• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇತರರು ಸಹಿಸಿಕೊಳ್ಳಲೇಬೇಕು ಅಂತ ವಾದಿಸುವುದು ಅಪರಾಧ!

By Staff
|

ನಾನು ರೂಪ, ಲಾವಣ್ಯ, ದೇಹದ ಗಾತ್ರ ಇತ್ಯಾದಿಗಳ ಬಗ್ಗೆ ಮಾತಾಡುತ್ತಿಲ್ಲ. ಇರುವ ರೂಪಕ್ಕೆ, ದೇಹಕ್ಕೇನೇ ನಾವು ಮಾಡಿಕೊಳ್ಳುವ ಅಲಂಕಾರ, ನಮ್ಮ ಪ್ರೆಸೆಂಟಿಬಿಲಿಟಿಯ ಬಗ್ಗೆ ಬರೆಯುತ್ತಿದ್ದೇನೆ!

Presentable looks earn respect‘ಮೊದಲೇ ಚೆನ್ನಾಗಿರ್ತಿತ್ತು. ರಾತ್ರಿ ನೀವು ಆಫೀಸಿನಲ್ಲೇ ಉಳ್ಕೊಂಡಿದ್ರೂ ಬೆಳಗ್ಗೆ ಎಲ್ರೂ ಬರೋ ಹೊತ್ತಿಗೆ ನೀಟಾಗಿ ರೆಡಿಯಾಗಿ ಬರೀತಾ ಕೂತಿರ್ತಿದ್ರಿ. ಇನ್‌ ಷರ್ಟ್‌ ಮಾಡ್ಕೋತಿದ್ರಿ. ಷೂ ಹಾಕೋತಿದ್ರಿ. ಈ ನಡುವೆ ಅದೆಲ್ಲ ಬಿಟ್ಟು ಬಿಟ್ಟಿದ್ದೀರಿ. ಸುಡುಗಾಡು ಕಲರಿನದೊಂದು ಟ್ರ್ಯಾಕ್‌ ಪಾುಂಟು, ಮುದುರಿದ ಕಾಟನ್‌ಷರ್ಟ್‌ ಹಾಕ್ಕೊಂಡು, ರಬ್ಬರ್‌ ಚಪ್ಲಿ ಮೆಟ್ಟಿಕೊಂಡು ಓಡಾಡ್ತೀರಿ...’ ಅಂತ ಆಫೀಸಿನ ಹುಡುಗನೊಬ್ಬ ಆಕ್ಷೇಪಿಸುತ್ತಿದ್ದ.

‘ನನಗೆ ವಯಸ್ಸಾಗ್ತಿರೋ ಹಾಗಿದೆ!’ ಅಂತ ತಮಾಷೆ ಮಾಡಿ ಸುಮ್ಮನಾಗಿರಿಸಿದೆನಾದರೂ ಈ ಬಗ್ಗೆ ಯೋಚಿಸದೇ ಇರಲು ಸಾಧ್ಯವಾಗಲಿಲ್ಲ. ನಿಜ ಹೇಳಬೇಕೆಂದರೆ, ನಲವತ್ತು ದಾಟಿದ ಮೇಲೆ ಒಂದು ಹಂತದಿಂದ ತುಂಬ fast ಆಗಿ ಮುದುಕರಾಗೋಕೆ ಶುರು ಮಾಡ್ತೀವಿ ಅನ್ನೋದು ದೇಹಕ್ಕಿಂತ ಮನಸ್ಸಿಗೇ ಹೆಚ್ಚು ಅನ್ವಯವಾಗುತ್ತದೆ.

