ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರೋಪವಾಸಿಗಳ ಕ್ರೌಡಿನ ಮಧ್ಯೆ ಪುಸ್ತಕ ಹಿಡಿದು...

By Staff
|
Google Oneindia Kannada News


ದುಡಿಯುವ ಹುಡುಗಿಗೆ ಓದಲು ಸಮಯ ಸಿಗುವುದಿಲ್ಲ. ಆದರೆ ವಾರಕ್ಕೆ ಒಂದು ಕಾದಂಬರಿ, ಒಂದು ಕಥಾ ಸಂಕಲನ, ಅಟ್‌ಲೀಸ್ಟ್‌ ಒಂದು ಲಲಿತ ಪ್ರಬಂಧ ಸಂಕಲನ ಓದಲು ಕಷ್ಟವೇ? ಈ ವಯಸ್ಸಿನಲ್ಲಿ ಓದದಿದ್ದರೆ ಇವರು ಮತ್ಯಾವಾಗ ಓದುತ್ತಾರೆ?

Welcome to Book World!ಬದುಕಿಗೆ ಸಂಬಂಧಿಸಿದಂತೆ ಯಾವ ಪ್ರಶ್ನೆ ಕೇಳಿದರೂ ಮಕ್ಕಳಿಗೆ ಉತ್ತರ ಹೇಳುತ್ತೇನೆ. ಆದರೆ ನನಗೆ ಗೊತ್ತಾಗದ, ನನ್ನ ನಿಲುಕಿಗೆ ಮೀರಿದ ಪ್ರಶ್ನೆ ಕೇಳಿದಾಗ ಮತ್ತೊಬ್ಬರ ಸಹಾಯ ಪಡೆಯುತ್ತೇನೆ.

ಮೊನ್ನೆ ಕರ್ಣ ಅಮೆರಿಕಾದಲ್ಲಿರುವ ವಿದ್ಯಾಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದ ಯಾವುದೋ ಕೋರ್ಸಿನ ಬಗ್ಗೆ ಕೇಳುತ್ತಿದ್ದ. ತಕ್ಷಣ ನನ್ನ ಸ್ನೇಹಿತೆಯಾದ ಸರಸ್ವತಿ ವಟ್ಟಂ ನಂಬರು ಕೊಟ್ಟು ಅವರೊಂದಿಗೆ ಮಾತಾಡು ಅಂದೆ. ಬಳ್ಳಾರಿ ಮೂಲದವರೂ, ಹಿರಿಯ ಪತ್ರಕರ್ತರೂ, ವೈಯಕ್ತಿಕವಾಗಿ ನಾನು ತುಂಬ ಅಭಿಮಾನ ಪಡುವವರೂ ಆದ ಕೃಷ್ಣ ವಟ್ಟಂ ಅವರ ಮಗಳು ಸರಸ್ವತಿ. ಆಕೆಯ ಪತಿ ಅಮೆರಿಕಾದಲ್ಲಿದ್ದಾರೆ. ಈ ಹೆಣ್ಣುಮಗಳು ಹೆಸರಾಂತ ಕಾಲೇಜೊಂದರಲ್ಲಿ ಶಿಕ್ಷಕಿ. ಕರ್ಣನ ವಯಸ್ಸಿನ ಹುಡುಗರಿಗೆ ಕೌನ್ಸಿಲ್‌ ಮಾಡಲಿಕ್ಕೆ ಹೇಳಿ ಮಾಡಿಸಿದಂಥ ವ್ಯಕ್ತಿತ್ವ ಸರಸ್ವತಿಯದು.

