• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವರೇ ನನ್ನ ಸರ್ವಸ್ವ ಅಂತ ಒಪ್ಪಿಕೊಳ್ಳುವ ಮುನ್ನ...

By Staff
|

ಪ್ರೀತಿಸಿದ ಮಾತ್ರಕ್ಕೆ ಬದುಕಿನ ಸಮಸ್ತವನ್ನೂ ಕಳೆದುಕೊಂಡುಬಿಡಬೇಕು ಅನ್ನುವುದು ಅನಾವಶ್ಯಕ ಸೆಂಟಿಮೆಂಟು. ಆದರೆ ಪ್ರೀತಿಯೇ ಸರ್ವಸ್ವ ಅನಿಸಿದಾಗಲೂ ಬೆಟರ್ ಆಪ್ಷನ್ ಸಿಕ್ಕಿತೆಂಬ ಒಂದೇ ಕಾರಣಕ್ಕೆ ಸರ್ವಸ್ವದಂತಿದ್ದವನನ್ನು ಧಿಕ್ಕರಿಸಿ ನಡೆಯುವುದು ವಂಚನೆ ಅನಿಸಿಕೊಳ್ಳುತ್ತದೆ!


Do you completely rely upon any person? Think twice!ಅದೊಂದು ಇಂಗ್ಲಿಷ್ ವಾಕ್ಯ. ಒಂದು ಹೇಳಿಕೆಯಿರಬಹುದು. ಕರಾರುವಾಕ್ಕಾಗಿ ಇವತ್ತು ರಿಪೀಟ್ ಮಾಡಲಾರೆ. ಮರೆತು ಹೋದಂತಾಗಿದೆ. ಅರ್ಥ ಮಾತ್ರ ವಿವರಿಸಬಲ್ಲೆ.

ಮತ್ತೇನಿಲ್ಲ :

ಆತ ನಿಮ್ಮ ಸರ್ವಸ್ವ. ನಿಮ್ಮ ಗಂಡನೇ ಆಗಬೇಕೆಂದಿಲ್ಲ. ಗೆಳೆಯ, ಅಣ್ಣ, ಪರಿಚಿತ, ಬಾಸ್, ನಾಯಕ, ಪಾರ್ಟ್‌ನರ್-ಹೀಗೆ ಏನಾದರೂ ಆಗಿರಬಹುದು. ಯಾರಾದರೂ ಆಗಿರಬಹುದು. ಕಮ್ಯುನಿಸ್ಟ್ ಪಾರ್ಟಿಯ ಕಾಮ್ರೇಡ್ ಕೂಡ ಆಗಿರಬಹುದು. ಇವತ್ತಿನ, ಈ ಪರಿಸ್ಥಿತಿಯ ಮಟ್ಟಿಗೆಆತನೇ ಬದುಕು ಅನಿಸಿಬಿಡಬಹುದು. ಅದನ್ನೇ ನಾನು ಸರ್ವಸ್ವ ಅಂದದ್ದು. ಬದುಕಿನ ಸ್ಥಿತಿಗತಿಗಳು ಎಷ್ಟು ವಿಚಿತ್ರವಾಗಿರುತ್ತವೆಂದರೆ, ನಮ್ಮ ಮಗುವಿನ ಮೂಗಿನಲ್ಲಿ ಬಳಪ ಸಿಲುಕಿಕೊಂಡಾಗ ಅದನ್ನು ತೆಗೆಯುವ ಡಾಕ್ಟರರು ಆ ಕ್ಷಣಕ್ಕೆ ನಮ್ಮ ಸರ್ವಸ್ವ, ನಮ್ಮ ಭಗವಂತ ಅನಿಸಿಬಿಡುತ್ತಾನೆ. ಹಾಗಂತ ತುಂಬ ಸೀಮಿತ ಅರ್ಥದಲ್ಲಿ ನಾನು ಸರ್ವಸ್ವ ಎಂಬ ಶಬ್ದ ಬಳಸುತ್ತಿದ್ದೇನೆ ಅಂದುಕೊಳ್ಳಬೇಡಿ. ಕಾಲೇಜಿನಲ್ಲಿ ಓದುವಾಗ ಒಬ್ಬ ಗೆಳೆಯ ನನಗೆ ಸಮಸ್ತವೂ ಆಗಿದ್ದ. ಅವನಿಲ್ಲದೆ ನನ್ನ ಬೆಳಕು ಹರಿಯುತ್ತಿರಲಿಲ್ಲ. ಹಗಲು ಮುಗಿಯುತ್ತಿರಲಿಲ್ಲ. ಅವನನ್ನು ಬಿಟ್ಟು ನಾನೆಂದಾದರೂ ಜೀವಂತವಿರಲು ಸಾಧ್ಯವಾ ಅಂತೆಲ್ಲ ಯೋಚಿಸುತ್ತಿದ್ದೆ. ಅವತ್ತಿಗೆ ಅವನೇ ಸರ್ವಸ್ವ.

