಟಸುಬ್ಬರಾವ್ ಅವರಿಗೆ ಫೋನು ಮಾಡಿದೆ.

ಸರಿ ಸುಮಾರು ಮೂವತ್ತೈದು ವರ್ಷಗಳ ಸ್ಮೋಕಿಂಗು, ಸುಮಾರು ಇಪ್ಪತ್ತು ವರ್ಷಗಳ ಕುಡಿತ, ಹದಿನೈದು ವರ್ಷಗಳ ಹುಚ್ಚು ಕುದುರೆಯ ಓಟದಂಥ ಜೀವನ, ಕಂಡಲ್ಲಿ ಉಂಡು-ಸಿಕ್ಕಲ್ಲಿ ಬದುಕಿದ್ದು.. ಡಾಕ್ಟ್ರೇ, ಇವೆಲ್ಲ ಸೇರಿ ನನ್ನ ಯಡವಟ್ಟು ಹೃದಯವನ್ನು ಏನೇನು ಮಾಡಿವೆಯೋ? ಏನಾದರೂ ಆಗೋಕೆ ಮುಂಚೆ ಒಂದು ಟೆಸ್ಟು ಮಾಡಿಸಿ ಬಿಡೋಣವಾ? ಯಾಕೋ ಎದೆ ನೋಯ್ತಿದೆ. ಇದು ಗ್ಯಾಸ್ಟ್ರೈಟಿಸಿನ ನೋವಿನ ಥರಾ ಕಾಣಿಸ್ತಿಲ್ಲಅಂದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕ್ಕ ಅಪಾಯ ಕಂಡು ಬಂದರೂ, ಇರುವ ಎಲ್ಲ ತರಹದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಬಿಡುವ, ಆದರೆ ಸಿಗರೇಟು ಬಿಡಲೊಲ್ಲದ ಮೂರ್ಖ ನಾನು ಅಂತ ಅವರಿಗೆ ಗೊತ್ತು. ಡಯಾಬಿಟಿಸ್ ಇರುವುದರಿಂದ ಅಕಸ್ಮಾತ್ ಹೃದಯಾಘಾತವಾದರೂ ನನಗದರ ನೋವು ಗೊತ್ತಾಗುವುದಿಲ್ಲ ಅಂತಲೂ ಅವರಿಗೆ ಗೊತ್ತು. ಎಲ್ಲ ಗೊತ್ತಿರುವುದರಿಂದಲೇ ನನಗೆ ಅವರು ಸೂಚಿಸಿದ್ದು ಒನ್ ಮಿನಿಟ್ ಸಿ.ಟಿ.ಕರೋನರಿ ಆಂಜಿಯೋಗ್ರಾಮ್ಎಂಬ ಪರೀಕ್ಷೆಯನ್ನು. ಇದೊಂಥರಾ ಹೆಂಗಸರ ಹೇರ್ ಸ್ಟೈಲ್ ನಿಪುಣೆ ಒನ್ ಮಿನಿಟ್ ಉಮಾ ಹೆಸರಿದ್ದ ಹಾಗಿದೆಯಲ್ಲ ಡಾಕ್ಟೇ ಅಂದೆ. ಅವರು ಜೋಕಿಗೆ ಅವಕಾಶ ಕೊಡದೆ ನನ್ನನ್ನು ಬೆಂಗಳೂರಿನ ಬಸವನಗುಡಿಯ, ಆರ್.ವಿ.ಟೀಚರ್ಸ್ ಕಾಲೇಜಿನಿ ಹತ್ತಿರದ ಟ್ರಿನಿಟಿ ಹಾಸ್ಟಿಟಲ್ ಅಂಡ್ ಹಾರ್ಟ್ ಫೌಂಡೇಶನ್ನಿಗೆ ಕಳಿಸಿದರು.