ಆ ವಯಸ್ಸಿನ ಹುಡುಗರಿಗೆ ಕೌನ್ಸಿಲಿಂಗ್‌ನ ಅವಶ್ಯ ಕತೆ ತುಂಬ ಇರುತ್ತದೆ. ಅದು ಪ್ರಶ್ನೆ, ಗೊಂದಲ, ಸಂಘರ್ಷಗಳೆಲ್ಲ ಒಮ್ಮೆಲೆ ಉದ್ಭವವಾಗುವ ವಯಸ್ಸು. ಅದೇ ವಯಸ್ಸಿನ ಹುಡುಗರು, ಹುಡುಗಿಯರು ನನ್ನೊಂದಿಗೂ ಕೆಲಸ ಮಾಡುತ್ತಾರೆ. ಮೊನ್ನೆ ಹುಡುಗಿಯಾಬ್ಬಳನ್ನು ಕರೆದು ‘ಇತ್ತೀಚಿನ ದಿನಗಳಲ್ಲಿ ಏನು ಓದ್ತಿದೀಯ?’ ಅಂತ ಕೇಳಿದೆ. ಹಾಗೆ ಕೇಳುವುದು ಓದಿನೆಡೆಗೆ ಅವರನ್ನು ಸೆಳೆಯುವ ಉದ್ದೇಶದಿಂದಲೇ.

‘ಏನೂ ಓದ್ತಿಲ್ಲ. ಏನೂ ಓದಕ್ಕಾಗ್ತಿಲ್ಲ. ಓಡಾಟದಲ್ಲೇ ಸರಿ ಹೋಗುತ್ತೆ. ಬಸ್ಸಿನಲ್ಲಿ ಸೀಟು ಸಿಗಲ್ಲವಾದ್ದರಿಂದ ಓದಕ್ಕಾಗಲ್ಲ. ರಾತ್ರಿ ಬೇಗ ಮಲಗಬೇಕು. ಬೆಳಗ್ಗೆ ಬೇಗ ಏಳ್ತೀನಿ’ ಹೀಗೆ ನೂರೆಂಟು ಕಾರಣಗಳನ್ನು ಹೇಳುತ್ತಾಳೆ ಹುಡುಗಿ. ಗಮನಿಸಿದರೆ ಎಲ್ಲವೂ ನಿಜವಾದ ಕಾರಣಗಳೇ. ದುಡಿಯುವ ಹುಡುಗಿಗೆ ಓದಲು ಸಮಯ ಸಿಗುವುದಿಲ್ಲ. ಆದರೆ ವಾರಕ್ಕೆ ಒಂದು ಕಾದಂಬರಿ, ಒಂದು ಕಥಾ ಸಂಕಲನ, ಅಟ್‌ಲೀಸ್ಟ್‌ ಒಂದು ಲಲಿತ ಪ್ರಬಂಧ ಸಂಕಲನ ಓದಲು ಕಷ್ಟವೇ? ಈ ವಯಸ್ಸಿನಲ್ಲಿ ಓದದಿದ್ದರೆ ಇವರು ಮತ್ಯಾವಾಗ ಓದುತ್ತಾರೆ?

Welcome to Book World!ಓದು ಕೂಡ ಎಷ್ಟೊಂದು ಸಲ ತಿನ್ನುವ ಪರಿಪಾಠದ್ದು ಅನ್ನಿಸುತ್ತದೆ ಗೊತ್ತಾ? ನೀವು ನಿಮ್ಮ ಮಗುವಿಗೆ ಸರಿಯಾಗಿ ತಿನ್ನುವುದನ್ನು ಹೇಳಿ ಕೊಡದಿದ್ದರೆ ಅದು ಊಟ ಮಾಡುವುದೇ ಇಲ್ಲ. ಕಲೆಸಿಕೊಟ್ಟದ್ದನ್ನೆಲ್ಲ ಚೆಲ್ಲುತ್ತದೆ. ಕತೆ ಹೇಳದಿದ್ದರೆ ತಿನ್ನುವುದೇ ಇಲ್ಲ. ಬಾಯಿಗಿಟ್ಟರೆ ಉಗಿಯುತ್ತದೆ. ಇದೆಲ್ಲ ಮಗುವಿನ ತಪ್ಪಲ್ಲ. ಅದಕ್ಕೆ ಊಟವನ್ನು ರೂಢಿ ಮಾಡಿಸದ ನಿಮ್ಮ ತಪ್ಪು. ವಿಪರೀತ ತಿನ್ನುವುದು ರೂಢಿಮಾಡಿಸಿದರೆ ಅದು ಇನ್ನೊಂಥರದ ತಪ್ಪು.