ನಿಮ್ಮ ಟ್ರಾನ್ಸ್‌ಫರ್,ನಿಮ್ಮ ಪ್ರಮೋಷನ್, ಆಫೀಸಿನಲ್ಲಿ ನಿಮ್ಮ ಸ್ಥಾನಮಾನ-ಎಲ್ಲವೂ ನಿಮ್ಮ ಬಾಸ್ ಮೇಲೆ, ಆತನ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಎದುರಿಗಿರುವುದು ಎಂಟು ತಾಸು. ಆದರೂ ಆ ಮಟ್ಟಿಗೆ ಆತನ ಅಸ್ತಿತ್ವ ನಿಮ್ಮ ಸರ್ವಸ್ವ. ನಿಮ್ಮ ನೌಕರಿಯೇ ನಿಮ್ಮ ಜೀವಿತ ಅಂದುಕೊಂಡುಬಿಟ್ಟಿರುತ್ತೀರಿ. ಮೊನ್ನೆ ತುಂಬ ನೊಂದ, ಸಭ್ಯ ಹೆಣ್ಣುಮಗಳೊಬ್ಬಾಕೆ ಮಾತನಾಡುತ್ತಿದ್ದಳು. ನನ್ನ ಫೈನಲ್ ಇಯರ್ ಡಿಗ್ರಿ ಮುಗಿದಿದ್ದೇ ತಡ, ನಾನು ಆ ಕಂಪನಿ ಸೇರಿಕೊಂಡೆ. ಅಲ್ಲಿ ಇಪ್ಪತ್ತೈದು ವರ್ಷ ಕೆಲಸ ಮಾಡಿದೆ. ನನ್ನ ಬದುಕೇ ನನ್ನ ಕಂಪನಿ ಅಂದುಕೊಂಡಿದ್ದೆ. ಆದರೆ ಇವತ್ತು ಕಂಪನಿಗೆ ಹೋಗೋ ಹಾಗೇ ಇಲ್ಲ... ಅನ್ನುತ್ತಿದ್ದಳು. ತಪ್ಪೇ ಮಾಡದ ಆಕೆಯನ್ನು ಕಂಪನಿ ಶಿಕ್ಷೆಗೊಳಪಡಿಸಿತ್ತು. ಅಷ್ಟು ವರ್ಷ ಆಕೆಯ ಪಾಲಿಗೆ ಕಂಪನಿಯೇ ಸರ್ವಸ್ವ!

ನನ್ನ ಸರ್ವಸ್ವದ ಕಾನ್ಸೆಪ್ಟ್ ನಿಮಗೀಗ ಅರ್ಥವಾಗಿರಬೇಕಲ್ಲ?