ನನ್ನ ವಯಸ್ಸಿನ ಅನೇಕ ಮಿತ್ರರು, ಸಹಪಾಠಿಗಳು ನನಗಿಂತ ತುಂಬ ವಯಸ್ಸಾದವರ ಹಾಗೆ ಕಾಣುತ್ತಾರೆ. ಕೆಲವರಿಗಾಗಲೇ ಹಲ್ಲು ಬಿದ್ದು ಹೋಗಿವೆ. ತಲೆಗೂದಲು ವಿರಳವಾಗಿವೆ. ವಿಪರೀತ ಬಿಳಿ ಕೂದಲು. ಹಲ್ಲು ಬಿದ್ದು ಹೋಗಿರುವುದರಿಂದ ಮಾತಾಡುವಾಗ ಗಾಳಿ ಈಚೆಗೆ ಬಂದು ‘ತುಸ್‌’ಅಂತ ಶಬ್ದ ಮಾಡುತ್ತಾರೆ. ‘ಕಟ್ಟಿಸಿಕೋಬಾರದೇನೋ?’ ಅಂತ ಕೇಳಿದರೆ ಶುದ್ದ ಬಳ್ಳಾರಿ ಭಾಷೆಯಲ್ಲಿ ‘ಯಾವಾಕಿ ಗಲ್ಲ ಕಡೀಬೇಕಾಗೈದೆ ಬಿಡು?’(ಯಾರ ಕೆನ್ನೆ ಕಚ್ಚಬೇಕಾಗಿದೆ ಬಿಡು) ಅಂತ ಉಡಾಫೆಯ ಉತ್ತರ ಕೊಡುತ್ತಾರೆ.

ಮತ್ತೆ ಕೆಲವರು ಯಾವಾಗಲೋ ಹೇರ್‌ ಡೈ ಮಾಡಿಸಿ, ನಂತರ ಅದನ್ನು ನಿರ್ವಹಿಸಲಾಗದೆ ಬಿಟ್ಟು ಸ್ವಲ್ಪ ಕಪ್ಪು ಕೂದಲು, ಒಂದಷ್ಟು ಬಿಳೀ ಕೂದಲು, ಬಣ್ಣ ಗೆಟ್ಟ ಡೈನಿಂದಾಗಿ ಕೆಂಚುಗೂದಲು -ಹೀಗೆ ತಲೆಯಲ್ಲಿ ಮೂರು ಮೂರು ಬಣ್ಣಗಳಾಗಿ ಫ್ಯಾನ್ಸಿ ಡ್ರೆಸ್ಸುಗಳಂತೆ ಓಡಾಡುತ್ತಾರೆ. ನನ್ನಂತೆಯೇ ಜಿದ್ದಿಗೆ ಬಿದ್ದು ಹೊಟ್ಟೆ ಬಿಟ್ಟುಕೊಂಡವರು, ಸೀಟು ಅಕರಾಳ ವಿಕರಾಳವಾದವರು -ಎಲ್ಲ ಇದ್ದಾರೆ, ಇದ್ದೇವೆ. ಯಾರೊಂದಿಗೆ ಈ ಬಗ್ಗೆ ಮಾತಾಡಿದರೂ, ‘ಸಾಕು ಬಿಡು, ವಯಸ್ಸಾಯ್ತಲ್ಲ? ನಮ್ಮನ್ನು ಇನ್ಯಾರು ನೋಡೋರಿದಾರೆ?’ ಅಂತಲೇ ಮಾತು ಮುಗಿಸುತ್ತಾರೆ.

ಯಾಕೆ, ಯೌವನ ಮುಗಿಸುತ್ತಾರೆ? ಜೀವನಾಸಕ್ತಿ ಬತ್ತಿರುತ್ತದಾ? ಬೇರೆ ಕಡೆಗೆಲ್ಲೋ ಗಮನ ಹರಿದಿರುತ್ತದಾ? ಅಥವಾ ಹಾಗೆ ನಿರ್ಲಕ್ಷ್ಯದಿಂದಿರುವುದೇ ನಿಜವಾದ ಗಾಂಭೀರ್ಯ ಮತ್ತು ಹಿರಿತನದ ಲಕ್ಷಣ ಅಂದುಕೊಂಡು ಬಿಟ್ಟಿರುತ್ತೇವಾ?