ಊಟದಂತೆಯೇ ಉಪವಾಸ ಕೂಡ ರೂಢಿಯ ಸಂಗತಿ ಎಂಬುದನ್ನು ಪರೀಕ್ಷಿಸಿ ನೋಡಿ. ಊಟ ಮಾಡದಿದ್ದರೆ ಪ್ರಾಣವೇ ಹೋದೀತು ಅನ್ನಿಸಿದಾಗ ಕೊಂಚ ನೀರು ಕುಡಿದು, ಚಹ ಕುಡಿದು, ಮತ್ತೇನೋ ಓದುತ್ತಾ ಕುಳಿತು ಟೈಮು ತಪ್ಪಿಸಿ ಪರೀಕ್ಷಿಸಿ ನೋಡಿ. ಹಾಗೆ ನಾಲ್ಕಾರು ದಿನ ಮಾಡುವ ಹೊತ್ತಿಗೆ, ಇಂತಿಷ್ಟು ಟೈಮಿಗೆ ಅಂತ ಆಗುವ ಹಸಿವು ಆ ಟೈಮಿಗೆ ಆಗುವುದಿಲ್ಲ. ಕ್ರಮೇಣ ಉಪವಾಸ ರೂಢಿಯಾಗುತ್ತದೆ.

ದಿನದಲ್ಲಿ ಒಂದೇ ಹೊತ್ತು ಊಟ ಮಾಡುವವರು, ತೀರ ಕಡಿಮೆ ತಿನ್ನುವವರು, ರಾತ್ರಿ ಊಟ ಮಾಡದೆ ಇರುವವರು, ದಿನವಿಡೀ ಏಕಾದಶಿ ಉಪವಾಸ ಮಾಡುವವರು -ಇವರೆಲ್ಲ ಉಪವಾಸವನ್ನು ರೂಢಿಸಿಕೊಂಡಿರುತ್ತಾರೆ.

ಹಿರಿಯ ಪತ್ರಕರ್ತ ಗೋಯೆಂಕಾ ತಮ್ಮ ಬದುಕಿನ ಕೊನೆಯ ಇಪ್ಪತ್ತು ವರ್ಷ ಊಟವನ್ನೇ ಮಾಡಲಿಲ್ಲ. ಕೇವಲ ತರಕಾರಿ-ಹಣ್ಣು ರೂಢಿಮಾಡಿಕೊಂಡು ಬದುಕಿದರು. ಹೇಗೆ ಅವರಿಗೆಲ್ಲ ಉಪವಾಸ ರೂಢಿಯಾಯಿತೋ ಹಾಗೆಯೇ ನಮಗೆ ಓದದೆ ಇರುವುದು ರೂಢಿಯಾಗುತ್ತದೆ.

ಓದದೆ ಇರುವ ಹತ್ತಾರು ಜನರ ಕ್ರೌಡ್‌ ನಮ್ಮ ಸುತ್ತ ಇಡೀ ದಿನ ಇರುತ್ತದೆ. ನನ್ನ ಡ್ರೆೃವರ್‌ ಓದುವವದಿಲ್ಲ, ಸೆಕ್ಯುರಿಟಿಯವರು ಓದುವುದಿಲ್ಲ, ನಮ್ಮದೇ ಸಿಬ್ಬಂದಿಯವರ ಪೈಕಿ ಅನೇಕರು ಓದುವುದಿಲ್ಲ. ದುರಂತವೆಂದರೆ ತುಂಬ ಜನ ಪತ್ರಕರ್ತರೇ ಓದುವುದಿಲ್ಲ. ಅವರಿಗೆ ಆ ಬಗ್ಗೆ ಏನೂ ಅನ್ನಿಸುವುದಿಲ್ಲ. ಏಕೆಂದರೆ ಪುಸ್ತಕೋಪವಾಸ ರೂಢಿಮಾಡಿಕೊಂಡಿರುತ್ತಾರೆ!