ಹುಡುಗನೊಬ್ಬ ತಾನಿಷ್ಟಪಡುವ ಹುಡುಗಿಯನ್ನು ಕೂಡ ಹೀಗೆಯೇ(ಕಂಪನಿಯನ್ನು ಆಕೆ ಭಾವಿಸಿದ ಹಾಗೆ) ಸರ್ವಸ್ವ ಅಂತ ಭಾವಿಸಿರುತ್ತಾನೆ, ಪ್ರೀತಿಸಿರುತ್ತಾನೆ. ಅವಳೂ ಭಾವಿಸಿರಬಹುದು, ಪ್ರೀತಿಸಿರಬಹುದು. ಆದರೆ ತೀರ ಇವನಷ್ಟು ಸರ್ವಸ್ವದ ಸೆಂಟಿಮೆಂಟಿನವಳಲ್ಲ ಹುಡುಗಿ. ಅವಳಿಗೆ ನಾನೂ ಒಂದು ಆಪ್ಷನ್ ಇರಬಹುದು. ಅವಳನ್ನೇ ಸರ್ವಸ್ವವೆಂದುಕೊಂಡ ಹುಡುಗ, ಅವಳನ್ನು ಮದುವೆಯಾಗುವುದೇ ಅಲ್ಟಿಮೇಟ್ ಅಂದುಕೊಂಡಿರುತ್ತಾನೆ. ಆದರೆ, ಅವಳಿಗೆ ಎರಡು ವರ್ಷದ ಮಟ್ಟಿಗೆ ಇಂಗ್ಲೆಂಡಿಗೆ ಹೋಗಿಬರುವ ಅವಕಾಶ ಸಿಕ್ಕರೆ ಅದನ್ನವಳು ಮದುವೆಗಿಂತ ಬೆಟರ್ ಆಪ್ಷನ್ ಅಂದುಕೊಳ್ಳುತ್ತಾಳೆ. ಇಂಗ್ಲೆಂಡಿಗೆ ಹೊರಟೂ ಬಿಡುತ್ತಾಳೆ! ಅವನಿಗೆ ಸರ್ವಸ್ವ ಅನಿಸಿದ ಮದುವೆ, ಅವಳಿಗೆ ಅಂಥ ಸರ್ವಸ್ವವೇನಲ್ಲ. ಇದರಲ್ಲಿ ಅವಳದು ತಪ್ಪಿದೆ ಅಂತೀರಾ? ಖಂಡಿತ ಇಲ್ಲ. ಪ್ರೀತಿಸಿದ ಮಾತ್ರಕ್ಕೆ ಬದುಕಿನ ಸಮಸ್ತವನ್ನೂ ಕಳೆದುಕೊಂಡುಬಿಡಬೇಕು ಅನ್ನುವುದು ಅನಾವಶ್ಯಕ ಸೆಂಟಿಮೆಂಟು. ಆದರೆ ಪ್ರೀತಿಯೇ ಸರ್ವಸ್ವ ಅನಿಸಿದಾಗಲೂ ಬೆಟರ್ ಆಪ್ಷನ್ ಸಿಕ್ಕಿತೆಂಬ ಒಂದೇ ಕಾರಣಕ್ಕೆ ಸರ್ವಸ್ವದಂತಿದ್ದವನನ್ನು ಧಿಕ್ಕರಿಸಿ ನಡೆಯುವುದು ವಂಚನೆ ಅನಿಸಿಕೊಳ್ಳುತ್ತದೆ!Never do that.

ಒಬ್ಬ ನೌಕರ ತುಂಬ ವರ್ಷ ಕೆಲಸ ಮಾಡಿದ ಆಫೀಸೊಂದನ್ನು ಬಿಟ್ಟು ಬೇರೆ ಕಡೆಗೆ ಸೇರಿಕೊಳ್ಳುತ್ತಾನೆ. ಇದ್ದಷ್ಟು ದಿನ ಆಫೀಸೇ ಸರ್ವಸ್ವ ಅನ್ನುತ್ತಿದ್ದ. ಇವತ್ತೇನಯ್ಯಾ ಹೀಗೆ ಅಂತ ಕೇಳಿದರೆ-ಅವನಿಗದು ಬೆಟರ್ ಆಪ್ಷನ್. ಅವನು ಮಾಡಿದ್ದು ತಪ್ಪು ಅನ್ನಲು ಖಂಡಿತ ಸಾಧ್ಯವಿಲ್ಲ. ಅವನಿಗಿಂತ ಒಳ್ಳೆಯ ನೌಕರ ಸಿಕ್ಕಿದ್ದಿದ್ದರೆ ಅವನ ಆಫೀಸೇನು ಅವನನ್ನು ಸರ್ವಸ್ವ ಅಂತ ಭಾವಿಸಿ ಇಟ್ಟುಕೊಳ್ಳುತ್ತಿತ್ತಾ? ಖಂಡಿತ ಇಲ್ಲ. ಹೀಗಾಗಿ, ಅನೇಕ ವರ್ಷಗಳ ಸರ್ವಸ್ವವನ್ನು ಬಿಟ್ಟು ಅವನು ಬೆಟರ್ ಆಪ್ಷನ್‌ನೆಡೆಗೆ ಸರಿದು ಹೋಗುತ್ತಾನೆ.