‘ಆಫ್‌ ಮಾಡೋದು, ಆನ್‌ ಮಾಡೋದು, ಫೋನ್‌ ಬಂದಾಗ ರಿಸೀವ್‌ ಮಾಡೋದು, ಇಷ್ಟು ಬಿಟ್ರೆ ಮೊಬೈಲ್‌ನಲ್ಲಿ ಬೇರೆ ಏನು ಮಾಡೋಕು ನಂಗೆ ಗೊತ್ತಾಗಲ್ಲ ನೋಡಿ!’ ಅಂತ ಅನೇಕರು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಿರುತ್ತಾರೆ. ಒಂದು ಹೊಸ ಸಾಧನದ ಬಗ್ಗೆ ತಿಳಿದುಕೊಳ್ಳದೆ ಇರುವುದೇ ದೊಡ್ಡತನ ಎಂಬ ಧಾಟಿ ಅವರದು. ಅದೇ ಸರಿ ಅಂತಲೂ ಅಂದುಕೊಂಡು ಬಿಟ್ಟಿರುತ್ತಾರೆ. ತಮ್ಮದು ಹೊಸತನಕ್ಕೆ ಒಗ್ಗಿಕೊಳ್ಳದ ಅಪ್‌ಡೇಟ್‌ ಆಗಲೊಲ್ಲದ ಜಾಯಮಾನ, ತಮ್ಮ ಬುದ್ಧಿವಂತಿಕೆ ಮಂಕಾಗಿರುತ್ತದೆ ಅಂತ ಅವರಿಗೆ ಅನ್ನಿಸುವುದೇ ಇಲ್ಲ.

ಮೂರು ಕಾಸಿನ ಮೊಬೈಲ್‌ ಅನ್ನೋ ಸಾಧನ ಅರ್ಥವಾಗದಷ್ಟು ಕ್ಲಿಷ್ಟದ್ದಲ್ಲ. ಬರವಣಿಗೆ, ನಾಟಕ, ನಿರ್ದೇಶನ, ಸಂಗೀತ ಮುಂತಾದ ಕ್ರಿಯೇಟಿವ್‌ ಜಗತ್ತುಗಳಲ್ಲಿ ತೊಡಗಿಸಿಕೊಂಡಿರುವ ಮಂದಿ ‘ಕಂಪ್ಯೂಟರಿನ ತಂಟೆಗೆ ನಾನು ಹೋಗಲ್ಲ’ ಅಂತ ಘೋಷಿಸಿದರೆ, ನನಗದು ಅರ್ಥವಾಗುತ್ತದೆ. ಬರವಣಿಗೆ ಎಂಥ ಏಕಾಂತವನ್ನು ಬಯಸುವ ಕ್ರಿಯೆ ಎಂಬುದು ನನಗೆ ಗೊತ್ತಿದೆ. ‘ಅಲ್ಲಿ ನಾನಿರೋದು ಅನಿವಾರ್ಯವಾದ್ದರಿಂದ ಇರ್ತೇನೆ. ಇಲ್ದೆ ಇದ್ರೆ, ನಾನು ಬರೆಯೋಕೆ ಕೂತಾಗ ಅಲ್ಲಿ ನಾನೂ ಇರದಂಥ ಏಕಾಂತವಿರಬೇಕು’ ಅಂತ ಮಹಾನ್‌ ಕವಿಯಾಬ್ಬರು ಹೇಳಿದ ಮಾತು ಸತ್ಯ. ಕಂಪ್ಯೂಟರ್‌ ಬರವಣಿಗೆಯನ್ನು ನಿಸ್ಸಾರಗೊಳಿಸುತ್ತದೆ. ಅಥವಾ ಹಾಗಂತ ನನಗೆ ಭಯವಿದೆ.

ಇಂಥದ್ದೊಂದು ಭಯವಿಲ್ಲದೆ ಇದ್ದವರು ಕಂಪ್ಯೂಟರ್‌, ಮೊಬೈಲು, ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಅನೇಕ deviceಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಚಿಕ್ಕ ವಯಸ್ಸಿನವರು ತುಂಬ ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ನಲವತ್ತು ಮೇಲ್ಪಟ್ಟವರೇಕೆ ‘ನಂಗೇನೂ ಗೊತ್ತಾಗಲ್ಲಪ್ಪ!’ಅಂತ ಪ್ಯಾಲಿತನವನ್ನು ಹಿರಿಮೆಯನ್ನಾಗಿ ಪ್ರದರ್ಶಿಸುತ್ತಾರೆ?