ನನಗೆ ಬೆಳ್ಳ ಬೆಳಗ್ಗೆ ಎದ್ದು ಬ್ರಷ್‌ ಮಾಡಿಕೊಳ್ಳದಿದ್ದರೆ ಹೇಗೆ ಒಂದು ಶ್ವಪಚ ಹಿಂಸ ಬಾಯಲ್ಲಿ ಉಳಿಯುತ್ತದೋ, ಅವತ್ತಿನ ಆರು ದಿನಪತ್ರಿಕೆಗನ್ನು ಓದದಿದ್ದರೆ ಒಂದು ಚಡಪಡಿಕೆ ಉಳಿದುಹೋಗುತ್ತದೆ. ಮಧ್ಯಾಹ್ನ ಮಲಗುವ ಅರ್ಧಗಂಟೆಗೆ ಮುನ್ನ, ರಾತ್ರಿ ನಿದ್ರೆಗೆ ಜಾರುವ ಮುನ್ನ, ಟಾಯ್ಲೆಟ್ಟಿನಲ್ಲಿ -ಹೀಗೆ ಓದುವುದನ್ನೊಂದು ಕಡ್ಡಾಯ ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇನೆ. ಆ ವಿಷಯದಲ್ಲಿ ಉಪವಾಸ ಸಾಧ್ಯವೇ ಇಲ್ಲ.

ದಿನಗಟ್ಟಲೆ ಉಪವಾಸ ರೂಢಿಯಾದರೆ ಸಹಜವಾಗಿಯೇ ದೇಹ ಬಲಹೀನಗೊಳ್ಳುತ್ತದೆ. ಸೊರಗಿದ್ದು ಅವರಿವರಿಗೆ ಗೊತ್ತಾಗುತ್ತದೆ. ಅವರು ಕೇಳುತ್ತಾರೆ. ಆದರೆ ಓದುವವರ ಬುದ್ಧಿ ಸೊರಗಿದ್ದು ಅನೇಕ ಸಲ ಸೊರಗುತ್ತಿರುವವರಿಗೆ ಗೊತ್ತಾಗುವುದಿಲ್ಲ. ಅವರಲ್ಲಿ ಎಂಥ ನಿರ್ಲಕ್ಷ್ಯ ಬೆಳೆದಿರುತ್ತದೆಂದರೆ, ನಾಲ್ಕು ಜನ ಓದಿ ಕೊಂಡವರು ಕುಳಿತು ಚರ್ಚೆ ಮಾಡುವಾಗ ಈ ಪುಸ್ತಕೋಪವಾಸಿಗಳು ಅವರ ಮಧ್ಯಕ್ಕೆ ಹೋಗಿ ಕೂಡುವುದೂ ಇಲ್ಲ. ಓದದಿದ್ದರೇನಂತೆ? ಓದಿಕೊಂಡವರ ಮಾತು ಕಿವಿಗೆ ಬಿದ್ದಾದರೂ ಬೀಳಲಿ ಎಂಬ ಪ್ರಜ್ಞೆ ಇರುವುದಿಲ್ಲ. ಹೀಗಾಗಿ, ಡ್ರೆೃವರ್‌ಗಳು ಡ್ರೆೃವರ್‌ಗಳೊಂದಿಗೇ, ಹೆಂಗಸರು ಗಾಸಿಪ್‌ ಮಾಡುವಂಥ ಹೆಂಗಸರೊಂದಿಗೇ ಐಡೆಂಟಿಫೈ ಮಾಡಿಕೊಳ್ಳುತ್ತಾರೆ. ಅದು ಉಪವಾಸಿಗರಿಗೆ ಅತ್ಯಂತ ಸುಲಭವಾಗಿ ದೊರಕಿ ಹೋಗುವ ರುಚಿ.