ಆಫೀಸು, ವ್ಯಾಪಾರ ಪಾಲುದಾರಿಕೆ ಮುಂತಾದ ವಿಷಯಗಳಲ್ಲಿಬೆಟರ್ ಆಪ್ಷನ್ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಸುಲಭ ಮತ್ತು ಸಹಜ. ಆದರೆ ವ್ಯಕ್ತಿಗತ ಸಂಬಂಧಗಳ ವಿಚಾರದಲ್ಲಿ ಹೆಚ್ಚಿನಸಲ ನಮ್ಮವು ಓನ್ಲಿ ಆಪ್ಷನ್‌ಗಳಾಗಿ ಬಿಟ್ಟಿರುತ್ತವೆ. ನನ್ನ ಮಟ್ಟಿಗೆ ಟೈಲರು, ಕ್ಷೌರಿಕ, ಡ್ರೈವರು, ಟೀಚರು, ಡಾಕ್ಟರು-ಈ ಸಾಲಿನವರು ಕೂಡ ಓನ್ಲಿ ಆಪ್ಷನ್‌ಗಳೇ. ಹತ್ತ್ತತ್ತು ವರ್ಷಗಟ್ಟಲೆ ಇವರನ್ನು ನಾನು ಬದಲಿಸಿಲ್ಲ. ಇವರಿಗಿಂತ ಒಳ್ಳೆಯ ಡಾಕ್ಟರು, ಡ್ರೈವರು, ಟೀಚರು, ಬಾರ್ಬರು ಸಿಕ್ಕರೂ ನಾನು ಬದಲಿಸಿಲ್ಲ. ನನ್ನ ಸ್ನೇಹವಲಯ ಬದಲಾಗಿಲ್ಲ. ಇರುವುದು ಮೂರೋ, ನಾಲ್ಕೋ ಜನರಷ್ಟೆ. ಅವರನ್ನು ನಾನು ಕಾಡಿದ್ದೇನೆ, ಹರ್ಟ್ ಮಾಡಿದ್ದೇನೆ, ಬೇಸರಗೊಳಿಸಿದ್ದೇನೆ-ಆದರೆ ಅವರಿಂದ ದೂರವಾಗಿಲ್ಲ;ಆಪ್ಷನ್‌ಗಳಿದ್ದಾಗ್ಯೂ.

ಆದರೆ ಅವರನ್ನು ನನ್ನ ಸರ್ವಸ್ವಅಂತ ಒಪ್ಪಿಕೊಳ್ಳುವಾಗ ಒಂದು ವಿಷಯವನ್ನು ತುಂಬ ಎಚ್ಚರಿಕೆಯಿಂದ ಗಮನಿಸಲು ಇತ್ತೀಚೆಗೆ ಶುರುಮಾಡಿದ್ದೇನೆ. ಏಕೆಂದರೆ, ಅವರನ್ನು ನಾನು ನನ್ನ ಸರ್ವಸ್ವ ಅಂತ ಒಪ್ಪಿಕೊಂಡ ಹಾಗೆಯೇ ಅವರಿಗೆ ನಾನೂ ಸರ್ವಸ್ವವಾಗಿದ್ದೇನಾ ಅಥವಾ ಅವರ ಪಾಲಿಗೆ ನಾನು ಕೇವಲ available ಆಪ್ಷನ್ನಾ?