ಯಾಕೆ ಉಡುಪಿನ ಬಗ್ಗೆ ಆಸಕ್ತಿ ಕಳೆದುಹೋಗುತ್ತದೆ? ಪಟ್ಟಾಪಟ್ಟಿ ಅಂಡರ್‌ವೇರ್‌ ಹಾಕಿಕೊಂಡೇ ಮನೆಗೆ ಬಂದವರೊಂದಿಗೆ ಮಾತುಡುತ್ತ ನಿಲ್ಲುವುದು, ಮಾತಿನ ಮಧ್ಯೆ ಯಾರಿಗಾದರೂ ಮುಜುಗರವಾದೀತು ಎಂಬುದನ್ನು ಲೆಕ್ಕಿಸದೆ ಸಶಬ್ದವಾಗಿ ಕೆಳಗಿನಿಂದ ಗಾಳಿ ಬಿಟ್ಟುಬಿಡೋದು, ವಿನಾಕಾರಣ ಅಶ್ಲೀಲ ಶಬ್ದಗಳನ್ನು ಬಳಸಿ ಮಾತಾನಾಡೋದು, ಢರ್ರೋ ಅಂತ ತೇಗಿ ಬಿಡೋದು, ಗಂಡಸರಿದ್ದಾರೆಂಬ ಪರಿವೆ ಇಲ್ಲದವರಂತೆ ಅರೆಬೆತ್ತಲೆಯಾಗಿ ಸ್ನಾನ ಮನೆಯಿಂದ ಹೆಂಗಸರು ಈಚೆಗೆ ಬರೋದು, ಗಂಡಸರು ತಾವೂ ಬಾಯಿ ಜಾರಿ ಅಶ್ಲೀಲ ಮಾತನಾಡುವುದು, ಮದುವೆ ಮನೆಗಳಲ್ಲಿ ಬಹಿರಂಗ ಸ್ನಾನಕ್ಕಿಳಿದು ಬಿಡೋದು, ಸೆರಗಿನ ಪರಿವೆ ಕಳೆದುಕೊಳ್ಳುವುದು -ಇವೆಲ್ಲ ಒಂದೇ ಜಾಯಮಾನದ ಲಕ್ಷಣಗಳು.

ಇವು ತಮ್ಮನ್ನು ತಾವು ಅವಮಾನಿಸಿಕೊಳ್ಳುವ ಲಕ್ಷಣಗಳೂ ಹೌದು. ಆದ ನಗೆಪಾಟಲನ್ನು ಕೂಡ ಕಾಂಪ್ಲಿಮೆಂಟಿನಂತೆ ಸ್ವೀಕರಿಸುವುದು ಒಂದರ್ಥದಲ್ಲಿ ನಿರ್ಲಜ್ಜತನವೇ. ಅದು ನಮ್ಮೆಡೆಗೆ ನಮಗೆ ಹಕ್ಷಿುಟ್ಟುವ ನಿರ್ಲಕ್ಷ್ಯತನದಿಂದಾಗಿ ಬೆಳೆದುಬಂದಿರುತ್ತದೆ. ಇಂಥವುಗಳನ್ನು ನಮ್ಮ ಮನೆಯವರು, ಮಕ್ಕಳು ಅಥವಾ ಗೆಳೆಯರು ತೀವ್ರವಾಗಿ ವಿರೋಧಿಸುವುದಿಲ್ಲವಾದ್ದರಿಂದ, ಹೆಚ್ಚಿನ ಸಲ ನಕ್ಕು ಬಿಡುತ್ತಾರಾದ್ದರಿಂದ- ‘ಎಲ್ಲವೂ ನಮ್ಮನ್ನು ಹೀಗೆ accept ಮಾಡ್ತಾರೆ’ ಅಂದುಕೊಂಡುಬಿಡುತ್ತೇವೆ. ಇದು ತಪ್ಪಲ್ಲವೆ?