ಅಲ್ಲಿ ಇಂದಿರಾ ರಮೇಶ್ ಇದ್ದಾರೆ. ಬಹಳ ಕಾಲದಿಂದ ನಮ್ಮ ಪತ್ರಿಕೆ ಓದುಗರು ಆಕೆ. ಅವರೇ ಬಾಗಿಲಲ್ಲಿ ನಿಂತು ಸ್ವಾಗತಿಸಿ ಒಳಕ್ಕೆ ಕರೆದೊಯ್ದು ನನ್ನ ಆಂಜಿಯೋಗ್ರಾಮ್ ಮಾಡಿಸಿ ಕಳಿಸಿಕೊಟ್ಟದ್ದು. ಇಷ್ಟಕ್ಕೂ ಇಂಥ ಒನ್ ಮಿನಿಟ್ ಹೃದಯ ನಾಳ ಪರೀಕ್ಷೆ ಮಾಡಿಸಬೇಕಾದವರು ಯಾರು ಅಂದರೆ ; ನೂರಮೂವತ್ತು ಬೈ ತೊಂಬತ್ತರಷ್ಟು ಬ್ಲಡ್ ಪ್ರೆಷರ್ ಇರುವವರು, ಡಯಾಬಿಟಿಸ್ ಮತ್ತು ವಿಪರೀತ ಕೊಲೆಸ್ಟ್ರಾಲ್ ಇರುವವರು, ಹೃದ್ರೋಗದಿಂದ ನರಳುವ ಅಪ್ಪ-ಅಮ್ಮ-ಅಕ್ಕ ಮುಂತಾದವರಿರುವವರು, ನನ್ನಂತೆ ಸ್ಥೂಲಕಾಯದವರು, ಸಿಗರೇಟು ಅಥವಾ ಬೀಡಿ ಸೇದುವವರು, ಕೂತಲ್ಲೇ ಕೆಲಸ ಮಾಡಿ ದಿನ ಕಳೆಯುವವರು, ಬೈಪಾಸ್ ಗ್ರಾಫ್ಟ್ ಮಾಡಿಸಿಕೊಂಡವರು, ವಿಪರೀತವಾಗಿ ಮಾನಸಿಕ ಒತ್ತಡ ಮತ್ತು ಟೆನ್ಷನ್ ಇರುವಂಥ ವೃತ್ತಿಗಳನ್ನು ಮಾಡುವವರು ಹಾಗೂ ಒಂದೇ ಮಾತಿನಲ್ಲಿ ಹೇಳುವುದಾದರೆ ನಲವತ್ತೈದು ವರ್ಷ ದಾಟಿದವರು!

ಮೇಲೆ ಹೇಳಿದವುಗಳ ಪೈಕಿ ಮುಕ್ಕಾಲು ಮೂರು ಪಾಲು ಕಾರಣಗಳು ನನಗೇ ಇವೆ! ಅವುಗಳಿಗೆ ಕಳಸವಿಟ್ಟ ಹಾಗೆ ಸಣ್ಣ ಎದೆನೋವು! ಹಾಗನ್ನಿಸಿದ್ದರಿಂದಲೇ ಟ್ರಿನಿಟಿ ಆಸ್ಪತ್ರೆಗೆ ದಡಬಡಿಸಿ ಓಡಿದೆ. ಮೊನ್ನೆ ಮೊನ್ನೆಯ ತನಕ ಆಂಜಿಯೋಗ್ರಾಮ್ ಮಾಡಿಸಬೇಕು ಅಂದರೆ ಒಂದಿಡೀ ದಿನ ಆಸ್ಪತ್ರೆಗೆ ಅಡ್ಮಿಟ್ ಆಗಬೇಕು. ತೊಡೆಯ ರಕ್ತನಾಳದಿಂದ ಹೃದಯದ ತನಕ ಏನನ್ನೋ ಏರಿಸಿ, ಎಂಟು ತಾಸು ಅಲುಗಾಡದೆ ಮಲಗಿಸಿ, ಅನಸ್ತೇಷಿಯಾ ಕೊಟ್ಟು -ಅದರದೊಂದು ರಾಮಾಯಣ ಬಿಡಿ. ಆದರೆ ಈಗ ಎಲ್ಲವೂ ಒನ್ ಮಿನಿಟ್! ಹೋದ ಹತ್ತಿಪ್ಪತ್ತು ನಿಮಿಷಗಳಲ್ಲಿ ಪರೀಕ್ಷೆ ಮುಗಿದೇ ಹೋಯಿತು.