ಓದದೆ ಇರುವವರು ಪ್ರಪಂಚದಲ್ಲಿ ತುಂಬ ಜನ ಇರುತ್ತಾರಾದ್ದರಿಂದ, ತಾವೇನೂ ತಪ್ಪು ಮಾಡುತ್ತಿದ್ದೇವೆ ಅಥವಾ ಏನನ್ನೋ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಅಂತ ಅವರಿಗೆ ಅನ್ನಿಸುವುದೇ ಇಲ್ಲ. ಕ್ರಮೇಣ ಈ ಉಪವಾಸಿಗರ ಮನಸ್ಥಿತಿ ಎಲ್ಲಿಗೆ ಹೋಗಿ ತಲುಪುತ್ತದೆಯೆಂದರೆ, ಓದುವವರನ್ನು ಕೆಲಸಕ್ಕೆ ಬಾರದ ಜನ ಎಂಬಂತೆ ಗೇಲಿ ಮಾಡಿ ಮಾತನಾಡ ತೊಡುಗುತ್ತಾರೆ.

ಮಕ್ಕಳಿಗೆ ಓದುವುದನ್ನು ತುಂಬ ಚಿಕ್ಕ ಪ್ರಾಯದಿಂದ ರೂಢಿ ಮಾಡಿಸದಿದ್ದರೆ, ಮುಂದೆ ಅದಕ್ಕೆ ಪುಸ್ತಕದೆಡೆಗೆ ಆಕರ್ಷಣೆ ಬೆಳೆಯುವುದೇ ಇಲ್ಲ. ಮಗುವನ್ನು ಮಡಿಲಲ್ಲಿ ಕೂಡಿಸಿಕೊಂಡು ಕೈಲಿ ಪುಸ್ತಕ ಹಿಡಿಡು, ಅದರಲ್ಲಿನ ಚಿತ್ರ ತೋರಿಸುತ್ತ ಕತೆ ಹೇಳಿ ನೋಡಿ. ಮಗುವು ಕ್ರಮೇಣ ಪುಸ್ತಕಗಳನ್ನು ರೆಸ್‌ಪೆಕ್ಟ್‌ ಮಾಡತೊಡಗುತ್ತದೆ. ಆಟಿಗೆಯ ಅಂಗಡಿಗೆ ಕರೆದೊಯ್ದಂತೆಯೇ ಪುಸ್ತಕದಂಗಡಿಗೆ ಕರೆದೊಯ್ಯಿರಿ. ತುಂಬ ಓದುವ ಆ ಗೀಳಿರುವ ಮಕ್ಕಳ ಜೊತೆಯಲ್ಲೇ ಆಡಲು ಬಿಡಿ. ನಿಮ್ಮ ಮಗುವಿಗೆ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಡುವ ಬದಲು ಒಂದಷ್ಟು ಓದುವ ಅಭ್ಯಾಸ ಹಾಕಿ, ಅದನ್ನೊಂದು ದಾರಿಗೆ ಹಚ್ಚಿ ನೋಡಿ. ನೀವು ಸುಖವಾಗಿರುತ್ತೀರಿ.

ಹಾಗಂತ ನಮ್ಮ ಸುತ್ತ ಇರುವ ಅಕ್ಷರೋಪವಾಸಿ ಜನ, ಓದದೆಯೇ ಬದುಕು ಕಳೆದುಬಿಡುವ ಜನ ನಮಗಿಂತ ಕೀಳು ಮತ್ತು ದಡ್ಡರು ಅಂತ ನಾನು ಭಾವಿಸುವುದಿಲ್ಲ.

ಅವರೆಲ್ಲ ನಮಗಿಂತ ಬುದ್ಧಿವಂತರಿರಬಹುದು. ಅವರಿಗಿಂತ ದಡ್ಡನಾದ ನಾನು ಪುಸ್ತಕಗಳಿಂದ ಕಲಿಯಲು ಯತ್ನಿಸುತ್ತೇನೆ. ನನಗಿದು ಅನಿವಾರ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X