ಸರ್‌ ವಿಶ್ವೇಶ್ವರಯ್ಯನವರು ಕೋಟು ಧರಿಸದೆ ಯಾರಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ. ಶಬಾನಾ ಅಜ್ಮಿ ತುಂಬ ಗ್ರೇಸ್‌ಫುಲ್‌ ಆಗಿ ವಯಸ್ಸಾದವಳಂತೆ ಕಾಣುತ್ತಾಳೆ. ವಿಶ್ವೇಶ್ವರ ಭಟ್‌ ಷಾಬಿಯಾಗಿರುವುದನ್ನು ನಾನು ಕಂಡಿಲ್ಲ. ಇತ್ತೀಚೆಗೆ ಕನ್ನಡ ಸಿನಿಮಾ ನಟಿಯಾಬ್ಬಳಿಗೆ, ‘ನೀನು ಈ ಪರಿ ದಪ್ಪ ಆಗೋದು ನಿನ್ನ ಗಂಡನಿಗೆ ಸಹನೀಯವಿರಬಹುದು. ಆದರೆ ಜನ ನಿನ್ನನ್ನ ದುಡ್ಡುಕೊಟ್ಟು ನೋಡಕ್ಕೆ ಅಂತ ಸಿನಿಮಾಗೆ ಹೋಗ್ತಾರೆ. ಗಾತ್ರದ ಬಗ್ಗೆ ನಿಗಾ ಇರಲಿ’ ಅಂತ ನಾನೇ ಹೇಳಿದ್ದೆ.

ಸಾಕಷ್ಟು ವಯಸ್ಸಾದ ನಂತರವೂ ನೀಟಾಗಿ, ಪ್ರೆಸೆಂಟಬಲ್‌ ಆಗಿ ಕಾಣಿಸಿಕೊಳ್ಳುವವರಿದ್ದಾರೆ. ನೋಡಿದ ತಕ್ಷಣ ಸಂತೋಷವಾಗುತ್ತೆ. ಶಾಮರಾಯರ ಪತ್ನಿ ಸೀತಮ್ಮನವರು, ಡಾ. ವಿಜಯಮ್ಮ, ಕವಿ ನಿಸಾರ್‌ ಆಹಮದ್‌, ಅನಂತಮೂರ್ತಿ -ಇವರೆಲ್ಲ ಅದ್ಭುತ ಉದಾಹರಣೆಗಳೇ.

ನಾನು ರೂಪ, ಲಾವಣ್ಯ, ದೇಹದ ಗಾತ್ರ ಇತ್ಯಾದಿಗಳ ಬಗ್ಗೆ ಮಾತಾಡುತ್ತಿಲ್ಲ. ಇರುವ ರೂಪಕ್ಕೆ, ದೇಹಕ್ಕೇನೇ ನಾವು ಮಾಡಿಕೊಳ್ಳುವ ಅಲಂಕಾರ, ನಮ್ಮ ಪ್ರೆಸೆಂಟಿಬಿಲಿಟಿಯ ಬಗ್ಗೆ ಬರೆಯುತ್ತಿದ್ದೇನೆ. ಬಿಳಿ ಕೂದಲಿನವರು ಹೇರ್‌ ಡೈ ಮಾಡಬೇಕು ಅಂತಿಲ್ಲ. ಮಾಡಲಾರಂಭಿಸಿದವರು ಅದನ್ನು ಸರಿಯಾಗಿ ನಿರ್ವಹಿಸಬೇಕು. ಕಣ್ಣಿನ ಡಾಕ್ಟ್ರುಗಳಂಥವರು ರೋಗಿಗಳಿಗೆ ತುಂಬ ಹತ್ತಿರದಿಂದ ಚಿಕಿತ್ಸೆ ಕೊಡಬೇಕಾಗುತ್ತದೆ. ಆದ್ದರಿಂದ ಬಾಯಿ, ಮೈಯಿ ದುರ್ಗಂಧ ಹೊರಡಿಸದಂತೆ ನೋಡಿಕೊಳ್ಳಬೇಕು.

‘ನಮ್ಮ ದೇಹಗಳನ್ನು ಇನ್ನು ಈ ವಯಸ್ಸಿನಲ್ಲಿ ಯಾರೂ ಮೆಚ್ಚಬೇಕಿಲ್ಲ’ ಅಂತ ವಾದಿಸುವುದು ಸರಿಯೇ : ಆದರೆ ‘ದೇಹ ಹೇಗಿದ್ದರೂ ನೀವು ಸಹಿಸಿಕೊಳ್ಳಬೇಕು’ಅಂತ ವಾದಿಸುವುದು ಅಪರಾಧ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X