ಅವರು ಯಾರೇ ಇರಲಿ ;ಅವರ ಪಾಲಿಗೆ ನೀನು ಕೇವಲ ಆಪ್ಷನ್ ಅಂತಾದಾಗ ಅವರನ್ನು ನೀವು ಯಾವತ್ತಿಗೂ ನಿಮ್ಮ ಸರ್ವಸ್ವ ಅಂತ ಮಾಡಿಕೊಳ್ಳಬೇಡಿ. ಖಂಡಿತವಾಗಿಯೂ ನೊಂದುಕೊಳ್ಳುತ್ತೀರಿ. ನಾನು ಶಾಮರಾಯರನ್ನು ಅದೆಷ್ಟು ನನ್ನ ಸರ್ವಸ್ವ ಅಂದುಕೊಂಡು ಅವರಿಗಾಗಿ ದುಡಿದೆ ಅಂದರೆ, ಅವರ ಪಾಲಿಗೆ ನಾನು ಕೇವಲ one of the options ಅಂತ ಗೊತ್ತಾದ ದಿನ ನನ್ನ ಬಗ್ಗೆ ನನಗೇ ವಿಪರೀತ ಸಿಟ್ಟು ಬಂದುಬಿಟ್ಟಿತ್ತು. ಅವರಿಗಾಗಿ ಅಂಥವರಿಗಾಗಿ ಇನ್ನು ದುಡಿಯಕೂಡದು ಅಂತ ತೀರ್ಮಾನಿಸಿದ್ದೇ ಆವಾಗ.

ಆಮೇಲೆ ನನ್ನದೇ ಅಂಗಡಿ ತೆರೆದುಕೊಂಡು ಕುಳಿತೆನಲ್ಲ? ನನ್ನನ್ನೇ ಸರ್ವಸ್ವ ಅಂದುಕೊಂಡು ನನ್ನೊಂದಿಗೆ ದುಡಿಯಲು ಬಂದ ಹುಡುಗರು ನನಗೆ ತಕ್ಷಣ ಅರ್ಥವಾಗತೊಡಗಿದರು. ಇವತ್ತಿಗೂ ಅವರು ಜತೆಗೇ ಇದ್ದಾರೆ. ಅವರಲ್ಲೇ ಕೆಲವರು ಆಸಕ್ತಿ ಕಳೆದುಕೊಂಡಾಗ, ಬಿಟ್ಟು ನಡೆದಾಗ ಬೆಟರ್ ಆಪ್ಷನ್ ಸಿಕ್ಕಿರಬೇಕು ಅಂದುಕೊಂಡು ಸುಮ್ಮನಾಗಿದ್ದೇನೆ. ತೀರ ಖಾಸಗಿ ಮಟ್ಟದಲ್ಲಿ, ನಾನು ಸರ್ವಸ್ವ ಅಂದುಕೊಂಡವರು ಅಂದುಕೊಂಡವರು ಕೆಲವೇ ಮಂದಿ. ಅವರಿಗೆ ನಾನು ಕೂಡ ಆಪ್ಷನ್ ಅಲ್ಲ. ಆಗಲು ಸಾಧ್ಯವೂ ಇಲ್ಲ-ಅವರ ಪಾಲಿನ ಸರ್ವಸ್ವವೂ ಆಗಿ ಬದುಕುವ ಜವಾಬ್ದಾರಿ ನನಗೂ ಇದೆ.

ಇಡೀ ಪ್ರಪಂಚದ ದೃಷ್ಟಿಯಲ್ಲಿ ನಾನೊಬ್ಬ ವ್ಯಕ್ತಿ. ವ್ಯಕ್ತಿಯಷ್ಟೆ. ಆದರೆ ಒಬ್ಬನ್ಯಾರೋ ವ್ಯಕ್ತಿಯ ದೃಷ್ಟಿಯಲ್ಲಿ ನಾನು ಇಡೀ ಪ್ರಪಂಚ! ಅಂತಲೂ ಒಂದು ಇಂಗ್ಲಿಷ್ ಹೇಳಿಕೆಯಿದೆ.

ಅದು ಸರ್ವಸ್ವದ ಕುರಿತಾದ ಹೇಳಿಕೆಗಿಂತ ಭಿನ್ನವಾದದ್ದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more