ಕೈಗೊಂದು ಸೂಚಿ fix ಮಾಡಿದ್ದರು ಮತ್ತು ತಲಾ ಹತ್ತತ್ತು ಸೆಕೆಂಡುಗಳಂತೆ ಆರು ಸಲ ಉಸಿರು ಬಿಗಿ ಹಿಡಿಯಲು ಹೇಳಿದ್ದರು ಎಂಬುದನ್ನು ಬಿಟ್ಟರೆ ಬೇರೆ ಯಾವ ಶ್ರಮವೂ ಇಲ್ಲ. ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮುರಳೀಧರ್ ಮತ್ತು ನಮ್ಮ ಓದುಗರಾದ ಇಂದಿರಾ ರಮೇಶ್ ಅಲ್ಲೇ ನನ್ನ ಪಕ್ಕದಲ್ಲೇ ನಿಂತಿದ್ದರು. ಅಪ್ಪನಿಗೆ ನಿಜಕ್ಕೂ ಹೃದಯವಿದೆಯಾ ಅಂತ ಬಾನಿ ಕಂಪ್ಯೂಟರಿನಿ ಪರದೆ ನೋಡುತ್ತಾ ನಿಂತಿದ್ದಳು.

ರವಿ ಬೆಳಗೆರೆ ಹೃದಯ ಕಣ್ರೀ.. ಸರಿಯಾಗಿ ನೋಡ್ರಪ್ಪಾಅಂತ ಯಾರೋ ತಮಾಷೆ ಮಾಡುತ್ತಿದ್ದರು. ಎಲ್ಲವೂ ಒನ್ ಮಿನಿಟ್ನಲ್ಲಿ ಮುಗಿದು ಹೋಯಿತು. ಕೈಯಲ್ಲಿ ರಿಪೋರ್ಟ್ ಹಿಡಿದು ಕುಳಿತ ವೈದ್ಯರ ಮುಖದಲ್ಲಿ ಸಣ್ಣದೊಂದು ಅಚ್ಚರಿ.

ಏನೂ ಆಗೇ ಇಲ್ವಲ್ಲ ರವೀ! No major blocks!ಅಂದರು ಡಾ.ಮುರಳೀಧರ್. ಹೃದಯದ ಯಾವ ನಾಳದಲ್ಲೂ blocks ಹುಟ್ಟಿಕೊಂಡಿಲ್ಲ. ಇದ್ದಕ್ಕಿದ್ದಂತೆ ಹೃದಯಾಘಾತವಾಗುವ ಛಾನ್ಸಿಲ್ಲ. ಕೆಲವರಿಗೆ ಪರೀಕ್ಷೆ ಮಾಡ್ತೀವಿ ಮಲಗಿ ಅಂದ ಕೂಡಲೇ ರಕ್ತದ ಒತ್ತಡ ವಿಪರೀತವಾಗಿಬಿಡುತ್ತೆ. ನಿಮಗೆ ಆ ಸಮಸ್ಯೆಯೇ ಇಲ್ಲ. You are fineಅಂದರು.

ತಕ್ಷಣ ನೆನಪಾದದ್ದೇ ಕರ್ನಾಟಕ ಬ್ಯಾಂಕಿನ ರಾಧಾ ಮೇಡಂ. ಅನುಮಾನ ಬಂದಾಗ ಒಂದ್ಸಲ ಡಾಕ್ಟ್ರ ಹತ್ರಕ್ಕೆ ಹೋಗಿ ಪೂರ್ತಿ ಚೆಕ್ ಮಾಡಿಸಿಕೊಂಡು, ಏನೂ ಖಾಯಿಲೆ ಇಲ್ಲ ಅನ್ನಿಸಿಕೊಂಡು ಬಂದು ಬಿಡಬೇಕು ನೋಡಿ! ಹಾಗನ್ನಿಸಿಕೊಂಡು ಬರಲಿಕ್ಕಾಗಿ ನಾನು ಖರ್ಚು ಮಾಡಿದ್ದು ಎಂಟೇ ಸಾವಿರ ರೂಪಾಯಿ ಮತ್ತು ಒಂದೇ ಒಂದು ತಾಸು.

ಅಂದಹಾಗೆ, ನಿಮ್ಮ ವಯಸ್ಸೆಷ್ಟು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X